ದಾರಾವಾಹಿ

ಆವರ್ತನ

ಅದ್ಯಾಯ-26

Naga Aradhane - Snake Worship Popular Among Bunt Community

ಶಂಕರನ ಬಾಕುಡಬೈಲಿನ ನಾಗ ಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯಕ್ರಮದ ಸಕಲ ಪೂಜೆ ಪುನಸ್ಕಾರಗಳಲ್ಲೂ ಏಕನಾಥ ಗುರೂಜಿಯವರು ಅತೀವ ಪರಿಣತರಂತೆ ಮತ್ರೋಚ್ಛಾರಣೆ ಮಾಡುತ್ತ ಆ ವಿಧಿವಿಧಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ, ಅವರ ತೇಜಸ್ಸು ತುಂಬಿದ ರೂಪ ಹಾಗೂ ಅದಕ್ಕೆ ತಕ್ಕಂಥ ವೇಷಭೂಷಣಗಳೆಲ್ಲವೂ ಕಾರ್ಯಕ್ರಮಕ್ಕೆ ಬಂದಿದ್ದ ಸಾವಿರಾರು ಭಕ್ತಾದಿಗಳಲ್ಲಿ ಅವರ ಮೇಲೆ ಅತೀವ ಭಯಭಕ್ತಿಯನ್ನು ಮೂಡಿಸಿತ್ತು. ಆದ್ದರಿಂದ ಅವರಲ್ಲಿ ಬಹುತೇಕರು ತಮ್ಮ ಜೀವನದಲ್ಲಿ ತಾವು ಈಗಾಗಲೇ ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳಿಗೂ ಹಾಗೂ ಮುಂದೆಂದಾದರೂ ಉದ್ಭವಿಸಬಹುದಾದ ನಾನಾ ರೂಪದ ಸಮಸ್ಯೆಗಳಿಗೂ ಈ ಗುರೂಜಿಯವರೇ ಸೂಕ್ತ ಪರಿಹಾರ ಸೂಚಿಸುತ್ತ ತಮ್ಮ ಬದುಕನ್ನು ಹಸನಾಗಿಸಬಲ್ಲರು ಎಂದು ಆವತ್ತೇ ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಅವರಲ್ಲನೇಕರು ಶಂಕರನಿಂದ ವಿಳಾಸವನ್ನು ಪಡೆದುಕೊಂಡು ಅವರನ್ನು ಭೇಟಿಯಾಗತೊಡಗಿದರು. ಆದರೆ ಅದನ್ನು ಮೊದಲೇ ಗ್ರಹಿಸಿದ್ದ ಏಕನಾಥರು ತಮ್ಮ ಹೊಸ ಉದ್ಯೋಗದಲ್ಲಿ ಬಹಳ ಜಾಗ್ರತೆ ಮತ್ತು ನೈಪುಣ್ಯದಿಂದ ತೊಡಗಿಕೊಂಡು, ತಮ್ಮಲ್ಲಿಗೆ ಬರುವ ವಿವಿಧ ವರ್ಗದ ಜನರ ಸಮಸ್ಯೆ ಮತ್ತು ತೊಂದರೆಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡು ಬುದ್ಧಿವಂತಿಕೆ, ಚಾಣಾಕ್ಷತನದಿಂದ ಅವುಗಳಿಗೆಲ್ಲ ಸೂಕ್ತ ಧಾರ್ಮಿಕ ಪರಿಹಾರೋಪಗಳನ್ನು ಸೂಚಿಸುತ್ತ ಬಹಳಬೇಗನೇ, ‘ಖ್ಯಾತ ಜ್ಯೋತಿಷ್ಯರು!’ ಎಂಬ ಹೆಸರನ್ನೇನೋ ಪಡೆದರು. ಆದರೆ ತಾವು ಸಂಕಲ್ಪಿಸಿಕೊಂಡಿದ್ದಂಥ ಮುಖ್ಯ ಕಾರ್ಯದಲ್ಲಿನ್ನೂ ಅವರಿಗೆ ಉನ್ನತಿಗೇರಲು ಸಾಧ್ಯವಾಗದೆ ಒದ್ದಾಡುತ್ತಿದ್ದರು. ಏಕೆಂದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಅವರಿಗೆ  ಸಂಪೂರ್ಣ ಜ್ಞಾನವಿರಲಿಲ್ಲ. ಕಾರಣ ಜ್ಯೋತಿಷ್ಯಶಾಸ್ತ್ರ ತಿಳಿಯಲು ಬೇಕಾದ ಸಂಸ್ಕೃತವನ್ನೇ ಅವರು ಸರಿಯಾಗಿ ಕಲಿತಿರಲಿಲ್ಲ! ಹಾಗಾಗಿ ಪ್ರಾಚೀನ ಋಷಿಮುನಿಗಳು ತಮ್ಮ ಅವಿರತ ಪರಿಶ್ರಮದಿಂದ ಸಾಕ್ಷಾತ್ಕರಿಸಿಕೊಂಡಂಥ ಜ್ಯೋತಿರ್ವಿಜ್ಞಾನ ಮತ್ತದರ ವಿಧಿವಿಧಾನಗಳಿಗೆ ಈಗಿನ ಆಧುನಿಕ ಕಾಲಘಟ್ಟದ ಜನರ ಸಮಸ್ಯೆ ಮತ್ತು ವ್ಯಾಪಾರ ವಹಿವಾಟುಗಳನ್ನು ಸರಿ ಹೊಂದಿಸಲಾಗದೆಯೂ ಮತ್ತದಕ್ಕೆ ತಕ್ಕಂಥ ಪ್ರಾಮಾಣಿಕ ನೇಮನಿಷ್ಠೆಯಿಂದ ನಡೆದುಕೊಳ್ಳಲಾಗದೆಯೂ ಅವರು ಬಹಳವೇ ಹೈರಾಣಾಗಿದ್ದರು. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿಯೇ ತಮ್ಮ ಶ್ರೀಮಂತಿಕೆ ಮತ್ತು ಸಮಾಜಿಕ ಮನ್ನಣೆ ಅಡಗಿದೆ ಎಂಬುದನ್ನೂ ಅನುಭವದಿಂದಲೇ ಕಂಡಿದ್ದರು. ಆದ್ದರಿಂದ ಅವರು ಅಂಥದ್ದೊಂದು ವಿದ್ಯೆಯನ್ನು ಕರಗತ ಮಾಡಿಕೊಳ್ಳುವ ಹಠದಿಂದ ಮುಂದುವರೆಯುತ್ತಿದ್ದರು. ಹೀಗಾಗಿ ಒಮ್ಮೆ ಅವರಿಗೊಂದು ವಿಶೇಷ ಉಪಾಯ ಹೊಳೆಯಿತು. ತಮ್ಮ ಇಂದಿನ ಕಾಲಮಾನಕ್ಕೂ ಪ್ರಸ್ತುತ ಸಮಾಜದ ಸಮಸ್ಯೆಗಳ ನಿವಾರಣೆಗಳಿಗೂ ಮತ್ತು ಅವಕ್ಕೆ ಸಂಬಂಧಿಸಿದ ಆರ್ಥಿಕತೆಗೂ ಸರಿಹೊಂದುವಂಥದ್ದೊಂದು ಹೊಸ ಜ್ಯೋತಿಷ್ಯಕ್ರಮವನ್ನೂ, ಪಂಚಾಂಗವನ್ನೂ ತಯಾರಿಸಬೇಕೆಂದು ನಿರ್ಧರಿಸಿ ಕೂಡಲೇ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ಹಿಂದೆ ತಾವು ಪೆದುಮಾಳರಿಂದ ಕದ್ದುಮುಚ್ಚಿ ಕೇಳಿಸಿಕೊಂಡಿದ್ದ ಜ್ಞಾನ ಮತ್ತು ಅವರಲ್ಲಿದ್ದ ಕೆಲವು ಜ್ಯೋತಿಷ್ಯ ಪುಸ್ತಕಗಳನ್ನೂ ಮೇಲು ಮೇಲು ತಿರುವಿ ಹಾಕಿ ಪಡೆದಿದ್ದ ವಿಷಯಗಳನ್ನೂ ಹಾಗೂ ಈಗ ತಮ್ಮೂರಿನ ಪೇಟೆಯ ಸಣ್ಣ ಸಣ್ಣ ಅಂಗಡಿ ಮತ್ತು ಹೊಟೇಲುಗಳಲ್ಲೂ ಸಿಗುತ್ತಿರುವಂಥ ಆಧುನಿಕ ಜ್ಯೋತಿಷ್ಯದ ಪುಸ್ತಕಗಳನ್ನೂ ಕೊಂಡು ತಂದು ಗಂಭೀರವಾಗಿ ಓದಲು ಕುಳಿತರು. ಅವೆಲ್ಲದರಿಂದ ದೊರೆತ ಒಂದಷ್ಟು ಜ್ಞಾನಕ್ಕೆ ತಮ್ಮ ಕೆಲವು ವರ್ಷಗಳ ಪ್ರಾಯೋಗಿಕ ಅನುಭವಗಳನ್ನೂ ಬೆರೆಸಿಕೊಂಡು ತಮ್ಮದೇ ಆದ ಹೊಸ ಜ್ಯೋತಿಷ್ಯಶಾಸ್ತ್ರವೊಂದನ್ನು ಹುಟ್ಟುಹಾಕಲು ಮುಂದಾದರು.

   ಪ್ರಾಚೀನ ಜ್ಯೋತಿಷ್ಯಶಾಸ್ತ್ರದಲ್ಲಿದ್ದು ಏಕನಾಥರ ಜ್ಯೋತಿಷ್ಯದಲ್ಲಿ ರೂಪಾಂತರಗೊಂಡ ಕೆಲವು ಮುಖ್ಯ ವಿಷಯಗಳು ಹೀಗಿದ್ದವು: ಆಧುನಿಕ ವಿಜ್ಞಾನವು ಗ್ರಹ, ನಕ್ಷತ್ರಾದಿಗಳ ಕುರಿತು ಸಮಾಜಕ್ಕೆ ವೈಜ್ಞಾನಿಕ ಮಾಹಿತಿ, ಪುರಾವೆಗಳನ್ನು ಒದಗಿಸಲಾರಂಭಿಸಿದ ಮೇಲೆ ಜನರಿಗೆ ‘ಗ್ರಹದೋಷ’ಗಳ ಮೇಲೆ ಭಯಭಕ್ತಿ ಮತ್ತು ನಂಬಿಕೆಗಳು ಹೊರಟು ಹೋಗುತ್ತಿದ್ದುದನ್ನು ಮನಗಾಣುತ್ತ ಬಂದ ಅವರು, ಪ್ರಾಚೀನ ಜ್ಯೋತಿಷ್ಯಜ್ಞರು ಮಾನವ ಜಾತಕಗಳಲ್ಲಿ ಉಲ್ಲೇಖಿಸಿದ್ದಂಥ ಅನೇಕ ಗ್ರಹದೋಷಗಳನ್ನೂ ಮತ್ತವುಗಳ ನಿವಾರಣಾ ಸೂತ್ರಗಳನ್ನೂ ತಮ್ಮ ಜ್ಯೋತಿಷ್ಯಕ್ರಮದಲ್ಲಿ ಕಿತ್ತೆಸೆದುಬಿಟ್ಟರು ಹಾಗೂ ತಮ್ಮಲ್ಲಿಗೆ ಬರುವವರ ಹೊಸ ಜಾತಕಗಳನ್ನು ಬರೆಯುವಾಗ ಗ್ರಹದೋಷ, ಶಕುನಾದಿಗಳಿಗೆ ಬದಲಾಗಿ ನಾಗನಿಗೆ ಸಂಬಂಧಿಸಿದ ಮತ್ತು ತಾವೇ ಸೃಷ್ಟಿಸಿದ ವಿವಿಧ ದೋಷ ವಿವರಣಾ ಪಟ್ಟಿಯನ್ನು ಬರೆಯತೊಡಗಿದರು. ಅದಕ್ಕೊಂದು ಸಣ್ಣ ಉದಾಹರಣೆಯೆಂದರೆ, ಮೂಲ ಜ್ಯೋತಿಷ್ಯದಲ್ಲಿ ಉಲ್ಲೇಖವಿರುವ ‘ಕಾಳಸರ್ಪ ಯೋಗ’ ಎಂಬ ವಿಧಿಯೊಂದನ್ನು ಸ್ವಲ್ಪ ಬುದ್ಧಿ ಉಪಯೋಗಿಸಿ, ‘ಕಾಳಸರ್ಪ ದೋಷ!’ ಎಂದು ಪರಿವರ್ತಿಸಿಬಿಟ್ಟರು. ಹೀಗೆ, ಬಗೆಬಗೆಯ ಕಷ್ಟಕೋಟಲೆಗಳಿಂದ ಸೋತು ಸುಣ್ಣವಾಗಿ ‘ದೇಹೀ…!’ ಎಂದು ತಮ್ಮ ಹತ್ತಿರ ಬರುವಂಥ ಬಡವರಿಗೂ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹೈರಾಣಾಗುತ್ತಿರುವ ಒಂದಷ್ಟು ಶ್ರೀಮಂತರಿಗೂ ಸುಲಭವಾಗಿ ಕೈಗೆಟಕುವಂಥ ತಮ್ಮದೇ ಆದ ಹೊಸ ಶಾಸ್ತ್ರವೊಂದನ್ನು ಸೃಷ್ಟಿಸಿಬಿಟ್ಟರು.

   ಇಂಥ ಶಾಸ್ತ್ರವೊಂದು ತಮ್ಮ ಕೈವಶವಾಗುತ್ತಲೇ ಏಕನಾಥರ ನಿಲುವು ಮತ್ತದಕ್ಕೆ ತಕ್ಕಂತೆ ವೇಷಭೂಷಣವೂ ಬದಲಾಗಿಬಿಟ್ಟಿತು. ಆವತ್ತಿನಿಂದ ಶುಭ್ರ ಬಿಳಿಯ ಜರತಾರಿ ಪಂಚೆಯನ್ನು ಉಡತೊಡಗಿದರು. ಬಲ ಹೆಗಲ ಮೇಲೊಂದು ಬಿಳಿಯ ಉತ್ತರೀಯವನ್ನು ಏರಿಸಿಕೊಂಡರು. ವಿಶಾಲವಾದ, ಬುದ್ಧಿವಂತ ಹಣೆಗೆ ದುಂಡಗಿನ ಕುಂಕುಮವನ್ನೂ ಅದರ ಮೇಲೊಂದು ಉದ್ದನೆಯ ಗಂಧದ ನಾಮವನ್ನೂ ಬಳಿದುಕೊಳ್ಳತೊಡಗಿದರು. ಗಡ್ಡ ಮೀಸೆಗಳು ನುಣುಪಾಗಿ ಬೋಳಿಸಲ್ಪಟ್ಟವು. ಸ್ಫಟಿಕ, ತುಳಸಿ ಮತ್ತು ಹವಳದ ಮಣಿಗಳನ್ನು ಪೋಣಿಸಿದ ಬೆಳ್ಳಿಯ ಮಾಲೆಗಳ ತುದಿಯಲ್ಲಿ ಆಂಜನೇಯ, ಶ್ರೀಕೃಷ್ಣ ಮತ್ತು ಮಹಾಕಾಳಿಯ ಮೂರ್ತಿಯನ್ನು ಕಟ್ಟಿಸಿ ಕೊರಳಲ್ಲಿ ಧರಿಸಿಕೊಂಡರು. ಆ ಎಲ್ಲ ಮಾಲೆಗಳ ನಡುವೆ ದಪ್ಪವಾದ ಇನ್ನೊಂದು ಉದ್ದನೆಯ ಸರವಿತ್ತು. ಅದಕ್ಕೆ ಐದು ಹೆಡೆಯ ನಾಗನ ಮೂರ್ತಿಯನ್ನೂ ಆ ಹೆಡೆಗಳ ನೆತ್ತಿಯ ಮೇಲೆ ನಾಗಮಣಿಗಳೆಂದು ಬಿಂಬಿಸುವ ಕೆಂಪುಹರಳುಗಳನ್ನೂ ಕಟ್ಟಿಸಿಕೊಂಡರು. ಆ ಸರವೂ ಬೆಳ್ಳಿಯದ್ದಾಗಿತ್ತು. ಆದರೆ ಚಿನ್ನದ ಲೇಪಕೊಟ್ಟು ಉಳಿದ ಸರಗಳಿಗಿಂತ ಅದು ಹೆಚ್ಚು ಎದ್ದು ಕಾಣುವಂತೆ ಧರಿಸುವ ಮೂಲಕ ದಟ್ಟ ರೋಮ ತುಂಬಿದ ತಮ್ಮ ಎದೆಗೆ ಇನ್ನೊಂದು ಉಡುಪಿನ ಅಗತ್ಯವೇ ಇಲ್ಲದಂತೆ ಮರೆಮಾಚಿದರು. ಇಷ್ಟಾಗುತ್ತಲೇ ತಮ್ಮ ಮುರುಕಲು ಮನೆಯ, ಅಪ್ಪನ ಸಣ್ಣ ಕೋಣೆಯನ್ನು ಸ್ವಚ್ಛಗೊಳಿಸಿ ಹೊಸ ಜ್ಯೋತಿಷ್ಯಾಲಯವನ್ನಾಗಿ ಮಾರ್ಪಡಿಸಿ ದುಡಿಮೆಗೆ ಕುಳಿತುಬಿಟ್ಟರು.

                                                                ***

ಗುರೂಜಿಯವರು ಇಂದು ನಸುಕಿನಲ್ಲೆದ್ದು ನಿತ್ಯಕರ್ಮ ಮುಗಿಸಿ ಉಪಹಾರ ಸೇವಿಸಿ ತಮ್ಮ ಹೊಸ ಜ್ಯೋತಿಷ್ಯಾಲಯಕ್ಕೆ ಬಂದು ಕುಳಿತು ಜ್ಯೋತಿಷ್ಯಶಾಸ್ತ್ರದ ಕನ್ನಡಾವೃತ್ತಿಯೊಂದರ ಪುಟಗಳನ್ನು ತಿರುವಿ ಹಾಕತೊಡಗಿದರು. ಸ್ವಲ್ಪಹೊತ್ತಲ್ಲಿ ಬೇಸರ ಬಂತು. ಎಲೆಯಡಿಕೆ ಬಾಯಿಗೆಸೆದು ಜಗಿಯತೊಡಗಿದರು. ಬಳಿಕ ‘ಕ್ಯಾಕ್, ಥೂ…! ಎಂದು ಕಿಂಡಿಯಿಂದ ಹೊರಗೆ ಉಗಿದರು. ಅಷ್ಟರಲ್ಲಿ ಹೊರಗಡೆ ಯಾರೋ ಬರುತ್ತಿರುವುದನ್ನು ಗೇಟಿನ ಕೀರಲು ಧ್ವನಿಯು ಸೂಚಿಸಿತು. ತಟ್ಟನೆ ಗಂಭೀರ ಮುಖಮುದ್ರೆಯಿಂದ ನೆಟ್ಟಗೆ ಕುಳಿತವರು ಮತ್ತೆ ಗ್ರಂಥಾವಲೋಕನದಲ್ಲಿ ಮಗ್ನರಾದಂತೆ ನಟಿಸುತ್ತ ತಮ್ಮತ್ತ ಬರುತ್ತಿರುವ ಆಸಾಮಿಯನ್ನು ಕಿಂಡಿಯಿಂದಲೇ ಸೂಕ್ಷ್ಮವಾಗಿ ಗ್ರಹಿಸತೊಡಗಿದರು. ಬಂದವರು ಸುಮಿತ್ರಮ್ಮ. ಅವರು ಗೇಟು ದೂಡಿಕೊಂಡು ಅಂಗಳಕ್ಕೆ ಬಂದರು. ಅವರ ಮುಖದಲ್ಲಿದ್ದ ದುಗುಡವನ್ನು ಗಮನಿಸಿದ ಗುರೂಜಿಯವರು ಗೆಲುವಾದರು. ‘ನೋಡೇ ದೇವಕಿ, ಯಾರೋ ಹೆಂಗಸು ಬಂದಿದ್ದಾಳೆ. ಏನೆಂದು ವಿಚಾರಿಸು…!’ ಎಂದು ಹೆಂಡತಿಯನ್ನು ಕೂಗಿದರು. ದೇವಕಿ ಅಡುಗೆಮನೆಯಲ್ಲಿದ್ದಳು, ಲಘುಬಗೆಯಿಂದ ಬಂದು ಸುಮಿತ್ರಮ್ಮನ್ನು ಎದುರುಗೊಂಡು, ‘ಬನ್ನಿ, ಬನ್ನಿ ಕುಳಿತುಕೊಳ್ಳಿ. ಏನಾಗಬೇಕಿತ್ತು…?’ ಎಂದು ಆತ್ಮೀಯವಾಗಿ ಉಪಚರಿಸಿದಳು.

‘ಗುರೂಜಿಯರನ್ನು ಕಾಣಬೇಕಿತ್ತು…’ ಎಂದರು ಸುಮಿತ್ರಮ್ಮ ಸಂಕೋಚದಿಂದ.

‘ಒಳಗಿದ್ದಾರೆ ಬನ್ನಿ…’ ಎಂದ ದೇವಕಿ ಅವರನ್ನು ಗಂಡನ ಜ್ಯೋತಿಷ್ಯದ ಕೋಣೆಗೆ ಕರೆದುಕೊಂಡು ಹೋದಳು.

‘ಬನ್ನೀಮ್ಮಾ…?’ ಎಂದು ಗುರೂಜಿ ನಗುತ್ತ ಸ್ವಾಗತಿಸಿದರು. ಸುಮಿತ್ರಮ್ಮನಿಗೆ ಮುಜುಗರವಾಯಿತು. ಆದರೆ ತನ್ನ ಮನೆಗೆ ನುಸುಳಿದ ನಾಗರಹಾವನ್ನೂ ಆವರೆಗೆ ತಮ್ಮ ಜೀವನದಲ್ಲಿ ನಡೆದ ಸಮಸ್ಯಾ ಸರಮಾಲೆಗಳನ್ನೂ ನೆನೆದವರ ಸಂಕೋಚ ಮಾಯವಾಗಿ ಆತಂಕ ಒತ್ತರಿಸಿತು. ಸುಮಿತ್ರಮ್ಮನ ಮುಖದಲ್ಲಾಗುತ್ತಿದ್ದ ಬದಲಾವಣೆಯನ್ನು ಗಮನಿಸುತ್ತಿದ್ದ ಗುರೂಜಿಯವರು ಕೈಸನ್ನೆಯಿಂದ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದರು. ಬಳಿಕ ನಿಧಾನವಾಗಿ ಕಣ್ಣು ಮುಚ್ಚಿದರು. ವಾಡಿಕೆಯಂತೆ ಏನೇನೋ ಗುಣಿಸಿ, ಕೂಡಿಸಿ, ಕಳೆದು ಕೊನೆಯಲ್ಲಿ ಶೇಷವನ್ನು ಹಿಡಿದುಕೊಂಡು ಕಣ್ಣು ತೆರೆದವರು, ಸುಮಿತ್ರಮ್ಮನತ್ತ ನಿರ್ಭಾವದ ನೋಟ ಬೀರಿದರು. ಆಗ ಸುಮಿತ್ರಮ್ಮನ ಮುಖದಲ್ಲಿ ದೈನ್ಯಭಾವ ಎದ್ದು ಕಂಡಿತು.

ಅದನ್ನು ಗಮನಿದ ಗುರೂಜಿ, ‘ಹ್ಞೂಂ ಹೇಳಿಯಮ್ಮ ಏನು ಸಮಸ್ಯೆ ನಿಮ್ಮದು…?’ ಎಂದರು ಮೃದುವಾಗಿ.

‘ಮನೆಯಲ್ಲಿ ಸ್ವಲ್ಪ ತೊಂದರೆಯಾಗುತ್ತಿದೆ ಗುರೂಜಿ. ಕೆಲವಾರು ತಿಂಗಳಿನಿಂದ ಒಂದಲ್ಲ ಒಂದು ತಾಪತ್ರಯ ವಕ್ಕರಿಸುತ್ತಲೇ ಇದೆ. ಕಾರಣ ಏನೂಂತ ಗೊತ್ತಾಗುವುದಿಲ್ಲ!’ ಎಂದರು ಸುಮಿತ್ರಮ್ಮ ನೋವಿನಿಂದ. 

‘ಓಹೋ, ಹೌದಾ, ಇರಲಿ ನೋಡುವ. ಯಾವ ಊರಮ್ಮಾ ನಿಮ್ಮದು…?’ ಗುರೂಜಿ ಗಂಭೀರವಾಗಿ ಕೇಳಿದರು.

‘ಬುಕ್ಕಿಗುಡ್ಡೆಯ ಭಾಗೀವನದಲ್ಲಿ ಗುರೂಜಿ. ಶಂಕರ ನಿಮ್ಮ ವಿಳಾಸ ಕೊಟ್ಟ!’ ಎಂದು ಸುಮಿತ್ರಮ್ಮ ತನಗೂ ಅವನು ಪರಿಚಯದವನು ಎಂಬ ಧಾಟಿಯಲ್ಲಿ ಹೇಳಿದರು.

ಆದರೆ ಗುರೂಜಿ ಶಂಕರನ ಶಿಫಾರಸನ್ನು ಬದಿಗೊತ್ತಿ ಬುಕ್ಕಿಗುಡ್ಡೆಯ ಇಡೀ ಚಿತ್ರಣವನ್ನೊಮ್ಮೆ ನೆನಪಿಸಿಕೊಂಡವರು, ‘ಓಹೋ, ಹೌದಾ…ಸರಿ ಸರಿ. ಚಿಂತಿಸಬೇಡಿ. ಎಲ್ಲ ಸಮ ಮಾಡುವ…!’ ಎಂದು ಭರವಸೆ ನೀಡಿ, ‘ನಿಮ್ಮ ಹೆಸರು ಹೇಳಿಯಮ್ಮಾ…?’ ಎಂದರು.

ಆಕೆ, ‘ಸುಮಿತ್ರಾ…’ ಎಂದರು.

‘ಹ್ಞೂಂ, ಸರಿ…’ ಎಂದ ಗುರೂಜಿ ಮತ್ತೆ ಗಂಭೀರವಾದರು. ಗುರೂಜಿಯವರ ತಂದೆ ಇದ್ದಾಗ ಅವರು ಕವನ, ಲೇಖನಗಳಂಥ ಬರಹಗಳನ್ನೂ ಹಾಗೂ ತಮ್ಮ ಬಂಧುಮಿತ್ರರೊಂದಿಗೆ ಪತ್ರ ವ್ಯವಹಾರವನ್ನೂ ನಡೆಸುತ್ತ ಜೀವನದ ಸೊಬಗನ್ನು ಆಸ್ವಾದಿಸುತ್ತಿದ್ದ ಸುಂದರ ಕೆತ್ತನೆಯ ಮೇಜಿನ ಮೇಲೆ ಗುರೂಜಿಯವರ ಕೈಬೆರಳುಗಳು ಕೆಲವು ಕ್ಷಣ ಟಕಟಕ, ಟಕಟಕ, ಟಕಟಕ…! ಎಂದು ಲಯಬದ್ಧವಾಗಿ ನರ್ತಿಸಿದವು. ಬಳಿಕ ಮೆಲ್ಲನೆ ಮುಂದಕ್ಕೆ ಚಲಿಸಿದವು. ಸುಮಿತ್ರಮ್ಮ ಅವರನ್ನು ತೀವ್ರ ಚಡಪಡಿಕೆಯಿಂದ ನೋಡುತ್ತಿದ್ದರು. ಗುರೂಜಿಯವರ ಬಲಗೈ ಎದುರಿನ ಕಂಚಿನ ಹರಿವಾಣದತ್ತ ಹರಿಯಿತು. ಅದರಲ್ಲಿದ್ದ ತೆಳು ಕಂದು ಮತ್ತು ಹಾಲು ಬಿಳುಪಿನ ಒಂದಷ್ಟು ಕವಡೆಗಳನ್ನು ಬಾಚಿ ತನ್ನ ಮುಷ್ಟಿಯೊಳಗೆ ಎಳೆದುಕೊಂಡಿತು. ಮನೋದುರ್ಬಲರ, ಅಮಾಯಕರ ಮತ್ತು ಶ್ರೀಮಂತಿಕೆಯ ತುತ್ತ ತುದಿಗೇರಿ ನೆಲ ಕಚ್ಚಿದವರ ಹಾಗೂ ಒಂದಷ್ಟು ದುರಾಸೆ ಪೀಡಿತರ ಬದುಕನ್ನು ತನ್ನ ಕಾಬಂಧಬಾಹುವಿನೊಳಗೆ ಸೆಳೆದುಕೊಂಡು ನಾನಾ ಬಗೆಯಿಂದ ಹಿಸುಕುತ್ತ ಜೊತೆಗೆ ಪ್ರಕೃತಿ ನಿಯಮಗಳನ್ನೂ ಗಾಳಿಗೆ ತೂರುತ್ತ ಮಾನವ ಸಮಾಜವನ್ನು ಅಸಹಜ ಜೀವನ ಶೈಲಿಯತ್ತ ಪ್ರೇರೇಪಿಸುವತ್ತಲೇ ತೀವ್ರ ಹಂಬಲ ಮತ್ತದಕ್ಕೆ ತಕ್ಕಂಥ ಉನ್ಮಾದವನ್ನು ಹೊಂದಿದ್ದ ಉಪ್ಪು ನೀರಿನ ಆ ನಿರ್ಜೀವ ಕಪ್ಪೆಚಿಪ್ಪುಗಳು ರಪ್ಪನೆ ಗುರೂಜಿಯ ಹಸ್ತದೊಳಗೆ ಸೇರಿಕೊಂಡು ಬೆಚ್ಚಗೆ ಕುಳಿತು ಮುಸಿಮುಸಿ ನಕ್ಕವು. ಬಳಿಕ ಸುಮಿತ್ರಮ್ಮನ ಭವಿಷ್ಯವನ್ನು ನಿರ್ಧರಿಸಲು ತಾವೀಗ ವಿಲಕ್ಷಣವಾಗಿ ನರ್ತಿಸಬೇಕಾದ ಕುಣಿತಕ್ಕೆ ಗುರೂಜಿಯ ಅಪ್ಪಣೆಯನ್ನು ಕಾಯುತ್ತ ಉಸಿರು ಬಿಗಿಹಿಡಿದು ಕಾದವು. ಗುರೂಜಿ ತಾವು ಬಾಚಿದ ಕವಡೆಗಳನ್ನು ಎತ್ತಿ ಕಣ್ಣು ಮುಚ್ಚಿ ಹಣೆಗೊತ್ತಿಕೊಂಡು ಅರೆ ನಿಮಿಷ ಮಣಮಣ ಮಂತ್ರಿಸಿದರು. ಬಳಿಕ ತಮ್ಮ ಕೈಗಂಟನ್ನು ಗಿರ್ರನೆ ತಿರುಗಿಸಿ ಸರಕ್ಕನೆ ಮೇಜಿನ ಮೇಲೆ ಕಲಾತ್ಮಕವಾಗಿ ಹರಡಿದರು.

ಆ ಕವಡೆಗಳು ಸಟಸಟನೇ ಮೇಜಿಗಪ್ಪಳಿಸಿ ಒಂದಷ್ಟು ಮಕಾಡೆ ಬಿದ್ದವು, ಸುಮಿತ್ರಮ್ಮನ ತಳಮಳವನ್ನು ಕಂಡು ಕೃತ್ರಿಮವಾಗಿ ನಕ್ಕವು. ಉಳಿದವು ಸ್ವಲ್ಪಹೊತ್ತು ಯದ್ವಾತದ್ವ ಹಾರಾಡಿ ಸ್ತಬ್ಧವಾದವು. ಕವಡೆಗಳು ಬಿದ್ದ ವಿವಿಧ ಭಂಗಿಗಳ ಮೇಲೆ ಗುರೂಜಿಯವರು ತಮ್ಮ ಜ್ಯೋತಿಷ್ಯದ ಲೆಕ್ಕಾಚಾರವನ್ನು ಹರಿಯಬಿಟ್ಟರು. ಸುಮಿತ್ರಮ್ಮನಿಗೆ ಈಗ ಯಾಕೋ ಒಳಗೊಳಗೇ ಕಳವಳವೆದ್ದಿತು. ಆದ್ದರಿಂದ ಗುರೂಜಿಯ ಆ ಕ್ರಿಯೆಯನ್ನು ನೋಡಲಾಗದೆ ಮುಖವನ್ನು ಕೋಣೆಯ ಗೋಡೆಯತ್ತ ತಿರುಗಿಸಿದರು. ಅಲ್ಲಿ ನೇತು ಹಾಕಿದ್ದ ಗುರೂಜಿಯವರ ತಾತ, ಮುತ್ತಾತಂದಿರ ಮತ್ತು ಕೆಲವು ಹಿರಿಯ ಮಹಿಳೆಯರ ಕಪ್ಪು ಬಿಳುಪಿನ ಭಾವಚಿತ್ರಗಳತ್ತ ಗಮನ ಹರಿಸಿದರು. ಆದರೆ ಅದರಲ್ಲೊಂದು ಹೆಂಗಸಿನ ಚಿತ್ರವು ತಮ್ಮನ್ನು ವಿಷಾದದಿಂದ ದಿಟ್ಟಿಸುವಂತೆ ಅವರಿಗೆ ಭಾಸವಾಯಿತು. ಅದು ಗುರೂಜಿಯ ತಾಯಿ ವನಜಾಕ್ಷಮ್ಮನ ಛಾಯಾಚಿತ್ರವಾಗಿತ್ತು! ಸುಮಿತ್ರಮ್ಮ ಕೂಡಲೇ ಅದರಿಂದ ದೃಷ್ಟಿ ಕಿತ್ತು ಅಟ್ಟದ ಮೇಲಿನ ಮರದ ಮುಚ್ಚಿಗೆಯತ್ತ ಹರಿಸಿ ತಮ್ಮೊಳಗಿನ ಚಡಪಡಿಕೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಆದರೆ ಗುರೂಜಿ ತಮ್ಮ ಕವಡೆಗಳನ್ನು ಎಷ್ಟೊಂದು ಮುತುವರ್ಜಿಯಿಂದ ಪರೀಕ್ಷಿಸುತ್ತಿದ್ದರೋ ಅಷ್ಟೇ ಸೂಕ್ಷ್ಮವಾಗಿ ಸುಮಿತ್ರಮ್ಮನ ನಡವಳಿಕೆಯನ್ನೂ ಗಮನಿಸುತ್ತಿದ್ದರು. ಹಾಗಾಗಿ, ‘ಏನಿದು ಸುಮಿತ್ರಮ್ಮಾ… ನಿಮ್ಮ ಮನೆಯಲ್ಲಿ ಅಪಶಕುನಗಳ ಸರಮಾಲೆಯೇ ಕುಣಿಯುತ್ತಿದೆಯಲ್ಲ! ಅವಕ್ಕೆಲ್ಲ ನೀವು ಈವರೆಗೆ ಪರಿಹಾರವನ್ನೇ ಮಾಡಿಸದಿರುವುದೂ ಇಲ್ಲಿ ತೋರಿ ಬರುತ್ತಿದೆ!’ ಎನ್ನುತ್ತ ಮೊನಚು ದೃಷ್ಟಿಯಿಂದ ಅವರನ್ನು ದಿಟ್ಟಿಸಿದರು.

ಸುಮಿತ್ರಮ್ಮ ಒಮ್ಮೆಲೇ ಕುಗ್ಗಿ ಹೋದರು. ‘ಹೌದಾ ಗುರೂಜೀ…! ಆದರೆ ನಮ್ಮ ಮನೆ ದೇವರು ಮತ್ತು ಮೂಲದ  ದೈವದೇವರುಗಳಿಗೆ ಕಾಲಕಾಲಕ್ಕೆ ಪೂಜೆ ಪುನಸ್ಕಾರಗಳನ್ನು ಕೊಡುತ್ತಲೇ ಬಂದಿದ್ದೇವಲ್ಲಾ…!’

‘ಅಯ್ಯೋ, ಅದಲ್ಲಮ್ಮ ನಾವು ಹೇಳಿದ್ದು. ನಿಮ್ಮ ಈಗಿನ ಸಮಸ್ಯೆಗಳಿಗೆ ವಿಶೇಷ ಶಾಂತಿ, ಪೂಜೆಗಳನ್ನೇನಾದರೂ ಮಾಡಿಸಿದ್ದುಂಟಾ?’

‘ಅಂಥದ್ದೇನೂ ಮಾಡಿಸಿಲ್ಲ ಗುರೂಜಿ!’

‘ಎಷ್ಟು ಮಕ್ಕಳು ನಿಮಗೆ…?’

‘ಇಬ್ಬರು…’

‘ಏನು ಮಾಡಿಕೊಂಡಿದ್ದಾರೆ…?’

ಹಿರಿಯವಳಿಗೆ ಮದುವೆಯಾಗಿ ಗಂಡ, ಮಗುವಿನೊಂದಿಗೆ ಮುಂಬೈಯಲ್ಲಿದ್ದಾಳೆ. ಮಗ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿಯಲ್ಲಿದ್ದಾನೆ. ಆದರೆ ಅವನು ಯಾವಾಗಲೂ ತುಂಬಾ ಬ್ಯುಸಿ ಇರುತ್ತಾನೆ! ಎಷ್ಟೆಂದರೆ ವರ್ಷಕ್ಕೊಮ್ಮೆ ಮನೆಗೆ ಬಂದು ಹೋಗುವುದಕ್ಕೂ ಅವನಿಗೆ ಪುರುಸೋತ್ತಿರುವುದಿಲ್ಲ. ಹಾಗಾಗಿ ನಮಗೆ ಅವನದ್ದೂ ಒಂದು ಚಿಂತೆಯಾಗಿಬಿಟ್ಟಿದೆ!’ ಎಂದು ಸುಮಿತ್ರಮ್ಮ ದುಗುಡದಿಂದ ಹೇಳಿದರು.

‘ಓಹೋ… ಹಾಗಾದರೆ ಇಬ್ಬರೂ ಚೆನ್ನಾಗಿದ್ದಾರೆಂದಾಯ್ತು. ಮಕ್ಕಳು ದುಡಿಯುವ ಪ್ರಾಯದಲ್ಲಿ ಚೆನ್ನಾಗಿ ದುಡಿದು ಸಂಪಾದಿಸಬೇಕು ಸುಮಿತ್ರಮ್ಮಾ. ಇರಲಿ ಬಿಡಿ. ನಿಮ್ಮ ಯಜಮಾನರು ಏನ್ಮಾಡಿಕೊಂಡಿದ್ದಾರೆ…?’

‘ಅವರು ಎಲ್.ಐ.ಸಿ. ಯಲ್ಲಿದ್ದರು. ಈಗ ರಿಟಾಯರ್ ಆಗಿದ್ದಾರೆ’

‘ಹ್ಞೂಂ. ಬಾಲ್ಯದಲ್ಲಿ ಮಗಳಿಗೆ ಅಪಘಾತ ಅಥವಾ ಆರೋಗ್ಯದ ಸಮಸ್ಯೆಗಳೇನಾದರೂ ಕಾಣಿಸಿಕೊಂಡದ್ದುಂಟಾ…?’

‘ಅಂಥದ್ದೇನಿಲ್ಲ ಗುರೂಜಿ. ಸಣ್ಣಪುಟ್ಟ ಶೀತ ಜ್ವರ ಬಂದಿದ್ದು ಬಿಟ್ಟರೆ ಬೇರೇನೂ ತೊಂದರೆಯಾಗಿದ್ದಿಲ್ಲ. ಅವರಿಬ್ಬರನ್ನೂ ಯಾವುದೇ ಕಷ್ಟ ತಿಳಿಯದ ಹಾಗೆ ಮುದ್ದಿನಿಂದ ಬೆಳೆಸಿದ್ದೇವೆ!’ ಎಂದರು ಸುಮಿತ್ರಮ್ಮ ಹೆಮ್ಮೆಯಿಂದ. ಆದರೆ ಗುರೂಜಿಯವರಿಗೆ ಅದೇ ಬೇಕಿತ್ತು.

‘ಓಹೋ ಹೌದಾ, ಹಾಗಾದರೆ ನಿಮ್ಮ ಮಕ್ಕಳು ಅದೃಷ್ಟವಂತರು ಬಿಡಿ! ಹೌದೂ, ನಿಮ್ಮ ಮಗಳ ಚೊಚ್ಚಲ ಹೆರಿಗೆಯಲ್ಲಿ ಯಾವುದೋ ಕಂಟಕವಾಗಿರಬೇಕಲ್ಲ…?’ ಎಂದು ತಮ್ಮ ಬುದ್ಧಿವಂತಿಕೆಗೆ ತಟ್ಟನೆ ಹೊಳೆದ ವಿಷಯವನ್ನು ಹಾಗೇ ಎತ್ತಿ ಸುಮಿತ್ರಮ್ಮನ ಮುಂದಿಟ್ಟರು.

ಅಷ್ಟು ಕೇಳಿದ ಸುಮಿತ್ರಮ್ಮನಿಗೆ ವಿಸ್ಮಯವಾಯಿತು. ‘ಅಯ್ಯೋ ದೇವರೇ, ಇವರ ಶಕ್ತಿಯೇ…!’ ಎಂದುಕೊಂಡವರು ಗುರೂಜಿಯ ಮೇಲೆ ಇನ್ನಷ್ಟು ಗೌರವ ತಳೆದು, ‘ಹೌದು ಹೌದು ಗುರೂಜೀ…ಅದೊಂದು ಘಟನೆಯಲ್ಲಿ ನಾವಿಬ್ಬರೂ ಅರೆಜೀವವಾಗಿ ಬಿಟ್ಟಿದ್ದೆವು!’ ಎಂದರು ನೋವಿನಿಂದ.

ಹೌದೌದು! ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೂ ದೈಹಿಕ ಶ್ರಮವನ್ನೂ ಕಷ್ಟಸುಖದ ತಿಳುವಳಿಕೆಯನ್ನೂ ಕೊಡದೆ ಬೆಣ್ಣೆಯ ಮುದ್ದೆಯಂತೆ ಬೆಳೆಸಿದರೆ ಅವರಿಗೆ ಮುಂದೆ ಸಹಜ ಹೆರಿಗೆಯಾಗಲು ಹೇಗೆ ಸಾಧ್ಯ…? ಆ ಭಾಗ್ಯವೇನಿದ್ದರೂ ಬಡ ಹೆಣ್ಣುಮಕ್ಕಳಿಗೆ ಮಾತ್ರ! ಎಂದು ಗುರೂಜಿ ಮನಸ್ಸಿನಲ್ಲೇ ಅಂದುಕೊಂಡವರು,  ‘ಹೌದು ಸುಮಿತ್ರಮ್ಮಾ ನಾವು ಅದಕ್ಕೇ ಕೇಳಿದ್ದು. ಆವತ್ತು ನಡೆದ ಆ ಕಂಟಕ ಇಂದು ಇಲ್ಲಿ ತೋರಿ ಬರುತ್ತಿದೆ!’ ಎಂದು  ಗಂಭೀರವಾಗಿ ಹೇಳಿದರು. ಆಗ ಸುಮಿತ್ರಮ್ಮ ಕಣ್ಣಗಲಿಸಿ ಅಚ್ಚರಿ ಸೂಚಿಸಿದರು.

‘ನಿಮ್ಮ ಬಡಾವಣೆಯಲ್ಲಿ ಒಟ್ಟು ಎಷ್ಟು ಮನೆಗಳಿವೆ ಸುಮಿತ್ರಮ್ಮಾ?’ ಎಂದು ಗುರೂಜಿಯವರು ಹೊಸ ಪ್ರಶ್ನೆಯೊಂದನ್ನು ಹಗುರವಾಗಿ ಎಸೆದರು.

‘ಒಟ್ಟು ಮೂವತ್ತೊಂದು ಮನೆಗಳಿವೆ ಗುರೂಜೀ…’ ಎಂದು ಸುಮಿತ್ರಮ್ಮ ಅಷ್ಟೇ ವಿಧೇಯರಾಗಿ ಅಂದರು.

‘ಮಧುಮಾಂಸ ಸೇವಿಸುವವರ ಮನೆಗಳೇ ಹೆಚ್ಚಾಗಿರುವಂತೆ ತೋರಿ ಬರುತ್ತಿದೆ ಇಲ್ಲಿ, ಹೌದೋ…?’

‘ಹೌದು ಗುರೂಜೀ…!’ ಎಂದು ಸುಮಿತ್ರಮ್ಮ ಮತ್ತೆ ಅಚ್ಚರಿಯಿಂದ ಉತ್ತರಿಸಿದಾಗ ಕೆಲವು ಕ್ಷಣ ಮೌನ ತಳೆದ ಗುರೂಜಿಯವರು ಮರಳಿ ಕವಡೆಗಳತ್ತ ದೃಷ್ಟಿ ಹರಿಸಿ ಮತ್ತೇನನ್ನೋ ಲೆಕ್ಕ ಹಾಕಿದರು. ಬಳಿಕ, ‘ನಾಗ ಸ್ವರೂಪಿ ಶಕ್ತಿಯೊಂದು ನಿಮ್ಮ ವಠಾರದಲ್ಲಿ ಸುತ್ತಾಡುತ್ತಿರುವುದು ವೇದ್ಯವಾಗುತ್ತಿದೆ. ಹೌದೋ…?’ ಎಂದು ತಮ್ಮ ಅನುಮಾನವನ್ನು ಹತ್ತಿಕ್ಕುತ್ತ ಪ್ರಶ್ನಿಸಿದರು. ಆಗ ಮಾತ್ರ ಸುಮಿತ್ರಮ್ಮ ಗುರೂಜಿಯವರನ್ನು ಸಂಪೂರ್ಣವಾಗಿ  ನಂಬಿಬಿಟ್ಟರು.

‘ಹೌದು, ಹೌದು. ಗುರೂಜೀ… ವಠಾರದೊಳಗೇನು, ಕೆಲವು ದಿನಗಳಿಂದ ದೊಡ್ಡ ನಾಗರಹಾವೊಂದು ಹಠಕ್ಕೆ ಬಿದ್ದಂತೆ ನನ್ನ ಮನೆಯೊಳಗೆಯೇ ನುಸುಳುತ್ತಿದೆ. ಅದೇ ವಿಷಯವಾಗಿ ನಾನೀವತ್ತು ನಿಮ್ಮ ಹತ್ತಿರ ಬಂದಿರುವುದು. ನನಗ್ಯಾಕೋ ತೀರಾ ಭಯವಾಗಿಬಿಟ್ಟಿದೆ ಗುರೂಜೀ…!’ ಎಂದು ಪಟಪಟನೆ ಹೇಳಿದ ಸುಮಿತ್ರಮ್ಮನ ಕಣ್ಣುಗಳು ತೇವಗೊಂಡವು.

‘ಹ್ಞೂಂ! ಹೌದಾ, ಆದರೆ ಅದಕ್ಕೆ ಕಾರಣವೂ ಇದೆ ಸುಮಿತ್ರಮ್ಮಾ. ನಾಗನು ಮುನಿಸಿಕೊಂಡಿದ್ದಾನೆ. ನಿಮ್ಮ ಮನೆಯೋ ಅಥವಾ ವಠಾರದೊಳಗೋ ಅವನಿಗೆ ಅಶುದ್ಧವಾಗಿದೆ. ಅದನ್ನು ಸೂಚಿಸಲೆಂದೇ ನಾಗಧೂತನು ಕಾಣಿಸಿಕೊಂಡಿರುವುದು!’

‘ಹೌದಾ, ಅಯ್ಯಯ್ಯೋ ದೇವರೇ…! ಅದಕ್ಕೇನು ಪರಿಹಾರ ಗುರೂಜೀ…?’

‘ಇದೆ ಸುಮಿತ್ರಮ್ಮಾ ಪರಿಹಾರವಿದೆ. ಆದಷ್ಟು ಬೇಗ ಅದನ್ನು ಮಾಡಿಸಿದರೆ ಒಳ್ಳೆಯದು. ಮೊದಲಿಗೆ ನಿಮ್ಮ ಮನೆಗೆ ಬರುತ್ತಿರುವ ನಾಗನ ನಿವಾರಣೆಗೆ ನಾಗಶಾಂತಿಯೊಂದನ್ನು ಮಾಡಿಸಬೇಕು. ನಂತರ ಷಣ್ಮಖಕ್ಷೇತ್ರಕ್ಕೆ ಹೋಗಿ ಕೆಲವು ಪೂಜೆಗಳನ್ನು ಕೊಟ್ಟು ನಿಮ್ಮ ಶಕ್ತ್ಯಾನುಸಾರ ತಪ್ಪು ಕಾಣಿಕೆಯನ್ನು ಹಾಕಿ ಬನ್ನಿ. ಅದರಿಂದ ನಾಗನು ಸಂತುಷ್ಟನಾಗುತ್ತಾನೆ. ಆಮೇಲೆ ಈ ವಿಷಯವಾಗಿ ನಿಮ್ಮ ವಠಾರದವರನ್ನೂ ನೀವು ಎಚ್ಚರಿಸುವುದು ಒಳ್ಳೆಯದು!’ ಎಂದು ಗುರೂಜಿ, ಸುಮಿತ್ರಮ್ಮನ ಮುಖಭಾವವನ್ನು ಅಳೆಯುತ್ತ ಹೇಳಿದರು. ಆಗ ಸುಮಿತ್ರಮ್ಮನ ಮುಖ ಕಳೆಗುಂದಿತು. ಅಯ್ಯಯ್ಯೋ! ಅದೆಂಥದ್ದು ಅಶುದ್ಧ…? ನಾವೇನು ಮಾಂಸಹಾರಿಗಳಲ್ಲ. ಅಲ್ಲದೇ ಮಡಿಮೈಲಿಗೆಯ ವಿಚಾರವಾಗಲೀ, ಮುಟ್ಟಿನ ತೊಂದರೆಯನ್ನಾಗಲೀ ನಾನು ಬಹಳವೇ ಕಟ್ಟುನಿಟ್ಟಿನಿಂದ ನಿಭಾಯಿಸಿಕೊಂಡು ಬಂದವಳು. ಅಂಥದ್ದರಲ್ಲಿ ನನ್ನ ಮನೆಯಲ್ಲಿ ಅಶುದ್ಧವಾಗುವುದೆಂದರೇನು…? ಎಂದು ಯೋಚಿಸಿದ ಸುಮಿತ್ರಮ್ಮ ಗೊಂದಲಗೊಂಡರು. ಬಳಿಕ, ‘ಅಲ್ಲ ಗುರೂಜಿ, ನಾವು ಮಡಿಮೈಲಿಗೆಯಲ್ಲಿ ಹಿಂದಿನಿಂದಲೂ ತುಂಬಾ ಜಾಗ್ರತೆ ಮಾಡುತ್ತ ಬಂದವರು. ಹಾಗಾಗಿ ನನ್ನ ಮನೆಯಲ್ಲಿ ಅಶುದ್ಧದ ಸಮಸ್ಯೆ ಆಗಿರಲು ಸಾಧ್ಯವಿಲ್ಲ. ಆದರೆ ವಠಾರದವರ ವಿಷಯದಲ್ಲಿ ಹೇಳಲು ಬರುವುದಿಲ್ಲ. ಅವರಿಂದಲೇ ಆಗಿದ್ದರೆ ಆ ನಾಗಧೂತನು ಅಂಥವರ ಮನೆಗಳಿಗೇ ಹೋಗಬೇಕಿತ್ತಲ್ಲವಾ…? ನನ್ನ ಮನೆಗೆ ಯಾಕೆ ಬರುತ್ತಿದ್ದಾನೆ…?’ ಎಂದು ಆತಂಕದಿಂದ ಪ್ರಶ್ನಿಸಿದರು.

   ಆಗ ಗುರೂಜಿಗೆ ಸ್ವಲ್ಪ ತಮಾಷೆ ಮಾಡಿ ಸನ್ನಿವೇಶವನ್ನು ತಿಳಿಗೊಳಿಸುವ ಎಂದು ತೋರಿತು. ಆದ್ದರಿಂದ, ‘ಹೌದೌದು, ಸುಮಿತ್ರಮ್ಮಾ ನೀವು ಹೇಳುವುದು ಮತ್ತು ಪ್ರಶ್ನಿಸುವುದು ಎರಡೂ ಸರಿಯಾಗಿದೆ. ಆದರೆ ಅದಕ್ಕೆ ಉತ್ತರಿಸಲು ನಿಮ್ಮ ಮನೆಗೆ ಬಂದಿರುವುದು ನಾನಲ್ಲವಲ್ಲ…!’ ಎಂದು ಹಾಸ್ಯ ಮಾಡಿ ನಕ್ಕರು. ಆದರೆ ಆಹೊತ್ತು ಭಯದ ಸುಳಿಯಲ್ಲಿ ಸಿಲುಕಿ ಹೈರಾಣಾಗಿದ್ದ ಸುಮಿತ್ರಮ್ಮ ಅವರ ಹಾಸ್ಯವನ್ನೂ, ನಗುವನ್ನೂ ಕಂಡು ಪೆಚ್ಚಾದರು. ಅದನ್ನು ಗಮನಿಸಿದ ಗುರೂಜಿಯೂ ಸಪ್ಪಗಾದರು.

‘ನೋಡಿ ಸುಮಿತ್ರಮ್ಮಾ, ಆ ನಾಗನ ಚಿತ್ತ ಹ್ಯಾಗಿದೆಯೋ ಯಾರಿಗೆ ಗೊತ್ತು? ಬಹುಶಃ ಅವನು ನಿಮ್ಮ ಮೂಲಕವೇ ನಿಮ್ಮ ವಠಾರ ಶುದ್ಧಿಯನ್ನು ಮಾಡಿಸಲು ಹೊರಟಿರಬಹುದಲ್ಲವಾ? ಅದೂ ಅಲ್ಲದೆ ನಾವು ಹೇಳಿದ್ದು ನಿಮ್ಮ ಮನೆ ಮೈಲಿಗೆಯಾಗಿದೆ ಎಂದಲ್ಲ. ವಠಾರದಲ್ಲಿ ಯಾರಾದರೂ ಮಾಡಿರಬಹುದು. ನಿಮ್ಮ ಬಡಾವಣೆಯ ಸಮೀಪ ಒಂದು ಪುರಾತನವಾದ ನಾಗಬನವಿರುವುದೂ ಇಲ್ಲಿ ಕಾಣಿಸುತ್ತಿದೆ. ಹೌದೋ…?’ ಎಂದು ಗುರೂಜಿ ಸುಮಿತ್ರಮ್ಮನಲ್ಲಿ ಮತ್ತೊಂದು ವಿಸ್ಮಯ ಹುಟ್ಟಿಸಿದರು.  ಅಷ್ಟು ಕೇಳಿದ ಸುಮಿತ್ರಮ್ಮ, ‘ಹೌದು ಗುರೂಜಿ ಇದೆ. ಅಂದರೆ, ಓ…ದೇವರೇ! ಈಗ ತಿಳಿಯಿತು. ಆ ಬನದ ಹತ್ತಿರ ಕೂಲಿನಾಲಿ ಮಾಡಿಕೊಂಡಿರುವ ಒಂದು ಕುಟುಂಬವಿದೆ. ಬಹುಶಃ ಅವರದ್ದೇ ಕಿತಾಪತಿ ಇದೆಲ್ಲಾ…! ನಾಯಿ, ನರಿ, ಕೋಳಿ, ಬೆಕ್ಕು, ಹಸು ಅಂತ ಸಿಕ್ಕಿಸಿಕ್ಕಿದ ಹೊಲಸು ಪ್ರಾಣಿಗಳನ್ನೆಲ್ಲ ತಂದು ಸಾಕುತ್ತ ಇಡೀ ವಠಾರವನ್ನು ಗಬ್ಬೆಬ್ಬಿಸಿಬಿಟ್ಟಿದ್ದಾರೆ ದರಿದ್ರದವುಗಳು…!’ ಎಂದು ಸುಮಿತ್ರಮ್ಮ ಅಸಹ್ಯ ಮತ್ತು ಅಸಹನೆಯಿಂದ ಬೈದುಕೊಂಡರು.

   ಈಗ ಗುರೂಜಿಯವರಿಗೆ ತಾವು ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿದಷ್ಟು ಖುಷಿಯಾಯಿತು. ‘ಹೌದು. ನಾವೂ ಅದನ್ನೇ ಹೇಳುತ್ತಿರುವುದು. ಅಂಥವರು ಅದೆಷ್ಟು ಕೆಟ್ಟದಾಗಿ ಬದುಕುತ್ತ ಯಾವ್ಯಾವ ಅನಿಷ್ಟವನ್ನು ಸೃಷ್ಟಿಸುತ್ತಿದ್ದರೂ ಅದರಿಂದ ಅವರಿಗೇನೂ ತೊಂದರೆಯಾಗುವುದಿಲ್ಲ. ಆದರೆ ಅಂಥವರ ಅವಾಂತರದಿಂದ ಪ್ರಥಮವಾಗಿ ನಮ್ಮಂಥವರಿಗೇನೇ ಸಮಸ್ಯೆಗಳು ತಲೆದೋರುವುದು ಸುಮಿತ್ರಮ್ಮಾ…! ಯಾಕೆಂದರೆ ಅಂಥವರ ಅನಾಚಾರಗಳನ್ನು ದೇವರಿಗೆ ನಮ್ಮಿಂದಲೇ ಸರಿಪಡಿಸಲಿಕ್ಕಿರುತ್ತದೆ. ಹಾಗಾಗಿ ನಾವು ಹೇಳಿದ್ದನ್ನು ಅವರಿಗೂ ಹೋಗಿ ತಿಳಿಸಿ ಮತ್ತು ಒಮ್ಮೆ ವರಾಠವರನ್ನೆಲ್ಲಾ ಒಟ್ಟುಗೂಡಿಸಿ ಒಂದು ಸಾಮೂಹಿಕ ಆಶ್ಲೇಷಬಲಿಯನ್ನೂ ನಾಗಶಾಂತಿಯನ್ನೂ ಮಾಡಿಸಿಬಿಡಿ. ಎಲ್ಲರಿಗೂ ಶ್ರೇಯಸ್ಸಾಗುತ್ತದೆ!’ ಎಂದು ಹೇಳಿದ ಗುರೂಜಿ ಕವಡೆಗಳನ್ನೂ, ಜ್ಯೋತಿಷ್ಯದ ಕೈಪಿಡಿಯನ್ನೂ ಮಡಿಚಿ ಬದಿಗಿಟ್ಟರು. ಬಳಿಕ ಕಣ್ಣು ಮುಚ್ಚಿ ತಮ್ಮ ದೇವರಿಗೆ ಭಕ್ತಿಯಿಂದ ನಮಿಸಿ ನಿಮಿತ್ತಶಾಸ್ತ್ರಕ್ಕೆ ಮುಕ್ತಾಯ ಹಾಡಿದರು.  

   ಸುಮಿತ್ರಮ್ಮನಿಗೆ ಆ ಕೂಡಲೇ ರಾಧಾಳ ಕುಟುಂಬವನ್ನು ನೆನೆದು ಕೆಟ್ಟ ಕೋಪ ಬಂತು. ನಮ್ಮಂಥ ಮಡಿವಂತರ ವಠಾರಕ್ಕೆ ಇಂಥ ಹಾಳಾದವೆಲ್ಲ ಎಲ್ಲಿಂದ ಬಂದು ವಕ್ಕರಿಸಿದವೋ…? ಈ ಶಂಕರನೊಬ್ಬ ಮಹಾ ಧನಪಿಶಾಚಿ. ದುಡ್ಡಿನ ಆಸೆಗೆ ಬೇಕೆಂದೇ ಹಾಳು ಮೈಲಿಗೆಯನ್ನು ತಂದು ಸುರಿದುಬಿಟ್ಟ ದರಿದ್ರವನು! ಎಂದು ಮನಸ್ಸಿನಲ್ಲೇ ಅವನಿಗೆ ಶಪಿಸಿದವರು, ‘ಆಯ್ತು ಗುರೂಜಿ, ನೀವು ಹೇಳಿದ್ದನ್ನು ಆದಷ್ಟು ಬೇಗ ನೆರವೇರಿಸುತ್ತೇನೆ. ಒಟ್ಟಾರೆ ನನಗೂ, ನನ್ನ ಕುಟುಂಬಕ್ಕೂ ಬಡಿದಿರುವ ಆಪತ್ತು ಪರಿಹಾರವಾದರೆ ಸಾಕು!’ ಎಂದರು ನಮ್ರವಾಗಿ.

‘ಆಗುತ್ತದೆ ಸುಮಿತ್ರಮ್ಮ. ನಾವು ಹೇಳಿದ್ದನ್ನು ನೆನಪಿಟ್ಟುಕೊಂಡು ನೆರವೇರಿಸಿ. ಆನಂತರ ನಿಮ್ಮ ಜೀವನದಲ್ಲಾಗುವ ಬದಲಾವಣೆಗಳು ನಿಮಗೇ ತಿಳಿಯುತ್ತವೆ!’ ಎಂದು ಗುರೂಜಿ ಭರವಸೆ ನೀಡಿದರು.

‘ಸರಿ ಗುರೂಜಿ. ಎಲ್ಲ ನಿಮ್ಮ ಆಶೀರ್ವಾದ ಮತ್ತು ಮಾರ್ಗದರ್ಶನದಿಂದಲೇ ನಡೆಯಬೇಕು. ಇನ್ನೊಮ್ಮೆ ಗಂಡನೊಂದಿಗೆ ಬಂದು ನೀವು ಸೂಚಿಸಿದ ಪೂಜಾವಿಧಿಗಳಿಗೆ ತಗುಲುವ ಖರ್ಚುವೆಚ್ಚದ ಬಗ್ಗೆಯೂ ಮಾತಾಡುತ್ತೇನೆ!’ ಎಂದು ನಮಸ್ಕರಿಸಿ ಎದ್ದು ಹೊರಟರು. ಆದರೆ ಗುರೂಜಿ ಕಕ್ಕಾಬಿಕ್ಕಿಯಾದರು. ಅರೇರೇ ಇವಳೇ…! ಇಷ್ಟು ಹೊತ್ತು ಕಣೀರಿಡುತ್ತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡವಳು ಕೆಲಸ ಮುಗಿಯುತ್ತಲೇ ಕಾಣಿಕೆ ಕೊಡುವುದನ್ನೇ ಮರೆತು ಹೊರಟಿದ್ದಾಳಲ್ಲ…? ಎಂದು ತಳಮಳಿಸಿದವರು, ‘ಸುಮಿತ್ರಮ್ಮ, ಈಗಿನ ಕಾಣಿಕೆಯನ್ನು ಆ ಕುಂಕುಮದ ಹರಿವಾಣದಲ್ಲಿ ಇಟ್ಟು ಹೋಗಿ ಆಯ್ತಾ…!’ ಎನ್ನುತ್ತ ಹಲ್ಲು ಗಿಂಜಿದರು.

‘ಅಯ್ಯೋ, ಕ್ಷಮಿಸಿ ಗುರೂಜಿ. ನನ್ನ ಹಾಳಾದ ಚಿಂತೆಯಲ್ಲಿ ಅದು ಮರೆತೇ ಹೋಯಿತು…!’ ಎಂದ ಸುಮಿತ್ರಮ್ಮ ಗುರೂಜಿಯ ಹರಿವಾಣಕ್ಕೆ ನೂರರ ಎರಡು ನೋಟುಗಳನ್ನಿಟ್ಟಾಗ ಗುರೂಜಿಯ ತಾಳತಪ್ಪಿದ್ದ ಎದೆ ಯಥಾಸ್ಥಿತಿಗೆ ಬಂತು. ‘ಆಯ್ತು, ಪರ್ವಾಗಿಲ್ಲ. ಹೋಗಿ ಬನ್ನಿ!’ ಎಂದರು ನಗುತ್ತ. ಆಗ ಅವರಿಗೆ ಪಕ್ಕನೇ ಇನ್ನೊಂದು ವಿಷಯ ನೆನಪಾಯಿತು. ‘ಹ್ಞಾಂ, ಸುಮಿತ್ರಮ್ಮ ಸ್ವಲ್ಪ ನಿಲ್ಲಿ…!’ ಎಂದವರು, ಮರದ ಬೇರಿನ ತುಂಡೊಂದನ್ನು ತೆಗೆದು ಒಂದುಕ್ಷಣ ಮಂತ್ರಿಸಿ ಹಿಡಿದುಕೊಂಡವರು, ‘ಮನೆಯಲ್ಲಿ ಯಾವುದಾದರೂ ದೇವರ ತೀರ್ಥ ಇದೆಯಾ?’ ಎಂದರು.

‘ಹೌದು ಗುರೂಜಿ ಇದೆ…’ ಎಂದರು ಸುಮಿತ್ರಮ್ಮ ಆಸಕ್ತಿಯಿಂದ.

‘ತಗೊಳ್ಳಿ ಈ ಬೇರನ್ನು ಆ ತೀರ್ಥದಲ್ಲಿ ಅದ್ದಿ ಹಾವು ಕಂಡ ಜಾಗದಲ್ಲೆಲ್ಲ ಸಿಂಪಡಿಸಿ. ಬಳಿಕ ದೇವರ ಕೋಣೆಯಲ್ಲಿಟ್ಟುಬಿಡಿ. ಇನ್ನು ಕೆಲವು ಕಾಲ ನಿಮ್ಮ ಹತ್ತಿರ ಯಾವ ಹಾವೂ ಸುಳಿಯುವುದಿಲ್ಲ!’ ಎಂದು ಅವರ ಕೈಗೆಸೆದರು. ಒಣ ಬೇರಿನ ತುಂಡೊಂದು ಕೈಗೆ ಬೀಳುತ್ತಲೇ ಸುಮಿತ್ರಮ್ಮನಿಗೆ ಮಂತ್ರದಂಡವೊಂದು ಸಿಕ್ಕಿಷ್ಟು ಧೈರ್ಯ ಬಂತು. ಆ ವಸ್ತುವನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು, ‘ಆಗಲಿ ಗುರೂಜಿ!’ ಎಂದು ನಮಸ್ಕರಿಸಿ ಪರ್ಸಿನೊಳಗಿಟ್ಟು ಹೊರಟು ಬಂದರು.

(ಮುಂದುವರೆಯುವುದು)

****************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

Leave a Reply

Back To Top