ಸ್ಮಿತಾ ಭಟ್ ಅವರ ಕವಿತೆಗಳು
ನಾನು ಒಂಟಿಯಾಗುತ್ತೇನೆ
ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ
ಸುತ್ತುಗಟ್ಟಿದ ನೋವುಗಳ ನಡುವೆ
ದೂರದಲ್ಲೇ ಉಳಿದ ನಗುವಿನೊಂದಿಗೆ
ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ
ಮಾತು ಬಿಕ್ಕಿ,ಮೌನ ಉಕ್ಕಿ
ಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ.
ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,
ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿ
ಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ.
ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ
ಹೆಣೆದ ದಾರದ ಮಧ್ಯ-
ಸಿಲಕಿದ ಕೀಟದ ಅಮಾಯಕತೆಯೊಂದಿಗೆ.
ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,
ಬರುವ ಕಿರಣಗಳ ತಡೆದು
ಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ.
ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ
ಸಮಾಧಿ ಮೇಲೆ ಇಟ್ಟ ಹೂ
ಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದು
ಬೆರ್ಪಟ್ಟು
ಖಾಲಿ ಖಾಲಿ ಸಪಾಟಿನಲಿ ಉಳಿದ ಮೌನದೊಂದಿಗೆ.
******************************
ಹೇಳಲಾಗುವದಿಲ್ಲ
ಆ ಪುಟ್ಟ ಬಾಲ್ಯದಲಿ
ಆಟದಲಿ ಸೋತಿದ್ದು
ಪೆನ್ಸಿಲ್ ಕದ್ದಿದ್ದು
ಮೇಷ್ಟ್ರು ಹೊಡೆದದ್ದು
ಸುಮ್ಮನೇ ಜೋಡಿಸಿದ ಸರಣಿ ಸುಳ್ಳುಗಳು
ಬಹಿರಂಗವಾಗಿ ಭಯ ಬೀಳಿಸಿದರೂ ಹೇಳಲಾಗುವದಿಲ್ಲ.
ಹರಿಯುತ್ತ ಬರುವ ಹರೆಯ
ಹಗೂಽರ ತೆರೆದು ಕೊಳ್ಳುವ ಭಾವ
ಆಗಲೇ ಅಲ್ಯಾರೋ ನೋಟ ಬದಲಿಸಿದ್ದು
ಮೌನ ಮೊಗ್ಗು ಅರಳಿ ನಕ್ಕಿದ್ದು
ಸುಮ್ಮನೇ ಬೆವರಿದ್ದು
ಒಳಗೊಳಗೇ ಅರ್ಥವಾಗುತ್ತಿದ್ದರೂ
ಹೇಳಲಾಗುವದಿಲ್ಲ.
ಸಾಕು ಇನ್ನೆಷ್ಟು ದಿನ
“ಹೆಣ್ಣು ಅವಳು”
ಮದುವೆ ಮಾಡಿ ಮುಗಿಸಿ
ಎಲ್ಲೆಲ್ಲಿಂದಲೋ ಬರುವ ಹಿತ-
ವಚನದ ಮುಖ ಹೊತ್ತ ಅಹಿತ.
ಕೈಯಲ್ಲಿ ಹಿಡಿದ ಕಾಫಿ ಲೋಟ
ಕಟ ಕಟ ಸದ್ದಿನಲಿ ಕೈಗಿಟ್ಟು
ಒಳಮನೆ ಸೇರಿಕೊಂಡು ಇಣುಕಿದಾಗ
ಏನಿತ್ತು ಭಾವ!
ಅಪ್ಪನ ಬಡತನ ,ಅಮ್ಮನ ನೋವು,
ಸಂಬಂಧಿಗಳ ಕುಹಕ
ಇಲ್ಲ ಏನನ್ನೂ ಹೇಳಲಾಗುವುದಿಲ್ಲ.
ಕಣ್ಣು ನೂರಾರು ಕನಸ ಹೊತ್ತು
ಹೊಸ್ತಿಲು ದಾಟುವಾಗ
ಅಪ್ಪನ ಬಿಕ್ಕು,ಅಮ್ಮನ ಗುಕ್ಕು
ತಿರು-ತಿರುಗಿ ಆರ್ದ್ರವಾಗಿ ನೋಡುವ
ಅದೇ ಬೆಚ್ಚನೆಯ ಗೂಡು
ಕಣ್ಣೀರಿನ ಹೊರತಾಗಿ
ಅಲ್ಲಿ ಘಟಿಸುವ ಯಾವ ಭಾವವನ್ನೂ ಹೇಳಿಕೊಳ್ಳಲಾಗುವದಿಲ್ಲ.
ಸಂತೆ ಮುಗಿದ ಬೀದಿಯಲಿ
ಒಂಟಿಯಾಗಿ ನಿಂತು
ಅಂಟಿ ಕೊಂಡಿದ್ದು ಏನು ಎಂದು
ತಿರುಗಿ ನೋಡಿಕೊಳ್ಳುವಾಗ
ರಥದಿಂದ ಒಂದೊಂದೇ ಹೂ ಉದುರಿ
ತನ್ನದೇ ಕಾಲಿಗೆ ತುಳಿವಾಗ
ಖುಷಿ,ಕನಸು,ನೋವು,ಹಿಂಸೆ
ಏನನ್ನೂ ಹೇಳಿಕೊಳ್ಳಲಾಗುವುದಿಲ್ಲ
ನಡೆವ ದಾರಿಗೆ ಕಲ್ಲಿಟ್ಟು
ಎಡವಿದಾಗ ನಕ್ಕವರು ಅದೆಷ್ಟೋ
ಈಗ ಎದ್ದು ನಡೆದಿದ್ದೇನೆ ತಲೆ ಎತ್ತಿ
ಆಡಿಕೊಂಡವರ ಎದುರು
ಅದರೀಗ ಏನೂ ಹೇಳಬೇಕು ಅನ್ನಿಸುವುದಿಲ್ಲ.
—————————
ನಿತ್ಯ ಮುನ್ನುಡಿ ಕವಿತೆ
ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕು
ಮುನ್ನೆಲೆಗೆ ಬಂದು ಕಾಡುವ ವಿಚಾರಗಳ ನಡುವೆಯೂ .
ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆ
ಈ ಕೋಗಿಲೆಯ ಉಲಿಗೆ
ಇಂದು ಹುರುಪಿದೆ ನೊಡು.
ಸುತ್ತುವ ಸಾಲುಗಳಿಗೀಗ
ಹೊಸ ಭಾವಗಳ ಅಲಂಕಾರ
ಉಪಹಾರದ ಗಡಿಬಿಡಿಯಲ್ಲಿ
ಉಪಯೋಗಿಸಲಾಗದೇ ಉಳಿದ ಅಕ್ಷರ.
ಮೈಮುರಿದು ಏಳುವಾಗಿನ ತೀವ್ರತೆ
ಅಲ್ಲಲ್ಲಿ ನಿಂತು ಅತುತ್ಸಾಹದಲಿ ಹೊಕ್ಕ
ನಿರುತ್ಸಾಹ.
ಪಾತ್ರೆಗಳ ಲಗುಬಗೆಯಲಿ ಗಲಬರಿಸಿ
ಅಂಗಿಗೆ ಅಂಗೈ ಒರೆಸಿಕೊಂಡು-
ಉಳಿದ ಹನಿಗಳ ತಾಕಿದ ಹಾಳೆ ಆರ್ದ್ರ
ಊಟದ ತಯಾರಿಯಲ್ಲಿ ಮನಸು ಮಗ್ನ.
ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವ
ಅದೇ ಭಾವಗಳ ಮುಂದುವರಿದ ಭಾಗ
ಕನ್ನಡಿಯ ಮುಂದೆ ಅರಳಿ ಮರಳುವಾಗ
ಅಡುಗೆ ಮನೆಯಿಂದ-
ಸೀದ ವಾಸನೆಯೊಂದು ಮೂಗಿಗೆ ರಾಚಿ,
ಮುದ್ದಾದ ಸಾಲುಗಳೆಲ್ಲ ಈಗ ಕಮಟು.
ಸಿಡಿಮಿಡಿಯ ಮನಸು
ಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-
ಕರಗಿಸಲೊಂದು ಸಮಾಧಾನ,
ಇರಲಿ ರಾತ್ರಿಯವರೆಗೂ ಸಮಯವಿದೆ
ಏನಾದರೊಂದು ಗೀಚಲೇ ಬೇಕು.
ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿ
ಬಿಡುಗಡೆಯ ನಿಟ್ಟುಸಿರು
ಮುದಗೊಂಡ ಮಂದ ಬೆಳಕಿನಲಿ
ಲಹರಿಗೆ ಬಂದ ಸಾಲು ತಡಕಾಡುವಾಗ
ಹೆಪ್ಪು ಹಾಕಿದ ಪಾತ್ರೆಯ “ಧಡಾರ್ “ಸದ್ದು.
ಸಿಕ್ಕ ಸಾಲುಗಳ ಮರೆತು ಬೆಳಗಿನ ಚಿಂತೆ.
ರಾತ್ರಿ ಕೈ ಮೀರುತ್ತಿದೆ,
ಬೆಳಿಗ್ಗೆ ಬೇಗ ಏಳಬೇಕಿದೆ,
ಮನಸು ದೇಹ ಎರಡರದೂ
ಕಳ್ಳ ಪೋಲೀಸ್ ಆಟ.
ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ.
******************************
ನಿಮ್ಮ ಕವಿತೆಗಳು ಉಳಿಸಿಹೋದ ವಿಷಾದದ ಛಾಯೆಗೆ ಏನನ್ನೋ ಹೇಳಬೇಕೆನಿಸುತ್ತಿದೆ…. ಆದರೆ ಏನನ್ನೂ ಹೇಳುವುದಿಲ್ಲ…. ಬಹಳ ಇಷ್ಟವಾಯ್ತು… ಆಪ್ತವಾಗಿ ಬರೆದಿರುವಿರಿ….