ಅಂಕಣ ಬರಹ
ಸಾಧಕಿಯರ ಯಶೋಗಾಥೆ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ
ಶಿಕ್ಷಣತಜ್ಞೆಮತ್ತುರಾಜಕಾರಣಿ
ಪುಲರೇಣುಗುಹಾ (1911-2006)
ಪುಲರೇಣು ಗುಹಾ ಒಬ್ಬ ಭಾರತೀಯ ಕಾರ್ಯಕರ್ತೆ, ಶಿಕ್ಷಣ ತಜ್ಞೆ ಮತ್ತು ರಾಜಕಾರಣಿಯಾಗಿದ್ದರು. ಪುಲರೇಣು ಗುಹಾ ಅವರು 1911ರ ಅಗಸ್ಟ್13 ರಂದು ಕಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ಸುರೇಂದ್ರನಾಥ ದತ್ತಾ. ಇವರು ಉಪಮ್ಯಾಜಿಸ್ಟೇಟ್ ಆಗಿದ್ದರು. ತಾಯಿ ಸಾಮಾಜಿಕ ಕಾರ್ಯಕರ್ತೆಯಾದ ಅಬಲಾಬಲಾ ದತ್ತಾ. ಪ್ರಗತಿಪರ ಕುಟುಂಬದಲ್ಲಿ ಇವರ ಲಾಲನೆ ಪಾಲನೆಯಾಗಿದ್ದರಿಂದ ಸಾಮಾಜಿಕ ಸೇವೆ ಎಂಬುವುದು ಆನುವಂಶಿಕವಾಗಿ ಪಡೆದುಕೊಂಡರು. ತಂದೆ ತಾಯಿಯ ಪ್ರಭಾವ ಇವರ ಮೇಲೆ ಹೆಚ್ಚಾಗಿ ಬೀರಿತ್ತು. ತಾಯಿ ತೋರುತಿದ್ದ ದೇಶಭಕ್ತಿ, ದೇಶಪ್ರೇಮ ಇವರಲ್ಲಿ ದೇಶಾಭಿಮಾನ ಹುಟ್ಟಿಕೊಳ್ಳಲು ಕಾರಣವಾಯಿತು. ಹಾಗಾಗಿ ಇವರು ಯಾವಾಗಲೂ ನ್ಯಾಯಕ್ಕಾಗಿ ಹೋರಾಡಿದರು.
ಪುಲರೇಣು ಅವರು ಕೆಲವು ವರ್ಷಗಳ ಕಾಲ ಕಲ್ಕತ್ತಾದ ಗೋಖಲೆ ಸ್ಮಾರಕ ಬಾಲಕಿಯರ ಶಾಲೆ ಮತ್ತು ಬ್ರಹ್ಮೋ ಬಾಲಕಿಯರ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅನಂತರ ಆಸ್ಸಾಂನ ಶಾಲೆಯಿಂದ ಮೆಟ್ರಕ್ಯೂಲೇಶನ್ ಪರಿಕ್ಷೇಯಲ್ಲಿ ಉತ್ತಿರ್ಣರಾದರು. ನಂತರ ಬಿಎ ಪದವಿಯನ್ನು ಬ್ರಾಜೊಮೋಹನ ಕಾಲೇಜ್ ಬಾರಿಸಲ್‍ನಿಂದ ಪಡೆದರು. ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬೆಂಗಾಳಿ ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಎಂಎ ಪದವಿಯನ್ನು, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆಪ್ತಸಲಹೆಯೊಂದಿಗೆ ಪಡೆದುಕೊಂಡಿದ್ದರು.
ಪುಲರೇಣು ಗುಹಾ ಅವರು ಬ್ಯಾರಿಶಾಲೆಯಲ್ಲಿ ಇದ್ದಾಗ ಯುಗಾಂತರ್ ಪಕ್ಷಕ್ಕೆ ಸೇರಿಕೊಂಡರು. ಈ ಪಕ್ಷವು ಉಗ್ರಗಾಮಿ ರಾಷ್ಟ್ರೀಯತೆಗೆ ಬದ್ಧವಾಗಿತ್ತು. ಇವರು ಪಕ್ಷಕ್ಕೆ ಸೇರಿಕೊಂಡ ನಂತರ ಎರಡು ಭಾರಿ ಭೂಗತರಾಗಿದ್ದರು. ಎಂ.ಎಸ್ಸಿಯನ್ನು ಮುಗಿಸಿಕೊಂಡು ಜುಗಂತರ್ ಪಕ್ಷಕ್ಕೆ ಸೇರಿಕೊಂಡರು. ಇಲ್ಲಿ ಭಾವಿ ಪತಿ ಡಾ. ಬರೇಶ್ ಚಂದ್ರ ಗುಹಾ ಅವರಿಗೆ ಬೇಟಿಯಾದರು. ನಂತರ 1925ರಲ್ಲಿ ಪ್ರಸಿದ್ಧ ರಸಾಯನಶಾಸ್ತ್ರಜ್ಞ-ಉದ್ಯಮಿಯಾಗಿದ್ದ ಪ್ರಪುಲ್ಲಾ ಚಂದ್ರರೇ ಅವರಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ಇವರು ರಾಜಕೀಯದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದರಿಂದ, ಕುಟುಂಬದವರು ರಾಜಕೀಯ ವಿಜ್ಞಾನದಲ್ಲಿ ಪದವಿ ಅಧ್ಯಯನಕ್ಕಾಗಿ ಲಂಡನ್‍ನ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್‍ಗೆ ಕಳುಹಿಸಿದರು.
ಲಂಡನ್ನಲ್ಲಿದ್ದಾಗ ಪುಲರೇಣು ಅವರು ಸಾಮಾಜಿಕ-ರಾಜಕೀಯ ವಿಷಯದಿಂದ ದೂರ ಉಳಿಯಲಿಲ್ಲ. ಇವರು ಸಾಮಾಜಿಕ-ರಾಜಕೀಯ ವಿಷಯದ ಮಾಹಿತಿ ತಿಳಿಯಲು ಲಂಡನ್‍ನ ಗೋವರ್ ಸ್ಟ್ರೀಟ್‍ಗೆ ನಿಯಮಿತವಾಗಿ ಬೇಟಿ ನೀಡುತ್ತಿದ್ದರು. ಗೋವರ್ ಸ್ಟ್ರೀಟ್‍ನಲ್ಲಿ ಭಾರತದಿಂದ ಬರುವ ಪತ್ರಗಳನ್ನು ಮತ್ತು ಪತ್ರಿಕೆಗಳನ್ನು ಇಡುತ್ತಿದ್ದರು. ಇವರು ಲಂಡನ್‍ನಲ್ಲಿ ಇದ್ದಾಗ ಕಮ್ಯುನಿಜಂ ಬಗ್ಗೆ ತೀವ್ರ ಆಸಕ್ತಿ ವಹಿಸಿದರು. ಹಾಗಾಗಿ ಗ್ರೇಟ್ ಬ್ರಿಟನ್‍ನ ಅಂದಿನ ಕಮ್ಯುನಿಸ್ಟ್ ನಾಯಕರಾದ ಬೆನ್ ಬ್ರಾಡ್ಲಿಯವರನ್ನು ಭೇಟಿಯಾದರು. ಭಾರತೀಯ ಮತ್ತು ಸಿಲೋನೀಸ್ ವಿಧ್ಯಾರ್ಥಿಗಳ ಒಕ್ಕೂಟದ ಪ್ರೇಗ್ ಸಮ್ಮೇಳನದಲ್ಲಿ ಭಾಗವಹಿಸಿದರು. ಲಂಡನ್‍ನಲ್ಲಿ ಒಂದು ವರ್ಷದ ನಂತರ ಅಲ್ಲಿಯ ಹವಾಮಾನ ಸರಿಹೊಂದದ ಕಾರಣ ಪುಲರೇಣು ಅವರು ಪ್ಯಾರಿಸ್‍ಗೆ ಹೋದರು. ಪ್ಯಾರಿಸ್‍ನಲ್ಲಿ ಇವರು ಭಾರತೀಯ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದುಕೊಂಡು, ಸೊರ್ಬೊನ್‍ನಿಂದ ಪಿಎಚ್‍ಡಿ ಪದವಿಯನ್ನು ಪಡೆದರು.
1938ರಲ್ಲಿ ಪುಲ್‍ರೇಣು ಅವರು ಕಲ್ಕತ್ತಾಗೆ ಮರಳಿ ಬಂದರು. ಇವರು ಬ್ರಿಟನ್‍ನ ಕಮ್ಯುನಿಸ್ಟ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‍ನಿಂದ ಮೂರು ಸಾವಿರ ರೂಪಾಯಿಗಳನ್ನು, ಭಾರತದಲ್ಲಿ ಕಮ್ಯುನಿಸ್ಟ್‍ರಿಗಾಗಿ ಕೆಲಸ ಮಾಡುವವರ ಸಲುವಾಗಿ ಪಡೆದಿದ್ದರು.
ಭಾರತದ ಕೊಲ್ಕತ್ತಾಗೆ ಬಂದ ಪುಲರೇಣು ಗುಹಾ ಅವರು ವಿವಿಧ ಯೋಜನೆಗಳಿಗೆ ಕೈಹಾಕಿದರು. ಇವರು ಕೊಲ್ಕತ್ತಾದ ಮಹಿಳಾ ಕಾಲೇಜಿನಲ್ಲಿ ಬೋಧನೆ ಮಾಡಲು ಪ್ರಾರಾಂಭಿಸಿದರು. ಜೊತೆಗೆ ಖಿದರ್‍ಪೋರ್ ಡಾಕಾ ಪ್ರದೇಶದಲ್ಲಿನ ಅನಕ್ಷರತೆ ನಿರ್ಮೂಲನೆಗಾಗಿ ತರಗತಿಗಳನ್ನು ಹಾಕಿಕೊಂಡರು. ವೇಶ್ಯಯರ ಜೊತೆಗೆ ನಿಕಟ ಸಂಪರ್ಕ ಹೊಂದಿ ಅವರ ಬದುಕು ಕುರಿತು ಮತ್ತು ನಿರ್ಗತಿಕರಾಗಿರುವ ಮಹಿಳೆಯರಿಗಾಗಿ, ಅವರ ಜೀವನ ಉದ್ದಾರಕ್ಕಾಗಿ ಒಂದು ಸಂಘಟನೆಯನ್ನು ಸ್ಥಾಪಿಸಿದರು.
ಆರಂಭದ ದಿನಗಳಲ್ಲಿ ಗಾಂಧೀಜಿಯವರ ತತ್ವಶಾಸ್ತ್ರದಲ್ಲಿ ನಂಬಿಕೆಯನ್ನು ಇಟ್ಟಿರಲಿಲ್ಲ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಗಾಂಧಿಜೀಯವರ ಅಹಿಂಸೆ ತತ್ವವು ಮತ್ತು ಯುದ್ಧ ವಿರೋಧಿ ಚಳುವಳಿಯಿಂದ ಇವರು ಪ್ರೇರೆಪಿತಗೊಂಡು ಭಾರತೀಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‍ಗೆ ಸೇರಿಕೊಂಡರು.
1940ರ ದಶಕದಲ್ಲಿ ಪುಲರೇಣು ಅವರು ಅಸಹಕಾರ ಚಳುವಳಿಯಲ್ಲಿ ತೀವ್ರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ಸಂದರ್ಭದಲ್ಲಿ ಇವರ ಭಾವಿಪತಿ ಬರೇಶರವರು ಜೈಲಿನಲ್ಲಿದ್ದರು. ಬಂಗಾಳದಲ್ಲಿ ಬರಗಾಲದಿಂದ ಅನೇಕ ಸಮಸ್ಯೆಗಳು ಉಂಟಾದಾಗ ಹಲವು ಕೆಲಸಗಳನ್ನು ಮಾಡಿದರು.
1943-44ರವರೆಗೆ ಇವರು ಆಜಾದ್ ಹಿಂದ್ ಪರಿಹಾರ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಸಹ ಕಾರ್ಯಕರ್ತೆಯಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಯರು ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ವಿಭಜನೆಯ ನಂತರ ಪ್ರಾಥಮಿಕವಾಗಿ ಅಗತ್ಯವಾಗಿರುವ, ಸ್ಥಳಾಂತರಗೊಂಡವರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಚೇತರಿಕೆಗೆ ಸಹಾಯಕವಾಗಿರಬೇಕು ಎಂದು ಹೇಳಿದರು. ಸ್ವಾತಂತ್ರ್ಯದ ನಂತರ ಪುಲರೇಣು ಗುಹಾ ಅವರು ತಮ್ಮನ್ನು ತಾವು ಭವ್ಯರಾಷ್ಟ್ರದ ನಿರ್ಮಾಣಕ್ಕಾಗಿ ತೊಡಗಿಸಿಕೊಂಡರು.
ಇವರು ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕೆಲಸವನ್ನು ನಿರ್ವಹಿಸಿದರು. 1971ರಿಂದ 1972ರ ವರೆಗೆ ಭಾರತ ಸರ್ಕಾರದ ಯೋಜನಾ ಆಯೋಗದ ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1972 ರಿಂದ 1975ರವರೆಗೆ ಭಾರತದ ಮಹಿಳೆಯರ ಸ್ಥಿತಿಗತಿ ಸಮಿತಿಯ ಅಧ್ಯಕ್ಷರಾಗಿದ್ದರು. ಅಲ್ಲದೇ 1970 ರಿಂದ 1973ರ ವರೆಗೆ ಭಾರತಿಯ ಮಕ್ಕಳ ಕಲ್ಯಾಣ ಮಂಡಳಿಯ ನಾಯಕರಾಗಿದ್ದರು. 1964 ರಿಂದ 1970ರ ವರೆಗೆ ಲೋಕ ಸಭೆಯ ಸದಸ್ಯರಾಗಿದ್ದರು. ಮಾರ್ಚ್ 1967 ರಿಂದ ಫೆಬ್ರವರಿ 1969ರ ವರೆಗೆ ಮತ್ತು 1969 ರಿಂದ 1970ರ ವರೆಗೆ ಕಾನೂನು ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು.
ಪುಲರೇಣು ಅವರು ಕರಕುಶಲ ಕಲಿಕೆಯ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದರು. ಮಹಿಳೆಯರಿಗಾಗಿ ಕೊಲ್ಕತ್ತಾದಲ್ಲಿ ಕಲಾ ಕುಟೀರ ಎಂಬ ಕಲಾ ಮತ್ತು ಕರಕುಶಲ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಲ್ಲಿ ಅನೇಕ ಮಹಿಳೆಯರು ಸಹಯೋಗ ನೀಡಿದರು. ಇದಕ್ಕೆ ಶ್ರೀಲಂಕಾ, ನೈಜಿರಿಯಾ ಮತ್ತು ಮಾರಿಷಸ್‍ನ ಮಹಿಳೆಯರು ಸಹ ಸ್ಥಳಿಯ ಮಹಿಳೆಯರೊಂದಿಗೆ ಕರ್ಮಕುಠಿರ ತರಬೇತಿ ಕೋರ್ಸಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಶೋಷಿತ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. 1960ರ ದಶಕದಲ್ಲಿ ಕಲ್ಕತ್ತಾದ ನಕ್ತಾಲಾದಲ್ಲಿ ಅಸೋಸಿಯೇಷನ್ ಫಾರ್ ಸೋಷಿಯಲ್ ಹೆಲ್ತ್ ಅಂಡ್ ಮಾರಲ್ ಹೈಜಿನ್ ಎಂಬ ಸಂಸ್ಥೆಯನ್ನು ಪುಲರೇಣುರವರು ಸ್ಥಾಪಿಸಿದರು. ಈ ಸಂಸ್ಥೆಯ ಅಡಿಪಾಯದಲ್ಲಿ ಅವರ ಇಬ್ಬರು ಸಹಯೋಗಿಗಳಾದ ಅಮಿತಾ ದಾಸ್ ಗುಪ್ತಾ ಮತ್ತು ಡಾ. ಮೈತ್ರೈಯಿ ಬಸು ಅವರು ಸಹಕರಿಸಿರುವರು.
1955ರಲ್ಲಿ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೆ ತರಲು ಅಂಗೀಕರಿಸಿದಾಗ ಮಹಿಳೆಯರಿಗೆ ಮದುವೆಯನ್ನು ಕೊನೆಗೊಳಿಸಲು ಮಹಿಳೆಯರಿಗೆ ಪ್ರತ್ಯೇಕವಾದ ಸಮಾನ ಹಕ್ಕುಗಳನ್ನು ನೀಡಿದರು. ಯಾವುದೇ ಸಂದರ್ಭದಲ್ಲಿ ಕಾನೂನಿನ ನಿರ್ದಿಷ್ಟ ನಿರ್ಬಂಧನೆಗಳನ್ನು ಪಾಲಿಸಿದರು. ವಿವಾಹ ವಿಘಟನೆಯನ್ನು ಕೋರಲು ಮತ್ತು ಒಂದಾಗಲು ಕೆಲವೊಂದು ಸೌಲತ್ತುಗಳನ್ನು ನೀಡಬೇಕೆಂದು ಪುಲರೇಣು ಅವರು ಹೇಳಿದರು. ಅಲ್ಲದೇ ಕ್ರೂರತೆ, ದಾಂಪತ್ಯ ದ್ರೋಹ ಅಥವಾ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿದ್ದರೆ ಅಂತಹ ಸಮಯದಲ್ಲಿ ವಿಚ್ಚೇಧನಕ್ಕಾಗಿ ಅನುಮತಿ ನೀಡುವುದು. ಕೊಷ್ಟರೋಗ ಮತ್ತು ರಕ್ತನಾಳದ ಸೋಂಕುಗಳನ್ನು ಅನುಭವಿಸುವುದು ಅಥವಾ ಜೀವನ ಸಂಗಾತಿ ಆಯ್ಕೆ ಮಾಡಲು ಅಸ್ವಸ್ಥರಾಗಿದ್ದರೆ ಅಂತಹ ಆರೋಪಗಳನ್ನು ಮೌಲೀಕರಿಸಬೇಕು ಎಂದು ತಿಳಿ ಹೇಳಿದರು.
2006ರಲ್ಲಿ ನಿಧನರಾದ ಪುಲರೇಣು ಅವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು 1977ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ