ಮಹಿಳೆ- ಸಂಸ್ಕೃತಿ- ಸಂಸ್ಕಾರ- ವಿರೋಧದ ಪರಿಣಾಮಗಳು

ಲೇಖನ

ಮಹಿಳೆ- ಸಂಸ್ಕೃತಿ- ಸಂಸ್ಕಾರ-

ವಿರೋಧದ ಪರಿಣಾಮಗಳು

ಮಮತಾ ಅರಸೀಕೆರೆ

Brooklyn Museum: Women's Work

ಮಹಿಳೆ-ಸಂಸ್ಕೃತಿ-ಸೀರೆ ಇವೆಲ್ಲವು ಬಹಳ ದಿನಗಳಿಂದ ಸಾಗಿ ಬರುತ್ತಿರುವ  ಚರ್ಚೆ ಮತ್ತು ಕ್ಲೀಷೆಯ ವಿಚಾರ ಕೂಡ. ಬಹಳಷ್ಟು ಚರ್ಚೆಗಳು, ಸಂವಾದಗಳು ಜರುಗಿ ಅಲ್ಲೊಂದು ಅಂತ್ಯ ಕಾಣದೆ ಅಥವಾ ಸ್ಪಷ್ಟ ನಿಲುವಿಗೆ ಬಾರದೆ ತುಂಬ ಸಲ ಸಂವಾದದ ಭಾಗವಾದ ವ್ಯಕ್ತಿಗಳಿಗೆ     ವಿಷಯದ ಬಗ್ಗೆ ಪುನಾರಾವರ್ತನೆಯೊ ಅಥವಾ ಮತ್ತಷ್ಟು ವಿಷಯದ ಗ್ರಹಿಕೆಯೋ ಆಗುತ್ತದೆಯಷ್ಟೆ. ನನಗನಿಸುವ ಮಟ್ಟಿಗೆ ವಿಷಯಕ್ಕೆ ಬಹಳಷ್ಟು ಆಯಾಮಗಳಿವೆ. ಚರ್ಚೆಯ ಸಂಧರ್ಭದಲ್ಲಿ ವಿಷಯವು ಗ್ರಹಿಸುವ ವ್ಯಕ್ತಿಗಳ ಮೇಲೆ ಆಧಾರವಾಗಿದ್ದು ಈಗಾಗಲೇ ವಿಚಾರದಲ್ಲಿ ಸ್ಪಷ್ಟತೆಯಿರುವವರು ಗಟ್ಟಿದನಿ ಹಾಗೂ ಪ್ರೌಢವಾಗಿ ನಿರೂಪಿಸಬಹುದು ಮತ್ತು ದನಿಯಿಲ್ಲದವರೊಂದಿಗೊ ಅಥವಾ ಸಂಗತಿಯ ಬಗ್ಗೆ ಅರಿವು ಮೂಡಿಸಬೇಕಾದ ವರ್ಗಕ್ಕೆ ಸರಳ ಹಾಗೂ ಸೌಜನ್ಯಯುಕ್ತವಾಗಿ ತಿಳಿಸಬೇಕಾದ ಅಂಶಗಳನ್ನು ಹೇಳಬೇಕಾಗುತ್ತದೆ. ಬಹಳ ದೊಡ್ಡ ಪದಗಳಲ್ಲದೆ ವಿಷದವಾಗಿ, ವಸ್ತುವಿಗೆ ಪೂರಕವಾಗಿ ವಿವರಿಸಬೇಕಾಗುತ್ತದೆ.ಇಲ್ಲದಿದ್ದರೆ ಬಹಳಷ್ಟು ಸಂಧರ್ಭದಲ್ಲಿ ಮಾಹಿತಿಯು ತಲುಪಬೇಕಾದವರಿಗೆ ತಲುಪುವುದಿಲ್ಲ, ಅದರಿಂದ ಉಪಯೋಗವಿಲ್ಲ     ಅಥವಾ ಅದು ಸಂಧರ್ಭಕ್ಕೆ ಕಾರಣವಾಗಬಹುದು.

ಈಗಾಗಲೆ ಚರ್ಚಿಸಿರುವಂತೆ ಬಹಳಷ್ಟು ಮಂದಿ ಹೇಳುತ್ತಿರುವುದು ಸೀರೆ ಧರಿಸುವುದು ಹೇರಿಕೆಯಾಗಬಾರದುಅದೊಂದು ಇಷ್ಟದ ಪ್ರಕ್ರಿಯೆಯಾಗಬೇಕು, ಅವಶ್ಯಕವಾದರೆ ಇಚ್ಛಾನುಸಾರ ಉಡಬೇಕು ಅನಾನುಕೂಲವಾದರೆ ತ್ಯಜಿಸಬೇಕು.ಒತ್ತಡ, ಬಲವಂತ, ದೌರ‍್ಜನ್ಯ ಸಲ್ಲದು ಅಂತಲೆ. ಅದರಲ್ಲೂ ಬೇರೆ ಬೇರೆ ಉದ್ದೇಶ, ಹುನ್ನಾರಗಳನ್ನಿಟ್ಟುಕೊಂಡು ಆಕ್ರಮಣಕಾರಿಯಾಗಲು ಹೊರಟರೆ ಅದನ್ನು ಖಡಾಖಂಡಿತವಾಗಿ ವಿರೋಧಿಸಬೇಕು ಅನ್ನುವ ಬಲವಾದ ಆರೋಗ್ಯಕರ ಒತ್ತಾಯ ಮೂಲ ಉದ್ದೇಶ.ನೀತಿ, ನಿಯಮ, ಸಂಸ್ಕೃತಿ, ಸಂಸ್ಕಾರಗಳ ಹೆಸರಿನಲ್ಲಿ ಅನಾವಶ್ಯಕವಾಗಿ ನಡೆಯುತ್ತಿರುವ ಪ್ರಾಬಲ್ಯದ ಸಂಗತಿಗಳೇನಿವೆ ಅದನ್ನ ಸ್ತ್ರೀ  ಪುರುಷರಾದಿಯಾಗಿ ಎಲ್ಲರೂ ಖಂಡಿಸಬೇಕಾದ್ದೆ. ಅದರಲ್ಲೂ ಸೀರೆಯಂತಹ ಸದ್ಯದಲ್ಲಿ ಚಾಲ್ತಿಯಲ್ಲಿರುವ ವಿಚಾರ ಹಲವು ಕೋನೀಯದ್ದು.ಧಾರ‍್ಮಿಕವಾಗಿ, ಸಂಪ್ರದಾಯವಾಗಿ, ಸಾಂಸ್ಕೃತಿಕ ವಕ್ತಾರಿಕೆಯನ್ನ ಹೇರಿಕೊಂಡು, ವೃತ್ತಿ ಸಂಬಂಧಿತ ವಿಷಯವಾಗಿ ಸಾಮಾಜಿಕವಾಗಿ ಹೀಗೆ ಹಲವಾರು ಆಯಾಮಗಳಲ್ಲಿ ಹರಡಿಕೊಂಡಿದೆ. ಈ ವಿಚಾರ ಸಂಬಂಧಿಸಿದವರಿಗೆ ಐಚ್ಛಿಕವಾಗಬೇಕೆ ಹೊರತು ಯಾರದೋ ಕೈಯಲ್ಲಿನ ಹಿಡಿತವಾಗಬಾರದು

ಆದರೆ ಕೆಲವೊಮ್ಮೆ ಮಹಿಳೆಯೆ ಅಸಂಗತ ವ್ಯವಸ್ಥೆಯಲ್ಲಿ ಭಾಗಿಯಾಗಿ ತಾನೂ ಪರೋಕ್ಷವಾಗಿ ತನಗರಿವಿಲ್ಲದೆ ಅನಾರೋಗ್ಯಕರ ಕಟ್ಟಳೆಗಳನ್ನು ಸ್ಪರ್ಧಿಸಲು ಹೊರಡುತ್ತಾಳೆ ಎನ್ನುವ ಆರೋಪವೊ, ತಕರಾರೊ ಇದೆ. ಈ ವಿಷಯವನ್ನಿಡಿದು ಇಣುಕಿ ನೋಡಲು ಹೊರಟರೆ ಅಲ್ಲಿ ಕಾಣಬರುವ ವಿವಿಧಾಂಶಗಳೇ ಬೇರೆ.

ಇಂತಹ ವಿಚಾರಗಳು ಮುನ್ನೆಲೆಗೆ ಬಂದಾಗ ಅಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದು ವ್ಯವಸ್ಥೆ ಗಂಡಾಳ್ವಿಕೆಯಲ್ಲಿದೆ ಅಥವಾ ಪುರುಷಪ್ರದಾನವಾಗಿದೆಎಂಬುದನ್ನ.ಇದೇ ಪುರುಷರ ಅಧೀನದಲ್ಲಿರುವ ಹೆಣ್ಣು ಎಷ್ಟೋ ವೇಳೆ ತನ್ನ ಮೂಲ ಅಸ್ತಿತ್ವವನ್ನೇ ಮರೆತಾಗ ಮತ್ತು ಆ ಕ್ರಮವನ್ನು ತನಗರಿವಿಲ್ಲದೆ ಸ್ಪರ್ಧಿಸಲು ಹೊರಟಾಗ ಈ ಅಸಹಜ ವಿದ್ಯಾಮಾನ ಜರುಗುತ್ತದೆ.ಗಂಡಿನ ಅಧೀನತೆಗೆ ಈಡಾದ ಮಹಿಳೆ ಆ ಗಂಡಾಳ್ವಿಕೆಯ ತಂತ್ರವನ್ನೆ ಉತ್ಕೃಷ್ಟವೆಂದೋ ಅಥವಾ ಸಭ್ಯ ಎಂದೊ ಬಲವಾಗಿ ನಂಬಿರುವ ಸಾಧ್ಯತೆಯಿರುತ್ತದೆ.ತಾನು ಆ ಏರ‍್ಪಾಡನ್ನು ಸಮರ‍್ಥಿಸಬೇಕು ಅದೇ ಶ್ರೇಷ್ಠವಾದದ್ದು, ಒಂದು ವೇಳೆ ತಾನದನ್ನು ಉಲ್ಲಂಘಿಸಿದರೆ ಪದ್ಧತಿಯನ್ನೇ ವಿರೋಧಿಸಿದಂತಾಗುತ್ತದೆ. ಸಂಪ್ರದಾಯಕ್ಕೆ ಅಪಚಾರವೆಸಗಿದಂತಾಗುತ್ತದೆ ಅಂತೆಲ್ಲಾ ಯೋಚಿಸುವಾಗ ತಾನೇನೋ ಅಪರಾಧ ಮಾಡಿದ ಭಾವನೆ ಅನುಭವಿಸಬಹುದು.ಆ ಪರಂಪಾರಾನುಗತ ಕಟ್ಟಳೆಗಳ ಮುರಿದ ಕುರಿತು ಕೀಳರಿಮೆಯನ್ನೂ ಎದುರಿಸಬಹುದು. ಪೌರುಷದ ಎದುರು ವಿಧೇಯತೆಯನ್ನ ಪೋಷಿಸಿಕೊಂಡು, ಕಾಪಿಟ್ಟುಕೊಂಡೆ ಬಂದ ಹೆಣ್ಣು ಸಂಪ್ರದಾಯ ಸರಿಸಿದರೆ ಶಾಸ್ತ್ರ  ವಿರೋಧಿ ಎನಿಸಿಕೊಳ್ಳಬಹುದೆಂದು ಮತ್ತು ಮುಖ್ಯವಾಹಿನಿಯಿಂದದೂರ ಸರಿಯುತ್ತಿದ್ದೇನೆಂದು ಭಾವಿಸಿಕೊಳ್ಳಬಹುದು.ಇಷ್ಟೆಲ್ಲ ಹೊಯ್ದಾಟಗಳ ಮಧ್ಯೆ ಜೀಕಾಡುವಾಗ ಸದ್ಯದ ಪರಿಸ್ಥಿತಿಯನ್ನು ಇದ್ದಂತೆಯೇ ಅಪ್ಪಿಕೊಂಡು ಶಾಂತಿ ಕಾಪಾಡಿಕೊಳ್ಳುವ ಸ್ಥಿತಿಯಲ್ಲಿಯೇ ಆಕೆಯಿರಬಯಸುತ್ತಾಳೆ.ಒಂದು ವೇಳೆ ವ್ಯವಸ್ಥೆ ಬದಲಿಸುವ ಉಮೇದು ಇದ್ದರೂ ಒಂದೋ ಓಲೈಸಬೇಕು. ಆ ಓಲೈಕೆಯೇನು ತಕ್ಷಣವೇ ನೆರವೇರುವಂತದ್ದಲ್ಲ, ಅದರ ಸಕರಾತ್ಮಕ ಫಲಿತಾಂಶಕ್ಕಾಗಿ ಬಹಳ ಕಾಲ ಕಾಯ್ದು ಅನುಮತಿ ದಕ್ಕಿದರೆ ತನ್ನ ಬೇಡಿಕೆ ಸಾರ‍್ಥಕವಾಯ್ತು ಎನ್ನುತ್ತಾ ಪುನೀತರಾಗಿ ಜಯದ ನಗೆ ನಗಬೇಕು. ಇಲ್ಲವಾದರೆ ತನ್ನ ಹಣೆಬರಹ, ದುರ‍್ದೈವ ಎನ್ನುತ್ತಾ ಸಿಕ್ಕಷ್ಟರಲ್ಲಿ ಎದುರಾಡದೆ ತೃಪ್ತರಾಗಿರಬೇಕು.ತನಗೆದಕ್ಕಿದ ವಾಸ್ತವವನ್ನು ಇದ್ದಂತೆಯೆ ಹೊಂದಾಣಿಸಿಕೊಂಡು ಒಪ್ಪಿ ಅಪ್ಪಬೇಕು. ಹೀಗಿರುವಾಗ ಮಾನಸಿಕ ಶಾಂತಿಗಾಗಿ, ಅನಿವಾರ‍್ಯವಾಗಿ ವಸ್ತುಸ್ಥಿತಿ ಹೇಗಿದೆಯೊ ಹಾಗಿರಲು ಬಯಸುವವರೆ ಹೆಚ್ಚು.

ಇನ್ನು ಅರಿವಿನ ಅಲೆಗೆ ಸಿಕ್ಕು ಪ್ರಜ್ಞಾವಂತಿಕೆ ಪಡೆದ ಹೆಣ್ಣು ತಾನಿರುವ ಅವಸ್ಥೆಯಿಂದ ತನಗನ್ನಿಸಿದಂತೆ ಮತ್ತೊಂದು ಸೂಕ್ತ ಸಂಚಲನಾತ್ಮಕ ಅವಸ್ಥೆಗೆ, ಬದಲಾವಣೆಗೆ ತೆರೆದುಕೊಳ್ಳಲು ಹೊರಡುತ್ತಾಳೊ ಆಗ ಇದ್ದಕ್ಕಿದ್ದಂತೆ ಎಲ್ಲ ಪೌರುಷ ಶಕ್ತಿಗಳು ಪ್ರಬಲವಾಗಿ ಪ್ರತಿರೋಧ ಒಡ್ಡಲು ಶುರುಮಾಡುತ್ತವೆ. ತಾನೀಗಲೆ ಅಣಿಮಾಡಿರುವ ವ್ಯೂಹದ ಪರಿಧಿಯಲ್ಲಿಯೇ ಅವಳನ್ನು ಹುದುಗಿಸಲು ಮತ್ತು ಆಕೆ ಅಲ್ಲಿಂದ ಚಲಿಸದಂತೆ ಸ್ಥಿರಗೊಳಿಸಲು ತಂತ್ರಗಳನ್ನು ಹೆಣೆಯತೊಡಗುತ್ತವೆ. ಹೊಸ ಅರಿವಿಗೆ, ಕೌಶಲ್ಯಕ್ಕೆ ಮಹಿಳೆ ತನ್ನನ್ನು ಒಡ್ಡಿಕೊಳ್ಳಬಯಸುವುದೆ ಪುರುಷ ವರ‍್ಗಕ್ಕೆ ಆತಂಕದ ವಿಚಾರ. ಆಕೆ ತಮ್ಮನ್ನು ಮೀರಿಸುವ ಭಯ ಹಾಗೂ ತನ್ನ ಸೌಕರ‍್ಯಕ್ಕೆ ಸಂಚಕಾರವೆಂದೇ ಭಾವಿಸುತ್ತವೆ.ಎಲ್ಲಿಯವರೆಗೆ ಮಹಿಳೆ ಪುರುಷರ ಎಲ್ಲಾ ಅಹಂ ಅನ್ನು ತಣಿಸುತ್ತಿರುತ್ತಾಳೊ ಅಲ್ಲಿಯವರೆಗೆ ಅವಳ ಸೌಲಭ್ಯಕ್ಕೂ ಸ್ವಾತಂತ್ರಕ್ಕೂಅಡ್ಡಿಯಿರುವುದಿಲ್ಲ. ಯಾವುದೇ ಅಸಹನೆಯಿರುವುದಿಲ್ಲ. ಯಾವಾಗ ಪರಿಧಿ ವಿಸ್ತರಿಸಲು ಆರಂಭವಾಗುತ್ತದೊ, ಪ್ರಶ್ನಿಸಲು ತೊಡಗುತ್ತಾಳೊ ಆಗ ಕಿರಿಕಿರಿ ಶುರುವಾಗುತ್ತದೆ.ಪಲ್ಲಟವೊಂದು ಆಕೆಯ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಉಂಟುಮಾಡಬಹುದು.ಆಕೆ ಕೆಟ್ಟವಳಾಗುತ್ತಾಳೆ, ಪುರುಷರ ಹುಸಿ ಅಸಲಿಯತ್ತನ್ನು ಸಂಶಯದಿಂದ ನೋಡುವುದೇ ಮಹಿಳೆಯ ಘೋರ ಅಪರಾಧವಾಗುತ್ತದೆ

ಸಿದ್ದಸೂತ್ರಗಳಲ್ಲಿ ಸುತ್ತುತ್ತಿದ್ದರೆ ಆಕೆ ಸುರಕ್ಷಿತ, ಸಭ್ಯಳು.ಇಲ್ಲವೆಂದರೆ ಹೋರಾಟ ಆರಂಭವಾಗುತ್ತದೆ. ನನ್ನ ದೇಹ ನನ್ನ ಹಕ್ಕು ಎನ್ನುವಂತಿಲ್ಲ, ಸಂಪ್ರದಾಯ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕು.ಪ್ರತೀ ವಿಷಯಕ್ಕೂ ಸಂಘರ‍್ಷದ ಸೂಚನೆ ಕಾಣತೊಡಗುತ್ತದೆ. ಆಕೆ ಹಿಂಸೆಯನ್ನನುಭವಿಸಬೇಕಾಗುತ್ತದೆ.ಅಪರಾಧಿ ಪ್ರಜ್ಞೆಯೊಂದಿಗೆ, ಅಸಮಾಧಾನದ ಪರಿಸ್ಥಿತಿಯೊಡನೆ ಮನಃಸಮಾಧಾನ ಕಳೆದುಕೊಂಡು ನರಳಬೇಕಾಗುತ್ತದೆ.ಯಾವುದೂ ಸುಲಭವಾಗುವುದಿಲ್ಲ.ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಹದ್ಯೋಗಿಗಳೊಡನೆ, ಸಾಂಪ್ರದಾಯಿಕ ಮನೋಭಾವದವರಿಂದ, ಸಾಂಸಾರಿಕವಾಗಿ ಮನೆಯ ಸದಸ್ಯರಿಂದ, ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲೆಲ್ಲ ಜಟಾಪಟಿ ಅನುಭವಿಸುತ್ತಾ ಸದಾಕಾಲ ಹೋರಾಡುತ್ತಿರಲು ಸಾಧ್ಯವೇ?ಅಂತಾಗಿಯೇ ತನ್ನ ಮೇಲೆ ಹೇರಿರುವ ಯಾವುದೇ ಅಸಹಜತೆಯನ್ನು, ದಬ್ಬಾಳಿಕೆಯನ್ನು ಉಸಿರೆತ್ತದೆ ತಾಳಿಕೊಂಡು ಬರುವಂತಾಗಿದೆ.

ಮಹಿಳೆಯನ್ನು ಆವರಿಸಿರುವ ಬಂಧನದ ಕೋಟೆಗಳು ಹಲವು.ಸಮಸ್ಯೆಗಳು ಅನೇಕ.ಆಕೆಯನ್ನು ಕಟ್ಟಿಹಾಕುವ ಅನೇಕ ಹುನ್ನಾರಗಳಲ್ಲಿ ಸೀರೆಯೂ ಒಂದು ಅಂತೆಲ್ಲ ಎಷ್ಟೋ ಬಾರಿ ಅನಿಸಿಬಿಡುತ್ತದೆ.ಸೀರೆ ಆಕೆಯ ವೈಯಕ್ತಿಕ ಆಯ್ಕೆಯಾದರೆ ಪರವಾಗಿಲ್ಲ. ಆಕೆಯ ಆಸೆ ಆಕಾಂಕ್ಷೆಗಳ ಪೂರ‍್ಣತೆಯಲ್ಲಿ ಪ್ರಾಧಾನ್ಯತೆ ಪಡೆದರೆ ಅಡ್ಡಿಯಿಲ್ಲ. ಬಾಹ್ಯವಾಗಿ ಕ್ಷುಲ್ಲಕ ಸಂಗತಿಗೆ ಕೊಂಡಿಯಾದರೆ ಅಕ್ಷಮ್ಯ.

ಇದರ ನಡುವೆ ಆಕೆಯ ನಿಜವಾದ ಸಾಮರ‍್ಥ್ಯ, ಬೌದ್ಧಿಕತೆ, ಪ್ರಬುದ್ಧತೆ ಗಣನೆಗೆ ಬರುವುದಿಲ್ಲ. ಆಕೆಯನ್ನ ಅಲಂಕಾರಿಕ ಬೊಂಬೆಯನ್ನಾಗಿ, ಭೋಗದ ಸಾಮಗ್ರಿಯನ್ನಾಗಿಸಿರುವ ಸಮಾಜ ನಾನಾ ಕಸರತ್ತುಗಳ ಮೂಲಕ ಬಂಧಿಸಿಡಲೇ ನೋಡುತ್ತದೆ.ಬೌದ್ಧಿಕತೆಯಥಾರ್ಥವನ್ನು ನಿರ‍್ಲಕ್ಷಿಸಿ ಸೌಂದರ್ಯದ  ದೇಹ ರಾಜಕಾರಣದ ಅಮಲು, ನಶೆಯಲ್ಲಿ ಮುಳುಗಿಸಿಬಿಡುತ್ತದೆ.ಶಿಕ್ಷಣ, ಪ್ರಜ್ಞಾವಂತಿಕೆ, ವಿಚಾರವಂತಿಕೆ ಪ್ರಮುಖವಾಗಬೇಕಾದ ಸ್ಥಾನದಲ್ಲಿ ಉಡುಪು ಪ್ರಾಮುಖ್ಯತೆ ಪಡೆಯುತ್ತದೆ.ಎಷ್ಟೋ ಮೂಲ ಸಮಸ್ಯೆ ಮರೆಯಾಗುತ್ತದೆ. ಅಸಲಿಗೆ ಉಡುಪನ್ನ ಲಿಂಗಸಂಬಂಧಿ ವಿಷಯಗಳಿಗೆ ತಳುಕು ಹಾಕುವುದು, ಜೀವಿಗಳ ದೇಹರಚನೆಯನ್ನ ಶ್ಲೀಲ, ಅಶ್ಲೀಲ ಎಂದು ವಿಂಗಡಿಸುತ್ತಾ ಒತ್ತಡ ಸೃಷ್ಟಿಸುವುದು, ಸಭ್ಯತೆ, ಘನತೆಯನ್ನು ಅವಳ ವ್ಯಕ್ತಿತ್ವದಲ್ಲಿ ಕಾಣದೆ ಉಡುಪಿನಲ್ಲೊ, ಮತ್ತೆಲ್ಲೊ ಹುಡುಕುವುದು, ಧರ‍್ಮ, ದೇಶವನ್ನು ಉಡುಪಿನಲ್ಲಿತುರುಕುವುದು ಮೊದಲಾದವು ಅನಾರೋಗ್ಯಕರ ಅಂಶಗಳು. ಈ ವಿಚಾರಗಳು ಎಗ್ಗಿಲ್ಲದೆ ನಡೆಯುತ್ತಿರುವುದು ವಿಷಾದಕರ.

ಇವೆಲ್ಲಾ ಅನಾರೋಗ್ಯಕರ ಸರಕುಗಳು ನಗಣ್ಯವಾಗಿ ವೈಚಾರಿಕತೆ ಮುನ್ನೆಲೆಗೆ ಬಂದರೆ ಸಾರ‍್ಥಕ.ವೈಚಾರಿಕತೆಯು ವಿಶಾಲ ದೃಷ್ಟಿಕೋನವನ್ನೂ, ನೋಡುವ ನೋಟಕ್ರಮವನ್ನೂ ಕಲಿಸುತ್ತದೆಂದು ಒಂದು ಅಭಿಪ್ರಾಯ.

*****************************

4 thoughts on “ಮಹಿಳೆ- ಸಂಸ್ಕೃತಿ- ಸಂಸ್ಕಾರ- ವಿರೋಧದ ಪರಿಣಾಮಗಳು

  1. ಲೇಖನ ಚನ್ನಾಗಿ ಬಂದಿದೆ. ಮಾನವ ಜಗತ್ತು ಎಷ್ಟೆಲ್ಲ ಬದಲಾದರೂ
    ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವುದು ಮಾತ್ರ ತಪ್ಪಿಲ್ಲ. ವೈಚಾರಿಕತೆ ಬೆಳೆಯದೇ ಸಮಾನತೆ ಕನಸೇ‌.
    ಮಹಿಳೆಯ ವಸ್ತ್ರದ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಲೇಖನ ಪ್ರಸ್ತುತವಾಗಿದೆ. ಧನ್ಯವಾದಗಳು

Leave a Reply

Back To Top