ಕಾವ್ಯ ಸಂಗಾತಿ
ನಮ್ ಗುಣ!
ಗುಲಾಬಿ ತುಂಬಿದ ಗಿಡವಿದೆ,
ಮುಳ್ಳಷ್ಟೇ ನೋಡಿ ‘ ಆಡಿ’ ಕೊಳ್ಳುವವರು ನಾವು
*
ಹಾಲಂತೆ ಹರಿವ ಹಳ್ಳವಿದೆ, ನೀರು ಕುಡಿಯದೇ
ಹಿಂದಿನ ಹಾದಿಗೆ ಗೊಣಗುವವರು ನಾವು
*
ಗುರಿ ಮುಟ್ಟಬೇಕಷ್ಟೆ ,ದಾರಿಯ
ಅಂಕುಡೊಂಕಿನ ಬಗ್ಗೆ ಕೊಂಕಾಡುವವರು ನಾವು
*
ಅಕ್ಷರಗಳ ಓದಿ ನಲಿಯಬೇಕಷ್ಟೇ ,ವಿಮರ್ಶೆ
ಮಾಡಿ ‘ ದೊಡ್ಡ’ ವರೆನಿಸಿಕೊಳ್ಳುವವರು ನಾವು
*
ಸುಮ್ಮನೆ ಪ್ರೀತಿಸುತ್ತಾ ಹೋಗಬೇಕು,ಎದೆಯ ಹಾಡನು
ಅಪಸ್ವರದಿ ಹಾಡಿ ಕೆಡಿಸುವವರು ನಾವು!
|***
ಯಾವ ದನಿಯ ಕೇಳಿಸಿಕೊಳ್ಳಲಿ…
ಮಳೆ,
ಅಗೆದಷ್ಟೂ ಆಳ ಗುದ್ದಲಿಯ ಮುಖಮೂತಿ
ಒಳಕಾವಿಗೆ ಕೆಂಪು; ಎದುರು ಸಿಕ್ಕ ಹಳೆಯ ಗೆಳತಿ
ಯ ಕಣ್ಣ ಮೌನದಷ್ಟೇ ಬಿಸುಪು
ದನಿ ಇಲ್ಲವೇ ಇಲ್ಲ!
ತೆಂಗು ಬಾಳೆ, ಕರಿಬೇವು, ಸಪೋಟ, ಪೇರಲೆ ಗಿಡಗಳು
ಮತ್ತು ಹೆಸರಿಲ್ಲದ ಹೂ ಬಳ್ಳಿಗಳು,
ಬೆಳಕು ಬರುವ ಮುನ್ನವೇ
ಬಂದು ನನ್ನದಿಷ್ಟು, ನಿನ್ನದಿಷ್ಟು
ಅದು ನಂದು, ಇದು ನಿಂದು
ಎನ್ನುತ್ತಾ ರಂಬೆ-ಕೊಂಬೆಗಳ ಪಾಲು ಮಾಡಿಕೊಂಡು
ಕೂತ ಹಕ್ಕಿ ಗುಂಪಿನ ಸದ್ದು
ಯಾವುದೋ ರಿಯಾಲಿಟಿ ಶೋ ರಿಯಾಜಿಗೆ
ನಮ್ಮ ಹಿತ್ತಲ ಜಾಗ ಪಕ್ಕ!
ನೂರು ದನಿಯಲ್ಲಿ ಒಂದು ದನಿ ಎದೆಗಿಳಿದೀತೇ?
ಮಣ್ಣಲ್ಲಿ ಮಣ್ಣಾಗೋ
ಎದೆಯ ಹಾಡು ಕೊರಳ ತುದಿ ಹಿಡಿದು ಕೊಡವಿದರೆ
ಬೆವರಹನಿಗಳು ಫಸಲಿನಲಿ ನಕ್ಕ ದನಿ ಕೇಳೀತಾ?
ಯಾವ ದನಿಯ ಕೇಳಿಸಿಕೊಳ್ಳಲಿ…
ಅಗಣಿತ ಅಕ್ಷರಗಳ ಹೊತ್ತ ಕವಿತೆ
ರಾಗವಾಗಿ ಎದೆಗಳಿಗೆ ಮುಟ್ಟುವಲ್ಲಿ
ಸೋಲು;
ಜೊತೆಯಿದ್ದ ಮಾತ್ರಕ್ಕೆ ಜತೆಯೆಂದುಕೊಂಡ ಭಾವದ ದನಿ
ಕೇಳಿಸುತ್ತಿಲ್ಲ!
ಎಷ್ಟೊಂದು ಶಬ್ಧಗಳು ಒಂದೊAದು ಒಂದೊಂದಕೆ
ಇರುವೆ ಹಜ್ಜೆಯೂ ನಾಗಾಲೋಟದ ಸದ್ದಿಗೆ ಸವಾಲು
ಎದೆಗೊರಗಿದ ಕಿವಿಗೆ
ಹೃದಯಸ್ಥಂಬನದ ಶಬುದ ಶ್ರವ್ಯವಾಗುತ್ತಿಲ್ಲ
ಯಾವ ದನಿಯ ಕೇಳಿಸಿಕೊಳ್ಳಲಿ…
ಗದ್ದೆ ಸಾಲ ಹೊಳೆ, ಮೊಟ್ಟೆ ಮರಿಯ ಹುಡುಕುವ ಕೋಗಿಲೆ
ತೆಂಗಿನ ಗರಿ ತುದಿಗೆ ಕಾಲು ಚಾಚಿ ಬಿದ್ದ ಕಳ್ಳ ಬಿಸಿಲು
ತಂತಿಗಳ ಮೇಲೆ ತಲೆಕೆಳಗಾಗಿ ನೇತಾಡೊ ಒಳ ಉಡುಪುಗಳು
ಮತ್ತು
ಬಾಯಿ ಬಿಡದೇ ಹಾಡಿಕೊಳ್ಳುತ್ತಿರುವ ಆ ಹುಡುಗಿಯ ವಿರಹ ಗೀತೆ
ಊಹ್ಞುಂ
ಎಲ್ಲಾ……ಗುಂ….ಗು ಗಾನ ಅಷ್ಟೇ!
ಯಾವ ದನಿಯ ಕೇಳಿಸಿಕೊಳ್ಳಲಿ..
ಚಣ ಚಣಕೂ ಸಾವಿನ ಸದ್ದು ಕಿವಿ ತುಂಬುತಿದೆ
ಸತ್ತ ಜೀವಗಳ ಮಸಣದ ಹಾಡಾದರೂ ಮೂಕ ಮೂಕ!
ಮಣ್ಣ ಅಣು ಅಣುವೂ ಸದ್ದೇ,
ಎದೆಯ ದನಿಗೂ ಮಿಗಿಲಿಲ್ಲವೆಂಬ ಹಿರಿಯರ
ನುಡಿಯದು ಸದಾ ಅಣುರಣನ!
ಯಾವ ದನಿಯ ಕೇಳಿಸಿಕೊಳ್ಳಲೆಂದೇ ಮನ ನೀರ
ಬಿಟ್ಟ ಮೀನಾಗಿದೆ
ದನಿ ಎದೆಯೊಡೆಯದಿರೆ ಧನ್ಯವೀ ಬದುಕು!
**********
ಕಣ್ಣ ಮಣ್ಣ ಒಳಗೆ
ಬೀಜ ಪೊರೆವ ಮಣ್ಣೇ
ನಿನ್ನ ಕಣ್ಣು
ನೂರು ಕವಿತೆಗಳ….ತಾಯಿ….
ಎದೆಗಿಷ್ಟು ಹಾಡು ಕೊಡು
ನೊಂದವರ ಎದುರು
ಕರಗುವಂತೆ ಹಾಡಿ ಬರುವೆ!
ಕಣ್ಣೆಂದರೆ ಮಣ್ಣು
ಮಣ್ಣ ಒಳಗಿನ ಕತ್ತಲು
ಕತ್ತಲಲ್ಲಿ ಬಿಕ್ಕುವ
ಬೀಜ
ಬೀಜದೊಳಗಿನ ಅಗಣಿತ ಕನಸು
ಮೈ ಮುರಿಯಲು ಹವಣಿಕೆ!
ಒಲವಷ್ಟೇ ಹೃದಯದ
ಮಾತೆಂದವರಾರು
ಕಣ್ಣ ಪಾಪೆಯ
ಸನ್ನೆಯ ಕರುಣೆ ನೂರು ಜೀವಗಳ
ಫಸಲು!
ಕಣ್ಣು ಕಣ್ಣ ಒಳಗಿನ
ಸವಿನಯ ಸಂಧಾನ
-ಕೆ ಸವಾಲು ಬರಿ ನೋಟದ ಉತ್ಥಾನ!
ಜೀವ ಸಲಹುವ
ಮಣ್ಣು ಮತ್ತು ಒಲವು ಕಾಪಿಡುವ ಕಣ್ಣು
ತುತ್ತಿಗೆ ಮೂಲ!
ಬರಿದೆ ನೋಡುವ ನಿನ್ನ ಕಣ್ಣ
ಕಾಡಲಿ ಕಳೆದು
ಹೋದ ನಿಟ್ಟುಸಿರಿನ ಕವಿತೆಗಳ
ಹುಡುಕಿ ಸೋತಿರುವೆ; ಸಖಿ
ಮುಗಿಲಿಗೆ ಮುಖ ಮಾಡುವ ಸಸ್ಯ ಕೆ
ಮಿಡಿದು ನೀರುಣಿಸೋ
ಮಣ್ಣೇ ನಿನ್ನ ಕಣ್ಣು
ಮತ್ತೆ ಮತ್ತೆ ಕಣ್ ಕೂಡಿಸೋ ಸಣ್ಣ ಭಯಕೆ
ಕಣ್ಮುಚ್ಚುವೆ ಹಗುರ!
ಮಣ್ಣಾಗಲಿ
ಕನಸು ಕೊಡುವ ಕಣ್ಣು
ಕಣ್ಣು ಮಣ್ಣಂತೆ ಸಕಲ ಜೀವ
ಗಳ ಪೊರೆದರೆ ಕವಿತೆ ಧನ್ಯ!
ಸಂತೆಬೆನ್ನೂರು ಫೈಜ್ನಟ್ರಾಜ್
ಚೆನ್ನಾಗಿವೆ
ಎಲ್ಲಾ ಕವಿತೆಗಳು ಅದ್ಭುತವಾಗಿದೆ ಸರ್