ನುಡಿ – ಕಾರಣ

ಲೇಖನ

ನುಡಿ – ಕಾರಣ

ಗೋನವಾರ ಕಿಶನ್ ರಾವ್.

ಮರುಳ ಮುನಿಯನು ನಾನು ಮಂಕುತಿಂಮನ ತಮ್ಮ|

ಕೊರಗೆನ್ನೆದೆಯ ತಿತ್ತಿಯೊಳು ತುಂಬಿಹುದು ||

ಸುರಿವೆನದನಿಲ್ಲಿ  ಸಾಧುಗಳು ಸರಪೇಳರೇಂ |

ಗುರುವಲೇ ಜಗ ನಮಗೆ – ಮರುಳಮುನಿಯ

ಇದು ‘ಮರುಳ ಮುನಿಯನ ಕಗ್ಗ’  ಕೃತಿಯ ಪ್ರಾರಂಭಿಕ ಸಾಲುಗಳು. ನೋಡಲು  ಮಂಕುತಿಮ್ಮನ  ಕಗ್ಗದ ಸಾಲುಗಳಿಗೂ ಇವುಗಳಿಗೂ ಛಂದಸ್ಸಿನ ದೃಷ್ಟಿಯಿಂದಾಗಲೀ,ಸಾಲಿನ ನಿಯಮಗಳಲ್ಲಿಆಗಲೀ, ನೀತಿ ಸಂಹಿತೆಯಲ್ಲಾಗಲೀ ಯಾವೊಂದು ವ್ಯತ್ಯಾಸವಿಲ್ಲ. ಡಿವಿಜಿ ಯವರೇ ಈ ಮೇಲೆ ಉದ್ಧರಿಸಿದ ಸಾಲುಗಳಲ್ಲಿ ಈ‌ ಮಾತನ್ನು ಹೇಳಿಬಿಟ್ಟಿದ್ದಾರೆ. ತಾನು ಮರುಳ ಮುನಿಯ, ಮಂಕುತಿಂಮನ ತಮ್ಮ ಎಂದು. 

 

ಹದಿನೆಂಟು ಬಾರಿ ಮಂಕು ತಿಮ್ಮನ ಕಗ್ಗ ಮುದ್ರಣ ಕಂಡಿದ್ದರೆ, ಮರುಳ ಮುನಿಯನ ಕಗ್ಗ ಕೇವಲ ಮೂರು ಮುದ್ರಣ ಕಂಡಿದ್ದರೂ ಅದರ ಜನಪ್ರಿಯತೆ ಮಾತ್ರ ಒಂದಿನಿತೂ ಕುಗ್ಗಿಲ್ಲ ಒಂದೊಂದು ಪದ್ಯವು ಒಂದೊಂದು ‘ ಋಕ್ ‘ ಇದ್ದಂತೆ.ಅದರ ಒಂದೊಂದು ಕಗ್ಗದೊಳಗೆ ಒಂದು ಗ್ರಂಥಕ್ಕೆ ಸಾಲುವಷ್ಟು ವಿಷಯಗಳು ಅಡಕವಾಗಿವೆ .

ಮರುಳ ಮುನಿಯನ ಕಗ್ಗದಲ್ಲಿ ೮೨೫ ಕವಿತೆಗಳಿವೆ.ಮಂಕು ತಿಮ್ಮನ ಕಗ್ಗದ ಸಂಖ್ಯೆ ಗಳಿಗೆ ಹೋಲಿಸಿದರೆ,೧೨೦ ಕಡಿಮೆ ಆದರೆ ಒಳಾರ್ಥದ ದೃಷ್ಟಿಯಿಂದ ನೋಡುವಾಗ,ಮಂಕುತಿಮ್ಮನಿಗಿಂತ ಮರುಳ ಮುನಿಯ ಒಂದು ತೂಕ ಹೆಚ್ಚೆಂದು ತಿಳಿದವರ ಅಭಿಪ್ರಾಯವಾಗಿದೆ.

ಮರುಳ ಮುನಿಯ ಡಿವಿಜಿ ಯವರ ಜೀವಿತಕಾಲ ದಲ್ಲಿ ಪ್ರಕಟವಾಗಲಿಲ್ಲ ಆನಂತರ ಅದರ ಪ್ರಕಟಣಾ ಜವಾಬ್ದಾರಿ ಅವರ ಮಗ ಬಿ.ಜಿ.ಎಲ್ ಸ್ವಾಮಿಯವರಿಗೆ ಬಂತು.ಅವರು ಇದನ್ನು ಪರಿಷ್ಕರಿಸಿ ಪ್ರಕಟಿಸುವ ಪ್ರಯತ್ನದಲ್ಲಿ ತೊಡಗಿರುವಾಗಲೇ ಬಿ.ಜಿ.ಎಲ್.ಸ್ವಾಮಿಯವರು ನಿಧನರಾದರು.( ಬಿ.ಜಿ.ಎಲ್.ಸ್ವಾಮಿಯವರು ಸಸ್ಯ ಶಾಸ್ತ್ರ ದಲ್ಲಿ ಅತೀ ಪ್ರಸಿದ್ಧ ಪಂಡಿತರು ಸಸ್ಯ ಶಾಸ್ತ್ರದ ಅನೇಕ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆದಿದ್ದಾರೆ.ಅದಲ್ಲದೆ ಕಾಲೇಜುರಂಗ ಮೊದಲಾದ ಕಾದಂಬರಿಗಳನ್ನು ಬರೆದಿದ್ದಾರೆ ಅವರ ಬಗ್ಗೆ ಒಂದು ಅಂಕಣ ಬರೆಯುತ್ತೇನೆ) ನಂತರ ಡಿ.ವಿ.ಜಿ.ಯವರ ಕೃತಿಗಳ ಸರ್ವ ಹಕ್ಕುಗಳು, ಸ್ವಾಮಿಯವರ ಪತ್ನಿ ವಸಂತ ಸ್ವಾಮಿಯವರಿಗೆ ಸೇರಿದವು.ಅವರು , ಅದನ್ನು ಡ.ವಿ.ಜಿ ಯವರೇ ಸ್ಥಾಪಿಸಿ ಕೊನೆಯ ದಿನಗಳವರೆಗೆ ಅದರ ಗೌ.ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ” ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ” ಗೆ ವಹಿಸಿದರು. ಅದರ ಕಾರ್ಯದರ್ಶಿ ಆಗಿದ್ದ ನ ನಿಟ್ಟೂರು ಶ್ರೀನಿವಾಸ ರಾಯರರು ಈ ಕಾರ್ಯವನ್ಮ ಡಿವಿಜಿ ಯವರ ಒಡನಾಡಿಗಳು ವಿದ್ವಾಂಸರು ಆಗಿದ್ದ ರಂಗನಾಥ ಶರ್ಮ ಅವರಿಗೆ ವಹಿಸಿದರು. ಅವರು ಇಡೀ ಮರುಳ ಮುನಿಯನ ಕಗ್ಗವನ್ನು ಪರಿಷ್ಕರಿಸಿ ೧೯೮೪ ರಲ್ಲಿ ಮೊದಲ ಮುದ್ರಣವನ್ನು ಪ್ರಕಟಿಸಿದರು.ನಂತರದ ವರುಷಗಳಲ್ಲಿ ಇದರ ಇನ್ನೆರಡು ಮುದ್ರಣಗಳು ಬಂದವು.ಮತ್ತು ಮರುಳ ಮುನಿಯನ ಕಗ್ಗ ಮಂಕು ತಿಮ್ಮನ ಕಗ್ಗದ ಭಾಗ -೨ ಎಂದು ಪ್ರಕಟವಾಯಿತು. ಓದುಗರಿಗೆ, ಪದ್ಯಗಳ ಧಾಟಿ ವಿಚಾರ ಸರಣಿ ಎಲ್ಲವೂ ಮಂಕು ತಿಮ್ಮನ ಪದ್ಯಗಳನ್ನೇ ಹೋಲುತ್ತವೆ. ಮರುಳ ಮುನಿಯನ ಗಾತ್ರ ಕುರಿತಂತೆ ಕೃತಿಕಾರರೇ ಹೇಳುವಂತೆ :

ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ|

ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು||

ನುಗ್ಗಿ ಬರುತಿದೆ ಲೋಕದ ಪ್ರಶ್ನೆಗಳ ಧಾಳಿ |

ಉಗ್ಗು ಬಾಯ್ಚಪಲವಿದು – ಮರುಳ ಮುನಿಯ ||

ಮರುಳ ಮುನಿಯನ ಕಗ್ಗದಲ್ಲಿ ಆಧಿದೈವ,ಅಧಿಲೋಕ ಮತ್ತು ಅಧ್ಯಾತ್ಮ ಎಂಬ ಮೂರು ಗಹನವಾದ ವಸ್ತು ವಿಷಯಗಳು ಹಾಸುಹೊಕ್ಕಾಗಿ ಬಂದಿವೆ.ಎಂದಾಗ ಇಡೀ ಬ್ರಹ್ಮಾಂಡವೇ ಇದರಲ್ಲಿ ಇದೆ ಎಂದು ಹೇಳಿದಂತಾಯಿತು. ಅಧ್ಯಾತ್ಮ ಎಂದಾಗ ಅದರಲ್ಲಿ ಬರುವ ಆತ್ಮ ಪದವೇ ಈ ನಮ್ಮ ನಮ್ಮ ಭೌತಿಕ ಶರೀರಕ್ಕೆ ಸಂಬಂಧ ಹೊಂದಿದ್ದು.ಒಟ್ಟರ್ಥದಲ್ಲಿ ಗ್ರಹಿಕೆಗೆ ಒಳಗಾದಾಗ, ಮೇಲೆ ಹೇಳಿದ ಮೂರು ಸಂಗತಿಗಳು ಒಂದೇ ಎನ್ನುವ ವಿಸ್ಮಯಕಾರಿ ಅರ್ಥ ಉದ್ಭವಿಸುತ್ತದೆ.ಈ ನಮ್ಮ ಜೀವ ಜಗತ್ತಿನ ಎಲ್ಲಾ ಆಗುಹೋಗುಗಳಿಗೆ ಕಾರಣವಾದ ಕಾಣದ ಕೈ ಒಂದು ಇದೆ.ಅದೇ ಮಹಾ ಚೈತನ್ಯ .ಅದನ್ನು ಹರಿ, ಹರ, ಬ್ರಹ್ಮ ಎಂದು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು.ಬಾಳಿಗೆ ಧೃಢವಾಗಿ ಇರಬೇಕಾದದ್ದು ನಂಬಿಕೆ.(ಓದಿ:ಡಿ.ವಿ.ಜಿ ಯವರ ಬಾಳಿಗೊಂದು ನಂಬಿಕೆ).ಅದೇ ನಮ್ಮ ಬಾಳನ್ನು ಬೆಳಗಿಸುವಂತಹದು.)

ನಂಬು ನೀ ದೈವವನು ನಂಬು ಸ್ವಯಂಭುವನು|

ನಂಬು ಸಾಂಬನ ಮನದೆ ತುಂಬು ಭಕುತಿಯನು||

ಬಿಂಬವೋ ಕಂಬವೋ ನಂಬಿಕೆಯ ಮಾತ್ರ ದಿಂ |

ದಿಂಬುಗೊಳುವುದು ಜೀವ – ಮರುಳ ಮುನಿಯ.

ಆಲಸ್ಯತನ ನಮ್ಮ ಸ್ವಭಾವಜನ್ಯ.ಹೀಗಾಗಿ ನಾವು ನಮ್ಮ ಕರ್ತವ್ಯ ಗಳಿಂದ ವಿಮುಖರಾಗಿ ಎಲ್ಲವನ್ನು ದೇವರ ಮೇಲೆ ಹಾಕಿ  ಬಿಡುತ್ತೇವೆ.ಅದು ಸರಿಯಾದ ಕ್ರಮ ಅಲ್ಲ ಎನ್ನುತ್ತಾನೆ ಮರುಳ ಮುನಿಯ :

ನೆಚ್ಚದಿರು ದೈವವನು ಬೆಚ್ಚದಿರಾದಾರಿಗಂ |

ಎಚ್ಚರಿರು ನಿನ್ನ ಸತ್ವದಲಿ  ನೀ ನಿಂತು ||

ಅಚ್ಚುಮೆಚ್ಚೆನಾದರಿರಲಿ ಲೋಕಕ್ಕೆ ಬಿಡು|

ರಚ್ಚೆ ನೀನೆ ನಿನಗೆ — ಮರುಳ ಮುನಿಯ||

ಈ ಭೂಮಿಗೆ ಬಂದಿರುವ ಆ ದೇವನ ನಿರ್ಮಿಸಿದ ಒಂದು ಪಾತ್ರ ನಾವು. ನಮ್ಮ ಪಾತ್ರ ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳುವದು ನಮ್ಮ ಕರ್ತವ್ಯ. ಅದು ಬಿಟ್ಟು ಇಡೀ ವಿಶ್ವದ  ಮೂಲವನ್ನು ಹುಡುಕುವುದು ದುಸ್ಸಾಹಸ.ಯಾಕೆಂದರೆ ಪ್ರಕೃತಿ ತನ್ನ ರಹಸ್ಯವನ್ನು ಅಂದಿಗೂ ಇಂದಿಗೂ ಬಿಟ್ಟುಕೊಟ್ಟಿಲ್ಲ.

ಅರಸುತ್ತ ತತ್ವವನು ಬಹುದೂರ ಚರಿಸದಿರು |

ಅರಿವಿಗೆಟುಕಿದನಿತ್ತನಡೆಬಿಡದೆ ಚರಿಸು ||

ತರುವಿನವೊಲರಿವು ತಾನಾಗಿ ಬೆಳೆವುದು ಸಾಜ|

ಹೊರಗುಂಟೆ ಬೇರ್ ಸಸಿಗೆ ? – ಮರುಳ ಮುನಿಯ||

ಹೀಗಾಗಿ ನಿನ್ನನ್ನು ನೀನು ತಿಳಿದು ಬದುಕುವದರಲ್ಲಿ ಸುಖವಿದೆ.ಅದನ್ನು ಬಿಟ್ಟು ನಾನು ಎನ್ನುವ ಅಹಂಕಾರದಿಂದ ಜಗತ್ತಿಗೆ ಶಾಶ್ವತವಾದ ಶಾಂತಿ ಕೊಡುತ್ತೇನೆ ಎನ್ನುವದು ಒಂದು ರೀತಿಯ ಭ್ರಮೆ.ಅಂತಹದೊಂದು ಇದೆ ಎನ್ನುವುದು ಇಲ್ಲ.ಅದೇನೇ ಇದ್ದರೂ ಅದು ಉಪಶಮನ ಅಷ್ಟೇ. ಅದಕ್ಕೇಂದೆ ಹಿರಿಯರು ಇದೊಂದು ಸಮುದ್ರದ ಅಲೆಯಂತೇ ಎಂದು ವ್ಯಾಖ್ಯಾನಿಸಿದ್ದಾರೆ.ಈ ಜಗತ್ತಿನ ಸೃಷ್ಟಿಯೇ ಒಂದು ವಿಷಮ.ಅದನ್ನು ಸರಿಪಡಿಸಲು ನಾನು ನೀವು ಯಾರು ?

ಡಿ.ವಿ..ಜಿ.ಯವರ ಕೈಬರಹ

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು ?

ಕಾಕುತಸ್ಥನೆ ಕೃಷ್ಣನೇ ಬುದ್ಧಜಿನರೆ ? ||

ಸಾಕ್ರೆಟಿಸ್ ಏಸರೇ ಮೋಸಸ್ ಮಹಮ್ಮದರೆ |

ಸ್ವೀಕರಿಸಿತಾರನದು ? — ಮರುಳ ಮುನಿಯ.

 ಒಂದು ಬೃಹತ್  ಕಪ್ಪಾದ ಶಿಲೆ ಒಂದೆಡೆ ಇದೆ; ಜಕ್ಕಣ್ಣ ಶಿಲ್ಪಿ ಜನಿಸಿದ.ಜಗತ್ತಿನ ಪುಣ್ಯದಿಂದ ಇಬ್ಬರಿಗೂ ಸಂಪರ್ಕ ಏರ್ಪಟ್ಟಿತು. ಫಲವೇ ಬೇಲೂರು ಚೆನ್ನ ಕೇಶವ.ವಿಜ್ಞಾನ ಕಾವ್ಯ ಮೊದಲಾದ ಕಾವ್ಯಗಳೂ ಹೀಗೆಯೇ ! ವಿಶ್ವದ ಅಕಾರಾಸ್ತೆಯಿಂದ  ಇವುಗಳು ಹುಟ್ಟಿಕೊಂಡವು.ಮನುಕುಲಕ್ಕೆ ವಿಸ್ತಾರತೆಯನ್ನು ಒದಗಿಸಿದವು.ದೈವಾನುಕೂಲದಿಂದ ಸತ್ಯ ಸೌಂದರ್ಯ ಮತ್ತು ಶಿವ ನ ಸಾಕ್ಷಾತ್ಕಾರ :

ಜೀವಕ್ಕೆ ಸತ್ಯಾರ್ಥವನು ಬೆಳಗಿಸುವ |

ದೀವಿಗೆಗಳೀಮೂರು ಹೊರಹೊಳಗೆ ಸುತ್ತಲ್ ||

ಕಾವ್ಯವಿಜ್ಞಾನಂಗಳಿವು ಮೇಲೆ ದೈವ ಪ್ರ – |

ಭಾವವೀ ಮೂರೆಲವೊ – ಮರುಳ ಮುನಿಯ ||

ಸಾಹಿತಿ ಶಿಕ್ಷಕ ಜಾನಪದ ವಿದ್ವಾಂಸರು ಆಗಿದ್ದ ಕು.ಶೀ.ಹರಿದಾಸಭಟ್ಟರ ಮಾತಿನಲ್ಲಿ ಹೇಳುವದಾದರೆ ‘ ಗಟ್ಟಿಯಾದ ಚಿಂತನೆಯ ಫಲವತ್ತಾದ ಮನಸ್ಸಿನ ಹೊಲದಲ್ಲಿ ಹುಟ್ಟಿದ ಈ ಹೊಸ ಕಗ್ಗ,ಡಿ.ವಿ.ಜಿ.ಯವರ ವಿಶಿಷ್ಟ ಕೊಡುಗೆ.ಈ ಸಾಲುಗಳಲ್ಲಿರುವ ಜೀವನದ ಅನುಭವವನ್ನು ನಮ್ಮ ಸ್ವಾನುಭವದೊಡನೆ ತೂಗಿ ನೋಡಬೇಕು.ಸಂತೋಷದಲ್ಲಿರುವಾಗಲೂ,ಇವನ್ನು ಆಸ್ವಾದಿಸಬಹುದು.ಸಂಕಟದಲ್ಲೂ  ಓದಿ ಧೈರ್ಯ ತಾಳಬಹುದು ‘.

ಮರುಳ ಮುನಿಯನ ಕಗ್ಗ ಓದುವಾಗ ಡಿ.ವಿ.ಜಿ.ಯವರ ಆಳ ಎತ್ತರ ಅಗಲಗಳಿಗೆ ಒಂದು ಗಡಿ ಅಥವಾ ಚೌಕಟ್ಟು ಇಲ್ಲ ಎನ್ನುವ ಸಂಗತಿ ಮನದಟ್ಟಾಗುತ್ತದೆ.ಮರುಳ ಮುನಿಯ ಮಂಕು ತಿಮ್ಮನ ತಮ್ಮನಾದರೂ ಅಣ್ಣನಿಗೆ ಸರಿಸಮಾನ ಮತ್ತು ಕೆಲವೆಡೆ ಅಣ್ಣನನ್ನೂ ಮೀರಿ ನಿಲ್ಲುತ್ತಾನೆ.

ಇದನ್ನು ಹೀಗೆ ಓದಿ ಹಾಗೆ ಪಕ್ಕದಲ್ಲಿ ಇರಿಸುವಂತಹದಲ್ಲ. ಅಧ್ಯಯನ ಮನನ ಚಿಂತನಕ್ಕೆ ತಕ್ಕುದಾದ ವೇದಿಕೆ ಈ ಹೊತ್ತಿಗೆ

ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |

ಮನನನುಸಂಧಾನಕಾದುದೀ ಕಗ್ಗ ||

ನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ|

ಅನುಭವಿಸಿ ಚಪ್ಪರಿಸೋ — ಮರುಳ ಮುನಿಯ.

                  —————————–

ಕೃತಜ್ಜತೆ :

ಮರುಳ ಮುನಿಯನ ಕಗ್ಗ – ಡಿ.ವಿ.ಜಿ. –  ಪ್ರಥಮ ಮುದ್ರಣ .1984

ಡಿ.ವಿ.ಜಿ.ಹಸ್ತಾಕ್ಷರ – ಕೃಪೆ ಗೋಖಲೆ ಸಾರ್ಜನಿಕ ವಿಚಾರ ಸಂಸ್ಥೆ.

ಬೆನ್ನುಡಿ – ಕು.ಶಿ.ಹರಿದಾಸಭಟ್ಟರು.

**************************************************************

Leave a Reply

Back To Top