ಅಂಕಣ ಬರಹ

ರಂಗ ರಂಗೋಲಿ

ಓಪತ್ತಿಯ ಒಡೆದ ಬಳೆ ಚೂರುಗಳು

” ನಾನು ಏನೂ ಹೇಳುವುದಿಲ್ಲ. ತಾಯಿ ಕರುಳಿನ ಸಂಕಟ, ನೋವು, ಅವಳ ಅಸಹಾಯಕತೆ, ನೋಡುವವರಿಗೆ ತಲುಪಬೇಕು. ಯಾವುದೇ ಡೈಲಾಗ್ ಇಲ್ಲ. ಕದಿರು ತುಂಬಿ ಅಂಗಳದಲ್ಲಿ ಪೇರಿಸಿಟ್ಟ ಒಣಹುಲ್ಲುಇದೆ. ಅದು ಅವಳಿಗೆ ಲಕ್ಷ್ಮೀ. ತುಳಸೀಕಟ್ಟೆಯಿದೆ. ನೀವು ಅದರ ಎದುರು ಬೀಳಬೇಕು, ನೀವು, ನಿಮ್ಮ ದುಃಖ..ನನಗೆ ನನ್ನ ಕಲಾವಿದೆಯ ಬಗ್ಗೆ ನಂಬಿಕೆಯಿದೆ. ಅಭಿನಯಿಸಿ”

ನಿರ್ದೇಶಕರಾದ ಚಂದ್ರಹಾಸ ಆಳ್ವರು ಕರೆದು ಸಂದರ್ಭ ತಿಳಿಸಿದರು.

ನನಗೆ ಭಯ. ತುಳಸೀಕಟ್ಟೆ ಎದುರು ಕುಸಿದು ಬೀಳಬೇಕು ಎಂದಿದ್ದಾರೆ. ಅದು ಹೇಗೆ..ಓಡಿ ಹೋಗಿ ಬೀಳುವುದು ಸಹಜವಾಗಿರಬೇಕು. ಮನಸ್ಸಿನಲ್ಲಿ ಬೀಳಬೇಕು ಎಂಬ ಅರಿವು ದೇಹವನ್ನು ತಡೆದು ಬಿಟ್ಟರೆ? ಅದು ಕೃತಕವಾದರೆ..? ಜೊತೆಗೆ ನಿರ್ದೇಶಕರು ಇಡೀ  ದೃಶ್ಯ ಒಂದೇ ಟೇಕಿನಲ್ಲಿ ಮುಗಿಯಬೇಕು. ರೀ ಟೇಕ್ ಆಗದು ಎಂದಿದ್ದಾರೆ.

ನಾನು ಅಭಿನಯಿಸಿದೆ.

 ಹೌ..ದು…..

ಅದು ಅಭಿನಯವೇ?

ನಿಜಜೀವನವೇ?..

ಮಗಳ ಬಳಿಯಿಂದ ಓಡುತ್ತೋಡುತ್ತ ಓಪತ್ತಿ ಅಂಗಳಕ್ಕೆ ಬರುತ್ತಾಳೆ..

ಆ ವೇಗದಲ್ಲಿ ಬಂದವಳು ಬೀಳುವುದು..?

ತುಳಸಿಕಟ್ಟೆ ಹತ್ತಿರ ಬಂತು. ಒಂದು ಕ್ಷಣ ಮನಸ್ಸಿನಲ್ಲಿ ಹೇಗೆ ಬೀಳಲೀ ಎಂದಾಯಿತು. ಯೋಚನೆ ಮುಗಿಯುವ ಮುನ್ನ ಓಪತ್ತಿ  ಕಟ್ಟೆಯೆದುರು ಕಡಿದ ಬಾಳೆಯಂತೆ ಧೊಪ್ ಎಂದು ಉರುಳಿ ಬಿದ್ದಿದ್ದಾಳೆ. ಕೈಯ ಬಳೆಗಳು ಛಟ್- ಫಟ್.. ಚೂರಾಗಿ ಹಾರಿದವು. ಅಂಗೈ, ,ಮಣಿಕಟ್ಟಿನ ಬಳಿ ತುಂಡಾದ ಬಳೆ ಚೂರು ತಾಕಿ ರಕ್ತ . ಅವಳಿಗೆ ಅದರ ಅರಿವಿಲ್ಲ. ತನ್ನ ಮಗಳನ್ನು ಕಾಡಿಗೆ, ಕ್ರೂರ ಮೃಗಗಳ ಬಾಯಿಗೆ ಕಳುಹಿಸಬೇಕು. ಅದೂ ಮಗಳಿಗೆ ತಿಳಿಯದಂತೆ ಕಳುಹಿಸಬೇಕು. ಹಾ. ..ಅಯ್ಯೋ,ವಿಧಿಯೇ.. ಮನಸ್ಸಿನೊಳಗೆ ಭಾವ ಅನುರಣಗೊಳ್ಳುತ್ತಿತ್ತು. ತೆನೆ ಹುಲ್ಲನ್ನು ‘ಪಡಿಮಂಚ’ಕ್ಕೆ ಆಕ್ರೋಶ, ಅಸಹಾಯಕತೆ, ತನ್ನಬಗ್ಗೆ, ತನ್ನ ದುರ್ವಿಧಿಯ ಬಗ್ಗೆ ಹಳಿದು ಬಡಿಯುತ್ತಿದ್ದಾಳೆ.

ದೃಶ್ಯ ಮುಗಿದಿತ್ತು. ಅದು

‘ ಕೋಟಿಚನ್ನಯ’ ಟಿವಿ ಧಾರಾವಾಹಿಯೊಳಗಿನ ಮನಕಲಕುವ ದೃಶ್ಯ.

‘ಕೋಟಿ ಚನ್ನಯ’,

ಅದು ನಾಟಕವೋ, ಯಕ್ಷಗಾನವೇ ಎಂಬುದು ಸರಿಯಾಗಿ ಮನಸ್ಸು ತೆರೆದು ತೋರಿಸುತ್ತಿಲ್ಲ. ನಾಟಕಕ್ಕೆ ತನ್ನದೇ ಮಾರ್ದವತೆ, ಯಕ್ಷಗಾನದ ‘ಚಂಡೆಮದ್ದಳೆ’ಯ ಶೈಲಿ, ಚೆಂದವೇ ಬೇರೆ. ಹೀಗಾಗಿ ಅವು ನೆನಪಿನಲ್ಲಿ ತಮ್ಮದೇ ಖಾತೆ ತೆರೆದು ಕೂತಿರುತ್ತವೆ.

ನಾನು ಚಿಕ್ಕವಳಿರುವಾಗ ನಮ್ಮ ಮನೆಯ ಅನತಿ ದೂರದಲ್ಲಿ ರಂಗದಲ್ಲಿ ಅರಳಿ ಛಾಪು ಬೀರಿದ ಆ ಪ್ರಸ್ತುತಿ ಕಥನವಾಗಿ ಹೆಚ್ಚು ತೀವ್ರತೆಯಿಂದ ದಾಖಲಾಗಿತ್ತು. ಅದು ಅವಿಭಜಿತ ದಕ್ಷಿಣ ಕನ್ನಡದ ಆಡು ಭಾಷೆಯಾದ ತುಳುವಿನಲ್ಲಿ ಆಪ್ತವಾಗಿ ಕಾಡಿ ಉಳಿದುಬಿಟ್ಟಿತ್ತು. ಈಗಲೂ ಅದೇ ಮಧುರತೆ. ಮೌಖಿಕ ಪರಂಪರೆಯ ಪಾಡ್ದನ ಕೃತಿಯೊಂದು ತುಳುನಾಡಿನ ಮನಸ್ಸುಗಳಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಮತ್ತಷ್ಟು ಹತ್ತಿರವಾಗಿ ಸಿನೇಮಾ, ಧಾರವಾಹಿಯಾಗಿ ಯಶಸ್ವಿಯಾದ ದಾಖಲೆ.

ಮೌಖಿಕ ಪರಂಪರೆಗೆ ತನ್ನದೇ ಸೊಗಡು. ಇದು ತುಳುನಾಡಿನ ಅವಳಿ ವೀರ ಸಹೋದರರಾದ ಕೋಟಿ ಚೆನ್ನಯರ ಕಥೆ. ಪಾಡ್ದನದ ಕಥೆ ಸಾಹಿತ್ಯದ ಮಡಿಲಿಗೆ ಬಿದ್ದು ಅಕ್ಷರದಲ್ಲಿ ಬಗೆಬಗೆಯ ವಸ್ತ್ರ ತೊಟ್ಟು ಮತ್ತಷ್ಟು ಪ್ರಬಲಗೊಂಡು ಕಲೆಯ ಸೊಡರು ಹಿಡಿದು ಅನಾವರಣಗೊಂಡಿದೆ. ಬಾಲ್ಯದಲ್ಲಿ ಕಂಡ ಆ ಪ್ರಸ್ತುತಿ ಮೆದು ಮನಸ್ಸನ್ನು ಕಲಕಿ ಕಾಡಿತ್ತು. ಕಾಡುತ್ತಲೇ ಇದೆ.

 ನಂತರದ ದಿನಗಳಲ್ಲಿ ನಾಟಕವಾಗಿ, ಸಿನೆಮಾವಾಗಿ ನೋಡಿದ್ದು ಅದೆಷ್ಟು ಸಲವೋ.. ತುಳುವರ ಬಾಯಿಯಲ್ಲಿ ಈ ಕಥೆ ಸಿನೇಮಾ ಆದಾಗ ಆ ಹಾಡುಗಳು ಮನೆಮನೆಗಳಲ್ಲೂ ಆತ್ಮೀಯವಾಗಿ ಗುನುಗಲ್ಪಟ್ಟಿದೆ. ಈಗಲೂ ಅಷ್ಟೇ ಪ್ರೀತಿಯಿಂದ ಹಾಡುತ್ತಾರೆ.

“ಮೊಕುಲು ವೀರೆರ್, ಮೊಕುಲ್ ಶೂರೆರ್ “

” ಎಕ್ಕಸಕ್ಕ‌ಎಕ್ಕಸಕ್ಕ”

“ಪೆಮ್ಮಲೆತಾ ಬ್ರಹ್ಮಾ..ಎಂಕ್ಲೆ ಕುಲದೈವೋ”

“ಜೋಡು ನಂದಾ ದೀಪ”

ಎಂತಹ ಮಧುರ ಹಾಡುಗಳವು..ಈ ಮೂಲಕ ತುಳು ಭಾಷೆಗಿರುವ ಸಿಹಿಯೂ ಜಗತ್ತಿನಾದ್ಯಂತ ಪರಿಚಯಗೊಂಡಿದೆ.

 ತುಳುವರಿಂದ ಆರಾಧನೆಗೊಳಪಟ್ಟ ಕೋಟಿ ಚೆನ್ನಯರ ಕಥೆಯು ಇಲ್ಲಿಯ ಜನರಿಗೆ ಎಂದೂ ರುಚಿಕೆಡದ ಆಕರ್ಷಣೆ. ಹಾಗಾಗಿ ಮತ್ತೆ ಮತ್ತೆ ಹೊಸ ಹೊಸ ರೂಪಗಳೊಂದಿಗೆ ಕಲಾ ಅವಿಷ್ಕಾರವಿಲ್ಲಿ ನಡೆಯುತ್ತದೆ.

ಆ ದಿನ ಬೆಳಗಿನ ನೇಸರ ತೆಂಗಿನ ಮರದ ತುದಿಯಾಚೆ ತಲಪಿದ್ದ. ಫೋನ್ ಟ್ರಿಣ್ ಟ್ರಿಣ್ ಅಂದಿತ್ತು. ರಂಗಕರ್ಮಿ, ಸಂಗೀತ ನಿರ್ದೇಶಕರಾದ ಗುರುರಾಜ್ ಮಾರ್ಪಳ್ಳಿಯವರ ಕರೆಯದು.

” ‘ಕೋಟಿ ಚೆನ್ನಯ’ ಪ್ರಜಾ ಫಿಲಂಸ್ ಬ್ಯಾನರ್ ನಿಂದ ಧಾರವಾಹಿಯಾಗಿ ತಯಾರಾಗುತ್ತಿದೆ. ನಿಮಗೆ ಆಸಕ್ತಿಯಿದ್ದರೆ ಒಮ್ಮೆ ಬಂದು ಮಾತನಾಡಿ ಹೋಗಿ”

ಎಂದು ವಿಳಾಸ ನೀಡಿದರು.

ಕುತೂಹಲದೊಂದಿಗೆ ಹೋಗಿ ಧಾರವಾಹಿಯ ನಿರ್ದೇಶಕರಾದ ಚಂದ್ರಹಾಸ ಆಳ್ವ ಹಾಗೂ ಜೊತೆಗಿದ್ದ ಮಾರ್ಪಳ್ಳಿ ಸರ್ ರವರನ್ನು ಕಂಡು ಬಂದಿದ್ದೆ. ಮಾರ್ಪಳ್ಳಿ ಸರ್ ನನ್ನ ಬಗ್ಗೆ ಒಳ್ಳೆಯ ಮಾತೂ ಆಡಿದ್ದರು.

” ನನಗೆ ಕೋಟಿ ಚೆನ್ನಯ” ರ ತಾಯಿ ದೇಯಿ ಬೈದೆದಿ ಬಗ್ಗೆ ಆಸೆ. ನಿರ್ದೇಶಕರು ಕರೆ ಮಾಡಿ

” ನೀವು ಓಪತ್ತಿ ಪಾತ್ರ ಮಾಡಬೇಕು”

ಎಂದರು. ಹೊಸ ಹೆಸರಿನ ಪಾತ್ರ. ಒಂದಿಷ್ಟು ನಿರಾಸೆಯಾದರೂ ಹ್ಹೂಂ ಗುಟ್ಟಿದೆ. ಮುಂದೆ ಮೊದಲ ದಿನದ ಚಿತ್ರೀಕರಣದ ನಂತರ ನನ್ನನ್ನು ಕರೆದ ನಿರ್ದೇಶಕರು

” ಚಿಂತಿಸದಿರಿ. ಈ ಪಾತ್ರ ನಿಮ್ಮ ಅಭಿನಯವನ್ನು ಧಾರವಾಹಿ ನೋಡಿದವರಿಗೆ ಪರಿಚಯಿಸುತ್ತದೆ” ಎಂದರು.

 ನಾನು ಓಪತ್ತಿಯಾದೆ. ದೇಯಿ ಬೈದೆದಿಯ ತಾಯಿಯ ಪಾತ್ರ.

ಈ ಧಾರವಾಹಿಯ ಮೊದಲ ಕಂತಿನಿಂದ ಸುಮಾರು 20 ಕಂತುಗಳ ತನಕ ನನ್ನ ಅಭಿನಯವಿತ್ತು. ಹಲವಾರು ಸಿನೇಮಾ, ಕೆಲವು ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ಚಿಕ್ಕ, ದೊಡ್ಡ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಅಭಿನಯದ ದೃಷ್ಟಿಯಿಂದ ಅತ್ಯಂತ ಸಂತಸ, ತೃಪ್ತಿ ಉಣಿಸಿದ ಪಾತ್ರ ಓಪತ್ತಿ ಎನ್ನುವುದು ದಿಟ. ನಮ್ಮದೇ ಮಣ್ಣಿನೊಳಗೆ ಹೊಕ್ಕುಳು ನೆಟ್ಟ ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಬೇಕೇ?.

ಅದು ಸ್ವಕಾಯ ವಿಕಸನ ಮತ್ತು ಕಲಾ ಜ್ವಲನ ಅಲ್ಲವೇ!.

ಈ ಧಾರವಾಹಿಯ ಚಿತ್ರೀಕರಣದ ಸಮಯದಲ್ಲಿ ಉಂಡ ಮಧುರ ನೆನಪುಗಳಷ್ಟೋ, ಅಭಿನಯಕ್ಕೆ ಸವಾಲು ಅನಿಸಿದ ಸನ್ನಿವೇಶಗಳು, ಯಾವುದೋ ಶಕ್ತಿಯೊಂದು ಮುನ್ನಡೆಸುತ್ತಿದೆ ಎಂಬ ಭಾವ ಭರಿಸಿದ ಘಟನೆಗಳು, ನನಗೆ ದೊರಕಿದ ಇಲ್ಲಿಯ ಜನರ ಪ್ರೀತಿಯ ಮಹಾಪೂರ. ನನ್ನನ್ನು ಧಾರವಾಹಿಯಲ್ಲಿ ನೋಡಿ ಅತ್ಯಂತ ಆಪ್ತತೆಯಿಂದ ಇಲ್ಲಿನವರು ಮನೆ ಮಗಳಂತೆ ನಡೆಸಿಕೊಂಡ ಮನದ ಸಿರಿವಂತಿಕೆ ಮರೆಯಲಾಗದು. 

ಕೋಟಿ ಚೆನ್ನಯ ತುಳು ಮಣ್ಣಿನ ಮೌಖಿಕ ಕಾವ್ಯ. ಕೆಳವರ್ಗದ ಜನರ ಪ್ರತಿಭಟನೆಯ ಅಸ್ತ್ರವಾಗಿ ಕೋಟಿ- ಚೆನ್ನಯರು ತೋರಿಬಂದಿದ್ದಾರೆ. ಅನ್ಯಾಯದ ವಿರುದ್ದ ಸಿಡಿದೆದ್ದ ಕಲಿಗಳು. 

ಪರಂಪರಾಗತವಾಗಿ ಬಂದ ನಾಟಿ ವೈದ್ಯದಲ್ಲಿ ತಾಯಿ ದೇಯಿ ಬೈದೆದಿ  ಪರಿಣಿತಳು.  ಅವಳ ಹುಟ್ಟಿನ ಬಗ್ಗೆ ಪಾಡ್ದನವು ಸುಂದರವಾದ ಕಥೆ ಹೇಳುತ್ತದೆ. ಆಕೆ ಬ್ರಾಹ್ಮಣರ ಮಗಳು. ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಗಳಿಗೆ ಕೇಂಜ ಪಕ್ಷಿಗಳಿಂದ, ಸೂರ್ಯದೇವರ  ಅನುಗ್ರಹದಲ್ಲಿ ದೊರೆತ ಮಗು. ಆದರೆ ಅಂದಿನ ಕಾಲದ ಸಂಪ್ರದಾಯದಂತೆ ಮದುವೆಗೆ ಮುನ್ನವೇ ಋತುಮತಿಯಾದ ಆಕೆಯನ್ನು ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ಬಿಡಲಾಗುತ್ತದೆ. ಈ ಸಣ್ಣ ಎಳೆ ನಿರ್ದೇಶಕರ ಮನಸ್ಸಿನ ಮೂಸೆಯಲ್ಲಿ ತಾಯಿ ಓಪತ್ತಿಯ ಸಂಕಟ, ತಳಮಳ, ಬಂಜೆಯೆನಿಸುವ ಹೆಣ್ಣಿನ ನೋವು ಎಲ್ಲವನ್ನೂ ಎಳೆಎಳೆಯಾಗಿ ತೆರೆದಿಡುವ ಪಾತ್ರವಾಗಿ ಹೊರಹೊಮ್ಮಿದೆ.

ಒಂದು ಸನ್ನಿವೇಶವಿದೆ. ಓಪತ್ತಿ ಶುಭ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಾಳೆ. ಆದರೆ ಆಕೆಗೆ ಹೆಂಗಸರು ಬಂಜೆಯೆಂದು ಅವಮಾನಿಸಿ ಕಳುಹಿಸುತ್ತಾರೆ. ದುಃಖದ ಮಹಾಪೂರ ಧರಿಸಿ ಮನೆಗೆ ಬಂದವಳು ಪತಿಯ ಬಳಿ ಪ್ರಶ್ನಿಸುತ್ತಾಳೆ, ರೋಧಿಸುತ್ತಾಳೆ.

” ನನಗೆ ಮಕ್ಕಳಿಲ್ಲ. ಏನು ಮಾಡಲು ಸಾಧ್ಯ. ಇದೆಂತಹ ಶಿಕ್ಷೆ. ಹೆಣ್ಣಾದ ತಪ್ಪಿಗೆ ಈ ಸಮಾಜ ನನ್ನ ಚುಚ್ಚಿ ಹಿಂಸಿಸುತ್ತಿದೆ. ನಾನು ಬಂಜೆ, ಓಪತ್ತಿ ಬಂಜೆ”

ಈ ಸಂಭಾಷಣೆಯನ್ನು ಗಂಡ ‘ಪಿಜಿನ’ ರಲ್ಲಿ( ಅರವಿಂದ ಬೋಳಾರ್) ಹೇಳಿ ಅತೀವ ದುಃಖ ವ್ಯಕ್ತಪಡಿಸುತ್ತಾಳೆ. ಆ ಸಮಯ ಚಿತ್ರೀಕರಣ ನೋಡುತ್ತಿದ್ದವರಲ್ಲಿ ಒಂದು ಕಾರಿನ ಚಾಲಕರೂ ಇದ್ದರು. ಅವರಿಗೆ ಕಲಾವಿದರಿಗೆ ಊಟ, ತಿಂಡಿ ತಂದುಕೊಡುವ ಕೆಲಸ. ಆ ಶಾಟ್ ಮುಗಿದಾಗ ನಿರ್ಮಾಪಕರು ಅವನನ್ನು ಕರೆದರೆ ಎಲ್ಲೂ ಕಾಣಿಸಲಿಲ್ಲ. ಅವರು ಚಿತ್ರೀಕರಣ ನಡೆಯುವ‌ ಮನೆಯ ಹಿಂಬದಿಗೆ ಹೋಗಿ ಅಳುತ್ತಿದ್ದರಂತೆ. ಅವರನ್ನು ಹುಡುಕಲು ಹೋದವರಲ್ಲಿ ಕಣ್ಣೀರಿಟ್ಟು, ‘ ನಾನು ನಿಜ ಜೀವನದಲ್ಲಿ ಕೊಲೆಯ ಅಪರಾಧದಲ್ಲಿ ಶಿಕ್ಷೆ ಅನುಭವಿಸಿ ಬಂದಿರುವೆ. ಒಂದು ದಿನವೂ ಕಣ್ಣೀರಿಡಲಿಲ್ಲ. ಆ ಹೆಂಗಸು ಇವತ್ತು ನನ್ನ ಎದೆಯಾಳದ ಸಂಕಟವೆಲ್ಲ ಹೊರಹಾಕಿ ಬಿಟ್ರು” ಎಂದರಂತೆ. ಅವರು ಮೌನವಾಗಿ ಮೂಲೆ ಹಿಡಿದು ಕೂತಿದ್ದರು.

ನಾನು ಹೋಗಿ

 “ಬನ್ನಿ ಅಣ್ಣಾ” ಎಂದೆ.

” ನೀವು ಯಾರು,ನನ್ನನ್ನು ಈ ರೀತಿ ಅಳುವಂತೆ ಮಾಡಿದಿರಿ.(ಈರ್ ಯೆನನ್ ಬುಲ್ಪಾಯೆರ್ ಅಕ್ಕಾ..) “

ಎಂದಾಗ ಓಪತ್ತಿ ಪಾತ್ರ ನನ್ನ ಒಪ್ಪಿಕೊಂಡ ಸಂತೃಪ್ತಿಯ ಭಾವದ ಜೊತೆಗೆ ಪರಿಣಾಮಕಾರಿ ಪ್ರಸ್ತುತಿ ನೋಡುಗನ ಮೇಲೆ ಬೀರುವ ಪ್ರಭಾವ ಮನಗಂಡೆ.

ಮತ್ತೊಂದು ಸಂದರ್ಭ ಮಗಳು ಮೈನೆರೆತಾಗ ಪರಿಣಾಮ ನೆನೆದು ತಾಯಿಯ ಎದೆ ಕುಸಿಯುತ್ತದೆ. ಮುಂದೆ ನಡೆಯುವ ದುರಂತ ಆಕೆ ಊಹಿಸಬಲ್ಲಳು. ಈ ದೃಶ್ಯವನ್ನೇ ನಾನು ಲೇಖನದ ಆರಂಭದಲ್ಲಿ ತಿಳಿಸಿದ್ದು.

ಆ ದೃಶ್ಯದ ಚಿತ್ರೀಕರಣದ ದಿನದಂದು ನಿರ್ದೇಶಕರ ಬಳಿ ಕಥೆಯ ಬಗ್ಗೆ ಚರ್ಚಿಸಲು ತುಳುಭಾಷಾ ವಿದ್ವಾಂಸರೂ, ಹಿರಿಯರೂ ಆದ ವಾಮನ ನಂದಾವರ ಬಂದಿದ್ದರು. ಅವರ ಕೆಲಸ ಮುಗಿಸಿ ಹೊರಡಲು ಅನುವಾದಾಗ ನಿರ್ದೇಶಕರು ಅವರನ್ನು ತಡೆದು

 ” ಇರಿ. ಈ ಒಂದು ದೃಶ್ಯ ನೋಡೋಣ. ಮತ್ತೆ ಹೊರಡಿ”

 ಎಂದರಂತೆ.

ಅವರು ಅರೆಮನಸ್ಸಿನಲ್ಲಿ

” ತಡವಾಯಿತು”

ಎನ್ನುತ್ತಾ ಕುಳಿತು ಈ ದೃಶ್ಯ ನೋಡಿದ್ದಾರೆ.

” ಅಬ್ಬಾ,ಎಂತಹ ದೃಶ್ಯ.. ಈಗ ತಿಳಿಯಿತು. ನನ್ನನ್ನು ಹೋಗಲು ಬಿಡದೆ ಕಟ್ಟಿಹಾಕಿದ ರಹಸ್ಯ”

ನನ್ನ ಬಳಿ ಬಂದು

” ನಿಮ್ಮ ಅಭಿನಯ ಮೆಚ್ಚಿದೆ. ಸರಸ್ವತಿಯ ಅನುಗ್ರಹ ಸದಾ ಇರಲಿ. ” ಎಂದರು.

ಕಲಾವಿದೆಗೆ ದೊರಕಿದ ಮನ್ನಣೆ. ನಿರ್ದೇಶಕರೂ ಸಂತೃಪ್ತಿಯಲ್ಲಿದ್ದರು.

ಚಿತ್ರೀಕರಣ ನೋಡುತ್ತಿದ್ದ ಹಳ್ಳಿಯ ಮುಗ್ಧ ಜನರು ಕಣ್ಣೀರಿಡುತ್ತಿದ್ದರಂತೆ.

 ” ಆ ರೀತಿ ಉರುಳಿ ಬಿದ್ದದ್ದು ನನಗೆ ಆಶ್ಚರ್ಯವಾಯಿತು”

 ನಿರ್ದೇಶಕರು ನುಡಿದಾಗ ನಾನು ನಿಧಾನವಾಗಿ ತುಸು ಸಂಕೋಚದಲ್ಲಿ ಅಂದೆ.

“ಸರ್,ಅದೂ..ತುಳಸೀಕಟ್ಟೆಯ ಬಳಿ ಬರುವಾಗ ಸೀರೆ ಕಾಲ ಕೆಳಗೆ ಸಿಕ್ಕಿಬಿದ್ದು ಎಡವಿದಂತಾಯಿತು. ಆಧಾರ ಸಿಗದೆ ನೇರ ತುಳಸಿಕಟ್ಟೆ ಎದುರಿಗೇ ಬಿದ್ದೆ.”

” ಹಾಗಾದರೆ ಒಂದು ಶಕ್ತಿ ನಮ್ಮನ್ನು ನಡೆಸುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. ಅಲ್ವಾ. ಇರಲಿ ನಿಮ್ಮ ಕೈ ನೋಡಿ, ರಕ್ತ ಸೋರುತ್ತಿದೆ. ಪಟ್ಟಿ ಹಾಕಬೇಕು”

ಎನ್ನುವಾಗ ನಿರ್ಮಾಪಕರಾದ ಆಶೋಕ ಸುವರ್ಣರು ಕಣ್ಣೊರೆಸುತ್ತ ಪಟ್ಟಿ ಹಿಡಿದು ಬಳಿ ಬಂದಿದ್ದರು.

ಈ ಧಾರವಾಹಿಯಲ್ಲಿ ನಾನು ತುಳುನಾಡಿನ ಬಹುದೊಡ್ಡ ಕಲಾವಿದರಾದ ಅರವಿಂದ ಬೋಳಾರ್ ಜೊತೆಗೆ ಅಭಿನಯಿಸಿದ್ದು ಭಾಗ್ಯವೆನ್ನಬಹುದು. ಚಿತ್ರೀಕರಣದ ಸಮಯದಲ್ಲಿ ಯಾವಾಗಲೂ ನಗಿಸುತ್ತಿದ್ದು ವಾತಾವರಣವನ್ನು ಸದಾ ಹಸಿರಾಗಿಡುವ ಅತೀ ಅಪರೂಪದ ಕಲಾವಿದರಿವರು.

 “ನನಗೆ ಈ ಧಾರವಾಹಿಯಲ್ಲಿ ನಿಮ್ಮ ಅಭಿನಯ ಇಷ್ಟ. ಯಾಕೆ ಹೇಳಿ..ನೀವು ನನ್ನ ಹೆಂಡತಿಯ ಕಣ್ಣಲ್ಲಿ ನೀರು ತರಿಸಿದ್ದೀರಿ. ಇದು ನನಗೆ ಆಗದೇ ಇದ್ದ ಕೆಲಸ “

ಎಂದು ತಮಾಷೆ ಮಾಡಿ ನಗುತ್ತಿದ್ದರು.

  ಒಂದು ಧಾರವಾಹಿ ಜನರ ಮನಸ್ಸಿಗೆ ಆಪ್ತವಾಗಿ ತಮ್ಮದೇ ಮನೆಯ ಕಥೆ, ತಮ್ಮವರ ಕಥೆ ಅನಿಸಿ  ಆ ಕಲಾವಿದರೂ ಮನೆಯ ಸದಸ್ಯರೇ ಆಗಿ ಆರ್ತಿಯಿಂದ ಒಪ್ಪುವ ಸಂಭ್ರಮದ ಅನುಭೂತಿ ಸಾಮಾನ್ಯವಾದುದ್ದಲ್ಲ.

ಕೋಟಿ ಚೆನ್ನಯರು ತುಳುನಾಡಿನ ಆರಾಧ್ಯ ದೈವ. ಜನರು ಭಯ, ಭಕ್ತಿಯಿಂದ ಕೋಲ, ನೇಮ ಎಂದು ಆರಾಧಿಸುತ್ತಾರೆ. ಅಂತೇ ಇಲ್ಲಿ ನಮ್ಮನ್ನೂ  ಗೌರವದಿಂದ ಮಾತನಾಡಿಸುತ್ತಿದ್ದರು. ಇದು ಕಲಾವಿದೆಯಾಗಿ ನನಗೆ ದೊರಕಿದ ಪುಳಕ,ಸಾರ್ಥಕತೆ.

ಎದೆಯಲ್ಲಿ ಭಿತ್ತಿದ ಈ ಪಾಡ್ದನ ಕೃತಿಯ ಬೀಜ ಮುಂದೆ

 “ಸಿರಿ” ಎಂಬ ನಾಟಕ

ಚಿಗುರಲು ಮೂಲ ದ್ರವ್ಯವಾಯಿತು.

 ಈ ಪುಣ್ಯ ಮಣ್ಣಿಗೆ, ಓಪತ್ತಿಗೆ ಶರಣು.

ಈ ಸುಂದರ ಪಾತ್ರ ಧರಿಸುವಂತೆ ಮಾಡಿದ ನಿರ್ದೇಶಕರಿಗೆ, ನಿರ್ಮಾಪಕರಿಗೆ,  ಕಲಾವಿದೆ ಸದಾ ಶಿರಬಾಗಿದ್ದಾಳೆ.

*********************************

ಫೋಟೊ ಆಲ್ಬಂ

ಪೂರ್ಣಿಮಾ ಸುರೇಶ್

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

5 thoughts on “

  1. ನಿರೂಪಣೆಯಲ್ಲಿ ಯೇ ಅಭಿನಯ ಕಂಡೆ.ನನ್ನ ಕಣ್ಣಂಚೂ ಒಡೆಯಿತು. ಚೆಂದದ.ಬರಹ, ಸಿರಿ

    1. ಸ್ಮಿತಾ..ನಿನ್ನ ಪ್ರೀತಿ ಬರಹಕ್ಕೆ ಸ್ಪೂರ್ತಿ

  2. ಓಪತ್ತಿಯ ಬಳೆ ಒಡೆದು ಚೂರು ಚೂರು ಆಗುವುದು ಮತ್ತು ಅವಳದೇ ಒಡೆದ ಬಳೆಯ ಚೂರುಗಳು ಅವಳ ಕೈಗಳಿಗೆ ಗಾಯ ಮಾಡುವುದು, ತುಂಬಾ ಇಂಟೆನ್ಸ್ ಆದ, ಕಾವ್ಯ ಪ್ರತಿಮೆ.
    ನಾಟಕದ ದೃಶ್ಯಗಳೂ ಕಾವ್ಯ ಪ್ರತಿಮೆಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಅಲ್ಲವೇ.
    ತುಂಬಾ ಚಂದದ ಅಂಕಣ ಮಾಲೆ

  3. ಬರಹ ಪ್ರಭಾವಿಯಾಗಿ ಮೂಡಿದೆ…. ಕಣ್ಣ ಮುಂದೆ ದೃಶ್ಯಗಳನ್ನು ಸುಂದರವಾಗಿ ಕಟ್ಟಿಕೊಟ್ಟಿರುವಿರಿ.

Leave a Reply

Back To Top