ಕವಿತೆ
ಯಾಕೆ ಈ ಮೌನ
ಅಕ್ಷತಾರಾಜ್ ಪೆರ್ಲ
ಯಾಕೆ ಈ ಮೌನ, ಅರಿಯದಾ ಭಾವ !
ನಿನ್ನೊಳಗೆ ನಾನೋ ! ನನ್ನೊಳಗೆ ನೀನೋ !
ಕಣ್ಣೊಳಗೆ ಮುನಿಸಿಹುದು ತೀರದಾ ಮೌನ
ಬೇಸಗೆಯ ಬಾನಿನಲಿ ಹುಸಿ ಛಾಯೆ ಕೋಪ
ಅಲ್ಲೊಮ್ಮೆ ಇಲ್ಲೊಮ್ಮೆ ನಸು ನಗುವ ಕಾಣುವೆ
ಸುಡುಬೇಗೆಯೊಳಗೆ ಬಳುಕು ಹೊಂಗೆಯ ನೆರಳೆ
ಹಾಲು ಹುಣ್ಣಿಮೆ ರಾತ್ರಿ ನಕ್ಷತ್ರ ಮಳೆ ಸುರಿದಂತೆ
ನುಡಿವ ಮಾತಿನ ತುಂಬಾ ಮುಗಿಯದಾ ಒಲುಮೆ
ಸುಳಿ ಮುಂಗುರುಳು ಸುಳಿದಾಡಿ ಮಲಗಿರಲು
ಮಳೆ ನಿಂತ ಘಳಿಗೆಯಂತಿಹುದಿಂದು ಮೊಗವು
ನಿನ್ನೆ ಮೊನ್ನೆಯ ತನಕ ನಲಿವ ಹೊನ್ನಿನ ಚಿಗರೆ
ಇಂದೇಕೋ ಈ ಮೌನ ಉಲಿಯದಾ ಸಜೆಯೆ
ಕ್ಷಣ ಕ್ಷಣವು ಯುಗವಾಗೇ ಕಳೆದಿಹುದು ನಿಮಿಷ
ಬಳಿ ಬಂದು ನಿಂತುಬಿಡು ಬೇಕಿಹುದು ಹರುಷ
ಪೌರ್ಣಮಿಯ ರಾತ್ರಿಯ ತಿಂಗಳಾ ಬೆರಗು
ಕರಗಿ ಹೋಗುವೆನೊಮ್ಮೆ ಸಂಜೆಯಾ ಬೆಳಕೆ
ಬಾರೇ ಚಂದಿರನರಸಿ ಅರಸಿ ಬಂದಿಹೆನಿಲ್ಲಿ
ನಿಂತುಬಿಡು ಹೀಗೊಮ್ಮೆ ಅರೆಘಳಿಗೆ ಕಳೆವೆ
ಯಾಕೆ ಈ ಮೌನ, ಅರಿವೆನೇ ಭಾವ !
ನಿನ್ನೊಳಗೆ ನಾನು ! ನನ್ನೊಳಗೆ ನೀನು !
****************************
ಸುಂದರ ಭಾವಗೀತೆ!