ಕವಿತೆ
ಜೀವಂತವಿರುವಾಗಲೇ
ಮಾಲಾ.ಮ.ಅಕ್ಕಿಶೆಟ್ಟಿ.
ಬೇಡಾದ ಮೆಸೇಜಗಳು
ವಾಟ್ಸ್ ಆ್ಯಪ್ನ ಡಿಲೀಟ್ನಂತೆ
ನನಗೆ ಸಂಬಂಧಿಸಿದೆಲ್ಲವ
ಡಿಲೀಟ್ ಮಾಡಬೇಕು
ಜೀವಂತವಿರುವಾಗಲೇ!
ಮರ್ಯಾದೆ ಎಂತು
ಮಣ್ಣಾದ ದೇಹಕ್ಕೆ
ಪಂಚಭೂತಗಳ ಮಿಶ್ರ
ಅದು ಆಗ ಮಣ್ಣು ಮಾತ್ರ
ತಂದೆ ತಾಯಿಯ ವಸ್ತುಗಳು ಕ್ಷುಲ್ಲಕವಿದ್ದರೂ
ಕಾಪಿಟ್ಟುಕೊಳ್ಳವ ಅಮೃತ ಮಕ್ಕಳು,
ಇಲ್ಲಾದರೆ ಸಾಮಾನುಗಳ ಸಂರಕ್ಷಣೆ
ಎಲ್ಲ ಕಾನೂನಿನ ಛತ್ರಛಾಯೆ
ವಿಷದ ಮಕ್ಕಳು ಹರಿದು ಹಾಕಿಯಾರೆ
ಆಸ್ತಿ ಪಾಸ್ತಿಯ ಗಂಟು?
ನೆನಪು ಹೀಗೆಯೇ
ಹೆತ್ತ ತಂದೆ ತಾಯಿಯದು
ರೋಸಿ ಮನ, ಡಿಲೀಟ್ ಮಾಡಬೇಕೆಂದಿದ್ದೇನೆ
ನನ್ನೆಲ್ಲ ಹಸುಗೂಸು ಸಾಮಾನುಗಳನ್ನ
ನಮ್ಮ ವಸ್ತುಗಳು ಪ್ರಿಯ
ನಮಗಷ್ಟೇ, ಹಾಜರಾತಿ ತಪ್ಪಿಸದ
ಸೂರ್ಯನಂತೆ ಕಾಯಂ ನೋಡುತ್ತಿದ್ದರೂ
ಸುಸ್ತಾಗುವುದಿಲ್ಲ ಕಣ್ಣಿನ ಬಾವಿಗೆ
ಬಾವಿ ತುಂಬಿದಷ್ಟು ಅಪ್ರತಿಮ
ಮಹತ್ತರವಲ್ಲದ ವಸ್ತುಗಳು
ಉಳಿದಾವೆ ನೀಗಿದ ನಂತರ
ಅಪ್ಪ ಕೊಡಿಸಿದ ಸೈಕಲ್
ಮೊದಲ ಶಾಯಿ ಪೆನ್ನು
ಅಪ್ಪನಷ್ಟೇ ಪ್ರೀತಿಸಿದೆ
ಕೊನೆಯವರೆಗೂ ಇಡಲಿಚ್ಚಿಸದೆ
ನನ್ನ ನಂತರ ಸೈಕಲ್, ಪೆನ್ನು ಅನಾಥ
ಹೀಗೆ ಇನ್ನೂ ಇವೆ ಎಷ್ಟೋ
ಫೋಟೋ ತೆಗೆತೆಗೆದು
ಮೊಬೈಲ್ ಫುಲ್ ಆಗಿ
ಕಂಪ್ಯೂಟರ್ ನ ವಿಶಾಲ ಜಿಬಿಗೆ
ಸೇರಿಸಿದಾಗಲೂ, ಭಾರ ಅನಿವಾರ್ಯ,
ಪೋಟೋ ಡಿಲೀಟ್ ಮಾಡಿದಂತೆ,
ನನಗೆ ಸೇರಿದ ಎಲ್ಲವನೂ
ಡಿಲೀಟ್ ಮಾಡಬೇಕೆಂದಿದ್ದೇನೆ ಜೀವಂತವಿರುವಾಗಲೇ!
***************************
ನಿಜಕ್ಕೂ ಜೀವಂತ ಕವಿತೆ