ಅಂಕಣ ಬರಹ

ಸಾಮಾಜಿಕ ಜವಾಬ್ದಾರಿ..

497,024 Crime Stock Photos, Images | Download Crime Pictures on  Depositphotos®

           ಮನುಷ್ಯ ಸಮಾಜ ಜೀವಿ. ಒಂಟಿಯಾಗಿರಲು ಸಾಧ್ಯವೇ ಇಲ್ಲ. ತಾನೇ ಕಟ್ಟಿಕೊಂಡ ಸಮಾಜದಲ್ಲಿ ತಾನೇ ರೂಪಿಸಿದ ನೀತಿ ನಿಯಮಗಳ ಮಧ್ಯೆ ತಾನೂ ಬದುಕಿ ಇತರರೂ ಬದುಕಲು ಸಹಕರಿಸುತ್ತಾ ಅದಾಗದಿದ್ದರೆ ಕನಿಷ್ಠ ತನ್ನಿಂದ ಪರರಿಗೆ ತೊಂದರೆಯಾಗದಂತೆಯಾದರೂ ಬದುಕುವ ಮನೋಸ್ಥಿತಿ ಇರುವಂತಹವನು.

     ದಿನ, ವರ್ಷ ,ದಶಕ, ಶತಕಗಳು ಕಳೆಕಳೆದಂತೆ ಇದುವರೆಗೂ ರೂಪಿಸಿದ್ದ ಪಾಲಿಸಿದ್ದ ನೀತಿ ನಿಯಮಗಳ ಪ್ರಶ್ನಿಸುವ , ಧಿಕ್ಕರಿಸಿ ಮುನ್ನುಗ್ಗುವ ಮನೋಭಾವ ಹೆಚ್ಚು ಹೆಚ್ಚಾಗಿ ಕಾಣಿಸುತ್ತಿದೆ. ನಿಜ ಇದು ಆಗಬೇಕಾದ್ದೇ ಹೌದು. ಯಾವುದೋ ಕಾಲಮಾನದಲ್ಲಿ ಯಾವುದೋ ಸನ್ನಿವೇಶದಲ್ಲಿ ರೂಪಿಸಲ್ಪಟ್ಟ ಕಟ್ಟುಪಾಡುಗಳು ಇಂದಿನ ಕಾಲಮಾನಕ್ಕೆ ಹೊಂದುವುದಿಲ್ಲ ಎಂದರೆ ಅದನ್ನು ಬದಲಿಸಲೇಬೇಕಿರುತ್ತದೆ. ಅರ್ಥವಿಲ್ಲದ ಸಂಪ್ರದಾಯಗಳನ್ನ ಕಟ್ಟುಪಾಡುಗಳನ್ನು ನಾವಿಂದು ಮುರಿದು ಮುನ್ನುಗ್ಗಲೇಬೇಕು.ಆದರೆ ಆ ರಭಸದಲ್ಲಿ ಸರಿ ತಪ್ಪುಗಳ , ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಗಳ ನಡುವಿನ ಅಂತರವನ್ನೂ  ಮರೆಯಬಾರದು .

        ಸರಿ-ತಪ್ಪು ಎನ್ನುವುದು ಯಾವುದೂ ಇಲ್ಲ, ನೈತಿಕ-ಅನೈತಿಕ ಎನ್ನುವುದೂ ಯಾವುದೂ ಇಲ್ಲ ಅದೆಲ್ಲ ಅವರವರ ಮನಸ್ಥಿತಿ ಎನ್ನುವ  ಇಂದಿನ ಮನೋಭಾವದ ಬೆಳವಣಿಗೆ  ಗಾಬರಿ ಹುಟ್ಟಿಸುತ್ತದೆ. ಅಪ್ರಬುದ್ಧ ಮನಸ್ಸುಗಳು ಮಾತ್ರಾ ಹೀಗೆ ಯೋಚಿಸಬಲ್ಲವು.ಸರಿ-ತಪ್ಪುಗಳ ವಿವೇಚನೆಯಿಲ್ಲದ ಮನುಷ್ಯನ ಬದುಕಿಗೂ ಮೂಕ ಪ್ರಾಣಿಗಳ ಬದುಕಿಗೂ ಏನೂ ವ್ಯತ್ಯಾಸ ಕಾಣದು.

       ಈ ಹಿಂದೆಲ್ಲ ಶಾಲೆಗಳಲ್ಲಿ ನೀತಿ ಶಿಕ್ಷಣಕ್ಕೆ ವಾರದಲ್ಲೊಂದು ಅವಧಿ ಮೀಸಲಾಗಿತ್ತು.ಹಾಗಾದರೆ ಕೇವಲ ನಲವತ್ತು ನಲವತ್ತೈದು ನಿಮಿಷಗಳಲ್ಲಿ ನೀತಿ ಶಿಕ್ಷಣ ನೀಡಲು ಸಾಧ್ಯವಿದೆಯೆ ಎಂದರೆ ಖಂಡಿತಾ ಇಲ್ಲ..ಆದರೂ ಮಕ್ಕಳಲ್ಲಿ ಗಮನಿಸಿದ ಅಪೇಕ್ಷಣೀಯವಲ್ಲದ ನಡೆ ನುಡಿಗಳ ತಿದ್ದಲು ಒಂದಷ್ಟು ನೀತಿಕಥೆಗಳನ್ನೋ , ಉದಾಹರಣೆಗಳನ್ನೋ ಮನಮುಟ್ಟುವಂತೆ ಹೇಳುತ್ತಿದ್ದಾಗ ಕೆಲವರಿಗಾದರೂ ಅದರ ಗಾಢ ಪರಿಣಾಮ ಆಗುತ್ತಿದ್ದುದೂ ಸುಳ್ಳಲ್ಲ.

         ಈಗಂತೂ ಶಾಲೆಗಳಲ್ಲಿ ಬೋಧಿಸುವ ಪ್ರತೀ ವಿಷಯದ ಪ್ರತೀ ಘಟಕದಲ್ಲಿನ ನೀತಿಯನ್ನು ಮಕ್ಕಳಿಗೆ ಅರಿವಾಗುವಂತೆ ತಿಳಿಸಬೇಕೆನ್ನುವ ನಿರ್ಧಾರವೂ ಶಿಕ್ಷಕರದ್ದಾಗಿದೆ.

ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕ ಯುದ್ಧಗಳ ಬಗ್ಗೆ ಪುಸ್ತಕದ ಪಾಠ ಒಪ್ಪಿಸಿದರಾಗದು .ಯುದ್ಧದ ಪರಿಣಾಮ ಸಾಮಾನ್ಯ ಜನತೆಯ ಮೇಲಾಗುವದನ್ನ ಚಿತ್ರಿಸಬೇಕು.

ವಿಜ್ಞಾನ ಶಿಕ್ಷಕನೊಬ್ಬ ವೈಜ್ಞಾನಿಕ ಆವಿಷ್ಕಾರಗಳ ದುರುಪಯೋಗ , ಅದರಿಂದಾಗುತ್ತಿರುವ ಮಾನವತೆಯ ಮೇಲಿನ ದಾಳಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು.

ಮೌಲ್ಯವರ್ಧನೆ ಕೇವಲ ಭಾಷಾ ಶಿಕ್ಷಕರ ಕರ್ತವ್ಯವಲ್ಲ.

ಅಂಕದ ಬೆನ್ನು ಹತ್ತಿದ ವಿದ್ಯಾರ್ಥಿಗಳೂ , ಸಿಲಬಸ್ ಹಿಡಿದ ಶಿಕ್ಷಕರೂ ಈ ಬಗ್ಗೆ ವಿಚಾರ ಮಾಡಬೇಕಿದೆ.

ಅಂಕ ಗಳಿಕೆಯ ಯಂತ್ರಗಳನ್ನ ತಯಾರಿಸುವುದು ನಮ್ಮ ಕರ್ತವ್ಯ ಖಂಡಿತ ಅಲ್ಲ .

      ಆದರೆ ಇಂದು ಕಲಿಕೆ ಕೇವಲ ಶಾಲೆಗೆ ಸೀಮಿತವಾಗಿಲ್ಲ.ನೂರಾರು ಹೊಸ ದಾರಿಗಳಿವೆ ಕಲಿಕೆಗೆ. ಬದಲಾದ ಜಗತ್ತಿನ ತಂತ್ರಜ್ಞಾನ ,ವಿಜ್ಞಾನದ ಆವಿಷ್ಕಾರಗಳು ಮನುಷ್ನ ಸಾಮಾಜಿಕ ಜವಾಬ್ದಾರಿಯನ್ನು ಕಸಿಯಬಾರದು. ನೈತಿಕತೆಯ? ನೈತಿಕ  ಮೌಲ್ಯಗಳಾ ಹಾಗೆಂದರೇನು ಎಂದು ಪ್ರಶ್ನಿಸುವ ಮನಸ್ಥಿತಿಗಳಿಗೆ ಮಣೆ ಹಾಕಿದರೆ  ಮಾನವ ಜನಾಂಗ ಮತ್ತೆ ವಿಕಾಸವಾದದಲ್ಲಿ ಹಿಂದೆ ಸರಿಯುತ್ತದಷ್ಟೆ .

         ಈ ನೈತಿಕ ಮೌಲ್ಯಗಳನ್ನು  ಕೇವಲ ಶಾಲೆಯಲ್ಲೊ ಮನೆಯಲ್ಲೋ ಬೆಳೆಸುವುದಲ್ಲ. ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ವೃತ್ತಿಗೂ ಪ್ರತಿಯೊಂದು ಸಂಸ್ಥೆಗೂ ಈ ಜವಾಬ್ದಾರಿಯಿದೆ.

     ಬಹಳಷ್ಟು ಸಿನಿಮಾ ,ಧಾರವಾಹಿಗಳಲ್ಲಿ ಮನುಷ್ಯನ ಕ್ರೌರ್ಯ ವಿಜೃಂಭಿಸುತ್ತಿದೆ. ಮಚ್ಚು ,ಲಾಂಗುಗಳ ಬೀಸಿ ರಕ್ದ ಹೊಳೆ ಹರಿಸುವುದು , ವಿಷವುಣಿಸುವುದು, ಜೀವ ತೆಗೆವ ಕುತಂತ್ರಗಳ ಹೆಣೆಯುವುದು…

     ಒಬ್ಬರನೊಬ್ಬರು ಕೊಲ್ಲುವುದೆಂದರೆ ನೀರು ಕುಡಿದಷ್ಟು ಸುಲಭ ಎನ್ನುವಂತೆ ಬಿಂಬಿಸಲಾಗುತ್ತಿದೆ. ಸಣ್ಣ ಪುಟ್ಟ ಕಾರಣಗಳೇ ಸಾಕು ಈ ಸಿನಿಮಾ ,ಧಾರವಾಹಿಗಳಲ್ಲಿ ಇನ್ನೊಬ್ಬರ “ಮುಗಿಸಿಬಿಡಲು”

ಯುದ್ಧ ,ಭಯೋತ್ಪಾದನೆ, ಹಿಂಸೆ ,ಅತ್ಯಾಚಾರಗಳನ್ನ ಏನೂ ಮಹತ್ವದ್ದಲ್ಲವೇ ಅಲ್ಲ ಎನ್ನುವಂತೆ ಹೀಗೆ ಬಿಂಬಿಸುತ್ತಿರುವುದರಿಂದಲೇ ಯುವ ಜನತೆ ಹಾದಿ ತಪ್ಪುತ್ತಿದೆ. ಹೀಗೆ ಹಸಿ ಕ್ರೌರ್ಯ ಪ್ರದರ್ಶಿಸಿದಂತೆ ನಂತರದ ಪರಿಣಾಮಗಳನ್ನ ಯಾಕೆ  ಇವು ಮನದಟ್ಟು ಮಾಡಿಸುತ್ತಿಲ್ಲ?

ಚಿಕ್ಕ ವಯೋಮಾನದಲ್ಲಿ ಕ್ರೌರ್ಯದ ಪರಿಣಾಮಗಳನ್ನ ಅರಿತರೆ ಬಹಳಷ್ಟು ಅಪರಾಧಗಳು, ಸಾವು ,ನೋವುಗಳು ಕಡಿಮೆಯಾಗವೆ? ಪತ್ರಿಕೆಗಳ ತೆರೆದರೂ ಒಳಿತಿಗಿಂತ ಕೆಡುಕಿನ ಸುದ್ದಿಗಳೇ ಹೆಚ್ಚಾಗುತ್ತಿವೆ. ಟಿವಿ ಮಾಧ್ಯಮಗಳಲ್ಲೂ ಅಪರಾಧ ,ಕ್ರೌರ್ಯದ ಕೃತ್ಯಗಳು…

ದಿನವೂ ಇದನ್ನೇ ನೋಡುವ ಕೇಳುವ ಪ್ರಬುದ್ಧತೆಯಿಲ್ಲದ ದುರ್ಬಲ ಮನಸುಗಳ ಮೇಲೆ ಇವುಗಳು ಬೀರುವ ಪರಿಣಾಮ ನಿಜಕ್ಕೂ ಘೋರ!

             ಸ್ವಾರ್ಥ ,ಲಾಲಸೆ, ದುರಾಸೆ ,ಸೇಡು ,ಸ್ವೇಚ್ಛಾಪ್ರವೃತ್ತಿಗಳೂ ಸಹ ನೈತಿಕ ಮೌಲ್ಯಗಳ ಅಧಃಪತನಕ್ಕೆ ಕಾರಣವಾಗುತ್ತಿವೆ.

      ಜನ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತ ಪರಿಣಾಮವಿದು. ನೈತಿಕ ಮೌಲ್ಯಗಳ ಬೆಳವಣಿಗಾಗಿ ಇಂದು ಅತ್ಯವಶ್ಯಕವಾಗಿ ಬೇಕಿರುವುದು ಭಾಷಣಗಳಲ್ಲ..ಬರಹಗಳಲ್ಲ.ಮೌಲ್ಯ ರೂಢಿಸಿಕೊಂಡ ಬದುಕು!!  ನುಡಿದು ತೋರುವುದಕಿಂತ ನಡೆದು ತೋರಬೇಕಾದ್ದು ಇಂದಿನ ಅಗತ್ಯತೆ.

        ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಅಣ್ವಸ್ತ್ರ ಪ್ರಯೋಗಿಸುವುದು ಹೇಗೆ ತಪ್ಪೋ ಒಂದು ಧರ್ಮ ಅಥವಾ ಒಂದು ಜಾತಿ ಮತ್ತೊಂದು ಧರ್ಮ ಅಥವಾ ಜಾತಿಯ ಮೇಲೆ ಪ್ರಭುತ್ವ ಸ್ಥಾಪಿಸಲು ಹೊರಡುವುದೂ ಸಹಾ ತಪ್ಪೇ..ಒಬ್ಬ ಮನುಷ್ಯ ಇನ್ನೊಬ್ಬ ಸಹಜೀವಿಯ ಬದುಕನ್ನ ಹಾಳುಗೆಡವುವುದೂ ತಪ್ಪೇ.. ಎಂದು ಮನುಷ್ಯ ವಿಕಾಸದ ಹಾದಿಯಲ್ಲಿ  ಇತರ ಪ್ರಾಣಿಗಳಿಗಿಂತಲೂ ಭಿನ್ನವಾದ ಹಾದಿಯಲ್ಲಿ ನಡೆದನೋ ಅಂದಿನಿಂದಲೂ ಸರಿ- ತಪ್ಪುಗಳ ಯುದ್ಧ ನಡೆದಿದೆ.ಈ ಯುದ್ಧಗಳಲ್ಲಿ ಯಾರು ಯಾವುದರ ಪಕ್ಷ ಹಿಡಿಯುತ್ತಾರೆನ್ನುವುದು ಮುಖ್ಯ. ಎಲ್ಲರೂ ಅವರವರ ಮೂಗಿನ ನೇರದಲ್ಲಿಯೇ ಆಲೋಚಿಸಿದರೆ ಅವರವರ ದೃಷ್ಟಿಗಳಲ್ಲಿ ಅವರೇ ಸರಿ!! ಆದರೆ ತನ್ನಿಂದ ತಾನು ದೂರ ನಿಂತು ಯೋಚಿಸಿದರಷ್ಟೆ ಬೆಳಕು ಕಾಣುವುದು. ಹಾಗಾಗಿಯೇ ವೈಯುಕ್ತಿಕ ಮೌಲ್ಯಗಳೆಷ್ಟು ಮುಖ್ಯವೋ ಸಾಮಾಜಿಕ  ಮೌಲ್ಯಗಳೂ ಅಷ್ಟೇ ಮುಖ್ಯ ..ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ  ಮೌಲ್ಯಗಳೂ ಮಹತ್ವದ್ದಾಗುತ್ತವೆ.

  ಮೌಲ್ಯಗಳ ಕಡೆಗಾಣಿಸುವ ಮನಸಿಗೆ ಸರಿ- ತಪ್ಪುಗಳ ವಿವೇಚನೆ ಇರುವುದಿಲ್ಲ.ಸರಿ — ತಪ್ಪುಗಳ ವಿವೇಚನೆಯಿಲ್ಲದ ಬದುಕು ತಾನೂ ಬೆಳಗದು ಇತರರ ಬದುಕನ್ನೂ ಬೆಳಗಿಸದು.

ಮನುಷ್ಯರಾಗೋಣ

ಮನುಷ್ಯರನ್ನ ರೂಪಿಸೋಣ .

************

ದೇವಯಾನಿ

          

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

    

       

      

         .

.

.

.

     

         .

    

    

            

     

**************

ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

One thought on “

  1. ಶಾಲಾ ಶಿಕ್ಷಣ ಮಾತ್ರ ಬದಲಾಗಿಲ್ಲ.ಮನೆಯಲ್ಲಿ ನೀಡುತ್ತಿದ್ದ ಸಂಸ್ಕಾರದಂತಹ ಶಿಕ್ಷಣವೇ ಬದಲಾಗಿದೆ. ನೈತಿಕತೆಯ ತಿಳುವಳಿಕೆಯ ಆರಂಭ ಮನೆಯಲ್ಲೇ ಆಗುತ್ತಿದ್ದಾಗ ಶಾಲೆಯಲ್ಲಿ ಅದನ್ನು ಬೆಳೆಸುವ ರೀತಿಯಲ್ಲಿ ನೈತಿಕ ಶಿಕ್ಷಣವೆಂಬ ಅಧಿಕೃತ ಪಠ್ಯ ಕ್ರಮ ಇರುತ್ತಿತ್ತು. ಧಾರ್ಮಿಕ, ಪೌರಾಣಿಕ ಕಥೆಗಳು ಬಾಲ್ಯದ ಮನಸ್ಸಿಗೆ ಮುದ ಹಾಗೂ ಬುದ್ಧಿಯನ್ನು ಒದಗಿಸುತ್ತಿದ್ದವು.
    ಈಚೆಗೆ ಭಾಷೆ ಕೂಡ ಅನಗತ್ಯ ಎಂಬ ರೀತಿಯಲ್ಲಿ ಶಿಕ್ಷಣ ನಡೆಯುತ್ತಿದೆ.ಬೇಕಾದಷ್ಟು ಮಾತ್ರ ಕಲಿತರೆ ಸಾಕು ಎಂದು ಪಾಲಕರು,ಶಿಕ್ಷಕರು ಮತ್ತು ಮಕ್ಕಳು ನಂಬುವಂತಹ ವಾತಾವರಣವಿದೆ….
    ಒಂದೇ ಪರಿಹಾರವೆಂದರೆ ಮಕ್ಕಳ ಆರ್ಥಿಕ ಭವಿಷ್ಯದ ಬಗ್ಗೆ ಪಾಲಕರು ಯೋಚಿಸುವುದರ ಜೊತೆಗೆ ಅವರ ನೈತಿಕ ಶಿಕ್ಷಣದ ಬಗ್ಗೆ ಕೂಡ ಆಲೋಚಿಸಬೇಕು.

Leave a Reply

Back To Top