ಕಾವ್ಯಯಾನ
ವರ್ಷ- ಉತ್ಕರ್ಷ
ಶಾಲಿನಿ ಕೆಮ್ಮಣ್ಣು
ವೈಶಾಖಕ್ಕೆ ಕಾದ ಭೂಮಿಗೆ ತಂಪೆರೆಯಲು
ಸೊರಗಿದ ವನಸಿರಿಯ ಹಸಿಯಾಗಿಸಲು
ಬಳಲಿದ ಜೀವರಾಶಿಯ ಸೊಂಪಾಗಿಸಲು
ಬದುಕ ಭರವಸೆಯಾಗಿ ಬಂತು ಶ್ರಾವಣ
ಧರೆಗೆ ತಂತು ನಾಕದ ಸುಖ ಸೋಪಾನ
ಮುಂಗಾರಿನ ನಿನ್ನ ನೀರ ಸಾಲು
ಗಿರಿಯ ಮೇಲಿಂದ ಧುಮುಕಿ
ಇಳಿವೆ ಆತುರದಿ ಸಾಗರವ ಸೇರಲು
ಬರೆವೆ ನೀ ಸೃಷ್ಟಿಯ ಸೊಬಗ ಚಿತ್ತಾರ
ನೀನಾದೆ ಬದುಕಿಗೆ ಜೀವನಾಧಾರ
ಮಿತವಾಗಿ ನೀ ಸುರಿಯೇ
ಬಸಿರಾಯ್ತು ವನಸಿರಿ
ಹಿತವಾಗಿ ನೀನೊಲಿಯೇ
ತುಂಬಿತು ಜಲಸಿರಿ
ಶೃಂಗರಿಸಿ ಭೂರಮೆಯ
ಮೇಳೈಸಿತು ತರುಲತೆ
ಮುತ್ತಾಯ್ತು ಚಿಪ್ಪಿನೊಳು
ಸ್ವಾತಿ ಹನಿ ಚುಂಬಿಸಲು
ಚಿಟ ಪಟದ ಸದ್ದಿನೊಳು
ತುಂತುರು ನಿನಾದವ ಸವಿಯಲು
ನಿತ್ಯೋತ್ಸವ ಧರಣಿಯೊಳು
ಒಲವ ತುಂಬಿದ ಜಡಿಮಳೆ
ತಂದಿತು ಬಾಳಿಗೆ ಹೊಸ ಕಳೆ
ಕಪ್ಪುನೀಲಿ ಮೇಘಗಳ ನಡುವೆ
ನೇಸರನ ಕಣ್ಣುಮುಚ್ಚಾಲೆ
ಆಕಾಶದಿ ಪಸರಿಸಿಹ
ವಿಹಗಗಳ ಸಾಲು
ಭುವಿಯೊಳು ನದಿ ಕಾಲುವೆಗಳ
ಕೌತುಕದ ನೊರೆಹಾಲು
ಮಳೆಯೆಂದರೆ ಮಕ್ಕಳಿಗೆ ಪುಳಕ
ಕದ್ದುಮುಚ್ಚಿ ನೆನೆಯುವುದೆಂದರೆ
ಎಲ್ಲಿಲ್ಲದ ಹರುಷ ನವೋಲ್ಲಾಸ
ಹರೆಯದ ಹೃದಯಗಳ ಪ್ರೇಮೋತ್ಸವ
ಸರಿಗಮ ಭಾವಾಂತರಂಗ
ಮಧುರ ಪ್ರೇಮಾಂತರಂಗ
ಎಲ್ಲೆಲ್ಲೂ ಹರ್ಷ ಇಳೆಗಾಯ್ತು ಉತ್ಕರ್ಷ
ನೀನೊಲಿಯೇ ಉಕ್ಕುವುದು ಜೀವಕಳೆ
ನೀ ಮುನಿಯೇ ಮೊಳಗುವುದು ರಣಕಹಳೆ
ಉಸಿರಾಗಿ ಬಾ ಮಳೆಯೇ
ತಣ್ಣೆಳಲ ಐಸಿರಿಯೇ
ಜಗದೊಡಲ ಬೇಗುದಿಯ
ಹರಿಸಿ ಉದ್ಧರಿಸಲು
*************************
ಮಳೆಹಾಡು
I like it, beautifully described. Beauty of nature with love and romance.