ಧಾರಾವಾಹಿ
ಆವರ್ತನ
ಅದ್ಯಾಯ-42
ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ ಜೀರ್ಣೋದ್ಧಾರ ಕಾರ್ಯಗಳನ್ನು ತಡೆಹಿಡಿಯುತ್ತಿದ್ದವು. ಇವೆಲ್ಲದರ ನಡುವೆ ಅವರು ಭಾಗೀವನದ ಸಮೀಪದ ದೇವರಕಾಡಿನ ಮೇಲೆ ಇಟ್ಟುಕೊಂಡಿದ್ದ ಮಹತ್ವಾಕಾಂಕ್ಷೆಯ ಕೆಲಸವೊಂದು ಹಗಲಿರುಳು ಅವರನ್ನು ಭಾದಿಸುತ್ತಿತ್ತು. ಆದ್ದರಿಂದ ಅದರ ಕುರಿತೂ ಅವರು ಸುಮ್ಮನೆ ಕುಳಿತಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಆ ಕಾರ್ಯದಲ್ಲಿ ತೊಡಗುತ್ತಿದ್ದರು. ಆ ಹಾಡಿ ಮತ್ತದರ ಸುತ್ತಮುತ್ತಲಿನ ಪ್ರದೇಶವು ಬಹಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದೆಂದೂ ಅವರಲ್ಲಿ ಬಹುತೇಕರು ಎಲ್ಲೆಲ್ಲೋ ಹಂಚಿ ಹೋಗಿದ್ದು ಸದ್ಯ ಆ ಅರಣ್ಯದ ಹತ್ತಿರದ ಹಳೆಯ ಮನೆಯಲ್ಲಿ ಅವನ ಕುಟುಂಬದ ಇಬ್ಬರು ಹಿರಿಯರು ಮಾತ್ರವೇ ಉಳಿದಿರುವರೆಂದೂ ಆ ಮನೆತನದ ನಾಗ, ಪರಿವಾರ ದೈವಗಳು ಅನಾದಿ ಕಾಲದಿಂದಲೂ ಆ ಮನೆಯ ಸಣ್ಣ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆಯೆಂದೂ ರಾಘವನ ಗುಪ್ತ ಅಧ್ಯಯನದಿಂದ ಗುರೂಜಿಯವರಿಗೆ ತಿಳಿದು ಬಂದಿತ್ತು. ಹಾಗಾಗಿ ಆ ಬೃಹತ್ತ್ ಅರಣ್ಯವನ್ನು ತೆರವುಗೊಳಿಸಿ ಅಲ್ಲಿ ಭವ್ಯವಾದ ನಾಗನ ದೇವಸ್ಥಾನವೊಂದನ್ನು ನಿರ್ಮಿಸಬೇಕು ಮತ್ತದರ ಸಮೀಪದ ಮದಗವನ್ನು ನಾಗ ದೇವಳಕ್ಕೆ ಸಂಬಂಧಿಸಿದ ಸುಂದರ ಪುಷ್ಕರಣಿಯನ್ನಾಗಿ ಮಾರ್ಪಡಿಸಿ ಆ ಕ್ಷೇತ್ರವನ್ನು ಬಹಳ ಕಾರಣಿಕದ ಪುಣ್ಯಭೂಮಿಯನ್ನಾಗಿ ಮಾಡಬೇಕೆಂಬ ವಿಶೇಷ ಯೋಜನೆಯು ಗುರೂಜಿಯವರೊಳಗೆ ನಿರಂತರ ಮಥಿಸುತ್ತಲೇ ಇತ್ತು.
ಆ ದೇವರ ಕಾಡಿನಲ್ಲಿ ತಾವು ಸ್ಥಾಪಿಸಬೇಕಾದ ನಾಗ ದೇವಸ್ಥಾನದ ಕುರಿತ ತಮ್ಮ ಆಕಾಂಕ್ಷೆಯನ್ನು ಸಿದ್ಧಿಸಿಕೊಳ್ಳಬೇಕಾದ ಮಾರ್ಗೊಪಾಯದ ಚಿತ್ರಣವನ್ನೂ ಹಾಗೂ ಅದಕ್ಕೆ ಬೇಕಾದ ಸೂಕ್ತ ನಕ್ಷೆಯನ್ನೂ ತಮ್ಮೊಳಗೆಯೇ ತಯಾರಿಸುತ್ತಿದ್ದ ಗುರೂಜಿಯವರು ಆವತ್ತೊಂದು ಶುಭಗಳಿಗೆಯಲ್ಲಿ ಆಪ್ತ ಸಹಾಯಕ ರಾಘವನನ್ನು ಕರೆದು ತಮ್ಮ ಯೋಜನೆಯನ್ನು ಅವನಿಗೆ ಕೂಲಂಕಷವಾಗಿ ವಿವರಿಸಿದರು. ಆದರೆ ಅದನ್ನು ಕೇಳಿದ ಅವನು ವಿಪರೀತ ಭಯಕ್ಕೆ ಬಿದ್ದು ಆ ಕೆಲಸಕ್ಕೆ ಸಹಕಾರ ನೀಡಲು ಹಿಂಜರಿದುಬಿಟ್ಟ. ಅದರಿಂದ ಗುರೂಜಿಯವರು ಸ್ವಲ್ಪ ನಿರಾಶರಾದರು. ಆದರೆ ಅವರು ಬೆನ್ನು ಹಿಡಿದರೆ ಬೇತಾಳನಂಥ ಸ್ವಭಾವದವರು. ಆದ್ದರಿಂದ ಅವನ ಭಯವನ್ನು ಕಂಡವರು ಮೆಲುವಾಗಿ ನಕ್ಕು, ‘ನೋಡು ರಾಘವಾ, ಇದು ನಮ್ಮ ಸ್ವಾರ್ಥಕ್ಕೋ ಅಥವಾ ಹಣದ ಲಾಭಕ್ಕೋ ಹಮ್ಮಿಕೊಂಡಿರುವ ಕಾರ್ಯವೆಂದು ಯಾವತ್ತಿಗೂ ಭಾವಿಸಬೇಡ. ಇದೇನಿದ್ದರೂ ನಮ್ಮ ಊರು ಮಾತ್ರವಲ್ಲದೇ ಇಡೀ ಲೋಕ ಕಲ್ಯಾಣಾರ್ಥವಾಗಿ ಬಹಳ ಹಿಂದೆಯೇ ನಾವು ಸಂಕಲ್ಪಿಸಿಕೊಂಡಿರುವ ಪುಣ್ಯಕಾರ್ಯವಿದು! ಅಷ್ಟಲ್ಲದೇ ಈ ದೈವೀ ಕಾರ್ಯವು ನಿನ್ನ ಹೊರತು ಬೇರೆ ಯಾರಿಂದಲೂ ಸಾಧ್ಯವಾಗುವಂಥದ್ದಲ್ಲ! ಯಾಕೆಂದರೆ ಇದಕ್ಕೆ ಅದರದ್ದೇ ಆದ ಶುದ್ಧ ನೇಮನಿಷ್ಠೆ ಮತ್ತು ಗಟ್ಟಿ ಆತ್ಮಬಲವಿರುವವರೇ ಬೇಕಾಗುತ್ತದೆ. ಅವೆಲ್ಲವೂ ನಿನ್ನಲ್ಲಿವೆ. ಆದ್ದರಿಂದಲೇ ಈ ಕೆಲಸಕ್ಕೆ ನಿನ್ನನ್ನು ಆರಿಸಿರುವುದು. ಇದನ್ನು ನೀನು ಭಕ್ತಿಯಿಂದ ಕೈಗೊಳ್ಳುತ್ತಿಯಾದರೆ ನಿನಗೆ ಯಾವ ಕಂಟಕವೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಅಷ್ಟು ಮಾತ್ರವಲ್ಲದೇ ನೀನಿದನ್ನು ಸರಿಯಾಗಿ ನಡೆಸಿಕೊಟ್ಟೆಯೆಂದರೆ ಅದೇ ನಾಗನ ಹೆಸರಿನಲ್ಲಿ ನಿನಗೊಂದು ಐದು ಸೆಂಟ್ಸ್ ಒಳ್ಳೆಯ ಜಾಗವನ್ನೂ ಎರಡು ಸಾವಿರ ಚದರಡಿಯ ಚಂದದ ತಾರಸಿ ಮನೆಯನ್ನೂ ಉಡುಗೊರೆಯಾಗಿ ನೀಡುವ ಆಸೆ ನಮಗಿದೆ. ಯಾವುದಕ್ಕೂ ಯೋಚಿಸಿ ನೋಡು!’ ಎಂದರು ಗಂಭೀರವಾಗಿ. ಗುರೂಜಿಯವರಿಂದ ಉದುರುತ್ತಿದ್ದ ದುಬಾರಿ ನುಡಿಮುತ್ತುಗಳನ್ನು ಆಸ್ಥೆಯಿಂದ ಹೆಕ್ಕಿಕೊಳ್ಳುತ್ತಿದ್ದ ರಾಘವನಿಗೆ ನಾಗನ ಹೆಸರಿನಲ್ಲಿ ಅವರು ನೀಡುತ್ತೇವೆಂದ ಉಡುಗೊರೆಯು ತಟ್ಟನೆ ಅವನ ಭಯವನ್ನೂ ಹಿಂಜರಿಕೆಯನ್ನೂ ಹೊಡೆದೋಡಿಸಿಬಿಟ್ಟಿತು.
‘ಆಯ್ತು ಗುರೂಜಿ. ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾಗುವುದಾದರೆ ತಮಗಾಗಿ ಯಾವ ಕೆಲಸ ಮಾಡಲೂ ಸಿದ್ಧ! ಎಲ್ಲವೂ ತಮ್ಮ ಮಾರ್ಗದರ್ಶನದಿಂದಲೇ ನಡೆದರೆ ಸಾಕು!’ ಎಂದು ಎದೆ ಸೆಟೆಸಿ ಒಪ್ಪಿಗೆ ಸೂಚಿಸಿದ. ಅಷ್ಟು ಕೇಳಿದ ಗುರೂಜಿಯವರ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮಿಂಚಿ ಮರೆಯಾಯಿತು. ‘ಹೌದು ರಾಘವಾ ಸರಿಯಾದ ಮಾತು. ನಾವು ಯಾವಾಗಲೂ ಹಾಗೆಯೇ ಯೋಚಿಸುತ್ತ ಜೀವನದಲ್ಲಿ ಮೇಲೆ ಬರುವುದು ಹೇಗೆಂಬುದನ್ನು ಕಲಿಯಬೇಕು. ನೀನು ನಮ್ಮೊಂದಿಗೆ ಇರುವವರೆಗೆ ನಿನ್ನ ರಕ್ಷಣೆಯ ಜವಾಬ್ದಾರಿಯೂ ನಮ್ಮದು!’ ಎಂದು ಗುರೂಜಿ ಅವನಲ್ಲಿ ಇನ್ನಷ್ಟು ಧೈರ್ಯ ತುಂಬಿದರು. ಹಾಗಾಗಿ ಅವರು ಗೊತ್ತುಪಡಿಸಿದ ಶುಭದಿನದಂದು ರಾಘವ ತನ್ನ ಕೆಲಸವನ್ನಾರಂಭಿಸಿದ. ಒಂದು ನರಪಿಳ್ಳೆಗೂ ಸುಳಿವು ಸಿಗದಷ್ಟು ಜಾಗ್ರತೆಯಿಂದ ಆ ದೇವರಕಾಡನ್ನು ಕೆಲವು ಬಾರಿ ಪ್ರವೇಶಿಸಿದವನು, ಅದರೊಳಗೆ ನಾಗಬನ ಮತ್ತು ಭೂತಸ್ಥಾನಗಳು ಇರುವ ಕುರುಹುಗಳನ್ನು ಬಹಳವೇ ಹುಡುಕಾಡಿದ. ಆದರೆ ಆ ಅರಣ್ಯದೊಳಗೆ ಅವನಿಗೆ ಅಂಥ ಯಾವ ಗುರುತುಗಳೂ ಕಾಣಿಸಲಿಲ್ಲ. ಅದರಿಂದ ತೀವ್ರ ನಿರಾಶನಾದ. ತನ್ನ ಇಂಥ ಶ್ರಮಕ್ಕೆ ಗುರೂಜಿಯವರಿಂದ ಕಡಿಮೆಯೆಂದರೂ ನಲವತ್ತು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಬಹುಮಾನವು ಸಿಗುವುದರಲ್ಲಿತ್ತು. ಆದರೂ ತನ್ನ ದುರಾದೃಷ್ಟಕ್ಕೆ ಕೈತಪ್ಪಿತಲ್ಲ…! ಎಂದೂ ಕೊರಗಿದ. ಹಾಗಾಗಿ ಅವನಿಗೆ ನಾಗದೇವನ ಮೇಲೆ ವಿಪರೀತ ಕೋಪ ಬಂತು. ‘ಛೇ! ಛೇ! ಇದೇನಿದು ನಾಗದೇವಾ…! ನಿನಗೊಂದು ಭದ್ರವಾದ ನೆಲೆಯನ್ನು ಕಲ್ಪಿಸಲಿಕ್ಕಾಗಿಯೇ ನಾನೂ ಗುರೂಜಿಯವರೂ ಕೂಡಿ ಒದ್ದಾಡುತ್ತಿರುವುದು ನಿನಗೂ ಕಾಣಿಸುತ್ತಿಲ್ಲವಾ? ಹೀಗಿರುವಾಗ ನಿನ್ನ ಉದ್ಧಾರಕ್ಕೆ ನೀನೇ ಮನಸ್ಸು ಮಾಡದಿದ್ದರೆ ಹೇಗೆ ಹೇಳು…!’ ಎಂದು ಅಸಹನೆಯಿಂದ ಗೊಣಗುತ್ತ ಹಿಂದಿರುಗಿದ.
ತನ್ನ ಪತ್ತೇಧಾರಿ ಕೆಲಸವು ವ್ಯರ್ಥವಾದುದನ್ನು ಗುರೂಜಿಯವರಿಗೆ ಬೇಸರದಿಂದ ವಿವರಿಸಿದ. ಆದರೆ ಆ ಸುದ್ದಿ ಕೇಳಿದ ಗುರೂಜಿಯವರಿಗೆ ಆಘಾತವಾಯಿತು. ‘ಅಯ್ಯಯ್ಯೋ… ನಾಗದೇವಾ! ಅಂಥದ್ದೊಂದು ಪುರಾತನವಾದ ಹಾಡಿಯೊಳಗೆ ನಾಗ, ದೈವಸ್ಥಾನಗಳು ಇರಲೇಬೇಕೆಂದು ತಾವು ಭಾವಿಸಿದ್ದು ಹೇಗೆ ಸುಳ್ಳಾಗಿಬಿಟ್ಟಿತು ಪರಮಾತ್ಮಾ…?’ ಎಂದು ಯೋಚಿಸಿ ತೀವ್ರ ಕಳವಳಪಟ್ಟರು. ಆಗ ಅವರನ್ನು ಇನ್ನೊಂದು ಸಂಗತಿಯೂ ತಲೆ ತಿನ್ನತೊಡಗಿತು. ದಿನನಿತ್ಯ ಒಂದಲ್ಲ ಒಂದು ವಿಧದ ತರಲೆ, ತಾಪತ್ರಯಗಳನ್ನು ತಮ್ಮಲ್ಲಿಗೆ ಹೊತ್ತು ತರುತ್ತಿರುವಂಥ ಬುಕ್ಕಿಗುಡ್ಡೆಯ ನಿವಾಸಿಗಳಿಗೂ ಮತ್ತು ಮುಖ್ಯವಾಗಿ ಭಾಗೀವನದ ಸುಮಿತ್ರಮ್ಮ ಹಾಗೂ ಶಂಕರನಿಗೂ ಅದೊಂದು ಪುರಾತನವಾದ ಕಾರಣಿಕದ ನಾಗಬನವೆಂದೂ, ಈಗ ಅಲ್ಲಿನ ದೈವದೇವರುಗಳೆಲ್ಲ ನೀರು ನೆರಳಿಲ್ಲದೆ ಹತಾಶೆಗೊಂಡು ಗ್ರಾಮದ ಮೇಲೆ ಕುಪಿತರಾಗಿದ್ದಾರೆಂದೂ ಅದರ ಸೂಚನೆಯೇ ಆ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿರುವುದೆಂದೂ ಮತ್ತು ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಲೇಬೇಕೆಂದೂ ಸ್ವತಃ ನಾಗದೇವನೇ ಆಜ್ಞೆ ಮಾಡಿದ್ದಾನೆ!’ ಎಂದೂ ತಾವು ಅದೆಷ್ಟು ಬಾರಿ ತಮ್ಮ ಹೊಸ ಜ್ಯೋತಿಷ್ಯಕ್ರಮದ ಪ್ರಕಾರ ಹೇಳುತ್ತ ಬಂದಿಲ್ಲ!
ಅಯ್ಯೋ ದೇವಾ…! ಇನ್ನೇನು ಮಾಡುವುದಪ್ಪಾ…? ಜನರಿಗೆ ತಮ್ಮ ಮೇಲೆ ನಂಬಿಕೆ, ಗೌರವ ಹೊರಟು ಹೋಯಿತೆಂದರೆ ಮುಂದೆ ತಮ್ಮ ಜೀವನದ ಗತಿಯೇನು? ಎಂದುಕೊಂಡ ಅವರು ತೀವ್ರ ಚಿಂತೆಗೊಳಗಾದರು. ಆದರೂ ತೋರಿಸಿಕೊಳ್ಳದೆ, ‘ಸರಿ, ಸರಿ. ಪರ್ವಾಗಿಲ್ಲ ರಾಘವ ಆ ಕುರಿತು ಇನ್ನೊಮ್ಮೆ ಮಾತಾಡುವ. ನಮ್ಮಲ್ಲಿ ಆ ಇಚ್ಛೆಯನ್ನು ಹುಟ್ಟಿಸಿದ ನಾಗನೇ ಏನಾದರೊಂದು ದಾರಿ ತೋರಿಸುತ್ತಾನೆ. ಈಗ ನೀನು ಹೋಗು…!’ ಎಂದು ತಾಳ್ಮೆಯಿಂದ ಹೇಳಿ ಅವನನ್ನು ಕಳುಹಿಸಿದರು. ಆದರೆ ಆಮೇಲೆ ಮತ್ತೆ ಅದೇ ಚಿಂತೆಗೆ ಬಿದ್ದರು. ಕೊನೆಗೂ ಅವರಿಗೊಂದು ಉಪಾಯ ಹೊಳೆಯಿತು. ಮೊದಲಿಗೆ ಅದನ್ನು ಕಾರ್ಯಗತಗೊಳಿಸಲು ಭಯಪಟ್ಟರು. ಬಳಿಕ ಗಟ್ಟಿ ಮನಸ್ಸು ಮಾಡಿದರು. ‘ಹೌದು. ತಮ್ಮ ಬಹು ಅಪೇಕ್ಷಿತವಾದ ಈ ಬೃಹತ್ತ್ ಯೋಜನೆಯೊಂದು ನೆರವೇರಬೇಕಾದರೆ ಅದೇ ಸರಿಯಾದ ಮಾರ್ಗ. ಅಷ್ಟಕ್ಕೂ ನಾವೇನು ಜನರ ಮನೆ ಮಠ ಒಡೆದು ದೇವರಕ್ಷೇತ್ರ ನಿರ್ಮಿಸಲು ಹೊರಟಿದ್ದೇವಾ, ಇಲ್ಲವಲ್ಲಾ! ಭೂಮಿಗೆ ಭಾರವಾಗಿರುವ ಒಂದಷ್ಟು ಕ್ರೂರಮೃಗಗಳೂ, ವಿಷಜಂತುಗಳೂ ಮತ್ತು ಕೆಲಸಕ್ಕೆ ಬಾರದ ಕ್ರಿಮಿಕೀಟ, ಹಕ್ಕಿಪಕ್ಷಿಗಳೂ ತುಂಬಿ ಜನರಿಗೆ ಆಗಾಗ ಹಾನಿಯಾಗುತ್ತಿರುವಂಥ ಆ ಕಗ್ಗಾಡನ್ನು ದೇವರ ಹೆಸರಿನಲ್ಲಿ ಕಡಿದು ಜೀರ್ಣೋದ್ಧಾರ ಮಾಡುವುದರಿಂದ ನಾಡಿಗೆ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದ್ದಾಗಲಿಕ್ಕಿದಿಲ್ಲ! ಆದ್ದರಿಂದ ತಾವು ಅಂದುಕೊಂಡ ಕಾರ್ಯವನ್ನು ಹೇಗಾದರೂ ಸಾಧಿಸಿ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿದರು.
ಆವತ್ತು ಅಮಾವಾಸ್ಯೆಯ ದಿನ. ಅಂದು ದಟ್ಟ ಕಾರ್ಗತ್ತಲ ನಡುರಾತ್ರಿಯಲ್ಲಿ ರಾಘವನನ್ನು ನಿಶ್ಶಬ್ದವಾಗಿ ಕೂರಿಸಿಕೊಂಡ ಗುರೂಜಿಯವರ ಕಾರು ಪೋರ್ಟಿಕೋದಿಂದ ಹೊರಬಿತ್ತು. ಸ್ವಲ್ಪಹೊತ್ತಿನಲ್ಲಿ ಹೂಮ್ಮಣ್ಣು ಗ್ರಾಮವನ್ನು ತಲುಪಿತು. ಅಲ್ಲಿ ಒಂದು ಕಡೆ ಸುಮಾರು ಮೂರು ಶತಮಾನಗಳಷ್ಟು ಪ್ರಾಚೀನವಾದ ದೊಡ್ಡ ನಾಗಬನವೊಂದು ಕೆಲವು ಕಾಲದ ಹಿಂದೆ ಗುರೂಜಿಯವರ ಸುಪರ್ದಿಯಲ್ಲಿಯೇ ಜೀರ್ಣೋದ್ಧಾರಗೊಂಡಿತ್ತು. ಆದರೆ ಬನಕ್ಕೆ ಸಂಬಂಧಪಟ್ಟವರು ಅಲ್ಲಿನ ಹಳೆಯ ನಾಗನ ಕಲ್ಲುಗಳನ್ನು ಇನ್ನೂ ವಿಸರ್ಜನೆ ಮಾಡಿರಲಿಲ್ಲ. ಈಗ ಮಬ್ಬು ಬೆಳಕಿನ ಬ್ಯಾಟರಿಯನ್ನು ಹಿಡಿದುಕೊಂಡ ಗುರೂಜಿಯವರು ನಿಧಾನವಾಗಿ ಆ ಬನವನ್ನು ಹೊಕ್ಕರು. ಅವರ ಹಿಂದೆ ರಾಘವನೂ ನಡುಗುತ್ತ ಹೆಜ್ಜೆ ಹಾಕಿದ. ಗುರೂಜಿಯವರು ತಮಗೆ ಬೇಕಾದ ಕೆಲವು ನಾಗನ ಕಲ್ಲುಗಳನ್ನು ಬೇಗಬೇಗನೇ ಆಯ್ದು ರಾಘವನಿಂದ ಕಾರಿನ ಡಿಕ್ಕಿಗೆ ತುರುಕಿಸಿದರು. ಬಳಿಕ ಕೂಡಲೇ ಅವರ ಕಾರು ಮಿಂಚಿನ ವೇಗದಲ್ಲಿ ಅಲ್ಲಿಂದ ಮಾಯವಾಗಿ ಭಾಗೀವನದ ಸಮೀಪದ ದೇವರಕಾಡಿನೆದುರು ಪ್ರತ್ಯಕ್ಷವಾಯಿತು. ಅಲ್ಲೊಂದು ದೈತ್ಯ ರೆಂಜೆಮರದ ಬುಡದಲ್ಲಿ ರಾಘವ ಹಿಂದಿನ ದಿನ ರಾತ್ರಿಯೇ ತೋಡಿಟ್ಟಿದ್ದ ಹೊಂಡದೊಳಗೆ ಆ ಕಲ್ಲುಗಳನ್ನು ಸಾಲಾಗಿ ಇಟ್ಟು ಯಾರಿಗೂ ಚೂರೂ ಸುಳಿವು ಸಿಗದಂತೆ ಮಣ್ಣು ಮುಚ್ಚಿ ಅದರ ಮೇಲೆ ತರಗೆಲೆಗಳನ್ನು ಹರಡಿ ಮರೆಮಾಚಿದವರು ಕ್ಷಣದಲ್ಲಿ ಮನೆಯನ್ನು ಸೇರಿದರು.
ಈ ಅದ್ಭುತ ಕಾರ್ಯಸಾಧನೆ ನಡೆದ ಆರು ತಿಂಗಳ ಬಳಿಕ ಗುರೂಜಿಯವರು ಆ ದೇವರಕಾಡಿನಲ್ಲಿ ನಾಗನ ದೇವಸ್ಥಾನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲು ಮುಂದಾದರು. ಜಾಗದ ವಾರಸುದಾರರಾದ ಮುದಿ ಗಂಡಹೆಂಡತಿಯನ್ನೂ ಅವರ ದೂರದೂರದ ಕೆಲವು ಸಂಬಂಧಿಕರನ್ನೂ ರಾಘವನ ಮೂಲಕ ಸಂಪರ್ಕಿಸಿ ಅಲ್ಲಿನ ದೈವದೇವರುಗಳ ಕಾರಣಿಕವನ್ನು ಕಣ್ಣಾರೆ ಕಂಡಂತೆ ಅವರಿಗೆ ವಿವರಿಸಿದರು. ಅದೇ ಕಾರಣಕ್ಕೆ ಭಾಗೀವನದೊಳಗೂ ನಾಗಧೂತನು ಸುತ್ತಾಡುತ್ತಿರುವ ಉದಾಹರಣೆಯನ್ನೂ ನೀಡಿ ಅವರಲ್ಲೂ ದೋಷದ ಭೀತಿಯನ್ನು ಸೃಷ್ಟಿಸಿ ಸಜ್ಜುಗೊಳಿಸಿದರು. ಒಂದು ಶುಭದಿನದಂದು ಊರ ಮುಖ್ಯಸ್ಥರನ್ನೂ ಕಾಡಿನ ವಾರಸುದಾರರನ್ನೂ ಮತ್ತು ಭಾಗಿವನದವರನ್ನೂ ಆ ಕಾಡಿನಲ್ಲಿ ಬಂದು ಸೇರುವಂತೆ ಆಜ್ಞಾಪಿಸಿದರು. ಆ ದಿನವೂ ಬಂದಿತು. ಅಂದು ಸೂರ್ಯೋದಯವಾಗಿ ಒಂದು ಗಳಿಗೆಯ ಬಳಿಕ ಗುರೂಜಿಯವರು ಸರ್ವಸಮಸ್ತರ ಸಮ್ಮುಖದಲ್ಲಿ ದೇವರಕಾಡನ್ನು ಪ್ರವೇಶಿಸಲು ಹೊರಟು ಬಂದವರು ಕಾರಿನಿಂದಿಳಿದು ಕಾಡಿನತ್ತ ಹೆಜ್ಜೆ ಹಾಕಿದರು. ಆಗ ಅಲ್ಲಿ ವಿಲಕ್ಷಣ ವಿದ್ಯಾಮಾನವೊಂದು ಸಂಭವಿಸತೊಡಗಿತು.
ಆ ಅರಣ್ಯದ ಸಮೃದ್ಧಿಯಲ್ಲೂ ಮತ್ತು ಸುತ್ತಲಿನ ಜನಜೀವನದ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸಿರುವ ಕಟ್ಟಿರುವೆಗಳ ದೊಡ್ಡ ಕುಟುಂಬವೊಂದು ಮಿತಿಮೀರಿ ಬೆಳೆದ ತಮ್ಮ ಸಂಸಾರ ಬಾಹುಳ್ಯದಿಂದಾಗಿ ಒಂದೇ ಗೂಡಿನೊಳಗೆ ವಾಸಿಸಲಾಗದೆ ಹೊಸ ಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿದ್ದವು. ಆದ್ದರಿಂದ ಅವುಗಳು ಅಂದು ಬೆಳಗ್ಗಿನಿಂದಲೇ ಶಿಸ್ತಿನ ಸಿಪಾಯಿಗಳಂತೆ ಕವಲು ಕವಲುಗಳಾಗಿ ಪ್ರಯಾಣ ಬೆಳೆಸಿದ್ದವು. ಅಲ್ಲಿನ ಹಸಿರು ಸಂರಕ್ಷಣೆಯಲ್ಲಿ ತೊಡಗಿದ್ದ ಗೆದ್ದಲ ಕುಟುಂಬವೂ ತಮ್ಮ ವಂಶೋತ್ಪತಿಗಾಗಿ ಹೊಸ ಹುತ್ತಗಳನ್ನು ಕಟ್ಟುವುದರಲ್ಲಿ ನಿರತವಾಗಿದ್ದವು. ಆ ಅಡವಿಯ ಅಸಂಖ್ಯಾತ ಕ್ರಿಮಿಕೀಟಗಳು ತಮ್ಮ ಜೀವನ ನಿರ್ವಹಣೆಯ ಮೂಲಕವೇ ವಿವಿಧ ಬಗೆಯಿಂದ ಹಸಿರು ಪರಿಸರದ ಸ್ವಚ್ಛತೆಯಲ್ಲಿತೊಡಗಿದ್ದವು. ಅನೇಕ ಜಾತಿ ಮತ್ತು ಪ್ರಭೇದಗಳ ಹಾವುಗಳು ಇಲಿ, ಹೆಗ್ಗಣ, ಕಪ್ಪೆ, ಹಲ್ಲಿ, ಅರಣೆ, ಓತಿಕ್ಯಾತ ಮತ್ತು ಉಡಗಳಂಥ ಜೀವರಾಶಿಗಳ ಚಟುವಟಿಕೆಯೂ ಅವಕ್ಕೆ ಸಂಬಂಧಿಸಿದ ಆಹಾರದ ಜೀವಿಗಳ ಕೋಲಾಹಲ, ಕಲರವಗಳೂ ಕಾಡಿನೊಳಗಿನ ಜೀವಂತಿಕೆಯನ್ನು ಸಾರುತ್ತಿದ್ದವು. ಗೊರವಂಕ, ಮಂಗಟ್ಟೆ, ನವಿಲು, ಜಿಂಕೆ, ಕಾಡುಕೋಣ, ಚಿಟ್ಟೆಹುಲಿ, ಹಂದಿ, ಬರಿಂಕಗಳಂಥ ವನ್ಯಪ್ರಾಣಿಗಳ ಕೆನೆತ, ನೆಗೆತ ಗುಟುರು ಗರ್ಜನೆಗಳು ಅರಣ್ಯದ ಮೌನಕ್ಕೆ ಹೊಸ ಮೆರುಗನ್ನು ನೀಡಿ ಮಾರ್ದನಿಸುತ್ತ ಆ ಕಾಡು ಮನೋಹರವಾಗಿ ನಳನಳಿಸುತ್ತಿತ್ತು.
ಆದರೆ ಕೆಲವೇ ಕ್ಷಣದಲ್ಲಿ ಅಲ್ಲೊಂದು ಕೆಟ್ಟ ಅಪಶಕುನದ ಛಾಯೆಯೂ ಉದ್ಭವಿಸಿಬಿಟ್ಟಿತು. ಗುರೂಜಿ ಮತ್ತವರ ಸಂಗಡಿಗರು ನಡೆದು ಬರುತ್ತಿರುವ ಹೆಜ್ಜೆಗಳ ಸಪ್ಪಳವೂ ಹಾಗೂ ಅವರಿಂದ ಹೊಮ್ಮುತ್ತಿದ್ದ ವಿಕಾರ ಯೋಚನಾತರಂಗಗಳೂ ಕಾಡಿನೊಳಗೆ ಹರಿದು ಬರುತ್ತಲೇ, ಯಾವ ಮೂಲೆಯಿಂದಲೋ ರಪ್ಪನೆ ಬಿರುಗಾಳಿಯೊಂದು ಎದ್ದುಬಿಟ್ಟಿತು. ವೇಗವಾಗಿ ಮುಂದುವರೆದ ಗಾಳಿಯು ಮರಗಿಡಗಳ ಒಣ ರೆಂಬೆಕೊಂಬೆಗಳನ್ನೂ ಕಸಕಡ್ಡಿ, ಕಶ್ಮಲಗಳನ್ನೂ ಹೊತ್ತೆಳೆದುಕೊಂಡು ಎತ್ತೆತ್ತಲೋ ಸುಳಿದು ಸುಂಯ್ಯಿಗುಟ್ಟುತ್ತ ಧಾವಿಸತೊಡಗಿತು. ಸುರಗಿ, ರೆಂಜೆ, ಸಂಪಿಗೆ, ಕಾಟುಮಾವು, ಚಾಕಟೆ, ನಂದಿ, ಸಾಗುವಾನಿ, ಕರಿಮಾರು, ಔದುಂಬರ, ಆಲ, ಅಶ್ವತ್ಥ, ಹಾಲೆಮರಗಳ ಸಮೂಹವೆಲ್ಲ ಬೆಚ್ಚಿಬಿದ್ದವು. ಅಗ್ನಿಶಿಕೆ, ಒಂದೆಲಗ, ಶತಾವರಿ, ಕಾಡುಮಲ್ಲಿಗೆ, ಏಕನಾಥನ ಬಳ್ಳಿ, ಪಲ್ಲೆಕಾಯಿ ಬಳ್ಳಿ, ಗರುಡಪಾತಾಳ, ನೆಲಗುಂಬಳ, ಮುಟ್ಟಿದರೆ ಮುನಿ, ಈಶ್ವರೀಬೇರು, ಒಳ್ಳೆಕೊಡಿ, ಗಜ್ಜುಗ, ಗುಲಗಂಜಿ, ಇಲಿಕಿವಿ, ಗರಿಕೆಹುಲ್ಲು, ಸಳ್ಳೆಗಿಡಗಳೆಲ್ಲ ಬಿರುಗಾಳಿಯ ಹೊಡೆತಕ್ಕೆ ಬಳಲಿ ಬೆಂಡಾಗಿ ಕಂಪಿಸತೊಡಗಿದವು.
ಅಷ್ಟರವರೆಗೆ ಸ್ವಚ್ಛಂದವಾಗಿ ಹಾರಾಡುತ್ತ ಚಿಲಿಪಿಲಿ ಗುಟ್ಟುತ್ತ ಅಖಂಡ ಭದ್ರತೆಯಿಂದ ಜೀವಿಸುತ್ತಿದ್ದ ಪಕ್ಷಿಸಂಕುಲವು ಒಮ್ಮೆಲೆ ಭಯಗೊಂಡು ಸ್ತಬ್ಧವಾಯಿತು. ಅವುಗಳ ಗೂಡುಗಳಲ್ಲಿದ್ದ ಪುಟ್ಟಪುಟ್ಟ ಮರಿಗಳು ಕೆಟ್ಟದಾಗಿ ಕಿರುಚುತ್ತ ಚಡಪಡಿಸಿದವು. ದೊಡ್ಡ ಪಕ್ಷಿಗಳೆಲ್ಲ ಏನೂ ತೋಚದೆ ಗೂಡಿನ ಸುತ್ತಮುತ್ತ ಕಳವಳದಿಂದ ಹಾರಾಡತೊಡಗಿದವು. ಮನುಷ್ಯಜೀವಿಗಳ ಅಪಾಯಕರ ಮನೋ ತರಂಗಗಳು ಹರಿದು ಬರುತ್ತಿರುವುದನ್ನು ಗ್ರಹಿಸಿದ ಕಟ್ಟಿರುವೆಗಳು ದಿಕ್ಕುಗೆಟ್ಟು ಓಡಾಡಲಾರಂಭಿಸಿದವು. ಆದರೆ ತಮ್ಮ ಸಿಪಾಯಿ ಇರುವೆಗಳ ಸಮಯೋಚಿತ ಮಾರ್ಗದರ್ಶನದಿಂದಾಗಿ ಅಲ್ಲಲ್ಲಿಯೇ ಅವಿತುಕೊಂಡು ಪ್ರಾಣ ಉಳಿಸಿಕೊಳ್ಳಲು ಹೆಣಗಿದವು. ಬಗೆಬಗೆಯ ಸರೀಸೃಪಗಳು ತಟಪಟನೆ ಗೂಡು, ಗುಂಡಿ, ತೋಡು, ತೊರೆ, ನಾಲೆಗಳಿಗೆ ಹಾರಿ, ನೆಗೆದು ಕಣ್ಮರೆಯಾಗತೊಡಗಿದವು. ಉಭಯವಾಸಿಗಳು ಭೂಕಂಪದ ಸೂಚನೆ ದೊರೆತಂತೆ ಬೆದರಿಬಿದ್ದು ದಿಕ್ಕಾಪಾಲಾಗಿ ಓಡಿದವು. ಗೆದ್ದಲುಗಳು ಅರೆಬರೆ ಕಲೆಸಿಟ್ಟಿದ್ದ ಮಣ್ಣಿನ ಮುದ್ದೆಗಳಿಂದ ತಮ್ಮ ಹುತ್ತಗಳ ದ್ವಾರಗಳನ್ನು ಒಳಗೊಳಗೇ ಮುಚ್ಚಿ ಕುಳಿತುಕೊಂಡವು. ಅರಣ್ಯವಿಡೀ ಹಾರಾಡುತ್ತಿದ್ದ ಮನೋಹರವಾದ ಚಿಟ್ಟೆ ಪತಂಗ ಪಾತರಗಿತ್ತಿಗಳು ಮತ್ತು ವಿವಿಧ ಬಗೆಯ ಕ್ರಿಮಿಕೀಟಗಳೂ ಉಸಿರು ಬಿಗಿಹಿಡಿದು ರಪರಪನೆ ಕಾಣೆಯಾದ ಬೆನ್ನಿಗೆ ಲಕ್ಷಾಂತರ ಸಿಕಾಡ ಕೀಟಗಳ ಕರ್ಕಶ ಚೀರುವಿಕೆಯೂ ಮಂಗ, ಮುಸುವ, ಕೆಂಚಳಿಲುಗಳ ಅಪಾಯ ಸೂಚಕ ಅರಚುವಿಕೆಯೂ ಇಡೀ ಕಾಡಿನ ಶಾಂತಿಯನ್ನು ಕೆಡಿಸಿಬಿಟ್ಟಿತು.
(ಮುಂದುವರೆಯುವುದು)
ಗುರುರಾಜ್ ಸನಿಲ್