ಅಪ್ಸರೆಯ ಮೂರನೆ ಮದುವೆ!

ಕಥೆ

ಅಪ್ಸರೆಯ ಮೂರನೆ ಮದುವೆ!

ಡಾ. ಅರಕಲಗೂಡು ನೀಲಕಂಠ ಮೂರ್ತಿ

 ಇನ್ನೂ ಎಷ್ಟು ಹೊತ್ತು ಬೇಕಮ್ಮಾ ನಿನಗೆ, ಇದು ಮೂರನೇ ಬಾರಿ ನಾನು ರಿಮೈಂಡ್ ಮಾಡ್ತಾ ಇರೋದು, ಗೊತ್ತಾ? ಅವರು ಗಂಡಿನವರೇ ಇರಬಹುದು, ಅವರಿಗೆ ತಮ್ಮದೇ ಆದ ದರ್ದೂ ಇರಬಹುದು. ಹಾಗಂತ ನಾವು ಹೆಣ್ಣಿನವರು ಅಂತ ಗರ್ವ ಎಕ್ಸಿಬಿಟ್ ಮಾಡಬಾರದು ಅಲ್ಲವಾ… ಅಲ್ಲದೆ ಇದೇನು ನಿನ್ನ ಮೊದಲನೇ ಮದುವೇನಾ, ಮೂರನೇದು”, ಹೊರಗಡೆಯೇ ನಿಂತು ಇಷ್ಟು ಮಾತನಾಡಿ ಕೂಡ ತೆರೆದುಕೊಳ್ಳದ ಮಗಳ ರೂಮಿನ ಬಾಗಿಲು ಕುಟ್ಟಿದರು, ಅಪ್ಸರೆಯ ತಾಯಿ. “ಕಮಿನ್ ಮಾ” ಅಂತ ಕೇಳಿಸಿದ್ದೇ ಒಳನಡೆದ ಅನಸೂಯ ಅವರು, ಮಗಳಿನ್ನೂ ಡ್ರೆಸ್ ಮಾಡಿಕೊಳ್ಳದೆ, ಗೋಡೆಯ ಸ್ಕ್ರೀನಿನ ಮುಂದೆ, ತನ್ನ ಕೈಬೆರಳಿಗೆ ಸಿಗಿಸಿದ್ದ ಹೈಟೆಕ್ ರಿಮೋಟಿಂದ ಆಟ ಆಡುತ್ತಿದ್ದುದನ್ನು ಕಂಡು, ಬಾಯಿ ತುಂಬಿಬಂದ ಕೆಂಡ ಹೊರ ಕಾರಲಿಲ್ಲ. ಬಂದದ್ದನ್ನು ಹಾಗೆ ನುಂಗಿಕೊಂಡರು. ‘ಮಗಳಿಗೆ ಮದುವೆ, ಕೊಪ್ಪರಿಗೆ ಒಡವೆ’ ಅನ್ನೋ ವಿನೂತನ ಗಾದೆಯಿಂದಾಗಿ, ಹಲ್ಲುಗಳನ್ನು ಹಾಗೆ ಭದ್ರ ಕಚ್ಚಿ, ಮಗಳಿಗೆ ಅರಿವಾಗದ ಹಾಗೆ, ಭುಸುಗುಟ್ಟಿದರು. ಆದರೂ ಸಹ, ತಾಯಿ ತಂದೆಯರ ಸ್ಥಾನಕ್ಕೆ ಇನ್ನೂ  ಬೆಲೆಕೊಡುವಂಥ ಜನರೇಶನ್ ಇದು ಅನ್ನೋ ತೃಪ್ತಿ ಮತ್ತು ಧೈರ್ಯದಿಂದ, ಮತ್ತೊಮ್ಮೆ ಕೋಪದ ತಮ್ಮ ಎಂಜಿಲು ತಾವೇ ನುಂಗಿ, “ಅಲ್ವೇ ಅಪ್ಸು, ಸಂಸ್ಕಾರ ಸಂಸ್ಕೃತಿ ಅಂತೆಲ್ಲ  ಹೆಚ್ಚು ಹೆಚ್ಚಾಗಿ ಫಾಲೋ ಮಾಡೋ ಜನ ಇರೋ ಕಾಲ ಇದು (ಅಮ್ಮನೇ ಕತ್ತರಿಸಿ ಹ್ರಸ್ವ ಮಾಡಿದ್ದ ಮಗಳ ಹೆಸರು ಅಪ್ಸು). ಹಿಂದಿನ ಅನಾಗರಿಕ ಕಾಲದಲ್ಲಿ, ಪುಡಿಗಾಸಿನ ಮಂದಿ ಟೈಂಗೆ ಬೆಲೇನೆ ಇಲ್ಲದ ಹಾಗೆ ಬದುಕಿದ್ದರಂತಲ್ಲ, ಆ ಹೊಣೆಗೇಡಿ ಪುಡಾರಿ ಅನ್ನೋ ಮಂದೆ, ಇಡೀ ಸೊಸೈಟೀನೆ ತಿಪ್ಪೆ ಥರ ಮಾಡ್ಕೊಂಡಿದ್ದರಂತಲ್ಲ, ಹಾಗಲ್ಲವೆ ಮಗಳೆ ಈಗ? ಪ್ರತಿ ಮಿನಿಟ್ ಸಹ ಮುಖ್ಯ. ಅಂಥ ಅಲ್ಟ್ರಾ ಮಾಡರ್ನ್ ಸೊಸೈಟಿಯಲ್ಲಿ  ಬೆಳೆದವಳು ನೀನು. ಹಾಗೇ ಬೇರೆಯವರ ಟೈಂಗೂ ಬೆಲೆ ಕೊಡಬಾರದಾ?” ಎಂದು ಹುರಿದುಂಬಿಸಿದರು. “ಬಹುಷಃ, ಮನುಷ್ಯನ ಇಡೀ ಚರಿತ್ರೆಯಲ್ಲೇ ಇದು ‘ಗೋಲ್ಡನ್ ಪೀರಿಯಡ್’ ಅನ್ಸುತ್ತೆ,” ಅಂತಲೂ ಸೇರಿಸಿದರು. ವಾಸ್ತವವಾಗಿ ಅನಸೂಯ ಅವರು ಬಲವಂತದಿಂದ, ತಮ್ಮ ಮಗಳಾದ ಅಪ್ಸರೆಗೆ, ಈ ಮದುವೆಗೆ ಒಪ್ಪಿಸಿದ್ದರು. ಇದು ಅವಳ ಮೂರನೇ ಮದುವೆ! ಹಾಗಂತ ಬೇರೆ ಯಾರೂ ಎರಡು ಮೂರು ಮದುವೆ ಆಗಿಯೇ ಇಲ್ಲ ಅಂತಲ್ಲ. ‘ನಮ್ಮ ಮೊದಲ ಅಳಿಯನ ಅಕ್ಕನೇ ಐದು ಮದುವೆ ಆದವಳಲ್ಲವೇ? ಅವರಲ್ಲಿ ಸದ್ಯ ಬದುಕಿರುವವರು ಇಬ್ಬರೇ, ಅದು ಬೇರೆ ವಿಚಾರ!’ ಅನ್ನಿಸಿತು ಅವರಿಗೆ. ಸರಕಾರದ ನಿಯಮದ ಪ್ರಕಾರ ಒಬ್ಬ ಹೆಂಗಸು ಎರಡು ಅಥವ ಮೂರು ಮದುವೆ ಆಗಬಹುದು ಅಷ್ಟೇ ಅಲ್ಲ, ಆಗಲೇ ಬೇಕು. ಯಾರಾದರೂ ಸತ್ತರೆ, ಆ ಸ್ಥಾನಕ್ಕೆ ಬೇರೆ ಮದುವೆ ಆಗಲೂ ಬಹುದು.ಒಟ್ಟಿನಲ್ಲಿ, ಮೂರು ಗಂಡಂದಿರು ಗರಿಷ್ಠ ಲಿಮಿಟ್!

“ಇಬ್ಬರೂ ಗಂಡಂದಿರು ತನ್ನ  ಎರಡು ಕಣ್ಣುಗಳು. ಅಷ್ಟು ಚೆನ್ನಾಗಿ ನೋಡ್ಕೋತಾರೆ, ಪ್ರೀತಿಸ್ತಾರೆ; ಎಲ್ಲ ಥರ ಸುಖ ಸಂತೋಷ ಕೂಡ ಕೊಟ್ಟಿದಾರೆ”, ಎಂಬ ದೃಢ ನಂಬಿಕೆಯ ಅಪ್ಸರೆ, ‘ಸದಾ ಮಾಯಾ ಕುದುರೆ ಏರಿಸಿ, ತಾವೂ ಜೊತೆಜೊತೆಯೇ ವಾಯು ವಿಹಾರದ ಹಾರಾಟದಂಥ’ ಅನುಭವ ಹಾಗೂ ಆನಂದಮಯ ಬದುಕನ್ನು ನೀಡಿದ್ದಾರೆ. ಹಾಗಾಗಿ ಇನ್ನೊಂದು ಮದುವೆ ಖಂಡಿತ ಬೇಡ” ಎಂಬ ಹಠ ಅಪ್ಸರೆಯದು. ಕೊನೆಗೆ, ಅತ್ತೆಗಾಗಿ, ಇಬ್ಬರೂ ಅಳಿಯಂದಿರೇ ಪುಸಲಾಯಿಸಿದ್ದರಿಂದ ಕಷ್ಟದಲ್ಲಿ ಒಪ್ಪಿದ್ದಳು.                      

ಹೆಣ್ಣು ‘ಪತಿವ್ರತೆ’ಯಾಗಿದ್ದಂಥ ಕಾಲ, ಹಾಗೂ ಒಬ್ಬನೇ ಗಂಡ ಇದ್ದ ಕಾಲವೂ ಹಿಂದೆ ಇತ್ತಂತೆ. ಹೀಗೆ ಅಪ್ಸರೆ ಇತಿಹಾಸದಲ್ಲಿ ಓದಿದ್ದುಂಟು. ರಾಮಾಯಣದ ಶ್ರೀರಾಮನೇ ಸತಿವ್ರತ ಆಗಿದ್ದ ಅಲ್ಲವೇ? ಇಂಥ ವಿಚಾರಗಳನ್ನು ಅವರಿವರಿಂದ, ಅದೂ ಬಹಳ ವಯಸ್ಸಾದವರಿಂದ ಈಗಲೂ ಕೇಳುವುದೂ ಉಂಟು. ಹಾಗೆಯೇ ಅದಕ್ಕೂ ಹಿಂದೆ, ಒಬ್ಬ ಗಂಡಸು ಒಬ್ಬಳೇ ಹೆಂಡತಿಗೆ ಸೀಮಿತವಾಗಿರದೆ, ಎರಡು ಮೂರು, ಅಥವ ಇನ್ನೂ ಜಾಸ್ತಿ ಮದುವೆ ಆಗುತ್ತಿದ್ದ ಕಾಲ ಕೂಡ ಇತ್ತಂತೆ! ಹೆಚ್ಚು ಮದುವೆಯಾದಷ್ಟೂ, ಆ ಗಂಡಸಿನ ‘ಘನತೆ’ ಗರಿಷ್ಠಮಟ್ಟಕ್ಕೆ ಏರುತ್ತಿತ್ತಂತೆ. ಅಷ್ಟೇ ಅಲ್ಲದೆ, ಮಹಾರಾಜರುಗಳ ಆಳ್ವಿಕೆ ಇದ್ದಾಗ, ಆ ರಾಜರುಗಳು ಸ್ವೇಚ್ಛೆಗಾಗಿ ಸ್ವಂತ ಅಂತಃಪುರಗಳೆಂದು ಸೃಷ್ಟಿಸಿ, ಸಂರಕ್ಷಿಸುತ್ತಿದ್ದರಂತೆ. ಅಲ್ಲಿ ಒಬ್ಬಿಬ್ಬರಲ್ಲದೆ, ರಾಜನ ಪತ್ನಿ ಹಾಗೂ ಉಪಪತ್ನಿಯರು ಎಂಬ ಒಂದು ದಂಡೇ ಇರುತ್ತಿತ್ತಂತೆ! ಅದೆಲ್ಲ ನಿಜ ಆಗಿದ್ದರೂ ಸಹ, ಈಗದು ಇತಿಹಾಸ. ಅದೃಷ್ಟಕ್ಕೆ ಪಠ್ಯಗಳಲ್ಲಿ ಇಲ್ಲದ ಇತಿಹಾಸ. ಅಂಥ ಪಾಠ ಇದ್ದಿದ್ದರೆ ಈಗಿನ ಅಲ್ಟ್ರಾ ಮಾಡರ್ನ್ ಪೀಳಿಗೆಗಳು ಏನೇನೆಲ್ಲ ಅನುಸರಿಸುತ್ತಿದ್ದರೋ ಏನೋ ಎಂದು ಭಯ ಆಗುತ್ತೆ! ಎಲ್ಲರಿಗೂ ದೊರಕದ ಲೈಬ್ರರಿಗಳಲ್ಲಿ ಮಾತ್ರ ಸಿಗುವ ಅಂಥ ಪುಸ್ತಕಗಳು ಕುತೂಹಲಭರಿತ ಓದುಗರಿಗಷ್ಟೇ ಮೀಸಲು, ಸಧ್ಯ!

ಅಪ್ಸರೆಯ ಆತ್ಮೀಯ ಗೆಳತಿಯ ಪ್ರಕಾರ, “ಸದ್ಯ ಈ ಕಾಲ ಬೇರೆ ಬಿಡೆ. ಆ ಪತಿವ್ರತೆ, ಸತಿವ್ರತ ಎಂಬ ಪದಗಳು ಈಗಿನ ಕಾಲದಲ್ಲಿ, ರಣಬಿಸಿಲಲ್ಲಿ ಬಿರುಗಾಳಿಗೆ ಒಡ್ಡಿದ ಪುರಲೆಗಳ ಹಾಗೆ! ಒಂದೋ ಸುಟ್ಟು ಭಸ್ಮ, ಇಲ್ಲ ಚದುರಿ ಕಾಣದಂತೆ ಚಲ್ಲಾಪಿಲ್ಲಿ! ಆ ಕಲ್ಪನೆಗಳೇ ಹಾಸ್ಯಾಸ್ಪದ ಈ ಕಾಲಕ್ಕೆ. ಇದು ಆಗಿನ ‘ಮಿಡೀವಲ್’ ಆಚಾರ ಇರೋ ಕಾಲ ಅಲ್ಲ; ವಿ ಅರ್ ಲಕ್ಕಿ!”ಎಂದು ಗೆಳತಿ ಜ್ಯೋತ್ಸ್ನಾ ವಾದ. ಮೇಲಾಗಿ ಸರಕಾರ ಕೂಡ ಈಗ ಸಂಪೂರ್ಣ ಹೆಣ್ಣಿನ ಪರ! ಹೆಂಗಸರು ಗಣನೀಯವಾಗಿ ಕಮ್ಮಿ ಇರೋವಾಗ, ಸಾಮೂಹಿಕ ‘ಮಸ್ಕ ಹೊಡೆವ’ ಅವಶ್ಯಕತೆ ಸರಕಾರಕ್ಕೂ ಇರಲೇಬೇಕಲ್ಲವೆ! ಹಾಗಾಗಿ, ಹೆಣ್ಣಿನ ದನಿ ಕೂಡ ಈಗ ಶಾಸನಸಭೆಯಲ್ಲಿ ಬಲು ಎತ್ತರದ್ದೆ! “ಈಗಿನ ಈ ಇದೇ ಗಂಡಸರ ತಾತ ಮುತ್ತಾತಂದಿರ ಪಾಪವೇ ಅಲ್ಲವೇನೆ, ಪ್ರಸ್ತುತ ಹೆಣ್ಣು ಸಂತಾನ ಅತ್ಯಲ್ಪ ಸಂಖ್ಯೆಗೆ ಕುಗ್ಗಿ ಹೋಗಲು ಕಾರಣ!” ಜ್ಯೋತ್ಸ್ನಾ ಸಮರ್ಥಿಸಿದ್ದಕ್ಕೆ, “ಹಾಗೇನು ಇಲ್ಲಮ್ಮ, ನಾನೂ ಓದಿದೀನಿ. ಆಗ ಪಾಪ ಗಂಡಸರಿಗಿಂತಲೂ ಹೆಚ್ಚಾಗಿ, ಹೆಂಗಸರೇ ಖಳನಾಯಕಿಯರು ಆಗಿದ್ದಿದು ಅಂತ. ‘ಗಂಡೇ ಬೇಕು ಗಂಡು’ ಅನ್ನೋ ಹೆಂಗಸರ ದಂಡೇ ಇತ್ತಂತೆ. ಸರಕಾರದ ಕಾನೂನು ಇದ್ದರೂ, ಹೆಣ್ಣು ಭ್ರೂಣ ಪತ್ತೆ ಹಚ್ಚಿ ಅದನ್ನ ನಿಷ್ಕಾರುಣ್ಯವಾಗಿ ತೆಗೆಸಿ ಬಿಸಾಡುವಂಥ ಅಜ್ಜಿ, ತಾಯಿ, ದಾದಿಯರು ಎಲ್ಲ ಇದ್ದರಂತೆ. ಅಂಥ ಡಾಕ್ಟರುಗಳೂ ಇದ್ದರಂತೆ, ಲೇಡಿ ಡಾಕ್ಟರರನ್ನೂ ಸೇರಿ! ಈಗಿನ ಥರ ಮರಣ ದಂಡನೆ ಆಗ ಇದ್ದಿದ್ದರೆ, ಅದೆಷ್ಟು ಪಾಪ್ಯುಲೇಷನ್ ಕಮ್ಮಿ ಆಗತಿತ್ತೋ ಅಲ್ಲವಾ?… ಆದರೆ ಬಹುಷಃ ಹೆಣ್ಣು ಗಂಡಿನ ಪರಿಮಾಣ ಹೆಣ್ಣಿನ ಅನುಕೂಲಕ್ಕೆ ಈಗ ಇರುವ ಹಾಗೆ ಇರುತ್ತಿರಲಿಲ್ಲವೋ ಏನೋ! ಹೀಗೂ ಕೂಡ ನಮ್ಮಂಥ ಜನರೇಶನ್ ಲಕ್ಕೀನೇ, ಅಲ್ವೇನೆ ಜೋತ್ಸ್?”, ಅಪ್ಸರೆಯ ಸಮರ್ಥನೆ.

“ಅಲ್ಲದೆ ಆಳುವವರು ಈಗಿನ ಹಾಗೆ ನೀತಿ ನ್ಯಾಯವಂತರಾಗಿಯೂ, ಖಡಾಖಂಡಿತವಾಗಿಯೂ ಇರಬೇಕು. ಅಂದಿನ ‘ಕುಷ್ಠ ಯುಗ’ದ ಹಾಗಲ್ಲ” ಮತ್ತೆ  ಅಪ್ಸರೆ ಆಳ್ವಿಕೆಗೆ ತಿರುಗಿದಳು.

ಹೌದು, ಸ್ವತಂತ್ರ್ಯಾನಂತರದ ಕೆಲಕಾಲ, ಈಗ ‘ಕುಷ್ಠಯುಗ’ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆ ಸಂದರ್ಭದ ಆಳುವವರ ಮೆದುಳು ಕುಷ್ಠ ತಿಂದ ಹಾಗೆ, ಯೋಚನೆ- ವಿವೇಚನಾಶಕ್ತಿಯು ಅಳಿದಂತೆ, ಎಲ್ಲ ನನಗೆ, ನನ್ನ ಮಕ್ಕಳಿಗೆ, ನನ್ನ ವಂಶಜರಿಗೆ ಅಂದುಕೊಂಡು, ಲೂಟಿ ಬ್ಯಾಂಡಿಟ್ಸ್ ಆಗಿ, ನೀತಿಗೆಟ್ಟ ಆಡಳಿತ ನೀಡಿದ್ದರ ಪರಿಣಾಮ, ಆ ಶಕೆ ಈಗ ‘ಕುಷ್ಠಯುಗ’ ಅಂತ ದಾಖಲಾಗಿದೆ! “ನಮ್ಮಂಥ ಹೊಸಹೊಸ ಜನರೇಷನ್ನುಗಳಿಗೆ, ನೀರು ನೆರಳು ಎಂಬ ಕನಿಷ್ಠ ಅವಶ್ಯಗಳಿಗೂ ತತ್ವಾರ ಮಾಡಿದ್ದಲ್ಲದೆ, ಅವರೂ ಎಲ್ಲ ಸಾರಾಸಗಟಾಗಿ ನಾಶ ಆದರು” ಅಂತ ಓದಿದ್ದು ಜ್ಞಾಪಕ! “ಅಲ್ಲದೆ, ಅನೇಕ ದ್ವೀಪ ಹಾಗೂ ಕರಾವಳಿ ನಗರಗಳು ಈಗ ಮುಳುಗಿ ಹೋಗಿವೆಯಂತೆ. ಹೆಚ್ಚಾದ ಭೂಶಾಖ, ಪರ್ವತ ಸಮಾನ ಹಿಮಗೆಡ್ಡೆಗಳನ್ನು ಕರಗಿಸಿ, ಸಮುದ್ರಮಟ್ಟ ತದೇಕ ಏರಿದ್ದರ ಕಾರಣ!” ಇಷ್ಟು ಹೇಳಿ ಬಾಯಾರಿದಂತೆ, ನೀರಿಗಾಗಿ, ತನ್ನ ‘ನ್ಯೂ ವೆಲ್ಕಿನ್’  ಕಂಪೆನಿಯ ಹ್ಯಾಂಡ್ ಬ್ಯಾಗಿಂದ, ಮಾತ್ರೆ ತೆಗೆದು ನುಂಗಿದಳು ಅಪ್ಸರೆ. ಗೆಳತಿಯರ ಈ ಪರಸ್ಪರ ವಿನಿಮಯ, ಕಳೆದ ಬಾರಿ ಅಪ್ಸರೆ ಜ್ಯೋತ್ಸ್ನಾ ಮನೆಗೆ ಊಟಕ್ಕೆ ಹೋಗಿದ್ದಾಗ ಆದದ್ದು. ಹೃದಯ ವೈಶಾಲ್ಯ ಈಗ ಅನಂತವಾಗಿ ಹರಡಿ, ಸಾಮಾಜಿಕ ಕಲೆಯುವಿಕೆ ಉತ್ತುಂಗ ತಲುಪಿದೆ. ಎಲ್ಲ ಸಂದರ್ಭದಲ್ಲೂ ಭೋಜನಕೂಟ ಮುಂತಾಗಿ ವಿಫುಲ!

“ನನ್ನ ಬಗ್ಗೆ ಚಿಂತೆ ಬಿಟ್ಟು, ನಿನ್ನ ಅಳಿಯಂದಿರನ್ನ ಹೋಗಿ ನೋಡು. ಇಬ್ಬರೂ ಬರ್ತಾರೋ, ಅಥವ ಕೆಲಸ ಅಂತ ಮನೇಲೇ ಕೂತಿರ್ತಾರೋ  ಹೇಗೆ” ಅಪ್ಸರೆ ಅಮ್ಮನಿಗೆ ಹೇಳುತ್ತ, ಗೋಡೆಯ ಸ್ಕ್ರೀನ್ ಬಂದ್ ಮಾಡಿ ಎದ್ದಳು. ಆ ಕಡೆ ಅನಸೂಯ ಅವರು  ತಿರುಗಿದ ಹಾಗೆ, ಅಪ್ಸರೆ ತನ್ನ ಗೆಳತಿ, ಜ್ಯೋತ್ಸ್ನ ಕೂಡ ಜೊತೆಗೆ ಬರುವಳೋ ಹೇಗಂತ ವಿಚಾರಿಸಿದಳು. ಅವಳು ತುರ್ತು ಕೆಲಸ ಮನೆಯಲ್ಲಿ ಕೂತೇ ಪೂರೈಸುವುದಿದೆ ಎಂದು ಹೇಳಿ ಜಾರಿಕೊಂಡಳು.

ಅಪ್ಸರೆ ಎಂದಿನ ಹಾಗೆ ಸ್ಕಿನ್ ಟೈಟ್ ಹೋಲ್ ಬಾಡಿ ಡ್ರೆಸ್ಸಿನಲ್ಲಿ ರೆಡಿ ಆಗಿ ಹೊರಬಂದಾಗ, ಇಬ್ಬರೂ ಗಂಡಂದಿರೂ ಬಾಡಿ ಹಗ್ಗಿಂಗ್ ಸೂಟ್ ಗಳಲ್ಲೇ ತಯಾರಾಗಿ ತಮ್ಮ ಹೆಂಡತಿಗಾಗಿ ಕಾಯ್ದಿದ್ದರು. ರೇಷ್ಮೆ ಸೀರೆಗಳು, ಅದೂ ಶ್ರೇಷ್ಠಮಟ್ಟದ ಹಾಗೂ ಅತಿ ದುಬಾರಿ ಸೀರೆಗಳು ದೊರಕಿದರೂ, ಅವು ಮದುವೆ, ದೇವರ ಕಾರ್ಯ ಅಥವ ಕೆಲ ಸಾಂಸ್ಕೃತಿಕ ಸಂದರ್ಭಗಳಿಗೆ ಮಾತ್ರ ಮೀಸಲು. ಅತ್ಯುಚ್ಛ ಶಾಖದ ಹವಾಮಾನವೇ ಈಗ ಹೆಚ್ಚು. ಹಾಗಾಗಿ, ಬಾಕಿ ಎಲ್ಲ ಸಮಯ ಅತಿ ವಿರಳ ಡ್ರೆಸ್ ಎಲ್ಲರ ಮಾದರಿ ಆಗಿದೆ. ಶೇಕಡ ಎಂಭತ್ತು ತೊಂಭತ್ತು ದೇಹ ಬೆತ್ತಲೆಯ ಹಾಗೆ ಕಾಣುವುದು ಕಾಲದ ಮಹಿಮೆ! ಇಂಥ ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಮೈ ತುಂಬಿಕೊಂಡು ಹೋಗುವ ಪದ್ಧತಿ.               

“ರಂಗ್, ಯಾರದ್ದು ಪೈಲಟಿಂಗ್, ನಿಮ್ದೋ ಅಥವ ಈಶ್ ಅವರ್ದೋ; ಕಾಪ್ಟರ್ರಾ ಅಥವ ಏರ್ಕಿಡ್ಡೋ?” ಎಲ್ಲ ಹ್ರಸ್ವ! ಕಾಪ್ಟರ್ ಅಂದರೆ ಹೆಲಿಕಾಪ್ಟರ್, ಏರ್ಕಿಡ್ ಸಣ್ಣ ವಿಮಾನ.  ರಂಗ್ ಎಂಬ ರಂಗವೈಭವ್, “ನೀವು ಹೇಳ್ದ ಹಾಗೆ. ನಾನಾದ್ರೂ ಸರಿ, ಈಶ್ವಕಾಂತ್ ಆದ್ರೂ ಓಕೆ” ಹೇಳಿದ. ತಕ್ಷಣ ಈಶ್ ಎಂಬ ಈಶ್ವಕಾಂತ್ “ಏಕೆ ನಾವು ಫ್ಲೈಯಿಂಗ್ ಕಾರಲ್ಲಿ ಹೋಗ್ಬಾರದು; ಅವರ ರೂಫ್ ಟಾಪ್ ಅಕಸ್ಮಾತ್ ಭರ್ತಿ ಆಗಿ, ನಮ್ಮ ಕಾಪ್ಟರ್ ನಿಲ್ಲಿಸಲು ಸ್ಥಳ ಇಲ್ಲದಿದ್ದರೆ, ಅಲ್ವೇನ್ರೀ ಅಪ್ಸರಾ?” ಎಂದ. “ಹ್ಞಾ, ಹೌದು, ಆ ಸಾಧ್ಯತೆ ಇದೆ”.ಅಪ್ಸರೆ ಒಪ್ಪಿದಳು.

ಯಾರೂ ತಮ್ಮ ಪತ್ನಿಯನ್ನು ಹೋಗೆ,  ಬಾರೆ ಎಂಬ ‘ವಚನ’ದಲ್ಲಿ ಕರೆಯುವ ಪದ್ಧತಿ ಕರ್ಣಮರೆಯಾಗಿತ್ತು! ಕಾಲ ಹೇಗೆ, ಮರಗಟ್ಟಿದಂತಾಗಿ ಕೊಳೆತ ತನ್ನ ಹುರುಪನ್ನು ಕಳಚಿ, ಹೊಸಹೊಸ ಆಕೃತಿ ತಳೆವುದೋ, ಹಾಗೆ ಪರಸ್ಪರ ಸಂಬೋಧನೆ ಹಾಗೂ ಎಲ್ಲ ಥರದ ರಿವಾಜುಗಳೂ

ಅದರ ಜೊತೆಜೊತೆಗೇ ಬದಲಾಗುತ್ತಾ ಚಲಿಸುತ್ತವೆ! ಅದು ಆಯಾ  ಕಾಲಾವಧಿಯ ಸಂಸ್ಕಾರ ಸಂಹಿತೆ!

ಯಾರೂ ಗತಕಾಲದ ಕಾರನ್ನು ಉಪಯೋಗಿಸದ ಕಾಲ ಈಗ! ಅಲ್ಲಲ್ಲಿ ಸ್ಪೆಸಿಮನ್ ಥರ ವಿಂಟೇಜ್ ಕಾರುಗಳು ಇಲ್ಲವೆಂದಲ್ಲ. ಕಾರುಗಳ ತಯಾರಿ ಮಾತ್ರ ದಶಕಗಳಿಂದ ನಿಂತಿದೆ. ರಿಪೇರಿಯೂ ಅಸಾಧ್ಯ. ಬುಲೆಟ್ ಟ್ರೇನುಗಳು ನಗರಗಳ ನಡುವೆ ಯಥೇಚ್ಛ. ಅದಲ್ಲದೆ, ಹಣ ಇದ್ದವರ ಒಡೆತನದಲ್ಲಿ ಸಣ್ಣ ಸಣ್ಣ ವಿಮಾನಗಳು, ಹೆಲಿಕಾಪ್ಟರುಗಳು. ಆದರೆ, ಫ್ಲೈಯಿಂಗ್ ಕಾರುಗಳ ಹಾರಾಟ ಈಗ ಪುಂಖಾನುಪುಂಖ!  ಸುಮಾರು ಕುಟುಂಬಗಳಲ್ಲಿ ಕಾಣುವ ಸಾಮಾನ್ಯ ಸ್ವತ್ತು. ಹಾಗಂತ  ಎಲ್ಲರೂ ಇವುಗಳ ಒಡೆಯರೂ ಅಲ್ಲ. ಆದ್ದರಿಂದ, ಅನೇಕ ಕಡೆ ಹಾರುವ ಬಸ್ಸುಗಳೂ ಸಹ ಹೆಚ್ಚಾಗಿ ಕಾಣಿಸುತ್ತವೆ. ಒಂದೊಮ್ಮೆಯ ಹಳ್ಳಿಗಳು, ಪ್ರಸ್ತುತ ಸಣ್ಣಪುಟ್ಟ ಹೈಟೆಕ್ ಪಟ್ಟಣಗಳು. ಅಂತಹ ಪಟ್ಟಣಗಳಲ್ಲಿ ವಾಸಿಸುವ ಸಾರ್ವಜನಿಕರಿಗಾಗಿ ಸರ್ಕಾರದ ವತಿಯಿಂದ ಹಾರುಬಸ್ಸುಗಳು ಓಡಾಡುತ್ತವೆ. ಸೈಕಲ್ ಎಂಬುದು ಇತ್ತಂತೆ. ಅದೀಗ ಚಿತ್ರಕಾರನ ಬ್ರಶ್ ಗಳಿಗಷ್ಟೇ ಮೀಸಲು!   

ದೇಶವಿದೇಶ ಪ್ರಯಾಣಕ್ಕೆ ಈಗ ರಾಕ್ ಪ್ಲೇನ್ ಅಂತ ಇವೆ. ರಾಕೆಟ್ ಮತ್ತು ವಿಮಾನಗಳ ಕಸಿ ಮಾಡಿದ ಹಾರುವ್ಯವಸ್ಥೆ. ಅಂತರ ಗ್ರಹಗಳ ವ್ಯಾಪಾರ ವ್ಯವಹಾರಗಳಿಗೆ ಬೆಳಕಿನ ವೇಗದ, ವಿಮಾನದಷ್ಟು ವಿಶಾಲ ರಾಕೆಟ್ ಇವೆ.

ಎಲ್ಲೆಲ್ಲಿಯೂ ಮುಗಿಲೆತ್ತರದ ಮಲ್ಟಿ ಸೌಧಗಳು. ಸ್ವಾಯತ್ತ ಹಾಗೂ ಸ್ಟ್ಯಾಂಡ್ ಅಲೋನ್ ಬಂಗಲೆಗಳು, ಎಕರೆಗಳ ಸ್ವಂತ ಜಾಗ ಇದ್ದವರ, ಅದೂ ಬೃಹತ್ ನಗರಗಳಿಂದ ಬಹುದೂರದ ಹೊರವಲಯಗಳಲ್ಲಿ ಮಾತ್ರ, ಒಂದೊಮ್ಮೆಯ ವಿರಳ ಅರಮನೆಗಳ ಹಾಗೆ ಕಾಣಸಿಗುತ್ತವೆ!

ಕೆಲವರು ಅನೇಕ ಅಂತಸ್ತುಗಳನ್ನು ಭೂದೇವಿಯ ಒಡಲೊಳಗೂ ಕೊರೆದು ನಿರ್ಮಿಸುವ ನಕ್ಷೆಗಳನ್ನು ಸರ್ಕಾರದ ಒಪ್ಪಿಗೆಗೆ ಕೊಟ್ಟರೂ, ಅವು ಅನುಮೋದನೆ ಆಗಲಿಲ್ಲ.  ಹಾಗಾಗಿದ್ದರೆ ಭೂಮಿಯ ಗತಿ! ಸ್ವಾರ್ಥ ಬುದ್ಧಿಯ, ದುರಂತ ಮನದ ಖದೀಮರು, ಮನುಷ್ಯನ ಅಸ್ತಿತ್ವ ಭೂಮಿಯಲ್ಲಿ ನಶಿಸುವವರೆಗೂ ಇದ್ದೇ ಇರುವರು, ನಿದರ್ಶನಕ್ಕಾದರು!

ಅಪ್ಸರೆಯ ತಂಡದ ಫ್ಲೈಯಿಂಗ್ ಕಾರ್, ಅತಿಥಿ ವಲಯದಲ್ಲಿ ಪಾರ್ಕ್ ಆಯಿತು. ಎಂಭತ್ತು ಅಂತಸ್ತನ್ನು ಶರವೇಗದಲ್ಲಿ ಏರಿ, ವಿಶಾಲ ಅಪಾರ್ಟ್ಮೆಂಟ್ ಒಳಗೆ ಎಲ್ಲರೂ ಹೆಜ್ಜೆ ಇಟ್ಟರು. ಒಳಾಂಗಣದ ಭವ್ಯತೆ ಮತ್ತು ಅಚ್ಚುಕಟ್ಟುತನ ಆ ಮನೆಯವರ ಐಶ್ವರ್ಯದ ಬಗ್ಗೆ ಜಾಹೀರು ಪಡಿಸುತ್ತಿತ್ತು! ಆ ಸರಹದ್ದಿನ ಅತ್ಯಂತ ಪ್ರಮುಖ ರಿಯಲ್ ‘ಎಸ್ಟೇಟ್ ಗುರು’ ಎಂದು ಹೆಸರುವಾಸಿ, ಚಂದ್ರಹಾಸ್. ವೈಜ್ಞಾನಿಕ ವಲಯದಲ್ಲಿ ಸಹ ಮುಂಚೂಣಿ ಹೆಸರು.     

ಅಪ್ಸರೆಗಿಂತ ವಯಸ್ಸಿನಲ್ಲಿ ಚಿಕ್ಕವನಾದ, ಕಟ್ಟುಮಸ್ತಾದ ಗಂಡು ಮತ್ತವನ ಕಡೆ ಎಲ್ಲರೂ ಆಗಲೇ ಸನ್ನದ್ಧರಾಗಿ ಕಾಯುತ್ತಿದ್ದ ಹಾಗಿತ್ತು. ಬಹುಷಃ ಆ ಮನೆಯ ಹಿರಿಯ ಒಡತಿ ಆಗಿದ್ದವರು, ಆಮದಾದ ಸುಂದರ ರೇಷ್ಮೆ ಸೀರೆ ಉಟ್ಟಿದ್ದರು. ಔಪಚಾರಿಕತೆಯ ನಂತರ, ಹೊಸ ಗಂಡಾದ, ಶ್ರೇಷ್ಠಚಂದ್ರ, ತನ್ನ ತಾಯಿ ಹಾಗೂ ತಂದೆ ಮತ್ತು ಮಲತಂದೆಯ ಪರಿಚಯ ಮಾಡಿದ. ಇನ್ನಿಬ್ಬರು ತಂದೆಯರು ಈಗಿಲ್ಲವೆಂದೂ ಹೇಳಿದ. ತನ್ನ ಅಣ್ಣ ಅಕ್ಕಂದಿರೆಲ್ಲ ಬೇರೆಬೇರೆ ದೇಶಗಳ ಪ್ರಜೆಗಳೆಂದೂ, ಈ ದೇಶದಲ್ಲಿರುವುದು  ತಾನೊಬ್ಬ ಮಾತ್ರ ಎಂದು ತಿಳಿಸಿದ. ಆದ ಕಾರಣ, ನಮ್ಮ ಪೇರೆಂಟ್ಸ್ ಜೊತೆ ನಾನೇ ಇರಬೇಕಾಯ್ತು, ಎಂದೂ ಹೇಳಿದ. ಅಪ್ಸರೆ ಸಹ ತನ್ನಿಬ್ಬರು ಗಂಡಂದಿರ, ಮತ್ತು ತಾಯಿಯ ಪರಿಚಯ ಮಾಡಿ, ತನ್ನ ತಂದೆ ಹಾಗೂ ಇಬ್ಬರು ಮಲತಂದೆಯರು ಸಹ ಈಗಿಲ್ಲದ ವಿಷಯ ಹೇಳಿದಳು.

ವಾಸ್ತವ ಏನೆಂದರೆ, ದಶಕಗಳಿಂದ ಸರಕಾರಗಳ ಕಟ್ಟಳೆಗಳಿದ್ದೂ, ಭ್ರೂಣಹತ್ಯೆ ಎಂಬ ಆಸುರೀ ಕ್ರೌರ್ಯ, ಅವವೇ ಸರ್ಕಾರಗಳ ಮೂಗಿನ ಕೆಳಗೇ ಯಥೇಚ್ಛ ಆಗಿಹೋಗಿ, ಪ್ರಸ್ತುತ ದೇಶದಲ್ಲಿ ಗಂಡು ಹೆಣ್ಣಿನ ಅನುಪಾತದಲ್ಲಿ ಪ್ರಬಲ ಏರುಪೇರಾಗಿ, ಸದ್ಯ ನೂರು ಗಂಡುಗಳಿಗೆ ಕೇವಲ ಇಪ್ಪತ್ತು ಅಥವ ಇಪ್ಪತ್ತೈದರ ಒಳಗಿದೆ. ಆದುದರಿಂದ, ಮದುವೆ ಹೊಸ್ತಿಲಲ್ಲಿ ನಿಂತ ಗಂಡು ಹುಡುಗರಿಗೆ ಬೇಕಾಗುವ, ಹೆಣ್ಣುಗಳ ಸಂಖ್ಯೆಯಲ್ಲಿ ಕಂಡರಿಯದ ದುಃಸ್ಥಿತಿ ಉಂಟಾಗಿದೆ. ಪರಿಹಾರಾತ್ಮಕವಾಗಿ, ಒಬ್ಬ ಹೆಂಗಸು ವಿಧಿಯಿಲ್ಲದೆ ಹೀಗೆ ಒಬ್ಬರಿಗಿಂತ ಹೆಚ್ಚು ಗಂಡಸರನ್ನು ಮದುವೆ ಆಗುವ ಪರಿಪಾಠದ ಕಾನೂನನ್ನು ಸರಕಾರವೇ ಜಾರಿಮಾಡಿದ್ದಾಗಿದೆ! ಆಯಾ ಗಂಡ ಹೆಂಡತಿಯರು, ತಂತಮ್ಮ ವಾಕ್- ಸಮ್ಮತಿಯ ಪ್ರಕಾರ, ಹೆಂಡತಿಯು ಒಬ್ಬೊಬ್ಬ ಗಂಡನೊಡನೆ ವಾರದಲ್ಲಿ ಇಂತಿಷ್ಟೇ ದಿನ ವಾಸ ಇರಬೇಕೆಂಬ ನಡವಳಿಕೆ ಕೂಡ ಚಾಲ್ತಿಯಲ್ಲಿದೆ. ಆ ದಿನಗಳ ಲೆಕ್ಕ, ಎಷ್ಟು ಗಂಡಂದಿರೋ ಅದರ ಮೇಲೆ ತೀರ್ಮಾನ. ಆದರೆ, ಮದುವೆಯ ಹೊಸದರಲ್ಲಿ, ಆ ಹೊಸ ಗಂಡನ ಜೊತೆ, ಬಾಕಿ ಎಲ್ಲರ ಅನುಮತಿಯ ಮೇಲೆ, ಹೆಚ್ಚು ಕಾಲ ಕಳೆವುದೂ ರೂಢಿ. ಹೇಳಿಕೇಳಿ, ಒಂದು ಹೆಣ್ಣಿನ ‘ಅಮೂಲ್ಯ ದ್ರವ್ಯ’ವನ್ನು ಹಂಚಿಕೊಳ್ಳುವುದು ಎಂದರೆ ಹುಡುಗಾಟದ ಮಾತಲ್ಲ!           

ಇನ್ನು ಮಕ್ಕಳು ಆಯಾ ಗಂಡಂದಿರ ಜೊತೆ ಬೆಳೆಯುತ್ತಾರೆ. ಯಾವ ಮಗು ಯಾರದು ಎಂದು ತಿಳಿಯಲು, ಪ್ರತಿ ಮಗುವಿನ ಜನನದ ನಂತರ, ‘ಡಿ ಎನ್ ಎ’ ಪೆಟರ್ನಿಟಿ ಟೆಸ್ಟ್ ಅಂತ ಮಾಡಿಸುವುದೂ ಸಹ ಸರಕಾರದ ನಿಬಂಧನೆ! ತಾಯಿ ಆದವಳು ಎಲ್ಲ ಕಡೆ ರೌಂಡ್ಸ್ ಮಾಡುವ ರೂಢಿ ಇದೆ. ಕೆಲವು ಕಡೆ ಒಪ್ಪಿಗೆಯಂತೆ, ಎಲ್ಲರೂ ಒಟ್ಟಿಗೇ ಇರುವುದೂ ಇದೆ. ಹಾಗಾದಾಗ ಸಮಸ್ಯೆಯೇ ಇಲ್ಲ! ಆದರೆ, ಮಗು ಹುಟ್ಟಿದ ಹೊಸದರಲ್ಲಿ, ಸುಮಾರು ಎರಡು ವರ್ಷ ತಾಯಿಯ ಮಡಿಲಲ್ಲೇ ಬೆಳೆಯಬೇಕಾದುದು ಕಡ್ಡಾಯ! ಅಜ್ಜ ಅಜ್ಜಿಯರು ಹೆಣ್ಣುಮಕ್ಕಳ ಸಂಗಡವೇ ಬದುಕುವ ರೂಢಿ.  ಮಾತೃ ಯಾಜಮಾನಿಕೆ ಎಂದರೂ ಆದೀತು. ಸಾಮಾನ್ಯವಾಗಿ ಹಿರಿಯ ಮಗಳ ಜೊತೆ. ಅದಕ್ಕಾಗಿ, ಅವರುಗಳು ತಮ್ಮ ಪಾಲಿನ ಆಸ್ತಿಯಲ್ಲಿ, ಹೆಚ್ಚಿನ ಪಾಲನ್ನು ಆ ಹೆಣ್ಣುಮಗಳಿಗೇ ಕೊಡುವುದು ವಾಡಿಕೆ.

ಇಲ್ಲಿ ಪ್ರೇಮ ವಿವಾಹದ ಸುಳಿವಿಲ್ಲ. ಅಕಸ್ಮಾತ್ ಯಾರಾದರು ಪ್ರೇಮಿಸಿ ಮದುವೆಯಾದಾಗ, ಆ ಹೆಣ್ಣನ್ನು ಬೇರೆ ಗಂಡಸರು ಮದುವೆಯಾಗಲು ಒಪ್ಪುವುದೂ ವಿರಳ. ಏಕೆಂದರೆ, ಅಂತಹ ಹೆಣ್ಣು ತನ್ನ ಪ್ರೇಮಿಗೇ ಹೆಚ್ಚು ಒಲವು ತೋರುವಳೆಂಬ ಭಯದಿಂದ! ಅಂತಹ ದಂಪತಿಗೆ ಸರಕಾರಕ್ಕೆ ತಿಳಿದರೆ ಜುಲ್ಮಾನೆ ಸಹ ಇದೆ! ಹಾಗಂತ ಗಂಡ ಹೆಂಡತಿಯ ನಡುವೆ ಗಾಢ ಪ್ರೇಮ ಇಲ್ಲವೇ ಇಲ್ಲವೆಂದಲ್ಲ. ಅದು ಇದ್ದರೂ, ಆ ಬಂಧನ ಎಲ್ಲರ ಒಟ್ಟಾರೆ ಬಿಗಿದ ಅಮರ ಪ್ರೇಮ ಇದ್ದಿರಬೇಕು. ಕಾಲ ಯಾವುದಾದರೇನು, ಗುಂಡಿಗೆಯು ಕೆಂಪು ಬಿಸಿರಕ್ತ ಚಿಮ್ಮಿ ಧಮನಿ ಧಮನಿಗಳಲಿ ಚಂದಚಿತ್ತಾರ ಕೆತ್ತುವವರೆಗೂ, ಪ್ರೇಮರಹಿತ ಬದುಕೂ ಇರಬಹುದೆ!

ಪಾಶ್ಚಿಮಾತ್ಯ ವಲಯದಲ್ಲಿ ಭ್ರೂಣ ಹತ್ಯೆ ಕೇವಲ ವೈದ್ಯಕೀಯ ಕಾರಣದಿಂದ ಅಥವ ಒಮ್ಮೊಮ್ಮೆ ಇತರ ನಿಮಿತ್ತ ವಿರಳವಾಗಿ ನಡೆಯುವುದರಿಂದ, ಇಲ್ಲಿಯ ಹಾಗೆ ಅನುಪಾತದ ಏರುಪೇರಿಲ್ಲ. ಆದರೂ, ಪ್ರಯೋಗಾತ್ಮಕವಾಗಿ, ಇತ್ತೀಚೆಗೆ, ಒಬ್ಬೊಬ್ಬ ಹೆಂಗಸರು ಹೆಚ್ಚು ಗಂಡಂದಿರನ್ನು ರಹಸ್ಯವಾಗಿ ವರಿಸುವುದೋ ಅಥವ ಹಾಗೆ ಜೊತೆ ಇರುವುದೋ ರೂಢಿಯಿದೆ ಎಂದೂ ಸಹ ಅಪ್ಸರೆ ಕೇಳಿ ತಿಳಿದಿದ್ದಳು.

–ಎರಡು–

“ಯಾರು ನಿಮ್ಮ ಮಧ್ಯಸ್ಥರು? ನಮ್ಮ ಬಗ್ಗೆ ಮೊದಲು ನೀವು ತಿಳಿದದ್ದು ಹೇಗೆ?” ಗಂಡಿನ ತಂದೆ, ಚಂದ್ರಹಾಸರ ಪ್ರಶ್ನೆ. “ಸುದರ್ಶನ ಅಂತಿದಾರೆ, ‘ಬ್ರಹ್ಮ’ನಗರಿಯಲ್ಲಿ, ಅವರಿಂದ ತಿಳಿದದ್ದು” ಅನಸೂಯ ಅವರ ಉತ್ತರ. “ಓಹೋ, ಅವರೇನೋ, ನಮಗೂ ಅವರದ್ದೇ ಮಧ್ಯಸ್ಥಿಕೆ” ಚಂದ್ರಹಾಸರ ಮರುಮಾತು.

‘ವೈವಾಹಿಕ ಮಧ್ಯಸ್ಥರು’ ಎಂಬುದು, ಒಂದೊಮ್ಮೆಯ ದಳ್ಳಾಳಿಗಳ ಹಾಗೆ, ಈಗ. ಅವರಿಗೆ ಕಾನೂನಿನ ಕವಚ ಕೂಡ ಇದೆ. ಒಪ್ಪಿಗೆ ಆದ ಮೇಲೆ ಏನೇ ಕಾರಣದಿಂದ ಅಕಸ್ಮಾತ್ ಸಂಬಂಧ ತಪ್ಪಿಬಿಟ್ಟರೆ, ಮಧ್ಯಸ್ಥರೇ ಕ್ರಮ ಜರುಗಿಸಬಹುದು! ಆದರೆ ಹಾಗೆ ಬಿಡುವುದೂ ಅತ್ಯಂತ ವಿರಳ. ಹಾಗೆಯೇ ಬೀಗತನಕ್ಕೇ ವಿಶೇಷ ಕೋರ್ಟ್ ಹಾಗೂ ಲಾಯರ್ ಸ್ಥಾಪನೆ ಮಾಡಿದೆ ಸರ್ಕಾರ – ‘ವೆಡ್ ಲಾಕ್ ಕೋರ್ಟ್’ ಮತ್ತು ‘ವೆಡ್ ಲಾಕ್ ಲಾಯರ್’ ಎಂದು!

ಮಧ್ಯಸ್ಥರಿಗೆ ಫೀಸ್ ಕೂಡ, ಕೊಡುವವರ ವರಮಾನ ತೆರಿಗೆಯ ಮೇಲೆ ನಿಗದಿತವಾಗುತ್ತದೆ. ಸಾಮಾನ್ಯ ಎಲ್ಲ ವಲಯಗಳಲ್ಲೂ ಹಾಗೆಯೇ. ಎಲ್ಲ ಥರ ಟ್ರ್ಯಾಫಿಕ್ ವೈಯಲೇಷನ್ ಆದರೂ ದಂಡ ವಿಧಿಸುವುದು ಅವರವರ ವರಮಾನ ತೆರಿಗೆಯ ಶೇಕಡ ದರದ ಮೇಲೆಯೇ! ಯಾವುದನ್ನೇ ಪಾವತಿ ಮಾಡದಿದ್ದರೆ ಜೈಲು ಗ್ಯಾರಂಟಿ!

ಪರಸ್ಪರ ಒಪ್ಪಿಗೆ ಆದ ನಂತರ, ಪದ್ಧತಿಯ ಹಾಗೆ ಹಾರಗಳ ವಿನಿಮಯ ಆಯಿತು. ದೇಶದಲ್ಲೇ ಸರ್ವಶ್ರೇಷ್ಠ ಎಂಬ ಹೆಸರಿನ, ‘ಅಂಬ್ರೋಸಿಯ’ ಕಂಪೆನಿಯ ವರಿಷ್ಠ ಶಾಂಪೇನ್ ಹರಿಸಿ, ಎಲ್ಲರೂ ಹೀರುತ್ತಾ, ಅದ್ಧೂರಿ ಭೋಜನದ ನಂತರ, ಒಟ್ಟಿಗೆ ಕಲೆತು ಅತಿಥಿಗಳ ಸುದೀರ್ಘ ಪಟ್ಟಿ ತಯಾರಿಸಿದರು. ದಿನಾಂಕ ಮುಂದೆ ತಂತಮ್ಮ ಅನುಕೂಲಕ್ಕೆ ತಕ್ಕಂತೆ ನಿಗದಿ ಪಡಿಸಲು ಒಪ್ಪಿ ಬೀಳ್ಕೊಟ್ಟರು.

ತಮ್ಮ ಚಾರ್ಟರ್ಡ್ ಅಕೌಂಟೆಂಟರ ಲೆಕ್ಕಾಚಾರದಂತೆ, ಮಧ್ಯಸ್ಥ ಸುದರ್ಶನ ಅವರಿಗೆ, ಅಪ್ಸರೆ ತಮ್ಮ ಪಾಲಿನ ಫೀಸ್ ಕಳಿಸಿಯೂ ಇದ್ದಳು. ಹೊಸ ಗಂಡಿನ ಮನೆಯಿಂದ ಬಂದು ವಾರ ಕಳೆದರೂ, ಆ ಕಡೆ ಸುದ್ದಿ ಇಲ್ಲದ ತಟಸ್ಥತೆ, ಇವರನ್ನೇ ಪ್ರೇರೇಪಿಸಿ ಅನಸೂಯ ಅವರು ವಿಚಾರಿಸಲು, “ನಿಮಗೆ ತಿಳಿಸೇ ಇಲ್ಲವೇ? ಛೆಛೆ! ಬೇರೆ ವಲಯದಿಂದ ಪ್ರಥಮವಾಗಿ ಮದುವೆ ಆಗುತ್ತಿದ್ದ ಹುಡುಗಿಯ ಸಂಬಂಧಕ್ಕೆ ಒಪ್ಪಿ, ನಿಶ್ಚಿತಾರ್ಥ ಕೂಡ ನಡೆದು ಹೋಯ್ತಲ್ಲ…ನಾ ಎಲ್ಲೋ ನಿಮ್ಮ ಒಪ್ಪಿಗೆಯಿಂದಲೇ ಅಂದುಕೊಂಡಿದ್ದೆ” ಅಂತ ಮಧ್ಯಸ್ಥ ಶಾಕ್ ಕೊಟ್ಟಿದ್ದ! ಬೇರೆ ವಲಯ ಅಂದರೆ ಬೇರೆ ರಾಜ್ಯದ ಹಾಗೆ.

“ಅಷ್ಟೇ ಅಲ್ಲ; ನಾನು ಕೇಳಿದ ಪ್ರಕಾರ, ಹುಡುಗನೇ ಹಠ ಹಿಡಿದು, ತನಗೆ ಪ್ರಥಮವಾಗಿ ಮದುವೆ ಆಗ್ತಾ ಇರೋ ಹುಡುಗೀನೇ ಬೇಕು ಅಂತ ಕೂತುಬಿಟ್ಟನಂತೆ” ಅಂದದ್ದೇ, ಅನಸೂಯ ಅವರಿಗೆ ಉರಿದು ಹೋಗಿ, “ಯಾಕಂತೆ, ವರ್ಜಿನ್ ಅನ್ನೋ ತೆವಲೋ ಹೇಗಂತೆ? ಎಲ್ಲೋ ಒಬ್ಬೊಬ್ಬರಿಗೆ ಅಂಥ ಮತಿಭ್ರಮೆಣೆ ಕೂಡ ಹುಟ್ಟಿಂದಲೇ ಇರಬಹುದು. ಹುಚ್ಚ ಬೀಜ ಬಿತ್ತಿದ ಫ್ಯಾಮಿಲಿಗಳಲ್ಲಿ! ಥೂ, ಅದೂ ಈ ಕಾಲ ಸಂದರ್ಭದಲ್ಲಿ! ಗ್ರಹಗಳ ನಡುವೆ ರಾಕೆಟ್ ಪ್ರಯಾಣ ಪ್ರಗತಿ ಪಡ್ದಿರೋ ಈ ಯುಗದಲ್ಲಿ! ಬಹಳ ಚೀಪ್ ಯೋಚನೆ ಗಂಡಸು ಅನ್ಸತ್ತೆ.  ಅಂಥಹವನ ಸಹವಾಸವೇ ನಮಗೆ ಬೇಡ. ಸಧ್ಯ ಒಳ್ಳೇದಾಯ್ತು. ಅವರಿಗೇನು ಗೌರ್ನಮೆಂಟ್ ರೂಲ್ಸ್ ಗೊತ್ತಿಲ್ವೆ ಹೇಗೆ?” ಅನಸೂಯ ಅವರು.  ಒಂದೇ ಸಮ ಒದರಿದ್ದರಿಂದ ವಿಚಲಿತರಾದಂತೆ, ವೈವಾಹಿಕಮಧ್ಯಸ್ಥ, “ಖಂಡಿತ ಹಾಗಂತ ಭಾವಿಸಬೇಡಿ. ಅವರದ್ದೇನೂ ಕಿಂಚಿತ್ತೂ ತಕರಾರಿಲ್ಲ ಪಾಪ. ವಾಸ್ತವವಾಗಿ, ನಿಮ್ಮ ಫ್ಯಾಮಿಲಿ ಕಂಡ ಮೇಲೆ ತುಂಬಾನೇ ಖುಷಿಯಿಂದ, ಇಂಥ ನಂಟಸ್ತನವೇ ನಮಗೆ ಬೇಕಾಗಿದ್ದದ್ದು, ಅಂತಲೂ ಬಾಯಿಬಿಟ್ಟೇ ಹೇಳಿದ್ದರು” ಮಧ್ಯಸ್ಥ ಇನ್ನೂ ಹೇಳುವಾಗಲೇ, “ಓಹೋ, ಅದೇನು ಪ್ರಥಮ ಭೇಟಿಯಲ್ಲೇ ನಮ್ಮನ್ನ ಅಳತೆ ಮಾಡ್ಬಿಟ್ರೋ ಹೇಗೆ?” ಅನಸೂಯ ಅವರ ವ್ಯಂಗಕ್ಕೆ ತಡೆ ಹಾಕಿ, “ಖಂಡಿತ ಹಾಗೆ ಭಾವಿಸಬೇಡಿ…ಅವರು ನಿಮಗೇ ಈಗಾಗಲೇ ತಿಳಿದಿರೋ ಹಾಗೆ,   ಸಾಕಷ್ಟು ಹಣವಂತರು ಕೂಡ. ನೀವು ಹ್ಞೂ ಅಂದರೆ, ಮದುವೇಲಿ ಎಷ್ಟು ದ್ರವ್ಯ ನಿಮ್ಮ ಕಡೇಗೆ ಕೊಡ್ತಾ ಇದ್ದರೋ, ಅದರ ಎರಡರಷ್ಟನ್ನ ನಿಮ್ಮ ಸಂಬಂಧ ಬಿಟ್ಟ ತಪ್ಪಿಗೆ ಕೊಡೋಕೂ ರೆಡಿ ಇದಾರೆ…” ಮಧ್ಯಸ್ಥನ ಮಾತಿಗೆ, ಮತ್ತೆ ಕೋಪಗೊಂಡ ಅನಸೂಯ ಅವರು, “ಇರಲಿ ಕೋರ್ಟಿಲ್ವೆ” ಅಂತಷ್ಟೇ ಹೇಳಿದರು. ಹೇಳಿ ಫೋನ್ ಕಟ್ ಮಾಡಿದ ಕ್ಷಣ, ತಪ್ಪು ಮಾಡಿಬಿಟ್ಟೆ ಅಂತ ಅನ್ನಿಸಿತು ಕೂಡ.

ತನ್ನ ರೂಮಿನಿಂದ, ಏನೋ ಓದುತ್ತಾ

ತಾಯಿ ಕೋಪದಲ್ಲಿ ಮಧ್ಯಸ್ಥನ ಸಂಗಡ ಮಾತನಾಡಿದ್ದೆಲ್ಲವನ್ನೂ ಕೇಳಿಸಿಕೊಂಡ ಅಪ್ಸರೆ, ‘ಬಹುಷಃ ಹೀಗಾದದ್ದು ಒಳ್ಳೆಯದೇ ಆಯ್ತು’ ಅಂದುಕೊಂಡಳು. ಅನಸೂಯ ಅವರು ತಮ್ಮ  ಕೆಪ್ಪ ಕಿವಿಯ ತಾಪತ್ರಯದಿಂದ, ಸ್ಪೀಕರನ್ನು ಹೆಚ್ಚು ವಾಲ್ಯೂಮ್ ಕೊಟ್ಟು, ಮಾತಾಡುವ ಅಭ್ಯಾಸ. ಹಾಗಾಗಿ ಅವರ ಎಲ್ಲ ಸಂಭಾಷಣೆ ಜಗಜ್ಜಾಹೀರು!

ನೈಜವಾಗಿ, ಅಪ್ಸರೆಗೆ ಈ ಮದುವೆ ಸುತರಾಂ ಇಷ್ಟ ಇಲ್ಲದ್ದು. ಇದೇ ಅಲ್ಲ, ಮುಂದೆ ಸಹ ಇನ್ನು ಯಾವ ಮದುವೆಯೂ ಬಿಲ್ ಕುಲ್ ಬೇಡ ಎಂದು ತೀರ್ಮಾನಿಸಿ, ಹಾಗಂತ, ತನ್ನ ಇಬ್ಬರೂ ಪತಿಯರಿಗೂ ಹೇಳಿ ಸಮಾಧಾನವಾಗಿದ್ದಳು. ಆದರೆ, ತನ್ನ  ತಾಯಿಯ ಬಲವಂತದಿಂದ, ಒಲ್ಲದ ಈ ಮಾಘಸ್ನಾನದ ಮೈಚಳಿಯ ಮುಳುಗಿಗೂ ಸನ್ನದ್ಧಳಾಗಿದ್ದಳು. ತಾಯಿಗೆ ಕಾನೂನು ಭಯ. ಆದರೆ, ‘ಅದೃಷ್ಟ ಒದ್ದುಕೊಂಡು ಬಂದಂತೆ’, ನಿಗದಿಯಾದುದೇ ಠುಸ್ ಎಂದು, ಹಣವೂ ಯಥೇಚ್ಛ ಬರುವ ಸೂಚನೆಯೂ ಇದೆ. ಕನಸಲ್ಲಿ ಬಾಯಿಗೆ ಬಿದ್ದ ಸಿಹಿ, ಎಚ್ಚೆತ್ತ ನಂತರ ಅಗಿದು ತಿಂದ ಹಾಗೆ!

ಜ್ಯೋತ್ಸ್ನ ಒಮ್ಮೆ, “ಈ ವಿಷ್ಯ ನಿನಗೆ ಗೊತ್ತೇನೆ” ಅಂತ ಆರಂಭಿಸಿ, “ತುಂಬ ತುಂಬಾ ಹಿಂದೆ, ಬಹುಷಃ ಮುತ್ತಾತಂದಿರ ಹಿಂದಕ್ಕೂ, ಮದುವೆ ಸಮಯದಲ್ಲಿ ಹೆಣ್ಣಿನ ಕಡೆಯಿಂದ ವರದಕ್ಷಿಣೆ ಅಂತ ಪೀಡಿಸುತ್ತಿದ್ದರಂತೆ.  ಹಾಗೆ ಹಣ, ಚಿನ್ನ, ಒಡವೆ, ಮನೆ ಅಥವ ಸೈಟ್, ಕಾರು ಮುಂತಾಗಿ, ಬಲವಂತದಿಂದ ಪಡೀತಿದ್ದರಂತೆ. ಕಲವೊಮ್ಮೆ ಎಲ್ಲ ಕೊಟ್ಟು ಮದುವೆ ಆದ ಮೇಲೂ, ಹಿಂಸೆ ಮಾಡಿ, ಪಾಪ ಸಾಯೋ ಹಾಗೆ ಮಾಡ್ತಾ ಇದ್ದರಂತೆ.

ಎಂಥಾ ಕ್ರೂರ ರಾಕ್ಷಸರು, ಅಲ್ಲವಾ? ಈಗ ಆಗಿದ್ದರೆ ಅಂಥವರ ಚರ್ಮ ಸುಲಿಗೆ ಆಗ್ತಿತ್ತು! ಸದ್ಯ ನಮ್ಮದು ಸುಸಂಸ್ಕೃತ ಸಮಾಜ! ಹೌ ಲಕ್ಕಿ ವಿ ಆರ್!” ಅಂತ ಹೇಳಿದ್ದರ ಬಗ್ಗೆ, ತಾನು ಕೂಡ ಓದಿದ್ದು ಜ್ಞಾಪಕ, ಅನಿಸಿತ್ತು ಅಪ್ಸರೆಗೆ. ಆಗ ತಾನೂ ಸಹ,”ಅಷ್ಟೇ ಅಲ್ಲಮ್ಮ…ಅದೇನೋ ಜಾತಿ ಗೀತಿ ಅಂತೆಲ್ಲ ಅಧ್ವಾನ ಇತ್ತಂತೆ. ಆಫ್ರಿಕಾ ಟ್ರೈಬ್ ಇದ್ದ ಮಾದರಿ. ಅವರ ಥರ ಹೊಡೆದಾಟ ಕೂಡ ಆಗೋದಂತೆ. ಜಾತಿ ಬಿಟ್ಟು ಮದುವೇನೂ ಆಗದಂಥ ಪರಿಸ್ಥಿತಿ ಇತ್ತು ಅಂತ ಸಹ ಓದಿದ್ದೆ. ಅಲ್ಲದೆ ರಿಲಿಜನ್ ಮತ್ತು ಅಂಥ ಹಠಮಾರಿ ಧೋರಣೆ ಸಹ ಕ್ರೌರ್ಯಕ್ಕೆ ಕಾರಣ ಆಗೋದು ಇತ್ತು. ಹಾಗೆ ರಿಲಿಜನ್ ಮಧ್ಯದ ಮದುವೆ ಸಹ ನಿಷಿದ್ಧ ಆಗಿತ್ತಂತೆ. ಆ ರೀತಿ ಈಗೇನಾದರೂ ಇದ್ದಿದ್ದರೆ, ಮದವೆಗಳೇ ಅಸಾಧ್ಯ ಆಗ್ತಿತ್ತೋ ಏನೋ. ಸದ್ಯ ನಾವು ಆ ವಿಷಯದಲ್ಲೂ ಅದೃಷ್ಟವಂತರೇ!” ಹೌದಲ್ವೇನೆ, ಜ್ಯೋತ್ಸ್, ಅಪ್ಸರೆಯ ಪ್ರಶ್ನೆ.                                  

ಸದ್ಯದ ಪದ್ಧತಿಯಲ್ಲಿ, ಹೆಂಗಸರು ಅನೂಹ್ಯವಾಗಿ ಸಂಖ್ಯೆಯಲ್ಲಿ ಕುಸಿದಿರುವ ಕಾರಣ, ಒಬ್ಬ ಗಂಡಿಗೆ ಒಬ್ಬಳೇ ಹೆಣ್ಣು ಅನ್ನುವ ಮಾತೇ ಇಲ್ಲ. ಇದ್ದರೆ, ತನಗೆ ವರ್ಜಿನ್ ಹೆಣ್ಣೇ ಬೇಕು ಅನ್ನುವ ‘ಆಜನ್ಮ ತಿಕ್ಕಲು’ ಎಂಬಂಥ ಒಬ್ಬೊಬ್ಬ, ‘ಒನ್ ಇನ್ ಎ ಮಿಲಿಯನ್’ ಇರಬಹುದು. ಸಜೀವ ಗೊಮ್ಮಟೇಶ್ವರನ ಥರ ಬೀದಿಗಿಳಿದು ‘ಕೆಂಗಣ್ಣಿನ ಕಲ್ಲು’ ತೂರಿಸಿಕೊಳ್ಳುವ ಮಂದಿಯ ಹಾಗೆ!

ಅಪ್ಸರೆ, ತನಗಿರುವ ಇಬ್ಬರೇ ಗಂಡಂದಿರೇ ಸರ್ವಸ್ವ ಅಂದು ತಿಳಿದು, ಹಾಗೇ ಬದುಕುತ್ತಿರುವ ಛಲಗಾರ್ತಿ. ಅನೇಕ ಸಂಬಂಧಗಳನ್ನು, ಏನೋ ‘ಇದ್ದರೂ ಇರಬಹುದೇನೋ’ ಅನ್ನಿಸುವ ಕಾರಣ ಹೇಳಿ ತಪ್ಪಿಸಿದ್ದವಳು. ಅಷ್ಟೇ ಅಲ್ಲ, ಆ ಇಬ್ಬರು ಗಂಡಂದಿರೂ ಸಹ ಇವಳನ್ನು ಅಗಾಧ ಪ್ರೀತಿಸುತ್ತಾರೆ. ಅಪ್ಸರೆ ಅವರಲ್ಲದೆ ಇನ್ನಾರ ಸಂಗಡ ಕೂಡ, ಹಾಸಿಗೆ ಹಂಚುವ ಇರಾದೆ ಸುತರಾಂ ಇಲ್ಲದೆ ಇರುವವಳು. ಅದೆಷ್ಟು ಪರಸ್ಪರ ಬಿಗಿದ ಪ್ರೀತಿ ಎಂದರೆ, ಅನೇಕ ಬಾರಿ ಇಬ್ಬರು ಗಂಡಂದಿರೊಡನೆ ಒಂದೇ ರೂಮಲ್ಲಿ ಮಲಗುವುದು ಈಗಲೂ ಉಂಟು! ಹಾಗಾಗಿ, ಅಪ್ಸರೆ ತನ್ನದೇ ಆದಂತಹ ಒಂದು ಚಿಂತನೆ ಮಾಡಿಕೊಂಡಳು.

ಆ ರಾತ್ರಿಯ ಶಯನಕ್ಕೆ ಇಬ್ಬರನ್ನೂ ಆಹ್ವಾನಿಸಿ, ಮಧ್ಯ ರಾತ್ರಿಯ ತನಕ ಸಮಾಲೋಚೆ ಮಾಡಿದ ಹಾಗಿತ್ತು. ಮಾರನೆ ದಿನ ಅಮ್ಮನೊಡನೆ ವಿವರವಾಗಿ ತಿಳಿಸಿ ಅಮ್ಮನ ಕೋಪ ಸಹ ಶಮನ ಮಾಡಿದಳು – ಇನ್ನೂ ಅವರಿಗೆ ಕೋಪ ಇದ್ದರೆ! ಮಧ್ಯಸ್ಥನ ಫೋನ್ ಇಟ್ಟ ಕ್ಷಣ ಅದು ಇಳಿದ ಹಾಗಂತೂ ಇತ್ತು.

ಹೊಸ ಗಂಡಿನ ತಂದೆ ತಾಯಿ ಇಬ್ಬರೂ, ಮಧ್ಯಸ್ಥ ಸುದರ್ಶನರ ಸಂಗಡ, ನಿಗದಿತ ಸಮಯಕ್ಕೆ ಹಾಜರಾದರು. ಲೋಕಾಭಿರಾಮ ಮಾತುಕತೆಯ ನಂತರ, ಮಧ್ಯಸ್ಥನೇ, “ಅನಸೂಯ ಅವರೇ, ಇಲ್ಲಿ ಯಾರ ತಪ್ಪೂ ಇಲ್ಲ. ಅಂದಾಕ್ಷಣ ನಿಮ್ಮನ್ನ ಕರೆದದ್ದು,  ಮದುವೆಗೆ ಒಪ್ಪಿದ್ದು, ಕೊನೆಗೆ ಬಿಡುಗಡೆ ಬಯಸಿದ್ದು ಇದೆಲ್ಲ ತಪ್ಪಲ್ಲ ಅಂತಲ್ಲ. ಪಾಪ ಈ ಚಂದ್ರಹಾಸ್ ಅವರಿಗೆ ಈಗ ಸಹ ನಿಮ್ಮ ಸಂಬಂಧದ ಹೆಬ್ಬಯಕೆ ಇದ್ದೇ ಇದೆ…ಆದರೆ, ನಾನು ತಮಗೆ ತಿಳಿಸಿ ಮನದಟ್ಟು ಮಾಡಿದೀನಿ… ಇದೆಲ್ಲ ಸರ್ಕಾರದ ಕಡೆ ಹೋಗೋದು ನಿಮಗಾಗಲೀ ಇವರಿಗಾಗಲೀ ಮರ್ಯಾದೆ ಅಲ್ಲ ಅಂದುಕೊಂಡು ನಿಮ್ಮಲ್ಲಿ ಇವರದೊಂದು ಬಿನ್ನಹ ಇದೆ” ಎಂದು ನಿಲ್ಲಿಸಿ, ಚಂದ್ರಹಾಸರ ಮುಖ ನೋಡಿದ, ಚಂಡನ್ನು ಅವರ ಕಡೆ ಒದ್ದು ಕಳಿಸಿದ ಹಾಗೆ.

ಆ ಚಂಡಿಗಾಗೇ ಕಾತರವಾಗಿದ್ದ ಹಾಗೆ, ಕ್ಷಣವೂ ವ್ಯರ್ಥ ಆಗದಂತೆ, “ಹೌದು ಅನಸೂಯ ಅವರೇ. ಯಾಕೋ ಏನೋ ನನ್ನ ಮಗನ ಇಂಥ ವಿರುದ್ಧ ಆಸೆ ನಮ್ಮನ್ನ ಹೀಗೆ, ನಿಮ್ಮ ಮನೆ ಕೋರ್ಟಿನ ಕಟಕಟ್ಟೆ ಮೇಲೆ ತಂದು ನಿಲ್ಲಿಸಿದೆ. ಈಗಲೂ ನಿಮ್ಮ ವಿಶೇಷ ಸಂಬಂಧದ ಆಕಾಂಕ್ಷಿ ನಾನು. ಎಲ್ಲ ನಮ್ಮ ನಮ್ಮ ಪೂರ್ವ ಕರ್ಮ ಅಂತ ಮುಂದುವರಿಯೋಣ…ತಾವು ಅನ್ಯಥಾ ಭಾವಿಸದೇ ಇದ್ದರೆ, ತಾವೇ ಒಂದು ಅಂಕಿ ಹೇಳಿದರೆ, ಈ ಕ್ಷಣವೇ

ಟ್ರಾನ್ಸ್ ಫರ್  ಮಾಡ್ಕೊಡ್ತೀನಿ. ಹಾಗಂತ ನಮ್ಮ ನಿಮ್ಮ ಬೆಳೆಯಬೇಕಾದ ನಂಟಸ್ತನ, ಈ ಹಣದ ವ್ಯವಹಾರದ ನಂತರ ಖತಂ ಅಂತಲ್ಲ. ಇದು ಸದ್ಯದ ಸಮಾಜದ ನೀತಿ, ಸರ್ಕಾರದ ನಿಯಮ…ಒಂದು ಥರ ದೇವರಿಗೆ ತಪ್ಪು ಕಾಣಿಕೆ ಕಟ್ಟಿದ ಹಾಗೆ” ಅಂತ ಹೇಳಿ, ಚಂದ್ರಹಾಸ ಪ್ರತಿಕ್ರಿಯೆಗಾಗಿ ಕಾಯ್ದರು. ಅಷ್ಟು ಅಂತಸ್ತು ಹಣ ಇದ್ದರೂ ಸಹ, ಅವರ ವಿನಯ ಎಲ್ಲ ನವ್ಯ ಕಾಲಧರ್ಮ!… ಆ ಕಡೆಯಿಂದ ಏನೂ ಬರದಿದ್ದಾಗ, ಮಧ್ಯಸ್ಥನೇ “ಅವರಿಗೂ ಮುಜುಗರ ಅಲ್ಲವೇ. ಒಂದು ಫಿಗರ್ ನಾನೇ ಹೇಳಲ?” ಅಂದದ್ದಕ್ಕೆ, ಚಂದ್ರಹಾಸ ಧಾರಾಳ ಒಪ್ಪಿದಂತೆ, ಪ್ರೋತ್ಸಾಹ ಮಾಡಿದರು. ಸ್ವಲ್ಪ ತಡೆದು, “ನೀವೇನು ಕೊಟ್ಟು ಬಡವಾಗಲ್ಲ, ಅವರೇನು ಈಸ್ಗೊಂಡು ಹೊನ್ನ ಕಳಸ ಕಟ್ಟಿಸೋಲ್ಲ. ಸಾಮಾನ್ಯ ವಧುವಿಗೆ ಮದುವೆಯಲ್ಲಿ ಕೊಡುವ ಮೂರು ನಾಲ್ಕರಷ್ಟು ಆದೀತೋ…?” ಅಂತ ತಾನೂ ಅಡ್ಡಗೋಡೆ ದೀಪ ಹಚ್ಚಿದ, ಸುದರ್ಶನ. ಇಷ್ಟೇ ಸಾಕು ಎಂಬಂತೆ, ಐವತ್ತು ಕೋಟಿ ಚೆಕ್ ಸಹಿ ಮಾಡಿ, ಎದ್ದು ನಿಂತು, “ದಯಮಾಡಿ ಸ್ವೀಕರಿಸಿ” ಎಂದು ವಿನಯವಾಗಿ ಹೇಳಿದರು, ಚಂದ್ರಹಾಸ. ಅಲ್ಲಿಗೆ ಎಲ್ಲ ಮುಗಿದ ಹಾಗೆ, ಟೀ ನಂತರ ಬೀಳ್ಕೊಂಡರು.

ಮಧ್ಯಾಹ್ನ ಊಟದ ಸಮಯ. ಅಮ್ಮ, ಮಗಳು ಮತ್ತು ಅಳಿಯಂದಿರು ಟೇಬಲ್ ಅಲಂಕರಿಸಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರು. ಅಪ್ಸರೆ ಬಂದಿದ್ದ ಹಣದ ಬಗ್ಗೆ, “ದುಡ್ಡನ್ನ ಏನ್ಮಾಡೋದು”, ಎಂದು ಅಮ್ಮನನ್ನು ಕೇಳಿದಳು.”ಅಲ್ವೇ, ಅದು ನಿನ್ನ ದುಡ್ಡು, ನಿನ್ನ ಇಚ್ಛೆ” ಅಂದು ಅಳಿಯಂದಿರ ಮುಖ ನೋಡಿದರು. ವಾಸ್ತವವಾಗಿ, ಹೌದು. ಆ ದುಡ್ಡಿಗೆ ಕೇವಲ ಅಪ್ಸರೆ ಮಾತ್ರ ಅರ್ಹಳು. ಸಂಬಂಧ ಒಪ್ಪಿ ತದನಂತರ ಬೇಡ ಎನ್ನುವುದು ಇಡೀ ದೇಶದಲ್ಲಿ ಈಗ ವಿರಳಾತಿವಿರಳ. ಹಾಗಿದೆ ಕಾನೂನು ಕಟ್ಟಳೆ! ಆದರೆ, ತಾನೇ ಇಷ್ಟ ಪಟ್ಟರೆ, ಬೇರೆ ಯಾರಿಗಾದರೂ ಕೊಡಬಹುದು. “ಹೌದಾ, ನನ್ನ ದುಡ್ಡು ನನ್ನ ಇಚ್ಛೇನಾ, ಸರಿ ಹಾಗಾದರೆ” ಅಂದು ಸ್ವಲ್ಪ ನಕ್ಕಂತೆ ಮಾಡಿ, ಎಲ್ಲರ ಮುಖವನ್ನೂ ಒಮ್ಮೆ ಸ್ಕ್ಯಾನ್ ಮಾಡಿ, “ಹೇಗಿದ್ದರೂ ಇದು ಬಯಸದೆ ಬಂದಂಥ ಹಾರ್ಡ್ ಕರೆನ್ಸಿ ಭಾಗ್ಯ”.ಹೌದು, ಇದು ಈಗಿನ ಜಗತ್ತಿನ ಅತೀ ಮುಖ್ಯವಾದ ಕರೆನ್ಸಿ ಕೂಡ. ಆದರೂ, ಇದೇ ಮೊಬಲಗು ಬಹಳ ಹಿಂದೆ ಇದ್ದಿದ್ದರೆ, ಅಂತಹ ಕುಟುಂಬ ರಿಚ್ ವಲಯ ಸೇರುತ್ತಿತ್ತು. ಈಗ ಹಾಗಲ್ಲ. ಪ್ರಪಂಚದ ಎಲ್ಲ ಕರೆನ್ಸಿಗಳ ಹಾಗೆ, ಇದೂ ತನ್ನ ‘ಹೊಳಪಿನ ಮೌಲ್ಯ’ದಲ್ಲಿ, ಸಮಯದ ಜೊತೆಗೇ ಕುಸಿತ ಕಂಡಿದೆ! ಹಾಗಂತ ಐವತ್ತು ಕೋಟಿಗೆ ಬೆಲೆ ಇಲ್ಲದಿಲ್ಲ.      

“ನನಗೇ ಇಷ್ಟ ಇಲ್ಲದ ಮದುವೆ ಆಗಲಿಕ್ಕೆ ಹೋಗಿ, ಕಡೆಗೆ ಹುಡುಗನೇ ಒಲ್ಲೆ ಎಂದದ್ದರಿಂದ ತಾನೆ ಇದು ಬಂದದ್ದು. ಐವತ್ತು ಕೋಟಿಯಲ್ಲಿ, ಈ ವಿಷಯದಲ್ಲಿ ನನಗೆ ಸಹಕರಿಸಿದ ರಂಗ್ ಹಾಗೂ ಈಶ್ ಇಬ್ಬರಿಂದ ಇಪ್ಪತ್ತು ಕೋಟಿ” ಅಂದು ಅವರಿಬ್ಬರ ಮುಖ ಓರೆಗಣ್ಣಿಂದ ಕ್ಷಣ ನೋಡಿದಳು. ಅವರ ಮಂದಸ್ಮಿತ ಕಂಡು, ಇನ್ನೂ ಖುಷಿಯಿಂದ, “ಇನ್ನು  ಈ ನಮ್ಮಮ್ಮನ ತಮ್ಮ, ಹಣದ ಕೊರತೆಯಿಂದ ಮಗನ ಮದುವೆ  ಮಾಡಿಲ್ಲ ಅಂತ ಕೇಳಿದೀನಿ. ಸುಮಾರು ವರ್ಷ ಕಾಯ್ದರೂ ಆಗಿಲ್ಲವಂತೆ. ಅಥವ, ಕೆಲವರ ಪ್ರಕಾರ, ಹುಡುಗ ಪ್ರೀತಿಯಲ್ಲಿ ಬಿದ್ದು ಹೀಗೆ, ಅಂತಲೂ ಇದೆ. ಯಾವುದು ಸತ್ಯ ಅನ್ನೋ ಶೋಧನೆ ಬೇಡ. ಅವ ಮಾವನ ಮಗ, ಅಷ್ಟು ಮುಖ್ಯ. ಅವರಿಗೆ ಹತ್ತೋ ಹದಿನೈದೋ ಕೊಟ್ಟ ನಂತರ, ಉಳಿದದ್ದು ನನ್ನ ಈ ಪ್ರೀತಿಯ ಅಮ್ಮನ ಅಕೌಂಟಿಗೆ; ಹೊಸ ಗಂಡನ್ನ ಕಟ್ಟಲೇಬೇಕೆಂಬ ಬಲವಂತ ಮಾಡದೆ ಇದ್ದದ್ದಕೆ, ಇನಾಮು! ಎಂದು ನಕ್ಕಳು. ಅನಸೂಯ ಅವರು, ಮಗಳು ಕಿಚಾಯೆಸಿದರೂ, ಅವಳ ಹೃದಯ ವೈಶಾಲ್ಯದಿಂದ, ಪುಲಕಿತರಾಗಿ,  “ಮಗಳಾದ ನೀನೇ, ನನ್ನ ತಮ್ಮನಿಗೆ ಕೊಡೋ ಮನಸ್ಸು ಮಾಡಿರೋವಾಗ, ನಾನು ಸುಮ್ಮನಿರಲಾ, ಆ ಉಳಿದದ್ದನ್ನೂ ನನ್ನ ತಮ್ಮನಿಗೇ ಕೊಟ್ಟುಬಿಡೋಣ. ನೀನೇ ಒಂದು ದಿನ ನಿಗದಿ ಮಾಡು, ಎಲ್ಲರೂ ಹೋಗಿ ಬರೋಣ” ಎಂದು ಅಳಿಯಂದಿರ ಕಡೆ ನೋಡಿ, ಕುರ್ಚಿ ಬಿಟ್ಟು ಏಳತೊಡಗಿರು.        

“ಒಂದ್ ನಿಮಿಷ”, ಎಂದು ಈಶ್ವಕಾಂತ್ ತಡೆದು, “ಆಫ್ರಿಕಾದ ಅನೇಕ ಕಡೆ ರಫ್ಯೂಜಿ ಪ್ರಾಬ್ಲಂ ಮತ್ತೆ ಹೆಚ್ಚಾಗಿದೆ. ಆ ಹಸಿದ ಮಕ್ಕಳ ದೇಹ ನೋಡಿದರೆ ಕರುಳನ್ನು ಜಜ್ಜಿದ ಹಾಗಾಗುತ್ತೆ. ಇಟ್ ಈಸ್ ವೆರಿ ಅನ್ಫಾರ್ಚುನೇಟ್! ಹಾರಿಬಲ್ ಡಿಕ್ಟೇಟರ್ಸ್! ಒಂದ, ಎರಡ, ಅನೇಕ ಕಡೆ. ಆಕಾಶಕ್ಕೆ ರಾಕೆಟ್ ದಿನನಿತ್ಯ ಹಾರಿಸಿದರೂ, ಮನುಷ್ಯ ಮಾತ್ರ ಪಾತಾಳ ಅಳೆಯೋದನ್ನ ಬಿಡಲ್ಲ. ನಾಶದ ಅಂಚಿನಲ್ಲರೋ ಮೃಗಗಳೇ ಲೇಸು!” ಎನ್ನುತ್ತ ಒಮ್ಮೆ ದೀರ್ಘ ಸುಯ್ದು, ಈಶ್, “ಹಾಗಾಗಿ ಆ ನಿಧಿಗೆ ನನ್ನ ಹಣ ದಾನ ಮಾಡ್ತೀನಿ” ಎಂದ.

“ಗಾಡ್ಸ್ ವಿಶ್! ನನಗೂ ಕಮ್ಮಿ ಇಲ್ಲ”, ಈಶ್ ಹೇಳಿಕೆಗೆ ಪೂರಕ ಎಂಬಂತೆ, “ನಾನೂ ಈಶ್ ಜೊತೆ ಜಾಯಿನ್ ಆಗ್ತೀನಿ”,ಎಂದು ರಂಗ್ ಸಹ ಸೇರಿಸಿದಾಗ, “ಎಸ್, ಇಟ್ಸ್ ಗಾಡ್ಸ್ ವಿಶ್” ಒಕ್ಕೊರಲಿನಿಂದ ಎಲ್ಲರೂ ಚಪ್ಪಾಳೆ ಸಹಿತ ಟೇಬಲ್ ಬಿಟ್ಟೆದ್ದರು.

.************************************

2 thoughts on “ಅಪ್ಸರೆಯ ಮೂರನೆ ಮದುವೆ!

Leave a Reply

Back To Top