ವಿಶೇಷ ಲೇಖನ
ಮುಟ್ಟು .. ಮುಟ್ಟು.. ಮುಟ್ಟು..
ಚಂದ್ರಪ್ರಭ
ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, ವೀರ್ಯಾಣು, ಗರ್ಭಧಾರಣೆ, ಋತುಚಕ್ರಗಳ ಕುರಿತು ಇದ್ದ ಅಧ್ಯಾಯವನ್ನು ಮಕ್ಕಳೆದುರು ಪಾಠ ಮಾಡಲು ಶಿಕ್ಷಕಿಯರೇ ಹಿಂದೇಟು ಹಾಕುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿರುವೆ.
ಅದೊಂದು ನಿಸರ್ಗ ಸಹಜ ಕ್ರಿಯೆ, ಮನುಕುಲದ ಉಳಿವು, ಬೆಳವಣಿಗೆಯ ಮೂಲ ಸ್ರೋತ ಎಂಬ ಅದ್ಬುತ ಸತ್ಯವನ್ನು ಮಕ್ಕಳೆದುರು ಅನಾವರಣ ಮಾಡಲು ಇರುವ ಒಂದು ಸದವಕಾಶ ಅದು. ಅಂಥದೊಂದು ಅಧ್ಯಾಯ ಗೌಣವಾಗಿ ಬಿಡುವುದು ನಿಜಕ್ಕೂ ವಿಷಾದನೀಯ.
ನನ್ನೂರು ಬನಹಟ್ಟಿ ನೇಕಾರರ ಬೀಡು. ಲಿಂಗ, ಜಾತಿ, ಮತ, ಪಂಥ ಮರೆತು ಎಲ್ಲ ಜೀವಗಳೂ ನೇಕಾರಿಕೆಯನ್ನು ವೃತ್ತಿ ಮಾಡಿಕೊಂಡ ಜನರು ನನ್ನವರು. ದಿನ ಬೆಳಗಾಗುವುದು, ಸಂಜೆಗತ್ತಲು ಕವಿಯುವುದು ನೂಲೆಳೆಯೊಂದಿಗೇ. ಅಲ್ಲಲ್ಲಿ ಕೆಲವರು ನೌಕರದಾರರು ಸಹ ಕಾಣಸಿಗುತ್ತಾರೆ. ತೀರ ಚಿಕ್ಕವಳಿದ್ದಾಗ ನನ್ನವ್ವ ಮುಟ್ಟಿನ ದಿನಗಳಲ್ಲಿ ತಲೆ ಮೇಲೆ ನೀರು ಹಾಕಿಸಿಕೊಂಡು ಕೆಲಸದಲ್ಲಿ ತೊಡಗುತ್ತಿದ್ದುದನ್ನು ನೋಡುತ್ತಿದ್ದರೂ ಅದೇಕೆ ಹಾಗೆ ಅಂತ ತಿಳಿದೇ ಇರಲಿಲ್ಲ.
ಅವ್ವ ನನಗೆ ನೀರು ಹಾಕುವಂತೆ ಆಗುವವರೆಗೂ ಹೊತ್ತಲ್ಲದ
ಹೊತ್ತಿನಲ್ಲಿ ಅಜ್ಜಿ ಅವ್ವನಿಗೆ ನೀರು ಹಾಕುವುದೇಕೆ ಎಂಬುದು ವಿಸ್ಮಯದ ಸಂಗತಿಯಾಗೇ ಉಳಿದಿತ್ತು!
ಈ ದಿನದ ವರೆಗೂ ಆ ದಿನಗಳಲ್ಲಿ ಮೂಲೆ ಹಿಡಿದು ಕೂತವರನ್ನು ನಾ ಕಂಡಿಲ್ಲ. ಕೆಲವು ಸಮುದಾಯದವರು ಅದನ್ನು ಪಾಲಿಸುತ್ತಾರೆ ಎಂದು ಕೇಳಿ ಮಾತ್ರ ಗೊತ್ತು.
ನೇಕಾರಿಕೆ ಪ್ರತಿ ದಿನದ ಪ್ರತಿ ಕ್ಷಣದ ದುಡಿಮೆ ಬಯಸುವ ಕಾಯಕ. ಮುಟ್ಟು ಕಾಣಿಸಿಕೊಂಡ ಕೂಡಲೇ ತಲೆ ಮೇಲೆ ನೀರು ಹಾಕಿಕೊಂಡು ಕೆಲಸಕ್ಕೆ ತೊಡಗುವುದು ಇವರಿಗೆ ಅನಿವಾರ್ಯ. ಮೂರು-ನಾಲ್ಕನೇ ದಿನ ಮತ್ತೊಮ್ಮೆ ನೀರು ಹಾಕಿಕೊಂಡರೆ “ಶುದ್ಧ” ಆದ ಹಾಗೆ. ಆ ದಿನಗಳಲ್ಲಿ ದೇವರ ಪೂಜೆ, ನೈವೇದ್ಯ ಇತ್ಯಾದಿಗಳಿಂದ ದೂರ ಉಳಿಯುವುದೇ ಅವರು ಪಾಲಿಸುವ ‘ಮಡಿ’. ಅವರೇ ಹೇಳುವ ಕೆಲವು ಖಡಕ್ ದೇವರುಗಳ ವಿಶೇಷ ಆಚರಣೆ, ಜಾತ್ರೆಗಳ ಸಂದರ್ಭದಲ್ಲೂ ಅವರು ಅದರಿಂದ ದೂರ. ಇದು ಅವರು ಪಾಲಿಸುವ ಮಡಿಯ ಒಂದು ಭಾಗ.
ಆರನೇ ತರಗತಿ ಕಳೆದ ನಂತರದ ರಜೆಯಲ್ಲಿ ನಾನು ಋತುಮತಿಯಾದ ನೆನಪು. ಆಗೆಲ್ಲ ಮೊದಲ ಋತುವನ್ನು ಸಂಭ್ರಮಿಸುವುದು ಜನಗಳಿಗೆ ಪ್ರಿಯವಾದ ಸಂಗತಿ. ೫ ದಿನ, ೯ದಿನ, ೧೧ ದಿನ ಹೀಗೆ ಹುಡುಗಿಯನ್ನು ಮಂಟಪದಲ್ಲಿ ಕೂರಿಸಿ ಸೋಬಾನೆ ಪದ ಹಾಡುವುದು. ದಿನಕ್ಕೊಂದು ರೀತಿಯ ಅಲಂಕಾರ ಮಾಡುವುದು.. ಆಕೆಗೆ ಬಗೆ ಬಗೆ ಊಟ, ಪೌಷ್ಟಿಕ ಆಹಾರ ತಿನ್ನಿಸುವುದು.
‘ಸಾಲಿಗಿ ಹೋಗೂ ಹುಡುಗಿ.. ಕುಂಡ್ಸೂದು ಏನೂ ಬ್ಯಾಡ’ ಅಂತ ನನ್ನಜ್ಜಿ ಫರ್ಮಾನು ಹೊರಡಿಸುದಳು. ಜನಗಳಿಗೆ ಗೊತ್ತಾದರೆ ಅಡುಗೆ ತಂದು ಕೊಟ್ಟು ಕಾರ್ಯ ಮಾಡುವುದು ಅನಿವಾರ್ಯ ಆದೀತೆಂದು ಗುಟ್ಟಾಗಿ ನನ್ನ ಒಳ ಮನೆಯಲ್ಲೇ ಇರಿಸಿದ ನೆನಪು.
ಅವ್ವ ನನಗೆ ಸ್ರಾವದ ದಿನಗಳಲ್ಲಿ ಬಟ್ಟೆ ಉಪಯೋಗಿಸುವುದು ಹೇಗೆ ಅಂತ ಹೇಳಿ ಕೊಟ್ಟಳು. ಆದರೆ ಅದನ್ನೆಲ್ಲ ತೊಳೆದು ಸ್ವಚ್ಛ ಮಾಡುವುದು.. ಗುಟ್ಟಾಗಿ ಮುಟ್ಟಿನ ಬಟ್ಟೆ ಒಣಗಿಸಿಕೊಳ್ಳುವುದು ಎಲ್ಲ ಬೇಡದ ಸಂಗತಿಗಳಾಗಿದ್ದವು. ಒಬ್ಬೊಬ್ಬರಾಗಿ ಗೆಳತಿಯರು “ದೊಡ್ಡವ”ರಾಗ ತೊಡಗಿದರು. ಆದರೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಕಡಿಮೆ.
ನಮ್ಮೂರಲ್ಲಿ ಆಗ ಇದ್ದುದು ಕೆಲವೇ ಕೆಲವು ಔಷಧಿ ಅಂಗಡಿ.
ಶೋಕೇಸಿನಲ್ಲಿಟ್ಟ ವಸ್ತುಗಳನ್ನು ನೋಡುವುದೆಂದರೆ ನಮಗೆ ಖುಷಿ. ಅದೊಂದು ದಿನ ಸ್ನಾನದ ಸೋಪಿನ ಮಾದರಿಯಲ್ಲಿ ಸುತ್ತಿಟ್ಟ ಪ್ಯಾಕೆಟ್ ಒಂದನ್ನು ನಾನೂ ತಮ್ಮನೂ
ಕುತೂಹಲದಿಂದ ನೋಡ ತೊಡಗಿದೆವು. ಅಷ್ಟು ದೊಡ್ಡ ಸಾಬೂನು ಇರುವುದೇ? ಅಂತ ಅಚ್ಚರಿ. ಕೊನೆಗೆ ಅದೇನೆಂದು ಅಂಗಡಿಯವರನ್ನೇ ಕೇಳಿದೆವು. ‘ನಿಮಗ ಗೊತ್ತಾಗೂದಿಲ್ಲ ಹೋಗರಿ’ ಅಂತ ಗದರಿ ಕಳಿಸಿ ಬಿಟ್ಟರು ಅವರು.
‘ಸುಧಾ’ ಆ ಕಾಲದ ಜನಪ್ರಿಯ ವಾರ ಪತ್ರಿಕೆ. ಅದರಲ್ಲಿ ವಸುಮತಿ ಉಡುಪ, ಅನುಪಮಾ ನಿರಂಜನ ಮೊದಲಾದವರ ಸ್ತ್ರೀ ಆರೋಗ್ಯ ಕುರಿತು ಲೇಖನಗಳು. ಮುಟ್ಟಿನ ದಿನಗಳಲ್ಲಿ ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಕೊಟ್ಟ ಮಾಹಿತಿಯಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಕುರಿತು ವಿವರ ಓದಿದ ನಂತರವಷ್ಟೇ ಅದೆಲ್ಲ ಅರ್ಥ ಆಗಿದ್ದು. ಹಾಗಿದ್ದೂ ದುಡ್ಡು ಕೊಟ್ಟು ಅದನ್ನು ಖರೀದಿಸುವ ಅವಕಾಶ ಇರಲಿಲ್ಲ. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವಾಗ ಅವರಿವರು ಕೊಟ್ಟ ಹತ್ತಿಪ್ಪತ್ತು ರೂಪಾಯಿಗಳನ್ನು ಉಳಿತಾಯ ಮಾಡಿ ಅದರಿಂದ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಆರಂಭಿಸಿದೆ. ಬಳಸಿದ ಮೇಲೆ ಒಪ್ಪವಾಗಿ ಸುತ್ತಿ ಅದನ್ನು ಕಸದ ಡಬ್ಬಿಗೆ ಎಸೆಯುವುದು ಅಭ್ಯಾಸ ಆಯ್ತು.
ಅಂಗಡಿಗೆ ಹೋಗಿ ಪ್ಯಾಡ್ ಕೇಳಿದರೆ ಸಾಕು, ಅಂಗಡಿಯಾತ ಗುಟ್ಟಾಗಿ ಅದನ್ನು ಕಾಗದದ ಹಾಳೆಯಲ್ಲಿ ಸುತ್ತಿಯೊ ಕಪ್ಪು ಬಣ್ಣದ ಪ್ಲಾಸ್ಟಿಕ್ ಹಾಳೆಯಲ್ಲಿ ಇರಿಸಿಯೊ ಕೊಡುವುದು ಈಗಲೂ ಕಾಣುವ ವಿದ್ಯಮಾನ.
ತೀವ್ರ ಹೊಟ್ಟೆ ನೋವು ಕಾಡಿದಾಗ ವೈದ್ಯರ ಬಳಿ ಹೋಗಿ ಮಾತ್ರೆ ತರುವುದಿತ್ತು. ಬಟ್ಟೆ, ಪ್ಯಾಡ್ ಯಾವುದೇ ಆಗಿರಲಿ ಸ್ರಾವವುಂಡು ಒಣಗಿ ತೊಡೆಯ ಸಂದುಗಳಲ್ಲಿ ಉಂಟು ಮಾಡುತ್ತಿದ್ದ ಗಾಯಗಳದೇ ಒಂದು ಸಮಸ್ಯೆ. ಅದನ್ನು ನಿವಾರಿಸಲು ವೈದ್ಯರಲ್ಲಿಗೆ ತೆರಳಿ ಮುಲಾಮು ತರುವುದು. ಈ ತಿಂಗಳ ಗಾಯ, ನೋವು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮುಂದಿನ ತಿಂಗಳ ಋತು ಹಾಜರ್!!
ಇದರೊಂದಿಗೆ ಅವ್ವ, ಅಜ್ಜಿ ಹಾಕುತ್ತಿದ್ದ ಅಲ್ಲಿ ಬರಬೇಡ, ಇಲ್ಲಿ ಬರಬೇಡ.. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಇವೆಲ್ಲ ಕಿರಿಕಿರಿ ತಾಳಬೇಕಿತ್ತು.
ಮದುವೆ, ವೃತ್ತಿ, ತಾಯ್ತನಗಳ ಮೂಲಕ ಹಾದು ಬರುವಾಗ ಅವ್ವ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳತೊಡಗಿದಳು. ಮುಟ್ಟು ಕಾಣಿಸಿಕೊಂಡ ತಕ್ಷಣ ತಲೆ ಸ್ನಾನ ಮಾಡಬೇಕಿರಲಿಲ್ಲ. ದೇವರು, ನೇಮಗಳ ವಿಷಯದಲ್ಲಿಯೂ ಅವಳು ಆಕ್ಷೇಪಿಸುವುದನ್ನು ನಿಲ್ಲಿಸಿದಳು. ಆದರೂ ನಮ್ಮಲ್ಲಿ ಮೊದಲಿನ ಭಯ ಹಾಗೇ ಉಳಿದಿತ್ತು. ಮುಟ್ಟು ನಿಲುಗಡೆಯ ಹೊಸ್ತಿಲಲ್ಲಿರುವ ಈ ಹೊತ್ತು ಮುಟ್ಟಿನ ಬಟ್ಟಲುಗಳ ಬಳಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅರವತ್ತರ ದಶಕದಲ್ಲಿಯೇ ಶೋಧಿಸಲ್ಪಟ್ಟ ಮುಟ್ಟಿನ ಬಟ್ಟಲು ಮಾರುಕಟ್ಟೆಗೆ ಬರದಿರುವಂತೆ ತಡೆಯುವ ಹಿಂದೆ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡುವ ಕಂಪನಿಗಳ ಕೈವಾಡ ಇತ್ತೆಂಬುದನ್ನು ಪತ್ರಿಕೆಗಳು ವರದಿ ಮಾಡುವುದನ್ನು ಓದುವಾಗ ಆಘಾತವಾಗುತ್ತದೆ. ಮಣ್ಣಿನಲ್ಲಿ ಕರಗದ, ನಾಶವಾಗದ, ನೂರಾರು ವರ್ಷಗಳ ವರೆಗೆ ಇದ್ದ ಸ್ಥಿತಿಯಲ್ಲಿಯೇ ಉಳಿಯುವ, ಕ್ರಿಮಿಗಳ ಉತ್ಪಾದನೆಗೆ ಆಕರವಾದ ಅದೆಷ್ಟು ಪ್ಯಾಡ್ ಗಳನ್ನು ವರ್ಷಗಟ್ಟಲೇ ನಾವು ಎಸೆಯುತ್ತಲೇ ಬಂದಿದ್ದೇವೆ ಎಂದು ಊಹಿಸಲೂ ಭಯವಾಗುವದು. ಹೆಂಗಳೆಯರ ಸೌಕರ್ಯ, ಪರಿಸರ ಕಾಳಜಿ ಯಾವುದೂ ಇಲ್ಲದ ಕಂಪನಿಗಳಿಗೆ ತಮ್ಮ ಹಿತಾಸಕ್ತಿಗಳೇ ಮುಖ್ಯ ಆಗುವುದು ಆಗಲೂ ಇತ್ತು.. ಈಗಲೂ ಇದೆ.. ಮುಂದೆಯೂ ಇದ್ದರೆ ಅಚ್ಚರಿಯಿಲ್ಲ.
ಮುಟ್ಟಿನ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯದ ವಾತಾವರಣ ಇನ್ನೂ ನಿರ್ಮಾಣ ಆಗಿಲ್ಲ. ಅದು ಸಾಧ್ಯ ಆಗಬೇಕು. ಹಾಗಾಗುವುದು ಆರೋಗ್ಯವಂತ ಸಮಾಜದ ಲಕ್ಷಣ. ನಮ್ಮ ಮಕ್ಕಳಿಗೆ ಗಂಡು ಹೆಣ್ಣು ಭೇದವಿಲ್ಲದೆ ಇಬ್ಬರಿಗೂ ಈ ಕುರಿತ ವಾಸ್ತವಾಂಶಗಳ ಅರಿವಾಗಬೇಕು. ಅದು ಪರಸ್ಪರರ ಕುರಿತ ಮಾನವೀಯ ನಿಲುವು ವೃದ್ಧಿಸಲು ಸಹಕಾರಿ. ಮುಟ್ಟಿನ ಬಟ್ಟಲು ಬಳಕೆ ವ್ಯಾಪಕ ಆಗಬೇಕು. ಒಣ ಅನುಕಂಪ, ಸಹಾನುಭೂತಿಗೆ ಬದಲಾಗಿ ಅವಳ
‘ಆ ದಿನಗಳ’ಲ್ಲಿ ಆಕೆಗೆ ಇತರರ ಸಹಕಾರ, ಸಾಂತ್ವನ ಸಿಗುವಂತಾಗಬೇಕು.
ಎಲ್ಲ ಹೆಣ್ಣು ಜೀವಗಳಲ್ಲಿ ನನ್ನದೊಂದು ವಿನೀತ ಪ್ರಾರ್ಥನೆ.. ಮುಟ್ಟು ಕುರಿತು ನಿಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳಲು ಆರಂಭಿಸಿ. ಒಂದು ಅಭಿಯಾನದ ರೀತಿಯಲ್ಲಿ ಅದು ಸಾಗಲಿ. ಅದರಿಂದ ಪುರುಷ ಜಗತ್ತಿನೆದುರು ಹೊಸತೊಂದು ಲೋಕದ ಅನಾವರಣವಾಗಲಿ. ಮಿಡಿಯುವ ಮನಗಳು ಮಿಡಿದಾವು
************************************
ಬಹಳ ಉತ್ತಮ ಲೇಖನ ಮೇಡಂ….
ಬಹಳ ಉತ್ತಮ ಲೇಖನ ಮೇಡಂ