ಲೇಖನ
ಮಕಾನದಾರರ ಪ್ಯಾರಿ ಪದ್ಯಗಳಲ್ಲಿ
ಭಾಷೆಯ ಬೆಡಗು
ಶಮಾ. ಜಮಾದಾರ.
ಮಾನವೀಯ ಸಂಬಂಧಗಳನ್ನು ಸಾಹಿತ್ಯದಲ್ಲಿ ಹುಡುಕುವ ಸಮನ್ವಯ ಕವಿ,
ಎ. ಎಸ್. ಮಕಾನದಾರ ಅವರು. ನ್ಯಾಯಾಲಯದ ಕಡತಗಳಲ್ಲಿ ತಡಕಾಡುತ್ತಲೇ ಸಾಹಿತ್ಯದ ಲೋಕದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ.. ಅಕ್ಕಡಿಸಾಲುಗಳಲ್ಲಿ ಅಕ್ಷರ ಬೀಜ ಬಿತ್ತುತ್ತಾ..ಮತ್ತು ಪ್ಯಾರಿಯ ಎದೆಯಲ್ಲಿ ಪ್ರೀತಿಯ ದೀಪ ಬೆಳಗುತ್ತಾ. ಸುಮಾರು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಎ. ಎಸ್. ಮಕಾನದಾರ ಅವರು ಈವರೆಗೂ ಆರು ಸ್ವರಚಿತ ಕವನ ಸಂಕಲನಗಳನ್ನು ನಮ್ಮ ಕೈಯಲ್ಲಿ ಇಟ್ಟಿದ್ದಾರೆ.
ಉಳಿದ ಪ್ರಕಾರದ ಸಾಹಿತ್ಯದಲ್ಲೂ ಕೂಡ ಹಿಂದೆ ಬಿದ್ದಿಲ್ಲ.
ಅವರ ಕವನ ಸಂಕಲನಗಳು,
ಎದೆ ಸುಡುವ ನೆನಹುಗಳು
ಕೆಳಗಲಮನಿಯ ಮಾಬವ್ವ ಮತ್ತು ಇತರೆ ಕವಿತೆಗಳು
ಸಖಿಸಖ
ಮೌನದ ಬೀಜ
ಅಕ್ಕಡಿ ಸಾಲು
ಪ್ಯಾರಿ ಪದ್ಯ.
ಆರೂ ಕವನ ಸಂಕಲನದ ಕವನಗಳು ಓದುಗರ ಮನದ ಮಾತಾಗಿವೆ. ಈಗ ಎಲ್ಲರ ಮನಕುಣಿಸುತಿರುವ ಪ್ಯಾರಿ ಪದ್ಯ ಸಂಕಲನವು..ಅನೇಕ ಹೊಸ ಗುಣಲಕ್ಷಣಗಳಿಂದ ಚರ್ಚೆಯಲ್ಲಿದೆ. ಹೊಸ ನೋಟ, ಹೊಸ ರೂಪ, ಪುಟ್ಟ ಹನಿಗಳಲ್ಲಿ ಜೇನೊಸರುವ ಮಾಧುರ್ಯ.. ಈ ಪ್ಯಾರಿಯನ್ನು ಕಂಡವರೆಲ್ಲಾ..ಪ್ಯಾರ್ಗೇ ಆಗಬುಟ್ಟೈತೆ..ಎಂದು ಪ್ಯಾರಿಯ ಹಿಂದೆ ಮುಂದೆ ಸುಳಿದಾಡುವ ದೃಶ್ಯ.. ಈಗ ಎಲ್ಲೆಲ್ಲೂ ಕಂಡುಬರುತ್ತಿದೆ. ಆ ಸಾಲಿನಲ್ಲಿ ನಾನು ಕೂಡ ಮುಂಚೂಣಿಯಲ್ಲಿರುವೆ.
ಪ್ಯಾರಿಯ ಆ ಲಚಕ್, ಆ ನಜಾ಼ಕತ್ ನ್ನು ಉರ್ದು..ಹಿಂದಿ ಭಾಷೆಯ ಸಿರಿಯಲ್ಲಿ ಕವಿ ಕಟ್ಟಿಕೊಟ್ಟು..ಓದುಗರನ್ನು ಫಿದಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೊಂದು ಹನಿಗೂ ಮಧುರವಾದ ಕನ್ನಡ, ಉರ್ದು ಶೀರ್ಷಿಕೆ ಕೊಟ್ಟು ಇನ್ನೂ ಸುಂದರ ಗೊಳಿಸಿದ್ದಾರೆ. ಸಜನಿ, ಪ್ಯಾರಿ, ಲೇ ಇವಳೇ, ಹೂವಿ, ಸಾಕಿ, ಮಾಷುಕಾ, ದಿಲ್ ರುಬಾ..ಗೆಳತಿ, ಯಾ ರಬ್..ಆಹಾ!! ಸಂಬೋಧನೆಯೇ ಇಷ್ಟು ರಸಿಕತೆಯಿಂದ ಕೂಡಿರಲು ಒಳಗಿನ ಹೂರಣವೆಷ್ಟು ಸಿಹಿಯಾಗಿರಬೇಡ ಅಂತ.
ಒಂದು ಕೃತಿ ಗೆಲುವಿನ ಹೂಮುಡಿದು ಎಲ್ಲರ ಕೈಯಲ್ಲಿ ನಲಿಯಬೇಕಾದರೆ..ಅದಕ್ಕೆ ಮುದಗೊಳ್ಳುವ ಭಾಷೆಯ ಬೆಡಗು ಕೂಡ ಕಾರಣವಾಗುತ್ತದೆ.
ಸಜನಿ..
ನೀ ಹಚ್ಚಿದ ಸುರಮಾ
ಪೂಸಿದ ಅತ್ತರನಿಂದ
ನನ್ನ ಜನಾಜಾ ಅರಳಿದೆ..
ಇಲ್ಲಿ, ಸುರಮಾ, ಅತ್ತರ ಜನಾಜಾ..ಸಜನಿ ಎಂಬ ಶೀರ್ಶಿಕೆಯನ್ನು ಪೋಷಿಸಿ ಬೆಳೆಸಿದವು.
ಇದೇ ತೆರನಾಗಿ,
ಮೆಹಬೂಬಾ,
ದುವಾ ಕುಬುಲ್ ಆಗಿದೆ
ಎದೆಗೆ ಒರಗಿದ ಪ್ರೇಯಸಿ
ಮುಂಗುರುಳು ತೀಡುತ ಹನಿಸಿ ಬಿಟ್ಟಳು
ತುಂಬಿ ತುಳುಕಿತು ಚಮ್ಲಾ..
ಇಲ್ಲಿ ಕೂಡ ಮೆಹಬೂಬಾಳ ಮೆಹರ್ಬಾನಿಯಿಂದ ಜಿಂದಗಿಯ ಚಮ್ಲಾ..ತುಂಬಿ ತುಳುಕಾಡಿದ ಧನ್ಯತೆ, ಬೇಡಿದ ದುವಾ ಸಿದ್ದಿಸಿದ ತೃಪ್ತಿ.. ಕವಿಯ ಕೈಚಳಕದಲ್ಲಿ ಅರ್ಥಪೂರ್ಣ ಶಬ್ದಗಳ ಆಯ್ಕೆಯಲ್ಲಿ ಸಾಕಾರವಾಗಿದೆ.
ಹೂವಿ…ಆಹಾ!! ಎಂತಹ ಕೋಮಲ ಭಾವವಿದು.
ಹೂವಿ
ಕಮಲದ ಮುಖದವಳೇ ಕವಡೆಯ ಕಣ್ಣವಳೇ
ಮಾಗಿದ ಹಣ್ಣಿನಂತವಳೇ
ಕೇದಗಿಬನದಲಿ ಸರ್ಪವಾಗಿ ಕಾಡುವವಳೇ
ಯಾವೂರ ಮಾಯಾಂಗನೆ ನೀ.
ಇಲ್ಲಿ ಗಮನಿಸಬೇಕಾದುದು..ಹೂವಿಯ ಚೆಲುವು, ಸ್ವಭಾವ, ವೈಯಾರ..ಎಲ್ಲವನ್ನೂ ಕನ್ನಡದ ಮೆದುಭಾಷೆಯಲ್ಲಿ ಬಣ್ಣಿಸಿ ಓದುಗರದೆಯ ಓಣಿಯಲ್ಲಿ ಗುಲ್ಲೆಬ್ಬಿಸಿದ್ದಾರೆ ಕವಿ.
ಸಾಕಿ ಎನ್ನುತ್ತಾ.. ಆತ್ಮಸಖಿಯೊಂದಿಗೆ ಮಾತಿಗಿಳಿವ ತರೀಖಾ..
ಯಾರಬ್ ಎನ್ನುತಾ ಆ ದೇವರ ಮುಂದೆ ಮಂಡಿಯೂರುವ ಪ್ರೀತಿ, ಪ್ಯಾರೀ..ಎಂದು ಹಿಗ್ಗುತಾ ಅವಳ ಪ್ರೀತಿಯ ಸೆರಗಿನಲ್ಲಿ ಅಡಗುವ ರಸಿಕತೆ..ಆ ಆಶಿಕ್ ನ ಆಷಿಯಾನಾ..ಫಕೀರ್ ನ ಏಕತಾರಿಯ ತಂತಿ ನುಡಿಸಿದ ವಿರಹ ವೇದನೆ.. ದಿಲ್ ರುಬಾ ಎನ್ನುತ್ತಾ ದಿಲ್ ಕಶ್ ಅಂದಾಜಿನ ಶರಣಾಗತಿ..ಸನಮ್ ಳೊಂದಗಿನ ಸೂಜಿದಾರವಾಗಿ ಗಡಿಗಳನ್ನು ಹೊಲಿಯುವ ಅನುಸಂಧಾನ.. ದಿವಾನಿಯೊಂದಗಿನ ಆ ದಿವಾನಾಪನ್..ಮೊಹಬತ್ತಿನ ಇಬಾದತ್ ನಲ್ಲಿ ಸಾಜನ್ ಜೊತೆಯಲ್ಲಿ ಸಜ್ದಾ ಮಾಡಿ ದುವಾಗಾಗಿ ಕೈಯೆತ್ತುವ ಆ ಇಷ್ಕ್ ಸುಭಾನಲ್ಹಾ!!
ಸಖ
ಸತ್ತ ಹೃದಯ ಮಸಣ ಸೇರಿತು
ನಿನ್ನ ಕುಡಿಮೀಸೆಯ ಕುಂಚದಿಂದ
ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದು ಬಿಡು
ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರಲಿ ಬಿಡು
ಸುಡುಕೆಂಡಗಳ ಹಾಡು ಹಾಡಲಿ ಬಿಡು.
ತುಟಿಯ ಮಾಸ್ತಿಗಲ್ಲು..ಎಂತಹ ಅದ್ಭುತ ಕಲ್ಪನೆ.. ಮೀಸೆಯ ಕುಂಚದ ಕಚಗುಳಿ ಮೈನವಿರೇಳಿಸಿತು!! ಐತಿಹಾಸಿಕ ಪ್ರೇಮ ಕಥೆಯ ಮೇಲೆ ಪಿಹೆಚ್ಡಿ ಮಾಡಲು ಬರುವ ವಿರಹಿಗಳ ಎದೆಯಂಗಳದ ಕೋಗಿಲೆ ಸುಡುವ ಕೆಂಡದಂತಹ ಹಾಡು ಹಾಡಲೆನ್ನುವ ಆ ಸಖಿಯ ಉವಾಚ..ಮಾಯ್ದ ಗಾಯಗಳನ್ನು ಕೆದಕಿ..ಹೊಸಗಾಯ ಮಾಡುತ್ತದೆ.
ಸಾಕಿ
ಮೈಯತ್ ತೊಳೆಯಲು ಗುಸುಲ್ ನೀರು ಸಿದ್ಧವಾಗಿದೆ
ಸಿದ್ಧ ಸಮಾಧಿಗೂ ಕವಿತೆ ಬದ್ಧವಾಗಿದೆ.
ಇಲ್ಲಿ ಮೈಯತ್ ಮತ್ತು ಗುಸುಲ್.. ಶಬ್ದಗಳು ಬಹಳಷ್ಟು ಸೂಕ್ತವಾಗಿ ಧ್ವನಿಸಿವೆ. ಪರ್ಯಾಯ ಪದಗಳನ್ನು ಅಲ್ಲಿ ಯೋಚಿಸಲೂ ಆಗದು. ಭಾವಲೋಲುಪ್ತತೆಗೆ ಆಪ್ತವೆನಿಸುವ ಭಾಷಾ ಶೃಂಗಾರದ ಬಗ್ಗೆ ಕವಿ ಪ್ರತಿ ಕ್ಷಣದಲ್ಲೂ ಯೋಚಿಸಬೇಕಾಗುತ್ತದೆ. ಕೊಟ್ಟ ಶೀರ್ಷಿಕೆಗೆ ಸೂಕ್ತ ಅರ್ಥ ಸೂಸುವ ಪದರತ್ನಗಳನು ಹೆಕ್ಕಿ.. ಹೆಕ್ಕಿ ಹಾರದಂತೆ ಪೋಣಿಸುವ ಕಲೆ, ಪ್ಯಾರಿಯ ಕವಿಗೆ ಕರತಲಾಮಲಕವಾಗಿದೆ. ಬಳಸಿದ ಅನ್ಯಭಾಷೆಯ ಶಬ್ದಗಳು ಎಲ್ಲೂ ಬಲವಂತದ ಬಳಕೆ ಅನಿಸಿಲ್ಲ. ಓದಿದೊಡನೆ ಕವಿಯ ಆ ಆಂತರಿಕ ತಲ್ಲಣಗಳು ಶಬ್ದಗಳಲ್ಲಿ ವ್ಯಕ್ತವಾಗಿ..ಎದೆಗಿಳಿದು ಸಿಹಿಕಹಿ ಸವಿಯನ್ನು ಉಣಿಸುವುದಕ್ಕೆ ನಿಂತುಬಿಡುತ್ತವೆ.
ಪ್ಯಾರಿಯ ಪ್ಯಾರ್ ಕಹಾನಿಯು ಸುಹಾನಿಯೆನಿಸುವ ಆ ಸಾರ್ಥಕ ಗಳಿಗೆಯು ಪುಟಪುಟಗಳಲ್ಲಿ..ಪುಟ್ಟ ಪುಟ್ಟ ಹೆಜ್ಜೆಗಳನಿಟ್ಟು ಓದುಗರನ್ನು ತೃಪ್ತಿಯ ಶಿಖರವನ್ನೇರಿಸುವುದು..ಸುಳ್ಳಲ್ಲ.
ಸಾಹಿತ್ಯ ಲೋಕದಲ್ಲಿ ಹೊಸ ಪ್ರಯತ್ನಗಳು ಸಾಗುತ್ತಲೇ ಇರುತ್ತವೆ. ಬಹಳಷ್ಟು ಕೃತಿಗಳು ಕೆಲದಿನಗಳ ಮಟ್ಟಿಗೆ ಸದ್ದು ಮಾಡಿ ನೇಪಥ್ಯಕ್ಕೆ ಸರಿದು ಬಿಡುವುದು ಸಹಜ. ಆದರೆ ಎ. ಎಸ್. ಮಕಾನದಾರ ಅವರ ಸಾಹಿತ್ಯ.. ಹಳೆಯದಾದರೂ ತನ್ನ ಘಮಲನ್ನು..ತಾಜಾತನವನ್ನು ಕಳೆದುಕೊಳ್ಳದೇ..ನಿತ್ಯ ನೂತನವೆನಿಸುತ್ತದೆ. ಸಾರ್ವಕಾಲಿಕ ಸಲ್ಲುವ ಇಂತಹ ಸಾಹಿತ್ಯದ ರಚನೆ..ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.
***********************