ಕವಿತೆ
ವಿಪರ್ಯಾಸ
ಸಂಗಮೇಶ್ವರ ಶಿ.ಕುಲಕರ್ಣಿ
ಜಗವ ಗೆಲ್ಲಲು ದಾಳಿಯಿಟ್ಟು
ನೆರೆಯ ರಾಜ್ಯದಲಿ ನೆತ್ತರದ ನದಿ
ಹರಿಸುವ ಚಕ್ರವರ್ತಿಯ
ಸಾಮ್ರಾಜ್ಯದ ನಡುನಾಡ ಜನರು
ಹಸಿವಿನಿಂದ ಸಾಯುವರು!
ನೆಲಕೇ ಗೊತ್ತಾಗದಂತೆ ನೇಗಿಲ
ಸರಿಸಿ, ಮ್ಯಾರಿ ಹಿಗ್ಗಿಸಿ
ಮತ್ತೊಬ್ಬನ ಹೊಲ ಆಕ್ರಮಿಸುವ
ರೈತನೊಬ್ಬನ ನಡುಹೊಲವೆ
ಬೀಳುಬಿದ್ದು ಬೋಳಾಗುವುದು!
ಕಚ್ಚೆ ಬಿಚ್ಚಿದ ಹುಂಬನಂತೆ
ಕಂಡ ಹೆಣ್ಣುಗಳ ಕಾಮಿಸುವ
ಚಪಲ ಗಂಡಸಿನ ಮನೆಗೆ
ಅವನಿಗೇ ತಿಳಿಯದೆ ಅದೆಷ್ಟೋ
ಗಂಡಸರು ರಾತ್ರಿ ದಾಳಿಯಿಡುವರು!
ತೂಕದಲ್ಲಿ, ಲೆಕ್ಕದಲ್ಲಿ ಮತ್ಯಾವುದೊ
ಮೋಸದ ಹಾದಿಯಲ್ಲಿ ಕೋಟಿ ಗಳಿಸಿ
ಮಹಲು ಕಟ್ಟಿ ಮೆರೆದ ಶೇಟು
ಬೀಪಿ, ಶುಗರಿಗೆ ಬಂಧುವಾಗಿ, ಇದ್ದೊಬ್ಬ
ಇಪ್ಪತ್ತೊಂದರ ಮಗನ ಸಾವು ನೋಡುವನು!
ನಿನ್ನದಲ್ಲದ ದೇಹದ ದಾಹಕೆ
ಮನ ಬಯಸುವ ಮೋಹಕೆ ಸೋತು
ಮಾನವ ನೀನು ರಕ್ಕಸನಾಗಬೇಡವೆಂದು
ಬೋಧಿಸಿದ ಸನ್ಯಾಸಿ ಇಪ್ಪತ್ತು ಲಕ್ಷದ ಕಾರು
ಕೊಂಡು, ಸುಂದರ ಶಿಷ್ಯೆಯ ಕುಳ್ಳಿರಿಸುವನು!
ನುಡಿವ ಮಾತೊಂದು
ನಡೆವ ಹಾದಿ ಮತ್ತೊಂದು,
ತಾನೇ ಹೆಣೆದ
ಮರಾಮೋಸದ ಮಾಯಾಜಾಲದಲಿ
ಬಿದ್ದವರು ಯಾರೋ…
ಗೆದ್ದವರು ಯಾರೋ…
ತಮ್ಮ ಬೆನ್ನು ತಾವು
ಕಾಣದವರ ಹುಣ್ಣು
****
ತುಂಬಾ ಮಾರ್ಮಿಕವಾದ ಕವನ
ತುಂಬಾ ಮಾರ್ಮಿಕವಾದ ಕವನ