ಕವಿತೆ
ಸಾವಿನ ಲೆಕ್ಕಾಚಾರ
ಸರಿತಾ ಮಧು
ನೀರವತೆಯ ನಡುವೆಯೂ ಅಲ್ಲೆಲ್ಲ ಅತೃಪ್ತ ಮನಸುಗಳದೇ ಸದ್ದು
ಆ ಮನೆಯೂ, ಈ ಮನೆಯೂ
ಸಾವಿನ ಸೂತಕದ ಛಾಯೆಯಲ್ಲಿಯೇ
ಇಲ್ಲೆಲ್ಲೋ ಮದ್ದುಗಳಿಗಾಗಿ
ಅಲ್ಲೆಲ್ಲೋ ಗಾದಿಗಳಿಗಾಗಿ
ಎವೆಯಿಕ್ಕದೇ ಕಾದಿದ್ದರೂ
ಪ್ರಾಣವಾಯು ಇಲ್ಲದೇ
ನರಳಿ, ನರಳಿ ಸತ್ತಾಗಲೂ
ಧುರೀಣರೆಂದು ಮೆರೆಯುವವರ ಅರಚಾಟಗಳು
ಯಾರು , ಏನು , ಹೇಗೆ ಇದಾವುದರ ಪರಿವೆಯೇ ಇಲ್ಲದೇ ಶುಶ್ರೂಷೆ ಮಾಡಿದವರು,ಆಹಾರವಿತ್ತವರು, ಸಮಯಕ್ಕೆ ಒದಗಿದವರು,ಹೆಣಗಳಿಗೆ ಮುಕ್ತಿ
ಮಾಡುವವರ ಸಂಸ್ಕಾರವು
ಕಣ್ಣಮುಂದೆ ಎಲ್ಲವೂ
ಬಟಾಬಯಲು , ಆದರೂ
ಸಾವಿನ ಲೆಕ್ಕಾಚಾರ ತಪ್ಪುತ್ತಿದೆ
ನಮ್ಮೆಲ್ಲರ ದಿವ್ಯ ನಿರ್ಲಕ್ಷ್ಯವೋ
ಕಾಣದ ವೈರಾಣುವಿನ ಹಟವೋ
ನಲುಗುತ್ತಿದೆ ಮಾನವ ಕುಲ
ಸಾವಿನಲೆಯಲ್ಲಿ ಈ ಸುಳಿಯ ಹಿಡಿತದಿಂದ ಪಾರಾಗಲು
ಒಂದೇ ಕಾತರ ಎಲ್ಲರಿಗೂ
ಸಿರಿತನವೋ , ಬಡತನವೋ ಸಾವಿಗೆ ಎಲ್ಲರೂ ಸಮಾನರೇ
ಲೆಕ್ಕಾಚಾರ ನಮ್ಮದಷ್ಟೇ
ಸಂಕಲನವಾಗಲೇ ಇಲ್ಲ
ವ್ಯವಕಲನವೇ ತುಸು ಹೆಚ್ಚಾಗಿದೆ
ಶೂನ್ಯವಾಗದಿದ್ದರೆ ಸಾಕು!!!
***************