ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು

ಲೇಖನ

ಕನ್ನಡಕ್ಕೆ ಬಂದ

ಹೊಸ ಕನ್ಯೆ – ಹೈಕು

Branch, Limb, Tree, Leaf, Green, Zen

ಹೈಕು ಕನ್ನಡಕ್ಕೆ ಬಂದ ಹೊಸ ಕಾವ್ಯ ಪ್ರಕಾರ.ಜಪಾನಿ ಮೂಲದ್ದು ಎಂಬುದು ತಜ್ಞರ ಅಂ‌ಬೋಣ ಮೂವತ್ತೊಂದು ಮಾತ್ರೆಗಳ ಹೈಕು ನಂತರ ೧೭ ಮಾತ್ರೆಗಳಿಗೆ ಇಳಿಯಿತು. ನಟರಾಜು ಬೂದಾಳು ರವರು ಇದು ಜಪಾನಿನ ವಾಕಾ ಎನ್ನು ಸಂಪ್ರದಾಯಬದ್ಧ ಹಾಡಿನಿಂದ ಹೊರಟದ್ದು ಎನ್ನುತ್ತಾರೆ(ರಮಜಾನ. ಹೆಬಸೂರ ಅವರ ಹೈಕು ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ)ಅಲ್ಲಿ ಹದಿನಾರನೆಯ ಶತಮಾನಕ್ಕೂ ಹಿಂದೆ ಚಾಲ್ತಿಯಲ್ಲಿದ್ದಿತಂತೆ.ಹಾಯ್ ಕು> ಹಾಯ್ಕು>ಹೈಕು ಹೀಗೆ ಅದರ ಹೆಸರೂ ಕೂಡ ಕಾಲಕಾಲಕ್ಕೆ ಸ್ತಿತ್ಯಂತರ ಗೊಳ್ಞಲುತ್ತಾ ಬಛಮದುದನ್ನು ಗಮನಿಸುತ್ತೇವೆ.ಅತಿ ಚಿಕ್ಕದಾದ ಈ ಕಾವ್ಯ ಮಹತ್ತಿನಲ್ಲಿ ಚಿಕ್ಕದೇನಲ್ಲ‌.ಈಚೆಗೆ ಕನ್ನಡದಲ್ಲಿ ೫/೭/೫ ಮಾತ್ರೆಗಳ ಮೂರು ಸಾಲು ಬರೆದು ಇದು ಹೈಕು ಎಂದು ಅದರ ಛಂದಸ್ಸನ್ನು ಹೇಳಲಾಗು ತ್ತದೆ.ಆದರೆ ಕವಿತೆಯಾಗುವಾಗ ಒಂದು‌ ಮಾತ್ರೆ ಹೆಚ್ಚು ಕಡಮೆಯಾಗುವದನ್ನು ಮರೆಯಬಾರದು.ತೀರಾ ನಿಯಮಗಳಿಗೆ ಬದ್ದರಾದಾಗ ಕವಿತೆ ಸೋಲುತ್ತದೆ ಎನ್ನುವದನ್ನು ಎಲ್ಲರೂ ಬಲ್ಲವರೇ.ಆದ್ದರಿಂದ ಹೈಕು ಕವಿ ಡಾ.ಪ್ರಕಾಶ ಖಾಡೆಯವರು

ಅಕ್ಷರಗಳ

ಎಣಿಸಿಟ್ಟು ಬರೆದು

ಹಾಯ್ಕು ಎಂದರು

ಎಂದು ನಿಯಮಗಳ ಬೆನ್ನು ಹತ್ತುವದನ್ನು ಟೀಕಿಸುವಂತೆ ತ಼ೊರುತ್ತದೆ.ರಮಜಾನ ಅವರ ಹೈಕುಗಳನ್ನು ಗಮನಿಸಿ ದಾಗಲೂ ಅವರೇನೂ ಅಷ್ಟು ಅಕ್ಷರಗಳ ನಿಯಮಕ್ಕೆ ಬದ್ಧರಾಗಿಲ್ಲದಿರುವದನ್ನು ಗಮನಿಸುತ್ತೇವೆ.ಆದರೆ ೫/೭/೫‌ ಮಾತ್ರೆಗಳು ( ಅಕ್ಷರಗಳ) ಅನುಸರಣೆ ಕಡ್ಡಾಯ ಎನ್ನುವ ಗುಂಪೂ ಇರುವದನ್ನು ನಾವು ಮರೆಯುವ ಹಾಗಿಲ್ಲ.

ಸಿ.ರವೀಂದ್ರನಾಥ ರವರು  ಬಹಳ ಶ್ರೇಷ್ಠವಾದ ಹೈಕುಗಳನ್ನು ಬರೆದಿರುವರು.ಅವರು ಹೈಕು ಗಳನ್ನು‌ಕುರಿತು‌ಹೇಳುವ ಮಾತು ಹೀಗಿದೆ

” ಮೂರು ಸಾಲಿನ ಹೈಕು ಮನ ಸ್ಪರ್ಶಿಸಿ ಭಾವ ಮೂಡಿದಿ ,ತನ್ನ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.ಸೋಜಿಗವೆಂದರೆ ಕಾಲವನ್ನು ಒಳಗೊಂಡರೂ ಕಾಲಾತೀತವಾಗುವ ರೀತಿ ಹಾಯ್ಕುವನ್ನುಚಾಪರೂಪದ ಕಾವ್ಯ ಪ್ರಕಾರವಾಗಿಸಿದೆ ” ಎನ್ನುತ್ತಾರೆ‌.

ಇನ್ನೋರ್ವ ವಿಮರ್ಶಕಿಯರಾದ ಡಾ.ಸುಮಾ ಎಂಬಾರ ಅವರು

” ಮೂರು ಸಾಲುಗಳಲ್ಕಿ ಝಗ್ಗೆಂದು ಮಿಂಚುವ ಅರ್ಥಗಳು ಬೆಳಕಿನ ಬೆಲೆಯನ್ನು ಹೆಚ್ಚಿಸುತ್ತದೆ.ಹೇಳಿದ್ದಕ್ಕಿಂತಲೂ ಹೇಳದೇ ಬಿಟ್ಟದ್ದೇ ಹಾಯ್ಕುವಿನ ಶಕ್ತಿ.ಕಾವ್ಯದ ಮೂಲ ಸತ್ವವಿರುವದೇ ಈ ನೆಲೆಯಲ್ಲಿ.ಆದ್ದರಿಂದಲೇ ಹೈಕು ಪ್ರಕಾರವು ಯಾವುದಶೆ ಕಸಲದ ಯಾವುದೇ ಕವಿಯ ಒರೆಗಲ್ಲಾಗಬಹುದು” ಎಂದಿದ್ದರು

ಸ್ವತ ಹೈಕು ಕವಿ ರಮಜಾನ ಅವರೇ ಹೈಕು ಪ್ರಕಾರವನ್ನು ಸೂತ್ರಿಕರಿಸುವದು ಹೀಗೆ

” ಬದುಕಿನ ಹುಡುಕಾಟವೇ ಸಾಹಿತ್ಯದ ಜೀವದ್ರವ್ಯವಾಗಿದೆ ಮೂರು ಸಾಲುಗಳಲ್ಲಿ ಎಲ್ಲವನ್ನೂ ಹಿಡಿದಿಡಬಲ್ಲ ಹಾಯ್ಕುಗಳು ಇರುವೆಯ ಹೆಜ್ಹೆ ಸಪ್ಪಳವನ್ನೂ ಕೇಳಬಲ್ಲ ಸೂಕ್ಷ್ಮತೆ ಹಾಯ್ಕುಗಳಲ್ಕಿ ಕಾಣಬರುತ್ತದೆ”  ( ಶ್ರೀ ರಮಜಾನ ಹೆಬಸೂರ ಅವರ ಸಂಕಲನದಿಂದ ಈ ಮಾತುಗ಼ಳನ್ನು ತಗೆದುಕೊಂಡಿದ್ದೇನೆ.)

“ನಾವು ಈವರೆಗೆ ಚುಟುಕು ಕಾವ್ಯಕ್ಕೆ ಹಿಡಿದರೆ ಹಿಡಿ ತುಂಬ ಬಿಟ್ಟರೆ ಜಗ ತುಂಬ ಎಂಬ ಮಾತು ಬಳಸುತ್ತಿದ್ದೆವು .ಅದು ಹೈಕಿಗೆ ಹೆಚ್ಚು ಅನ್ವಯ.ಹೈಕು ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು.”

ಕನ್ನಡದಲ್ಲಿ ಎ‌ಕೆ.ರಾಮಾನುಜನ್ ಅವರಂತಹ ಹಿರಿಯರು ಹೈಕು ಬರೆದಿದ್ದರು‌. ನಂತರ ಎಚ್ .ಎಸ್. ಶಿವಪ್ರಕಾಶ್ ( ಮಾಗಿಪರ್ವ) ಚಙದ್ರಕಾಂತ ಕುಸನೂರ ( ಅನುವಾದಿತ ಹಾಯ್ಕುಗಳು) ಸಿ ರವಿಂದ್ರನಾಥ ( ಒಂದು ಹನಿ ಬೆಳಕು ,ಮೂರು ಸಾಕು ಮರ,ಮೊದಲಾದವು) ಡಾ.ಪ್ರಕಾಶ ಖಾಡೆ( ಕಣ್ಣುಗಳಿಗೆ ನೌನ ಅರ್ಥವಾಗುತ್ತದೆ) ಮೊದಲಾದವರು ಹೈಕು ಬರೆದಿದ್ದಾರೆ.ಕನ್ನಡದ ಹಿರಿಯ ಕವಿ

 ಶಿವಪ್ರಕಾಶರ–

ತಣ್ಣಗಾಗಿವೆ ಆಗಲೇ

ನದಿ ನೀರು ಮಾಗಿಯಲಿ

ಮಂಜಾಗುವ ಮೊದಕು ಬಾ ಮೀಯೋಣ

ಸಿ .ರವೀಂದ್ರನಾಥರ —

ಅವಳನ್ನು  ತಲುಪಲು

ದಾರಿಯಾದೆ

ಯಾರೋ ನಡೆದು ಹೋದರು

ರಮಜಾನ ಹೆಬಸೂರ-ರ —

ದೇವದೂತರೇ

ನಮ್ಮೂರಿಗೆ ಕಾಲಿಡಬೇಡಿ

ಇಲ್ಕಿ ಹೂವು ಅರಳುತ್ತಿವೆ

ಊರು ಯರಿಯುತ್ತಿದೆ

ಚಳಿ ಕಾಯಿಸಿಕೊಳ್ಳುವವರು

ಕಡಿಮೆಯೇನಿಲ್ಲ

ಡಾ.ಪ್ರಕಾಶ ಖಾಡೆಯವರ–

ಅಗುಳು ಹುಡುಕಿಕೊಂಡು

ಬಂದ ಕಾಗೆ

ಬಳಗ ಕಟ್ಟಿಕೊಂಡಿತು

ಮಗು‌ ಮಲಗಿತು

ಎಂದಳು ಲಾಲಿ ಹಾಡು

ಬದಲಿಸು ಎಂದೆ

ಬದುಕಿನ

 ಪದ್ಯದ ಹೆಸರೇ

ಬೇವು ಬೆಲ್ಲ

ಖಾಲಿಯಾಗದ

ಒರತೆ ಒಡನಿರುವ

ಕವಿತೆ

ಡಾ.ಯಾಕೊಳ್ಳಿಯವರ–

ಗುಡಿಸಲಿನ ಕಿರುದೀಪ

ಮರೆಯಾದ ಸೂರ್ಯನಿಗೆ

ಸಾಂತ್ವನ ಹೇಳಿದೆ

ಹತಾರಗಳು ಮೊಂಡಾಗಬೇಕು

ಮೊಗ್ಗಾಗಿ ಅರಳಿ

ಹೂವಾಗಬೇಕು

ಅವಳ ನಿರ್ಮಲ

ನಗುವಿಗೆ ನಾನದೆಷ್ಟು

ದಂಡ ತೆರಲಿ

ಬಿರುಕು ಬಿಟ್ಟ

ನೆಲ‌ಕಾದಿದೆ ಮಳೆ ಹನಿಗೂ

ಇಂಗದ ದಾಹ

ನೀನೆದುರು ಇದ್ದರೆ

ಒಂದಲ್ಲ

ಎರಡೆರಡು ನೀಲಾಂಜನ

ಇನ್ನೂ ಅನೇಕರ ಹೈಕುಗಳನ್ನು ನಾನು ಹೆಸರಿಸಬೇಕು.ಅವನ್ನು ಗಮನಿಸಲು ಇಲ್ಲಿ‌ಜಾಗ ಸಾಲುವದಿಲ್ಲ.ಹೀಗೆ ಕನ್ನಡದಲ್ಲಿ ಹೈಕು ತನ್ನದೇ ಆದ ಚಾಪು ಮೂಡಿಸುತ್ತ ಬೆಳೆಯುತ್ತಿದೆ.ಕನ್ಬಡ ಕಾವ್ಯ‌ಲೋಕದ ಹೊಸ ಕನ್ಯೆಯಾಗಿ‌ ಮಿಂಚುತ್ತಿದೆ

***********

ಡಾ.ವೈ.ಎಂ.ಯಾಕೊಳ್ಳಿ

One thought on “ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು

  1. ಗುಡಿಸಿಲಿನ ಕಿರುದೀಪ
    ಮರೆಯಾದ ಸೂರ್ಯನಿಗೆ
    ಸಾಂತ್ವನ ಹೇಳಿದೆ.
    – ತುಂಬಾ ಇಷ್ಟವಾಯಿತು

Leave a Reply

Back To Top