ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—25
ಆತ್ಮಾನುಸಂಧಾನ
ತುಂಬ ಪ್ರಭಾವ ಬೀರಿದ
ಪ್ರಾಚಾರ್ಯರು ಪ್ರಾಧ್ಯಾಪಕರು
ಪದವಿ ಶಿಕ್ಷಣದ ಕಾಲೇಜು ಜೀವನದಲ್ಲಿ ಪ್ರಾಮಾಣಿಕ ನಿಷ್ಠೆ ತೋರಿದ್ದರೆ ಅಪಾರವಾದ ಜ್ಞಾನನಿಧಿ ಕೈವಶ ಮಾಡಿಕೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆಯ ಕೊರತೆಯಿಂದಾಗಿ ಕೇವಲ ಹರೆಯದ ಹುಡುಗಾಟಿಕೆಯಲ್ಲಿ ಪದವಿ ಶಿಕ್ಷಣದ ಮೂರು ವರ್ಷಗಳು ತೀರ ಹಗುರವಾಗಿ ಕಳೆದು ಹೋದವು. ಆದರೂ ತಮ್ಮ ಪಾಠ ಕ್ರಮದ ವಿಶಿಷ್ಠತೆ, ವೇಷಭೂಷಣ, ನಡೆನುಡಿಗಳಿಂದಲೇ ಮನಸ್ಸನ್ನು ಗಾಢವಾಗಿ ಪ್ರಭಾವಿಸಿದ ಅಧ್ಯಾಪಕರು ಮತ್ತಿತರ ವ್ಯಕ್ತಿಗಳನ್ನು ಮರೆಯಲು ಸಾಧ್ಯವಿಲ್ಲದಂತೆ ನೆನಪಾಗಿ ಉಳಿದಿದ್ದಾರೆ.
ಕಾಲೇಜಿಗೆ ತಮ್ಮ ದಕ್ಷತೆ ಮತ್ತು ಶಿಸ್ತಿನಿಂದಲೇ ಘನತೆಯನ್ನು ತಂದುಕೊಟ್ಟವರು ಪ್ರಾಚಾರ್ಯರಾದ ಕೆ.ಜಿ. ನಾಯ್ಕ ಅವರು ನೀಳಕಾಯದ, ಗಂಭೀರ ನಿಲುವಿನ ಪ್ರಾಚಾರ್ಯರನ್ನು ವಿದ್ಯಾರ್ಥಿಗಳು ಭೇಟಿಯಾಗುವ ಅವಕಾಶಗಳು ಅಪರೂಪವಾಗಿರುತ್ತಿದ್ದವು. ಆದರೆ ಒಮ್ಮೆ ವರಾಂಡದಲ್ಲಿ ಕಾಣಿಸಿಕೊಂಡರೂ ಎಲ್ಲವೂ ಸ್ಥಬ್ದವಾಗಿ ಬಿಡುವ ಪ್ರಭಾವಶಾಲಿಯಾದ ವ್ಯಕ್ತಿತ್ವ ಅವರದ್ದಾಗಿತ್ತು.
ಕಾಲೇಜು ಹೊಸದಾಗಿ ಆರಂಭಗೊಳ್ಳುವ ಕಾರಣ ಮಾನ್ಯ ದಿನಕರ ದೇಸಾಯಿಯವರು ಹಲವು ದಿಕ್ಕುಗಳಿಂದ ಯೋಚಿಸಿ ಶಿಕ್ಷಣ ತಜ್ಞರೊಡನೆ ಸಮಾಲೋಚಿಸಿ ಕೆ.ಜಿ. ನಾಯ್ಕರಂತ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು. ಆಯ್ಕೆಯಾಗುವ ಮುನ್ನ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರಾಗಿದ್ದ ಕೆ.ಜಿ. ನಾಯ್ಕ ಅವರು ಅಂದು ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದು ಅಂದಿನ ಕುಲಪತಿಗಳಾಗಿದ್ದ ‘ಅಡಕೆ’, ರಜಿಸ್ಟ್ರಾರ್ ಆಗಿದ್ದ ‘ಒಡಿಯರ್’ ಅವರ ಅಭಿಮಾನಕ್ಕೆ ಪಾತ್ರರಾಗಿದ್ದವರು.
ಕೆ.ಜಿ. ನಾಯ್ಕ ಅವರ ಅಪೂರ್ವ ಕಾಳಜಿಯಲ್ಲಿ ಕಾಲೇಜು ಸ್ಥಾಪನೆಗೊಂಡ ಅಲ್ಪಾವಧಿಯಲ್ಲಿಯೇ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆಯುವುದು ಸಾಧ್ಯವಾಯಿತು. ಮುಂದೆ ಇದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತ ಬಳಿಕ ಕೆ.ಜಿ. ನಾಯ್ಕರ ವ್ಯಕ್ತಿ ವಿಶೇಷದ ಗಾಢ ಅನುಭವಗಳು ಆದವು. ಮತ್ತು ಅವುಗಳಿಂದಲೇ ನನ್ನ ವ್ಯಕ್ತಿತ್ವ ವಿಕಸನಕ್ಕೆ ಹಲವು ಮುಖದ ಪ್ರಯೋಜನಗಳೂ ಆಗಿವೆ. ಅದನ್ನು ಮುಂದೆ ದೀರ್ಘವಾಗಿ ಪ್ರಸ್ತಾಪಿಸುವೆ.
ನಾನು ಐಚ್ಛಿಕವಾಗಿ ಕನ್ನಡ, ಪೂರಕ ವಿಷಯಗಳಲ್ಲಿ ಇತಿಹಾಸ ಸಂಸ್ಕೃತಗಳನ್ನು ಆಯ್ದುಕೊಂಡೆ. ಸಹಜವಾಗಿಯೇ ಈ ಮೂರು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಪಕರು ಮಾತ್ರ ಹೆಚ್ಚಿನ ಒಡನಾಟಕ್ಕೆ ದೊರೆಯುತ್ತ ವಿಶೇಷ ಪ್ರಭಾವಕ್ಕೆ ಪಾತ್ರನಾದೆ.
ಅಂದು ನನಗೂ, ನನ್ನ ಅನೇಕ ಸಹಪಾಠಿಗಳಿಗೂ ಬಹು ನೆಚ್ಚಿನ ಗುರುಗಳೆಂದರೆ ಪ್ರೊ. ವಿ.ಎ. ಜೋಷಿಯವರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಡೆಯವರಾದ ಜೋಷಿಯವರು ಸೊಗಸಾಗಿ ಬಯಲು ಸೀಮೆಯ ಕನ್ನಡ ಮಾತನಾಡುವ ವ್ಯಕ್ತಿ. ತಮ್ಮ ಉಪನ್ಯಾಸದುದ್ದಕ್ಕೂ ವಿದ್ಯಾರ್ಥಿಗಳ ಹೆಸರು ನೆನಪಿಟ್ಟು ಆಗಾಗ ಗುರುತಿಸಿ ಮಾತನಾಡುವ ತಮ್ಮ ಸರಳತೆ ಹಾಸ್ಯಭರಿತವಾದ ಮಾತಿನ ಶೈಲಿಯಿಂದ ಇಡಿಯ ತರಗತಿಯೂ ಚೇತೋಹಾರಿಯಾಗಿ ಇರುವಂತೆ ನೋಡಿಕೊಳ್ಳುವ ಅವರ ಕಲಿಸುವಿಕೆಯೇ ನಮಗೆ ಕನ್ನಡವನ್ನು ಪ್ರೀತಿಸುವಂತೆ ಪ್ರೇರೆಪಿಸಿದ್ದವು. ಪಾಠದ ನಡುವೆ ವಿದ್ಯಾರ್ಥಿ ಸಮುದಾಯದಲ್ಲಿ ಏನಾದರೊಂದು ಬೇಡದ ಸದ್ದು ಕೇಳಿ ಬಂದರೂ ಕೇವಲ ತಮ್ಮ ಬಾಲ್‌ಪೆನ್‌ನಿಂದ ಟಿಕ್… ಟಿಕ್…” ಸದ್ದು ಹೊರಡಿಸಿ ಶಾಂತಗೊಳಿಸುವ ಕಲೆಗಾರಿಕೆ ಅವರಿಗೆ ವಿಶಿಷ್ಟವಾಗಿತ್ತು. ಯಾವುದಾದರೂ ವಿದ್ಯಾರ್ಥಿ ಅಗತ್ಯಕ್ಕಿಂತಲೂ ಅಧಿಕ ಪ್ರತಿಕ್ರಿಯೆ ತೋರಿದರೆ, ಬಾಳ ಶಾಣ್ಯ, ಆಗಾಕ ಹೋಗಬ್ಯಾಡ… ಇದು ನಿನಗೆ ಕೊನೆಯ ವಾರ್ನಿಂಗ್… ಮತ್ತದೇ ಮುಂದುವರಿಸಿದ ಅಂದ್ರ ಒದ್ದು ಹೊರಗ ಕಳಿಸಬೇಕಾಗ್ತದ…” ಎಂದು ಎಚ್ಚರಿಸುತ್ತಿದ್ದರು. ಆದರೆ ತಮ್ಮ ವೃತ್ತಿಯುದ್ದಕ್ಕೂ ಯಾರೊಬ್ಬರನ್ನೂ ತರಗತಿಯಿಂದ ಹೊರಗೆ ಹಾಕದ ಗುರುಶ್ರೇಷ್ಠರಾಗಿಯೇ ಉಳಿದರು. ಅವರ ಸೌಜನ್ಯಶೀಲತೆ, ಪಾಠ ಹೇಳುವ ವಿಶಿಷ್ಟ ಶೈಲಿಯಿಂದಲೇ ನಮ್ಮೆಲ್ಲರನ್ನು ಪ್ರಭಾವಿಸಿದವರು ಪ್ರೊ. ವಿ.ಎ. ಜೋಷಿ.
ನಮಗೆ ಕನ್ನಡ ಪಾಠ ಹೇಳಿದ ಇನ್ನೋರ್ವ ಗುರುಗಳು ಪ್ರೊ. ಕೆ.ವಿ. ನಾಯಕ. ಶ್ವೇತ ವರ್ಣದ ಎತ್ತರದ ನಿಲುವಿನ ಸ್ಪುರದ್ರೂಪಿ ತರುಣ ಉಪನ್ಯಾಸಕರಾದ ಕೆ.ವಿ. ನಾಯಕ ನಡುಗನ್ನಡ ಕಾವ್ಯಗಳನ್ನು ಕನ್ನಡ ವ್ಯಾಕರಣ ಛಂದಸ್ಸುಗಳನ್ನು ಪಾಠ ಮಾಡುತ್ತಿದ್ದರು. ಅವರ ಚಂದದ ವ್ಯಕ್ತಿತ್ವ ಮತ್ತು ನಿತ್ಯನೂತನವಾದ ವೇಷಭೂಷಣಗಳು ತುಂಬಾ ಆಕರ್ಷಕವಾಗಿ ಇರುತ್ತಿದ್ದವು. ಜೋಷಿಯವರ ಹಳೆಗನ್ನಡ ಕಾವ್ಯಾಬೋಧನೆ ಕೆ.ವಿ.ನಾಯಕರ ವ್ಯಾಕರಣ ಪಾಠಗಳು ಕನ್ನಡ ವಿಭಾಗದ ವಿದ್ಯಾರ್ಥಿ ಪ್ರೀತಿಗೆ ತುಂಬ ಪ್ರೇರಕವಾಗಿರುತ್ತಿದ್ದವು.
ಅಂದು ನಮಗೆ ಸಂಸ್ಕೃತ ಕಲಿಸುತ್ತಿದ್ದವರು. ಪ್ರೊ. ಎಂ.ಪಿ. ಭಟ್ ಎಂಬ ವಿದ್ವಾಂಸರು ಇಂಗ್ಲಿಷ್ ಕನ್ನಡ ಸಂಸ್ಕೃತ ಇತ್ಯಾದಿ ಭಾಷೆಯ ಮೇಲೆ ಅದ್ಭುತ ಹಿಡಿತ ಸಾಧಿಸಿದ್ದ ಎಂ.ಪಿ. ಭಟ್ ಅವರು ರಾಮಾಯಣ ಭಾರತಾದಿ ಕಾವ್ಯಗಳಲ್ಲದೆ ಸಂಸ್ಕೃತದ ‘ಮೇಘದೂತ’ ‘ಪ್ರತಿಜ್ಞಾ ಯೌಗಂಧರಾಯಣ’ ‘ಮೃಚ್ಛಕಟಿಕ’ ಮೊದಲಾದ ಪಠ್ಯಗಳನ್ನು ತುಂಬ ಪ್ರಭಾವಶಾಲಿಯಾಗಿ ಪಾಠ ಮಾಡುತ್ತಿದ್ದರು. ಅವರು ತಮ್ಮ ಉಪನ್ಯಾಸ ನೀಡಿದ ಬಳಿಕ ಮತ್ತೆ ನಾವು ಸಂಸ್ಕೃತ ಪಠ್ಯಗಳನ್ನು ಬಿಡಿಸಿ ಓದುವ ಕಷ್ಟವನ್ನೆ ತೆಗೆದುಕೊಳ್ಳುತ್ತಿರಲಿಲ್ಲ ಆದರೂ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯ ಅಂಕಕಗಳು ಸುಲಭವಾಗಿ ದಕ್ಕುತ್ತಿದ್ದವು ಅಂದರೆ ಪ್ರೊ. ಎಂ.ಪಿ. ಭಟ್ ಅಂತವರಿಂದ ಸಂಸ್ಕೃತ ಕಲಿಯುವುದೇ ಒಂದು ಸೌಭಾಗ್ಯವೆಂದು ನಾವು ಬಹುತೇಕರು ಭಾವಿಸಿದ್ದೆವು. ನಮಗೆ ಇತಿಹಾಸ ಪಾಠ ಹೇಳಿದವರು ಪ್ರೊ.ಎ.ಎಚ್.ನಾಯಕ ಮತ್ತು ಟಿ.ಟಿ. ತಾಂಡೇಲ್ ಅವರು.
ಪ್ರೊ. ಎ.ಎಚ್. ನಾಯ್ಕ ಅವರು ಪದವಿ ಶಿಕ್ಷಣದ ಮೊದಲ ವರ್ಷದಲ್ಲಿ ನಮಗೆ ಕೆಲವು ಕಾಲ ಇಂಗ್ಲಿಷ್ ವಿಷಯದ ಪಾಠ ಹೇಳಿದಂತೆ ನೆನಪು. ತುಂಬ ಕರ್ತವ್ಯ ದಕ್ಷ ಅಧ್ಯಾಪಕರೆಂದೇ ಗುರುತಿಸಿಕೊಂಡ ಎ.ಎಚ್. ನಾಯ್ಕ ಅವರು ತಮ್ಮ ಪಾಠದೊಂದಿಗೆ ವಿದ್ಯಾರ್ಥಿ ಕ್ಷೇಮ ಚಿಂತನೆಯನ್ನು ನಿರ್ವಹಿಸುತ್ತಿದ್ದರು. ತರಗತಿಗಳನ್ನು ತಪ್ಪಿಸುವ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಕರೆದು ಬುದ್ಧಿ ಹೇಳುವ ಎಚ್ಚರಿಕೆ ನೀಡುವ ಹೆಚ್ಚಿನ ಕೆಲಸವನ್ನು ಎ.ಎಚ್. ನಾಯ್ಕ ಅವರಂತೆ ನಿರ್ವಹಿಸಿದ ಅಧ್ಯಾಪಕರು ಕಡಿಮೆ.
ಅವರ ವ್ಯಕ್ತಿತ್ವದ ಇನ್ನೊಂದು ವಿಶೇಷತೆ ಅಂದರೆ ದೈವ ಭಕ್ತಿ! ಅಧ್ಯಾತ್ಮಿಕ ಒಲವು!
ಕಾಲೇಜು ಪಕ್ಕದಲ್ಲೇ ಇರುವ ಹೊನ್ನಾರಾಕಾ ನಾಗದೇವತಾ ಮಂದಿರವನ್ನು ಪ್ರವೇಶಿಸಿ ಅಲ್ಲಿರುವ ಎಲ್ಲ ಗಂಟೆಗಳನ್ನು ಬಾರಿಸಿ ದೇವರಿಗೆ ಕೈಮುಗಿದು ಗಂಧ ಪ್ರಸಾದ ಪಡೆಯದೆ ಅವರು ಎಂದೂ ಕಾಲೇಜು ಆವರಣಕ್ಕೆ ಬರುತ್ತಿರಲಿಲ್ಲ. ಅವರ ಈ ನಡೆಯನ್ನು ವಿದ್ಯಾರ್ಥಿಗಳು ಮೋಜಿನಿಂದ ಗಮನಿಸುತ್ತಾರೆ ಎಂಬುದು ಅವರಿಗೆ ಅರಿವಾದರೂ ತಮ್ಮ ನಿಷ್ಠೆಯನ್ನು ಎಂದು ತಪ್ಪಿ ನಡೆಯುತ್ತಿರಲಿಲ್ಲ. ಅವರ ಈ ಭಗವದ್ಭಕ್ತಿಯನ್ನೇ ವಿದ್ಯಾರ್ಥಿಗಳು ಹಲವು ಬಾರಿ ಗೇಲಿ ಮಾಡುತ್ತಿದ್ದರು. ತರಗತಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳನ್ನು ಮುಂದಿನ ತರಗತಿಯಲ್ಲಿ ವಿಚಾರಿಸಿಕೊಳ್ಳುವುದು ಅವರ ಕ್ರಮವೇ ಆಗಿತ್ತು. ಹನೇಹಳ್ಳಿಯ ಕಡೆಯಿಂದ ಬರುವ ಪ್ರಸನ್ನ ಎಂಬ ನಮ್ಮ ಸಹಪಾಠಿಯೊಬ್ಬ ಗುರುಗಳ ದೈವ ಭಕ್ತಿಯ ನಿಷ್ಠೆಯನ್ನು ಅರಿತವನಾಗಿ ಗುರುಗಳು “ನಿನ್ನೆ ಏಕೆ ನೀನು ತರಗತಿಗೆ ಬರಲಿಲ್ಲ?” ಎಂದು ಕೇಳಿದಾಗಲೆಲ್ಲ “ಮನೆಯಲ್ಲಿ ಸತ್ಯನಾರಾಯಣ ಪೂಜೆಯಿತ್ತು ಸರ್” ಎಂದೇ ಕಥೆ ಹೇಳುತ್ತಿದ್ದ. ಅಷ್ಟಕ್ಕೆ ಅವನನ್ನು ಕ್ಷಮಿಸಿಯೇ ಬಿಡುವ ಪ್ರೊ.ನಾಯ್ಕರ ರೀತಿಯು, ನಮಗೆಲ್ಲ ಮೋಜಿನ ಸಂಗತಿಯಾಗಿ ಮನರಂಜನೆ ನೀಡುತ್ತಿತ್ತು.
ದೈವ ನಿಂದನೆ, ಆತ್ಮವಂಚನೆ, ಸುಳ್ಳು ಇತ್ಯಾದಿ ಸನಿಹವೂ ಬರದಂತೆ ಬಾಳಬೇಕೆಂದು ತಮ್ಮ ಉಪನ್ಯಾಸದ ನಡುವೆ ಮತ್ತೆ ಮತ್ತೆ ಉಪದೇಶಿಸುವ ಪ್ರೊ. ಎ.ಎಚ್. ನಾಯ್ಕ ಅದಕ್ಕೆ ವಿರುದ್ಧವಾಗಿ ವರ್ತಿಸುವರನ್ನು ಕಂಡರೆ ಕೆಂಡಾಮಂಡಲರಾಗಿ ಬೈಯುವ ಅಂಥ ವ್ಯಕ್ತಿಗಳಿಂದ ದೂರವೇ ಇರುತ್ತಿದ್ದರು. ಅವರಿಂದ ಇತಿಹಾಸ ಪಾಠಕೇಳಿದಕ್ಕಿಂತಲೂ ನೈತಿಕ ಶಿಕ್ಷಣದ ಪಾಠ ಕೇಳಿದುದೇ ಅಧಿಕವೆಂಬಂತೆ ಎ.ಎಚ್. ನಾಯ್ಕ ಅವರು ವಿದ್ಯಾರ್ಥಿಗಳ ಚಿತ್ತ ಬಿತ್ತಿಯಲ್ಲಿ ನೈತಿಕ ಮೌಲ್ಯ ಪ್ರತಿಪಾದಕ ಪೂಜನೀಯರಾಗಿಯೇ ನೆಲೆ ನಿಂತಿದ್ದಾರೆ.
ಇತಿಹಾಸ ಪಾಠ ಹೇಳಿದ ಇನ್ನೊಬ್ಬ ಗುರು ಪ್ರೊ. ಟಿ.ಟಿ. ತಾಂಡೇಲ್ ಅವರು. ಯುವ ಅಧ್ಯಾಪಕರಾಗಿದ್ದ ತಾಂಡೇಲ್ ಸೂಟು ಬೂಟುಗಳಲ್ಲಿ ಆಕರ್ಷಣೀಯವಾಗಿ ತರಗತಿಯನ್ನು ಪ್ರವೇಶಿಸುತ್ತಿದ್ದರು. ಅಷ್ಟೇ ನಿರರ್ಗಳವಾಗಿ ಇಂಗ್ಲೀಷಿನಲ್ಲಿ ತಮ್ಮ ಪಾಠ ಆರಂಭಿಸುತ್ತಿದ್ದುದ್ದು ಅವರ ನಡೆ-ನುಡಿಯ ಶೈಲಿ ಯುವ ಮನಸ್ಸುಗಳನ್ನು ಗಾಢವಾಗಿಯೇ ತಟ್ಟುತ್ತಿತ್ತು. ತಾಂಡೇಲ್ ಸರ್ ಅವರ ವೇಷಭೂಷಣಗಳ ಕಾಳಜಿ, ಉಪನ್ಯಾಸದ ವಿಶಿಷ್ಟ ಸ್ಟೈಲ್ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತಿತ್ತು.
ಬಹುಶಃ ಮೀನುಗಾರರಂಥ ಹಿಂದುಳಿದ ಸಮಾಜದಿಂದ ಬಂದು ಇಂಥದೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗುವುದು ವಿದ್ಯಾರ್ಥಿಗಳ ಮನಸ್ಸು ಗೆಲ್ಲುವುದೆಂದರೆ ಸುಲಭದ ಸಂಗತಿಯೇನೂ ಆಗಿರಲಿಲ್ಲ. ನನ್ನಂತ ದಲಿತ ವಿದ್ಯಾರ್ಥಿಯೊಬ್ಬನ ಮನಸ್ಸಿನಲ್ಲಿ ಇಂಥದೊಂದು ಸಾಧ್ಯ…” ಎಂಬ ಆಸೆಯ ಹೊಳಪೊಂದು ಮಿಂಚುವಂತೆ ಮಾಡಿದ ನನ್ನ ಆದರ್ಶ ಗುರು ಟಿ.ಟಿ. ತಾಂಡೇಲ್
*********************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಗೌರವಾನ್ವಿತ ಗುರುಗಳ ಸುಂದರ ಚಿತ್ರಣ.ಮುಂದೆ ಅವರ ವ್ಯಕ್ತಿತ್ವ ಇನ್ನಷ್ಟು ಅನಾವರಣಗೊಳ್ಳುವದೆಂಬ ನಿರೀಕ್ಷೆಯಲ್ಲಿ..
Lekan odiddene.tumba khushi aytu.
ಗುರೂಜಿ,
ನಿಮ್ಮನ್ನು ಮೆಚ್ಚಬೇಕು ಯಾಕೆ ಹೇಳಿ ಕಡೆಗೂ ಛಲ ಸಾಧಿಸಿ ತೋರಿಸಿದಿರಿ. ಪದವಿ ಶಿಕ್ಷಣದ ಸಮಯದಲ್ಲಿ ಸಂಸ್ಕೃತ ವಿಷಯವನ್ನು ಐಚ್ಚಿಕವಾಗಿ ಓದಿ ನಿಮ್ಮ ಗುರಿಯನ್ನು ಮುಟ್ಟಿದ ಸಾಧಕರು ನಿವೆನಿಸಿಕೊಂಡಿರಿ. Realy U R great, hats of to you. I have no words to say more. Really 2 day i become very happy regarding your Sanskrut Subject…….
ಮುಂದಿನ ಸಂಚಿಕೆ ಎದುರಾಗಿರುವೆ.
ಧನ್ಯವಾದಗಳು
ಗುರುಗಳ ನ್ನು ಜ್ಞಾಪಿಸಿ ಅವರು ದೊಡ್ಡವರಾದಂತೆ ಅದೇ ತಮಗೆ ದಾರಿದಿಪವಾದ ಪರಿ ತುಂಬಾ ಸಂತೋಷ್ ಸರ.
ಸರ್ , ಪ್ರಾಂಶುಪಾಲ ಕೇ.ಜಿ ನಾಯ್ಯ ರಾದಿಯಾಗಿ ಎಲ್ಲ ಗುರುಗಳ ವಿಶಿಷ್ಟ ವಿಶೇಷತೆಯನ್ನು , ತಮ್ಮ ಕಲಿಕಾ ಅವಧಿಯಲ್ಲಿ ತಾವುಕಂಡಂತೆ ವಾಸ್ತವಾಂಶ ಚಿತ್ರಿಸಿರುವಿರಿ. ಈ ಎಲ್ಲ ಗುರುಗಳು ನನ್ನ ಕಣ್ಮುಂದೆ ಕಟ್ಟಿದರು. ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ ತಮ್ಮ ಶಿಷ್ಯೆ.
ಗುರುಗಳ ಆತ್ಮಕಥನ ಚೆನ್ನಾಗಿ ಬರುತ್ತಿದೆ.ಅವರ ಪಾಠ ಶೈಲಿಯೇ ವಿಶಿಷ್ಪ.ಅಂಥವರ ಶಿಷ್ಯನಾದದ್ದು ನನಗೆ ಹೆಮ್ಮೆ.ಇನ್ನೂ ಮುಂದಿನ ಅವರ ಆತ್ಮಕಥೆಯ ನಿರೀಕ್ಷೆಯಲ್ಲಿರುವೆ.