ದಿಲೀಪ್ ಕುಮಾರ್ ಕವಿತೆ ಖಜಾನೆ

ಕಾವ್ಯಸಂಗಾತಿ

ಕವಿಯೊಬ್ಬನ ಕಷ್ಟ

ಮದಿರೆ ಹೆಚ್ಚು ಕುಡಿಯಬಾರದು 
ಅಭ್ಯಾಸವಾಗಿಬಿಟ್ಟರೆ ಮತ್ತೇ ಏರುವುದಿಲ್ಲ

ಪ್ರೇಮಿಸಬಾರದು ಜೀವಕ್ಕಿಂತ ಹೆಚ್ಚು
ಪ್ರೀತಿ ನಾಟಕವಾಗಿಬಿಡುತ್ತದೆ ಕೊನೆಗೆ

ನಂಬಬಾರದು ಯಾರನ್ನೂ
ಕೊನೆಗೆ ನಂಬಿಕೆ ಆಯುಧವಾಗಿ ನಗುತ್ತದೆ

ಹಾಗೆಯೇ
ಕಂಡದ್ದೆಲ್ಲ ಕಾವ್ಯವಾಗಿಸಲು ನಿಲ್ಲಬಾರದು
ಚಟವಾದರೆ ಕಾವ್ಯ ಸೊರಗುತ್ತದೆ

ಮರವೊಂದಕ್ಕೆ ಹೆಚ್ಚು ನೀರು ಹಾಕಿದಷ್ಟೂ
ಕೊಳೆವಂತೆ ಪ್ರೀತಿ ಪ್ರೇಮ ಮದಿರೆ
ಕೊನೆಗೆ ಎಲ್ಲವೂ ಅಷ್ಟೆ

**********

ಕವಿತೆಯಲ್ಲೇನಿದೆ ?

ಕವಿತೆಯಲ್ಲೇನಿದೆ
ಹೂವು ನಕ್ಕ ಹಾಗೆ
ಮೋಡ ಬಿಕ್ಕಿದ ಹಾಗೆ
ಗಾಳಿ ಸೂಸಿದ ಹಾಗೆ
ಆಯಿತು ಅಷ್ಟೆ

ಕವಿತೆಯಲ್ಲೇನಿದೆ
ನಾದದ ಅಲೆ ತೇಲಿದ ಹಾಗೆ
ಭೃಂಗ ಜಂಭ ತೋರಿದ ಹಾಗೆ
ಮುಖಕ್ಕೆ ಮುಖ ಒತ್ತಿದ ಹಾಗೆ

ಕವಿತೆಯಲ್ಲೇನಿದೆ
ಕೆಲವರಿಗೆ ರಕ್ತಸಿಕ್ತ ಹೆಜ್ಜೆ ಗುರುತುಗಳು
ಕೆಲವರಿಗೆ ಪ್ರೀತಿಯ ಮದೋನ್ಮತ್ತತೆ
ಕೆಲವರಿಗೆಲ್ಲೋ ಕಂಡು ಕಣ್ಣು ಹೊಡೆದಂತೆ ಹುಡುಗಿ

ಕವಿತೆಯಲ್ಲೇನಿದೆ
ಏನೂ ಇಲ್ಲ
ಎಲ್ಲೋ ಕೆಲವರಿಗೆ ಆತ್ಮದ ರೋದನೆಗೆ
ಕಿವಿಗಡಚಿಕ್ಕುವ ದನಿ ಬಂದಾಗ
ಮಾತು ನಿಂತು ಕೈ ಮುಂದಾದಂತೆ
ಎಲ್ಲೋ ಕೆಲವರಿಗೆ ಆತ್ಮ ಮುಸಿ ಮುಸಿ ನಕ್ಕು
ಕಣ್ಣೆದುರು ಬಿಕ್ಕಿದ ಪರಿ

ಹೆಚ್ಚೇನಿಲ್ಲ
ಕವಿತೆಯಲ್ಲಿ ಇನ್ನೇನಿದೆ ?


*********

ಮಲೆ ಮಾದಯ್ಯನಿಗೆ

M.M. Hills | Mysore To Male Mahadeshwara One day Trip

ಅಯ್ಯಾ
ನೀ ಮುಟ್ಟಿ ಎದೆ ನೆಲ ಮೆಟ್ಟಿ
ಅಡಿಯಿಟ್ಟು ಬಿಟ್ಟೆ
ತುಳಿದುತುಳಿದು ಏರಿ ಇಳಿದು
ಪಾವನ ಮಾಡಿದೆ
ಒಲಿಯದರೆದೆಯ ಕಲ್ಲು ಕರಗಿಸಿ
ಹಸಿರ ಕಾಣಿಸಿ ನಕ್ಕೆ

ಪಾದ್ದರೆಯ ಪಾವನವಾಗಿಸಿದೆ
ಆಡಿದ ಮಾತೆಲ್ಲಾ ಲಿಂಗವೊಪ್ಪಿತ ಮಾಡಿಸಿದೆ
ಎಳೆನಾಗರದ ಹೆಡೆಯಡಿ ಕುಳಿತು ನಕ್ಕೆ
ಮಾತು ಮಾತನೆ ಮಥಿಸಿ ಉಳಿಮೆ ಕಲಿಸಿ
ನವನೀತ ತಂದೆ
ಮಾತ ಮಂತ್ರವಾಗಿಸಿಬಿಟ್ಟೆ

ಆ ಬೆಟ್ಟ ಆ ಗುಡ್ಡ ಆ ಕಲ್ಲು ಆ ಬವಣೆ
ಈ ಬೇರು ಈ ಬದುಕು ಈ ಮಾತು ಈ ಮಥನ
ಎಳೆಎಳೆಎಳೆಎಳೆಗಳ ಎಳೆದಾಡಿಬಿಟ್ಟೆ 
ಎಳೆಯನನು ನಿನ್ನೊಳು ನಿಲಿಸಿ ನಲಿಸಿದೆ
ಧೂಪದ ಹೊಗೆಯಂತೆ ಗಾಳಿಯಲೆ
ಅಲೆಅಲೆಅಲೆಯಾಗಿ ಇಟ್ಟಾಡಿಸಿ ಬಿಟ್ಟೆ

ಕಾಡ ಕೊನೆಯ ಹಾದಿ ಊರ ತುದಿಯ ಹಾದಿ
ಕೊನೆಗೂ ಒಂದು ಮಾಡಿಯೇ ಬಿಟ್ಟೆ
ನೋಡಿ ನಕ್ಕೆ
ಗೂಡ ಗುಬ್ಬಿಯ ಒಕ್ಕಲಾಗಿಸಿಬಿಟ್ಟೆ

ಅಯ್ಯಾ
ನೀ ಮೆಟ್ಟಿದ ನೆಲವೆಲ್ಲಾ ನನ್ನದೇ ಎದೆ
ನೀ ಕರುಣಿಸಿದ ಕರುಣೆ ಈ ಭಾಷೆ
ನೀ ಕೊಟ್ಟ ಮಂತ್ರಶಕ್ತಿಯ ಮಹಿಮೆ ಈ ಮಾತು
ಒಳಹೊರಗೂ ಪಾವನ ಮಾಡಿದೆಯಯ್ಯಾ
ಪಾದ್ದರೆಯ ಪಾವನಮೂರ್ತೀ


ದಿಲೀಪ್ ಕುಮಾರ್ ಆರ್.

8 thoughts on “ದಿಲೀಪ್ ಕುಮಾರ್ ಕವಿತೆ ಖಜಾನೆ

    1. ನೀವು ಚೆನ್ನಾಗಿವೆ ಎಂದದ್ದು ಕಂಡು ಬಹಳ ಸಂತೋಷ ಅನಿಸಿತು ಸರ್ ❤

  1. ಮೂರು ಕವಿತೆ ಚೆಂದ .‌ಧ್ವನಿ ಮೂರು ಕವಿತೆಗಳಲ್ಲಿ ಜೀವ ತಳೆದಿದೆ.

Leave a Reply

Back To Top