ಒಲವಿನ ಮಧು ಬಟ್ಟಲು ಗಜಲ್ ಗಳು

ಪುಸ್ತಕ ಸಂಗಾತಿ

ಒಲವಿನ ಮಧು ಬಟ್ಟಲು  ಗಜಲ್ ಗಳು

ಪುಸ್ತಕ ಪರಿಚಯ

ಕೃತಿ ಹೆಸರು…… ಒಲವಿನ ಮಧು ಬಟ್ಟಲು  ಗಜಲ್ ಗಳು

ಲೇಖಕರುಶ್ರೀಮತಿ ಭಾಗ್ಯವತಿ ಕೆಂಭಾವಿ ಯಾದಗಿರಿ ಮೊ.೯೯೦೦೭೧೬೩೬೩

ಪ್ರಕಾಶನ…. ಬಿಸಿಲನಾಡು ಪ್ರಕಾಶನ ಕಲಬುರಗಿ ಮೊ.೯೪೮೧೦೦೦೯೪

ಪ್ರಥಮ ಮುದ್ರಣ೨೦೨೦

ಶ್ರೀ ಮತಿ ಭಾಗ್ಯವತಿ ಕೆಂಭಾವಿ ಯವರು ವೃತ್ತಿಯಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರು,ಪ್ರವೃತ್ತಿಯಲ್ಲಿ ಅವರೊಬ್ಬ ಸಾಹಿತಿಗಳು.ಈಗಾಗಲೇ “ವೀರಅಮರಸುತೆ” ಎಂಬ ಕಾವ್ಯ ನಾಮದಿಂದ ಸಿರಿಸೊಡರು ಎಂಬ ಕವನ ಸಂಕಲನ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದಾರೆ. ಅವರ ಅನೇಕ ಕವನಗಳು ,ವಚನಗಳು ,ಲೇಖನಗಳು ಪತ್ರಿಕೆಯಲ್ಲಿ ಪ್ರಕಟನೆಯಾಗಿವೆ.ಈಗ ಇವರು ಭಾಗ್ಯ ಎಂಬ ತಖಲ್ಲುಸನಾಮ( ಕಾವ್ಯ ನಾಮ) ದಿಂದ ಗಜಲ್ ಗಳನ್ನು ರಚಿಸುತ್ತಿದ್ದಾರೆ.ಈಗ ಒಲವಿನ ಮಧುಬಟ್ಟಲು ಎಂಬ ಪ್ರಥಮ  ಗಜಲ್ ಸಂಕಲನವನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿ ಓದಲು ಗಜಲ್ ಪ್ರಿಯರ ಕೈಗೆ ಕೊಟ್ಟಿದ್ದಾರೆ.

ಗಜಲ್ ಎನ್ನುವ ಪದ ಅರಬ್ಬೀ ಶಬ್ದವಾಗಿದೆ, ಇದರ ಅರ್ಥ ಪ್ರೇಮಿಗಳ ಹೃದಯದ ಪಿಸುಮಾತು ಮತ್ತೆ ಮತ್ತೆ ಹೃದಯವನ್ನು ಕಾಡುವ,ಹಂಬಲಿಸುವ ಕಾವ್ಯ, ಇದು ಅರಬ್ಬೀ ಬಾಷೆಯಿಂದ ಇರಾನ್ ದೇಶದ ಪಾಸಿ೯ ಭಾಷೆಗೆ ಹೋಗಿ ಅಲ್ಲಿ ಕಾವ್ಯ ವಾಗಿ ಬೆಳೆಯಿತು.ಭಾರತಕ್ಕೆ ಬಂದ ಈ ಗಜಲ್ ಕಾವ್ಯ ಉದು೯ ಭಾಷೆಯಲ್ಲಿ ಬೆಳೆದು ಓದುಗರ ಮನ ಗೆದ್ದು ಉದು೯ ಕಾವ್ಯದ ರಾಣಿ ಎಂದು ಪ್ರಸಿದ್ಧಿ ಹೊಂದಿತು.ಗಜಲ್ ಸಾಹಿತ್ಯ ರಚನೆ ಉದು೯ ಮತ್ತು ಹಿಂದಿ ಭಾಷೆಯಲ್ಲಿ ಬೆಳೆಯುವ ಜೊತೆಗೆ ಭಾರತದ ಅನ್ಯ ಭಾಷೆಯಲ್ಲಿ ಅನುವಾದಿತ ಗಜಲ್ ಗಳ ರಚನೆ ನಡೆಯಿತು.ಅದೇ ರೀತಿಯಾಗಿ ಉದು೯ ಮತ್ತು ಹಿಂದಿ ಗಜಲ್ ಗಳು ಕನ್ನಡಕ್ಕೆ ಅನುವಾದ ಗೊಂಡವು. ಶಾಂತರಸರು ಕನ್ನಡದಲ್ಲಿ ಗಜಲ್ ರಚಿಸುವ ಛಂದಸ್ಸು ಪರಿಚಯಿಸಿದರು,ಅವರು ತಿಳಿಸಿದ ಛಂದಸ್ಸು ಬಳಿಸಿ ಇಂದು ಕನ್ನಡದಲ್ಲಿ ಗಜಲ್ ಗಳು ರಚನೆಯಾಗುತ್ತಿವೆ.

ಕನ್ನಡದ ಗಜಲ್ ಗಳ ರಚನೆಯಲ್ಲಿ ಕೆಲವು ಉದು೯ಗಜಲ್ ಗಳ ಸಾಂಪ್ರದಾಯಿಕ ಪದಗಳು ತಮ್ಮ ಸ್ಥಾನವನ್ನು ಹಿಡಿದಿಟ್ಟುಕೊಂಡಿವೆಂದು ಹೇಳಬಹುದು.ಅವು ಯಾವೆಂದರೆ ಮಧು,ಮಧುಬಟ್ಟಲು,ಮಧುಶಾಲೆ,ಸಾಕಿ ಇವುಗಳನ್ನು ಕನ್ನಡ ಗಜಲ್ ಗಳಲ್ಲಿ ಹೇರಳವಾಗಿ ಬಳಿಸಲಾಗುತ್ತದೆ. ಮಧು ,ಮಧುಬಟ್ಟಲು ಇವು ದೇಹಕ್ಕೆ ಅಮಲು ತರಿಸುವ ಶರಾಬ ಆಗಿರದೆ ಆತ್ಮವನ್ನು ಪರವಶ ಗೊಳಿಸುವ ಆಧ್ಯಾತ್ಮಿಕ ಪದಗಳಾಗಿವೆ,ಅದರಂತೆ ಮಧುಶಾಲೆ,ಸಾಕಿ ಇವು ಕೂಡ ಅನುಭಾವದ ಪದಗಳಾಗಿವೆ.

ಹಿಂದಿಯ ಶ್ರೇಷ್ಠ ಕವಿ ಡಾ.ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ಓದಿದವರಿಗೆ ಇದರ ಕಲ್ಪನೆ ಇರುತ್ತದೆ ,ಅಲ್ಲಿ ಅವರು ಭಕ್ತಿ ರಸ,ಪ್ರೇಮರಸ,ವೆಂಬ ರೂಪದೊಂದಿಗೆ ಕಾವ್ಯ ರಚಿಸಿದ್ದಾರೆ ಸಾಕಿ ಆತ್ಮಸಂಗಾತಿ,ಸ್ಫೂತಿ೯ಯ ದೇವರ ಸ್ವರೂಪ ವೆಂಬ ಭಾವದಲ್ಲಿ ಬಳಸಿದ್ದಾರೆ.

ಡಾ.ಧರಣೀದೇವಿ ಮಾಲಗತ್ತಿ ಯವರು  ಶ್ರೀ ಲಕ್ಕೂರು ಆನಂದ ಅವರು ಕನ್ನಡಕ್ಕೆ ಅನುವಾದಿಸಿದ ಮಧುಶಾಲೆ ಸಂಕಲನದಲ್ಲಿ ಹೀಗೆ ವಿಶ್ಲೇಷಣೆ ಮಾಡಿದ್ದಾರೆ.

ಮಧು…ಪ್ರೇಮ ಸರ,ಭಕ್ತಿ ರಸ,ವಾಗಿ ಓದುಗನನ್ನು ಪರವಶ ಗೊಳಿಸುತ್ತದೆ.ಭಕ್ತ ಪ್ರಿಯತಮೆಯಾಗಿ ದೇವರು ಪ್ರಿಯತಮನಾಗಿ ಪ್ರಪಂಚ ಮಧುಶಾಲೆಯಾಗಿ ,ಕವಿ ನಲ್ಲೆಯಾಗಿ ಓದುಗ ನಲ್ಲನಾಗಿಯೂ ಪುಸ್ತಕವೇ ಮಧುಶಾಲೆಯಾಗಿಯೂ ಕಾಣಸಿಗುತ್ತದೆ.ಕವಿ ಭಾವವೇ ಸಾಕಿಯಾಗಿ ಬರುವ ಕಲ್ಪನೆ ಹೃದ್ಯವಾಗಿದೆ,ಮಧುಪಾನಿ ಮತ್ತು ಸಾಕಿಯ ಸಂಕೇತ ದೇವರು ಭಕ್ತನದ್ದೆನ್ನುವುದನ್ನೂ ಮೀರಿ ಓದುಗ ದೇವರಾಗುತ್ತಾನೆ,. ಮಧು, ಮಧುಶಾಲೆ ,ಸಾಕಿ ,ಮಧುಪಾತ್ರೆ ಈ ಪದಗಳ ಜಾಗದಲ್ಲಿ ಕಾವ್ಯ,ಪುಸ್ತಕ, ಕವಿ,ಓದುಗ ಇತ್ಯಾದಿ ಅನ್ವಯಿಸುತ್ತಾ ಹೋದಾಗ ಬತ್ತಿನ ಬಯಕೆ ,ತೀವ್ರವಾದ ಜ್ಞಾನದ ದಾಹವಾಗಿ ಕಾಣಿಸುತ್ತದೆ.ಇದು ಡಾ.ಧರಣೀ ದೇವಿ ಮಾಲಗತ್ತಿ ಯವರ ವಿವರಣೆ.

ಗಜಲ್ ರಚನೆಯಲ್ಲಿ ಪ್ರೀತಿವೆಂಬುದು ವಿಶಿಷ್ಟವಾಗ ಸ್ಥಾನ ಪಡೆದಿದೆ.ಅದರಂತೆ ಸಾಕಿ ಎಂಬ ಪದದ ನಿಘಂಟು ಅರ್ಥ ಮಧುಶಾಲೆಯಲ್ಲಿ  ಮಧು ಹಾಕುವ ಅಥವಾ ಹಾಕುವವಳು,ಇಲ್ಲಿ ಈ ಪದಕ್ಕೆ ಲಿಂಗ ವಿಲ್ಲ.ಸಾಕಿ ಎಂಬುದು ಸ್ಪೂತಿ೯ಯನ್ನು ತುಂಬುವ ಆತ್ಮ ವೆಂಬ ಕಲ್ಪನೆ ಇರುತ್ತದೆ.ಮಧುಶಾಲೆ ಕವಿಗಳು ಕುಳಿತು ಚಚೆ೯ ಮಾಡುವ ಜ್ಞಾನ ಮಂದಿರ ವಾಗಿರುತ್ತದೆಂಬ ಕಲ್ಪನೆ ಗಜಲ್ ಸಾಹಿತ್ಯದಲ್ಲಿ ವ್ಯಕ್ತವಾಗುತ್ತದೆ.

ಗಜಲ್ ಗಳು ಹೃದಯದ ಕ್ರಿಯೆಯಾದ ಪ್ರೀತಿ,ಪ್ರೇಮ,ಪ್ರಣಯ,ಅನುರಾಗ ,ವಿರಹ,ಕಾಯುವಿಕೆ ,ಧ್ಯಾನ, ಸಂದಾನ,ಭಕ್ತ ದೇವರ ನಡುವಿನ ಸಂವಾದ,ಲೌಕಿಕ ಪ್ರೀತಿಯಿಂದ ಅಲೌಕಿಕ ಕಡೆ ಕೊಂಡ್ಯೊಯುವ ಮಾರ್ಗ ವಾಗಿದೆ.ಧ್ಯಾನಿಸುವ,ಪರವಶವಾಗುವ,ತನ್ಮಯವಾಗುವಸೂಫಿ ಕಾವ್ಯವೇ ಗಜಲ್ ಎಂದು ಹೇಳಬಹುದು.ಪ್ರೀತಿ ವಿರಹಗಳಲ್ಲದೆ ಇಂದು ಅನೇಕ ಸಮಾಜಿಕ ವಿಷಯದಮೇಲೆ ಗಜಲ್ ಗಳು ರಚನೆಯಾಗುತ್ತಿವೆ..

ಶ್ರೀ ಮತಿ ಭಾಗ್ಯವತಿ ಕೆಂಭಾವಿ ಯವರ ಒಲವಿನ ಮಧುಬಟ್ಟಲು ಎಂಬ ಸಂಕಲನದಲ್ಲಿ ಒಟ್ಟು ೪೦ ಗಜಲ್  ಗಳಿವೆ,ಈ ಮಧುಬಟ್ಟಲದಲ್ಲಿ ಪ್ರೇಮರಸ ತುಂಬ ಬಿಟ್ಟಿದ್ದಾರೆ, ಓದುಗ ಕುಡಿದಷ್ಟು ಮನ ಪರವಶವಾಗುತ್ತದೆ, ಇಲ್ಲಿಯ ಗಜಲ್ ಗಳಲ್ಲಿ ಕಾಂತಾಸಂಮಿತೆ ,ಮಿತ್ರಸಂಮಿತದಂತೆ ಉಪದೇಶದ ಹೊನಲಾಗಿ ನಿಲ್ಲುತ್ತವೆ.ಸ್ತ್ರೀ ಸಂವೇದನೆಗಳಿಗೆ ಹೊಸ ರೂಪ ಪಡೆದುಕೊಂಡಿವೆ,ಅವರ ಮೃದು ಭಾವವು ಓದುಗರ ಮನ ತಟ್ಟುತ್ತದೆ.ಈ ಸಂಕಲನದ ಗಜಲ್ ಗಳು ಓದುಗನನ್ನು ಪ್ರೀತಿ ,ಪ್ರೇಮ, ವಿರಹದ ಕಡಲಲಿ ತೇಲಿಸಿಕೊಂಡು ಹೋಗುತ್ತದೆ.ಓದುಗನು ನಿರಾಶೆಯಾಗದೆ ತನ್ಮಯನಾಗಿ ಓದಿನಲ್ಲಿ ಪರವಶನಾಗುತ್ತಾನೆ.

ಒಲವಿನ ಮಧುಬಟ್ಟಲು  ಸಂಕಲನಕ್ಕೆ ಗಜಲ್ ಗಳ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ ಗಜಲ್ ಕವಿಗಳಾದ ಡಾ.ಮಲ್ಲಿನಾಥ ತಳವಾರ ಕನ್ನಡ ಉಪನ್ಯಾಸಕರು ಕಲಬುರಗಿ ಇವರು ಸುದೀರ್ಘ ವಾದ ಮುನ್ನುಡಿ ಯನ್ನು ಬರೆದಿದ್ದಾರೆ.ಬೆನ್ನುಡಿಯನ್ನು ಡಾ.ರೋಲೆಕರ್ ನಾರಾಯಣ ಡಿ ಗುರುಗಳು ಬರೆದು ಬೆನ್ನು ತಟ್ಟಿದ್ದಾರೆ.ಮತ್ತು ಪ್ರಕಟನೆ ಪೂರ್ವದಲ್ಲಿಯೇ ಗಜಲ್ ಗಳನ್ನು ಓದಿ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂಕಲನದ ಮುಖ ಚಿತ್ರವು ಅಂದವಾಗಿದ್ದು ಒಳಗಿನ ರೇಖಾ ಚಿತ್ರಗಳು ಗಜಲ್ ಗಳ ಭಾವರ್ಕೆ ತಕ್ಕಂತೆ ಚಿತ್ರಿಸಿದ್ದಾರೆ. ಇವೆಲ್ಲವೂ ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ.

ಸಂಕಲನದಲ್ಲಿ ನನಗೆ ಮೆಚ್ಚಿಗೆ ಯಾದ ಗಜಲ್ ಗಳ ಮಿಸ್ರಾಗಳು

ಅನ್ಯಾಯ ಮೋಸ ವಂಚನೆಗಳಲಿ ನಲಗುತಿದೆ ಜಗವು

* ಮತ್ತೊಮ್ಮೆ ರಾಮ ರಾಜ್ಯದ “ಭಾಗ್ಯ” ವ ನೀಡಲು ಬಾ ರಾಮ*  (ಗಜಲ್ ೨)

ಮೇಲಿನ ಗಜಲ್ ಮಿಸ್ರಾ ಓದಿದಾಗ ಗಜಲ್ ಕಾತಿ೯ಯ ಮನದ ಆಸೆ ಎದ್ದು ತೋರುತ್ತದೆ.ಗಾಂಧೀಜಿಯವರು ಕಂಡ ಕನಸಿನ ರಾಮ ರಾಜ್ಯ ವು ಕವಿಗೆ ನೆನಪಾಗಿದೆ,ಇಂದು ದೇಶದಲ್ಲಿಯ ಪ್ರಜಾಪ್ರಭುತ್ವವು ಭ್ರಷ್ಟಾಚಾರ ದಿಂದ ಕೂಡಿದ್ದುಮಅದನ್ನು ಕಂಡ ಕವಿ ಮನ ರಾಮ ನೀನು ಮತ್ತೆ ಹುಟ್ಟಿ ಬಾ ,ದೇಶದಲ್ಲಿ ಶಾಂತಿ ನೆಮ್ಮದಿ,  ನ್ಯಾಯ,ನೆಲೆಸಲೆಂಬ ಭಾವವನ್ನು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ .ಮಕ್ತಾದಲ್ಲಿ ಗಜಲ್ ಕಾತಿ೯ ತನ್ನ ತಖಲ್ಲುಸನಾಮ ವನ್ನು ಸಮರ್ಪಕವಾಗಿ ಉಪಯೋಗಿಸಿದ್ದಾರೆ.

ಹುಣ್ಣಿಮೆಯ ಚಂದ್ರ ಮೋಡದಡಿ ಸರಿಯುತಿದೆ ನೀ ಮಾತಾಡದೆ

ತಾರೆಗಳ ಬೆಳಕು ಕಾಣೆಯಾಗುತಿದೆ ನೀ ಮಾತಾಡದೆ

( ಗಜಲ್ ೫)

ಮೇಲಿನ ಮತ್ಲಾದಲ್ಲಿ ಗಜಲ್ ಕಾತಿ೯ಯು ತನ್ನ ಮನದ ನಲ್ಲ ಮುನಿದು ಮೌನವಾದಕಾರಣ ಪ್ರಕೃತಿಯ ಚರಾಚರ ವಸ್ತುಗಳು ಮಂಕಾಗಿ ಕಾಣುತ್ತಿವೆ ಜೀವನದ ಉತ್ಸಾಹ ಅಡಗಿದೆಹೋಗಿದೆ ನೀ ಮಾತನಾಡದೆ,ಮೌನಿಯಾದ ಕಾರಣವೇನೆಂದು ಕೇಳುತ್ತಾ ಬಾನಿನ ಚಂದ್ರ ತಾರೆ ಮಂಕಾಗಿವೆಂದು ರೂಪಕದಲ್ಲಿ ಹೇಳುತ್ತಾ  ಗಜಲ್ ದಲ್ಲಿ ಭಾವ ತೀವ್ರತೆಯನ್ನು ಸೊಗಸಾಗಿ ಹಿಡಿದಹೇಳಿಕೊಂಡಿದ್ದಾಳೆ

ಅಮವಾಸ್ಯೆ ಯಲ್ಲೂ ಚಂದಿರ ಬಂದನೆಂಬ ಭ್ರಮೆಯಲ್ಲಿದೆ

ದಾರಿಗೆ ಬೆಳಕಾಗಲು ಮಿಂಚು ಹುಳುವೂ ಜೊತೆಯಲಿಲ್ಲ ಸಾಕಿ ( ಗಜಲ್ ೮)

ಮೇಲಿನ ಮಿಸ್ರಾದಲ್ಲಿ ಗಜಲ್ ಕಾತಿ೯ ತನ್ನ ಕತ್ತಲಾದ ಬಾಳಿಗೆ ಬೆಳಕು ನೀಡುವ ಚಂದಿರ ಬಂದೇ ಬರುತ್ತಾನೆಂದು ಶಬರಿಯಂತೆ ಕಾಯುತ್ತಿರುತ್ತಾಳೆ.ಆದರೆ ಅವನು ಬರುವುದಿಲ್ಲ,ನಿರಾಶೆಯಲ್ಲಿ ತನ್ನ ಆತ್ಮ ಸಂಗಾತಿ ಸಾಕಿಗೆ ತನ್ನ ಮನದ ಅಳಲನ್ನು ಹೀಗೆ ಹೇಳುತ್ತಾಳೆ.ಜೀವನ ಪಥದಲ್ಲಿ ಚಂದಿರ ಬರದಿದ್ದರೂ ಕೊನೆಗೆ ಮಿಂಚುಹುಳು ವಾದರೂ ಜೊತೆಯಾಗಲಿಲ್ಲ ಎಂದು ಮನ ನೊಂದು ಸಾಕಿಗೆ ಹೇಳುವ ವ್ಯಥೆಯನ್ನು ಭಾವ ತೀವ್ರತೆಯಲ್ಲಿ ಗಜಲ್ ಕಾತಿ೯ ಹೇಳಿಕೊಂಡಿದ್ದಾಳೆ

.

ಸಮರಸದಿ ಜೋಡಿ ಹೆಜ್ಜೆ ಇಡುವ ಕನಸು ಎನಗಿತ್ತು

ಬೊಗಸೆ ಪ್ರೀತಿಯ “ಭಾಗ”ವು ಇಲ್ಲದಂತಾಯಿತಲ್ಲ ಸಾಕಿ ( ಗಜಲ್ ೨೨)

ಮೇಲಿನ ಮಕ್ತಾದಲ್ಲಿ ಗಜಲ್ ಕಾತಿ೯ ಮಹಿಳಾ ಸಂವೇದನೆಯನ್ನು ಚನ್ನಾಗಿ ವ್ಯಕ್ತ ಪಡಿಸಿದ್ದಾರೆ.ಪ್ರತಿ ಹೆಣ್ಣು ಸಪ್ತಪದಿ ತುಳಿದ ಮೇಲೆ ಆ ಜೊತೆ ಹೆಜ್ಜೆ ಸದಾ ಬಾಳಿನಲ್ಲಿ ಜೊತೆಯಾಗಿರಬೇಕೆಂದು ಬಯಸುತ್ತಾಳೆ.ಬಾಳ ಬಂಡಿಯ ಗಾಲಿಗಳು ಸಮವಾಗಿ ನಡೆಯಬೇಕು ,ಮೇಲೆ ಕೆಳಗೆ ಆದರೆ ಗಾಡಿ ಉರುಳಿ ಬೀಳುತ್ತದೆ ,ಅದರಂತೆ ಸಂಸಾರದಲ್ಲಿ ಗಂಡು ಹೆಣ್ಣು ಸಮರಸದಲಿ ಜೋಡಿ ಹೆಜ್ಜೆ ಇಡುವ ಕನಸು ಕಂಡವಳಿಗೆ ಕನಸು ನನಸಾಗದೆ ಬಯಸಿದ ಪ್ರೀತಿಯ ಕಡಲು ಸಿಗದೆ ನಿರಾಶಳಾಗಿ ಕೊನೆಗೆ ಪ್ರೀತಿಯ ಮಧು ಒಂದು ಬೊಗಸೆಯೂ ನನ್ನ ಪಾಲಿಗೆ ಸಿಗಲಿಲ್ಲ ಸಾಕಿ ಎಂದು ಮನದ ನೋವನ್ನು ಹಂಚಿಕೊಂಡಿದ್ದಾಳೆ.

ಮನುಷ್ಯರನ್ನು ಕಂಡಿದ್ದೇನೆ ಮಾನವೀಯ ಗುಣವು ಕಾಣಲಿಲ್ಲ

* ಮೊಗದ ಅಂದವನು ಕಂಡಿದ್ದೇನೆ ಅಂತರಂಗದ ರೂಪವು ಕಾಣಲಿಲ್ಲ*(ಗಜಲ್ ೨೮)

ಮೇಲಿನ ಮತ್ಲಾದಲ್ಲಿ ಇಂದು ಸಮಾಜದಲ್ಲಿ ನಾವು ಕಾಣುವ ಮುಖವಾಡದ ಮನುಷ್ಯರು,ಮನುಷ್ಯನ ಕ್ರೂರತೆ,ಉಗ್ರತೆ,ಕರಾಳತೆ ಕಾಣುತ್ತಿದ್ದೇವೆ. ಮಾನವನಿಗಿರಬೇಕಾದ ಕರುಣೆ ,ದಯೆ ,ಪ್ರೀತಿ,ವಿಶ್ವಾಸ ,ಮಾನವೀಯತೆ ಕಾಣೆಯಾಗಿವೆ. ಕೇವಲ ಮುಖದ ಹೊರಗಿನ ಅಲಂಕಾರವನ್ನು ಕಾಣುತ್ತಿದ್ದೇವೆ.ಅಂತರಂಗದ ಕರುಣೆ, ಅನುರಾಗದ ಆಪ್ತತೆ ಕಾಣುತ್ತಿಲ್ಲವೆಂದು ಮನ ನೊಂದು  ಗಜಲ್ ಕಾತಿ೯ ಹೇಳುತ್ತಿದ್ದಾರೆ. ಇದು ನಿಜವಾದ ಸಂಗತಿ ಎಲ್ಲರೂ ಮಾನವೀಯತೆ ಬಯಸುತ್ತೇವೆ ಅದು ಎಲ್ಲರಲ್ಲಿ ಸಿಗುವುದಿಲ್ಲ ವೆಂಬ ವ್ಯಥೆ ನಮ್ಮೆಲ್ಲರನ್ನೂ ಕಾಡುತ್ತದೆ. ಇದು ಒಂದು ಕಾಡುವ ಮತ್ತು ಚಂತನೆ ಮಾಡುವಂತಹ ಗಜಲ್ ಆಗಿದೆ.

ನನ್ನ ನೋವಿಗೆ ಸ್ಪಂದಿಸುವವರು ಇಹರು ಯಾರು ಗೆಳತಿ

ನನ್ನ ದುಗುಡಕ್ಕೆ ಜೊತೆಯು ಕಣ್ಣೀರೆಂದು ಬಲ್ಲವರು ಯಾರು ಗೆಳತಿ  (ಗಜಲ್ ೩೬)

ಮೇಲುನ ಮತ್ಲಾ ಓದಿದಾಗ ನನಗೆ ನೆನಪಾದದ್ದು “ನಗುವಾಗ ಎಲ್ಲಾ ನಂಟರು,ಅಳುವಾಗ ಯಾರು ಇಲ್ಲ” ಎಂಬ ಕವಿತೆಯ ಸಾಲು.ನಾವು ನೋವಿನಲ್ಲಿ ,ದುಃಖದಲ್ಲಿ ಇದ್ದಾಗ ಯಾರೂ ನಮ್ಮಹತ್ತಿರ ಬರುವುದಿಲ್ಲ ,ಸಾಂತ್ವನ ಹೇಳುವುದಿಲ್ಲ ,ನೋವಿನಲಿ, ಕಣ್ಣೀರಲಿ ,ಬಡತನದಲಿ,ಯಾರು ಜೊತೆ ಯಾಗುವುದಿಲ್ಲ.ಅದೇ ನಗುವಾಗ,ಸಂತೋಷವಿದ್ದಾಗ, ಹಣ ವಿದ್ದಾಗ ಎಲ್ಲರೂ ಜೊತೆಯಾಗುತ್ತಾರೆ.ನೊಂದಾಗ ಇನ್ನಷ್ಟು ನೋವು ಕೊಟ್ಟು ಹೋಗುವವರೇ ಬಹಳ ಪರಿಶುದ್ಧವಾದ ಪ್ರೀತಿ ಕೊಡುವವರು ಯಾರು ಇಲ್ಲ ವೆಂದು ನೊಂದು ತನ್ನ ಗೆಳತಿಗೆ ಹೇಳುವ ಗಜಲ್ ದಲ್ಲಿ ನೋವಿನ ಛಾಯೆಯ ದೊತೆಗೆ ಜಗದ ಪ್ರತಿಕ್ರಿಯೆಯೂ ಇದೆ.

ನಿನ್ನ ಆಗಮನದ ನಿರೀಕ್ಷೆ ಯಲ್ಲಿ ಹಣ್ಣಾಗುತ್ತಿರುವೆ ಬಂದುಬಿಡು

* ನಿನಗೆ ಹೇಳದೆ ಉಳಿದ ಮಾತುಗಳು ಕಾಡುತಿವೆ ಆಲಿಸಿಬಿಡು* (ಗಜಲ್ ೪೦)

ಮೇಲಿನ ಮತ್ಲಾದಲ್ಲಿ  ಗಜಲ್ ಕಾತಿ೯ ಆತ್ಮಸಂಗಾತಿಯ ನಿರೀಕ್ಷೆಯಲ್ಲಿ ಇರುವುದು ಕಂಡುಬರುತ್ತದೆ.ಪ್ರಿಯಕರನ ಆಗಮನದ ನಿರೀಕ್ಷೆಯಲ್ಲಿ ಮನಸ್ಸು ಕಾದು ಕಾದು ಬಳಲಿ ಬೆಂಡಾಗಿದೆ ನೀ ಬೇಗ ಬಾ ಎಂದು ಹಲಬುತಿದೆ ಮನ,ಜೊತೆಗೆ ಹೇಳಬೇಕಾದ ಎಷ್ಟೋ ಮಾತುಗಳು ಹಾಗೆ ಹೃದಯದಲ್ಲಿ ಅಡಗಿವೆ,ಮತ್ತು ಅವು ನಿತ್ಯ ಕ್ಷಣ ಕ್ಷಣಕ್ಕೆ ಕಾಡುತ್ತಿವೆ, ಕೊರೆಯುತ್ತಿವೆ,ನೀ ಬಂತು ಆ ಮಾತುಗಳನ್ನು ಕೇಳಿಸಿಕೋ ಆಗ ನನ್ನ ಮನ ಹಗುರಾಗಿ ಹೂವಂತೆ ಅರಳುತ್ತದೆ.ಹಂಬಲಿಸುವ ಮತ್ತು ಪ್ರಿಯಕರನ ನಿರೀಕ್ಷೆ ಯಲ್ಲಿ ಇರುವ ಗಜಲ್ ಕೊನೆಗೆ ಆಧ್ಯಾತ್ಮಿಕ ಸ್ಪರ್ಶ ಪಡೆದು ಅವನ( ದೇವರ) ಅಡಿದಾವರಿಗೆ ಪಾರಿಜಾತ ಹೂ ಅಪಿ೯ಸಲು ಕಾಯುತ್ತಿರುವೆ ನನಗೆ ಪೂಜೆಮಾಡುವ ಭಾಗ್ಯ ವನ್ನು ಕೊಟ್ಟು ಬಿಡು ಎಂದು ನಿವೇದಿಸಿ ಕೊಳ್ಳುತ್ತಾಳೆ.ಇಲ್ಲಿಯೂ”ಭಾಗ್ಯ” ಎಂಬ ತಖಲ್ಲುಸನಾಮ ವನ್ನು ಸಮರ್ಪಕವಾಗಿ ಬಳಿಸಿದ್ದಾರೆ.

ಇಂಥಹ ಪ್ರೇಮರಸ ತುಂಬಿದ “ಒಲವಿನ ಮಧುಬಟ್ಟಲು” ಸಂಕಲನದಲ್ಲಿ ಇರುವ ಪ್ರೇಮ ರಸ ಹನಿ ಹನಿ ಯಾಗಿ ಹೀರಿ ಓದುಗ ಅಮಲಿನಲಿ ಪರವಶವಾಗುವಂತಹ  ಅನೇಕ ಗಜಲ್ ಗಳು ಇಲ್ಲಿವೆ.ಇದು ಇವರ ಮೊದಲ ಗಜಲ್ ಸಂಕಲನವಾದರೂ ಪ್ರೌಢತೆಯಿಂದ ಹೊಂಬಂದಿದೆ.ಇವರಿಂದ ಇನ್ನೂ ಉತ್ತಮವಾದ ಗಜಲ್ ಸಂಕಲನಗಳು ಹೊರಬರಲೆಂದು ಹಾರೈಸುತ್ತಾ ನನ್ನ ಮಾತಿಗೆ ವಿರಾಮ ಕೊಡುವೆ.

**************

ಪ್ರಭಾವತಿ ಎಸ್ ದೇಸಾಯಿ

2 thoughts on “ಒಲವಿನ ಮಧು ಬಟ್ಟಲು ಗಜಲ್ ಗಳು

  1. ಸಂಪಾದಕರೆ ಲೇಖನ ಪ್ರಕಟಿಸಿದಕ್ಕೆ ಧನ್ಯವಾದಗಳು

  2. ಉತ್ತಮವಾಗಿ ಪುಸ್ತಕ ಪರಿಚಯ ಮಾಡಿದ ಶ್ರೀಮತಿ ಪ್ರಭಾವತಿ ದೇಸಾಯಿ ಅವರಿಗೂ ಮತ್ತು ಲೇಖನ ಪ್ರಟಿಸಿದ ಸಂಪಾದಕರಿಗೂ ಹೃತ್ಪೂರ್ವಕ ಧನ್ಯವಾದಗಳು…

Leave a Reply

Back To Top