ಅಂಕಣ ಸಂಗಾತಿ

ಗಜಲ್ ಲೋಕ

ಕೂಡ್ಲಿಗಿಯವರಕ್ಯಾನ್ವಾಸ್ನಲ್ಲಿ

ಅರಳಿದ ಗಜಲ್ಹೂದೋಟ

ನಮಸ್ಕಾರಗಳು…

ನಾನು ನಿಮ್ಮ ಮಲ್ಲಿ.. ಎಂದಿನಂತೆ ತಮ್ಮ ಮುಂದೆ ಗಜಲ್ ತೋಟದ, ಕಂಪನ್ನು ಸೂಸುವ, ಸೂಸುತ್ತಿರುವ ಅನುಪಮ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ.

ನಾವು ನಿಟ್ಟುಸಿರು ಬಿಟ್ಟರು ಕುಖ್ಯಾತರಾಗುತ್ತೇವೆ

ಅವರು ಕೊಂದರೂ ಸಹ ಚರ್ಚೆಯೂ ಆಗುವುದಿಲ್ಲ

                           –ಅಕ್ಬರ್ ಇಲಾಹಾಬಾದಿ

        ಜೀವಸಂಕುಲದ ಬದುಕಿನ ಮೂಲ ಸ್ಥಾಯಿ ಭಾವವೇ ಪ್ರೀತಿ. ಈ ಪ್ರೀತಿ ಎನ್ನುವುದನ್ನು ಸರಳವಾಗಿ ವ್ಯಾಖ್ಯಾನಿಸಲು, ವಿವರಿಸಲು ಹಾಗೂ ಇದಮಿತ್ಥಂ ಎಂದು ಹೇಳಲು ಬರುವುದಿಲ್ಲ. ಆದರೆ ಇದರಲ್ಲಿಯೇ ಇಡೀ ಪ್ರಕೃತಿ ಅಡಗಿದೆ. ಬದುಕುವ ಆಸೆಯೂ ಬೆರೆತಿದೆ. ಜೀವನವನ್ನು ಅರ್ಥಮಾಡಿಕೊಳ್ಳುತ್ತ, ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಕಲೆಯೂ ಅಡಕವಾಗಿದೆ.‌ ಪ್ರೀತಿಯೇ ಸತ್ಯ, ಉಳಿದೆಲ್ಲವೂ ಅಸತ್ಯ!! ಈ ನೆಲೆಯಲ್ಲಿ ಪ್ರೀತಿಯಿಲ್ಲದೆ ಬದುಕುವುದು ನಿರರ್ಥಕ!! ಪ್ರೀತಿ ಒಂದು ಶಾಶ್ವತ ಭಾವನೆ. ನೆನ್ನೆಯೂ ಇತ್ತು, ಇಂದೂ ಇದೆ ; ಮತ್ತು ನಾಳೆಯೂ ಇರುತ್ತದೆ! ಪ್ರಕೃತಿಯ ಪ್ರತಿಯೊಂದು ಕಣ ಕಣದಲ್ಲೂ ಪ್ರೀತಿ ವ್ಯಾಪಿಸಿದೆ. ಆ ಪ್ರೀತಿಯ ಶಕ್ತಿಯಿಂದ ಮಾತ್ರ ನಿಸರ್ಗ ನಿರಂತರವಾಗಿ ಅರಳುತ್ತಿದೆ. ಪ್ರೀತಿಯ ಭಾವನೆ ಅಪರೂಪ, ಅನನ್ಯ ಹಾಗೂ ಅನುಪಮ. ಪ್ರೀತಿ ಹೃದಯದ ಭಾಷೆ. ಯಾರನ್ನಾದರೂ ಪ್ರೀತಿಸುವುದು ಅಥವಾ ಪ್ರೀತಿಗೆ ಪಾತ್ರರಾಗುವುದು ಪ್ರಪಂಚದ ಅತ್ಯಂತ ಸುಂದರವಾದ ಭಾವನೆ. ಪ್ರೀತಿಯು ರಾಜಿಯಲ್ಲ, ನಿರ್ಬಂಧವೂ ಅಲ್ಲ; ಇದು ಹೃದಯದಿಂದ ಹರಿಯುವ ಹರಿವು. ಎಂದಿಗೂ ಕೊನೆಗೊಳ್ಳದ ನದಿ. ಪ್ರೇಮದ ಅರ್ಥವನ್ನು ತಿಳಿದವನಿಗೆ ಬೇರೇನೂ ತಿಳಿಯಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ, ವ್ಯಕ್ತಿಯ ವ್ಯಕ್ತಿತ್ವದ ವಿವಿಧ ಆಯಾಮಗಳ ಪ್ರತಫಲನವೇ ಸಾಹಿತ್ಯ! ಈ ನೆಲೆಯಲ್ಲಿ ಸಾರಸ್ವತ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದ ಗಮನಿಸಿದರೆ ಕಾಮನಬಿಲ್ಲನ್ನೂ ಮೀರಿಸುವ ಅನುಪಮ ಸೃಷ್ಟಿ ನಮಗೆ ಎದುರಾಗುತ್ತದೆ!! ಎಲ್ಲ ಸಾಹಿತ್ಯ ಪ್ರಕಾರಗಳು ಪ್ರೀತಿಯನ್ನು ಪ್ರೀತಿಸುತ್ತಿವೆಯಾದರೂ ಅದನ್ನು ಉಸಿರಾಡುತ್ತಿರುವುದು ಮಾತ್ರ ಗಜಲ್ ಎಂಬ ಚುಂಬಕ ಸಾಹಿತ್ಯ ರೂಪ. ಈ ಕಾರಣಕ್ಕಾಗಿಯೇ ಗಜಲ್ ಎಂದರೆ “ಹೃದಯದ ಆಳದಿಂದ, ನಿರ್ಮಲ ಮನಸ್ಸಿನಿಂದ ಪ್ರೀತಿಯಿಂದ ಮಾತನಾಡುವುದು” ಎಂದು. ಇದು ಕಿವಿಗೆ ತಲುಪುವುದಕ್ಕಿಂತ ಮುಂಚೆಯೇ ಹೃದಯವನ್ನು ಆವರಿಸುವಂತದ್ದು. ಇದು ಕಳೆದುಕೊಳ್ಳುವ ಆಘಾತ, ಅಗಲಿಕೆಯ ನೋವು ಹಾಗೂ ಆ ನೋವಿನ ನಡುವೆಯೂ ಅಪ್ಪಿ ಮುದ್ದಿಸುವ ಒಲವಿನ ನೆನಪುಗಳ ಮೆರವಣಿಗೆಯಾಗಿದೆ. ನೋವಿಗೂ ನೋಯಿಸದಂತೆ ಪ್ರೀತಿಸುವ ಕಲೆಯನ್ನು ನಮಗೆ ಗಜಲ್ ಕಲಿಸಿ ಕೊಡುತ್ತದೆ. ಪ್ರೀತಿ, ಸೌಂದರ್ಯ ಹಾಗೂ ಮಧುರ ಯಾತನೆಯ ತ್ರಿವಳಿ ಸಂಗಮಗಳ ಕಾವ್ಯಾತ್ಮಕ ಅಭಿವ್ಯಕ್ತಿಯೇ ಗಜಲ್. ಇಂತಹ ಮೃದು, ಕೋಮಲ, ಬಳುಕುವ ಬಳ್ಳಿ ಗಜಲ್ ಮಾನಿನಿಯನ್ನು ಪ್ರೀತಿಸುವ, ಪೂಜಿಸುವ ನಮ್ಮ ಮಧ್ಯೆಯಿರುವ ಅಪರೂಪದ ಗಜಲ್ ಗೋ ಎಂದರೆ ಡಾ. ಸಿದ್ಧರಾಮ ಹಿರೇಮಠ ಕೂಡ್ಲಿಗಿಯವರು!!

           ಹಿರೇಮಠ ರವರು ಗುರುಲಿಂಗಯ್ಯ ಹಿರೇಮಠ ಮತ್ತು ಶಾಂತಾದೇವಿ ಹಿರೇಮಠ ದಂಪತಿಗಳ ಮಗನಾಗಿ 1965ರ ಅಕ್ಟೋಬರ್ 31ರಂದು ರಾಯಚೂರಿನಲ್ಲಿ ಜನಿಸಿದರು. ಇವರು 1988 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಿಂದ ಎಂ.ಎ (ಕನ್ನಡ)  ಪದವಿಯನ್ನು ವಿಶ್ವವಿದ್ಯಾಲಯಕ್ಕೆ 2ನೇ ರ್ಯಾಂಕ್ ರೂಪದಲ್ಲಿ ಪಡೆದಿದ್ದಾರೆ. ಪ್ರಸ್ತುತದಲ್ಲಿ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ ಕಾಲೇಜು, ಕೂಡ್ಲಿಗಿಯಲ್ಲಿ ಕಳೆದ 30 ವಸಂತಗಳಿಂದ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಪ್ರಕೃತಿ ಪ್ರಿಯರೂ, ಉತ್ತಮ ಛಾಯಚಿತ್ರಗ್ರಾಹಕರೂ ಹಾಗೂ ಭಾಷಾಂತರಕಾರರೂ ಆದ ಕೂಡ್ಲಿಗಿಯವರು ಜೀವನವನ್ನು ಪ್ರೀತಿಸುವ ಸಾಹಿತಿಗಳಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. ಬಾನುಸುರಿದ ಮಾತು, ನನ್ನೊಳಗಿನ ನಾನು, ಅನನ್ಯ, ಆಂಡಯ್ಯ(ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಂಪಾದಿತ ಕೃತಿ), 

ವಡೇವು(ಪತ್ರಿಕಾ ಬರಹಗಳ ಸಂಗ್ರಹ) ಇವುಗಳೊಂದಿಗೆ “35 ಗಜಲ್‌ಗಳು 45 ಹೈಕುಗಳು‌”, “ಲಹರಿ” ಎಂಬ ಎರಡು ಸುಂದರ ಗಜಲ್ ಸಂಕಲನಗಳನ್ನು ಗಜಲ್ ಲೋಕಕ್ಕೆ ಅರ್ಪಿಸಿದ್ದಾರೆ. ಬದ್ಧತೆ ಹಾಗೂ ಶ್ರಮಜೀವಿಗಳಾದ ಕೂಡ್ಲಿಗಿಯವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು, ಗೌರವ ಸನ್ಮಾನಗಳು ಲಭಿಸಿವೆ.‌ ಡೆಹ್ರಾಡೂನ್ ನ K4T (Knock for Talent) ಸಂಸ್ಥೆ 2016ರಲ್ಲಿ ನಡೆಸಿದ

ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಇವರ ಛಾಯಾಚಿತ್ರವೊಂದಕ್ಕೆ ಪ್ರಥಮ ಬಹುಮಾನ ದೊರೆತಿದೆ. ಬೆಂಗಳೂರಿನ ಛಾಯಾಚಿತ್ರ ಸಂಸ್ಥೆಯಾಗಿರುವ NTML ಸಂಸ್ಥೆಯ ಸದಸ್ಯರಾಗಿರುವ ಇವರ ಛಾಯಾಚಿತ್ರಗಳು ಧಾರವಾಡ, ಬೆಂಗಳೂರು ಮತ್ತು ರಾಜ್ಯದ ವಿವಿಧೆಡೆ ನಡೆದ ಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡು ಕಲಾರಸಿಕರ ಪ್ರಶಂಸೆಗೆ ಪಾತ್ರವಾಗಿವೆ.

       ಒಂದು ಗಜಲ್ ಮುಖಮ್ಮಲ್ ಆಗಬೇಕಾದರೆ ಅಲ್ಲಿ ಬಳಕೆಯಾಗಿರುವ, ಬಳಕೆಯಾಗುವ ಅಕ್ಷರಗಳ ಪಾತ್ರ ತುಂಬಾ ಹಿರಿದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಣಗಳಿಗೆ ಅದರದೇ ಆದ ಆಕಾರವಿರುತ್ತದೆ. ಅದಕ್ಕೊಂದು ಮೂರ್ತ ರೂಪ ದೊರೆತಾಗ ಅದು ಶಬ್ದವಾಗಿ ಬದಲಾಗುತ್ತದೆ. ಆ ಶಬ್ದಗಳ ಗೊಂಚಲು ನಮ್ಮ ಪರವಾನಿಗೆ ಇಲ್ಲದೆಯೇ ಹಿಡಿಯಾದ ನಮ್ಮ ಹೃದಯದಲ್ಲಿ ಒಂದು ಅರಮನೆಯನ್ನೇ ನಿರ್ಮಿಸುತ್ತದೆ. ನಮ್ಮ ಉಸಿರಲ್ಲಿ ಉಸಿರಾಗಿ ಬೆರೆಯುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಎಂಬ ಮಾಯಾ ಕನ್ನಿಕೆ ಇಡೀ ಮನುಕುಲವನ್ನು ವ್ಯಾಪಿಸಿ, ರಾಣಿಯ ಪಟ್ಟವನ್ನು ಅಲಂಕರಿಸಿದೆ. ಈ ಮಾರ್ಗವಾಗಿ ನಾವು ಸಾಗಿದಾಗ ಕೂಡ್ಲಿಗಿಯವರ ನುಣುಪಾದ ಗಜಲ್ ಲೋಕ ನಮ್ಮನ್ನು ಕ್ಷಣ ಹೊತ್ತು ತಡೆದು ನಿಲ್ಲಿಸುತ್ತದೆ. ಇವರ ಗಜಲ್ ನ ಸ್ಥಾಯಿ ಭಾವವೇ ‘ಪ್ರೇಮ’. ಪ್ರೀತಿ, ಪ್ರೇಮಗಳ ಮೂಲಕ ಆಧ್ಯಾತ್ಮದ ಹೊಳಹನ್ನು ಕಾಣುವುದೆ ಇವರ ಗಜಲ್ ನ ಗುರಿಯಾಗಿದೆ.

ಸಾಕಿ ತಂದಿರುವ ಮಧುವೂ ಮತ್ತೇರದಂತಾಗಿದೆ

ಬರಡಾದ ಇರುಳುಗಳು ಹುಯ್ಯಲಿಡುತಿವೆ ಒಡತಿಯಿಲ್ಲದೆ

ಸಾಮಾನ್ಯವಾಗಿ ‘ಮಧು’ ಎಂದರೇನೆ ‘ಮತ್ತು’. ಆದರೆ ಮಧುವಿನಿಂದಲೂ ಮತ್ತೇರುತಿಲ್ಲವೆಂದರೆ…ಮಧುಪಾನ ಮಾಡಿದವನ ಹೃದಯ ಅವನ ಹಿಡಿತದಲ್ಲಿ ಇಲ್ಲ ಅಂತಾನೆ ಅರ್ಥ. ಪ್ರೇಮ ಎಂದರೆ ಇನ್ನಿತರರ ಸಲುವಾಗಿ ಉಸಿರಾಡುವುದು, ಬದುಕುವುದು. ಈ ಕಾರಣಕ್ಕಾಗಿಯೇ ನಿಜವಾದ ಪ್ರೇಮಿಯೂ ಯಾವ ಶರಾಬಿಗೂ ಕಡಿಮೆಯೇನಲ್ಲ. ಅಲ್ಲಿ ಮಧುಬಟ್ಟಲು ಮಾತಾಡುತಿದ್ದರೆ ಇಲ್ಲಿ ಕಂಗಳಬಟ್ಟಲು ಮೌನವಾಗಿಯೇ ಸದ್ದು ಮಾಡುತ್ತವೆ.‌ ಪ್ರೇಮಿಕಾ ಇಲ್ಲದ ಇರುಳು ಬರಡಾದ ವಸುಂದರೆಯಂತೆ!! ಅಲ್ಲಿ ನಿದ್ದೆಯೂ ಚಿಗುರುವುದಿಲ್ಲ, ಶಾಂತಿ-ನೆಮ್ಮದಿಯೂ ಸುಳಿಯುವುದಿಲ್ಲ. ಅಲ್ಲಿ ಇರುವುದು ಹೃದಯದ ಏರುಪೇರಿನ ಬಡಿತ!!

ಹಸಿದ ಹೊಟ್ಟೆಯ ಮೇಲೆ ಕೇಕೆಹಾಕಿ ನಗುತಿದೆ ಕಾಂಚಾಣ

ಪ್ರಭುವೇ ಸೇವಕನಲಿ ಬೇಡುವಾಗ ಇನ್ನಾರಿಗೆ ದೂರಲಿ

ಎನ್ನುವ ಷೇರ್ ನಮ್ಮ ಸಾಮಾಜಿಕ ವ್ಯವಸ್ಥೆಯ ದರ್ಪಣವಾಗಿದೆ. ಇಂದು ಧರ್ಮಗಳು ಅಂತರಂಗದ ಅಗತ್ಯಕ್ಕಿಂತ ಬಾಹ್ಯ ಆಚರಣೆಗಳಾಗಿ, ಹೆಮ್ಮೆಯಾಗಿ ಉಳಿದುಕೊಂಡಿವೆ. ಧರ್ಮದ ಕುರುಹುಗಳನ್ನು ತೊರೆದರೆ ಅಧರ್ಮಿ ಎನಿಸಿಕೊಳ್ಳುವ ಆತಂಕ ಸಾಮಾನ್ಯರನ್ನು ಕಾಡುತ್ತಿದೆ. ಬೆಸೆಯಬೇಕಾಗಿರುವ ಧರ್ಮಗಳು ಇಂದು ಮನುಷ್ಯನ ಸಮಯಸಾಧಕ ಗುಣಕ್ಕೆ ಬಲಿಯಾಗುತಿವೆ!! ಬೇಲಿಯೇ ಹೊಲವನ್ನು ಮೇಯುತ್ತಿರುವಂತ ಸಂಕ್ರಮಣ ಕಾಲದ ಕುರಿತು ಗಜಲ್ ಗೋ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಿರಿ ಸಂಪತ್ತು ಇರುವಾಗಲೂ ಬಡತನವನ್ನು ಅನುಭವಿಸುವುದು, ಅಧಿಕಾರವಿದ್ದಾಗಲೂ ವಿನೀತ ಭಾವ ಹೊಂದಿರುವುದು ; ಪ್ರಸಿದ್ಧರಾಗಿರುವಾಗಲೂ ಅನಾಮಿಕರಾಗಿ ಉಳಿಯಬೇಕು ಎಂಬ ಸಂದೇಶವನ್ನು ಈ ಮೇಲಿನ ಷೇರ್ ತನ್ನ ಅಂತರಂಗದಲ್ಲಿ ಒಳಗೊಂಡಿದೆ!!

        ಏಕಕಾಲದಲ್ಲಿಯೇ ಹಸಿವನ್ನು ನೀಗಿಸುವ, ಒಡಲಿನಲ್ಲಿ ಹಸಿವಿನ ಬಿರುಗಾಳಿ ಎಬ್ಬಿಸುವ ಅನುಪಮ ಶಕ್ತಿಯೆಂದರೆ ಅದು ಪ್ರೀತಿ. ಚಡಪಡಿಕೆಯೇ ಇದರ ಜೀವಾಳ. ಡಾ. ಸಿದ್ದರಾಮ ಹಿರೇಮಠ ಅವರು ತಮ್ಮ ಗಜಲ್ ಪ್ಯಾಲಾಗಳಿಂದ ಓದುಗರಿಗೆ ಸದಾ ಪ್ರೇಮರಸವನ್ನು ಹಂಚುತ್ತಿರಲಿ ಎಂದು ಶುಭ ಕೋರುತ್ತೇನೆ.

ಬೆಂಕಿ ಬೀಳಲಿ ನಿನ್ನ ನೇಮನಿಷ್ಠೆಗಳಿಗೆ

ಮಿಗಿಲು ಪೂಜೆಯಿಲ್ಲ, ಉಪಕಾರಿಯಾಗು ಪರರಿಗೆ

                           –ಲಲ್ಲಾ

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ನಿಮ್ಮ ನೆಚ್ಚಿನ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ


Leave a Reply

Back To Top