ಮಹಾಪಯಣಿಗ

ಕವಿತೆ

ಮಹಾಪಯಣಿಗ

ಡಾ. ಗುರುಸಿದ್ಧಯ್ಯಾ ಸ್ವಾಮಿ

Buddha, Statue, Pond, Sculpture

ಚೀನಾದ ಮೆನ್-ಪಾಪ್-ಕು ಹಳ್ಳಿಯ ಕುವರ
ಯುವನಾಗೆ ಬೌದ್ಧನಾದ ಯುವಾನ್ ಚಾಂಗ್
ಭಾರತದ ಬುದ್ಧ ನಿಧಿ ಕೈ ಮಾಡಿ ಕರೆಯಲು
ಬುದ್ಧ ನಾಡಿನತ್ತ ಅಡಿ ಇಟ್ಟ ಮಹಾಪಯಣಿಗ

ಊಹಿಸಲಾಗಿದ ಕಷ್ಟಗಳ ಬೆನ್ನೇರಿ ಹೊರಟ
ಕುದುರೆ ಒಂಟೆ ಹೇಸರಗತ್ತೆಗಳನೇರಿ ನಡೆದ
ಕಾಲ್ನಡಿಗೆಯಲ್ಲೂ ದಾಟಿ ಮುನ್ನಡೆದ ಧೀರ

ಮರುಭೂಮಿ ಹಿಮ ಪರ್ವತ ಗಿರಿಕಂದರಗಳ

ಹರ್ಷ ತುಂಬಿತವನಿಗೆ ಹರ್ಷವರ್ಧನನ ಭೆಟ್ಟಿ
ಸಂದರ್ಶಿಸಿದ ಹತ್ತು ಹಲವು ಬೌದ್ಧ ಪೀಠಗಳ
ಓದಲು ಕಲಿತ ಸಂಸ್ಕೃತ ಪಾಲಿ ಭಾಷೆಗಳ
ಸಂಗ್ರಹಿಸಿದ ಅನುವಾದಿಸಿದ ಹಸ್ತಪ್ರತಿಗಳ

ಕಪಿಲವಸ್ತು ಪಾಟಲಿಪುತ್ರ ನಾಲಂದಾಗಳಿಗೆ
ಭೆಟ್ಟಿ ಇತ್ತ ನಾಗಾರ್ಜುನ ಕೊಂಡಾದಿಗಳಿಗೆ
ಕಾಂಚಿ ಪುನ್ನಾಟ ಬನವಾಸಿ ನಾಸಿಕಗಳ ಸುತ್ತಿದ
ಮಹಾಬೌದ್ಧ ಸಮ್ಮೇಳನದಿ ಮನ್ನಣೆ ಪಡೆದ

ತೆಂಕಣ ಪಡುವಣ ಭರತ ಭೂಮಿಯ ಸುತ್ತಿ
ಕನ್ನಡಿ ಹಿಡಿದ ಕನ್ನಡಿಗರ ಸತ್ಯಸಂಧ ಸನ್ನಡೆತೆಗೆ
ಗೌರವಿಸಿದರು ಅಸ್ಸಾಂ ಕಾಶ್ಮೀರಾದಿ ಅರಸರು
ತುಂಬ ಕ್ಲೇಶದಿಂದ ಬೀಳ್ಕೊಟ್ಟ ಹರ್ಷವರ್ಧನ

ಮರಳಿದ ಬುದ್ಧನಾಡ ಮಹಾಪಯಣಿಗನಿಗೆ
ಅದ್ದೂರಿ ಸ್ವಾಗತ ದೊರಕಿತು ಚಕ್ರವರ್ತಿಯಿಂದ
ಅನುವಾದ ಮುಂದುವರಿಸಿದ ಚೈತ್ಯ ಕಟ್ಟಿಸಿದ
ರಾಜಕುವರ ಮಂತ್ರಿಗಳೂ ಆತುರ ಪ್ರವಚನಕೆ

ಅರಮನೆ ದೊರೆಯಿತು ಪ್ರವಾಸ ಕಥೆ ಅರಳಿತು
ಎಪ್ಪತ್ತೈದನೆಯ ಹೊತ್ತಿಗೆ ಹೊಸ್ತಿಲೊಳಗಿತ್ತು
ಹಲವು ಕಗ್ಗಂಟುಗಳನು ನಿಘಂಟು ಬಿಡಿಸಿತ್ತು
ದಣಿದ ದೇಹ ಮಹಾಪರಿನಿರ್ವಾಣ ಬೇಡಿತ್ತು

ಬೌದ್ಧ ಭಿಕ್ಕುಗಳಿಗೆ ಬುದ್ಧನಾಡ ಸುತ್ತಿ ಎಂದ
ಹೊಸ ಬೌದ್ಧ ತತ್ವ ಶಾಸ್ತ್ರ ಹೊಸೆದು ನಿಂದ
ನಿರ್ವಾಣಗೈದ ಚೀನಾದ ನವ ಗೋಪುರವಾದ
ಬುದ್ಧನಾಡು ತಾಯ್ನಾಡಿಗೆ ರಸಸೇತುವೆಯಾದ

************

Leave a Reply

Back To Top