ಕಾವ್ಯಯಾನ
ಕಾವ್ಯಯಾನ
ಎಂ. ಆರ್. ಅನಸೂಯ
ಎಳೆದುಕೊಳ್ಳುವುದು
ಹೊಳೆಯ ಸುಳಿಯಂತೆ
ಒಳ ಬಂದಂತಲ್ಲ ಹೊರ ಹೋಗುವುದು !
ಅಂಗೈಲಿ ಸಗ್ಗ ತೋರುವ ಬಿಸಿಲ್ಗುದುರೆ
ತನ್ನದೆಲ್ಲವ ಹೀರಿ
ಮುನ್ನಡೆವ ಕವಲ ಕುಡಿಗಳ
ಭಾರ ಹೊರಲು
ಬೇಸರಿಸಲಿಲ್ಲ ಮರದ ಬೇರು
ಕೊಟ್ಟಷ್ಟು ಪಡೆಯುವ
ಬೇರುಗಳಿಗೆ
ರಮ್ಯ ಚೈತ್ರದ ಸೊಗಸ ಕಾಣುವ
ಕನಸು ನನಸಾಗವುದೇ ಇಲ್ಲ !
ಕೊಡುವವರ ಕಾಡುವ ಮಾಯೆ
ಪಡೆದವರ ಬಳಿಯಿರಲಾರಳು
ಆಪ್ತರಿಲ್ಲದ ಆನಾಥ ಭಾವ
ವ್ಯಾಮೋಹದ ನೋವಿಗೆ.
ಬೇಕೆನಿಸುವುದು
ನಿರ್ಜನ ಏಕಾಂತ ಮಹಾ ಮೌನ
ಬದುಕಿನ ಮಹಾಪ್ರಸ್ಥಾನ
ಕೊಟ್ಟಷ್ಟೂ
ಅಕ್ಷಯ ಮಮಕಾರದ ಮನ .
ನುಂಗುತ್ತಾ ತನ್ನೆಲ್ಲಾ ದುಮ್ಮಾನ
ದೂರ ಸರಿದವರ ಸಮ್ಮಾನ
ಬಯಸುವುದೆ
ಮಮಕಾರದ ಜಾಯಮಾನ
******
ಚೈತ್ರ ಕಾಣುವ ಕನಸು ನನಸಾಗದ ಬೇರು…. ಆಪ್ತರಿಲ್ಲದ ಅನಾಥ ಭಾವ ವ್ಯಾಮೋಹ ದ ನೋವಿಗೆ….ಮಮಕಾರ ಎಂದರೆ ಇದೇನಾ…. ಸೊಗಸಾದ ಸಾಲುಗಳು… ಚೆಂದ ಇದೆ ಮೇಡಂ ಅಭಿನಂದನೆಗಳು