ವಿಮರ್ಶೆ

ಈ ನೆಲದಲ್ಲಿನ್ನು ರಾಮ ಹುಟ್ಟುವುದಿಲ್ಲ :

ಕೆಲವು ಮಾತುಗಳು

Garden Stone Bench, Size (Feet): 5 Feet, Rs 8000 /number Rajasthani Stone &  Carving | ID: 18058623791

ಕನಕಪುರದಲ್ಲಿ ನಿವಾಸಿಯಾಗಿರುವ ಶ್ರೀ ದುಡ್ಡನಹಳ್ಳಿ ಮಂಜುನಾಥ್ ವಿಲಕ್ಷಣವಾದ ಪ್ರತಿಭೆಯ ಕವಿ. ಅವರ ಕವನಗಳಲ್ಲಿ ಧುತ್ತೆಂದು ತೋರಿಸಿಬಿಡುವ ಅರ್ಥ ಸಾಧ್ಯತೆಯಿಂದ ಮತ್ತು ಭಾಷೆಯನ್ನು ಮುರಿಯುವ ಮತ್ತು ಮುರಿದು ಕಟ್ಟುವುವ ಕ್ರಮದಿಂದ ವಿಲಕ್ಷಣತೆಯ ಗುಣ ಅವರ ಕಾವ್ಯಗಳಲ್ಲಿ ಮೊದಲ ನೋಟಕ್ಕೇ ಕಾಣಿಸಿಬಿಡುತ್ತದೆ. ಇದಕ್ಕೆ “ಕವಿತೆಗಳೇ ಹೀಗೆ” ಹನಿಗವಿತೆಗಳ ಸಂಕಲನವೇ ಸಾಕ್ಷಿ. ಹನಿಗವಿತೆಯ ಪ್ರಕಾರವೇ ಹಾಗೆ ಥಟ್ಟೆಂದು ಹೊಳೆಯಿಸುವುದಾದರೂ ಇವರ ಭಾಷಾ ಬಳಕೆಯಲ್ಲಿನ ಈ ವಿಲಕ್ಷಣತೆಯೂ ಭಾವದೀಪ್ತಿಯ ಕಡೆಗೆ ಮುಖಮಾಡಿಸುವ ಅಂಶವೆನ್ನಬಹುದು. ಹನಿಗವಿತೆಗಳು ನಗಿಸಿ ಸುಮ್ಮನಾಗಿಬಿಡುವಷ್ಟು ಮಟ್ಟದಲ್ಲಿ ನಿಲ್ಲುವುದಿಲ್ಲ. ಮತ್ತು ಓದುಗ ತನ್ನನ್ನು ನೋಡಿಕೊಳ್ಳುವಲ್ಲಿ ಸಹಜ ಸಂವಹನ ಸಾಧ್ಯತೆಯ ಮಾರ್ಗ ತೆರೆದುಬಿಡುತ್ತಾರೆ ಎನ್ನುವುದು ಇವರ ಹೆಚ್ಚು ಕವಿತೆಗಳಿಗೆ ಅನ್ವಯವಾಗುವ ಮಾತು. ಕೆಲವೊಮ್ಮೆ ಎರಡೆರಡು ಬಾರಿ ಓದಿ ಕವನದ ಧ್ವನಿಯನ್ನು ಅರ್ಥಮಾಡಿಕೊಳ್ಳಬೇಕಾದ ಸಂದರ್ಭಗಳೂ ಬಂದುಬಿಡುವ ಸಾಧ್ಯತೆ ಈ ವಿಲಕ್ಷಣತೆಗೆ ಇರುತ್ತದೆ. ಮೇಲುನೋಟಕ್ಕೆ ನೇತ್ಯಾತ್ಮಕ ಮಾರ್ಗ ಎನಿಸಿದರೂ ಅದರ ಆಂತರ್ಯದ ಧ್ವನಿ ಇತ್ಯಾತ್ಮಕವಾಗಿದ್ದು ಒಳಗಿನಿಂದ ಗಟ್ಟಿಯಾಗಿ ಕಟ್ಟಿಕೊಳ್ಳಬೇಕಾದ ಸಾಧ್ಯತೆಯನ್ನು ಇದು ಬಲವಾಗಿ ಬೇಡುವಂತಹದ್ದು ಎನಿಸುತ್ತದೆ. ಆ ಕಾರಣದಿಂದ ನೇತ್ಯಾತ್ಮಕ ಅನುಸಂಧಾನ, ಒಡೆದ ಚಿತ್ರಗಳ ಸರಣಿಗಳ, ಪ್ರತಿಮೆ, ರೂಪಕ, ದೃಷ್ಟಾಂತಗಳ ಮೂಲಕ ಇತ್ಯಾತ್ಮಕ ಹಾದಿ ತೆರೆವ ಕವಿತೆಗಳು ದುಡ್ಡನಹಳ್ಳಿಯವರಿಂದ ರಚನೆಯಾಗಿವೆ. ಇದೊಂದು ಬಹಳ ಮುಖ್ಯವಾದ ಕಾವ್ಯ ರಚನಾ ತಂತ್ರ. ಬಹಳ ಶಕ್ತಿಶಾಲಿಯಾದ ಕಾವ್ಯ ರಚನಾ ಮಾರ್ಗವೂ ಹೌದು. ಕಾವ್ಯ ರಚನೆಯಲ್ಲಿ ಕವಿಯೊಬ್ಬ ತುಳಿಯುವ ಹಾದಿ ಸಮಾಜದ ವಿನಯಗಳ ಮೇಲೆ ನಿರ್ಧಾರ ಮತ್ತು ನಿರ್ಮಾಣವಾಗಿರುತ್ತದೆ. ಈ ವಿನಯಗಳು ಇರುವಂತೆಯೇ ತೆರೆದು ತೋರುವ ಮತ್ತು ಅವುಗಳನ್ನು ಪ್ರಶ್ನಿಸುವ ಮನಸ್ಸು ಇದ್ದಾಗ ಹೀಗೆ ನೇತ್ಯಾತ್ಮಕ ಮಾರ್ಗದಲ್ಲಿ ಕ್ರಮಿಸುವ ಅಗತ್ಯ ಕವಿಗೆ ಸಿಕ್ಕಿಕೊಳ್ಳುತ್ತದೆ.

ಈ ನೇತ್ಯಾತ್ಮಕ ಕ್ರಮದಲ್ಲಿ ಆರಂಬಗೊಂಡು ಇತ್ಯಾತ್ಮಕ ಆಶಯವನ್ನು ಹೊತ್ತಿರುವ ಶಕ್ತಿಶಾಲಿ ಕವಿತೆಗಳಲ್ಲಿ “ಈ ನೆಲದಲ್ಲಿನ್ನು ರಾಮ ಹುಟ್ಟುವುದಿಲ್ಲ” ಎಂಬ ಶೀರ್ಷಿಕೆಯದೂ ಒಂದು. ಮೇಲು ನೋಟಕ್ಕೆ “ಹುಟ್ಟುವುದಿಲ್ಲ” ಎಂದು ಎಂದು ಭವಿಷ್ಯ ಸೂಚಕ ನಿಷೇಧಾರ್ಥ ಕ್ರಿಯಾಪದವನ್ನು ಬಳಸುತ್ತಿದ್ದರೂ ಒಟ್ಟಾರೆ ಕವಿತೆಯಲ್ಲಿ ಬರುವ ಪುಟ್ಟ ಪುಟ್ಟ ದೃಷ್ಟಾಂತಗಳು, ರೂಪಕಗಳು ರಾಮ ಹುಟ್ಟಬೇಕಾದರೆ ಮಾಡಬೇಕಾದ ಕಾರ್ಯಗಳೇನು ಎಂಬುದರ ಕಡೆಗೆ ಚಲನೆ ಪಡೆಯುತ್ತಿವೆ. ಈ ಕವನದ ಕೇಂದ್ರ “ರಾಮ” ಎಂಬ ಮಹಾಕಾವ್ಯವೊಂದರ ಪಾತ್ರದಿಂದ ಆರಂಭವಾಗುತ್ತದೆ. ರಾಮನೂ ಹುಟ್ಟಿದ್ದು ನೆಲದಿಂದ, ನೆಲದ ಸಹವಾಸದಿಂದ ಎಂಬುದೇ ಇಲ್ಲಿನ ಧ್ವನಿ. ನೆಲ ಎಂದೊಡನೆ ಅದನ್ನು ಉಳಿಸಿದ, ಉಳುಮೆ ಮಾಡಿಸಿದ ಜನಕ, ಅವನ ನೇಗಿಲ (ಸೀತಾ) ತುದಿಯಲ್ಲಿ ಹೊರಬಂದ ಸೀತೆ, ಅವಳಿಗಾಗಿ ಹುಟ್ಟಿದ ರಾಮ ಹೀಗೆ ಒಂದು ದೊಡ್ಡ ಸಾಯುಜ್ಯ ಸಂಬಂಧವನ್ನೇ ಈ ಕವಿತೆ ತೆರೆಯುತ್ತಾ ಸಾಗುತ್ತದೆ. ಕೊನೆಗೆ ವರ್ತಮಾನದಲ್ಲಿ ಬಂದು ನಿಲ್ಲುತ್ತದೆ. ಪ್ರತಿಯೊಬ್ಬರೂ ತಮ್ಮ ಪಾಲಿನ‌ ಕರ್ತವ್ಯ ಮಾಡುವುದರಿಂದ ರಾಮರಾಗಬಹುದೆಂಬ ಆಶಯವೇ ಈ ಕವಿಯೆ ದನಿ. ಅದನ್ನು ಅಲ್ಲಗೆಳೆದು ಮತ್ತೊಬ್ಬ ಅವತಾರೀಪುರುಷ ಬರಲಿ ಎಂಬ ಆಸೆಯನ್ನೇ ಓದುಗರ ಒಳಗಿನಿಂದ ತೆಗೆದು ಹಾಕುತ್ತಿದೆ. ಸು. ರಂ. ಎಕ್ಕುಂಡಿ ಅವರ “ಮಿಥಿಲೆ” , ಗೋಪಾಲಕೃಷ್ಣ ಅಡಿಗರ “ನನ್ನ ಅವತಾರ” ಇದೇ ಆಸೆಗಳನ್ನು ಹೊತ್ತ ಕವಿತೆಗಳು. ದುಡ್ಡನಹಳ್ಳಿಯವರ ಈ ಕವಿತೆ ಅವುಗಳಿಗಿಂತ ವಿಶಿಷ್ಟ ಅಭಿವ್ಯಕ್ತಿ, ಭಾಷಾ ಬಳಕೆ ಮತ್ತು ಧ್ವನಿ ಹೊರಡಿಸುವ ವಿಧಾನದಿಂದ ಹಿರಿಯ ತಲೆಮಾರಿನ ಕವಿಗಳ ಕಾವ್ಯದ ಮುಂದುವರಿಕೆಯಾಗಿ ಕಾಣುತ್ತಿದೆ. ಎಕ್ಕುಂಡಿ ಅವರ ಮಿಥಿಲೆ ಕಥನಕವನದಲ್ಲಿ “ಅಲ್ಲಿ” ಎಂಬ ಪದದ ಬಳಕೆಯನ್ನು ಗಮನಿಸಿ ಮತ್ತು ಗೋಪಾಲಕೃಷ್ಣ ಅಡಿಗರ ಕವನದಲ್ಲಂತೂ ಬಹಳ ವ್ಯಂಗ್ಯವಾಗಿ ಅದನ್ನೇ ಮತ್ತೆ ಸಾರುತ್ತಾರೆ. ಈ ಕವಿತೆ ಕಟು ವ್ಯಂಗ್ಯದಿಂದ ಬಹುದೂರವಿದ್ದು, ಪದ ಬಳೆಯಿಂದ ಮತ್ತೆ ಮತ್ತೆ ಎದೆನೆಲದ ಅನನ್ಯತೆ, ಕರ್ತವ್ಯ ಪ್ರಜ್ಞೆಯನ್ನು ಮುಂದು ಮಾಡಿ ಮಾತನಾಡಿಬಿಡುತ್ತದೆ. ಈ ಕವಿತೆಯ ಓದು ಮೇಲು ನೋಟಕ್ಕೆ ಹೊರಗೆ ಕೌಂಟರ್ ಕಲ್ಚರ್ ನ ಹಾದಿಯಂತೆ ಕಂಡರೂ ಇಲ್ಲಿ ಆ ಅಂಶಗಳು ಇಲ್ಲ. ಪ್ರತಿರೋಧದ ಎಳೆಗಳೆಲ್ಲವೂ ಹೊಗಿನಿಂದ ಪುನರಾವತಾರವನ್ನು ತಳ್ಳಿಹಾಕಿ ಒಳಗಿನ ರಾಮನನ್ನ ಎಚ್ಚರಿಸುವ ಕಾರ್ಯ ಮಾಡುತ್ತಿದೆ. ಇದು ಆಂತರಿಕವಾಗಿ ಕಟ್ಟಿಕೊಂಡು ಬಂದ ಸಿದ್ಧಮಾದರಿಯನ್ನು ಪ್ರಶ್ನಿಸುವ ಕಾರಣದಿಂದ ಒಂದರ್ಥದಲ್ಲಿ ಒಳಗಿನ ಕೌಂಟರ್ ಕಲ್ಚರ್ ಸಹಾ ಹೌದು.

ಕವನ ನಾಲಕ್ಕು ಭಾಗಗಳಲ್ಲಿ ರಚನೆಯಾಗಿದೆ. ಒಟ್ಟಾರೆ ಕವನದಲ್ಲಿ ಏಳು ಬಾರಿ “ಇಲ್ಲ” ಎಂಬ ಪದಗಳು ಬಳಕೆಯಾಗಿವೆ. ಆ “ಇಲ್ಲ”ದುದನ್ನು “ಇದೆಯಾಗಿಸಿ” “ತುಂಬಿಸಿ”ಕೊಳ್ಳಬೇಕಾದ ಹಾದಿಯನ್ನೂ ಕವನದ ಪ್ರತಿಯೊಂದು ಭಾಗದಲ್ಲೂ ಕವಿತೆ ತೆರೆದು ತೋರುತ್ತದೆ. ಪ್ರತಿಯೊಂದು ಭಾಗವೂ ಒಂದೊಂದು ಮಹಾಕಾವ್ಯದ ಪಾತ್ರಗಳು ಮತ್ತು ವಾಸ್ತವದ ಚಿತ್ರಣವನ್ನು ಇಟ್ಟುಕೊಂಡಿದೆ. ಇದು ಏಕಕಾಲದಲ್ಲಿ ಪುರಾಣಪ್ರಜ್ಞೆ – ವಾಸ್ತವದ ಚಿತ್ರಣ ಎದುರು ಬದುರು ಬಂದು ವರ್ತಮಾನ ಭೂತಗಳ ಬೆಸೆವ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಈ ಅಂಶವೇ ಬಹುಮುಖ್ಯವಾದದ್ದು, ಮೌಲ್ಯಮಾಪನ ನಡೆಯಬೇಕಾದ ಸ್ಥತಿಯೂ ಆರಂಭವಾಗುವುದು ಇಲ್ಲಿಂದಲೇ. ಪುರಾಣಗಳನ್ನಷ್ಟೇ ಓದಿ ಸಂತೊಷ ಪಡಬೇಕಾದ ಅಗತ್ಯ ಇಲ್ಲ, ಅಲ್ಲಿನ ನಡೆಗಳನ್ನು ಅನ್ವಯಿಸಿಕೊಂಡು ಬದುಕಬೇಕು ಎಂಬ ಆಶಯ, ಹಾಗೆ ನಡೆಯುತ್ತಿಲ್ಲವೆಂಬ ಖೇದ ಸಿಟ್ಟು ಈ ಕವನದ ಆಂತರ್ಯದಲ್ಲಿ ಹರಿಯುತ್ತಾ ಭಾವಕೇಂದ್ರವನ್ನು ಸೃಷ್ಟಿಸಿಕೊಂಡಿದೆ.

ಮೊದಲ ಭಾಗದಲ್ಲಿನ ತೂಬುಗಣ್ಣಿನ ಸೀತೆಯರು, ರಾಮಕೋಟಿ ಜಪ, ಶೋಕವನದಲ್ಲಿನ ಮಣ್ಣು, ಹುತ್ತಗಟ್ಟಲಾರದು ಎಂಬುದನ್ನು ತಿಳಿಸಿ ರಾಮ ಹುಟ್ಟಲು ಬೇಕಾದ ಕಾರ್ಯದ ಕಡೆ ಮುಖ ಮಾಡಿಸುತ್ತದೆ. ಮೂರನೆಯ ಭಾಗಕ್ಕೆ ಸಂಬಂಧ ಕಲ್ಪಿಸಿಕೊಳ್ಳುತ್ತದೆ ಜನಕನುತ್ತ ಜಾಗ, ಹತ್ತು ಸಾವಿರವಂತೆ ಅಡಿಗೆ, ಒಡಲೊಳಗಿನ ಸೀತೆ, ಹೊರಬರಲು ತಾವಿಲ್ಲ ಹೀಗೆ ಮೊದಲ ಭಾಗಕ್ಕೆ ಮೂರನೆಯ ಭಾಗದಲ್ಲಿ ಇಲ್ಲ ಎನ್ನುವುದನ್ನು ಪೂರ್ಣಗೊಳಿಸಿಕೊಳ್ಳಬೇಕಾದ ಹಾದಿಯನ್ನು ತೆರೆಯುತ್ತಾರೆ. ನೆಲ ಸಮವಾಗದೆ, ಉಳಲಾರದೆ ರಾಮ ಹುಟ್ಟಲಾರನು ಎಂಬುದನ್ನು ಮತ್ತೆ ಧ್ವನಿಸುತ್ತದೆ.

ಎರಡನೆಯ ಭಾಗದಲ್ಲಿ ಕಲ್ಲುಬೆಂಚು, ನಲ್ಲಿ ಕಾರೇ ಸೀಬೆ ( ಗಮನಿಸಿ – ಇವೆಲ್ಲಾ ನೆಲದ ಹಣ್ಣುಗಳೆನ್ನುವ ಪ್ರಜ್ಞೆ ಓದುಗನಿಗೆ ಇರಬೇಕಿದೆ. ಅಡಿಗರ ರಾಮನವಮಿಯ ದಿವಸ ಕವನದಲ್ಲೂ ಹಣ್ಣುಗಳ ಪ್ರಾಸ್ತಾಪ ಬರುತ್ತದೆ. ) ಅಲ್ಲೆ ಕುಳಿತಿದ್ದಾಳೆ ಶಬರಿ, ಗೇಟಿನಲ್ಲಿ ಯುನಿಫಾರ್ಮನಲ್ಲಿ ಜಾಂಬವಂತ, ಬಡರಾಮನಿಗೆ ಸೀಟು ಸಿಕ್ಕದ ಸ್ಥಿತಿಯ ಚಿತ್ರಣವಿದೆ. ಕೊನೆಯ ಭಾಗದಲ್ಲಿ ಆವುಗೆ ( ಹಾವುಗೆ ಪದವನ್ನು ಕವಿ ಬಳಸಬಹುದಿತ್ತು, ಮತ್ತದು ಸರಿಯಾದುದು. ಆದರೆ ಇಲ್ಲಿ ಗ್ರಾಮ್ಯ ಪದವನ್ನೇ ಬಳಸಿರುವುದು ವಿಶೇಷ. ಮತ್ತದು ನೆಲದ ಪ್ರಜ್ಞೆಯ ಸಂಕೇತ. ‘ಹ’ ಕಾರವು ‘ಅ’ ಕಾರವಾಗಿಯೇ ಜನರಲ್ಲಿ ಬಳಕೆಯಲ್ಲಿದೆ ಎಂಬುದೂ ಗಮನಿಸಬೇಕಾದ ಅಂಶ. ಇದು ಸಶಕ್ತವಾದ ಪರ್ಯಾಯ ಭಾಷಾ ಮಾದರಿ ನಿರ್ಮಾಣ. ) ಮುಳ್ಳು ಕಂಟಿಯ ಹಾದಿ, ಕುಂಟುವ ರಾಮಣ್ಣ, ಮೂಳೆ ಕಡಿವ ರಾಮ, ಮನೆ ಸಿಕ್ಕದೆ ಬೀದಿಯಲ್ಲಿ ನಿಲ್ಲುವುದು ಕೊನೆಯ ಭಾಗದಲ್ಲಿ ಬಂದಿದೆ. ಇಲ್ಲಿ ಹೊರನಿಲ್ಲುವುದೂ ದೂರುಳಿಯುವುದೂ ನಮ್ಮವನೇ ರಾಮ ಎಂಬ ಸ್ಥಿತಿ ಇದೆ.

ಒಂದಷ್ಟು ಸೂಕ್ಷ್ಮವಾಗಿ ಗಮನಿಸಬೇಕೆನಿಸುವ ಅಂಶವೆಂದರೆ, ಮೊದಲನೆಯದು ವಾಸ್ತವದಲ್ಲಿ ದಿಕ್ಕುಪಾಲಾಗಿರುವ ಬದುಕನ್ನು ಕಟ್ಟಿಕೊಳ್ಳಲು ಪರ್ಯಾಯ ನಿರ್ಮಾಣ ಮಾಡುವಲ್ಲಿ ಕವಿ ವಹಿಸಿರುವ ಜಾಗೃತ ಭಾಷಿಕ ಪ್ರಜ್ಞೆ ಮತ್ತೊಂದು ವಾಸ್ತವದ ಮಿಶ್ರಣ. ಈ ಎರಡು ಅಂಶಗಳ ಮೂಲಕವೇ ಕೆಲವಷ್ಟು ಅಭಿಪ್ರಾಯಗಳು ಉಂಟಾಗಲು ಕಾರಣವಾಗಿವೆ. ಅಂತಹಾ ಅಭಿಪ್ರಾಯಗಳ ಅಂಶಗಳನ್ನು ಹೀಗೆ ಗುರುತಿಸಬಹುದು

೧. ಮೊದಲ ಭಾಗದಲ್ಲಿನ ಮೌನ, ಧ್ಯಾನ, ಏಕಾಂಗಿತನ, ಶಕ್ತಿ ಸಂಚಯದ ಹಾದಿಯನ್ನು ತೆರೆದು ತೋರಿಸುತ್ತ ಇದು “ಶೋಕವನ” ಎಂಬುದನ್ನು ಕವನ ಸಾದರ ಪಡಿಸುತ್ತಿದೆ.

೨. ಕುಟುಂಬ, ಶಿಕ್ಷಣ, ಅದಕ್ಕೆ ಕಾರಣವಾದ ಶಾಲೆಯ ಪರಿಸರಕ್ಕೆ ಎರಡನೆಯ ಭಾಗ ಬರುತ್ತದೆ. ಸ್ವತಂತ್ರವೇ ಇಲ್ಲದ ಮಟ್ಡದಲ್ಲಿನ ವಿದ್ಯಾರ್ಥಿಗಳು ಯುನಿಫಾರ್ಮ ಧರಿಸಿದ ಜಾಂಬವಂತ, ಹೊರಗೆ ಕುಟುಂಬದಿಂದ ಹೊರಬಂದು ವೃದ್ಧೆಯಾದರೂ ದುಡಿದು ಬದುಕುವ ಮುದುಕಿ ಶಬರಿಯಾಗಿ ಕಾಣುತ್ತಾಳೆ. ಇದೊಂದು ಕೌಟುಂಬಿಕ ಒಡಕಿನ ಮತ್ತು ಸ್ವತಂತ್ರ ರಹಿತವಾದ ಸ್ಥಿತಿಯನ್ನು ಬೊಟ್ಟುಮಾಡಿ ತೋರಿಸುತ್ತಿದೆ. ಬಡರಾಮನಿಗೆ ಸಿಕ್ಕದ ಸೀಟು ಇದಂತೂ ಸಮಾನ ಶಿಕ್ಷಣ ಎನ್ನುವ ಮಾತನ್ನಾಡಿ ಪ್ರೈವೆಟೈಜೇಷನ್ ನಿಂದ ಉಂಟಾಗುತ್ತಿರುವ ದುರಂತವನ್ನು ವ್ಯಂಗ್ಯ ಮಾಡುತ್ತಿರುವುದು.

೩. ಮೂರನೆಯ ಭಾಗ ನೇರವಾಗಿ ನೆಲದ ಕಡೆಗೆ ಬರುತ್ತಾರೆ. ಉಳುವ ಜಮೀನು ರಸ್ತೆಯಾಗಿರುವುದು, ನೇಗಿಲು ನೊಗ ಕಟ್ಟದ ಸ್ಥಿತಿ. ನೇಗಿಲ ತಾಕದೆ ಹೊರಬರದ ಸೀತೆ ಕೊನೆಗೆ ಒಂಟಿಯಾಗುವ ರಾಮ.

೪. ಕೊನೆಯ ಭಾಗ ಆಹಾರದ ಆಯ್ಕೆ ಕಡೆಗೆ ಬರುತ್ತದೆ. ಮನುಷ್ಯ ಸಂಬಂಧಗಳು ಒಡೆದಿರುವುದಕ್ಕೆ ಆಹಾರವೂ ಒಂದು ಕಾರಣವೆನ್ನುವುದನ್ನು ಮರೆಯುವ ಹಾಗಿಲ್ಲ. ಇದರಿಂದ ಒಡೆದ ಸ್ಥಿತಿಯನ್ನು, ಸೂರು ಸಿಕ್ಕದ ಸ್ಥಿತಿಗೆ ತಲುಪಿರುವುದಕ್ಕೆ ತಂದು ನಿಲ್ಲಿಸಿ ಕವನ ಮುಕ್ತಾಯವಾಗುತ್ತದೆ.

ಕವಿತೆಯೇನೋ ಮುಕ್ತಾಯವಾಗುತ್ತದೆ. ಆದರೆ ಅದು ಎತ್ತಿರುವ ಪ್ರಶ್ನೆ ಓದು ಮಕ್ತಾಯವಾದ ನಂತರ ಕಾಡಲು ಆರಂಭವಾಗುತ್ತದೆ. ಒಂದೊಳ್ಳೆಯ ಕವನದ ಗುಣವೇ ಇದು. ಓದುವಾಗ ಥಟ್ಟೆಂದು ಅರ್ಥವಾಗುವುದು ಕವಿತೆಯಲ್ಲವೇ ಅಲ್ಲ, ಓದಿದ ನಂತರ ಉಂಟಾಗುವ ಮೌನದಲ್ಲಿ ಪ್ರತಿಮೆ, ರೂಪಕ, ಪುರಾಣಪ್ರತೀಕ ಕವಿ ಬಳಸಿದ ಇತರ ಪರಿಕರುಗಳು ಮಾರ್ದನಿಸುತ್ತಾ ಅರ್ಥಚ್ಛಾಯೆಗಳು ಬಿಡಿಸಿಕೊಂಡು ಹೋಗುವುದು. ಈ ಕವಿತೆ ಮೇಲಿನ ಮಾರ್ದನಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ.

ಈ ಕವನದಲ್ಲಿನ ವಿಶೇಷ ರೂಪಕಗಳು ಎನಿಸುವುದು ಗೇಟಿನಲ್ಲಿ ಕುಳಿತ ಶಬರಿ, ಯುನಿಫಾರ್ಮಿನಲ್ಲಿ ಜಾಂಬವಂತ, ಕೆಲಸವಿಲ್ಲದ ರಾಮ, ಮುಳ್ಳು ಕಂಟಿಯ ಹಾದಿಯಲಿ ಕುಂಟುವ ರಾಮಣ್ಣ, ಮೂಳೆ ಕಡಿವ ರಾಮ ಇತ್ಯಾದಿ ಇತ್ಯಾದಿ ಇವೆಲ್ಲವೂ ಮೇಲು ನೋಟಕ್ಕೆ ವಿನಯವನ್ನು ಪ್ರಶ್ನಿಸುವ ಮಟ್ಟದಲ್ಲಿದ್ದೂ ಈ ಪ್ರಶ್ನೆಗಳು ಹೊಸದೇನಲ್ಲ, ಪ್ರಶ್ನಿಸಿರುವ ಕ್ರಮ ಮಾತ್ರ ಹೊಸದು. ಎಲ್ಲರೂ ಒಂದೆನ್ನುತ್ತಲೇ ಆಹಾರ, ಆಚರಣೆಗಳಿಂದ ದೂರ ಇಡುವ, ಕುಟುಂಬ ಒಡೆದಿದ್ದರೂ ದೊಡ್ಡ ದೊಡ್ಡ ಮಾತುಗಳನ್ನಾಡುವ ಸ್ಥಿತಿ ಹೊಸದೇನಲ್ಲ. ಆದರೆ ಪುರಾಣಪ್ರತೀಕಗಳನ್ನು ಕವಿತೆಯ ರಚನೆಗೆ ಸಹಾಯಕವಾಗಿ ಬಳಕೆಯಿಂದ ವಾಸ್ತವವನ್ನು ಕಟ್ಟಿಕೊಟ್ಟು ವ್ಯಂಗ್ಯಾಭಿವ್ಯಕ್ತಿ ಮಾಡುತ್ತಿರುವುದರಿಂದ “ಈ ನೆಲದಲ್ಲಿನ್ನು ರಾಮ ಹುಟ್ಟುವುದಿಲ್ಲ” ಕವಿತೆಯು ಹೊಸತೆನಿಸುತ್ತದೆ ಮತ್ತು ನವಿರಾದ ಚಿತ್ರಣವಾಗಿದೆ. ಕಾವ್ಯವೆನ್ನುವ ಪ್ರಕಾರವೊಂದು ಮಾಡಬೇಕಾದ ಕಾರ್ಯವೇ “ಟು ಟೀಚ್ ಅ್ಯಂಡ್ ಡಿಲೈಟ್” ಎಂಬುದನ್ನು ನೆನೆವುದಾದರೆ ಆ ಮಾತಿಗೆ ಈ ಕವನವೂ ಸಾಕ್ಷಿಯಾಗಿದೆ. ಆ ಕವಿತೆಯ ಪೂರ್ಣ ಪಾಠ ಕೆಳಗೆ ಕೊಡಲಾಗಿದೆ.

ಈ ನೆಲದಲ್ಲಿನ್ನು ರಾಮ ಹುಟ್ಟುವುದಿಲ್ಲ

ತೂಬುಗಣ್ಣಿನ ಸೀತೆಯರ
ರಾಮಕೋಟಿಯ ಜಪಕ್ಕೆ
ಶೋಕವನದ ಮಣ್ಣಿದು
ಹುತ್ತಗಟ್ಟುವುದಿಲ್ಲ
ಈ ನೆಲದಲ್ಲಿನ್ನು ರಾಮ ಹುಟ್ಟುವುದಿಲ್ಲ

ಕಲ್ಲುಬೆಂಚಿನ ಮೇಲೆ
ನೆಲ್ಲಿ ಕಾರೇ ಸೀಬೇ
ಅಲ್ಲೇ ಕುಳಿತಿದ್ದಾಳೆ
ಬುಟ್ಟಿ ಹಿಡಿದ ಶಬರಿ
ಗೇಟಿನಲ್ಲೇ
ಯೂನಿಫಾರ್ಮಿನಲ್ಲಿ ಜಾಂಬವಂತ
ಬಡರಾಮನಿಗಿಲ್ಲಿ
ಸೀಟು ಸಿಕ್ಕುವುದಿಲ್ಲ

ಜನಕನುತ್ತ ಜಾಗ
ಹತ್ತು ಸಾವಿರವಂತೆ ಅಡಿಗೆ
ಅಲ್ಲೀಗ ಯಾರೂ
ನೇಗಿಲು ಕಟ್ಟುವುದಿಲ್ಲ
ಒಡಲೊಳಗಿನ ಸೀತೆಯರು
ಹೊರಬರಲು ತಾವಿಲ್ಲ
ತಾಯಿಲ್ಲ
ಕೆಲಸವಿಲ್ಲದ ರಾಮನಿಗಿಲ್ಲಿ
ಹೆಣ್ಣು ಸಿಕ್ಕುವುದಿಲ್ಲ

ಹೊತ್ತು ತಂದ ಆವುಗೆ
ತಂದುಬಿಟ್ಟಿದೆ ಗದ್ದುಗೆವರೆಗೆ
ಮುಳ್ಳು ಕಂಟಿಯ ಹಾದಿಯಲ್ಲಿ
ಕುಂಟುತ್ತಿದ್ದಾನೆ ರಾಮಣ್ಣ
ಮೂಳೆ ಕಡಿಯುವ ರಾಮನಿಗಿಲ್ಲಿ
ಮನೆ ಸಿಕ್ಕುವುದಿಲ್ಲ
ಈ ನೆಲದಲ್ಲಿನ್ನು ರಾಮ ಹುಟ್ಟುವುದಿಲ್ಲ.

************************************************

One thought on “ವಿಮರ್ಶೆ

  1. ಸಮಕಾಲೀನ ವಾಣಿಜ್ಯ ಕರಣೀಗೊಂಡಗೊಂಡ ಸಾಮಾಜಿಕ ಬದುಕಿನ ಚಿತ್ರಣ ಮಾರ್ಮಿಕವಾಗಿ ಅಭಿವ್ಯಕ್ತಿ ಗೊಂಡು…ರಾಮ ಕೇವಲ ವ್ಯಕ್ತಿ ಅಲ್ಲ.ಅಮೂರ್ತ ಮೌಲ್ಯಗಳ ಮೂರ್ತ ರೂಪ ಎಂಬುದನ್ನು ಒತ್ತಿ ಹೇಳುವುದಲ್ಲದೆ ಆದರ್ಶಗಳಿಗೆ ತೀರ ಅಂಟಿದರು ಬದಕಬೇಕಾದ ಪರಿ ಬದಲಾಗಿ ನಷ್ಟ ಗಳನುಭವ ಕಟ್ಟಿಟ್ಟ ಬುತ್ತಿ. ಅಸಮಾಧಾನದ ಧನಿ ಕವಿತೆಯಲ್ಲಿದೆ. ಉತ್ತಮವಾಗಿದೆ ದೈನಂದಿನ ರೂಪಕಗಳ ಆಯ್ಕೆ.

Leave a Reply

Back To Top