ದಾರಾವಾಹಿ

ಆವರ್ತನ

ಅದ್ಯಾಯ-29

Homa Kunda High Resolution Stock Photography and Images - Alamy

ಅಂದು ಸುಮಿತ್ರಮ್ಮನ ಮನೆಯಲ್ಲಿ ನಾಗದೋಷ ನಿವಾರಣೆಯ ಅಂಗವಾಗಿ ನಡೆದ ಚರ್ಚಾಕೂಟದಲ್ಲಿ ಗೋಪಾಲ ದಂಪತಿಯ ಮೇಲಿನ ಹಗುರಭಾವನೆಯನ್ನು, ಅವರಿಂದ ಮುಂದೆ ಕೋಳಿಯ ಲಾಭವನ್ನು ಪಡೆಯಲಿದ್ದವರು ಮಾತ್ರವೇ ಬದಲಾಯಿಸಿಕೊಂಡರು. ಆದರೆ ವಠಾರದವರೆದುರು ಮುಖಭಂಗವಾಗುವಂತೆ ಮಾತಾಡಿದ ಅವರ ಮೇಲೆ ಸುಮಿತ್ರಮ್ಮ ಮಾತ್ರ ಒಳಗೊಳಗೇ ಕುದಿಯುತ್ತಿದ್ದರು. ಹಾಗಾಗಿ ಅವರು ತಮ್ಮ ಕೋಪವನ್ನು ತೀರಿಸಿಕೊಳ್ಳಲು ಬೇರೊಂದು ದಾರಿಯನ್ನು ಹಿಡಿದರು. ಮರುದಿನದಿಂದಲೇ ರಾಜೇಶನಂಥ ಆಪ್ತ ನೆರೆಕರೆಯ ಮನೆಗಳಿಗೆ ಹೋಗುತ್ತ ಅವರ ಅಂಗಳ ಮತ್ತು ಪಾಗಾರದ ಹೊರಗಡೆ ನಿಂತುಕೊಂಡು ಒಂದಿಷ್ಟು ಸುಖಕಷ್ಟ ಮಾತಾಡುತ್ತ ಕೊನೆಯಲ್ಲಿ, ನಮ್ಮ ವಠಾರಕ್ಕೆ ಬಡಿದಿರುವ ನಾಗದೋಷಕ್ಕೂ, ನಮಗೆಲ್ಲ ಈಗೀಗ ತಲೆದೋರುತ್ತಿರುವಂಥ ಬಗೆಬಗೆಯ ಸಮಸ್ಯೆಗಳಿಗೂ ಆ ದರಿದ್ರದ ಗೋಪಾಲನ ಕುಟುಂಬವೇ ಕಾರಣ! ಎಂದು ಎಲ್ಲರೊಡೆನಯೂ ಒತ್ತಿ ಒತ್ತಿ ಹೇಳುತ್ತ ಗೋಪಾಲನ ಕುಟುಂಬದ ಮೇಲೆ ಎಲ್ಲರಲ್ಲೂ ತುಚ್ಛಭಾವನೆ ಹುಟ್ಟುವಂತೆ ಮಾಡತೊಡಗಿದರು. ಅಷ್ಟಲ್ಲದೇ ಭಾಗೀವನದ ಬಹಳಷ್ಟು ನಾಗಭಕ್ತರಿಗೆ ಆ ವಿಷಯದ ಕುರಿತು ಸ್ವಂತ ಯೋಚಿಸುವ ಶಕ್ತಿಯಾಗಲೀ, ಮಾನಸಿಕ ಸ್ವಾತಂತ್ರ್ಯವಾಗಲೀ ಇರದಿದ್ದ ಕಾರಣ ಅವರೆಲ್ಲರೂ ಸುಮಿತ್ರಮ್ಮನ ಮಾತನ್ನು ಗಟ್ಟಿಯಾಗಿ ನಂಬಿಬಿಟ್ಟರು. ಹಾಗಾಗುತ್ತಲೇ ಅವರು ಕೂಡಾ ಆ ಕುಟುಂಬವನ್ನು ಹೇಗಾದರೂ ಮಾಡಿ ತಮ್ಮ ವಠಾರದಿಂದ ಓಡಿಸಿಬಿಡಬೇಕು! ಎಂಬ ನಿರ್ಧಾರಕ್ಕೂ ಬಂದರು. ಅದರ ಪರಿಣಾಮವಾಗಿ ಅವರೆಲ್ಲ ಗೋಪಾಲ ಮತ್ತು ರಾಧಾಳನ್ನು ಮಾತಾಡಿಸುವ ಅವಕಾಶ, ಸಂದರ್ಭಗಳು ದೊರೆತಾಗಲೆಲ್ಲಾ, ‘ನೋಡಿ, ನಾಗನಡೆಯಿರುವ ಆ ಜಾಗವನ್ನು ನೀವು ಕೊಳ್ಳಲೇಬಾರದಿತ್ತು. ನಿಮಗಿಂತ ಹಿಂದೆ ಅದನ್ನು ಕೊಂಡುಕೊಳ್ಳಲು ಬಹಳಷ್ಟು ಜನ ಬಂದಿದ್ದರು. ಆದರೆ ಅಲ್ಲಿನ ವಿಷಯವನ್ನು ತಿಳಿದು ಎಲ್ಲರೂ ಹೆದರಿ ಬಿಟ್ಟು ಹೋದಂಥ ಜಾಗವದು. ಅದು ಬಿಡಿ, ಸ್ವತಃ ಬ್ರಾಹ್ಮಣರೇ ಕೊಂಡುಕೊಳ್ಳಲು ಬಂದವರು ನಾಗಬನವನ್ನು ನೋಡಿ ಬಿಟ್ಟುಹೋಗಿದ್ದಾರೆ. ಅಂಥದ್ದರಲ್ಲಿ ನೀವು ಏನೊಂದೂ ವಿಚಾರಿಸದೆ ಬಂದು ಕುಳಿತದ್ದು ನಿಮ್ಮ ದಡ್ಡತನವೇ ಅಲ್ಲವಾ?’ ಎಂದು ಹೇಳಿ ಗಂಡ ಹೆಂಡತಿಯ ಮನಸ್ಸನ್ನು ಆಗಾಗ ನೋಯಿಸುತ್ತ ಜೊತೆಗೆ ಒಂದಿಷ್ಟು ಪೊಳ್ಳು ಅನುಕಂಪವನ್ನೂ ತೋರಿಸುತ್ತ ಹಿಂಸಿಸತೊಡಗಿದರು. ಅದನ್ನೆಲ್ಲ ಅನುಭವಿಸುತ್ತ, ಆ ಕುರಿತೇ ಚಿಂತಿಸುತ್ತ ಬಂದಂಥ ರಾಧಾ ಗೋಪಾಲರಿಗೆ ಸ್ವಂತ ಜಾಗ ಮಾಡುವ ಗಡಿಬಿಡಿಯಲ್ಲಿ ತಾವು ಬಲವಾಗಿ ಎಡವಿರುವುದು ಮನದಟ್ಟಾಗಿಬಿಟ್ಟಿತು. ಆದರೆ ಇನ್ನು ಮಾಡುವುದಾದರೂ ಏನು? ಎಲ್ಲವೂ ಮುಗಿದಿದೆ. ಇನ್ನು ನಾವು ಮಾಡಿದ್ದನ್ನು ನಾವೇ ಉಣ್ಣಬೇಕಷ್ಟೇ! ಜಾಗ ಕೊಳ್ಳಲು ಮತ್ತು ಮನೆಕಟ್ಟಲು ಮಾಡಿದ ಸಾಲದಲ್ಲಿ ಅರ್ಧದಷ್ಟಿನ್ನೂ ತೀರಿಲ್ಲ. ಅದು ಪೂರ್ಣ ಸಂದಾಯವಾಗದೆ ಮನೆ ಮಾರುವಂತೆಯೂ ಇಲ್ಲ! ಎಂದು ಕೊರಗತೊಡಗಿದ ಅವರು ಕೊನೆಯಲ್ಲಿ, ಏನಾದರಾಗಲಿ ಆದಷ್ಟು ಬೇಗ ಸಾಲ ತೀರಿಸಿ ಈ ಮಡಿವಂತರ ಕಪಿಮುಷ್ಟಿಯಿಂಲೂ, ನಾಗದೋಷದ ಕಾಟದಿಂದಲೂ ತಪ್ಪಿಸಿಕೊಂಡು ದೂರವೆಲ್ಲಾದರೂ ಹೋಗಿ ಬದುಕಬೇಕು ಎಂದೂ ಅಂದುಕೊಳ್ಳುತ್ತಿದ್ದರು. ಆದರೆ ಮರುಗಳಿಗೆಯಲ್ಲಿ, ಸಾಲವನ್ನು ಹೇಗಾದರೂ ತೀರಿಸಿ ಜಾಗ ಮಾರುವ ಎಂದರೆ ನಾಗದೋಷದ ಜಾಗ! ಎಂದು ವಠಾರವಿಡೀ ಮಾತ್ರವಲ್ಲದೇ ಊರಿಡೀ ಸುದ್ದಿಯಾಗಿರುವ ಈ ಜಾಗವನ್ನು ಕೊಂಡುಕೊಳ್ಳಲು ಮುಂದೆ ಬರುವವರಾದರೂ ಯಾರು? ಎಂಬ ಹತಾಶೆಯೂ ಅವರನ್ನು ಬೆಂಬಿಡದೆ ಕಾಡುತ್ತಿತ್ತು.

                                                               ***

ಆವತ್ತು ತಮ್ಮ ಮುಖಂಡತ್ವದಲ್ಲಿ ಸಭೆ ನಡೆದು ನಾಗದೋಷ ನಿವಾರಣೆಯಂಗವಾಗಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮದ ಕುರಿತಾಗಿ ಸುಮಿತ್ರಮ್ಮ ಮರುದಿನವೇ ಗುರೂಜಿಯವರಲ್ಲಿಗೆ ಹೋದರು ಮತ್ತು ವಠಾರದವರು ಒಪ್ಪಿದ್ದನ್ನೂ ಆ ಕುರಿತು ತಮ್ಮಲ್ಲಾದ ಚರ್ಚೆಯ ವಿವರವನ್ನೂ ಅವರ ಮುಂದಿಟ್ಟರು. ಆದರೆ ಗುರೂಜಿಯವರಿಗೆ ಆ ಕಾರ್ಯವು ಸಂಪನ್ನವಾಗಿಯೇ ತೀರುತ್ತದೆ ಎಂಬುದು ಆವತ್ತು ಸುಮಿತ್ರಮ್ಮ ತಮ್ಮ ಬಳಿ ನಿಮಿತ್ತ ಕೇಳಲು ಬಂದು ಕಳವಳದಿಂದ ಹಿಂದಿರುಗಿದಾಗಲೇ ಖಚಿತವಾಗಿತ್ತು. ಆದ್ದರಿಂದ ಅವರೀಗ ಅಷ್ಟೇನೂ ಸಂತೋಷರಾದಂತೆ ಕಾಣಲಿಲ್ಲ.

‘ಹೌದಾ ಸುಮಿತ್ರಮ್ಮಾ…ಹಾಗಾದರೆ ನೀವು ಮತ್ತು ನಿಮ್ಮ ವಠಾರದವರೆಲ್ಲ ಬುದ್ಧಿವಂತರು ಅಂತ ಸಾಬೀತಾಯಿತು ಬಿಡಿ. ಈಗ ಅದಕ್ಕೊಂದು ಒಳ್ಳೆಯ ದಿನವನ್ನೂ ಗೊತ್ತುಪಡಿಸಬೇಕಲ್ಲವಾ…?’ ಎಂದು ಮುಗುಳ್ನಗುತ್ತ ಅಂದರು. ಆಗ ಸುಮಿತ್ರಮ್ಮನಿಗೆ ತಮ್ಮ ಬಗ್ಗೆ ಹೆಮ್ಮೆಯೆನಿಸಿತು.

‘ಹೌದು ಗುರೂಜಿ, ಆ ಶುಭಕಾರ್ಯವು ಆದಷ್ಟು ಬೇಗ ನೆರವೇರಿದರೆ ಒಳ್ಳೆಯದಿತ್ತು…!’ ಎಂದು ಸುಮಿತ್ರಮ್ಮ ಆತುರದಿಂದ ಹೇಳಿದರು. ಅವರ ಗಡಿಬಿಡಿಯನ್ನು ಕಂಡ ಗುರೂಜಿಗೆ, ಅರೆರೇ…! ಇವಳು ತಮಗಿಂತಲೂ ಅವಸರದಲ್ಲಿದ್ದಾಳಲ್ಲಾ! ಎಂದೆನ್ನಿಸಿ ನಗು ಬಂತು.

‘ಆಯ್ತು, ಆಯ್ತು ಸುಮಿತ್ರಮ್ಮ ಕೂಡಲೇ ಮುಗಿಸಿಬಿಡುವ. ಆದರೆ ಅದಕ್ಕೊಂದು ವಿಶೇಷ ದಿನ ಮತ್ತು ಗಳಿಗೆಯನ್ನೂ ನೋಡಬೇಕಲ್ಲವಾ!’ ಎಂದು ಗಂಭೀರವಾಗಿ ಅಂದರು. ಆಗ ಸುಮಿತ್ರಮ್ಮನಿಗೆ ತಾವು ಅವಸರಪಟ್ಟೆವೇನೋ ಎಂದೆನಿಸಿ ಮುಜುಗರವಾಯಿತು. ‘ಅದು ಹೌದು ಗುರೂಜಿ. ಪರ್ವಾಗಿಲ್ಲ. ಅದನ್ನೆಲ್ಲ ತಿಳಿದುಕೊಂಡೇ ಹೇಳಿ. ನನಗೇನೂ ಗಡಿಬಿಡಿಯಿಲ್ಲ!’ ಎಂದು ಸಮಜಾಯಿಷಿ ನೀಡಿದರು. ಗುರೂಜಿ ಅದಕ್ಕೂ ಮುಗುಳು ನಕ್ಕವರು ತಮ್ಮ ಪಂಚಾಂಗ ಪುಸ್ತಕವನ್ನು ಕೈಗೆತ್ತಿಕೊಂಡರು. ಐದು ನಿಮಿಷ ಅದರ ಪುಟಗಳನ್ನೆಲ್ಲ ತಿರುವಿ ಹಾಕುತ್ತ ಕೆಲವೊಂದು ಪುಟಗಳಲ್ಲಿ ತಮ್ಮ ಮೊನಚು ದೃಷ್ಟಿ ನೆಟ್ಟು ಏನನ್ನೋ ಹುಡುಕುವಂತೆ ನಟಿಸಿದರು. ಕೊನೆಯಲ್ಲಿ ತಾವು ಮೊದಲೇ ಗೊತ್ತುಪಡಿಸಿದ್ದ ದಿನವನ್ನೂ ಆ ಕಾರ್ಯಕ್ರಮವು ತಮ್ಮದೇ ಸುಪರ್ದಿಯಲ್ಲಿ ನಡೆಸಲು ತಗಲುವ ಖರ್ಚುವೆಚ್ಚವನ್ನೂ ತಿಳಿಸಲು ಮುಂದಾದರು. ಆದರೆ ಅಷ್ಟು ದೊಡ್ಡ ಮೊತ್ತವನ್ನು ತಟ್ಟನೆ ಹೇಳಿಬಿಟ್ಟರೆ ಈ ಹೆಂಗಸು ಮೂರ್ಛೆ ಗೀರ್ಚೆ ಹೋಗಿಬಿಟ್ಟರೆ ಕಷ್ಟ! ಎಂದೂ ಅವರಿಗೆ ತೋರಿತು. ಆದ್ದರಿಂದ ಕೆಲವು ಕ್ಷಣ ಕಣ್ಣುಮುಚ್ಚಿ ಆತ್ಮವಿಶ್ವಾಸವನ್ನೆಲ್ಲ ಒಗ್ಗೂಡಿಸಿ ವಿವರಿಸತೊಡಗಿದರು.

‘ನೋಡಿ ಸುಮಿತ್ರಮ್ಮ, ಈ ಪೂಜೆಯನ್ನು ಸಣ್ಣಮಟ್ಟದಲ್ಲಿ ಮತ್ತು ಕಡಿಮೆ ಖರ್ಚಿನಿಂದಲೂ ಮಾಡಿ ಮುಗಿಸಬಹುದು. ಅದೇನೋ ಅಂತಾರಲ್ಲ, ಹೂವಿನ ಬದಲು ಅದರ ಎಸಳಿನಿಂದಲೂ ದೇವರ ಕಾರ್ಯ ಪೂರೈಸಬಹುದು ಅಂತ. ಹಾಗೆಯೂ ಮಾಡಬಹುದು. ಆದರೆ ನಮ್ಮ ಪರಮೇಷ್ಠಿ ನಾಗನು ಸಂಪಿಗೆ, ಕೇದಿಗೆ ಮತ್ತು ಹಿಂಗಾರದಂಥ ಹೆಚ್ಚು ಪರಿಮಳ ಬೀರುವ ಪುಷ್ಪಪ್ರಿಯ ಅಂತ ಎಲ್ಲರಿಗೂ ಗೊತ್ತಿರುವ ವಿಷಯವಲ್ಲವಾ? ಹೀಗಿರುವಾಗ ಆ ಹೂವುಗಳ ಒಂದಿಷ್ಟು ಎಸಳುಗಳಿಂದಲೇ ಅವನು ತೃಪ್ತನಾಗುತ್ತಾನೆಂದು ಭಾವಿಸುವುದು ಸರಿಯೇ…? ನಮ್ಮ ಲೆಕ್ಕದಲ್ಲಿ ಹಾಗೆ ಯೋಚಿಸುವವರು ಆ ಸಂಕರ್ಷಣ ಶಕ್ತಿಯನ್ನು ಮಂಗ ಮಾಡಲು ಯೋಚಿಸುತ್ತಾರೆಂದೇ ಅರ್ಥ! ಆದ್ದರಿಂದ ನಾವು ಅವನನ್ನು ಕಾಯಾ ವಾಚಾ ಮನಸಾ ಪೂರ್ಣ ಸಂತೃಪ್ತಿಪಡಿಸಿ ಅವನಿಂದ ನಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಇಚ್ಛಿಸುವೆವಾದರೆ ಒಂದಿಷ್ಟು ಉದಾರತೆಯಿಂದ ನಡೆದುಕೊಳ್ಳುವುದೂ ಅಗತ್ಯ ಅಂತ ನಮ್ಮ ಸಲಹೆ!’ ಎಂದ ಗುರೂಜಿ ಸುಮಿತ್ರಮ್ಮನನ್ನು ಸೂಕ್ಷ್ಮವಾಗಿ ದಿಟ್ಟಿಸಿದರು.

   ಗುರೂಜಿಯ ಮಾತುಗಳನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಮ್ಮ, ‘ಹೌದು, ಗುರೂಜಿ. ನೀವು ಹೇಳುವುದು ಸರಿ. ನಮಗೂ ಅಂಥ ತೋರ್ಪಡಿಕೆಯ ಪೂಜೆ ಪುನಸ್ಕಾರಗಳಲ್ಲಿ ನಂಬಿಕೆಯಿಲ್ಲ.  ಆ ಶಕ್ತಿಯನ್ನು ಪೂಜಿಸುವುದಾದರೆ ನೀವು ಹೇಳಿದಂತೆಯೇ ಪರಿಪೂರ್ಣವಾಗಿ ಪೂಜಿಸಬೇಕು. ಅದಕ್ಕೆ ನಿಮ್ಮ ರೀತಿ ನಿಯಮಗಳು ಏನೇನಿವೆಯೋ ಅವುಗಳ ಪ್ರಕಾರವೇ ನಡೆಸಿಕೊಡಬೇಕು ತಾವು…!’ ಎಂದು ಅವರ ಮಾತನ್ನು ಸಮರ್ಥಿಸಿದರು. ಆಗ ಗುರೂಜಿಯ ಆತಂಕ ಮರೆಯಾಯಿತು. ಆದರೂ ಇನ್ನೊಂದಷ್ಟು ಹೇಳುವುದು ಒಳ್ಳೆಯದೆಂದುಕೊಂಡು, ‘ಹಾಗಾದರೆ ಸರಿ ಸುಮಿತ್ರಮ್ಮಾ, ಆಶ್ಲೇಷಬಲಿಯ ವಿವರವನ್ನು ಹೇಳಿ ಬಿಡುತ್ತೇವೆ. ಈಗಿನ ಒಂದಷ್ಟು ಜನರು ಮಾಡುವ ಹಾಗೆ ಬಣ್ಣಬಣ್ಣದ ದೊಡ್ಡದೊಂದು ಮಂಡಲ ಬರೆದು, ಅವರಿಗೇ ತಿಳಿಯದ ಯಾವುದೋ ಒಂದು ಹೋಮ ಮಾಡಿ, ಪೂಜೆ ಹಮ್ಮಿಕೊಂಡ ಭಕ್ತಾದಿಗಳು ಉಸಿರುಗಟ್ಟಿ ಒದ್ದಾಡುವ ಹಾಗೆ ಕೋಣೆಯಿಡೀ ಹೊಗೆಯೆಬ್ಬಿಸುತ್ತ ಮಾಡಿ ಮುಗಿಸುವಂಥ ಪೊಟ್ಟು ಶಾಸ್ತ್ರಗಳು ನಮ್ಮದಲ್ಲ ಸುಮಿತ್ರಮ್ಮಾ! ನಮ್ಮದೇನಿದ್ದರೂ ಆಯಾಯ ಪೂಜಾವಿಧಿಗಳಿಗೆ ಪುರಾತನ ಗ್ರಂಥಗಳಲ್ಲಿ ಏನೇನು ಶಾಸ್ತ್ರಸಂಪ್ರದಾಯಗಳಿವೆಯೋ ಅದರ ಪ್ರಕಾರವೇ ನಡೆಯುವಂಥದ್ದು. ಅಂದರೆ ಸಂಪೂರ್ಣ ಆಶ್ಲೇಷಬಲಿಯೆಂದರೆ ಅದಕ್ಕೆ ಸಂಬಂಧಪಟ್ಟು ತಿಲಹೋಮ, ಕೂಶ್ಮಾಂಡ ಹೋಮ ಮತ್ತು ಪವಮಾನ ಹೋಮಗಳೆಂಬ ಮೂರು ವಿಶೇಷ ವಿಧಿಗಳನ್ನೂ ನಾವು ಕಡ್ಡಾಯವಾಗಿ ಮಾಡುತ್ತೇವೆ!’ ಎಂದರು ಗತ್ತಿನಿಂದ. ಆದರೆ ಆಶ್ಲೇಷಾಬಲಿಯ ಕ್ರಮವನ್ನು ಹಾಗೆಯೇ ಮಾಡುವುದು ಎಂದು ಸುಮಿತ್ರಮ್ಮಗೂ ಗೊತ್ತಿತ್ತು. ಆದ್ದರಿಂದ ಅವರು ಗುರೂಜಿಯ ಮಾತಿನಿಂದ ಕೊಂಚ ಗೊಂದಲಗೊಂಡವರು, ‘ಅಂದರೆ ಗುರೂಜಿ, ಈ ಮೂರು ಹೋಮಗಳು ಸೇರಿಯೇ ಆಶ್ಲೇಷಬಲಿ ಆಗುವುದಲ್ಲವಾ…?’ ಎಂದು ಅಳುಕುತ್ತ ಕೇಳಿದರು. ಅಷ್ಟು ಕೇಳಿದ ಏಕನಾಥರು, ಛೇ, ಛೇ! ಇವಳಿಗೆ ಅದರ ಬಗ್ಗೆ ಅಷ್ಟೊಂದು ವಿವರಿಸುವುದು ಬೇಡವಿತ್ತು. ಪೂಜೆ ಪುನಸ್ಕಾರಗಳ ಬಗ್ಗೆ ಇವಳಿಗೂ ಸುಮಾರಾದ ಜ್ಞಾನವಿದೆ! ಎಂದುಕೊಂಡು ಚಡಪಡಿಸಿದವರು, ‘ಅದು ಹೌದು ಸುಮಿತ್ರಮ್ಮ ಒಪ್ಪುತ್ತೇವೆ. ಆದರೆ ಈಗಿನವರು ಎಷ್ಟು ಮಂದಿ ನಾವು ಹೇಳಿದ ರೀತಿಯಲ್ಲಿ ಆಶ್ಲೇಷಾಬಲಿಯನ್ನು ಮಾಡುತ್ತಾರೆ ಹೇಳೀ…? ಬರೇ ಮೂರು ಶಾಸ್ತ್ರಗಳನ್ನಷ್ಟೇ ಮಾಡಿ ಎದ್ದು ಕೈತೊಳೆದು ದುಡ್ಡು ಕಿತ್ತುಕೊಂಡು ಹೋಗಿ ಬಿಡುತ್ತಾರೆ. ನಾವು ಹೇಳುತ್ತಿರುವುದು ಅದನ್ನು! ಅರ್ಥವಾಯಿತೇ…?’ ಎಂದು ಸ್ವಲ್ಪ ಅಸಹನೆಯಿಂದಲೇ ಹೇಳಿದರು.

  ಆಗ ಸುಮಿತ್ರಮ್ಮನಿಗೆ ತಾನು ದುಡುಕಿ ಪ್ರಶ್ನಿಸಬಾರದಿತ್ತೇನೋ ಎಂದೆನಿಸಿತು. ‘ಹೌದು ಗುರೂಜಿ. ನಿಮ್ಮ ಮಾತು ಅಷ್ಟೂ ನಿಜ. ಈಗೀಗ ದುಡ್ಡಿನ ಆಸೆಗೆ ಬಿದ್ದಿರುವ ಒಂದಷ್ಟು ಅವಿವೇಕಿಗಳು ನಮ್ಮ ಹಿಂದೂ ಧರ್ಮ ಮತ್ತು ಅದರ ಶಾಸ್ತ್ರ ಸಂಪ್ರದಾಯಗಳನ್ನೆಲ್ಲ ತಮ್ಮ ಕಾಲ ಕಸದಂತೆ ಮಾಡಿಕೊಂಡುಬಿಟ್ಟಿದ್ದಾರೆ ಹಡಬೆಗಳು!’ ಎಂದು ಗುರೂಜಿಯ ಮಾತನ್ನು ಒಪ್ಪಿಕೊಳ್ಳುತ್ತ ತಮ್ಮ ತಪ್ಪನ್ನೂ ಮರೆಸಲೆತ್ನಿಸಿದರು. ಆಗ ಗುರೂಜಿ ಶಾಂತರಾದರು. ಆದರೆ ಸುಮಿತ್ರಮ್ಮನ ಬೈಗುಳದಿಂದ ಅವರಿಗೆ ತಮ್ಮೊಳಗೇನೋ ರಪ್ಪನೆ ಕುಟುಕಿದಂತಾಯಿತು. ಆದರೂ ತಲೆಕೆಡಿಸಿಕೊಳ್ಳದೆ, ‘ಹಾಗಾದರೆ ವಿಷಯ ನಿಮಗೆ ಅರ್ಥವಾಯಿತೆಂದು ಅಂದುಕೊಳ್ಳುತ್ತೇವೆ. ಅದರೊಂದಿಗೆ ಖರ್ಚುವೆಚ್ಚವನ್ನೂ ಹೇಳಿ ಬಿಡುತ್ತೇವೆ. ಈ ಎಲ್ಲಾ ಪೂಜಾವಿಧಿಗಳನ್ನೂ ಮತ್ತು ಕೊನೆಯಲ್ಲಿ ಬಡಾವಣೆಯ ಎಲ್ಲರಿಗೂ ಪ್ರಸಾದ ರೂಪದಲ್ಲಿ ನೀಡುವ ಭೋಜನದ ವ್ಯವಸ್ಥೆಯನ್ನೂ ಸೇರಿಸಿ ಒಟ್ಟು ಎರಡು ಲಕ್ಷ ರೂಪಾಯಿಗಳವರೆಗೆ ಖರ್ಚು ಬೀಳುತ್ತದೆ!’ ಎಂದು ಹೇಳಿ ಸುಮಿತ್ರಮ್ಮನಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸತೊಡಗಿದರು. ಆದರೆ ಸುಮಿತ್ರಮ್ಮನಿಗೆ ಎರಡು ಲಕ್ಷ ಅಷ್ಟೊಂದು ದೊಡ್ಡ ಮೊತ್ತವೆಂದೇನೂ ಅನ್ನಿಸಲಿಲ್ಲ. ‘ಎಷ್ಟಾದರೂ ತೊಂದರೆಯಿಲ್ಲ ಸುಮಿತ್ರಮ್ಮಾ. ನಾವೆಲ್ಲ ಸಮಪಾಲು ಕೊಡಲು ಸಿದ್ಧರಿದ್ದೇವೆ!’ ಎಂದು ವಠಾರದವರು ಭಯಭಕ್ತಿಯಿಂದ ಹೇಳಿದ್ದು ಅವರಿಗೆ ನೆನಪಿತ್ತು. ಹಾಗಾಗಿ ಅವರು ಆ ಕುರಿತೇ ಮೌನವಾಗಿ ಯೋಚಿಸುತ್ತಿದ್ದರು. ಸುಮಿತ್ರಮ್ಮನ ನಿಶ್ಚಿಂತೆಯ ಮುಖವನ್ನು ಕಂಡ ಗುರೂಜಿ ಗೆಲುವಾಗಿ ಮಾತು ಮುಂದುವರೆಸಿದರು.

‘ಹ್ಞಾಂ, ಇನ್ನೊಂದು ಮುಖ್ಯ ವಿಷಯ ಸುಮಿತ್ರಮ್ಮ ಏನೆಂದರೆ ಈ ಇಡೀ ಕಾರ್ಯಕ್ರಮವು ನಮ್ಮ ಮೇಲ್ವಿಚಾರಣೆಯಲ್ಲೇ ನಡೆಯುತ್ತದೆ. ಅಂದರೆ ನೀವು ಕೇವಲ ಹಣ ಕೊಟ್ಟರಾಯ್ತು. ಮತ್ತೆಲ್ಲವನ್ನೂ ನಮ್ಮ ತಂಡವೇ ನೋಡಿಕೊಳ್ಳುತ್ತದೆ. ಆವತ್ತು ನಿಮಗ್ಯಾರಿಗೂ ಯಾವ ತಾಪತ್ರಯವೂ ಇರುವುದಿಲ್ಲ. ನೀವೆಲ್ಲ ಒಂದಷ್ಟು ಹಣ್ಣುಹಂಪಲು ಮತ್ತು ಕೆಲವು ಬಗೆಯ ಹೂವುಗಳೊಂದಿಗೆ ಬಂದು ಕುಳಿತುಕೊಂಡು ಪೂಜೆಯಲ್ಲಿ ಭಾಗವಹಿಸಿದರಾಯ್ತು!’ ಎಂದು ನಯವಾಗಿ ಹೇಳಿದರು.

   ಅಷ್ಟು ಕೇಳಿದ ಸುಮಿತ್ರಮ್ಮ ಮತ್ತೂ ನಿರಾಳರಾದರು. ಯಾಕೆಂದರೆ ಹಿಂದೆಲ್ಲ ತಮ್ಮ ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುವುದಿದ್ದರೆ ಎರಡು ಮೂರು ದಿನಗಳ ಕಾಲ ಇಡೀ ಮನೆಮಂದಿ ಅದಕ್ಕೆ ಸಂಬಂಧಪಟ್ಟ ವಿವಿಧ ಸಾಮಾನು ಸರಂಜಾಮುಗಳನ್ನು ಹೊಂದಿಸಲು ದೂರದ ಪೇಟೆ ಮತ್ತು ಅಂಗಡಿಗಳಿಗೆಲ್ಲ ಓಡಾಡುತ್ತ ಸೋತು ಬಿಡುತ್ತಿದ್ದರು. ಇಂದು ಆ ತೊಂದರೆ ತಪ್ಪಿದ್ದು ಅವರಿಗೆ ಬಹಳವೇ ಖುಷಿಯಾಯಿತು. ‘ತುಂಬಾ ಒಳ್ಳೆಯದಾಯಿತು ಗುರೂಜೀ. ಆದರೆ ಯಾವ ದಿನ ಎಂದು ತಿಳಿಸಲಿಲ್ಲ ತಾವು…!’ ಎಂದರು. ಆಗ ಗುರೂಜಿಗೆ ತಮ್ಮ ಗಡಿಬಿಡಿಯ ಅರಿವಾಯಿತು. ‘ಹೌದು, ಹೌದು ಸುಮಿತ್ರಮ್ಮಾ ಅದನ್ನೂ ಹೇಳುತ್ತೇವೆ…’ ಎಂದವರು ಮತ್ತೊಮ್ಮೆ ಪಂಚಾಗವನ್ನು ತಿರುವಿ ಹಾಕಿ ತಮ್ಮ ಬೆರಳುಗಳನೆಣಿಸುತ್ತ ಕೆಲವು ಲೆಕ್ಕಾಚಾರವನ್ನು ಹಾಕಿದರು. ನಂತರ, ‘ನಾಡಿದ್ದು ಸೋಮವಾರ ಹುಣ್ಣಿಮೆ. ಎಂಥ ಪೂಜಾಕೈಂಕರ್ಯಕ್ಕೂ ಅದು ಬಹಳ ಪ್ರಶಸ್ತವಾದ ದಿನ. ಅಂದೇ ನೆರವೇರಿಸಿಬಿಡುವ!’ ಎನ್ನುತ್ತ ಪುಸ್ತಕವನ್ನು ಮಡಚಿಟ್ಟರು. ಅದಕ್ಕೆ ಸುಮಿತ್ರಮ್ಮನೂ ಒಪ್ಪಿದರು.

   ಅಷ್ಟರಲ್ಲಿ ಗುರೂಜಿಯವರಿಗೆ ಮುಖ್ಯ ವಿಚಾರವೊಂದು ಹೊಳೆಯಿತು. ಅವರು ಕೂಡಲೇ, ‘ಅಂದಹಾಗೆ ಸುಮಿತ್ರಮ್ಮ ಅರ್ಧ ಹಣವನ್ನು ನೀವು ಮುಂಚಿತವಾಗಿಯೇ ಕೊಡಬೇಕಾಗುತ್ತದೆ!’ ಎಂದರು ಮೃದುವಾಗಿ.

‘ಆಯ್ತು, ಗುರೂಜಿ ಕೊಡಬಹುದು…!’ ಎಂದು ಸುಮಿತ್ರಮ್ಮನೂ ಒಪ್ಪಿದಾಗ ಅವರು ನಿರಾಳರಾದರು.

‘ಅಂದಹಾಗೆ ಸುಮಿತ್ರಮ್ಮಾ ನಾವು ಆವತ್ತು ನಿಮಗೊಂದು ಬೇರನ್ನು ಮಂತ್ರಿಸಿಕೊಟ್ಟಿದ್ದೆವಲ್ಲಾ ಆಮೇಲೆ ಆ ಹಾವು ಮತ್ತೇನಾದರೂ ಕಾಣಿಸಿಕೊಂಡಿದ್ದುಂಟಾ…?’ ಎಂದು ಅನುಮಾನದಿಂದ ಕೇಳಿದರು.

‘ಇಲ್ಲ ಗುರೂಜಿ, ನನ್ನ ಮನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಮರುದಿನ ರಾಜೇಶನ ಮನೆಯ ದೇವರ ಕೋಣೆಯಲ್ಲಿ ಕಾಣಿಸಿತು. ನಾನೇ ಧೈರ್ಯ ಮಾಡಿ ನಿಮ್ಮ ಬೇರನ್ನು ಸೆರಗಲ್ಲಿ ಕಟ್ಟಿಕೊಂಡು ಹೋಗಿ ಅದನ್ನು ಹೊರಗೆ ಕಳುಹಿಸಿ ಬಂದೆ!’ ಎಂದು ಹೆಮ್ಮೆಯಿಂದ ಹೇಳಿದರು.

‘ಓಹೋ. ಹೌದಾ…? ಒಳ್ಳೆಯದಾಯ್ತು ಬಿಡಿ. ಆ ಬೇರು ಯಾವಾಗಲೂ ನಿಮ್ಮ ಹತ್ತಿರವೇ ಇರಲಿ!’ ಎಂದ ಗುರೂಜಿಯವರು,  ‘ಹೌದು, ಈ ರಾಜೇಶ ಯಾರು? ಏನು ಕೆಲಸ ಮಾಡಿಕೊಂಡಿದ್ದಾನೆ…?’ ಎಂದು ಕವಡೆಗಳನ್ನು ಒಪ್ಪವಾಗಿಡುತ್ತ ಕೇಳಿದರು.

‘ಅವನು ನಮ್ಮ ನೆರೆಮನೆಯವನು ಗುರೂಜಿ. ಅವನಿಗೆ ಮರದ ಕೆತ್ತನೆಯ ದೊಡ್ಡ ಫ್ಯಾಕ್ಟರಿಯಿದೆ. ಬಹಳ ದೈವಭಕ್ತ ಮನುಷ್ಯನವನು!’ ಎಂದು ಸುಮಿತ್ರಮ್ಮ ವರದಿ ಒಪ್ಪಿಸಿದರು.

‘ಓಹೋ ಹೌದಾ…ಸರಿ ಸರಿ…! ಅವನಿಗೂ ಸ್ವಲ್ಪ ಸಮಸ್ಯೆ ಇರುವ ಹಾಗೆ ತೋರಿ ಬರುತ್ತಿದೆ ಇಲ್ಲಿ. ಆದರೆ ನಾಡಿದ್ದು ಎಲ್ಲಾ ಸಮ ಮಾಡುವ. ಹೋಗಿ ಬನ್ನಿ ಸುಮಿತ್ರಮ್ಮಾ…!’ ಎಂದ ಗುರೂಜಿ ರಾಜೇಶನ ತಲೆಗೂ ‘ದೋಷ’ದ ಹುಳುವನ್ನು ಬಿಡಲು ಸುಮಿತ್ರಮ್ಮನಿಗೆ ಪರೋಕ್ಷವಾಗಿ ಸೂಚಿಸಿ ಕಳುಹಿಸಿದರು.

(ಮುಂದುವರೆಯುವುದು)

**********************

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top