ಗಜಲ್

ಗಜಲ್

ನಯನ. ಜಿ. ಎಸ್

ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರು
ಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು !

ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸು
ಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು !

ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆ
ನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು !

ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿ
ಮನದ ತುಮುಲಗಳು ತಾರಕಕ್ಕೇರಿದೆ ಅರಿತು ಸಂತೈಸುವವರು ಯಾರು !

ಬಾಳ್ವೆಯು ಕಂಡಂತಿಲ್ಲ , ಬುಡಮೇಲಾದೀತು ಕನಸುಗಳು ಎಚ್ಚರ ‘ನಯನ’
ಬಣ್ಣ ಬಣ್ಣದ ಬೂಟಾಟಿಕೆಯ ಜನರಿಹರು ಜೊತೆ ಬರುವವರು ಯಾರು !


Leave a Reply

Back To Top