ಧರೆ ಹತ್ತಿ ಉರಿದೊಡೆ

ಲೇಖನ

ಧರೆ ಹತ್ತಿ ಉರಿದೊಡೆ

ಜಯಶ್ರೀ.ಜೆ.ಅಬ್ಬಿಗೇರಿ

Green flowers near decorative stones

ರಾತ್ರಿ ಹನ್ನೆರಡು ಹೊಡೆದರೂ ಹಾಡು ಹಗಲಿನಂತೆ ಕಿಕ್ಕಿರಿದು ಜನ ತುಂಬಿರುತ್ತಿದ್ದ ಬೀದಿಗಳೆಲ್ಲ ಬಿಕೋ ಎನ್ನುತ್ತಿವೆ. ಸಂಖ್ಯೆಗೆ ಸಿಗದಷ್ಟು ದೇಹಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಉರಿದು ಹೋಗುತ್ತಿವೆ.ಇದೊಂಥರ  ಮರದಲ್ಲಿನ ಹಣ್ಣು ಉದುರಿ ಬೀಳುವಂತೆ ಬೀಳುತ್ತಿವೆ. ಅಳಿದುಳಿದ ಕಾಯಿಗಳ ಹಣ್ಣುಗಳ ದುಃಖ ಅರಣ್ಯರೋಧನವಾಗಿದೆ. ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ.ಇಂಥದ್ದೊಂದು ದಿನ ಬರುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಜೀವನ ಹಿಡಿತಕ್ಕೆ ಸಿಗದಂತಾಗಿದೆ. ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿದೆ.ಬದುಕನ್ನು ಯಾವ ಕಡೆಯಿಂದ ನಿಯಂತ್ರಿಸಿದರೆ ಹಿಡಿತಕ್ಕೆ ಸಿಗಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು ನಾ ನೀ ಎನ್ನುವ ಅತಿರಥ ಮಹಾರಥರು, ಪಂಡಿತರು, ವಿದ್ವಾಂಸರು ಪ್ರಯತ್ನಿಸಿ ಸೋತು ಸುಣ್ಣವಾಗಿದ್ದಾರೆ. ಹೆಣಗಳ ಉರುಳುವಿಕೆ ಹೀಗೆ ಮಾಡಿದರೆ ನಿಲ್ಲಬಹುದು ಹಾಗೆ ಮಾಡಿದರೆ ನಿಲ್ಲಬಹುದು ಎಂದು ಲೆಕ್ಕ ಹಾಕುವುದೇ ಆಯಿತು. ಆದರೆ ಅದು ಯಾವವೂ ಪ್ರಯೋಜನಕ್ಕೆ ಬರುತ್ತಿಲ್ಲ. ಇದುವರೆಗೂ ವಿಶ್ವವು ಕೇಳರಿಯದ ಕಂಡರಿಯದ ದುಸ್ಥಿತಿಯಿದು. ಹೀಗಾಗಿ ಇದರ ನಿಗ್ರಹಕ್ಕೆ  ಓದಿದ ಯಾವ ಗ್ರಂಥದ ಜ್ಞಾನವೂ ಉಪಯೋಗಕ್ಕೆ ಬರುತ್ತಿಲ್ಲವೆಂದು ಕೆಲವು ಜ್ಞಾನಿಗಳು ಗೊಣಗುತ್ತಿದ್ದಾರೆ. ವಿಷಮ ಸ್ಥಿತಿಯನ್ನು ತಹಬದಿಗೆ ತರಲು ವೈದ್ಯರು, ನರ್ಸ್ಗಳು, ಸಂಪೂರ್ಣ ವೈದ್ಯಕೀಯ ಇಲಾಖೆ ವೀರ ಸೇನಾನಿಗಳಂತೆ ಜನರ ಜೀವ ಕಾಪಾಡಲು ತಮ್ಮ ಜೀವ ಒತ್ತೆ ಇಟ್ಟಿದ್ದಾರೆ. ಇವರೊಂದಿಗೆ ಹೃದಯವಂತರು ಮನೆ ಮಠ ಬಿಟ್ಟು ಟೊಂಕ ಕಟ್ಟಿ ನಿಂತಿದ್ದಾರೆ.

ಸ್ವೇಚ್ಛಚಾರದಿಂದ ಬೀಗುತ್ತಿದ್ದವರನ್ನು ಕೈ ಕಾಲು ಕಟ್ಟಿ ಮೂಲೆಯಲ್ಲಿ ಒಗೆದಂತಾಗಿದೆ. ನಾವೆಲ್ಲ ಪಂಜರದಲ್ಲಿನ ಗಿಳಿಗಳಂತಾಗಿದ್ದೇವೆ. ಅದೇ ಸೂರ್ಯ ಅದೇ ಚಂದ್ರ ಆದರೂ ಬದುಕಿನ ಚಂಡಮಾರುತದಿಂದ ಮನಸ್ಸು ಬಿಕ್ಕುತ್ತಿದೆ. ಮಂಗನಂತೆ ಹಾರಾಡುತ್ತಿದ್ದ ಮನಸ್ಸು ತಲೆ ಮೇಲೆ ಕೈ ಹೊತ್ತು ಕೂತಿದೆ. ಜಗವೇ ಮಸಣಭೂಮಿ ಎಂದೆನಿಸುತ್ತಿದೆ.ಇದೆಲ್ಲ ಮಾನಸಿಕ ಸ್ಥಿತಿ ಒಂದೆಡೆಯಾದರೆ,ಇನ್ನೊಂದೆಡೆ ಮಿಡಿಯುವ ಹೃದಯ ತನ್ನ ಕರುಣಾ ಮಿಡಿತವನ್ನು ಕಳೆದುಕೊಳ್ಳುತ್ತಿದೆ.ಮಿಡಿದರೂ ಅಸಹಾಯಕ ಸ್ಥಿತಿಯಲ್ಲಿದೆ. ಬಿಕ್ಕಳಿಸುವ ದೇಹಗಳ ಕಣ್ಣೊರೆಸುವವರಿಲ್ಲ. ಕಣ್ಣೊರೆಸುವ ಹೃದಯವಂತಿಕೆ ಇದ್ದರೂ ಧೈರ್ಯ ಬರುತ್ತಿಲ್ಲ. ಎಲ್ಲಿ ನನಗೂ ಸಾವು ಅಂಟಿಬಿಡುವುದೇನೋ ಎಂಬ ಭಯ ಹಿಂಜರಿಯುವಂತೆ ಮಾಡುತ್ತಿದೆ.

ಅಪ್ಪನನ್ನು ಕಳೆದುಕೊಂಡ ಮಕ್ಕಳ ರೋಧನ ಒಂದೆಡೆಯಾದರೆ, ಹೆತ್ತವ್ವನನ್ನು ಬೆಂಕಿ ಆಹುತಿ ತೆಗೆದುಕೊಂಡವರ ಗೋಳು ಮುಗಿಲು ಮುಟ್ಟುತ್ತಿದೆ. ಇನ್ನು ಕಾಣುವ ದೇವರೀರ್ವವರು ಮುನಿಸಿಕೊಂಡಂತೆ ಹೇಳದೇ ಹೋದವರ ಗೋಳಿಗೆ ಸಾಂತ್ವನ ಹೇಳಲು ಬಾಯಿ ಬರುತ್ತಿಲ್ಲ. ಪುಟ್ಟ ಪುಟ್ಟ ಮಕ್ಕಳು ಅನಾಥರಾಗಿ ದಿಕ್ಕು ಕಾಣದೇ ಹಲಬುತ್ತಿದ್ದಾರೆ.ಹಸಿವಿನಿಂದ ರೋಧಿಸುವ ಮಕ್ಕಳ ದನಿ ಕೇಳುವ ಕಿವಿಗಳು ಕಮ್ಮಿಯಾಗಿವೆ. ವಿಧವಿಧವಾದ ರುಚಿಯಾದ ಹಣ್ಣುಗಳು, ನಗುವ ಹೂಗಳು, ಮನೋಸ್ಥೈರ್ಯ ಹೆಚ್ಚಿಸುತ್ತಿದ್ದ  ಪುಸ್ತಕಗಳು ಲಾಟಿಯ ರುಚಿ  ನೆನೆದು ಕೊಳೆಯುತ್ತಿವೆ ಬಾಡುತ್ತಿವೆ ಪುಟಗಳನ್ನು ಭದ್ರವಾಗಿ ಮುಚ್ಚಿಕೊಂಡು ಕೂತಿವೆ.ವ್ಯಾಪಾರವೆಲ್ಲ ಕುಸಿದಿದೆ. ಹೀಗಾಗಿ ಜೀವನ ಜರ್ಝರಿತವಾಗುತ್ತಿದೆ. ಯಾರ ಪಾಳೆ ಯಾವಾಗ ಅಂತ ಗೊತ್ತಿಲ್ಲ. ಜೀವ ಪಕ್ಷಿ ಹಾರುವುದಕ್ಕೆ ಕ್ಷಣಗಣನೆ ನಡೆದಿದೆ. ನಿನ್ನೆ ನಮ್ಮೊಂದಿಗಿದ್ದವರು ಇಂದಿಲ್ಲ. ಇಂದು ಇರುವವರು ನಾಳೆ ಇರುವರೋ ಇಲ್ಲವೋ ಗೊತ್ತಿಲ್ಲ. ಮೃತ್ಯುಲೋಕವೇ ಧರೆಗಿಳಿದಂತಾಗಿದೆ. ದಿನವೂ ಸಾವುಗಳ ಲೆಕ್ಕ ಇಡಲು ಯಮ ಮತ್ತು ಚಿತ್ರಗುಪ್ತರು ಹರಸಾಹಸ ಪಡುವಂತಾಗಿದೆ. ಭೂ ಲೋಕದ ಜನರನ್ನೆಲ್ಲ ಮೃತ್ಯುಲೋಕಕ್ಕೆ ಹಂತ ಹಂತವಾಗಿ ಸಾಗಿಸುವ ಬೃಹತ್ ಆಂದೋಲನವೇನಾದರೂ ನಡೆದಿದೆಯೇನೋ ಎನ್ನುವ ಸಂದೇಹ ಹೆಚ್ಚುತ್ತಿದೆ. ಇನ್ನೂ ಕೆಲ ವರ್ಷ ನಮ್ಮ ಜೊತೆ ಇದ್ದಾರು. ಸಿಹಿ ಕಹಿಗಳಲ್ಲಿ ನಮ್ಮೊಡನಿದ್ದು ಮುನ್ನಡೆದಾರು ಎನ್ನುವಂತವರು ಹೇಳದೇ ಕೇಳದೇ ಹೋಗಿಯೇ ಬಿಟ್ಟರು.ನೂರು ವರ್ಷ ಬದುಕಲಿಲ್ಲವಾದರೂ ಇಷ್ಟು ವರ್ಷಗಳ ದೀರ್ಘಾಯುóಷಿಯಾದರಲ್ಲ ಅದೇ ನಮ್ಮ ಭಾಗ್ಯ.ವೆಂದು ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಅಗಲಿ ಹೋದ ಜೀವಗಳ ಜೊತೆ ಕಳೆದ ಸವಿನೆನಪುಗಳ ನೆನೆದು ಕಣ್ಣೀರಿಡುವುದೊಂದೇ ನಮ್ಮ ಕೈಯಲ್ಲಿರೋದು ಅಂತ ಸಂಕಟ ಪಡುತ್ತಿದ್ದೇವೆ.

ಬಾಳಿನ ದೋಣಿ ಯಾವಾಗ ಮುಗುಚಿ ಬೀಳುವುದೋ ಎಂಬ ಭಯ ಎಲ್ಲೆಲ್ಲೂ ಆವರಿಸಿದೆ. ದೋಣಿ ಸಾಗಿದರೂ ಸುರಕ್ಷಿತವಾಗಿ ಮುನ್ನಡೆಯುವುದೋ ಇಲ್ಲವೋ ಎನ್ನುವ ಆತಂತ ಮನದಲ್ಲಿ ಮನೆ ಮಾಡುತ್ತಿದೆ.ಮೂಗಿನಲ್ಲಿ ನುಸುಳುವ ಗಾಳಿ ಸಿಗದೆ ಪ್ರಾಣವನ್ನು ಗಾಳಿಪಟದ ಹಾಗೆ ಹರಿದು ಹಾಕುತ್ತಿದೆ. ಮುಗಿಲೆತ್ತರಕ್ಕೆ ಹೆಣದ ರಾಶಿ ಸುಡುವವರೂ ದಿಕ್ಕಿಲ್ಲ. ಈ ದೃಶ್ಯ ಸುಳಿವ ಕೀಟಗಳನ್ನು ಬಾಚಿಕೊಳ್ಳುವ ಓತಿಕ್ಯಾತನ ರೀತಿ ನೆನಪಿಸುತ್ತಿದೆ. ಅಳಿಸಲಾಗದ ಕ್ರೂರ ಹಣೆ ಬರಹದಂತಾಗಿದೆ. ಅಂಗೈ ರೇಖೆಗಳ ನುಡಿ ಎಲ್ಲಿ ಸವೆದು ಹೋಯಿತೋ? ಸಾವು ಇಡಿಯಾಗಿ ಎಲ್ಲರನ್ನೂ ಒಮ್ಮೆಲೇ ಹೊಸೆದು ಹಾಕುತ್ತದೆ ಎಂದು ಬರೆಯಲಾಗಿತ್ತೋ ಏನೋ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನಮ್ಮ ಮುಖಗಳಿಂದ ಸೆರಗು ಸರಿಸಿದ ಸಮಯವಿದು. ಬದುಕಿಗೆ ಮುಚ್ಚಿದ್ದ ರೇಷಿಮೆಯ ಪರದೆ ತೆರೆದ ಹೊತ್ತಿದು. ಬದುಕಿನ ಮೊನಚನ್ನು ಆವಾಹಿಸಿಕೊಳ್ಳಲು ಸಾವು ಹವಣಿಸುವ ಹೊತ್ತಿನಲ್ಲಿ ಉಚ್ಛಸ್ವರದ ಬೀಗುವಿಕೆ ಉಚಿತವಾಗದು. ಇದೆಲ್ಲ ಗೊತ್ತಿದ್ದರೂ ಇನ್ನೂ ಬೀಗುವುದನ್ನು ಬಿಟ್ಟಿಲ್ಲ. ರಕ್ಷಣೆಗಾಗಿ ನೆಟ್ಟ ಕಂಬಗಳೆಲ್ಲ ಕೆಸರಿನಲ್ಲಿ ಸಿಕ್ಕಿಕೊಂಡಿವೆ. ಇತ್ತಿಂದತ್ತ ಅತ್ತಿಂದಿತ್ತ ನಿಧಾನವಾಗಿ ಸಾವಿನ ಕತ್ತಿ ತೂಗುತ್ತಿದ್ದ ಯಮ ಈಗ ಕೋಮಲ ಕತ್ತುಗಳು ಮಾಗಿದ ಜೀವಗಳೆಂದು ನೋಡದೇ  ಹಿಸುಕುತ್ತಿದ್ದಾನೆ. ಇಷ್ಟೆಲ್ಲ ನರಕ ಸದೃಶ ವಾತಾವರಣ ಹೆಚ್ಚುತ್ತಿರುವಾಗ ಕಾಯುವ ದೇವರು ಎಲ್ಲಿರಬಹುದು? ನಾನೇ ಬುದ್ಧಿವಂತ  ಎನ್ನುವ ಮಾನವನ ಕೈಯಲ್ಲಿ ಏನೂ ಮಾಡಲು ಆಗುತ್ತಿಲ್ಲವಲ್ಲ ಏಕೆ? ಎನ್ನುವ ಪ್ರಶ್ನೆಗಳು ಭೂತಾಕಾರವಾಗಿ ಪೀಡಿಸುತ್ತಿವೆ. ಹಾರುವ ಜೀವಗಳೆಲ್ಲ ನೋವಿನಿಂದ ಬೇಡಿಕೊಳ್ಳುತ್ತಿವೆ. ಇದೀಗ ಕಾರಂತರ ‘ಬಾಳ್ವೆಯೇ ಬೆಳಕು’ ವೈಚಾರಿಕ ಕೃತಿಯು ನೆನಪಿಗೆ ಬರುತ್ತಿದೆ. ಅದು ಜೀವನ ಸ್ವೀಕಾರವನ್ನು ದೃಢವಾಗಿ ಪ್ರತಿಪಾದಿಸುತ್ತದೆ.

ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದೊಡೆ ನಿಲಲುಬಾರದು

ಏರಿ ನೀರೊಂಬೊಡೆ ಬೇಲಿ ಕೆಯ್ಯ ಮೇವಡೆ

ನಾರಿ ತನ್ನ ಮನೆಯಲ್ಲಿ ಕಳುವಡೆ

ತಾಯಿ ಮೊಲೆಹಾಲು ನಂಜಾಗಿ ಕೊಲುವಡೆ

ಇನ್ನಾರಿಗೆ ದೂರುವೆ ಕೂಡಲಸಂಗಮದೇವ

ಪ್ರಸ್ತುತ ಸನ್ನಿವೇಶಕ್ಕೆ ಈ ವಚನ ಕನ್ನಡಿ ಹಿಡಿದಂತಿದೆ. ಒಲೆಯಲ್ಲಿ ಹತ್ತಿ ಉರಿಯುವ ಉರಿಯು ಇದ್ದಕ್ಕಿದ್ದಂತೆಯೇ ಧಗ್ ಎಂದು ಹತ್ತಿಕೊಂಡು ತನ್ನ ಕೆನ್ನಾಲಿಗೆಯನ್ನು ಸುತ್ತಮುತ್ತ ಚಾಚುತ್ತ ಹಬ್ಬತೊಡಗಿದಾಗ ಒಲೆಯ ಉರಿಯ ಜಳದಿಂದ ದೂರ ಸರಿದು ತಪ್ಪಿಸಿಕೊಳ್ಳಬಹುದು. ಆದರೆ ಇಡೀ ಜಗತ್ತೇ ಹತ್ತಿಕೊಂಡು ಉರಿಯತೊಡಗಿದರೆ ಬೆಂಕಿಯ ತಾಪದಿಂದ ಪಾರಾಗಲು ಹೋಗುವುದಾದರೂ ಎಲ್ಲಿಗೆ? ವಿಧಿಯಿಲ್ಲದೇ ಉರಿಗೆ ಬಿದ್ದು ಸುಟ್ಟು ಕರಕಲಾಗಬೇಕಾಗುತ್ತದೆ. ವ್ಯವಸಾಯಕ್ಕೆ ಬಳಸಲೆಂದು ಹರಿಯುತ್ತಿರುವ ನೀರನ್ನು ಒಂದೆಡೆ ನಿಲ್ಲಿಸಲೆಂದು ಕಟ್ಟಿರುವ ಏರಿಯೇ ನೀರೆಲ್ಲವನ್ನು ಹೀರಿಕೊಂಡರೆ ಏನು ಗತಿ? ಬೆಳೆದ ಬೆಳೆಯನ್ನು ಕಾಪಾಡುವುದಕ್ಕೆ ಹೊಲದ ಸುತ್ತ ಹಾಕಿದ ಬೇಲಿಯೇ ಬೆಳೆಯನ್ನು ಮೇಯ್ದರೆ ಮಾಡುವುದಾದರೂ ಏನು? ಮನೆಯನ್ನು ಕಾಯಬೇಕಾಗಿರುವ ಮನೆಯೊಡತಿಯೇ ಮನೆಯ ವಸ್ತುಗಳನ್ನು ಕದ್ದರೆ? ಮಗುವನ್ನು ರಕ್ಷಿಸುವ ಎದೆಹಾಲೇ ಮಗುವಿನ ಸಾವಿಗೆ ಕಾರಣವಾದರೆ ಏನು ಗತಿ? ಇಂತಹ ವಿವಿಧ ರೂಪಕಗಳ ಮೂಲಕ ಸಮಾನತೆಯ ಹರಿಕಾರ ಬಸವಣ್ಣ ಸಾಮಾಜಿಕ ಷಡ್ಯಂತ್ರಗಳಿಗೆ ಬಲಿಯಾಗಿ ತೊಳಲಾಡುವ ವ್ಯಕ್ತಿಯ ಮೂಕವೇದನೆಯನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾನೆ.  ವ್ಯಕ್ತಿ ತನ್ನನ್ನು ರಕ್ಷಿಸಿಕೊಳ್ಳುವುದನ್ನು ಬಿಟ್ಟು, ತನ್ನನ್ನು ತಾನೇ ನಾಶ ಮಾಡಿಕೊಳ್ಳಲು ಹೊರಟಾಗ ಅದನ್ನು  ತಡೆಗಟ್ಟಲು ಯಾರಿಂದಲೂ ಆಗುವುದಿಲ್ಲವೆಂಬ ವಾಸ್ತವ ಸತ್ಯವನ್ನು ರೂಪಕಗಳ ಮೂಲಕ ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ.

ಕಳಚಿ ಬಿದ್ದಿರುವುದನ್ನೆಲ್ಲ ಬದುಕಿನ ಕುಲುಮೆಯಲ್ಲಿ ಮತ್ತೆ ಬೆಸೆಯಬೇಕಿದೆ. ದೇಶ ದೇಶಗಳ ನಡುವೆ ಸೊದರತ್ವದ ಪ್ರೀತಿ ಪ್ರಜ್ವಲಿಸಬೇಕಿದೆ. ಹೃದಯ ಹೃದಯಗಳ ಬೆಸೆಯಬೇಕಿದೆ. ಚಂದ್ರ ಚೂರಾಗುವ ಮುನ್ನ, ನಕ್ಷತ್ರಗಳು ಕರಗುವ ಮುನ್ನ ಪ್ರಾಣಿಗಳಲ್ಲೇ ಬುದ್ಧಿವಂತ ಪ್ರಾಣಿ ಎಂದು ಜಂಭ ಪಡುವ ನಾವೆಲ್ಲ ಪಾಠ ಕಲಿಯಲೇಬೇಕಿದೆ. ಆಗ ಬದುಕೆಂಬ ಗುಲಾಬಿ ಹೂ ಪಕಳೆಗಳ ಹರವುತ್ತ ಖುಷಿಯ ಸುಗಂಧ ಸೂಸುತ್ತದೆ.

=============================================================

5 thoughts on “ಧರೆ ಹತ್ತಿ ಉರಿದೊಡೆ

  1. ಭುಮಿಯೆ ಬಾಯಿ ಬಿಟ್ಟು ಆಫೋಷನ ತೆಗೆದುಕೊಂಡು ನಲಿಯುತ್ತಿದೆ ಎಂದೆನಿಸುತ್ತದೆ ವಾಸ್ತವ ಜಗತ್ತಿನ ಚಿತ್ರಣ

Leave a Reply

Back To Top