ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು…

ಏನಾಗುತಿದೆ ಇಂದು ಈ ದೇಶದಲ್ಲಿ?
ದೊಂಬಿಗಳೆ ದೊಂಬಿಗಳು ಎಲ್ಲೆಂದರಲ್ಲಿ!
ಏಕೆ ಹೊತ್ತಿಹುದೀಗ ಈ ತರದ ಕಿಚ್ಚು
ಯಾವ ಪುರುಷಾರ್ಥಕ್ಕೆ ಇಂಥ ಹುಚ್ಚು!

ಜಾತಿ ಜಾತಿಯ ಜಗಳ ಹೆಚ್ಚುತಿದೆ ದಿನದಿನಕು
ಮತ ಪಂಥಗಳ ನಡುವೆ ಹರಡುತಿದೆ ಬಿರುಕು
ಜನರಜೀವನ ಕದಡಿ ಆಗುತಿದೆ ರಾಡಿ
ರಾಜಕೀ ಪಕ್ಷಗಳ ಕುಟಿಲ  ಕೈಯಾಡಿ

ಮುಗ್ಧರನ್ನು ಬಳಸುತ್ತ ಇಲ್ಲದನು ಕೆಣಕುತ್ತ
ದ್ವೇಷ ಸಾಧಿಸುತಿಹರು, ತುಪ್ಪ ಹೊಯ್ಯುತಲಿಹರು
ಜಾತಿ ಜಗಳಕೆ ನಿರುತ ಬೆಂಕಿ ಹಚ್ಚಿ!
ತಮ್ಮ ಸ್ವಾರ್ಥಕ್ಕಾಗಿ ಸತ್ಯವನು ಮುಚ್ಚಿ!

ಕಾರಣವೇ ಬೇಕಿಲ್ಲ ಇವರಾವ ದಂಗೆಗೂ
ಯಾವುದೋ ನೆಪ ಸಾಕು ಪ್ರತಿಭಟಿಸಲು
ಶಾಂತಿ ಕದಡಲು ಏನೊ ಹುನ್ನಾರ ಹಬ್ಬುತ್ತ
ರಾಜಕೀಯಕ್ಕಾಗಿ ಜನರೊಲವ ಗಳಿಸಲು  

ತಾಯಿ ಭಾರತಿ ಇಂದು ನಲುಗಿಹಳು ನೊಂದು
ತನ್ನ ಮಕ್ಕಳ ಇಂಥ ಹುಚ್ಚಾಟ ಕಂಡು!
ಕೊನೆಯಿಲ್ಲವೆ ಇವಕೆ ಎಂದು ಕಾತರಿಸಿಹಳು
ಸಬಕೊ ಸನ್ಮತಿ ದೇ ಭಗವಾನ ಎಂದು ಬೇಡಿಹಳು!


3 thoughts on “ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು…

Leave a Reply

Back To Top