ಅಂಕಣ ಬರಹ

ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ

ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ

ಸರಣಿಬರಹ………..

ಅದ್ಯಾಯ-3

ಕೋಯಿ ಮಾತಾ ಕೆ ಉಮ್ಮೀದೋಂ ಪೆ ನ ಡಾಲೆ ಪಾನಿ

ಜಿಂದಗಿ ಭರ್ ಕೊ ಹಮೆ ಭೇಜ್ ಕೆ ಕಾಲೇ ಪಾನಿ.

ನಾವು ಬಂದು ಕೂತಾಗ ಸಮಯ ಸಂಜೆಯ ಐದು ಮುಕ್ಕಾಲು. ಬೆಳಕಾಗಲೇ ಮಸುಕು ಮಸುಕಾಗಲು ತೊಡಗಿತ್ತು. ಪೂರ್ವ ಪ್ರದೇಶಗಳಲ್ಲಿ ಸೂರ್ಯನು ಸ್ವಲ್ಪ ಬೇಗನೇ ಮುಳುಗುತ್ತಾನೆ. ಐದೂವರೆಗೆಲ್ಲಾ ಸೂರ್ಯಾಸ್ತವಾಗಿತ್ತು.

ಸರಿಯಾಗಿ ಆರು ಗಂಟೆಗೆ ಪ್ರದರ್ಶನ ಶುರುವಾಯಿತು. ಶ್ರೀ ರಾಮಪ್ರಸಾದ “ಬಿಸ್ಮಿಲ್” ಅವರು ಬರೆದ ದೇಶಭಕ್ತಿ ಗೀತೆಯ ಗಾಯನ ಹಿಮ್ಮೇಳದಲ್ಲಿ ಕೇಳಿ ಬರುತಿದ್ದಂತೆಯೇ ಹೃದಯ ಮನಸ್ಸುಗಳೆರಡೂ ನಮ್ಮ ಸ್ವಾತಂತ್ರ್ಯ ಸೇನಾನಿಗಳಿಗಾಗಿ ಮಿಡಿಯಲು ತೊಡಗಿತು.

ಹಾಡು ಮುಂದುವರಿಯುತಿದ್ದಂತೆಯೇ ಜೈಲಿನ ಪ್ರತಿಯೊಂದು ಕೋಣೆಯೊಳಗೆ ಅಳವಡಿಸಲಾದ ವಿದ್ಯುತ್ ದೀಪಗಳು ನಮ್ಮ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಬೆಳಗಿದವು.

ಅವುಗಳ ಜೊತೆಗೆ ಹಾಡು ಮೇಳೈಸಿ ಒಂದು ಅಪರೂಪದ ವಾತಾವರಣವು ಸೃಷ್ಟಿಯಾಯಿತು.

ಲೂಯೀಸ್ ಬ್ಯಾಂಕ್ಸ್ ಸಂಗೀತ ಮತ್ತು ವಿನಯ್ ಮಂಡ್ಕಾ ಮತ್ತು ಸಂಗಡಿಗರ ಧ್ವನಿಯ ಆ ಗೀತೆ ಬಹಳ ಸುಂದರವಾಗಿ ಹಾಡಲ್ಪಟ್ಟಿದೆ.

ಅದಾದ ನಂತರ ವಂದೇ ಮಾತರಮ್ ಗೀತೆಯೊಂದಿಗೆ ತ್ರಿವರ್ಣ ದೀಪಗಳ ನರ್ತನ ಸುಮನೋಹರವಾಗಿತ್ತು.

ನಮ್ಮ ಎದುರಿಗೆ ಒಂದು ಖಾಲಿ ಕುರ್ಚಿ ಇಡಲಾಗಿತ್ತು. ಕತ್ತಲಿನಲ್ಲಿ ಅಲ್ಲಿದ್ದ ಹಳೆಯ ಅರಳಿ ಮರವನ್ನು ಝಗ್ಗನೆ ಬೆಳಗಿಸಲಾಯಿತು.

ಆ ಮರ ಅತೀ ಪುರಾತನವಾದದ್ದು, ಜೈಲನ್ನು ನಿರ್ಮಾಣ ಮಾಡಿದ ಕಾಲದಿಂದಲೂ ಇರುವ ಅರಳಿ ಮರ 1998 ರಲ್ಲಿ ಬಿದ್ದಾಗ ಅದನ್ನು ಹಾಗೆಯೇ ಮತ್ತೆ ಮಣ್ಣಿನೊಳಗೆ ನೆಡಲಾಯಿತು.

ಜೈಲಿನಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಕ್ರೂರ ಹಿಂಸೆಗಳಿಗೆ ಮೂಕ ಸಾಕ್ಷಿಯಾಗಿ ನಿಂತಿದ್ದ ಆ ಅರಳಿ ಮರವೀಗ ಸಹಸ್ರಾರು ಸಂಖ್ಯೆಯ ವೀಕ್ಷಕರಿಗೆ ಅಂಡಮಾನ್ ಜೈಲಿನ ಬಗ್ಗೆ, ಕಾಲಾಪಾನಿಯ ಬಗ್ಗೆ ವಿವರಗಳನ್ನು ಕೊಡುತ್ತದೆ.

“ಇಲ್ಲಿ ನಡೆದ ಹಿಂಸಾಚಾರದ ಕಥೆಯನ್ನು ಎಲ್ಲಿಂದ ಆರಂಭಿಸಲಿ?” ಎಂದು ಕೇಳುವಾಗ,

ತನ್ನ ಕಣ್ಣೆದಿರು ನಡೆದ ಅನೇಕ ಅಸಂಖ್ಯಾತ ಜನರ ಗಲ್ಲು ಶಿಕ್ಷೆ, ಹಿಂಸೆ, ನೋವುಗಳನ್ನು ಅಸಹಾಯಕನಾಗಿ ನೋಡುತ್ತಾ, ಅವುಗಳಿಗೆಲ್ಲಾ ಸಾಕ್ಷಿಯಾಗಿ ನಿಲ್ಲಬೇಕಾದಂತ ತನ್ನ ಪರಿಸ್ಥಿತಿಗೆ ಮರುಗುತ್ತಾ ವ್ಯಥೆಯಿಂದ ಇತಿಹಾಸದ ಪುಟಗಳನ್ನು ನಮ್ಮೆದಿರು ಬಿಡಿಸುವಾಗ, ಗಂಟಲುಬ್ಬಿ ಬರುತ್ತದೆ.

ಶ್ರೀಯುತ ಓಂಪುರಿಯವರ ಧ್ವನಿಯಲ್ಲಿ ಮರವು ಮಾತನಾಡುತ್ತದೆ, ತನ್ನ ಹೃದಯವನ್ನೇ ತೆರೆದಿಡುತ್ತದೆ. ಕೂತಿದ್ದ ಜನರು ಸ್ತಬ್ದರಾಗಿ ಬಿಡುತ್ತಾರೆ.

ದಿವಂಗತ ಮನೋಹರ್ ಸಿಂಗ್, ಟಾಮ್ ಆಲ್ಟರ್, ಓಂಪುರಿ ಮುಂತಾದವರ ಧ್ವನಿಗಳಲ್ಲಿ ಚರಿತ್ರೆಯನ್ನು ಕೇಳಿಯೇ ಆ ಕಾಲಕ್ಕೆ ಹೋಗುವಂತಾಗುತ್ತದೆ.

ವೀರ ವಿನಾಯಕ ದಾಮೋದರ ಸಾವರ್ಕರ್, ಬಾಬಾ ಪ್ರಥ್ವಿ ಸಿಂಗ್ ಆಜ಼ಾದ್, ಭಾಯ್ ಪ್ರೇಮಾನಂದ್, ಶೇರ್ ಅಲಿ, ಉಲ್ಲಾಸ್ ಕರ್ ದತ್ತಾ ಹೀಗೇ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವರನ್ನು ಅಮಾನವೀಯವಾಗಿ ಹಿಂಸಿಸಿ ನರಳಿಸಿದ  ತನ್ನನ್ನು ತಾನೇ ಜೈಲಿನ ದೇವತೆ , ಜೈಲ್ ಕಾ ಖುದಾ ಎಂದು ಕರೆದು ಕೊಳ್ಳುತಿದ್ದ ಕ್ರೂರಿ ಜೈಲರ್ ಡೇವಿಡ್ ಬಾರ್ರಿ ಯ ಬಗ್ಗೆ ಮರವು ಮಾತನಾಡುತ್ತದೆ, ಅವರ ಸಂಭಾಷಣೆಗಳನ್ನೂ ಅನುಕರಿಸಿ ಧ್ವನಿ ಮುದ್ರಿಸಲಾಗಿದೆ.

ಹೀಗೆ ಸುಮಾರು ಒಂದು ಗಂಟೆಯಷ್ಟು ಸಮಯ ಅವೆಲ್ಲವನ್ನೂ ಸ್ವತಃ ಅನುಭವಿಸಿದಂತೆ ನೋವಿನಿಂದ ಹೃದಯ ಹಿಂಡುತ್ತದೆ.

ಮುಗಿದ ಮೇಲೆ ಎದ್ದು ಹೊರಬರುವಾಗ ಮನಸ್ಸಿನ ಜೊತೆ ಹೆಜ್ಜೆಯೂ ಭಾರವಾಗುತ್ತದೆ.

ಅವರೆಲ್ಲರ ತ್ಯಾಗ ಬಲಿದಾನಗಳು ವ್ಯರ್ಥವಾಗದೆ ನಮ್ಮ ಹೆಮ್ಮೆಯ ಭಾರತ ನಮ್ಮದಾಗಿರುವ ಬಗ್ಗೆ ಗರ್ವವೆನಿಸುತ್ತದೆ.

ಜೈಲಿನ ಹೊರ ಭಾಗದ ಕಟ್ಟಡವೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಕಾಣಿಸುತ್ತದೆ.

ಏಳರಿಂದ ಎಂಟರವರೆಗೆ ಈ ಪ್ರದರ್ಶನದ ಇಂಗ್ಲೀಷ್ ರೂಪಾಂತರ ಶ್ರೀ ನಾಸಿರುದ್ದೀನ್ ಶಾ ರವರ ಧ್ವನಿಯಲ್ಲಿರುತ್ತದೆ.

ಅಂಡಮಾನ್ ದ್ವೀಪಗಳಲ್ಲಿ ನದಿ ಪಾತ್ರಗಳಿಲ್ಲದುದರಿಂದ ಇಲ್ಲಿ ವಿದ್ಯುತ್ ಉತ್ಪಾದನೆಯಾಗುವುದಿಲ್ಲ. ಪೆಟ್ರೋಲ್ ಉಪಯೋಗಿಸಿ ಜನರೇಟರ್ ನಿಂದಲೇ ವಿದ್ಯುತ್ ಸಂಪರ್ಕಗಳನ್ನು ಪೂರೈಸಬೇಕಾಗುತ್ತದೆ.

ಹಾಗಾಗಿ ಈ ಪ್ರವಾಸ ಸ್ವಲ್ಪ ದುಬಾರಿ ಎಂದು ನಮ್ಮ ಮ್ಯಾನೇಜರ್ ಹೇಳಿದರು.

ಪ್ರವಾಸದ ವೆಚ್ಚ ಸ್ವಲ್ಪ ದುಬಾರಿಯಾಯ್ತು ಎಂದು ಮೊದಲಿಗೆ ನಮಗೆ ಅನಿಸಿದ್ದು ಹೌದು.

ಆದರೆ..

ತಂಗಲು ಸುವ್ಯವಸ್ಥಿತ ಹೊಟೇಲ್‍ಗಳು, ರೆಸಾರ್ಟ್‍ ಗಳು, ಶುಚಿ ರುಚಿಯಾದ ಊಟದ ವ್ಯವಸ್ಥೆ, ಪ್ರತಿಯೊಬ್ಬರ ಬಗ್ಗೆ ಕಾಳಜಿ, ಮುತುವರ್ಜಿ ವಹಿಸುವಿಕೆ, ವಿಮಾನದ ಟಿಕೇಟ್‌ಗಳನ್ನು ಬುಕ್ ಮಾಡುವುದರಿಂದ ಹಿಡಿದು.. ಪ್ರವಾಸಿ ತಾಣಗಳಲ್ಲಿ ಪ್ರವೇಶಕ್ಕಾಗಿ ಟಿಕೇಟ್ ಗಳನ್ನು ಖರೀದಿಸುವುದು, ಮುಂದೆ ಹಡಗಿನಲ್ಲಿ ಪ್ರಯಾಣವಿರುವಾಗ ಕೂಡ ನಮಗಾಗಿ ಸೀಟ್ ಗಳನ್ನೂ ಒಳ್ಳೆಯ ಕಡೆ ಕಾಯ್ದಿರಿಸುವುದು, ಕುಡಿಯುವ ನೀರಿನ ಪೂರೈಕೆ, ನಮ್ಮ ಲಗ್ಗೇಜ್‌ಗಳನ್ನು ಹೊತ್ತು ತಿರುಗುವ ಶ್ರಮವೂ ನಮಗಿರಲಿಲ್ಲ.

ಸೆಲ್ಯುಲರ್ ಜೈಲಿನಿಂದ ಮತ್ತೆ ನಮ್ಮ ಹೋಟೆಲ್ ರೂಮಿಗೆ ಹೋಗುವಾಗ ಬಸ್ಸಿನಲ್ಲೇ ನಮಗೆ ನಾಳೆಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಬೆಳಿಗ್ಗೆ ತಿಂಡಿಯಾದ ಮೇಲೆ ಸಮುದ್ರಿಕಾ ಮ್ಯೂಸಿಯಂ , ಗವರ್ನಮೆಂಟ್ ಸಾ ಮಿಲ್, ಹೀಗೆ ಕೆಲವು ಸ್ಥಳಗಳನ್ನು ವೀಕ್ಷಿಸಿ ಮದ್ಯಾಹ್ನ ಊಟ ಆದ ಮೇಲೆ ಹಡಗಿನಲ್ಲಿ ನಮ್ಮ ಪ್ರಯಾಣ ಹ್ಯಾವ್ಲೊಕ್ ದ್ವೀಪಕ್ಕೆ.

ಹಡಗಿನ ಪ್ರಯಾಣ, ಹ್ಯಾವ್ಲೊಕ್ ಎಂಬ ಸುಂದರ  ದ್ವೀಪವನ್ನು ನೋಡುವ ಆತುರ ಕಾತುರ ನಾಳೆಯವರೆಗೆ ತಡೆ ಹಿಡಿಯಲೇ ಬೇಕಿತ್ತು. ಎಲ್ಲರೂ ಹಡಗಿನ ಪ್ರಯಾಣಕ್ಕಾಗಿ ಉತ್ಸುಕರಾಗಿದ್ದರು.

ನಮ್ಮ ಸಹಪ್ರವಾಸಿಗರ ಪರಸ್ಪರ ಪರಿಚಯ ಇನ್ನೂ ಆಗಿರಲಿಲ್ಲ. ಹ್ಯಾವ್ಲೋಕ್ ಗೆ ಹೋದ ನಂತರ ಅಲ್ಲಿ ಮೊದಲಿಗೆ ಎಲ್ಲರೂ ಸ್ವಪರಿಚಯ ಮಾಡಿಕೊಡಬೇಕಾಗುತ್ತದೆ ಎಂದು ರಾಕೇಶ್ (ಟೂರ್ ಮ್ಯಾನೇಜರ್) ಅವರು  ಹೇಳಿದರು.

ಬೆಳಿಗ್ಗೆ ಸ್ವಲ್ಪ ವಿರಮಿಸಿದ್ದು ಬಿಟ್ಟರೆ ಆಮೇಲೆ ಜೈಲ್ ಸಂದರ್ಶನ, ಬೀಚ್, ಮತ್ತೆ ಧ್ವನಿ ಬೆಳಕಿನ ಪ್ರದರ್ಶನ ಎಂದು ಎಲ್ಲರೂ ಸುಸ್ತಾಗಿದ್ದರು. ಊಟ ಮುಗಿಸಿ ಮಲಗಿದರೆ ಸಾಕು ಅನಿಸಿತ್ತು. ಹಸಿವೂ ಆಗಿತ್ತು ಊಟವೂ ರುಚಿಯಾಗಿತ್ತು.

ರೂಮ್ ಸೇರಿ ಮಲಗಿದ ಕೂಡಲೇ ನಿದ್ದೆ ಆವರಿಸಿತು.

ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು‌. ಹೊರಗೆ ಒಳ್ಳೆಯ ಬೆಳಕು ಸಣ್ಣಗೆ ಎಳೆ ಬಿಸಿಲು. ಸಮಯ ನೋಡಿದರೆ ಬೆಳಗಿನ ಐದೂವರೆ.

(ಮುಂದುವರಿಯುವುದು..)


ಶೀಲಾ ಭಂಡಾರ್ಕರ್

ಗೃಹಿಣಿ, ಹಲವಾರು ಹವ್ಯಾಸಗಳಲ್ಲಿ ಬರವಣಿಗೆಯೂ ಒಂದು. ಅನೇಕ ಕವನಗಳು, ಲಲಿತ ಪ್ರಬಂಧಗಳು, ಪೌರಾಣಿಕ ಪಾತ್ರಗಳ ಸ್ವಗತಗಳನ್ನು ಬರೆದಿದ್ದು.
ತಪ್ತ ಮೈಥಿಲಿ, ರಾಮಾಯಣದ ಊರ್ಮಿಳೆಯ ಪಾತ್ರದ ಕಥನವು ಎಚ್ಚೆಸ್ಕೆಯವರ ನೂರರ ಸಂಭ್ರಮದಲ್ಲಿ ಬಿಡುಗಡೆಯಾಗಿರುತ್ತದೆ.

Leave a Reply

Back To Top