ಕವಿತೆ
ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..
ಡಾ. ಎಚ್. ಎಸ್. ಅನುಪಮಾ
ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈ ಮರೆಯದಿರು ಕವಿತೆಯೇ,
ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಕೋವಿ ತುಪಾಕಿಗಳ ಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ
ಪಟ್ಟಗತ್ತಿಗೆ ಕಾದುವ ಪುಂಡ ಪುಢಾರಿಗಳ
ಧರ್ಮಾಧಿಕಾರಿ ರಾಜರ್ಷಿಗಳ
ನಡೆದಾಡುವ ದೇವರುಗಳ
ಮಾರುವೇಷಕ್ಕೆ ಮರುಳಾಗದಿರು.
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗವಿಲ್ಲ
ಅವಸರಕೆ ಹೆತ್ತ ಮಗು ಉಸಿರಾಡುವುದಿಲ್ಲ
ಎಚ್ಚರ, ಇದು ಅತ್ಯಾಚಾರಿಗಳ ಕಾಲ.
ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ ರಸ್ತೆಯ
ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಹಕ್ಕಿ, ನಾರು ಹೆಕ್ಕಿ ಗೂಡು ಕಟ್ಟುತ್ತದೆ
ಅವು ಅಂಜುವುದಿಲ್ಲ ಗೆಳತಿ,
ಯಾವ ಸೇನೆಯ ದಾಳಿಗೂ
ಇರುಳ ಗೂಬೆ ಸುಮ್ಮನೆ ಕೂರುವುದಿಲ್ಲ.
ನಮೋಸುರನ ಬೆದರಿಕೆಗೆ
ಗಿರ್‌ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ.
ಸುರನೋ ಅಸುರನೋ
ಗಡ್ಡ ನೆರೆಯದೆ ಉಳಿಯುವುದಿಲ್ಲ.
ಬದಲಾಗುತ್ತವೆ ಋತು ಋತಗಳು
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.
ತಾಯೇ,
ಎದೆಗೆ ತಟ್ಟಿದ ನೋವ
ತುದಿ ಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು
ಹೊಟ್ಟೆಯೊಳಗವಿಸಿಟ್ಟುಕೋ
ದಿವ್ಯ ಶಬುದಗಳಾಗಿಸಿ ಹೆರು
ಜೀವಕಾರುಣ್ಯದ ಮೊಲೆಹಾಲನೂಡಿಸೇ,
ಏಕೆಲಗವ್ವಾ, ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿಯುಳಿಸದ ಹಣತೆಯಾಗಿ ಬೆಳಗು..
*************************************
ಡಾ. ಎಚ್. ಎಸ್. ಅನುಪಮಾ
(`ನೆಗೆವ ಪಾದದ ಜಿಗಿತ’ ಸಂಕಲನದಿಂದ)
ಕವಿತೆ ಅಗಾಧ ನಿಗೂಢತೆಯನ್ನ ಒಳಗಿರಿಸಿಕೊಂಡು ಜನ್ಮ ತಳೆದಿದೆ ಅರ್ಥ ಅವರವರ ಅನುಭವಕ್ಕೆ ವಿಭಿನ್ನವಾಗಿ ದಕ್ಕುವಂತಿದೆ