ಕವಿತೆ
ಪ್ರಾರ್ಥಿಸುತ್ತಲೇ ಇದ್ದೇನೆ
ವಿಜಯಶ್ರೀ ಹಾಲಾಡಿ
ಭುಜದ ಮೇಲೊಂದು ನವಿರು
ರೆಕ್ಕೆ ಮೂಡಿದ್ದರೆ ಹಾರಿ
ಬರುತ್ತಿದ್ದೆ ಬೆಟ್ಟಗಳ ದಾಟಿ….
ಗುಟುಕು ತಿನಿಸಿ ಕೊಕ್ಕಿನ
ಮೊನೆಯಿಂದ ಗರಿಗರಿಗಳ
ನೇವರಿಸಿ ಹಿತಗೊಳಿಸಿ
ಹಗಲ ಹಾಡು ಕತ್ತಲ ಪಾಡಿಗೆ
ಕಿವಿಯಾನಿಸಿ ಎದೆಯಾನಿಸಿ
ನಿರಾಳಗೊಳ್ಳುತಿದ್ದೆ ಕತ್ತಿಗೆ
ಕತ್ತೂರಿ, ಹದ್ದಿನ ಕಣ್ಣು ತಪ್ಪಿಸಿ
ಮನಸಿನ ರೆಕ್ಕೆಗಳೋ
ಪಟಪಟನೆ ಬಡಿಬಡಿದು
ದೂರ ದೂರ ತೇಲಿಹೋಗಲು
ಹವಣಿಸುತ್ತವೆ- ಕ್ರಮಿಸುತ್ತವೆ
ಅರೆದಾರಿ, ಬಿರುಬೇಸಗೆಯ
ವಸಂತದ ಹೂ ನೆರಳಿನಲಿ
ಗಪ್ಪನೆ ಮರಳುತ್ತವೆ
ಕಸಿವಿಸಿಯ ತಂಗಾಳಿಯಲಿ
ಅಲ್ಲಿ ನಿನ್ನೂರಿನಲೂ ಕೋಗಿಲೆ
ಕೂಗಿ ಕೂಗಿ ದಣಿದಿರಬಹುದು
ಸಂಜೆಯ ಏಕಾಂತ ನಡಿಗೆಯಲಿ
ಹೂಗಳು ಬಾಡಿ ಉದುರಿರಬಹುದು
ಅರಳಲಾರದ ಮರಳಲಾರದ
ಹುಸಿಮೊಗ್ಗುಗಳ ಚಡಪಡಿಕೆ
ನಿನ್ನನೂ ತಾಕುತ್ತಿರಬಹುದು…
ಈ ಇರುಳು ಧುತ್ತನೆ
ರೆಕ್ಕೆಗಳು ಹುಟ್ಟಿ ಬಿಡಬಾರದೇಕೆ
ನಿನಗೊಂದು ನನಗೊಂದು
ಪ್ರಾರ್ಥಿಸುತ್ತಲೇ ಇದ್ದೇನೆ
ಎಂದಿನಿಂದಲೂ
ಕಡಲಕಣ್ಣ ಬುವಿಯ ಮುಂದೆ!
*********************************