ದಾರಾವಾಹಿ
ಅದ್ಯಾಯ-06
ಅದು ಎಪ್ರಿಲ್ ತಿಂಗಳ ತೀಕ್ಷ್ಣ ಸೆಕೆಗಾಲ. ಸೂರ್ಯನ ಝಳಕ್ಕೆ ಈಶ್ವರಪುರದ ಅನೇಕ ಬಾವಿಗಳು ಏದುಸಿರುಬಿಡುತ್ತ ನೀರಿಂಗುತ್ತಿದ್ದ ಸಮಯ. ಮಳೆಯಿನ್ನೂ ದೂರವಿತ್ತು. ಹಳೆಯ ಬಾವಿಗಳ ಹೂಳೆತ್ತುವ ಮತ್ತು ಹೊಸದನ್ನು ತೋಡುವ ಕೆಲಸಕಾರ್ಯಗಳು ಭರದಿಂದ ನಡೆಯುತ್ತಿದ್ದವು. ಆವತ್ತು ನೋಳೆಗ್ರಾಮದ ಅನಂತಶೆಟ್ಟರ ತೋಟದ ಬಾವಿಯ ಮಣ್ಣು ಹೊರಲು ಹೋಗಿದ್ದ ಗೋಪಾಲ ದಿನವಿಡೀ ಬಿಡುವಿಲ್ಲದೆ ದುಡಿದ. ಸಂಜೆ ಸುಸ್ತಾಗಿ, ಸಂಬಳ ಪಡೆದು ಸೈಕಲ್ ಏರಿ ಮನೆಯತ್ತ ಹೊರಟ. ಅವನ ಮನೆಯಲ್ಲಿ ಮೀನು ಪದಾರ್ಥ ಮಾಡದೆ ವಾರ ಕಳೆದಿತ್ತು. ಆದ್ದರಿಂದ ಅಂಬಾಗಿಲಿನ ಮಾರುಕಟ್ಟೆಯತ್ತ ಸಾಗಿದ. ಮೀನು ಮಾರುವ ಎಂಟ್ಹತ್ತು ಮಹಿಳೆಯರು ಕೂಗಿ ಕೂಗಿ ಕರೆಯುತ್ತಿದ್ದರೂ ಅವರತ್ತ ಗಮನಕೊಡದೆ ಎಲ್ಲರ ಮೀನಿನ ಬುಟ್ಟಿಗಳನ್ನು ಒಂದೊಂದಾಗಿ ಇಣುಕುತ್ತ ತಾಜಾ ಮೀನು ಹುಡುಕುತ್ತ ತುಸುಹೊತ್ತು ಓಡಾಡಿದ. ಬಳಿಕ ಒಬ್ಬಳಿಂದ ಸಾಕಷ್ಟು ಚೌಕಾಸಿ ಮಾಡಿ ನೂರು ರೂಪಾಯಿಗೆ ಹತ್ತು ಬಂಗುಡೆ ಕೊಂಡು ಮನೆಗೆ ಹಿಂದಿರುಗಿದ. ಸೈಕಲನ್ನು ಹೊರಗಿನ ಗೋಡೆಗೆ ಒರಗಿಸುತ್ತ, ‘ರಾಧಾ…ಎಲ್ಲಿದ್ದಿ ಮಾರಾಯ್ತೀ…!’ ಎಂದು ಕೂಗಿದ. ಅಪ್ಪನ ಧ್ವನಿ ಕೇಳಿದ ಮಕ್ಕಳು ಹೊರಗ್ಹೋಡಿ ಬಂದು ತೆಕ್ಕೆಗೆ ಬೀಳಲು ಹವಣಿಸಿದವು. ಆದರೆ ಅಪ್ಪನ ಮೈಕೈಯೆಲ್ಲ ಮೆತ್ತಿಕೊಂಡಿದ್ದ ಶೇಡಿಮಣ್ಣನ್ನು ಕಂಡು ಹೇಸಿಗೆ ಬಂದು ದೂರದಿಂದಲೇ ಖುಷಿಯಿಂದ ಕುಣಿಯತೊಡಗಿದರು. ಗೋಪಾಲನಿಗೆ ಮಕ್ಕಳ ಮೇಲೆ ಅಕ್ಕರೆ ಉಕ್ಕಿತು. ತಾನು ತಂದಿದ್ದ ತಿಂಡಿಯ ಪೊಟ್ಟಣವನ್ನು ಅವರ ಕೈಗಿತ್ತ. ಅವರು ಅದನ್ನಲ್ಲೇ ಬಿಚ್ಚಿ ಹಂಚಿಕೊಂಡು ತಿನ್ನುತ್ತ ಅಪ್ಪನಿಗೆ ಅಂದಿನ ತಮ್ಮ ವಿಶೇಷವನ್ನು ವಿವರಿಸಲಾರಂಭಿಸಿದರು. ಅಷ್ಟರಲ್ಲಿ ರಾಧಾ ಬೈರಾಸಿನೊಂದಿಗೆ ಹೊರಗೆ ಬಂದಳು. ಗೋಪಾಲ ಮೀನಿನ ತೊಟ್ಟೆಯನ್ನು ಅವಳ ಕೈಗೆ ಕೊಡುತ್ತ ಅವಳ ಮುಖ ಕಪ್ಪಿಟ್ಟಿದ್ದನ್ನು ಕಂಡವನು, ಅಯ್ಯೋ ದೇವರೇ… ಇವಳಿಗೇನಾಯ್ತಪ್ಪ? ಎಂದುಕೊಂಡು, ‘ಏನಾಯ್ತು ಮಾರಾಯ್ತೀ…? ಮುಖ ಯಾಕೆ ಗಂಟು ಬಿದ್ದಿದೆ?’ ಎಂದ ಬೇಸರದಿಂದ.
‘ಏನಿಲ್ಲ! ಮೊದಲು ನೀವು ಹೋಗಿ ಸ್ನಾನ ಮಾಡಿಕೊಂಡು ಬನ್ನಿ!’ ಎಂದು ರಾಧಾ ಒರಟಾಗಿ ಹೇಳಿ ಅವನತ್ತ ಬೈರಾಸು ಎಸೆದು ದುರದುರನೇ ಒಳಗೆ ಹೋದಳು. ದಿನವಿಡೀ ಸುಡುಬಿಸಿಲಿನಲ್ಲಿ ಒಡಲು ದುಡಿಸಿಕೊಂಡು ಸೋತು ಸುಣ್ಣವಾಗಿದ್ದ ಗೋಪಾಲನ ಮನಸ್ಸು ತಟ್ಟನೆ ಮುದುಡಿತು. ಮಣ್ಣು ಮೆತ್ತಿದ ಬಟ್ಟೆಗಳನ್ನು ಉದಾಸೀನದಿಂದ ಕಳಚಿ ಅಲ್ಲೇ ಮೂಲೆಗೆಸೆದು ಬೈರಾಸು ಸುತ್ತಿಕೊಂಡು ತೋಟದ ಬಾವಿಯತ್ತ ನಡೆದ. ಮಕ್ಕಳು ನಲಿಯುತ್ತ ಅಪ್ಪನನ್ನು ಹಿಂಬಾಲಿಸಿದರು. ಪಶ್ಚಿಮದ ದಟ್ಟ ಸಂಜೆಯೋಕುಳಿಯ ಹೊಂಬೆಳಕು ಇಡೀ ತೋಟಕ್ಕೆ ಭವ್ಯತೆಯನ್ನು ಪಸರಿಸಿತ್ತು. ಪುರಾತನ ಸಂಪಿಗೆ ಹೆಮ್ಮರವೊಂದರ ಮೇಲಿನ ತಂತಮ್ಮ ಗೂಡು, ಪೊಟರೆಗಳನ್ನು ಸೇರುತ್ತಿದ್ದ ಬಗೆಬಗೆಯ ಪಕ್ಷಿಗಳ ಸಮ್ಮಿಶ್ರ ಭಾವಗಳ ಕೂಗು, ಕಲರವವು ತೋಟದೊಳಗನ್ನು ಸ್ವರ್ಗವನ್ನಾಗಿಸಿತ್ತು. ಮಕ್ಕಳು ಅವನ್ನೆಲ್ಲ ಸವಿಯುತ್ತ ಅಪ್ಪನ ಹಿಂದೆ ಸಾಗುತ್ತಿದ್ದರು.
ಅಲ್ಲೊಂದು ಮೂಲೆಯಲ್ಲಿ ಸಣ್ಣ ಪೊದೆಯೊಂದಿತ್ತು. ಅದರ ಬಳಿ ಪಿಕಳಾರ ಹಕ್ಕಿಗಳೆರಡು ಕರ್ಕಶವಾಗಿ ಕೂಗುತ್ತ ಹಾರಾಡುತ್ತಿದ್ದವು. ಅದು ಮಕ್ಕಳ ಕಣ್ಣಿಗೆ ಬಿದ್ದು ಅತ್ತ ಓಡಿದರು. ಅಷ್ಟರಲ್ಲಿ ಆ ಪೊದರಿನಿಂದ ಕಪ್ಪುಬಿಳುಪಿನ ಬೆಕ್ಕೊಂದು ಚಂಗನೆ ಜಿಗಿದು ಓಡಿ ಹೋಯಿತು. ಗೋಪಾಲನ ಮಗಳು ಅಶ್ವಿನಿ ಪೊದೆಯನ್ನು ಮೆಲ್ಲನೆ ಇಣುಕಿದಳು. ಅಲ್ಲಿ ಪಿಕಳಾರಗಳ ಗೂಡು ಕಾಣಿಸಿತು. ಅದು ಹರಿದು ಅಸ್ತವ್ಯಸ್ತವಾಗಿತ್ತು. ಆದರೆ ಹಕ್ಕಿಮರಿಗಳಿಗೆ ಹಾನಿಯಾಗಿರಲಿಲ್ಲ. ಅಶ್ವಿನಿಯ ತಮ್ಮ ಪ್ರಥ್ವೀಶನೂ ಸಮೀಪ ಬಂದ. ಇಬ್ಬರೂ ಸೇರಿ ಗೂಡಿನ ಹರಿದ ಭಾಗವನ್ನು ಜೋಪಾನವಾಗಿ ಜೋಡಿಸಿದರು.
‘ಅಕ್ಕಾ ಈ ಮರಿಗಳನ್ನು ಕೊಂಡೊಯ್ದು ಸಾಕೋಣವಾ…!’ ಎಂದ ಪ್ರಥೀಶ ಉತ್ಸಾಹದಿಂದ. ಅಕ್ಕನಿಗೂ ಹುರುಪೆದ್ದಿತು. ಆದರೆ ಅವರ ಮಾತುಗಳು ಗೋಪಾಲನಿಗೆ ಕೇಳಿಸಿದವು. ‘ಹೇ, ಮಕ್ಕಳೇ ಆ ಹಕ್ಕಿಗಳನ್ನು ಮುಟ್ಟಬೇಡಿ! ಅವುಗಳನ್ನು ಸಾಕಲು ನಮ್ಮಿಂದ ಆಗುವುದಿಲ್ಲ. ಅವಕ್ಕೆ ತೊಂದರೆ ಮಾಡದೆ ಈಚೆಗೆ ಬಂದುಬಿಡಿ!’ ಎಂದು ನಯವಾಗಿ ಗದರಿದ. ಮಕ್ಕಳು ಮುಖ ಊದಿಸಿಕೊಂಡು ಹಿಂದಿರುಗಿದರು. ಆದರೆ ಆ ಪಕ್ಷಿಗಳ ಗೂಡಿಗೆ ದಾಳಿಯಿಟ್ಟಿದ್ದ ಬೆಕ್ಕು ಇನ್ನೂ ಅಲ್ಲೇ ಹೊಂಚು ಹಾಕುತ್ತಿತ್ತು. ಅದನ್ನು ಗಮನಿಸಿದ ಗೋಪಾಲನಿಗೆ ಸಿಟ್ಟು ಬಂತು. ಅದು ತೋಟದೆಜಮಾನ ಮುತ್ತಯ್ಯನ ಬೆಕ್ಕೆಂದು ಗೊತ್ತಿದ್ದರೂ ಕಲ್ಲು ಹೊಡೆದು ದೂರಕ್ಕಟ್ಟಿದ. ಬಳಿಕ ಮನಸ್ಸು ಹಗುರಾಗುವಷ್ಟು ಹೊತ್ತು ತಣ್ಣೀರು ಸುರಿದುಕೊಂಡು ಸ್ನಾನ ಮಾಡಿ ಮನೆಗೆ ಬಂದವನು ಹುಸ್ಸಪ್ಪಾ! ಎಂದು ಗೋಡೆಗೊರಗಿ ಕುಳಿತ.
‘ಸ್ವಲ್ಪ ನೀರು ಕೊಡು ಮಾರಾಯ್ತೀ…’ ಎಂದು ಹೆಂಡತಿಗೆ ಸೂಚಿಸಿದ. ಆದರೆ ಇವತ್ತು ಗಂಡನೂ, ‘ಸ್ವಲ್ಪ ನೀರು ಕೊಡು ಮಾರಾಯ್ತೀ’ಎಂದದ್ದು ರಾಧಳಿಗೆ ಮುತ್ತಯ್ಯನ ಮೇಲಿನ ಕೋಪವನ್ನು ಇನ್ನಷ್ಟು ಕೆರಳಿಸಿತು. ಮುಖ ಊದಿಸಿಕೊಂಡು ನೀರು ತಂದು ಗಂಡನೆದುರು ಕುಕ್ಕಿದವಳು, ‘ಜಾಗದ ವಿಚಾರ ಏನಾಯ್ತು ಮಾರಾಯ್ರೇ…?’ ಎಂದಳು ಸಿಡುಕಿನಿಂದ.
‘ಹುಡುಕುತ್ತಿದ್ದೇನೆ ಮಾರಾಯ್ತೀ, ಜೀವ ತಿನ್ನಬೇಡ. ಹೊಟ್ಟೆ ಹಸಿಯುತ್ತಿದೆಯಿಲ್ಲಿ. ಬೇಗ ಪದಾರ್ಥ ಮಾಡಿ ಬಡಿಸು. ಅದರ ಬಗ್ಗೆ ಆನಂತರ ಮಾತಾಡುವ!’ ಎಂದು ತಾನೂ ಸಿಡುಕಿದ.
ಅಷ್ಟಕ್ಕೇ ರಾಧಾ ಸ್ಫೋಟಗೊಂಡು, ‘ಯಾರು, ಯಾರು ಜೀವ ತಿನ್ನುವುದು? ನಾನಾ…!’ ಎಂದು ಕಿರುಚಿದಳು. ಗೋಪಾಲ ವಿಚಲಿತನಾದ!
‘ನಿಮ್ಮ ಈ ಹರ್ಕಟ್ಟು ಮನೆಯ ಮಾಲಿಕನ ಹಿಂಸೆ ಸಾಕಾಗಿಬಿಟ್ಟಿದೆ ಮಾರಾಯ್ರೆ ನಂಗೆ! ನೀವೊಂದು ಬೆಳಗಾತ ಹೋದರೆ ಮತ್ತ್ಯಾವಾಗಲೋ ಬರುತ್ತೀರಿ. ಹೆಂಡತಿ ಮಕ್ಕಳ ಚಿಂತೆ ನಿಮಗ್ಯಾಕೆ ಹತ್ತುವುದಿಲ್ಲ ಹೇಳಿ…?’ ಎಂದು ರೇಗಾಡಿದಳು. ಆದರೆ ಗೋಪಾಲ ತಾಳ್ಮೆ ತಂದುಕೊಂಡ.
‘ಅಂತಹದ್ದೇನಾಯ್ತು ಮಾರಾಯ್ತೀ? ಅವನಿಂದೇನು ತೊಂದರೆಯಾಯ್ತು ನಿಂಗೆ…?’ ಎಂದ ಸೌಮ್ಯವಾಗಿ.
‘ಇನ್ನೂ ಏನೂ ಆಗಿಲ್ಲ. ಆದರೆ ನೀವು ಹೀಗೆಯೇ ಉದಾಸೀನ ಮಾಡುತ್ತ ಕುಳಿತುಬಿಟ್ಟರೆ ಮುಂದೊಂದು ದಿನ ನಿಮ್ಮ ಹೆಂಡತಿ ಮಕ್ಕಳ ಹೆಣಗಳನ್ನು ಇದೇ ತೋಟದ ಬಾವಿಯಲ್ಲಿ ನೋಡಬೇಕಾದೀತು!’ ಎಂದು ಕಿರುಚಿ ಗಳಗಳನೇ ಅತ್ತಳು. ಗೋಪಾಲ ಒಮ್ಮೆಲೇ ಅವಕ್ಕಾದ. ಅಂದರೆ, ನಡೆಯಬಾರದ್ದೇನೋ ನಡೆದಿದೆ ಎಂದುಕೊಂಡವನು ಎದ್ದು ಅವಳ ಸಮೀಪ ಹೋಗಿ ಕುಳಿತು ತಲೆ ನೇವರಿಸುತ್ತ, ‘ಅಳಬೇಡ ಮಾರಾಯ್ತಿ. ಏನಾಯ್ತು ಅಂತ ಬಿಡಿಸಿ ಹೇಳು?’ ಎಂದ ಅಕ್ಕರೆಯಿಂದ. ಆಗ ರಾಧಾ ಸ್ವಲ್ಪ ಸ್ಥಿಮಿತಕ್ಕೆ ಬಂದಳು.
‘ಥೂ! ಆ ಮನುಷ್ಯ ಒಳ್ಳೆಯವನಲ್ಲ ಮಾರಾಯ್ರೇ. ದಿನಾಲೂ ಬೆಳಿಗ್ಗೆ ನೀವು ಹೋದ ಕೂಡಲೇ ಅಂಗಳಕ್ಕೆ ಬಂದು ನಿಂತುಕೊಂಡು ಹೊರಗೆ ಕರೆಯುತ್ತಾನೆ. ನಂತರ ಏನೇನೋ ಅಗತ್ಯವಿಲ್ಲದ ಮಾತಾಡ್ತಾ ಹಿಂಸೆ ಮಾಡ್ತಾನೆ. ಆವಾಗ ಅವನ ದೃಷ್ಟಿಯು ಕಿತ್ತು ತಿನ್ನುವ ಹದ್ದಿನಂತಿರುತ್ತದೆ. ಆದರೆ ಹಾಳಾದವನು ಇವತ್ತು ಮನೆಯೊಳಗೆಯೇ ಬಂದುಬಿಟ್ಟಿದ್ದ!’ ಎಂದು ನಡೆದ ಘಟನೆಯನ್ನು ವಿವರಿಸಿದವಳು, ‘ಆದಷ್ಟು ಬೇಗ ನಮ್ಮನ್ನೆಲ್ಲಾದರೂ ದೂರ ಕರೆದುಕೊಂಡು ಹೋಗಿ ಮಾರಾಯ್ರೇ. ನಿಮ್ಮ ದಮ್ಮಯ್ಯ!’ ಎಂದೆನ್ನುತ್ತ ಮೌನವಾಗಿ ಅತ್ತಳು.
ಅಷ್ಟು ಕೇಳಿದ ಗೋಪಾಲನಿಗೆ ಸಿಟ್ಟು ನೆತ್ತಿಗೇರಿತು. ‘ಛೇ! ಆ ನಾಯಿಯ ಮಗ ಇಂಥವನಾ…! ಅವನ್ನು ಈಗಲೇ ಸಿಗಿದು ಹಾಕಿ ಬರುತ್ತೇನೆ!’ ಎಂದಬ್ಬರಿಸಿ ರಪ್ಪನೆದ್ದ. ಆದರೆ ಅವನ ರೋಷವನ್ನು ಕಂಡ ರಾಧಾ ಹೆದರಿಬಿಟ್ಟಳು. ‘ಅಯ್ಯಯ್ಯೋ ದೇವರೇ…! ನಿಮ್ಮದೆಂತದು ಮಾರಾಯ್ರೇ ಹುಚ್ಚಾಟ! ಎಲ್ಲಿಗೆ ಹೋಗುತ್ತೀರೀ…? ಅವನ ಹಂಗಿನಲ್ಲೇ ನಾವಿದ್ದುಕೊಂಡು ಅವನ ಮೇಲೆಯೇ ಕೈ ಮಾಡಿದರೆ ಸುಮ್ಮನೆ ಬಿಟ್ಟಾನಾ? ಈಗಲೇ ಒದ್ದು ಹೊರಗೆ ಹಾಕಿದರೆ ನಮ್ಮನ್ನು ಕಟ್ಟಿಕೊಂಡು ಮತ್ತೆಲ್ಲಿಗೆ ಓಡುತ್ತೀರಿ…?’ ಎಂದು ಗದರಿಸಿದಳು. ಆಗ ಗೋಪಾಲ ಸ್ವಲ್ಪ ಮೆತ್ತಗಾದ.
‘ಶ್ರೀಮಂತಿಕೆಯ ಅಹಂಕಾರದಿಂದ ಕೊಬ್ಬಿರುವ ಇಂಥ ನೀಚರ ಹಂಗಿನಿಂದ ಮೊದಲು ಬಿಡುಗಡೆ ಪಡೆಯುವುದು ಹೇಗೆ ಅಂತ ಯೋಚಿಸಿ. ಆ ಮೇಲೆ ನಿಮ್ಮ ಹೆಂಡತಿ ಮಕ್ಕಳಿಗೆ ಯಾರ ಭಯವೂ ಇರುವುದಿಲ್ಲ! ಇಲ್ನೋಡಿ ನೀವು ಅದೇನು ಮಾಡುತ್ತೀರೋ ನನಗೆ ಗೊತ್ತಿಲ್ಲ. ಇನ್ನು ಒಂದು ವಾರದೊಳಗೆ ಎಲ್ಲಾದರೊಂದು ತುಂಡು ಜಾಗವನ್ನು ಮಾಡಲೇಬೇಕು ನೀವು. ಆವತ್ತು ಕೋಟ್ನಬೆಟ್ಟಿನ ಬಂಡೆಯ ಮೇಲ್ಲೊಂದು ಜಾಗವಿದೆ ಅಂತ ಹೇಳಿದ್ದಿರಲ್ಲ ಅದಾದರೂ ಚಿಂತೆಯಿಲ್ಲ. ನಾಳೆಯೇ ಹೋಗಿ ವಿಚಾರಿಸಿಕೊಂಡು ಬನ್ನಿ. ಒಮ್ಮೆ ಇಲ್ಲಿಂದ ಹೊರಟು ಹೋಗುವ!’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ ರಾಧಾ ಗಂಡನ ರೋಷವನ್ನು ಉಪಾಯವಾಗಿ ಕಾರ್ಯ ಸಾಧನೆಯತ್ತ ತಿರುಗಿಸಿಬಿಟ್ಟಳು.
ಹೆಂಡತಿಯ ಮಾತಿನಲ್ಲೂ ಅರ್ಥವಿದೆ ಎಂದುಕೊಂಡ ಗೋಪಾಲ ಸಮಾಧಾನವಾದ. ಆದರೂ ಮುತ್ತಯ್ಯ ತನ್ನ ಮನೆಗೆ ನುಗ್ಗಿದ್ದನ್ನು ನೆನೆದವನಲ್ಲಿ ಅಸಹನೆ ಕುದಿಯಿತು. ಅವುಡುಗಚ್ಚಿ ಸಹಿಸಿಕೊಂಡ. ಅಪ್ಪ, ಅಮ್ಮನ ಬಿರುಸಿನ ಪ್ರಹಸನ ನಡೆಯುವ ಸ್ವಲ್ಪ ಹೊತ್ತಿನ ಮುಂಚೆ ಚಿಮಿಣಿ ದೀಪದ ಸುತ್ತ ಕುಳಿತು ಖುಷಿಯಿಂದ ಆಟವಾಡುತ್ತಿದ್ದ ಮಕ್ಕಳಿಬ್ಬರು ಅಪ್ಪನ ಆವೇಶವನ್ನೂ ಅಮ್ಮನ ಅಳುವನ್ನೂ ಕಂಡು ಬೆಚ್ಚಿಬಿದ್ದು ಮೂಲೆ ಸೇರಿದ್ದರು. ಗೋಪಾಲನಿಗೆ ತನ್ನ ತಪ್ಪಿನರಿವಾಗಿ ಅವರತ್ತ ಮಮತೆಯ ದೃಷ್ಟಿ ಹರಿಸಿದ. ಅವರ ಮುಖ ಬಾಡಿತ್ತು. ಪ್ರೀತಿಯಿಂದ ಹತ್ತಿರ ಕರೆದು ಮುದ್ದಿಸುತ್ತ ಅಂಗಳಕ್ಕೆ ಕರೆದೊಯ್ದು ಚಂದಿರನನ್ನೂ ನಕ್ಷತ್ರಗಳನ್ನೂ ತೋರಿಸುತ್ತ ಕಥೆ ಹೇಳತೊಡಗಿದ. ಮಕ್ಕಳು ಕಥೆ ಕೇಳುತ್ತ ಗೆಲುವಾದವರು ತಿಂಗಳ ಬೆಳಕಿನ ಅಂಗಳಲ್ಲಿ ಮುಟ್ಟಾಟವಾಡತೊಡಗಿದರು. ಗೋಪಾಲ ಬೀಡಿಯೊಂದನ್ನು ಸೇದುತ್ತ ಯೋಚಿಸತೊಡಗಿದ.
ರಾಧಾಳೂ ಪಾಪ ದಿನವಿಡೀ ಬೀಡಿ ತಿರುವುತ್ತಾ ಜೊತೆಗೆ ತೋಟದ ಕೆಲಸವನ್ನೂ ಮಾಡುತ್ತ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಸಾಕಿ ಬೆಳೆಸಲು ಪಡುತ್ತಿರುವ ಪಾಡು ತನಗೂ ತಿಳಿಯದ್ದೇನಲ್ಲ. ಆದರೂ ಕೈಯಲ್ಲಿ ನಯಾಪೈಸೆ ಇಲ್ಲದೆ ತಾನು ಮಾಡುವುದಾದರೂ ಏನು? ನಿಂತ ನಿಲುವಿನಲ್ಲೇ ಜಾಗ ಕೊಳ್ಳುವುದೆಂದರೆ ಸುಲಭದ ಮಾತಾ! ಸುತ್ತಮುತ್ತಲಿನ ಊರುಗಳಲ್ಲಿ ಕಾಲುದಾರಿಗಳೇ ಇಲ್ಲದ ಜಾಗದ ಬೆಲೆಯೂ ಆಕಾಶಕ್ಕೇರಿದೆ. ಸೆಂಟ್ಸಿಗೆ ಎರಡು ಮೂರು ಲಕ್ಷಕ್ಕಿಂತ ಕಡಿಮೆಯಿಲ್ಲ. ಅಷ್ಟಾದರೂ ಪರ್ವಾಗಿಲ್ಲ. ಸಾಲಸೋಲ ಮಾಡಿಯಾದರೂ ಎರಡು ಮೂರು ಸೆಂಟ್ಸ್ ಕೊಂಡುಕೊಳ್ಳುವ ಎಂದರೆ ಅಷ್ಟು ಸಣ್ಣ ತುಂಡು ಭೂಮಿಯನ್ನು ಮಾರುವವರೂ ಬೇಕಲ್ಲ? ಅದಕ್ಕಿಂತ ಹೆಚ್ಚಿಗೆ ಕೊಳ್ಳಲು ತನ್ನಲ್ಲಿ ಸಾಮಥ್ರ್ಯವೂ ಎಲ್ಲುಂಟು? ಒಂದೆರಡು ಲಕ್ಷಕ್ಕೆ ಎರಡು ಮೂರು ಸೆಂಟ್ಸ್ ಸಿಕ್ಕಿದರೆ ರಾಧಾಳ ಚಿನ್ನವನ್ನು ಮಾರಿಯಾದರೂ ಕೊಂಡುಕೊಳ್ಳಬಹುದು. ಆದರೆ ಅಷ್ಟಕ್ಕೆ ಎಲ್ಲಿ, ಯಾರು ಮಾರುತ್ತಾರೆಂದು ಹುಡುಕುವುದು? ಎಂದು ಚಿಂತಿಸುತ್ತ ನಿರಾಶೆಗೊಂಡ. ಅಷ್ಟೊತ್ತಿಗೆ ಒಂದು ಬೀಡಿ ಮುಗಿಯಿತು. ಎರಡನೆಯದ್ದನ್ನು ಹೊತ್ತಿಸಿಕೊಂಡ. ತಲೆ ಸ್ವಲ್ಪ ಹಗುರವಾದಂತೆನಿಸಿತು. ಏನಾದರಾಗಲಿ, ಆದಷ್ಟು ಬೇಗ ಈ ಬಾಡಿಗೆ ಬದುಕಿನಿಂದ ಬಿಡುಗಡೆ ಪಡೆಯಲೇಬೇಕು. ಅದಕ್ಕಿಂತ ಮುಂಚೆ ಈ ಹಾಳು ಮುತ್ತಯ್ಯನ ಹಂಗಿನಿಂದ ಹೊರಗೆ ಬರಬೇಕು. ಇಲ್ಲದಿದ್ದರೆ ಆ ಮೂರುಕಾಸಿನವ ಇಂದಲ್ಲ ನಾಳೆ ನನ್ನ ಕೈಯಲ್ಲೇ ಕೊಲೆಯಾಗುವುದು ಖಂಡಿತಾ! ಆವತ್ತು ಆ ಅಣ್ಣಯನೂ ಹೀಗೆಯೇ ಮಾಡಿದ್ದ. ಈಗ ಇಲ್ಲಿ ಇವನ ಕಾಟವೂ ಶುರುವಾಗಿದೆ. ಇಂಥ ನಾಯಿಗಳೆಲ್ಲ ಗಂಡಸು ಜಾತಿಯ ಮರ್ಯಾದೆ ತೆಗೆಯಲೆಂದೇ ಹುಟ್ಟಿರಬೇಕು! ಇಲ್ಲ, ಇನ್ನು ಮುಂದೆ ಅಂಥ ಅನಾಹುತಕ್ಕೆ ತಾನು ಅವಕಾಶ ಕೊಡಬಾರದು! ಎಂದು ನಿರ್ಧರಿಸಿದ. ಅಷ್ಟರಲ್ಲಿ ಅರ್ಧ ಬೀಡಿ ಉರಿದಿತ್ತು. ಉಳಿದರ್ಧವನ್ನು ನೆಲಕ್ಕೆಸೆದು ಹೊಸಕಿ ಒಳಗೆ ನಡೆದ. ರಾಧಾ ಮಕ್ಕಳಿಗೆ ಊಟ ಬಡಿಸುತ್ತ ಅವರೊಂದಿಗೆ ನಗುತ್ತ ಮಾತಾಡುತ್ತಿದ್ದಳು. ಅದನ್ನು ಕಂಡ ಗೋಪಾಲನಿಗೆ ವಿಚಿತ್ರವೆನಿಸಿತು. ಆದರೂ ಅವರ ಸಂತೋಷದಲ್ಲಿ ತನ್ನ ನೋವು ಮರೆತ. ಗಂಡನನ್ನು ಕಂಡ ರಾಧಾ, ‘ಬನ್ನೀ ಮಾರಾಯ್ರೇ. ಆಗಲೇ ಹಸಿವಾಗುತ್ತಿದೆ ಅಂದಿರಿ. ಕುಳಿತುಕೊಳ್ಳಿ ಬಡಿಸುತ್ತೇನೆ’ ಎನ್ನುತ್ತ ಒಳಗೆ ಹೋದವಳು, ಬಿಸಿಬಿಸಿ ಬಂಗುಡೆ ಪದಾರ್ಥ ಮತ್ತು ಅನ್ನವನ್ನು ಇಬ್ಬರಿಗೂ ಬಡಿಸಿ ತಂದು ಗಂಡನೊಂದಿಗೆ ಊಟಕ್ಕೆ ಕುಳಿತಳು. ಎಲ್ಲರೂ ಖುಷಿಯಿಂದ ಊಟ ಮಾಡೆದ್ದರು. ಗೋಪಾಲ ಕೈತೊಳೆದು ಬಂದು ರಾಧಾಳನ್ನು ಕರೆದು ತನ್ನೆದುರು ಕೂರಿಸಿಕೊಂಡ.
‘ನೋಡು ಮಾರಾಯ್ತಿ, ಇನ್ನು ಮುಂದೆ ಏನಾದರಾಗಲಿ ಜಾಗವೊಂದನ್ನು ಮಾಡಿಯೇ ತೀರುತ್ತೇನೆ. ದೇವರು ನಮ್ಮ ಕೈಬಿಡುವುದಿಲ್ಲ. ಆದರೆ ನೀನು ಮಾತ್ರ ತಾಳ್ಮೆಯಿಂದಿರಬೇಕಷ್ಟೇ!’ ಎಂದ ದೃಢವಾಗಿ. ಆಗ ರಾಧಾಳ ಮುಖದಲ್ಲಿ ಗೆಲುವಿನ ನಗು ಮೂಡಿತು. ನಂತರ ಗೋಪಾಲ ಅವಳೊಡನೆ ಹಣ ಕೂಡಿಸುವ ಬಗ್ಗೆ ಹುರುಪಿನಿಂದ ಚರ್ಚಿಸತೊಡಗಿದ. ರಾಧಾಳಿಗೂ ಹುಮ್ಮಸ್ಸಾಯಿತು. ‘ನೋಡಿ ಮಾರಾಯ್ರೇ, ನೀವೊಬ್ಬರೇ ಕಷ್ಟಪಡಬೇಕಾಗಿಲ್ಲ. ನಮ್ಮ ಸ್ತ್ರೀಶಕ್ತಿ ಸಂಘದಿಂದ ಒಂದೆರಡು ಲಕ್ಷ ರೂಪಾಯಿ ನಾನೂ ಸಾಲ ತೆಗೆಯುತ್ತೇನೆ. ಅದನ್ನು ತೀರಿಸುವ ಜವಾಬ್ದಾರಿಯೂ ನನ್ನದೇ. ಮತ್ತೆ ಸ್ವಲ್ಪ ಚಿನ್ನ ಉಂಟಲ್ಲವ. ಅದನ್ನು ಅಡವಿಡುವ ಅಥವಾ ಮಾರಿದರಾಯ್ತು. ಉಳಿದ ಹಣಕ್ಕೆ ನೀವೇನಾದರೂ ದಾರಿ ಹುಡುಕಬೇಕು. ಆಗಬಹುದಾ…?’ ಎಂದಳು ಉತ್ಸಾಹದಿಂದ.
ಗೋಪಾಲನಿಗೆ ಆನೆಯ ಬಲ ಬಂದಂತಾಯಿತು. ‘ಆಯ್ತು ಮಾರಾಯ್ತಿ, ಹಾಗೆಯೇ ಮಾಡುವ!’ ಎಂದ ಖುಷಿಯಿಂದ. ಅಮ್ಮ ಅಪ್ಪನ ನಿರಾಳತೆಯು ಮಕ್ಕಳನ್ನೂ ಆವರಿಸಿತು. ರಾಧಾ ನೆಮ್ಮದಿಯಿಂದೆದ್ದು ಎಲ್ಲರಿಗೂ ಚಾಪೆ ಹಾಸಿದಳು. ಸ್ವಲ್ಪಹೊತ್ತಿನಲ್ಲಿ ದೀಪ ಆರಿಸಿ ಮಲಗಿದರು. ಆದರೆ ಗೋಪಾಲನಿಗೆ ನಡುರಾತ್ರಿಯವರೆಗೆ ನಿದ್ದೆ ಹತ್ತಲಿಲ್ಲ. ಅವನು ರಾಧಾಳತ್ತ ಹೊರಳಿ ನೋಡಿದ. ಆಕೆ ಹಾಯಾಗಿ ನಿದ್ರಿಸುತ್ತಿದ್ದಳು. ಅಬ್ಬಾ! ಎಂಥಾ ಹೆಂಗಸರಪ್ಪಾ ಇವರು? ತಮಗೆ ಬೇಕಾದುದನ್ನು ಯಾವ ಯಾವ ರೀತಿಯಿಂದೆಲ್ಲ ಪಡೆಯಲು ಸಾಧ್ಯವೋ ಹಾಗೆಲ್ಲ ಪ್ರಯತ್ನಿಸಿ ಕೊನೆಗೆ ಆ ಸಮಸ್ಯೆಗೂ ಸಲೀಸಾಗಿ ಪರಿಹಾರ ಸೂಚಿಸಿ ಎಷ್ಟು ಬೇಗ ಹಗುರವಾಗಿ ಬಿಡುತ್ತಾರೆ! ಅಷ್ಟಲ್ಲದಿದ್ದರೆ ಸ್ವಲ್ಪ ಹೊತ್ತಿನ ಮಂಚೆಯಷ್ಟೇ ಭಯಂಕರವಾಗಿ ಅತ್ತು ಕರೆದು ಗಲಾಟೆ ಮಾಡಿದವಳು ಇವಳೇನಾ ಅಂತ ಅನುಮಾನ ಬರುತ್ತದೆ ಎಂದುಕೊಂಡು ವಿಸ್ಮಯಪಟ್ಟ. ಹೆಂಡತಿಯ ಮೇಲೆ ಪ್ರೀತಿಯುಕ್ಕಿತು. ಅವಳ ಮುಂಗುರುಳನ್ನು ನವಿರಾಗಿ ಹಿಂದಕ್ಕೆ ಸರಿಸಿ, ಮೃದುವಾಗಿ ತಬ್ಬಿ ಮುದ್ದಿಸಿದ. ಗಾಢ ನಿದ್ದೆಯಲ್ಲಿದ್ದ ರಾಧಾಳ ಮುಖದಲ್ಲಿ ಕಂಡೂ ಕಾಣದ ನಾಚಿಕೆ ಮಿನುಗಿ ಮರೆಯಾಯಿತು.
ಹೆಂಡತಿಯೊಂದಿಗೆ ಸ್ವಲ್ಪಹೊತ್ತು ಸುಖದಿಂದ ಕಳೆದ ಗೋಪಾಲನಿಗೆ ಬಳಿಕವೂ ನಿದ್ದೆ ಹತ್ತಲಿಲ್ಲ. ಹೆತ್ತವರ ಮತ್ತು ಅಣ್ಣಂದಿರ ನೆನಪುಗಳೆಲ್ಲ ಸುಳಿಯತೊಡಗಿದವು. ಅಪ್ಪ ಅಮ್ಮ ಇರುವವರೆಗೆ ಸಂಬಂಧಗಳೆಲ್ಲ ಚೆನ್ನಾಗಿದ್ದವು. ಎಲ್ಲರ ನಡುವೆ ಪ್ರೀತಿ, ಅನ್ಯೋನ್ಯತೆಯಿತ್ತು. ಆದರೆ ಹೆತ್ತವರು ಗತಿಸಿದ ನಂತರ ಏನೆಲ್ಲ ಆಗಿ ಹೋಯಿತು! ಒಡಹುಟ್ಟಿದವರೆಲ್ಲ ಸ್ವಾರ್ಥಿಗಳಾದರು. ಸಣ್ಣಪುಟ್ಟ ವಿಷಯಗಳನ್ನೂ ದೊಡ್ಡದು ಮಾಡಿ ಜಗಳವಾಡುತ್ತ ತುಂಬಿದ ಮನೆಯನ್ನು ಒಡೆದು ಚೆಲ್ಲಾಪಿಲ್ಲಿಯಾಗಿಬಿಟ್ಟರು. ಆದರೆ ಒಂದರ್ಥದಲ್ಲಿ ಕುಟುಂಬವೊಂದು ಬೆಳೆಯುತ್ತ ಹೋದಾಗ ಜೇನುಗೂಡಿನಂತೆ ಪ್ರತ್ಯೇಕವಾಗುವುದು ಸಮಾಜದ ನಿಯಮವೇ ಅಲ್ಲವಾ! ಆದರೂ ಕೋಪ, ಮನಸ್ತಾಪಗಳ ಮೂಲಕವೇ ಯಾಕೆ ಅಗಲಬೇಕು? ಉತ್ತಮ ಬಾಂಧವ್ಯವನ್ನುಳಿಸಿಕೊಂಡೇ ದೂರದಲ್ಲಿ ಬದುಕುವುದಕ್ಕಾಗುವುದಿಲ್ಲವಾ? ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ ಹಾಗೆ ಯೋಚಿಸಿದರೆ ಬಹುಶಃ ಯಾರು ಕೂಡಾ ಸ್ವತಂತ್ರವಾಗಿ ಬೆಳೆಯಲು ಸಾಧ್ಯವಿಲ್ಲವೇನೋ. ಅದಕ್ಕೇ ಇರಬೇಕು ಜನ ಯಾವಾಗಲೂ ಸಂಘರ್ಷದ ಬದುಕನ್ನೇ ಬಯಸುತ್ತಾರೆ. ಮತ್ತು ಅಂಥವರಲ್ಲೂ ಅತಿಯಾಸೆಯಿದ್ದರೆ ಮಾತ್ರ ಶ್ರೀಮಂತಿಕೆ ಬರುವುದೇನೋ? ಎಂದುಕೊಂಡವನು, ಹಾಗಾದರೆ ರಕ್ತ ಸಂಬಂಧಕ್ಕೂ ಇತರ ಸಂಬಂಧಗಳಿಗೂ ಬೆಲೆ ಎಲ್ಲಿ ಬಂತು? ಎಂದು ಪ್ರಶ್ನಿಸಿಕೊಂಡ. ಉತ್ತರ ಹೊಳೆಯಲಿಲ್ಲ. ಮತ್ತೆ ಯೋಚಿಸಿದ. ತನ್ನ ಮೂವರು ಅಣ್ಣಂದಿರೂ ತಂತಮ್ಮ ಜೀವನದಲ್ಲಿ ಗೆದ್ದು ಸುಖವಾಗಿದ್ದಾರೆ. ನನ್ನ ಬದುಕು ಮಾತ್ರ ಬೀದಿಗೆ ಬಿದ್ದ ನಾಯಿಯಂತಾಗಿದೆ. ಅದಕ್ಕಾಗಿಯೇ ಇರಬೇಕು ಒಡಹುಟ್ಟಿದವರೂ ಸಂಬಂಧಿಕರೂ ಯಾರೂ ಹತ್ತಿರ ಬರುವುದಿಲ್ಲ. ಆಕಸ್ಮತ್ತಾಗಿ ಎದುರು ಸಿಕ್ಕಿದರೆ ಕಾಟಾಚಾರಕ್ಕೆಂಬಂತೆ ಒಂದೆರಡು ಮಾತಾಡಿ ತಣ್ಣಗೆ ಜಾರಿಕೊಳ್ಳುತ್ತಾರೆ. ಬಹುಶಃ ಅವರಿಂದ ತಾನೇನಾದರೂ ಸಹಾಯ ಕೇಳಬಹುದೆಂಬ ಭಯವೋ ಅಥವಾ ಇವನಂಥ ಗತಿಗೆಟ್ಟವನೊಡನೆ ನಮಗೆಂಥ ಸಂಬಂಧ ಎಂಬ ತಾತ್ಸಾರವೋ ಇರಬಹುದು! ಎಂದುಕೊಂಡು ನೋವಿನಿಂದ ಚಡಪಡಿಸಿದ. ಬಳಿಕ, ಅವರಂತೆ ತನಗೂ ಯಾಕೆ ಸ್ವಂತ ಮನೆ, ಬದುಕು ಕಟ್ಟಿಕೊಳ್ಳುವ ಛಲವಿನ್ನೂ ಹುಟ್ಟಿಲ್ಲ? ಎಂದೂ ಮರುಗಿದ. ಮರುಕ್ಷಣ ಕಣ್ಣುಗಳು ಮೆಲ್ಲನೆ ತೇವಗೊಂಡವು. ಅದರೊಂದಿಗೆ ದೃಢವಾದ ನಿರ್ಧಾರವೊಂದೂ ಮೊಳೆಯಿತು. ಮನಸ್ಸು ಹಗುರವಾಗಿ ಗಾಢ ನಿದ್ರೆಗೆ ಜಾರಿದ.
ಬೆಳಿಗ್ಗೆ ಹೆಂಡತಿ ಪಾತ್ರೆ ತೊಳೆಯುತ್ತಿದ್ದ ಸದ್ದಿಗೆ ಗೋಪಾಲನಿಗೆ ಎಚ್ಚರವಾಯಿತು. ಎದ್ದು ನಿತ್ಯಕರ್ಮ ಮುಗಿಸಿ ಬಾವಿಕಟ್ಟೆಗೆ ಹೋಗಿ ಸ್ನಾನಕ್ಕಿಳಿದ. ದಿನಾಲೂ ಅದೇ ಹೊತ್ತಿಗೆ ತೋಟ ಸುತ್ತಾಡುವ ಅಭ್ಯಾಸವಿದ್ದ ಮುತ್ತಯ್ಯನೂ ಅತ್ತ ಬರುತ್ತಿದ್ದ. ಆದರೆ ದೂರದಿಂದಲೇ ಗೋಪಾಲನನ್ನು ಕಂಡವನಿಗೆ ನಿನ್ನೆಯ ತನ್ನ ಕಿತಾಪತಿ ನೆನೆದು ಅಳುಕಾಯಿತು. ಇತ್ತ ಮುತ್ತಯ್ಯನನ್ನು ಕಂಡ ಗೋಪಾಲನಲ್ಲೂ ದ್ವೇಷದ ಕಿಡಿ ಭಗ್ಗನೆ ಹತ್ತಿಕೊಂಡು, ಅವನನ್ನಲ್ಲೇ ಸುಟ್ಟು ಹಾಕುವಷ್ಟು ರೋಷ ಉಕ್ಕಿತು. ಆದರೆ ಹೆಂಡತಿಯ ಬುದ್ಧಿಮಾತು ಮುನ್ನೆಲೆಗೆ ಬಂದು ತಾಳ್ಮೆ ತಂದುಕೊಂಡ. ಗೋಪಾಲನ ತೀಕ್ಷ್ಣ ದೃಷ್ಟಿಯನ್ನು ಕಂಡ ಮುತ್ತಯ್ಯ ತಣ್ಣಗೆ ಬೆವರಿದ. ಆದರೆ ಈ ಬಡ ನಾಯಿ ನನ್ನ ಹಂಗಿನಲ್ಲಿರುವವನು. ಇವನಿಗೆ ತಾನೇಕೆ ಹೆದರಬೇಕು? ಅದೇನು ಮಾಡುತ್ತಾನೋ ನೋಡಿಯೇ ಬಿಡುವ. ಬೋಸುಡಿಮಗ ಅಹಂಕಾರ ತೋರಿಸಿದನೆಂದರೆ ಈ ಕ್ಷಣವೇ ಒದ್ದು ಓಡಿಸಿಬಿಡುತ್ತೇನೆ! ಎಂದು ಯೋಚಿಸಿ ಎದೆ ಸೆಟೆಸಿಕೊಂಡು ಬಂದವನು ಗೋಪಾಲನತ್ತ ವಕ್ರ ದೃಷ್ಟಿ ಬೀರಿ, ವ್ಯಂಗ್ಯವಾಗಿ ನಗುತ್ತ ಸರಿದು ಹೋದ. ಅವನ ಸೊಕ್ಕನ್ನು ಕಂಡ ಗೋಪಾಲನಿಗೆ ಮತ್ತಷ್ಟು ಕೆದರಿತು. ಆದರೂ ಅವುಡುಗಟ್ಟಿದ. ಮುತ್ತಯ್ಯನ ನಗುವಿಗೆ ಪ್ರತಿ ನಗಲಾರದೆ ಒತ್ತಾಯಕ್ಕೆ ನಕ್ಕ ಕಾರಣಕ್ಕೋ ಏನೋ ಬಿಸಿಯೇರಿದ್ದ ತನ್ನ ನೆತ್ತಿಯ ಮೇಲೆ ಸ್ನಾನ ಮುಗಿದಿದ್ದರೂ ಮತ್ತೊಂದು ಕೊಡಪಾನ ನೀರನ್ನು ಬಸಬಸನೇ ಹುಯ್ದುಕೊಂಡ.
ಗಂಡ ಸ್ನಾನ ಮಾಡಿ ಬಂದ ಕೂಡಲೇ ರಾಧಾ ಹಿಂದಿನ ಸಂಜೆ ತಂದಿರಿಸಿದ್ದ ಬೇಕರಿಯ ಬನ್ನು ಮತ್ತು ಚಹಾವನ್ನು ತಂದು ಅವನ ಮುಂದಿಟ್ಟಳು. ಗೋಪಾಲ ಬನ್ನು ಹರಿದು ಚಹಾದಲ್ಲಿ ಮುಳುಗಿಸಿ ತಿಂದವನು ಬಟ್ಟೆ ಧರಿಸಿ ಹೊರಡಲನುವಾಗಿ, ‘ರಾಧಾ…’ ಎಂದ. ಅವಳು ಅಡುಗೆ ಕೋಣೆಯಿಂದಲೇ ‘ಏನೂ…?’ ಎಂದಳು.
‘ವಾರದ ಖರ್ಚಿಗೆ ತೆಗೆದಿಟ್ಟ ದುಡ್ಡಿದೆಯಲ್ಲ ಮಾರಾಯ್ರೀ, ಅದರಲ್ಲಿ ಒಂದು ಮುನ್ನೂರು ರೂಪಾಯಿ ಕೊಡುತ್ತೀಯಾ? ನಿನ್ನೆ ಸಂಜೆ ಕಂಟ್ರೆಕ್ಟರ್ ಶಂಕರಣ್ಣ ಸಿಕ್ಕಿದ್ರು. ಅವರ ಸೈಟಿನಲ್ಲಿ ಸ್ವಲ್ಪ ಕಬ್ಬಿಣ ಇದೆಯಂತೆ. ಅದನ್ನು ಕೊಂಡು ಮಾರಿ ಬಂದುದರಲ್ಲಿ ನಿನ್ನ ಮುನ್ನೂರಕ್ಕೆ ನೂರು ಸೇರಿಸಿ ಕೊಡುತ್ತೇನೆ. ಹೇಗಾದರೂ ಮಾಡಿ ಒಂದಷ್ಟು ರೂಪಾಯಿ ಕೂಡಿಸಬೇಕು ಮಾರಾಯ್ತೀ!’ ಎಂದ. ರಾಧಾಳಿಗೆ ಹೆಮ್ಮೆಯೆನಿಸಿತು. ಕೂಡಲೇ ದುಡ್ಡು ತಂದುಕೊಟ್ಟಳು. ಶಾಲೆಗೆ ಹೊರಡುವ ತಯಾರಿಯಲ್ಲಿದ್ದ ಮಕ್ಕಳು ಅಪ್ಪನ ತೆಕ್ಕೆಗೆ ಬಿದ್ದು ತಿಂಡಿ ತರಲು ಒತ್ತಾಯಿಸಿದರು. ಅವರನ್ನು ಓಲೈಸಿ ತನ್ನ ಹಳೆಯ ಹಕ್ರ್ಯೂಲಸ್ ಸೈಕಲ್ ಹತ್ತಿಕೊಂಡು ಹೊರಟ. ಇಂದು ಅವನ ಮನಸ್ಸಿನ ತುಂಬಾ ಸ್ವಂತ ಜಾಗದ ಕಲ್ಪನೆಯೇ ಹರಿದಾಡುತ್ತಿತ್ತು. ತಾನಂದುಕೊಂಡಿದ್ದು ನೆರವೇರುವ ಕಾಲವಿನ್ನು ಬಹಳ ದೂರವಿಲ್ಲ ಎಂದುಕೊಳ್ಳುತ್ತ ಉತ್ಸಾಹದಿಂದ ಸೈಕಲ್ ತುಳಿದ.
(ಮುಂದುವರೆಯುವುದು)
*************
ಗುರುರಾಜ್ ಸನಿಲ್
ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಬಾಡಿಗೆ ಮನೆಯಲ್ಲಿರು ರಾಧಾ ಗೋಪಾಲರಿಗೆ ಸ್ವಂತ ನೆಲೆಯ ಕನಸು. ಅವರಾಸೆ ಈಡೇರಬಹುದೇ….? ಹಿಂದಿನಂತೆ ಈ ಅಧ್ಯಾಯವೂ ಚೆನ್ನಾಗಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲದೆ ಮುಂದಿನ ವಾರಕ್ಕೆ ಕಾಯುವಷ್ಟು ಕುತೂಹಲವನ್ನು ಮೂಡಿಸುತ್ತದೆ. ಅಭಿನಂದನೆ