ಸಮಾಜ ಹಾಗೂ ನೀತಿ

ಲೇಖನ

ಸಮಾಜ ಹಾಗೂ ನೀತಿ

ಜೀವಿ.ಹೆಗಡೆ

ನೀತಿ ಅಂದರೆ ಏನು ಅಂತ ಹೇಳುವದು ಸುಲಭವಲ್ಲ. ಆದರೆ ನೀತಿಯಂತೆ ನಡೆಯಬೇಕು ಅಂತ ಸುಲಭದಲ್ಲಿ ಹೇಳಿಬಿಡಬಹುದು. ಶಿಕ್ಷಕರಿಗೆ ಒಂದು ನೀತಿ, ಹೆಣ್ಣುಮಕ್ಕಳಿಗೆ ಒಂದು ನೀತಿ, ಗಂಡುಮಕ್ಕಳಿಗೆ ಒಂದು ನೀತಿ, ಸಣ್ಣ ಮಕ್ಕಳಿಗೆ ಒಂದು ನೀತಿ, ಗಂಡಸರಿಗೆ ಒಂದು ನೀತಿ, ಹೆಂಗಸರಿಗೆ ಒಂದು ನೀತಿ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ನೀತಿ ಅಂತ ಸಮಾಜವೇ ನಿರ್ಧರಿಸಿಬಿಟ್ಟಿರುತ್ತದೆ.

ಆದರೆ ಮಕ್ಕಳು ನೀತಿ ತಪ್ಪುತ್ತಿದ್ದಾರೆ ಅಂತ ಹೇಳುವದು ಸಾಮಾನ್ಯವಾಗಿ ಹದಿಹರೆಯದ ಮಕ್ಕಳನ್ನು ಕುರಿತು ಮಾತ್ರ. ನೀತಿತಪ್ಪುವದನ್ನೇ ಹಾದಿ ತಪ್ಪುವುದು ಅಂತಲೂ ಹೇಳುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳ ಕುರಿತಾಗಿ ಈ ರೀತಿಯ ಹೇಳಿಕೆ ಇರುವದಿಲ್ಲ. ಹದಿ ಹರೆಯದವರಲ್ಲೂ ಹೆಣ್ಣು ಮಕ್ಕಳ ಕುರಿತು ಹೇಳುವದು ಹೆಚ್ಚು.

ಗಂಡು ಮಕ್ಕಳಾದರೆ ದಾರಿ ತಪ್ಪುತ್ತಿದ್ದಾರೆ ಎನ್ನುವ ರೀತಿ ಬೇರೆ. ಹೆಣ್ಣುಮಕ್ಕಳಾದರೆ ಹೇಳುವ ರೀತಿಯೇ ಬೇರೆ. ಶಾಲೆ-ಕಾಲೇಜುಗಳನ್ನು ಬಿಟ್ಟು ಸಿನೇಮಾ-ನಾಟಕಗಳ ಥಿಯೇಟರುಗಳಲ್ಲಿ ಕಾಲ ಕಳೆಯುವದು, ಸಿಗರೇಟು-ಗಾಂಜಾ ಮೊದಲಾದ ಮಾದಕವಸ್ಥುಗಳನ್ನು ಸೇವಿಸುವದು, ಗೆಳೆಯರ ಜೊತೆ ಊರೂರು ಸುತ್ತಾಡುವದು, ಇವುಗಳನ್ನು ಹುಡುಗರು ದಾರಿ ತಪ್ಪಿದ್ದಾರೆ ಅಂತ ಹೇಳುವಾಗ ಗುರುತಿಸುತ್ತಾರೆ. ಹೆಣ್ಣುಮಕ್ಕಳು ಅರೆ ಬೆತ್ತಲಾಗಿ ಬಟ್ಟೆ ಹಾಕುವದನ್ನೇ ದಾರಿ ತಪ್ಪಿದ್ದಾರೆ ಅಂತ ಹೇಳುವದುಂಟು. ಹೆಣ್ಣು ಗಂಡು ಮಕ್ಕಳು ಜೊತೆ ಜೊತೆಯಾಗಿ ತಿರುಗುವಾಗ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳನ್ನೇ ಬೊಟ್ಟು ಮಾಡಿ ತೋರಿಸುತ್ತದೆ ಸಮಾಜ. ಗಂಡು ಮುಳ್ಳಿನ ಹಾಗೆ, ಹೆಣ್ಣು ಬಟ್ಟೆಯಹಾಗೆ. ಸೀರೆ ತಾಗಲಿ ಮುಳ್ಳು ತಾಗಲಿ ಹರಿಯುವದು ಸೀರೆಯೆ ಸರಿ ಅಂತ ಸರಿಯಾಗಿರುವ ಅನಿವಾರ್ಯತೆ ಹೆಣ್ಣಿಗೇ ಅಂತ ನಡವಳಿಕೆಯನ್ನು ಪೂರ್ವನಿಯೋಜಿತವಾಗಿಯೇ ತೀರ್ಮಾನಿಸಿ ಬಿಟ್ಟಿರುತ್ತದೆ ಸಮಾಜ. ಹೀಗೆ ಸಮಾಜದ ನಿರ್ಣಯವನ್ನು ಒಪ್ಪಿಕೊಳ್ಳಬೇಕು. ಅದರಂತೆ ನಡೆಯದೇ ಇರುವವರನ್ನು ನೀತಿ ಗೆಟ್ಟವರು ಅಥವಾ ದಾರಿತಪ್ಪಿದವರು ಎಂದು ಬಿಡುತ್ತದೆ ಸಮಾಜ.

ಆದರೆ ನೀತಿ ಯಾವುದು ಅಂತ ಸಾರ್ವತ್ರಿಕವಾಗಿ ಅಥವಾ ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವದು ಕಷ್ಟವೇ ಸರಿ. ನಮ್ಮ ನಡತೆಯಿಂದ ಬೇರೆಯವರಿಗೆ ತೊಂದರೆ ಅಥವಾ ಮುಜುಗರ ಆಗದೇ ಇರಬೇಕು. ಅದೇ ನೀತಿ ಅಂತ ಸ್ಥೂಲವಾಗಿ ಹೇಳಬಹುದು. ಸಮಾಜ ಎನ್ನುವದು ಒಂದು ಸಮಾನ ಮನಸ್ಕರ ಗುಂಪು. ಅದು ಜಾತಿ-ಉಪಜಾತಿ, ಧರ್ಮ ಇವುಗಳಲ್ಲಿ ವಿಂಗಡಣೆಯಾಗಿರುತ್ತವೆ. ಅದೇನೇ ಇರಲಿ.

ಒಂದೈವತ್ತು ವರ್ಷಗಳ ಹಿಂದೆ ಹೋಗೋಣ. ನಾವು ಕೋಲೇಜಿಗೆ ಹೋಗುವ ಸಮಯ. ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಕೂಡಿ ಓಡಾಡುವ ವಿಷಯ ಬಿಡಿ. ಕೂದಲು ಉದ್ದ ಬಿಟ್ಟರೆ ಅಥವಾ ( ಅಂದರೆ ಹಿಪ್ಪಿಕಟ್), ಬೆಲ್ ಬಾಟಮ್ ಪೇಂಟ್ ಹಾಕಿದವರನ್ನು ಕೂಡ ದಾರಿ ಬಿಡುತ್ತಿರುವವರು ಎನ್ನುವವರಿದ್ದರು. ಹೆಣ್ಣುಮಕ್ಕಳು ನೈಟೀ ಅಥವಾ ಚೂಡೀದಾರ ಹಾಕಿದವರನ್ನೂ ಬೇರೆರೀತಿಯಿಂದ ನೋಡುತ್ತಿದ್ದರು. ಕಾಲೇಜಿಗೆ ಹೋಗುವದು ಅಂದರೆ ಮಕ್ಕಳು ಅದರಲ್ಲಿಯೂ ಹೆಣ್ಣುಮಕ್ಕಳು ದಾರಿತಪ್ಪುವ ಒಂದು ಮೆಟ್ಟಿಲು ಅಂತಲೇ ತಿಳಿಯುತ್ತಿದ್ದರು. ಸೀರೆ ಉಡದೇ ಇರುವವಳು ಹೆಣ್ಣೇ ಅಲ್ಲ ಎನ್ನುವದಾಗಿ ತಿಳಿಯುವವರೂ ಇದ್ದರು. ಈಗಲೂ ಶಾಲೆ ಕಾಲೇಜುಗಳಲ್ಲಿ, ಹೆಂಗಸರಿಗೆ ಸೀರೆ ಹಾಗೂ ಗಂಡಸರಿಗೆ ಪೇಂಟು ಶರ್ಟು ಸಾರ್ವತ್ರಿಕವಾಗಿ ಒಪ್ಪಿತವಾದ ಯೂನಿಫಾರ್ಮ್ ಆಗಿದೆ. ಉಳಿದ ಇಲಾಖೆಗಳ ನೌಕರರ ಹಾಗೂ ಈಗ ಐಟಿ.ಬೀಟಿ. ನೌಕರರಿಗಿಂತ ವಿಭಿನ್ನವಾಗಿ ಶಿಕ್ಷಕ ಶಿಕ್ಷಕಿಯರನ್ನು ಸಮಾಜ ಗಮನಿಸುತ್ತದೆ.

ಹಿಂದೆ ಸಮಾಜದ ವ್ಯಾಪ್ತಿ ಈಗಿನಷ್ಟು ವಿಶಾಲವಾಗಿರಲಿಲ್ಲ. ಆದ್ದರಿಂದ ಪರಸ್ಪರ ಸಂಪರ್ಕಕ್ಕೆ ಅವಕಾಶವೂ ಕಡಿಮೆ ಇತ್ತು. ಆ ಮೇಲೆ ಸಹಜವಾಗಿಯೇ ಬೇರೆ ಬೇರೆ ಹಿನ್ನೆಲೆ ಇರುವ ಮಕ್ಕಳು ಸಂಪರ್ಕಕ್ಕೆ ಬಂದರು. ಆಗ ನೀತಿ ನಡವಳಿಕೆಗಳೂ ಬದಲಾದವು. ನೀತಿ ನಡಾವಳಿಕೆಗಳು ವಿನಿಮಯಹೊಂದಿದವು. ಆಗ ಒಂದು ಗುಂಪಿಗೆ ಒಪ್ಪಿತವಾಗಿದ್ದ ನೀತಿ ಇನ್ನೊಂದು ಗುಪಿಗೆ ಒಪ್ಪಿತವಾಗುವದಿಲ್ಲ. ಈಗಂತೂ ಕೇವಲ ಭಾರತದ ಭಾಗಗಳಲ್ಲ ಬೇರೆ ಬೇರೆ ದೇಶಗಳ ಜನರು ಸಂಪರ್ಕಕ್ಕೆ ಬರುತ್ತಾರೆ. ಅದರ ಅನಿವಾರ್ಯತೆ ಇರುವ ಇಂದಿನ ದಿನಗಳಲ್ಲಿ ನಮ್ಮ ಮಕ್ಕಳು ನಾವು ಹೇಳಿದ ನಡೆಗಳಲ್ಲೇ ನಡೆಯಬೇಕು ಎನ್ನುವದು ಮೂರ್ಖತನ.

ಹೌದು ಪರಿವರ್ತನೆ ಜಗದ ನಿಯಮ. ಹಿಂದಿನಕ್ಕಿಂತ ಈಗ ಯಾಂತ್ರಿಕ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಬದಲಾವಣೆಯ ವೇಗ ಹೆಚ್ಚಾಗಿದೆ. ಈ ನಡವಳಿಕೆಗಳೂ ಸಹ ಸಹಜವಾಗಿಯೇ ವೇಗವಾಗಿ ಬದಲಾವಣೆಯಾಗುತ್ತಿವೆ. ಜನರೇಶನ್ ಗೆಪ್ ಅಂದರೆ ತಲೆಮಾರು ಅಂತರ ಅಂತ ಯಾವಾಗಿನಿಂದಲೂ ಇದೆ. ಆ ಅವಧಿಯಲ್ಲಾದ ಬದಲಾವಣೆಗಳನ್ನು ಹಿಂದಿನ ತಲೆಮಾರಿನವರು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವದು ತಿಳಿದುಬರುತ್ತದೆ. ಈಗ ತಲೆಮಾರು ಅಂತರದಷ್ಟು ದೂರ ಸಹಿತ ಹೋಗಬೇಕಿಲ್ಲ. ಹತ್ತು ವರ್ಷಕ್ಕೇ ಬದಲಾವಣೆಯ ಬಿಸಿಯನ್ನು ಕಾಣುತ್ತೇವೆ.

ಆದ್ದರಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎನ್ನುವದು ಬರೀ ಭ್ರಮೆ. ಸಮಾಜದ ದೃಷ್ಟಿಕೋನ ಬದಲಾಗಬೇಕು.

***************

2 thoughts on “ಸಮಾಜ ಹಾಗೂ ನೀತಿ

  1. ನಮ್ಮ ಕಾಲ ಚೆನ್ನಾಗಿತ್ತು ಈಗ ಕಾಲ ಕೆಟ್ಟೋಯ್ತು… ಇದು ಎಲ್ಲಾ ಕಾಲದ ಪಲ್ಲವಿ ಯೇ. ಒಳ್ಳೆಯ ಲೇಖನ

Leave a Reply

Back To Top