ಕವಿತೆ
ಒಲವಿನಾಳದ ಸ್ಪರ್ಶ
ಅಭಿಜ್ಞಾ ಪಿ ಎಮ್ ಗೌಡ
ಧಮನಿ ಧಮನಿಯಲಿ
ಅವನೆಸರ ಉಸಿರು
ಮೆಲ್ಲನೊಳನುಸುಳಿ ಕಚಗುಳಿಯ
ಬಿನದದೊಳು ಬೆರಳಾಡಿಸಿ ,
ಸ್ಪರ್ಶಿಸಿ ಅವಳೆದೆಯ ಬಯಲೊಳಗೆ
ಹದವರಿತು ಸಿಹಿಮುತ್ತುದುರಿಸಿ
ಅವಳನ್ನಾವರಿಸುತಿದ್ದರೂ
ಅದೇಕೋ.!ಏನೋ.?
ಉಸಿಕದೊಳು ಮನವಿರಿಸಿ
ಕಂಡು ಕಾಣದಾಗೆ ,
ಇದ್ದು ಇರದಾಗೆ ಇರುವನಲ್ಲ.!
ಅಡಿಗಡಿಗು ಬಿನದ ವಿಷಾದ
ಮಡುಗಟ್ಟುವಂತೆ ಮಾಡಿ….
ಬಿಕ್ಕುವ ನೋವಿನಲೆ , ನಗುವ
ಹೂದೋಟ, ಅವನೊಲವ ತಾತ್ಸಾರ ,
ಎಲ್ಲೋ.! ಏನೋ..
ಈ ಒಲವೊಳಗೆ
ಬಿರುಕಗಳ , ಒಡಕುಗಳ ಸುಳಿವಿನ
ಸಂಕೋಲೆಗೊಂದು ರಶೀದಿ
ದಕ್ಕುತಿದೆಯೆಂಬ ಗುಮಾನಿ…
ಪ್ರೀತಿಗೆ , ಪ್ರೀತಿಸುವ ಮನಸಿಗೆ ಸಹನೆ
ಸಹ್ಯ ತಥ್ಯವೆ ಒಪ್ಪುವೆ ನಾ….
ಎಷ್ಟೊತ್ತು.! ಎಷ್ಟು ದಿನ.? ಹಾಗಾದರೆ
ಪ್ರೀತಿಗೆ ಕಾಲದ ಪರಿವಿಲ್ಲವೆ..?
ಕಾರಿರುಳು ಕಾದಿಹ ಮನವಿಂದು
ಪ್ರೀತಿ ಭಿಕ್ಷೆಯ ಬೇಡಿ ಮಡಿಯೂರಿರಲು
ಅವನೊಲವ ಕಕ್ಷಿಗಳ ಆರ್ಭಟ
ಕಿಂಕೃತಿಯ ಉಡಿಲೊಳಗೆ
ಕಕ್ಕುಲತೆಯ ಬಳ್ಳಿ ಕೂಡ
ಬಿಕ್ಕುವಂತೆ ಮಾಡಿವೆ….
ದಿನಾಂತದೊರೆಗೂ ಅವನೊಲವಿನ
ಸುಪ್ರಭಾತವೆ ಗುನುಗಿದರು
ಅವಳುಸಿರಲಿ….
ಸಿಕ್ಕುತಿರುವುದಾದರೇನು.?
ತನುಗೆಡು , ಮನಭಾರ ,
ಉಪಸರವಿಲ್ಲದ
ವಾಂಛಲ್ಯ ದೂರ ದೂರವೆ
ಸರಿದೋಗುತಿದೆಲ್ಲ..!
“ತಾಯಿ ಮಗುವಿಗಂಬಲಿಸುವಂತೆ”
“ತರುಲತೆಬಳ್ಳಿಗಳು ಮಳೆಗಾಗಿ ಕಾಯ್ವಂತೆ”
ಬಕಪಕ್ಷಿಯಂತೆ ಬರಡಾದ ಮನದೊಳಗೆ
ಅವನೆಸರ ಜಪದೊಳ್
ಅಹರ್ನಿಶಿ ಕಾಯುತಿರುವ ಪ್ರೇಮಪಕ್ಷಿ…
ಉಪೋದ್ಘಾತದಿಂದಲೂ
ತತ್ಪರತೆಯೊಂದಿಗೆ ಕಾದ
ಮನಕೇಕೋ .! ಒಲವಿನಾಳದ ಬಗೆ
ಜಿಜ್ಞಾಸೆಯಾಗಿದೆ..
ಒಲವಿಗಾಗಿಯೇ
ಒಲೆತ ಅಲೆತದೊಳು ಮನ ಕುಸಿದು
ಪಾಳು ಬಿದ್ದ ಮನೆಯಂತಾಗಿ…
ಅರ್ತಿ ಒಸುಗೆ ಕ್ಷೀಣಿಸಿ
ಪ್ರಗಲ್ಭೆಯೊಳಗೆ ಉಸಿಕಾವರಿಸಿ
ಪ್ರಾಂಜಾಲದ ಆಸ್ಥೆ
ಕಣ್ಣೆದುರಿಗೆ ಅಣಕಿಸುವಂತಿದೆ…
ಅಭಿಧ್ಯೆಯ ಕಿಚ್ಚು ಅಭಿಯೊಳಗೆ
ಸೇರಿ ಸುಡುತಿರಲು
ಮಾತು ಮೌನ ಬೆರೆತರಳೆಯೊಳ್
ಸೊಗದ ಕಾವು ನುಚ್ಚು ನೂರಾಗುತ
ಅಧ್ವಿಗಳಾಗಿ ನಡೆದಿಹಳು
ಗೊತ್ತಿಲ್ಲದ ಹಾದಿಯ ಏಕಾಂಗಿಯಾಗಿ…
*******************