ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—36

ಆತ್ಮಾನುಸಂಧಾನ

ಆತ್ಮೀಯ ಗೆಳೆಯನಾದ ಕೃಷ್ಣಮೂರ್ತಿ ಹೆಗಡೆ

Bonds of Friendship Painting by Shelby McQuilkin | Saatchi Art

ನಾನು ಎಂ.ಎ. ದ್ವಿತೀಯ ವರ್ಷದ ಓದಿಗಾಗಿ ಧಾರವಾಡಕ್ಕೆ ಹೊರಡಲು ಕಾರಣಾಂತರಗಳಿಂದ ಕೆಲವು ದಿನಗಳು ವಿಳಂಬವಾಯಿತು. ಧಾರವಾಡಕ್ಕೆ ಬಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿರುವ ನಿಜಲಿಂಗಪ್ಪ ಹಾಸ್ಟೆಲ್ಲಿನಲ್ಲಿ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ನನ್ನ ಪ್ರವೇಶ ಪ್ರಕ್ರಿಯೆ ವಿಳಂಬವಾಗಿತ್ತು. ಅದನ್ನು ಪೂರೈಸಿಕೊಂಡು ಹಾಸ್ಟೆಲ್ಲಿನಲ್ಲಿ ನನ್ನ ರೂಮು ಪಡೆಯಬೇಕಿತ್ತು. ಆದರೆ ನಾನು ಹದಿನೈದು ದಿನಗಳಿಗೂ ಮೀರಿ ವಿಳಂಬ ಮಾಡಿ ಧಾರವಾಡಕ್ಕೆ ಬಂದಿದ್ದೆ. ಆಗ ಹಾಸ್ಟೆಲ್ಲಿನ ಒಂದು ಕೊಠಡಿಯೂ ಖಾಲಿ ಇಲ್ಲದಂತೆ ಎಲ್ಲವೂ ತುಂಬಿ ಹೋಗಿದ್ದವು.

                ತಾತ್ಕಾಲಿಕವಾಗಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಂಡು ನಾನು ಕನ್ನಡ ವಿಭಾಗದ ಪ್ರವೇಶ ಪಡೆದುಕೊಳ್ಳಲು ಪ್ರಯತ್ನಿಸಬೇಕಿತ್ತು. ಒಂದೆರಡು ದಿನಗಳಾದರೂ ನಗರದಲ್ಲಿ ವಸತಿ ಮಾಡುವುದು ಅನಿವಾರ್ಯವಾಯಿತು. ಅದು ನನ್ನಂಥವನಿಗೆ ಖರ್ಚಿನ ಸಂಗತಿ. ಕಷ್ಟವೆನ್ನಿಸಿತು.

                ಈ ಅಸಹಾಯಕ ಸಂದರ್ಭದಲ್ಲಿ ನನ್ನ ಜೈಹಿಂದ್ ಹೈಸ್ಕೂಲು ಸಹಪಾಠಿ ಪ್ರಭು ಎಂಬಾತ ಸಹಾಯಕ್ಕೆ ನಿಂತ. (ಕ್ಷಮೆ ಇರಲಿ ಅವನ ಹೆಸರು ಮರೆತಿದ್ದೇನೆ). ಅಂಕೋಲೆಯ ಮಠಾಕೇರಿಯ ಜಿ.ಎಸ್.ಬಿ ಸಮುದಾಯದ ಪ್ರಭು ನನಗೆ ಹೈಸ್ಕೂಲು ದಿನಗಳಲ್ಲಿ ತುಂಬಾ ಆತ್ಮೀಯನಾಗಿದ್ದವನು. ಆತ ನನಗೆ ವಾಸ್ತವ್ಯದ ವ್ಯವಸ್ಥೆಯಾಗುವವರೆಗೆ ನಿಜಲಿಂಗಪ್ಪ ಹಾಸ್ಟೆಲ್ಲಿನ ತಮ್ಮ ಕೊಠಡಿಯಲ್ಲಿಯೇ ಉಳಿಯಲು ಅವಕಾಶ ನೀಡಿದ. ಇದಕ್ಕೆ ಅವನ ರೂಮ್‌ಮೇಟ್ ಕೂಡ ಆಕ್ಷೇಪವೆತ್ತದೆ ಸಹಕರಿಸಿದ. ಇಬ್ಬರ ಉಪಕಾರ ಬಹು ದೊಡ್ಡದು.

                ವಿಭಾಗದ ಪ್ರವೇಶ ಪ್ರಕ್ರಿಯೆ ಮುಗಿಸಿಕೊಂಡೆ. ನಿಜಲಿಂಗಪ್ಪ ಹಾಸ್ಟೆಲ್ಲಿನಲ್ಲಿ ನನಗೆ ಕೊಠಡಿ ದೊರೆಯುವ ಸಾಧ್ಯತೆ ಇರಲಿಲ್ಲ. ಮತ್ತೆ ಮೊದಲಿನ ಶಾಲ್ಮಲಾ ಹಾಸ್ಟೆಲ್ಲಿನತ್ತಲೇ ನಾನು ಮುಖ ಮಾಡಬೇಕಾಯಿತು. ಅಲ್ಲಿ ಕೊಠಡಿಗಳು ಖಾಲಿ ಇದ್ದವಾದರೂ ನಾನು ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರಿಂದ ಅಲ್ಲಿ ನನಗೆ ಸುಲಭ ಪ್ರವೇಶ ಸಾಧ್ಯವಿರಲಿಲ್ಲ. ಹಾಸ್ಟೆಲ್ಲಿನ ಆಡಳಿತ ವ್ಯವಸ್ಥೆಗಾಗಿ ‘ಬಳ್ಳಾರಿ’ ಎಂಬ ಸಜ್ಜನ ವ್ಯಕ್ತಿಯೊಬ್ಬರು ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವರ್ಷದ ವಾಸ್ತವ್ಯದಲ್ಲಿಯೇ ಅವರ ನಿಕಟ ಪರಿಚಯವಿದ್ದುದರಿಂದ ಅವರನ್ನು ಕಂಡು ನನ್ನ ಅಸಹಾಯಕ ಸ್ಥಿತಿಯನ್ನು ನಿವೇದಿಸಿಕೊಂಡೆ. ಅವರು ಹಾಸ್ಟೆಲ್ಲಿನ ವಾರ್ಡನ್ ಸಾಹೇಬರು ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ಆರ್.ಟಿ. ಜಂಗಮ ಎಂಬುವವರು. ಅವರಲ್ಲಿ ವಿನಂತಿಸಿಕೊಳ್ಳಿ ಅನುಮತಿ ನೀಡಿದರೆ ಪ್ರವೇಶ ದೊರೆಯಬಹುದು ಎಂದು ಸಲಹೆ ನೀಡಿದರು.

                ನಾನು ನೇರವಾಗಿ ಡಾ. ಆರ್.ಟಿ.ಜಂಗಮ ಅವರು ವಾಸಿಸುತ್ತಿದ್ದ ನಿವಾಸಕ್ಕೆ ತೆರಳಿ ನನ್ನ ವಿನಂತಿಯ ಅರ್ಜಿಯನ್ನು ನೀಡಿ ಕೈಮುಗಿದೆ. ತುಂಬ ಸಹೃದಯಿಯಾದ ಜಂಗಮ ಸಾಹೇಬರು ಒಂದೇ ಕ್ಷಣದಲ್ಲಿ ನನ್ನ ಅರ್ಜಿಗೆ ಮಂಜೂರಿಯ ಶಿಫಾರಸು ಬರೆದು ಸಹಿ ಮಾಡಿಕೊಟ್ಟರು.

                ನನಗೆ ಶಾಲ್ಮಲಾ ಹಾಸ್ಟೆಲ್ಲಿನಲ್ಲಿ ಪ್ರವೇಶ ದೊರೆಯಿತು. ಗೆಳೆಯ ಪ್ರಭು ಮತ್ತು ಅವನ ಸಹವರ್ತಿಗೆ ಧನ್ಯವಾದ ಹೇಳಿ ನನ್ನ ಲಗೇಜಿನೊಂದಿಗೆ ಶಾಲ್ಮಲಾ ಹಾಸ್ಟೆಲ್ಲಿಗೆ ಬಂದು ನೆಲೆಸಿದೆ.

                ತರಗತಿಯ ಪಾಠ ಪ್ರವಚನಗಳಿಗಾಗಿ ಕನ್ನಡ ವಿಭಾಗಕ್ಕೆ ಬಂದಾಗ ಗೆಳೆಯ ಕೃಷ್ಣಮೂರ್ತಿ ಹೆಗಡೆ ಒಂದು ಅಧ್ವಾನ ಮಾಡಿಕೊಂಡ ಸಂಗತಿ ತಿಳಿಯಿತು.

                ಉತ್ತರ ಕನ್ನಡ ಜಿಲ್ಲೆಯ ಗೆಳೆಯರ ಗುಂಪಿನಲ್ಲಿ ಒಂದಿಬ್ಬರನ್ನು ಹೊರತು ಪಡಿಸಿದರೆ ಎಲ್ಲರೂ ಎಂ.ಎ ಮೊದಲ ವರ್ಷದ ಅಂತಿಮ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದೆವು. ಅತ್ಯಂತ ಆಘಾತಕರ ಸಂಗತಿಯೆಂದರೆ ಮೂರನೆಯ ದರ್ಜೆಯಲ್ಲಿ ಪಾಸಾದ ಇಬ್ಬರಲ್ಲಿ ಕೃಷ್ಣ ಮೂರ್ತಿಯೂ ಒಬ್ಬನಾಗಿದ್ದ.

                ಬಿ.ಎ. ಪದವಿ ಪರೀಕ್ಷೆಯಲ್ಲಿ ಸ್ವರ್ಣ ಪದಕ ಪಡೆದ ನನ್ನ ಗೆಳೆಯ ಎಂ.ಎ ಮೊದಲ ವರ್ಷದಲ್ಲಿ ಇಂಥ ಸೋಲು ಕಂಡಿರುವುದು ಸೋಜಿಗದ ಸಂಗತಿಯೇ ಹೌದು.

                ಕೃಷ್ಣಮೂರ್ತಿ ತನ್ನ ಅಂಕಪಟ್ಟಿಯನ್ನು ಕಂಡೊಡನೆಯೆ ಕೆಂಡಾ ಮಂಡಲನಾಗಿ ನೇರ ವಿಭಾಗ ಮುಖ್ಯಸ್ಥರಿಂದ ಡಾ. ಆರ್.ಸಿ ಹಿರೇಮಠ ಅವರ ಛೇಂಬರಿಗೆ ನುಗ್ಗಿದ್ದಾನೆ. ತನ್ನ ಅಂಕಪಟ್ಟಿಯನ್ನು ಅವರ ಮುಂದಿಟ್ಟು ತನಗಾದ ಅನ್ಯಾಯದ ಕುರಿತು ಕೋಪದಿಂದಲೇ ವಿಚಾರಿಸಿದ್ದಾನೆ. ತಾನು ಕರ್ನಾಟಕ ವಿಶ್ವವಿದ್ಯಾಲಯವನ್ನು ಬಿಟ್ಟು ಕೊಲ್ಲಾಪುರ ವಿಶ್ವವಿದ್ಯಾಲಯಕ್ಕೆ ಹೋಗಿ ಶಿಕ್ಷಣ ಮುಂದುವರಿಸುವೆನೆಂದು ಅಲ್ಲಿ ಪ್ರಥಮ ದರ್ಜೆಯಲ್ಲೇ ಎಂ.ಎ. ಪದವಿ ಪಡೆಯುವೆನೆಂದೂ ಹೇಳಿ ಅವರೆದುರಿನಲ್ಲೆ ತನ್ನ ಅಂಕಪಟ್ಟಿಯನ್ನು ಹರಿದು ಚೆಲ್ಲಿದ್ದಾನೆ.

                ಡಾ. ಆರ್.ಸಿ. ಹಿರೇಮಠ ಅವರು ಮೂಲತಃ ಸ್ವಾಮಿಗಳ ಮನೋಧರ್ಮದವರು. ಶಾಂತರಾಗಿಯೇ ಕೃಷ್ಣಮೂರ್ತಿ ಹೆಗಡೆಯವರ ಆಕ್ಷೇಪಣೆಗಳನ್ನು ಆಲಿಸಿ ಅಷ್ಟೇ ಶಾಂತರೀತಿಯಲ್ಲಿ ಅವರಿಗೆ ಸಮಾಧಾನವನ್ನು ಹೇಳಿದ್ದಾರೆ. ಅವರ ಸಂತೈಸುವಿಕೆಯ ಫಲವಾಗಿ ಕೃಷ್ಣಮೂರ್ತಿ ಹೆಗಡೆ ಕರ್ನಾಟಕ ವಿಶ್ವವಿದ್ಯಾಲಯಲದಲ್ಲೇ ಮುಂದುವರಿಯಲು ತೀರ್ಮಾನಿಸಿ ತರಗತಿಗೆ ಬರಲಾರಂಭಿಸಿದ್ದಾನೆ…. ಇತ್ಯಾದಿ ಸಂಗತಿಗಳು ನನಗೆ ಗೆಳೆಯರಿಂದ ತಿಳಿದುಬಂತು.

                ಕೃಷ್ಣಮೂರ್ತಿ ಹೆಗಡೆ ಧಾರವಾಡದಲ್ಲೇ ಮುಂದುವರಿದುದಕ್ಕೆ ನಮಗೆಲ್ಲ ಸಂತೋಷವಾಯಿತು. ಆದರೆ ನಾವೆಲ್ಲರೂ ಕೃಷ್ಣಮೂರ್ತಿ ನಮ್ಮೊಡನೆ ಇರುವಾಗ ಯಾವ ಕಾರಣಕ್ಕೂ ಯಾರದೇ ಆದರೂ ಪರೀಕ್ಷೆಯ ಅಂಕಗಳ ಕುರಿತು ಮಾತೇ ಆಡದಿರುವಂತೆ ನಾವು ಎಚ್ಚರ ವಹಿಸಲೇ ಬೇಕಾಯಿತು.

                ಶಾಲ್ಮಲಾ ಹಾಸ್ಟೆಲ್ಲಿನಲ್ಲಿ ಎರಡನೆಯ ವರ್ಷ ನನ್ನ ಕೊಠಡಿಯಲ್ಲಿ ಸಂಗತಿಯಾಗಿ ಇದ್ದವನು ಸಣ್ಣಕ್ಕನವರ್… ಎಂದೆನೋ ನೆನಪು. ಆತ ಅದೇ ವರ್ಷ ಬೇಸಿಗೆ ರಜೆಯಲ್ಲಿ ಮದುವೆ ಮಾಡಿಕೊಂಡು ಎಂ.ಎ ಅಂತಿಮ ವರ್ಷದ ಓದಿಗಾಗಿ ಧಾರವಾಡಕ್ಕೆ ಬಂದಿದ್ದ. ಬಹುಶಃ ಇದೇ ಕಾರಣದಿಂದ ವಾರಾಂತ್ಯದಲ್ಲಿ ಹುಬ್ಬಳ್ಳಿಯ ಕಡೆಯ ತನ್ನೂರಿಗೆ ಹೊರಟು ಬಿಡುತ್ತಿದ್ದ. ಆರಂಭದ ಒಂದೆರಡು ತಿಂಗಳು ಹೀಗೆ ಊರಿಗೆ ಹೋಗಿ ಬರುತ್ತಿದ್ದವನು ಮಧ್ಯಂತರದ ದೀರ್ಘ ರಜೆಯಿಂದ ತಿರುಗಿ ಬರುವುದನ್ನೇ ಮರೆತಂತೆ ಉಳಿದುಬಿಟ್ಟಿದ್ದ.

                ಹೀಗಾಗಿ ಕೊಠಡಿಯಲ್ಲಿ ನಾನೊಬ್ಬನೇ ಆಗಿ ತುಂಬ ಸ್ವತಂತ್ರನಾಗಿ ಉಳಿದುಕೊಂಡಿದ್ದೆ. ಗೆಳೆಯ ಕೃಷ್ಣಮೂರ್ತಿ ಹೆಗಡೆ ತಾನು ವಾಸಿಸುತ್ತಿದ್ದ “ಶಿಂತ್ರಿ ಬಿಲ್ಡಿಂಗ್” ಎಂಬ ಕಟ್ಟಡದಲ್ಲಿ ಏನೋ ತಕರಾರು ಮಾಡಿಕೊಂಡು ಹೊರ ನಡೆದು ವಸತಿ ವ್ಯವಸ್ಥೆಗಾಗಿ ಹುಟುಕಾಟ ನಡೆಸುತ್ತಿದ್ದ. ಕಾಕತಾಳೀಯವಾಗಿ ನಾನು ಹಾಸ್ಟೆಲ್ಲಿನ ಕೋಣೆಯಲ್ಲಿ ಒಬ್ಬನೇ ಇದ್ದುದನ್ನು ಗಮನಿಸಿದ ಕೃಷ್ಣಮೂರ್ತಿ ತನ್ನ ಲಗೇಜುಗಳೊಂದಿಗೆ ನನ್ನಲ್ಲಿಗೆ ಬಂದು ವಾಸಿಸಲು ಆರಂಭಿಸಿದ. ನನ್ನ ಪಾರ್ಟನರ್ ಬಂದರೆ ಬಿಟ್ಟು ಬೇರೆಡೆಗೆ ಹೋಗುವ ಕರಾರಿನೊಂದಿಗೆ ಬಂದನಾದರೂ ಸಣ್ಣಕ್ಕನವರ್ ಮರು ಆಗಮನ ಆಗದೇ ಇರುವುದರಿಂದ ಕೃಷ್ಣಮೂರ್ತಿ ಪರೀಕ್ಷೆಯವರೆಗೂ ಜೊತೆಗಿರಲು ಸಾಧ್ಯವಾಯಿತು.

                ಅಲ್ಲಿಂದ ಮುಂದಿನ ದಿನಗಳು ಕೃಷ್ಣಮೂರ್ತಿ ಹೆಗಡೆ ಎಂಬ ಬುದ್ಧಿವಂತ ಮುಂಗೋಪಿ, ಬಿಳಿಯ ಸುಂದರಾಕೃತಿಯ ಗೆಳೆಯನೊಡನೆ ನನ್ನ ಹಾಸ್ಟೆಲ್ ವಾಸ್ತವ್ಯದ ದಿನಗಳು ವಿಭಿನ್ನ ಅನುಭವಗಳಿಗೆ ಪಕ್ಕಾಗುತ್ತ ನನ್ನ ವಿವೇಕವನ್ನು ಬೆಳಗುವಲ್ಲಿ ನೆರವಾದವು.

                ನಾವೆಲ್ಲ ತಿಳಿದುಕೊಂಡಂತೆ ಕೃಷ್ಣಮೂರ್ತಿ ಸರಳವಾಗಿರಲಿಲ್ಲ. ಬಹಳಷ್ಟು ಓದಿಕೊಳ್ಳುವುದು ಅವನಿಗೊಂದು ಚಟವೇ ಆಗಿತ್ತು. ಇದು ನನಗೂ ಪ್ರಯೋಜನಕಾರಿಯಾಯಿತು. ಪರೀಕ್ಷೆಗೆ ಸಂಬಂಧವಿಲ್ಲದ ಅನೇಕ ಸಾಹಿತ್ಯ ಕೃತಿಗಳನ್ನು ಓದುವ, ಚರ್ಚಿಸಿ ಒಂದು ಅಭಿಪ್ರಾಯ ಸಂಗ್ರಹಿಸಿ ಅಭಿವ್ಯಕ್ತಿಸುವ ಅರಿವು ಹೆಚ್ಚಿಸಿಕೊಳ್ಳಲು ನನಗೆ ಈ ಸಂದರ್ಭ ತುಂಬ ಪ್ರಯೋಜನಕಾರಿಯೇ ಆಯಿತು.

                ಆದರೆ ಕೃಷ್ಣಮೂರ್ತಿ ಹುಟ್ಟು ಬ್ರಾಹ್ಮಣ. ಯಜ್ಞೋಪವೀತ ಧಾರಣೆ ಮಾಡಿದವನು. ಅವನ ಬ್ರಾಹ್ಮಣ ಸಂಸ್ಕಾರಕ್ಕೆ ತಕ್ಕುದಾಗಿ ಅವನ “ಓಂ ಭರ‍್ಬುವಸ್ವಃ…”ದಂಥ ಗಾಯತ್ರಿ ಮಂತ್ರ ಜಪ ಸೂರ್ಯಾಸ್ತವಾಗಿ ದೀಪ ಹೊತ್ತಿಸುವಾಗಿನ “ದೀಪಮೂಲೇ ಸ್ಥಿತೋ ಬ್ರಹ್ಮ…” ಊಟಕ್ಕೆ ಕುಳಿತಾಗ ಸಣ್ಣಗೆ ಗುನುಗುವ “ಅನ್ನಪೂರ್ಣೇ ಸದಾ ಪೂರ್ಣೇ…” ಇತ್ಯಾದಿ ಮಂತ್ರಗಳೆಲ್ಲ ಕ್ರಮೇಣ ನನಗೂ ಕಂಠಪಾಠವಾಗಿ ಅವನೊಡನೆ ಶೃತಿ ಸೇರಿಸಲು ಆರಂಭಿಸಿದೆ. ಆ ಎಲ್ಲ ಮಂತ್ರಗಳು ಈಗಲೂ ನನ್ನ ಜೊತೆಗಿವೆ. ಗೆಳೆಯ ಕೃಷ್ಣ ಮೂರ್ತಿಯ ವ್ಯಕ್ತಿತ್ವದಲ್ಲಿ ನನಗೆ ತೀರ ವಿಕ್ಷಿಪ್ತವಾಗಿ ಕಂಡ ಸಂಗತಿಯೆಂದರೆ ಅವನ ಮಾಂಸಾಹಾರ ಪ್ರೀತಿ.

                ಅದರ ಕುರಿತು ಮುಂದೆ ಪ್ರಸ್ತಾಪಿಸುವೆ…

********************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

4 thoughts on “

  1. ಗುರೂಜಿ,
    ಮತ್ತೆ ಗಲಿಬಿಲಿ ಎದುರಾಯಿತು, ನಿಮ್ಮ M. A. ಓದು ಸಾಥ್ ಸಮೂನಧರ್ ದಾಟಿ ಬರಲು ಬಹಳ ಶ್ರಮ ಪಟ್ಟಿದ ಹಾಗೆ ಅನಿಸುತ್ತದೆ. ನೀವು ನಿಮ್ಮ ಮುಗ್ಧತೆ ಮತ್ತು ತಾಳ್ಮೆಯ ಸ್ವಭಾವದಿಂದ ಎಲ್ಲ ಸ್ನೇಹಿತರೊಂದಿಗೆ ಬೆರೆತು ಎಲ್ಲವನ್ನೂ ಗೆದ್ದು ಮುಂದೆ…….
    ಮುಂದಿನ ಸಂಚಿಕೆ
    ಎದುರಾಗಿರುವೆ…..

  2. ಸಣ್ಣಕ್ಕನವರ್ ಅಂದರೆ ಶಿರ್ಶಿ ಕಾಲೇಜಿನಲ್ಲಿ ಇದ್ದರಲ್ಲ,ಅವರಾ ಸರ್? ಕೃಷ್ಣಮೂರ್ತಿಯವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ.

Leave a Reply

Back To Top