ಲೇಖನ
ಮಾತು ಮತ್ತು ನಾವು
ಗೀತ ಅನಘ
[20:37, 30/07/2021] GEETHA ANAGHA: ಮಾತು,ನಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸಂವಹನ ಮಾಧ್ಯಮ. ಮಾತಿನಿಂದಲೇ ಮನುಷ್ಯ ವಿಶ್ವದಲ್ಲಿನ ಕೋಟ್ಯಾನುಕೋಟಿ ಜೀವರಾಶಿಗಳಲ್ಲಿ ಭಿನ್ನವಾಗಿ ನಿಂತು, ಇಂದು ಎಲ್ಲ ಜೀವಿಗಳಿಗಿಂತ ಅತ್ಯುತ್ತಮ ಮತ್ತು ಅಧಿಕಾರಯುತ ಆಕ್ರಮಣಶೀಲತೆಗೆ ಕಾರಣವಾಗಿರುವುದು ಎಂದರೆ ತಪ್ಪಾಗಲಾರದು. ಮಾತು ಇಂದಿನ ಮಾನವನ ಪ್ರತಿ ಸಾಧನೆಗೆ ಕಾರಣ ಆದರೆ ಕೆಲವೊಮ್ಮೆ ಅದೇ ಮಾತು ಅತಿಯಾದರೆ ಮಾರಕವಾಗಬಹುದು ಎಂಬುದನ್ನು ನಾವು ಗಮನಿಸಿರುತ್ತೇವೆ. ಹಾಗಾಗಿಯೇ ನಮ್ಮ ಹಿರಿಯರು ‘ನುಡಿದರೆ ಮುತ್ತಿನ ಹಾರದಂತಿರಬೇಕು ,,,, ‘ಊಟ ಬಲ್ಲವನಿಗೆ ರೋಗವಿಲ್ಲ,ಮಾತು ಬಲ್ಲವನಿಗೆ ಜಗಳವಿಲ್ಲ’, ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ಎಂದು ತಮ್ಮ ಅನುಭವಗಳ ಮೂಲಕ ಎಚ್ಚರಿಸಿದ್ದಾರೆ. ಮಾತು ಬೇಕು ಆದರೆ ಅವಶ್ಯಕತೆಯನ್ನು ಅನುಸರಿಸಿ ಎನ್ನುವುದು ಸತ್ಯ ‘ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು’ ಎನ್ನುವ ಬಲ್ಲವರ ಅನುಭವದ ನುಡಿ ಮಾತು ಸರಿಯಾಗಿರ ದಿದ್ದರ ಪರಿಣಾಮ ಸಾರಿ ಹೇಳುತ್ತದೆ. ಮನುಕುಲದ ಇಂದಿನವರೆಗೆನ ಪ್ರತಿ ಸಾಧನೆ ಹಿಂದೆ ಮಾತಿಗೆ ಮಹತ್ವದ ಸ್ಥಾನವಿದೆ. ಅದನ್ನು ಅರ್ಥಮಾಡಿಕೊಳ್ಳುವುದು ನಮ್ಮ ಆದ್ಯತೆ ಆಗಬೇಕಾಗಿದೆ. ಕೆಲವೊಮ್ಮೆ ನಮಗರಿವಿಲ್ಲದೆ, ಅರಿವಿದ್ದು ನಮ್ಮಮಾತು ನಮ್ಮನ್ನು ಸಮಸ್ಯೆಗೆ ಸಿಲುಕಿಸುತ್ತದೆ, ಆಗ ಕ್ಷಮೆ, ಪಶ್ಚಾತಾಪಕ್ಕೆ ಕಾರಣವಾಗುತ್ತದೆ. ಈ ರೀತಿಯ ಮಾತುಗಳು ಮರುಕಳಿಸದಂತೆ ನೋಡಿಕೊಳ್ಳುವುದು ಅನಿವಾರ್ಯ. ಆದರೆ ಅದು ಪುನರಾವರ್ತನೆಯಾದರೆ ನಮ್ಮ ವ್ಯಕ್ತಿತ್ವ ಹರಣಕ್ಕೆ ನಾವೇ ತೋಡಿಕೊಂಡ ಸಮಾಧಿಯಾಗಬಹುದು.
ಮಾತು ನಮ್ಮ ವ್ಯಕ್ತಿತ್ವದ ಪ್ರತೀಕ,
ನಮ್ಮ ಮನಸಿರಿಯ ದ್ಯೋತಕ ಮತ್ತು ಸಾಧನೆಗೆ ಸ್ಫೂರ್ತಿದಾಯಕ. ಅದೇ ಮಾತು ಅತಿಯಾದರೆ ಮಾರಕ. ಮಮತೆ, ಪ್ರೀತಿ ,ಪ್ರೇಮ ಮತ್ತು ಪ್ರೋತ್ಸಾಹಿಸುವ ಮಾತುಗಳು ಸಂಬಂಧಗಳಲ್ಲಿ ನಲ್ಮೆಯ ನವಿರು ಮೂಡಿಸಿದರೆ, ನೇರ, ದಿಟ್ಟ ಸತ್ಯವಾದ ಮಾತುಗಳು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ .ಅದೇ ಸುಳ್ಳು ,ಅಹಂಕಾರ ಮತ್ತು ನಾಟಕೀಯ ಮಾತುಗಳು ನಮ್ಮ ವ್ಯಕ್ತಿತ್ವವನ್ನು ನಾವೇ ಕೊಲ್ಲಲು ಕಾರಣವಾಗಲಿದೆ. ಅಷ್ಟು ಮಾತ್ರವಲ್ಲ, ಈ ನಕಾರಾತ್ಮಕ ಮಾತುಗಳು ಜನರು ನಮ್ಮಿಂದ ದೂರವಾಗಲು ಕಾರಣವಾಗುವುದು. ಇನ್ನು,ಮಾತಿನ ಬಗೆಗೆ ಬಂದಾಗ ಸಕಾರಾತ್ಮಕ ಮತ್ತು ನಕಾರಾತ್ಮಕ ಮಾತುಗಳು ಎನ್ನಬಹುದಾದರೂ ನಿತ್ಯಜೀವನದಲ್ಲಿ ಪ್ರೀತಿಯ ಮಾತು, ಮಮತೆಯ ಮಾತು ಆತ್ಮೀಯವಾದ ಮಾತು, ನಲ್ಮೆಯಮಾತು ,ಒಲುಮೆಯ ಮಾತು,ಸಹಜವಾದ ಮಾತು ,ಸರಳವಾದ ಮಾತು ,ಭಾವನಾತ್ಮಕ ಮಾತು ,ಪ್ರೋತ್ಸಾಹಿಸುವ ಮಾತು, ಮತ್ತು ಸ್ನೇಹದ ಮಾತು ಸಂಬಂಧಗಳನ್ನು ಬಲಗೊಳಿಸಿದರೆ,ಸುಳ್ಳಿನ ಮಾತು, ಅಧಿಕಾರಯುತ ಮಾತು, ಅಹಂಕಾರದ ಮಾತು, ಆಕ್ರಮಣಶೀಲತೆ ಮಾತು, ದುರುದ್ದೇಶದ ಮಾತು, ಸವಾಲಿನ ಮಾತು ಮತ್ತು ಸಂಶಯದ ಮಾತು ನಮ್ಮನ್ನು ಕಂದಕಗಳಿಗೆ ತಳ್ಳುವುದು ಅನ್ನುವುದು ಸುಳ್ಳಲ್ಲ.
ಕೆಲವೊಮ್ಮೆ ನಮ್ಮ ಮೃದುವಾದ ಮಾತುಗಳು ನಾವು ಕೈಲಾಗದವರು ಎಂಬ ತಪ್ಪು ಕಲ್ಪನೆಗೆ ಅವಕಾಶ ಮಾಡಿಕೊಟ್ಟಿತು ಆದರೆ ಅದನ್ನು ಸರಿಯಾಗಿ ನಿಭಾಯಿಸುವುದು ನಮ್ಮ ದೃಢ ಹಾಗೂ ಆತ್ಮವಿಶ್ವಾಸ ತುಂಬಿದ ಮಾತುಗಳಿಂದ ಮಾತ್ರ ಸಾಧ್ಯ. ಬದುಕಿನ ಬಂಡಿಯಲ್ಲಿ ನಾವು ಎಲ್ಲಾ ರೀತಿಯ ಮಾತುಗಳಿಗೆ ಸಾಕ್ಷಿ ಆಗಲೇಬೇಕು ಆದರೆ ಒಂದು ವ್ಯವಸ್ಥೆ ಯ ಅಥವಾ ಅನ್ಯರ ವ್ಯಕ್ತಿತ್ವ ಹರಣಕೆ ನಮ್ಮ ಮಾತು ಕಾರಣವಾಗದಿರಲಿ. ನಮ್ಮ ಮಾತು ಸರಿಯಾದ ರೀತಿಯಲ್ಲಿ ಇದ್ದರೆ ಕ್ಷಮೆ, ಪ್ರಸ್ಯತಾಪ,ಅವಮಾನ ಮತ್ತುಅಪಮಾನಗಳಿಗೆ ಎಡೆಮಾಡಿ ಕೊಡದು.
ಮಾತುಗಳು ಮನಸ್ಸಿನ ಮಿಲನಕ್ಕೆ ನಾಂದಿ ಆಗಬೇಕು, ನಮ್ಮ ಮಾತು ಅನ್ಯರ ಅಭಿವೃದ್ಧಿಗೆ ಸಹಾಯಕವಾಗಿ ರಬೇಕು ಹಾಗೇನೆ ಸಂದರ್ಭಗಳನ್ನುಸರಿಸಿ ಮಾತನ್ನು ಇತಿಮಿತಿಯಾಗಿ ಬಳಸಿದರೆ ನಮಗೆ ಮಾತ್ರವಲ್ಲ ನಮ್ಮ ಸುತ್ತಮುತ್ತಲಿನ ವರೆಗೂ ಸಹಾಯವಾದೀತು ಅಲ್ಲವೇ?!
************************************