ಕಾವ್ಯ ಸಂಗಾತಿ
ಸುರಿಯಲಿ ಮಳೆ
ಚಂದ್ರಿಕಾ ನಾಗರಾಜ್
ಸುರಿಯಲಿ ಬಿಡು
ಗೆಳತಿ
ಮಳೆ
ಮರ ಗಿಡ ಚಿಗುರುವುದಷ್ಟೆ
ನಾವು ಅರಳುತ್ತೇವೆಯೇ…
ಅದೇ ಪಾತ್ರೆ ಪಗಡೆಗಳು
ಸವೆಯುತ್ತವೆಯಷ್ಟೇ
ನಮ್ಮ ಕೈಯ ಗೆರೆಯೊಂದಿಗೆ…
ಸುರಿಯಲಿ ಬಿಡು ಮಳೆ
ನೆಲಕ್ಕೆ ಬಿದ್ದು ಪುಟಿವ
ಹನಿಗಳ
ನೋಡಿ
ಕ್ಷಣವಾದರೂ ಕುಣಿಯೋಣವಂತೆ
ಒಲೆಯಲ್ಲಿಟ್ಟಿರುವ ಹಾಲು
ನೆನಪಾಗುವುದರೊಳಗೆ
ಬೊಗಸೆ ತುಂಬ ಸೆರೆಯಾದ
ಹನಿಗಳ
ಎರಚೋಣವೆಂದರೆ ಯಾರಿಲ್ಲ
ನೋಡು…
ಎರಚಿ ಕೊಳ್ಳೋಣ ಬಿಡು
ನಮ್ಮ ಮುಖಕ್ಕೆ ನಾವೇ…
ಸುರಿಯಲಿ ತನ್ನ ಪಾಡಿಗೆ ತಾನು
ನೆನೆಯೋಣ
ಅದರೊಂದಿಗಾದರೂ ದುಃಖವ ಹರಿಬಿಡೋಣ
ಒಣಗಿದೆದೆಯ
ಹದವಾಗಿಸೋಣ
ನಿನ್ನೆಗಳ ಮಳೆಯಲ್ಲೇ ಹೂಳೋಣ
ನಾಳೆಗಳ ಕಲ್ಪನೆಗಳ
ಹೆಣೆಯೋಣ
ಭ್ರಮನಿರಸನವಾದರೂ ಸರಿಯೇ…
ಸುರಿಯಲಿ ಬಿಡು ಮಳೆ
ಗುಡುಗು ಸಿಡಿಲಾರ್ಭಟದೊಳಗೆ
ನಗುವ ಹರಡಿ
ನಾವೇ ಮಳೆಯಾಗೋಣ