ನಿರುತ್ತರ : ಒಂದು ಅವಲೋಕನ

ಪುಸ್ತಕ ಸಂಗಾತಿ

ನಿರುತ್ತರದಲ್ಲಿ ಬದುಕಿನ

ಉತ್ತರಗಳ ಹುಡುಕಿ ಹೊರಟ

ಕವಯಿತ್ರಿ

`ನಿರುತ್ತರ’ ಸಂಗೀತ ರವಿರಾಜ್  ಅವರ ಮೂರನೇ ಕವನ ಸಂಕಲನ. ಕಾವ್ಯ ಕ್ಷೇತ್ರ ಸಂಗೀತ ಅವರಿಗೆ ಹೊಸದೇನಲ್ಲ. ಅವರು ಪದವಿ ಕಲಿಯುವಾಗಲೇ ಉಡುಗೊರೆ ಎಂಬ ಸಂಕಲನ ಪ್ರಕಟಿಸಿದವರು. ನಂತರ ನನ್ನೊಡಲ ಮಿಹಿರ ಅವರ ಎರಡನೇ ಸಂಕಲನ. ೨೦೨೦ರಲ್ಲಿ ನಿರುತ್ತರ ಪ್ರಕಟಿಸಿದ್ದಾರೆ. ಸಹಜವಾಗಿ ಕವಯಿತ್ರಿಯ ಬದುಕಿನ ಅನುಭವ, ಅನುಭಾವ, ಕಾಣ್ಕೆ ಮತ್ತು ಕಾವ್ಯದ ಕುರಿತ ಒಳನೋಟ ಹಿಗ್ಗಿದೆ.

ಸಮಾಜದ ಪ್ರತಿಬಿಂಬವನ್ನು ಕವಿ ತನ್ನ ಕಾವ್ಯದಲ್ಲಿ ಕನ್ನಡಿ ಹಿಡಿದು ತೋರಿಸುವ ಕೆಲಸ ಮಾಡುತ್ತಾನೆ. ಕಾವ್ಯ ಎಂಬ ಸೂಕ್ಷ್ಮ ಪ್ರಕ್ರಿಯೆ ಅರಳುವುದು ಅಂತಃಕರಣವನ್ನು ಸುತ್ತಮುತ್ತಲಿನ ಜಗತ್ತಗೆ ತೆರೆದಿಟ್ಟಾಗ, ಕನ್ನಡ ಕಾವ್ಯ ಜಗತ್ತಿನಲ್ಲಿ ಹೂ ಅರಳುವ ಪ್ರಕ್ರಿಯೆಯಂತೆ ಕಾವ್ಯವನ್ನು ಕಟ್ಟುವವರ ನಡುವೆ, ಸಮಾಜದ ಆಗು ಹೋಗುಗಳಿಗೆ ಕಣ್ಣಾಗಿ, ಕಿವಿಯಾಗಿ ಗ್ರಹಿಸಿ ಕವಿತೆ ರಚಿಸುವವರ ಸಾಲಿನಲ್ಲಿ ಸಂಗೀತ ಸಹ ಒಬ್ಬರು. ಪುಟ್ಟ ಹಳ್ಳಿಯಲ್ಲಿ ಕುಳಿತೇ,  ಜಗತ್ತನ್ನು ಮಹಿಳೆ ಗ್ರಹಿಸುವ ಪರಿ ಅಚ್ಚರಿಯದ್ದು.

ಸಂಗೀತ ಅವರ ನಿರುತ್ತರ ಸಂಕಲನದ ಕವಿತೆಗಳಲ್ಲಿ ಅಂತ ಸೂಕ್ಷ್ಮ ಗ್ರಹಿಕೆಯನ್ನು ಕಾಣಬಹುದು. ನಿರುತ್ತರ ಎಂಬ ಕವಿತೆಯೇ ಅವರ ಕಾವ್ಯದ ಎತ್ತರವನ್ನು ಓದುಗನ ಮುಂದಿಡುತ್ತದೆ. ಹುಡುಕಾಟ ನಿರಂತರ, ಬದುಕು ನಿರುತ್ತರ ಎಂಬ ತಾತ್ವಿಕತೆಗೆ ಕವಯಿತ್ರಿ ಬರುತ್ತಾಳೆ. ಅಡುಗೆ ಮನೆ ಎಂಬುದು ಮಹಿಳೆಯರ ಅರಿವು ವಿಸ್ತರಿಸುವ, ಆಲೋಚನಾ ಕ್ರಮವನ್ನು ಎತ್ತರಿಸುವ ಧ್ಯಾನಸ್ಥ ಸ್ಥಳ. ಅದೇ ಹಳೆಯ ಒಲೆಗೆ, ಹೊಸ ಉರಿಯ ಹಾಕಿ ಪ್ರತಿದಿನ ನಾವೀನ್ಯದ ಬೆಳಕು, ತೆರಿದಿದೆ ಬೆಳಕಿನ ಬದುಕು. ಮತ್ತದೇ ಹಳೆಯ ಕಾವಲಿಗೆ ಹೊಸ ರೊಟ್ಟಿಯ ಹುಯ್ದು ನಿತ್ಯ ನಿರತ ಚಕ್ರ ಬಂಧನ ಬದುಕು ತುಂಬುತ್ತಿದೆ ಗೇಯ್ದು….ಹೀಗೆ ಅಡುಗೆ ಮನೆಯ ಕ್ರಿಯೆಯಲ್ಲಿ ಮನಸಿನ ವಿಕಾಸದ ಬದುಕಿನ ತತ್ವ, ಬದುಕಿನ ಸತ್ಯ ಹಾಗೂ ಹೊಸತನ ಕಾಣುವ ಕವಯಿತ್ರಿ…ಹೆಣ್ಣಿನ ಲೋಕವನ್ನು ತೆರೆದಿಡುತ್ತಾ ಹೋಗುತ್ತಾರೆ.

ಹಳೆಯ ಗಿಡದಲ್ಲರಳುವ ಹೂವಿನಂದದಿ

ಹೊಸ ಹೊಂದಾಣಿಕೆಯೆ ಜೀವನ”

ಇದು ಕವಯಿತ್ರಿ ನೀಡುವ ಕಾವ್ಯ ಸಂದೇಶ. ಸುತ್ತಣ ಸಮಾಜದ ಕಹಿಯನ್ನು, ಮಹಿಳೆಯರ ಕಷ್ಟಗಳನ್ನು, ಒಳ ಬೇಗುದಿಯನ್ನು ಅಂತಃಕರಣದಿಂದ ಗ್ರಹಿಸಿದಾಗ ಕಾವ್ಯಕ್ಕೆ ಹೊಸ ಕಾಣ್ಕೆ ಸಾಧ್ಯವಾಗುತ್ತದೆ, ಬದುಕಿನ ಕನಸು ಮತ್ತು ಕಾವ್ಯವನ್ನು ಬೆಸೆಯುವ ಹೆಣ್ಣು ಜೀವಗಳು ಭೂಮಿಯಂತೆಯೇ ಸೃಜನಶೀಲ ಹಾಗೂ ಸಹನಶೀಲ. ಕನ್ನಡದಲ್ಲಿ ಬರೆಯುವ ಮಹಿಳೆಯರ ಕಾವ್ಯದ ಜೀವತಂತು ಏನು? ಅವರು ಬದುಕನ್ನು ಸಹ್ಯ ಗೊಳಿಸಿಕೊಳ್ಳುವ ಬಗೆ ಹೇಗೆ ? ಇದಕ್ಕೆ ನಿರುತ್ತರದಲ್ಲಿ ಉತ್ತರಗಳು ಸಿಗುತ್ತವೆ.

ಸಾವನ್ನು ಬದುಕಿನ ಆರಂಭ ಎನ್ನುತ್ತಾರೆ ಸಂಗೀತ. ಬುದ್ಧನ ಸಾವಿನಲ್ಲಿ ಅವರು ಬದುಕಿನ ಪಾಠ ಗ್ರಹಿಸುತ್ತಾರೆ. ಬುದ್ಧನ ಕೊನೆಯ ಊಟ ಎಂಬ ಕವಿತೆಯಲ್ಲಿ ವಿಷ ಉಣಿಸಿದವನಿಗೂ ಕಾರುಣ್ಯವನ್ನೇ ನೀಡುವ ಬುದ್ಧನನ್ನು ಅವರು ತಮ್ಮೊಳಗೆ ಆಹವಾನಿಸಿಕೊಳ್ಳುತ್ತಾರೆ. ಬುದ್ಧ ಬದುಕಿನ  ಗೇಯತೆಯ ಓಘ ಮೀರದೆ ಸಾಗಿದ, ಹಂತ ಹಂತವ ದಾಟಿದ ಸಾವಕಾಶದ ನಿಲುಗಡೆ ಎನ್ನುವ ತಾತ್ವಿಕತೆ ಹೆಣ್ಣಿನದಾಗಬೇಕು ಎಂಬುದು ಸಂಗೀತಾ ಅವರ ಬದುಕಿನ ನೋಟ. ತಾಯಿ ಹಾಲೂಡಿ ಹೊಟ್ಟೆ ತುಂಬಿಸಿದ್ದಾಳೆ. ನೀ ನಿಷ್ಕಲ್ಮಶದ ಮನದಿ ಆತಿಥ್ಯ ನೀಡಿರುವೆ, ವಿಷ ನೀಡಿದರೂ ತಪ್ಪಲ್ಲ. ಕಾರಣ ತಿಳಿಯದೇ ಮಾಡಿದ ತಪ್ಪಲ್ಲ. ತಾಯ ಭಾವ ನಿನ್ನದು, ಎನ್ನುತ್ತಾ ತಪ್ಪು ಮನ್ನಿಸುವ ಬುದ್ಧನ ಕರುಣೆ, ಅಂತಃಕರಣ ಹೆಣ್ಣಿನದು ಎಂಬ ಧ್ವನಿಯನ್ನು ಸಮಾಜಕ್ಕೆ ನೀಡುತ್ತಾಳೆ ಕವಯಿತ್ರಿ.

ಉರಿಯುವ ಬದಲು ಬೆಳಗಬೇಕು, ಬದುಕೆಂದ ಮೇಲೆ ಕವಿತೆಗಳು ಜೀವನ ತತ್ವವನ್ನು ಹೇಳುವವೇ ಆಗಿವೆ. “ಎಲ್ಲವೂ ಸಹವಾಗಿದ್ದರೆ ಬದುಕು/ ಏನು ಚೆಂದ ನೀವೇ ಹೇಳಿ?/ ಬದುಕೆಂದ ಮೇಲೆ…/

ಬಾಳ ಹಾದಿಯುದ್ದಕ್ಕು ಘಟಿಸುವಂತದ್ದು…./ನಡೆದೇ ತೀರುವಲ್ಲಿ ಸಂಶಯವಿಲ್ಲದ್ದು/ ಹಾದಿಯ ತುಂಬಾ ಸಿಗುವ ನಿಲ್ದಾಣಗಳ/ ಏರಿಳಿದು ಸಾಗುವ ಪಯಣವೆ ದಿಟದ ನಾಳೆಗಳದ್ದು/ ಎನ್ನುತ್ತಾರೆ.

ಅವಳ ಕನಸುಗಳ ಮಳೆಯಾಗಿ ಎಂಬ ಕವಿತೆಯಲ್ಲಿ `ಹೆಣ್ಮನದ ಆಶಾವಾದ ಚೂರಾಗದಿರಲಿ…./ ಹನಿಗಳು ಇಡಿಯಾಗಿ ಬೊಗಸೆ ತುಂಬಲಿ…/ ಎಂಬ ಆಶಯ ಕವಯಿತ್ರಿಯದು.

ಶಹರದ ಗರ್ಭದೊಳಗೆ…ಎಂಬ ಕವಿತೆಯಲ್ಲಿ `ದಮ್ಮು ಕಟ್ಟುತ್ತ ಕೆಮ್ಮುವ ಅಪ್ಪನ /ದವಖಾನೆಗೆ ಸೇರಿಸುವ ಆತುರ ಮಗಳಿಗಾದರೆ/ ಚಿಂದಿ ಆಯ್ದ ಹುಡುಗ ಹೊರಲಾರದೆ ಹೊತ್ತು/ ದಾಪುಗಾಲಲ್ಲಿ ಬರುವುದರ ಕಾಯುವ ಅಮ್ಮ / ಭಿಕ್ಷೆ ಬೇಡುವ ಅಜ್ಜಿಯ ಇಂಗಿದ ಕಣ್ಣುಗಳ ಭಾವ ಅರಿಯದು ಈ ಊರು/ ರಸ್ತೆ ದಾಟಲು ಪರದಾಡುವ ಅಜ್ಜನ/ ಸಹಾಯಕೆ ಇಲ್ಲಿ ಯಾರು? / ಹೀಗೆ ಕವಿಯ ಕರುಣೆಯ ಕಣ್ಣು ಹೇಗೆ ಮಾನವೀಯತೆಗೆ ಮಿಡಿಯುತ್ತಿರುತ್ತದೆ ಎಂಬುದನ್ನು ಕವಿತೆ ಓದುಗನ, ಸಹೃದಯನ ಎದುರು ತೆರೆದಿಡುತ್ತಲೇ, ನಗರ ಎಂಬುದು ಕರುಣೆ ಕಳೆದು ಕೊಂಡು ನಿರ್ಭಾವುಕ ಜಗತ್ತು ಎಂಬುದನ್ನು ಸಹ ಹೇಳುತ್ತಾರೆ,

ನಗರದ ಜಗತ್ತು ಹೃದಯವೇ ಇಲ್ಲದಂತೆ ವರ್ತಿಸುವುದು ಹಾಗೂ ಹಳ್ಳಿಯ ಜಗತ್ತಿನಲ್ಲಿ ಮನೆ ಮನೆಯೂ ಸ್ವತಂತ್ರವಾಗಿ ಸ್ವಚ್ಛಂದತೆಯಿಂದ ಬದುಕುವ ಚಿತ್ರಗಳು ನಿರುತ್ತರದಲ್ಲಿವೆ. ನಿರುತ್ತರದ ಕಾವ್ಯ ಪಯಣದಲ್ಲಿ ತುಂಬಾ ತಾತ್ವಿಕವಾಗಿ ಬದುಕಿನ ಹುಟುಕಾಟವನ್ನು ಮಾಡುವ ಕವಿಯಿತ್ರಿ, ಕೆಲ ಕವಿಗತೆಗಳನ್ನು ತಮಾಷೆಯಾಗಿ ಬರೆಯುತ್ತಲೇ ಬದುಕಿನ ಸಂಕೀರ್ಣತೆ ಹಾಗೂ ವ್ಯಂಗ್ಯವನ್ನು ಕಟ್ಟಿಕೊಡುತ್ತಾರೆ. ಗಂಭೀರ ಪ್ರಶ್ನೆಗಳನ್ನು ಓದುಗರ ಮುಂದಿಡುತ್ತಾರೆ. ನೆಲ ಮುಗಿಲ ಸಂತೆ ಕವಿತೆ ಗಮನಿಸಬಹುದು. ಜೇಡದ ಬಲೆಯಿಂದ ಬದುಕ ನೇಯಬಲ್ಲರು. ನಾಚಿಕೆ ಮುಳ್ಳನ್ನು (ಮುಟ್ಟಿದ್ದರೆ ಮುದುಡಿಕೊಳ್ಳುವ ನೆಲಕ್ಕೆ ಹರಡಿಕೊಳ್ಳುವ, ಕೆಲ ನಿಮಿಷಗಳ ನಂತರ ಅರಳಿಕೊಳ್ಳುವ ಸಸ್ಯ) ಮಾತಾಡಿಸುವ ಸೌಜನ್ಯ ವಿನಯ ತೋರಿಸಬಲ್ಲರು. ಪಾರಿಜಾತದ ಜೊತೆ, ಮನೆಯ ಕಿಟಕಿಯ ಜೊತೆ ಮಾತಿಗೆ ಇಳಿಯಬಲ್ಲರು. ಸಾವು ಮತ್ತು ಪ್ರೀತಿಯ ಜೊತೆ ಸಂಭಾಷಣೆ ನಡೆಸಬಲ್ಲ ಕಲೆ ಸಂಗೀತ ಅವರಿಗೆ ಸಾಧ್ಯವಾಗಿದೆ. ಮಳೆ, ಬೆಳದಿಂಗಳು, ನದಿಯ ಗೀತೆ ಅವರ ಕಾವ್ಯದಲ್ಲಿ ಹಾಸಿಕೊಂಡಿದೆ. ಒಳ ಮನಸ್ಸಿನ ಸಂಘರ್ಷವನ್ನು ಸರಳ ಶಬ್ದಗಳಲ್ಲಿ ಕವಿತೆಗೆ ಬಗ್ಗಿಸಿಕೊಳ್ಳುವ ಹಾಗೂ ಒಗ್ಗಿಸಿಕೊಳ್ಳುವ ಜಾಣ್ಮೆ ಇಲ್ಲಿನ ಕವಿತೆಗಳಿಗೆ ದಕ್ಕಿದೆ. ತಣ್ಣನೆಯ ಬಂಡಾಯವೂ ಕಂಡು ಕಾಣದಂತೆ ಸಂಗೀತ ಅವರ ಕವಿತೆಗಳಲ್ಲಿ ಅಡಗಿದೆ. ಇದನ್ನು ಹಳ್ಳಿಯ ಹೆಣ್ಮಗಳ ಸಾತ್ವಿಕ ಸಿಟ್ಟು, ಕೋಪ ಎನ್ನಬಹುದು. ಕನ್ನಡಿ ಮತ್ತು ಕಾಲವನ್ನು ಕವಿತೆಯಲ್ಲಿ ಹೆಣ್ಣಿನ ಅಗಣಿತ ಪ್ರಯತ್ನ ಕಾಣಸಿಗುತ್ತದೆ.

`ತದೇಕ ಚಿತ್ತದಿ ಕನ್ನಡಿಯನ್ನೇ

ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ

ಕಂಡೊಂದು ನೆರಿಗೆಗೆ

….

ಕಾಯದ ಕಾಲಕ್ಕೆ

ಒಡಂಬಡಿಕೆ ಪತ್ರ ಬಿಂಬಿಸುವೆ…..

ಅರ್ಧ ತೆರೆದ ಬಾಗಿಲು ಸಂಧಿಯಲಿ

ಇಣುಕಿ ನಕ್ಕ ಬಾಲ್ಯ

ಈಗ ತಾಳೆ ಹಾಕಿ ಗುಣಿಸಿದರೂ,

ಗುನುಗಿದರೂ

ಉತ್ತರವಿಲ್ಲದ ಲೆಕ್ಕಾಚಾರಕ್ಕೆ*

ನನ್ನ ನೋಡಿ ನಗುತ್ತದೆ ಕಂದ

ಪ್ರತಿರೂಪ ನೋಡುವ ಹಪಾಹಪಿ

ಕಾಣದ ಕಾಲದ ಕನ್ನಡಿಯ ಚಪಲದಲ್ಲಿ

ತೇಪೆ ಹಾಕುವುದರೊಂದಿಗೆ

ಕಾಣುತ್ತಿದೆ ಮರುಹುಟ್ಟು,

ನೋಡಲಾಗದ ಬೆನ್ನ ಹಿಂದೆಗೆ

ಇನ್ನೊಂದು ಕನ್ನಡಿಯಿಟ್ಟು ನೋಡುತ್ತಿರುವೆ

ಮುಂದಿನ ತಿರುವಿಗೆ ಸೂಚನೆಯನ್ನೀಯಲು…..

ಸಂಗೀತ ಅವರ ಅದ್ಭುತ ಕವಿತೆ ಇದು, ನ್ಯೂಜಿಲ್ಯಾಂಡ್ ಕವಯಿತ್ರಿ ಲ್ಯಾಂಗ್ ಲೀವ್ ಬರೆಯುವ ಕವಿತೆಯ ಒಂದು ಮಾದರಿಯಂತಿರುವ ಈ ಕವಿತೆ, ತುಂಬಾ ಪ್ರಾಮಾಣಿಕ ಅಭಿವ್ಯಕ್ತಿ. ಕಾಲ, ಕನ್ನಡಿ, ಹೆಣ್ಣು, ವಯಸ್ಸು , ಕನಸು ಮತ್ತು ಎದುಗಿರುವ ಮುದ್ದು ಕಂದ ಹಾಗೂ ಮುಖದ ಕೆನ್ನೆಯೆ ನೆರಿಗೆ, ತಲೆಗೂದಲಿನ ನೆರೆ ಎಲ್ಲವನ್ನು ಚೆಂದದ ವಿಷಾದದಿ ಬೆಸೆಯುವ ಕವಿತೆ ಇದು, ಹಾಗೆ ಮುಂದಿನ ತಿರುವಿನ ಸೂಚನೆಯನ್ನು ಸಹ ಕಾಲದ ಕನ್ನಡಿ ನೀಡುತ್ತದೆ ಎಂಬ ಕವಿಯ ಧ್ವನಿ ಮಾತ್ರ ಸಹೃದಯ ಕಿವಿಗೆ ತಾಗುವಂತಹದ್ದು. ರಾತ್ರಿಯ ಸತ್ಯಗಳು ಎಂಬ ಕವಿತೆ  ಸಹ  ಕವಯಿತ್ರಿ ಲ್ಯಾಂಗ್ ಲೀವ್ ಬರೆಯುವ ಕವಿತೆಯಲ್ಲಿ ಅದ್ದಿ ತೆಗೆದಂತಿದೆ. 

ದೀಪಾವಳಿ, ಬಡವಿಯ ಸ್ವಗತ,ನಾಳೆಗಳ ಹೊಸ್ತಿಲಲಿ, ರಾತ್ರಿಯ ಸತ್ಯಗಳು, ಅಮೂರ್ತ, ರೂಪಾಂತರ, ಕಂಡರಿಯದ ಕಾಲ ಒಳ್ಳೆಯ ಧ್ವನಿಪೂರ್ಣ ಕವಿತೆಗಳು.

ಹೀಗೆ ನಿರುತ್ತರದಲ್ಲಿ ಬದುಕಿನ ಪ್ರಶ್ನೆಗಳಿಗೆ  ಹಲವು ಉತ್ತರಗಳಿವೆ. ಕೆಲ ಕವಿತೆಗಳು ತಾತ್ವಿಕವಾಗಿವೆ. ಗ್ರಾಮೀಣ ಮಹಿಳೆಯ ಬದುಕಿನ ಏರಿಳಿತಗಳ ತೂಗಿಸಿಕೊಂಡು ಹೋಗುವ ಒಳನೋಟ ಸಂಗೀತ ಅವರ ಕವಿತೆಗಳಲ್ಲಿ ಕಾಣಸಿಗುತ್ತದೆ.

*******************************

ನಾಗರಾಜ ಹರಪನಹಳ್ಳಿ

5 thoughts on “ನಿರುತ್ತರ : ಒಂದು ಅವಲೋಕನ

  1. ಗುರುಗಳೆ,ತಮ್ಮ ಕಾವ್ಯದ ವಿಶ್ಲೇಷಣೆಯು ಪಾರಿಜಾತದ ಸುಗಂದ ದ್ರವ್ಯದಲಿ ಎದ್ದಿ ತೆಗೆದಂತಿದೆ ತಮ್ಮ ವಿಮರ್ಶಾ ನುಡಿಗಳು.ಬಹು ಚೆಂದ.

  2. ಒಳ್ಳೆಯವಿಶ್ಲೇಷಣೆ.ಸಂಗೀತ,ಹರಪನಹಳ್ಳಿ ಸರ್.ಇಬ್ಬರಿಗೂ ಅಭಿನಂದನೆ

  3. ಸಂಗಾತಿ ಪತ್ರಿಕೆಗೆ ಅನಂತ ಧನ್ಯವಾದಗಳು

  4. ಬರೆದ ಕವಿತೆಗಳು ಸಾರ್ಥಕವಾಗುವಂತೆ ವಿಶ್ಲೇಷಿಸಿದ ಹರಪನಹಳ್ಳಿ ಸರ್ ನಿಮಗೆ ಅನಂತ ಧನ್ಯವಾದಗಳು

  5. ಸಮೀಕ್ಷೆ ಚೆನ್ನಾಗಿದೆ ನಾಗರಾಜ್ ಸರ್.ಸಂಗೀತಾ ಅವರಿಗೆ ಅಭಿನಂದನೆಗಳು.

Leave a Reply

Back To Top