ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—24

ಆತ್ಮಾನುಸಂಧಾನ

ತಪ್ಪಿದ ವಿದೇಶ ಪ್ರವಾಸ ಯೋಗ :

ಮಹಾಬಲೇಶ್ವರನ ದರ್ಶನ ಭಾಗ್ಯ

Colored powder explosion on black background

ನಾನು ಕಾಲೇಜಿನ ದ್ವೀತಿಯ ಪದವಿ ತರಗತಿಯಲ್ಲಿರುವಾಗ ಗೋಕರ್ಣದ ಶಿವರಾತ್ರಿಯ ಪ್ರವಾಸದ ಅನುಭವ ಒಂದು ಮರೆಯಲಾಗದ ಚಿರ ನೆನಪು. ನಮ್ಮಲ್ಲಿ “ಪರ ಊರಿನವರೆಲ್ಲ ಶಿವರಾತ್ರಿಗೆಂದು ಗೋಕರ್ಣಕ್ಕೆ ಬಂದರೆ ಗೋಕರ್ಣದವರು ಗಾಳಕ್ಕೆ ಹೋದ್ರಂತೆ” ಎಂಬ ಜನಪ್ರಿಯ ಗಾದೆಯೊಂದಿದೆ. ನಮ್ಮೂರು ಗೋಕರ್ಣದಿಂದ ಆರೇಳು ಕಿಲೋಮೀಟರ್ ಅಂತರದಲ್ಲಿದ್ದರೂ ನಾವು ಶಿವರಾತ್ರಿಗೆಂದು ಗೋಕರ್ಣಕ್ಕೆ ಹೋದದ್ದು ಬಹಳ ಕಡಿಮೆ. ಮಡಿವಂತಿಕೆಯ ಕಾರಣದಿಂದ ನಮ್ಮ ಜಾತಿಯ ಜನ ಶಿವರಾತ್ರಿಯ ಉಪವಾಸಕ್ಕಾಗಲೀ, ರಥೋತ್ಸವಕ್ಕಾಗಲೀ ಹೋಗುವ ಪರಿಪಾಠವಿರಲಿಲ್ಲ. ಶೂದ್ರ ಸಮುದಾಯದವರೆಲ್ಲ ರಥೋತ್ಸವದ ಮರುದಿನ (ಓಕುಳಿಯಂದು) ಜಾತ್ರೆಗೆ ಬರುವುದು ಸಂಪ್ರದಾಯವಾಗಿತ್ತು. ಈ ನಿರ್ಬಂಧವನ್ನು ವಿಧಿಸಿದವರು ಯಾರೋ ಗೊತ್ತಿಲ್ಲ. ಅಥವಾ ಶೂದ್ರ ಸಮುದಾಯದವರು ತಮಗೆ ತಾವೇ ಒಪ್ಪಿಕೊಂಡ ನಿಯಮವಾಗಿರಲೂ ಬಹುದು.

ಆ ವರ್ಷ ರಥೋತ್ಸವದ ಮರುದಿನದ ಓಕುಳಿಯಂದು ನಮ್ಮವರ ಜತೆ ನಮ್ಮ ಕುಟುಂಬವು ಜಾತ್ರೆಗೆ ಬಂದಾಗಿತ್ತು. ನಾವೆಲ್ಲ ಹೊಸ ಬಟ್ಟೆಯಲ್ಲಿ ಸಂಭ್ರಮದಿಂದ ಗೋಕರ್ಣದ ರಥಬೀದಿಯಲ್ಲಿ ಓಡಾಡಿದೆವು. ಜಾತ್ರೆಗೆ ಬಂದ ಟೆಂಟ್ ಸ್ಟುಡಿಯೋ ಒಂದರಲ್ಲಿ ನಮ್ಮ ಕುಟುಂಬದ ಗ್ರೂಪ್ ಫೋಟೋ ತೆಗೆಸಿಕೊಂಡಾಗಲಂತೂ ನಮ್ಮ ಆನಂದಕ್ಕೆ ಮೇರೆಯೇ ಇರಲಿಲ್ಲ. ಆದರೆ ಹಣ್ಣು ಕಾಯಿ ಖರೀದಿಸಿ ದೇವಸ್ಥಾನಕ್ಕೆ ಬಂದಾಗ ಮಾತ್ರ ನಮಗೆಲ್ಲ ದೊಡ್ಡ ಆಘಾತವಾಯಿತು.

ದೇವಾಲಯದ ಪ್ರವೇಶದ್ವಾರದಲ್ಲಿ ನಮ್ಮನ್ನು ತಡೆದು ನಿಲ್ಲಿಸಲಾಯಿತು. ಬಾಗಿಲಲ್ಲಿ ನಿಂತ ಭಟ್ಟರು ನಮ್ಮ ಹಣ್ಣು ಕಾಯಿ ದಕ್ಷಿಣೆಯನ್ನೆಲ್ಲ ಅಲ್ಲಿಯೇ ತಮಗೊಪ್ಪಿಸಬೇಕೆಂದು ತಾಕೀತು ಮಾಡಿದರು. ಶೂದ್ರ ಸಮುದಾಯಕ್ಕೆ ಸೇರಿದ ನಮಗೆ ದೇವಾಲಯ ಪ್ರವೇಶ ನಿಷಿದ್ಧವೆಂದು ತಿಳಿಸಿದರು. ನಮಗೆಲ್ಲ ಬೀದಿಯಲ್ಲಿ ನಿಲ್ಲಿಸಿ ಮಾನ ಕಳೆದಂತೆ ಸಂಕಟವಾಯಿತು. ನಾವು ನಮ್ಮ ಬಾಲ್ಯದ ದಿನಗಳಲ್ಲಿ ಬನವಾಸಿಯಲ್ಲಿರುವಾಗ ಗರ್ಭಗುಡಿಯೊಂದನ್ನುಳಿದು ಮಧುಕೇಶ್ವರ ದೇವಾಲಯದ ಇಂಚು ಇಂಚಿನಲ್ಲೂ ಓಡಾಡಿದ್ದೇವೆ. ಅಲ್ಲಿ ಯಾರೂ ಮೈಲಿಗೆಯೆಂದು ನಮ್ಮನ್ನು ನಿರ್ಬಂಧಿಸಲಿಲ್ಲ. ಅದೇ ಮಧುಕೇಶ್ವರ ಇಲ್ಲಿ ಮಹಾಬಲೇಶ್ವರನಾಗಿದ್ದಾನೆ. ಈತನಿಗೆ ಮಾತ್ರ ನಮ್ಮ ಪ್ರವೇಶದಿಂದ ಮೈಲಿಗೆಯಾಗುತ್ತದೆ ಅಂದರೆ ಹೇಗೆ? ಆಲೋಚನೆಗೆ ಬಿದ್ದೆವು. ನಮ್ಮ ತಂದೆಯವರು ಮೊದಲು ದೈನ್ಯದಿಂದ ವಿನಂತಿಸಿ ನೋಡಿದರು. ಬ್ರಾಹ್ಮಣರು ಒಪ್ಪದಿದ್ದಾಗ ಧ್ವನಿಯೇರಿಸಿ ಪ್ರತಿಭಟಿಸಿದರು. ಒಂದೆರಡು ನಿಮಿಷ ವಾದ ವಿವಾದಗಳು ನಡೆಯುವಾಗ ಬ್ರಾಹ್ಮಣರ ಗುಂಪು ದೊಡ್ಡದಾಯಿತೇ ವಿನಹ ನಮ್ಮ ಬೆಂಬಲಕ್ಕೆ ಯಾರೂ ಇರಲಿಲ್ಲ. ತಂದೆಯವರಂತೂ ನಾಲ್ಕು ಜನಕ್ಕೆ ಪಾಠ ಹೇಳುವ ಶಿಕ್ಷಕರು. ಅಂಥವರಿಗೇ ಅಸ್ಪೃಶ್ಯತೆಯ ಕಾರಣದಿಂದಾದ ಅವಮಾನ ಬಹುದೊಡ್ಡ ಶಾಕ್ ನೀಡಿರಬೇಕು. ಸದಾ ಶಾಂತ ಚಿತ್ತರಾಗಿಯೇ ಇರುತ್ತಿದ್ದ ಅವರ ಉಗ್ರ ರೂಪವನ್ನು ನಾನು ಮಹಾಬಲೇಶ್ವರ ಮಂದಿರದ ದ್ವಾರದಲ್ಲಿ ಮೊದಲ ಬಾರಿಗೆ ನೋಡಿದೆ. ಕೋಪದಿಂದ ಕಂಪಿಸುತ್ತಿದ್ದ ಅವರು ದೇವರಿಗೆ ಹಣ್ಣುಕಾಯಿ ಮಾಡಿಸದೆ ನಮ್ಮನ್ನೆಲ್ಲ ಸಮುದ್ರ ತೀರಕ್ಕೆ ಕರೆದೊಯ್ದರು. ಸ್ವತಃ ತಾವೇ ಮಳಲಿನಲ್ಲಿ ಲಿಂಗವೊಂದನ್ನು ನಿರ್ಮಿಸಿದರು. (ಶಾಲಾ ಮಕ್ಕಳ ಸರಸ್ವತಿ ಪೂಜೆಗೆ ಸುಂದರ ಮಣ್ಣಿನ ಮೂರ್ತಿಗಳನ್ನು ಸಿದ್ಧಪಡಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿತ್ತು) ತಾವೇ ಪೂಜೆ ಮಾಡಿ ಹಣ್ಣುಕಾಯಿ ನೈವೇದ್ಯ ನೀಡಿ ನಮಗೆಲ್ಲ ಪ್ರಸಾದ ಹಂಚಿದರು. ನಮಗೆಲ್ಲ ಎಂಥ ಸಂತೃಪ್ತಿಯಾಯಿತೆಂದರೆ ಅರ್ಧ ಗಂಟೆಯ ಹಿಂದೆ ನಡೆದ ಕಹಿಪ್ರಸಂಗವನ್ನು ನಾವೆಲ್ಲ ಮರೆತು ಮೊದಲಿನಂತೆ ಉತ್ಸಾಹದಿಂದ ತಿರುಗಾಡಿದೆವು.

ಈಗ ಸಾಮಾಜಿಕ ವ್ಯವಸ್ಥೆ ಬದಲಾಗಿದೆ. ಎಲ್ಲ ದೇವಾಲಯಗಳಲ್ಲೂ ಶೂದ್ರರಿಗೂ ಮುಕ್ತ ಪ್ರವೇಶವಕಾಶವಿದೆ. ಆದರೆ ನಾವು ಈಗಲೂ ಶಿವರಾತ್ರಿಯ ಆಚರಣೆಯನ್ನು ಸಮುದ್ರತೀರದಲ್ಲಿಯೇ ಆಚರಿಸಿ ಸಂತೋಷ ಪಡುತ್ತೇವೆ. ಏಕೆಂದರೆ ನಮ್ಮ ತಂದೆಯವರು ನಮಗೆ ಹೇಳಿಕೊಟ್ಟ ಮುಖ್ಯ ಪಾಠಗಳಲ್ಲಿ ಇದೂ ಒಂದೆಂಬ ವಿಶ್ವಾಸ ನಮ್ಮದು.

ನಾವು ಕಾಲೇಜಿನಲ್ಲಿ ಓದುತ್ತಿರುವಾಗ ಬೇಲೇಕೇರಿ ಬಂದರಿನಲ್ಲಿ ಅದಿರು ತುಂಬಲು ಬಂದ ವಿದೇಶೀ ಹಡಗೊಂದನ್ನು (ಯುಗೋಸ್ಲಾವಿಯಾ ದೇಶದ್ದೆಂಬ ನೆನಪು) ನೋಡಲು ನಿರ್ಧರಿಸಿದೆವು. ನಮ್ಮ ತರಗತಿಯಲ್ಲೇ ಓದುತ್ತಿರುವ ನಮ್ಮೂರಿನವರೇ ಆದ ನಾರಾಯಣ ಹೊನ್ನಯ್ಯ ಗಾಂವಕರ ಕಾಲೇಜಿನಲ್ಲಿ ಓದುತ್ತಿರುವಾಗಲೇ ಮಧ್ಯಾಹ್ನದ ವೇಳೆ ಬೇಲೇಕೇರಿಯಲ್ಲಿ ಅದಿರು ರಫ್ತು ಉದ್ಯಮದಲ್ಲಿ ತೊಡಗಿದ ಕಂಪನಿ ಯೊಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದ. ಅವನ ಪ್ರಭಾವವನ್ನು ಬಳಸಿಕೊಂಡು ನಾವು ವಿದೇಶೀ ಹಡಗನ್ನು ನೋಡುವ ಯೋಜನೆ ಹಾಕಿಕೊಂಡೆವು.

ಒಂದು ಮಧ್ಯಾಹ್ನ ಕಾಲೇಜು ಮುಗಿಯುತ್ತಿದ್ದಂತೆ ಗಂಗಾವಳಿ ನದಿಯಾಚೆಯಿಂದ ಕಾಲೇಜಿಗೆ ಬರುತ್ತಿದ್ದ ಹುಡುಗರೆಲ್ಲಾ ಬೇಲೇಕೇರಿಯ ಬಸ್ಸು ಹತ್ತಿದೆವು. ನಮ್ಮ ಸ್ನೇಹಿತ ನಾರಾಯಣ ಗಾಂವಕರ್ ಅದಿರು ತುಂಬಿ ಹಡಗಿಗೆ ಸಾಗಿಸುವ ಬಾರ್ಜ್ನಲ್ಲಿ ನಮಗೆ ಪ್ರಯಾಣ ವ್ಯವಸ್ಥೆ ಮಾಡಿದ್ದ.

ಬಾರ್ಜಿನಲ್ಲಿ ನಿಂತು ಆರೆಂಟು ಕಿಲೋಮೀಟರ್ ಅಂತರದಲ್ಲಿ ನಿಂತ ಹಡಗು ತಲುಪಬೇಕು. ಎಲ್ಲರಿಗೂ ಸಮುದ್ರಯಾನದ ಮೊದಲ ಅನುಭವ. ಭಯಾನಕವಾದ ತೆರೆಗಳ ಮೇಲೆ ಹೊಯ್ದಾಡುತ್ತ ಬಾರ್ಜ್ ಮುಂದುವರಿದಾಗ ನಮ್ಮಲ್ಲನೇಕರಿಗೆ ತಲೆಸುತ್ತುವುದು, ಹೊಟ್ಟೆ ತೊಳಸಿ ವಾಂತಿ ಬಂದಂತಾಗುವುದು ಇತ್ಯಾದಿ ತಾಪತ್ರಯಗಳಾದವು. ವಿದೇಶೀ ಹಡಗು ನೋಡಬೇಕೆಂಬ ಮಹದಾಸೆ ಈ ಎಲ್ಲ ಸಂಕಟಗಳನ್ನು ಮರೆಸಿಹಾಕಿತು. ಕೊನೆಗೂ ಬ್ರಹತ್ ಗಾತ್ರದ ಹಡಗು ಸಮೀಪಿಸಿ ನಮ್ಮ ಗುರಿ ತಲುಪಿದೆವು.

ಒಂದು ಪುಟ್ಟ ದ್ವೀಪವೇ ನಮ್ಮ ಮುಂದೆ ನಿಂತಂತೆ ಕಾಣುವ ದೊಡ್ಡ ಹಡಗು. ಬಾರ್ಜ್ನಿಂದ ಕೊರಳೆತ್ತಿ ನೋಡಿದರೆ ಆಕಾಶದೆತ್ತರವಾಗಿ ಕಾಣಿಸುತ್ತಿತ್ತು. ಮೇಲಿನಿಂದ ಕೆಳಗೆ ಬಾರ್ಜ್ವರೆಗೆ ಇಳಿಬಿಟ್ಟ ಹಗ್ಗದ ಏಣಿಯನ್ನು ಆಧರಿಸಿ ಮೇಲಕ್ಕೇರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಬೀಳುವುದು ಸಮುದ್ರಕ್ಕೇ.

ನಾನು ಯಾಕಾದರೂ ಬಂದೆನೋ ಅನ್ನಿಸಿತು. ಹಗ್ಗದ ಏಣಿ ಹಿಡಿದು ಹತ್ತುವುದು ನನಗೆ ಸಾಧ್ಯವೇ ಆಗದ ಮಾತು. ಹಾಗೆಂದು ಬಾರ್ಜಿನಲೇ ಉಳಿದು ಬಿಟ್ಟರೆ ಹಡಗು ವೀಕ್ಷಣೆಯ ಸದವಕಾಶ ಕೊನೆಯ ಗಳಿಗೆಯಲ್ಲಿ ತಪ್ಪಿ ಹೋಗುತ್ತದೆ. ಗೆಳೆಯರ ಮುಂದೆ ಅವಮಾನ ಬೇರೆ ಏನಾದರಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಹಗ್ಗದ ಏಣಿಗೆ ಕೈ ಹಾಕಿದೆ. ಕೆಳಗೆ ನೋಡಿದರೆ ತಲೆಸುತ್ತಿ ಬಂದು ಬಿದ್ದೇ ಹೋಗಬಹುದು ಮೇಲೆ ನೋಡುವುದಕ್ಕೂ ಧೈರ್ಯ ಸಾಲದು ಇಂಚು ಇಂಚಾಗಿ ಹಿಡಿಯುವ ಹಗ್ಗವನ್ನೇ ನೋಡುತ್ತಾ ಕೊನೆಗೂ ಮೇಲೇರಿ ನಿಂತೆ.

ಎಲ್ಲರೂ ಹಡಗು ಏರಿದ ಬಳಿಕ ಒಟ್ಟಾಗಿ ಮುನ್ನುಗ್ಗಿದೆವು. ದಾರಿತಪ್ಪಿ ಹಡಗಿನ ಅಡಿಗೆ ಕೋಣೆಗೆ ಬಂದಿದ್ದೆವು. ಗಾಬರಿಗೊಂಡ ಹಡಗಿನವರು ಮೀನು ಮಾಂಸಗಳನ್ನು ಕತ್ತರಿಸುತ್ತಿದ್ದ ಕತ್ತಿಗಳನ್ನೇ ಝಳಪಿಸುತ್ತ ನಮಗೆ ಗೊತ್ತಿಲ್ಲದ ಯಾವುದೋ ಭಾಷೆಯಲ್ಲಿ ಬಯ್ಯುತ್ತಾ ಹಚಾ ಹಚಾ ಎಂದು ಹೊರಗಟ್ಟಿದರು. ಕೆಂಪು ಬಣ್ಣದ ದಡೂತಿ ಅಸಾಮಿಗಳನ್ನು ನೋಡಿಯೇ ಕಂಗೆಟ್ಟ ನಾವು ದಿಕ್ಕಾಪಾಲಾಗಿ ಓಡಿದೆವು.

ನಾನೊಬ್ಬನೇ ಪ್ರತ್ಯೇಕಗೊಂಡು ಚಿಕ್ಕ ಓಣಿಯಂತೆ ಕಾಣುವ ತಿರುವಿನಲ್ಲಿ ಓಡಿದೆ. ಇಕ್ಕೆಲದಲ್ಲಿ ಬಹುಶಃ ಅಧಿಕಾರಿ ವರ್ಗದವರ ವಸತಿ ಕೋಣೆಗಳಿದ್ದಿರಬೇಕು. ಮುಂದೆ ಸಾಗಿದೆ. ಒಂದು ಕೊಠಡಿಯ ಬಾಗಿಲು ತೆರೆದೇ ಇತ್ತು. ಕುತೂಹಲದಿಂದ ಒಳಗೆ ಇಣುಕಿದೆ. ಯಾರೂ ಇರಲಿಲ್ಲ. ಒಳ ಹೊಕ್ಕೆ ಥಟ್ಟನೆ ಬಾಗಿಲು ಹಾಕಿಕೊಂಡಿತು. ಮತ್ತೆ ತೆರೆಯಲು ಯತ್ನಿಸಿದೆ ಸಾಧ್ಯವಾಗಲೇ ಇಲ್ಲ.

ಆರು-ಎಂಟು ಅಡಿ ಅಳತೆಯ ಆ ಚಿಕ್ಕ ಕೊಠಡಿಯಲ್ಲಿ ನಾನು ಕಳೆದ ಹತ್ತು ಹದಿನೈದು ನಿಮಿಷಗಳು ನನ್ನ ಬದುಕಿನ ಅತ್ಯಂತ ಬೀಭತ್ವ ಕ್ಷಣಗಳಾಗಿದ್ದವು. ಒಳಗೆ ಏರ್ ಕಂಡೀಶನ್ ವ್ಯವಸ್ಥೆ ಇದ್ದರೂ ನಾನು ಭಯದಿಂದ ಬೆವೆತು ಹೋದೆ. ಈ ಕೊಠಡಿಯ ಯಜಮಾನ ಬಂದರೆ ನನ್ನ ಗತಿಯೇನು ಎಂಬ ಭಯ ಒಂದೆಡೆಯಾದರೆ, ಯಾರೂ ಬಾರದಿದ್ದರೆ ಹಡಗು ತನ್ನ ದೇಶಕ್ಕೆ ಹೊರಟು ಬಿಟ್ಟರೆ? ಎಂಬ ನೂರಾರು ಯೋಚನೆಗಳು ತಲೆ ತುಂಬಿ ನನ್ನ ಕಥೆ ಮುಗಿಯಿತೆಂದೇ ತೀರ್ಮಾನಿಸಿ ಅಳತೊಡಗಿದೆ. ಅಂತಿಮ ಪ್ರಯತ್ನವೆಂಬಂತೆ ಜೋರಾಗಿ ಬಾಗಿಲು  ಕೂಗತೊಡಗಿದೆ…..

ನಮ್ಮ ಗೆಳೆಯರೆಲ್ಲ ಒಂದೆಡೆ ಸೇರಿದ ಮೇಲೆ ನನ್ನನ್ನು ಕಾಣದೆ ಅರಸ ತೊಡಗಿದರು. ಸುದೈವಕ್ಕೆ ನಾರಾಯಣ ಗಾಂವಕರ್ ನಾನಿರುವ ಭಾಗಕ್ಕೆ ಬಂದಾಗ ನಾನು ಬಾಗಿಲು ಬಡಿಯುವ ಶಬ್ಧ ಕೇಳಿಸಿದೆ. ಬಾಗಿಲು ತೆರೆದು ನನ್ನನ್ನು ಬಚಾವು ಮಾಡಿದರು. ನನಗೆ ಪುನರ್ಜನ್ಮವೇ ದೊರಕಿದಷ್ಟು ನಿರಾಳವಾಯಿತು.

ಪಟನೆ ನಡೆದು ಅನೇಕ ದಿನಗಳವರೆಗೂ ಹಡಗಿನ ಕೊಠಡಿಯೊಳಗಿನ ಭಯಾನಕ ಅನುಭವ ನನ್ನನ್ನು ಕಾಡುತ್ತಲೇ ಇತ್ತು. ಒಂದೊಮ್ಮೆ ಯಾರೂ ಬಂದು ಬಾಗಿಲು ತೆರೆಯದೇ ಇದ್ದರೆ ಹಡಗು ತನ್ನ ದೇಶಕ್ಕೆ ಪ್ರಯಾಣ ಬೆಳೆಸಿದ್ದರೆ ನಾನು ಅಪರಿಚಿತ ದೇಶವೊಂದಕ್ಕೆ ತಲುಪಬಹುದಿತ್ತೇ? ಅಥವಾ ಹಡಗಿನ ಜನ ನನ್ನನ್ನು ಕಂಡ ಬಳಿಕ ಬೇಡದ ಉಪದ್ರವವೇಕೆಂದು ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆದು ಬಿಡಬಹುದಿತ್ತೇ?

****************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

3 thoughts on “

  1. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿನ ಅವಮಾನ, ಮತ್ತು ಹಡಗಿನಲ್ಲಿ ನಡೆದ ಘಟನೆ,ಸದಾ ಸ್ಮರಣೀಯ.

  2. ಗುರುಗಳೆ,
    ನಿಮ್ಮ ಕಳೆದ ಜೀವನದ ಬಗ್ಗೆ ಓಡುವಾಗ ಅಯ್ಯೋ ಅನಿಸುತ್ತದೆ. ಏನೇನೋ ಅನುಭವಿಸಿ ಅರಬಿ ಸಮುದ್ರ ದಾಟದಂತೆ ಆಗಿದೆ. ನಿಮ್ಮ ಮನಸ್ಸು ಬಿಚ್ಚಿ ಬರೆದ ಅವಮಾನದ ಬಗ್ಗೆ ನನಗೆ ತುಂಬಾ ನೋವು ಅನಿಸುತ್ತದೆ.
    ಮುಂದಿನ ಸಂಚಿಕೆಗೆ ಎದುರಾಗಿರುವೆ….

  3. ಮಹಾಬಲೇಶವರ ದೇವಸ್ಥಾನದ ಅವಮಾನಕ್ಕೆ ಪ್ರತಿಯಾಗಿ ಸಮುದ್ರ ತೀರದಲ್ಲಿ ಲಿಂಗ ಪೂಜೆ ಹಾಗೂ ಹಡಗಿನಲ್ಲಿಯ ಭೀಭಯ್ಸ ಕ್ಷಣಗಳು ಎರಡೂ ಒಂದುರೀತಿಯ ಭೀಕರತೆಗಳೇ ಸರ್.

Leave a Reply

Back To Top