“ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ

ವಿಶ್ಲೇಷಣೆ

ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ

ಹೇಮಚಂದ್ರ ದಾಳಗೌಡನಹಳ್ಳಿ

2,164 Hindu Temple Pillars Photos - Free & Royalty-Free Stock Photos from  Dreamstime

“ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ

ನಾವು ಮಾನವಾತೀತವಾದ ಯಾವುದೋ ಶಕ್ತಿಯನ್ನು ಪ್ರಾಚೀನ ಕಾಲದಿಂದಲೂ ಗುರುತಿಸಿಕೊಂಡು ನಂಬಿಕೆಯಾಗಿ ಬೆಳೆಸಿಕೊಂಡು ಬಂದಿದ್ದೇವೆ.ಪ್ರಾಚೀನಕಾಲದಲ್ಲಿ ವೃಕ್ಷ, ಮಳೆ, ಅಗ್ನಿ,ವಾಯು,ನೀರು,ಸೂರ್ಯ- ಇವನ್ನೇ ದೇವರೆಂದು ಪೂಜಿಸುತ್ತಿದ್ದರು.ಬರಬರುತ್ತಾ ಪಶುಪತಿ ಶಿವ, ವಿಷ್ಣು, ಬ್ರಹ್ಮ- ಇವರನ್ನು ದೇವರಾಗಿ ಆರಾಧಿಸಿದರು.ಇಂದು ದೇವರು ದೇವಾಲಯಗಳ ಸಂಖ್ಯೆ ಮಾನವ ಸಂಖ್ಯೆಯೊಂದಿಗೆ ಸ್ಪರ್ಧೆಯೊಡ್ಡುತಿದೆ!. ಮಾನವರ ಬಲಿ‌ ತೆಗೆದುಕೊಳ್ಳುತಿರುವ ‘ಕೊರೊನಾ’ ವೈರಸ್ ಎಂದು ವಿಜ್ಞಾನದಿಂದ ನಾಮಾಂಕಿತಗೊಂಡಿದ್ದರೂ “ಕೊರೋನಮ್ಮ” ಎಂಬ ದೇವರಗುಡಿ ನಿರ್ಮಿಸಿ ಶಾಂತಿ ಬಲಿದಾನ ಕೊಡುವುದನ್ನು ನೋಡುವ ಸ್ಥಿತಿಯಲ್ಲಿ‌ ನಿಂತು ೧೨ನೇ ಶತಮಾನದಲ್ಲಿ ವೈಚಾರಿಕ‌ಕ್ರಾಂತಿ ಮೊಳಗಿಸಿದ ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯಗಳು ಪಡೆದ ಮಹತ್ವದ ಬಗೆಗಿನ ಅವಲೋಕನ ಮಾಡುವುದು ಅವಶ್ಯವೆನಿಸುತ್ತದೆ. ದೇವಾಲಯಗಳು ಭಾರತೀಯ ಸಾಮಾಜಿಕ-ಧಾರ್ಮಿಕ-ಅಧ್ಯಾತ್ಮಿಕ ಜೀವನದ ಕೇಂದ್ರಗಳಾಗಿ ಶತ-ಶತಮಾನಗಳಿಂದಲೂ ಮಾನವನ ಬದುಕನ್ನು ನಿಯಂತ್ರಿಸುವ ರೂಪಿಸುವ ಪಾತ್ರ ನಿರ್ವಹಿಸುತ್ತ ಬಂದಿವೆ.ಕರ್ನಾಟಕದಲ್ಲಂತೂ ವಿದ್ಯಾಕೇಂದ್ರಗಳಾಗಿ, ಯತಿಗಳ,ಧರ್ಮಗುರುಗಳ ಮಠಗಳಾಗಿ, ಸಾಮಾಜಿಕ ಸಂಪತ್ತಿನ ಸಂಚಯನ ಹಾಗೂ ವಿತರಣೆಯ ಭಂಡಾಗಾರಗಳಾಗಿ, ನ್ಯಾಯಲಯಗಳೂ ಆಗಿ ಕಾರ್ಯ ನಿರ್ವಹಿಸುತ್ತದ್ದುದು ಇತಿಹಾಸ.

           ಇಂಥ ಸಂಸ್ಥೆಗಳನ್ನು ೧೨ನೇ ಶತಮಾನದ ಬಸವ ಮುಂದಾಳತ್ವದ ಶರಣ ಚಳವಳಿಯು ನೋಡಿದ ರೀತಿ, ವೈಚಾರಿಕ ಚಿಕಿತ್ಸೆಗೊಳಪಡಿಸಿದ ಬಗೆ, ಅತ್ಯಂತ ಮಹತ್ವದ್ದು ಹಾಗೂ ಆಶ್ಚರ್ಯಕರವಾದದ್ದು. ದೇವರ ವಿಚಾರದಲ್ಲಿ ಇವರ ನಿಲುವು ದೇವಾಲಯಗಳಂತೆ ನಿರಾಕರಣೀಯವಾಗಿಲ್ಲ

.           “ನಾ ದೇವನಲ್ಲದೆ ನೀ ದೇವನೆ

ನೀ ದೇವನಾದರೆ ಎನ್ನನೇಕೆ ಸಲಹೆ”

-ಸಾಲುಗಳಲ್ಲಿ ಮೇಲುನೋಟಕ್ಕೆ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಮಟ್ಟಕ್ಕೆ ದಾರ್ಢ್ಯ ತಲುಪಿರುವಂತೆ ಕಾಣುತ್ತದೆ. “ನೀ ದೇವನಾದರೆ ಎನ್ನನೇಕೆ ಸಲಹೆ?” ದೇವರೆಂದು ಒಪ್ಪಬೇಕೆಂದರೆ ಸಲಹುವ ಕರ್ತವ್ಯ ಮಾಡಬೇಕು. ಆದರೆ ನೀನು ಏಕೆ ಸಲಹುತಿಲ್ಲ ಎಂದು ಪ್ರಶ್ನೆ ಮಾಡುವಲ್ಲಿಯೂ ದೇವರೆಂದು ತಿಳಿದ ಆ ಕಲ್ಲಿನ‌ಮೂರ್ತಿ ದೇವರಲ್ಲ ಎಂದು ನಿರೂಪಿಸುತ್ತಿದ್ದಾರೆ. ಇಂದಿಗೂ  ಗುಡಿಯೊಳಗಿನ ದೇವರ ಮೂರ್ತಿಗೆ ಮಜ್ಜನ ಮಾಡಿಸೋದು, ಹೂ ಮುಡಿಸೋದು, ಹಾಲು-ಅನ್ನ ನೈವೇದ್ಯ ತೋರಿಸೋದು, ಗುಂಪಾಗಿ, ಸಾಲುಗಟ್ಟಿ ಅಲ್ಲಿ‌ಹೋಗಿ ಅದರ ಮೌಲ್ಯ ಹೆಚ್ಚಿಸೋದು, ಪ್ರಯತ್ನದಿಂದ ಸಾಧಿಸಿದ ಸಾಧನೆಯನ್ನು ಹರಕೆಯ  ಫಲವೆಂದು ಬಿಂಬಿಸಿ, ದೇವರ ತಲೆಗೇ ಕಟ್ಟಿ, ಡಿಮ್ಯಾಂಡ್ ಕ್ರಿಯಾಟ್ ಮಾಡೋದು, ಜೊತೆಗೆ ಬಿಸಿಲು-ಮಳೆಗಳಿಂದ ರಕ್ಷಿಸಲು ಕಲ್ಲುಗಳಿಂದಲೇ ಕಟ್ಟಡ ನಿರ್ಮಿಸಿ ತಂಪಾಗಿರಿಸಿರೋದು….ಎಲ್ಲವೂ ಮನುಷ್ಯರೇ!ಇಷ್ಟೆಲ್ಲಾ ಸೌಕರ್ಯವನ್ನು ಯಾವ ದೇವರೂ ಯಾವ ಮನುಷ್ಯನಿಗೂ ಮಾಡಿಕೊಡಲಿಲ್ಲ!? ಈ ಲೆಕ್ಕದಲ್ಲಿ ಪ್ರಶ್ನೆ ದೇವರಮೂರ್ತಿಯನ್ನು ವ್ಯಂಗ್ಯ ಮಾಡುವಂತಿದೆ. ಆದರೆ ‘ನಾ ದೇವ’ ಎಂದು ಒಬ್ಬ ಶರಣ ಹೇಳಬಹುದೇ? “ನಾ ದೇವನಲ್ಲದೆ ನೀ ದೇವನೇ”- ನಾನು ದೇವರು ನೀನಲ್ಲ. ಎಂಬ ನಿರ್ಧಾರಾತ್ಮಕ‌ ಧ್ವನಿಯಿದೆ. ಮುಂದಿನ ಸಾಲುಗಳತ್ತ  ಗಮನ ಹರಿಸಿದರೆ ಇದರ ವ್ಯಂಜನ ತಿಳಿಯುತ್ತದೆ. “ಆರೈದು  ಒಂದು ಕುಡಿತೆ ನೀರೆರೆವೆ ಹಸಿದವನಿಗೆ ಓಗರವನಿಕ್ಕುವೆ ನಾ ದೇವ ಕಾಣಾ” ಇಲ್ಲಿ ‘ನಾ ದೇವ ಕಾಣಾ’ ಎಂಬ ಶಬ್ದದ ಮೊದಲಿರುವ ವಾಕ್ಯದಲ್ಲಿ ‘ನಾ’ ಎಂದರೆ ಯಾರು ಎಂಬುದರ ವಿವರಣೆ ಇದೆ -ಬಾಯಾರಿದವರಿಗೆ ನೀರು, ಹಸಿದವರಿಗೆ ಅನ್ನವನ್ನು ನೀಡಿ ತಣಿಸುವ -ನಾನು-ದೇವರು ಎಂದು. ಇಲ್ಲಿ ಆಪತ್ತಿಗೆ ನೆರವಾಗುವ ಮಾನವೀಯಮೌಲ್ಯಗಳಲ್ಲಿ  ದೇವರ ಅಸ್ತಿತ್ವವನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ದೇವರ ಅಸ್ತಿತ್ವವನ್ನು ಒಪ್ಪಿಕೊಂಡ ಶರಣರು ದೇವರನ್ನು ಗುಡಿಯ  ಗರ್ಭಗುಡಿಯ ಕಲ್ಲಿನಾಕೃತಿಯಿಂದ ನೇರವಾಗಿ ಮಾನವನಂತರಂಗ ಗುಡಿಗೆ ಮಾನವೀಯ ಮೌಲ್ಯ ರೂಪದಲ್ಲಿ ಪ್ರತಿಷ್ಟಾಪಿಸಿದರು. ಆದರೆ ಲಿಂಗವೇಕೆ ತೊಡಿಸಿದರು? ಪ್ರಶ್ನೆ ಸಹಜವಾಗೇ ಉದ್ಭವಿಸುತ್ತದೆ.

      ವೀರಶೈವದ ‘ದೇವರಕಲ್ಪನೆ’ ಪರಂಪರಾಗತ ದೇವರ ಕಲ್ಪನೆಯಿಂದ ಭಿನ್ನವಾಗಿದೆ. ಒಂದೆಡೆ ಪುರಾಣ ಪ್ರತಿಷ್ಠಾಪಿತವಾದ ಶಿವನ ಮೂರ್ತಿಪೂಜೆ ಮತ್ತು ಶಿವಸಂಕೇತವಾದ ಸ್ಥಾವರಲಿಂಗಪೂಜೆ- ಈ ಎರಡೂ ರೂಢಿಯಲ್ಲಿದ್ದವುಗಳು. ಶರಣರು ದೇವಾಲಯ ಕೇಂದ್ರಿತವಾದ ಈ ಎರಡೂ ರೂಪಗಳನ್ನು ನಿರಾಕರಿಸಿದರು. ದೈವತ್ವದ ಕಲ್ಪನೆಯ ಸಾಂಕೇತಿಕ ರೂಪವಾಗಿ ಭೂಗೋಳಾಕೃತಿಯನ್ನು ಇಷ್ಟಲಿಂಗವೆಂದು ಕೊರಳಲ್ಲಿ  ಕಟ್ಟಿಕೊಳ್ಳುವ ಮೂಲಕ ದೇಹವನ್ನೇ ದೇವಾಲಯವಾಗಿಸಿದರು.

“ಉಳ್ಳವರು ಶಿವಾಲಯವ ಮಾಡುವರು

ನಾನೇನ ಮಾಡಲಿ ಬಡವನಯ್ಯಾ

ಎನ್ನ ಕಾಲೇ ಕಂಬ ದೇಹವೇ ದೇಗುಲ

ಶಿರ ಹೊನ್ನ ಕಳಸವಯ್ಯಾ”-

ಈ ಸಾಲುಗಳನ್ನು ನೋಡಿದರೆ ಅಂದಿನ ಸಮಾಜದಲ್ಲಿ ಜಾತಿ ಅಸಮಾನತೆಯ ಜೊತೆಗೆ ವರ್ಗತಾರತಮ್ಯವೂ ಅಸ್ತಿತ್ವದಲ್ಲಿದ್ದುದರ ಸೂಚನೆ ಸಿಗುತ್ತದೆ. ‘ಉಳ್ಳವರು’ ಮಾಡುವ ಶಿವಾಲಯ ತಮಗೆ ಬೇಡವೆಂದೂ ದೇಹವನ್ನೇ ದೇವಾಲಯದ ರೂಪ ಮಾಡಿದ್ದನ್ನೂ ಈ ವಚನ ಪ್ರತಿಪಾದಿಸಿದೆ. ದೇವಾಲಯಗಳ ವಾಸ್ತುಶಿಲ್ಪಶಾಸ್ತ್ರವೂ ಮಾನವ ದೇಹದ ರೂಪದಲ್ಲೇ ದೇವಾಲಯಗಳ ನಿರ್ಮಾಣ ಮಾಡುತ್ತಿದ್ದುದನ್ನು ನೋಡಬಹುದು. ಇದನ್ನು ಶರಣರು ಬಲ್ಲವರಾಗಿದ್ದು, ಮಾನವದೇಹ ರೂಪವೇ ದೇವಾಲಯ ರೂಪ ತಳೆದಿರುವುದಾದರೂ, ಅದರೊಳಗೆ ಪ್ರವೇಶದಲ್ಲಿ ಭಿನ್ನಭೇದದ ಆಚರಣೆಯ ವ್ಯಂಗ್ಯ ಹಾಗೂ ಅದಕ್ಕೆ  ಶರಣರು ತೋರಿದ ಪ್ರತಿಭಟನೆಯೂ ಆಗಿದೆ. 

                   ಬಹುದೇವೋಪಾಸನೆಯನ್ನು ನಿರಾಕರಿಸಿದರು. ‘ಅಂಗದ ಮೇಲೆ  ಲಿಂಗವಿದ್ದೂ ಅನ್ಯಲಿಂಗವ ನೆನೆವನೆ ನಿಮ್ಮ ಭಕ್ತನು’ ಎಂಬಲ್ಲಿ ಲಿಂಗಧರಿಸಿದ ಬಳಿಕ ಬೇರೆ ಯಾವ ದೇವರ ಪೂಜೆಯೂ ಅನವಶ್ಯ ಎಂದು ಸಾರಿದರು. ಜಾತಿಗೊಂದು ದೇವರು, ಧರ್ಮಕ್ಕೊಂದು ಕಟ್ಟಡ, ಕೇರಿಗೊಂದು ಜಾತಿ- ಹೀಗೆ ವಿಘಟಿತಗೊಂಡ ಮಾನವ ಸಮಾಜವನ್ನು ಒಂದೇ ನೆಲೆಗಟ್ಟಿಗೆ ತರಲು ಎಲ್ಲರಿಗೂ ಲಿಂಗ ತೊಡಿಸಿ ವಿಶ್ವಧರ್ಮ ಕೊಟ್ಟರು. ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,’ಎಂದು ಪೂಜಿಸುವ ಪ್ರವೃತ್ತಿಗಳನ್ನೂ ಖಂಡಿಸಿ ಏಕದೈವವಾದ ಶಿವನನ್ನು ಇಷ್ಟಲಿಂಗರೂಪದಲ್ಲಿ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೇ ಪ್ರತಿಷ್ಠಾಪಿಸಿದರು.ತನ್ಮೂಲಕ ಮಾನವರಲ್ಲಿ ವರ್ಣವರ್ಗಲಿಂಗ ಭೇದವನ್ನು ತೊಡೆದು ಧರ್ಮಶ್ರದ್ಧೆ ಮತ್ತು ಸಮಾನತೆಯ ಭಾವದ ಆತ್ಮಪ್ರತ್ಯಯ ಮಾಡಿಸಿದರು.ಕೆಲವರಲ್ಲಿ ಪ್ರಶ್ನೆಗಳು ಮೂಡಬಹುದು: ವಚನಕಾರರ ಅಂಕಿತಗಳೆಲ್ಲಾ ಸ್ಪಷ್ಟವಾಗಿ ಸ್ಥಾವರಲಿಂಗದ ದೇವಾಲಯಗಳನ್ನೇ ಸೂಚಿಸುತ್ತಿವೆಯಲ್ಲಾ!? ಎಂದು. ಅದರಲ್ಲೂ ಬಸವಣ್ಣನವರ ಅಂಕಿತ- ಕೂಡಲಸಂಗಮದೇವ, ಅಕ್ಕಮಹಾದೇವಿಯ- ಚನ್ನಮಲ್ಲಿಕಾರ್ಜುನ, ಅಲ್ಲಮಪ್ರಭುಗಳ- ಗುಹೇಶ್ವರ. ಬಸವಣ್ಣನವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ” ವಚನದ ಸಾಲುಗಳಲ್ಲಿ ವರ್ಣ-ವರ್ಗ-ಲಿಂಗ ವಿಭೇದದ ವಿರುದ್ಧದ ದನಿ ಕಾಣುತ್ತದೆ. ಇದನ್ನು ಒಪ್ಪವುದಾದರೆ, ಅವರ ಅಂಕಿತವೂ ಇದನ್ನೇ ಧ್ವನಿಸುವುದನ್ನು  ಕಾಣಬಹುದು. ವರ್ಣ-ವರ್ಗ-ಲಿಂಗ ತಾರತಮ್ಯ ತೊರೆದು ಸಮಭಾವ ಮೂಡಿಸಿಕೊಂಡು ಸಂಗಮಿಸಿದರೆ ದೇವರ ಅಸ್ತಿತ್ವ ಅದೇ ಆಗಿರುತ್ತದೆ ಎಂಬ ಭಾವವನ್ನು ಸೂಚಿಸುತ್ತದೆ. ಇನ್ನು ಅಕ್ಕನ ಚನ್ನಮಲ್ಲಿಕಾರ್ಜುನನ ಬಗೆಗೆ ಆಕೆಯೇ ಹೇಳುತ್ತಾಳೆ: “ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವಾಂಗಾನೊಲಿದೆ..”

– ರೂಪು, ಗುರುತು, ರೀತಿ ಯಾವುದೂ ಇಲ್ಲದ ನಿರಾಕಾರ ಚಲುವನಿಗೆ ಅಂದರೆ ಇಷ್ಟಲಿಂಗಕ್ಕೆಯೇ ಎಂಬುದು ಸ್ಪಷ್ಟವಾಗುವುದಿಲ್ಲವೇ?  ಅಲ್ಲಮನ ‘ಗುಹೇಶ್ವರ’ ವೂ ಅಷ್ಟೆ ಎದೆಯ ಗೂಡ-ಗುಹೆ-ಯಲ್ಲಿ ಅಂದರೆ ಉರಸ್ಥಲದಲ್ಲಿ ನೆಲೆಗಾಣಿಸಿಕೊಂಡ ಇಷ್ಟಲಿಂಗವೇ ಅಗುತ್ತದಲ್ಲವೇ?  ಇನ್ನು ಸಿದ್ಧರಾಮನ ಲೋಕಕಲ್ಯಾಣಾರ್ಥ ಸಾಧನೆಯಲ್ಲಿ ಕೆರೆ, ಬಾವಿ, ದೇವಾಲಯಗಳ ನಿರ್ಮಾಣವೂ ಸೇರಿದೆ. ಆದರೆ “……. ಎಲೆ ದೇವಾ ಜಗದೊಳಗೆಲ್ಲಿಯೂ ನೀವಿಲ್ಲದೆಡೆಯುಂಟೆ? ಎಂಬತ್ತನಾಲ್ಕು ಲಕ್ಷ ಶಿವಾಲಯಗಳ ನೀವು ಮಾಡಿ ಒಳಗಿಪ್ಪುದ ಕಂಡು ನಾನು ಮಾಡಿದೆನಲ್ಲದೆ ಕಪಿಲಸಿದ್ಧಮಲ್ಲಿನಾಥಯ್ಯ ಎನಗೆ ಬೇರೆ ಸ್ವತಂತ್ರವುಂಟೆ?” ಎಂಬಲ್ಲಿ ದೇವರಿಲ್ಲದ ಎಡೆಯು ಜಗದೊಳಗೆಲ್ಲಿಯೂ ಇಲ್ಲವೆಂಬ ಅವನ ಜ್ಞಾನ ಸೂಚಿತವಾಗಿದೆ. “ಸಕಲ ಲಿಂಗವ ಹಿಡಿದು ಅಗಲದೆ ನಡೆ ಎಂದಿರಾಗಿ ನಡೆವುತಿದ್ದೆನು

ಲಿಂಗಪ್ರತಿಷ್ಟೆಯ ಮಾಡೆಂದು ಎನಗೆ ನಿರೂಪಿಸಿದ್ದ ಕಾರಣ ಮಾಡುತಿದ್ದೆನಲ್ಲದೆ ಎನಗೆ ಬೇರೆ ಸ್ವತಂತ್ರವುಂಟೇ?” : ಸ್ವ ಇಚ್ಚೆಯಿಂದ ದೇಗುಲ ನಿರ್ಮಾಣದಲ್ಲಿ ತೊಡಗದಿರುವುದು ಸ್ಪಷ್ಟವಾಗುತ್ತದೆ. ಯಾವುದೋ ಅವ್ಯಕ್ತ ಆದೇಶದ ಕಟ್ಟಳೆಗೆ ಒಳಗಾಗಿದುದರ ಪರಿಣಾಮ ಎಂದೂ ಅರ್ಥವಾಗುತ್ತದೆ.ಹೀಗೆ ಶರಣರು ದೇವಾಲಯಗಳನ್ನು ಪೂರ್ಣ ನಿರಾಕರಿಸಿ, ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಸಾರಿದರು.  ದೇಹವನ್ನೇ  ದೇವಾಲಯವಾಗಿಸಿದರು. ಇನ್ನು ದೇವರನ್ನು ಒಪ್ಪಿದರೂ, ಅಸ್ತಿತ್ವವನ್ನು ಮಾತ್ರ  ಕಷ್ಟದಲ್ಲಿರುವ ಜೀವಿಗಳಿಗೆ ನೆರವಾಗುವ, ಹಸಿದವರಿಗೆ ಅನ್ನವನಿಕ್ಕುವ, ಬಾಯಾರಿದವರಿಗೆ ನೀರು ನೀಡುವಂಥ ಮಾನವೀಯ ಮೌಲ್ಯಗಳಲ್ಲಿ ಕಂಡುಕೊಂಡರು.ನಮಗರಿವಿಲ್ಲದೆಯೇ ಈ ರೀತಿಯ ದಾಸೋಹಿಗಳನ್ನು ದೇವರಾಗಿ ಕಾಣುತಿದ್ದೇವೆ..ನಮ್ಮ ನಡುವೆಯೇ ಬದುಕಿದ ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳು ಮಾನವರೇ ಆದರೂ ಶರಣರು ಸೂಚಿಸಿದ ಮೌಲ್ಯಗಳನ್ನು ಸಾಕಾರಗೊಳಿಸಿ ದೇವತ್ವಕ್ಕೇರಿದ್ದಾರೆ. ಪ್ರತೀ ಕ್ಷಣ ಆಪತ್ತಿನಲ್ಲಿ ಕೈ ಹಿಡಿದ ಯಾರೇ ವ್ಯಕ್ತಿಯನ್ನು ಕುಲ-ಗೋತ್ರ ನೋಡದೆ ‘ದೇವರು ಬಂದಂಗೆ ಬಂದೆ ಕಣಪ್ಪ’ ಎಂದು‌ ಕೃತಜ್ಞತೆ ಸಲ್ಲಿಸುವಲ್ಲಿ ಶರಣರ ದೇವರಸ್ತಿತ್ವದ ತತ್ವ ಉಸಿರಾಡುತ್ತಿದೆ.

        ಕೊರೊನಾ ವೈರಸ್ ನಮಗೆ ತಿಳಿಸಿದ ಒಂದು ಗಂಭೀರ ಸತ್ಯ: ದೇಗುಲಗಳು ಸರ್ಕಾರದ ಖಜಾನೆಯ ಆದಾಯದ ಮೂಲವೆಂಬುದು.ಅಂದರೆ ಇಂದು ದೇಗುಲಗಳು ಎಷ್ಟು ಮಹತ್ವದ ಸ್ಥಾನ ಪಡೆದಿವೆ ಎಂದರೆ: ಶರಣರಿಂದ ನಿರಾಕರಣೆಗೊಳಗಾಗಿದ್ದ ದೇಗುಲಗಳೊಳಗೇ ಇಂದು ಶರಣರೂ ಬಂಧಿಯಾಗಿ ಗರ್ಭಗುಡಿ ಸೇರಿದ್ದಾರೆ. ದೇಗುಲಗಳಿಗೆ ಬೀಗ ಹಾಕಿದರೆ ಸರ್ಕಾರದ ಆದಾಯದ ಒಂದು ಮೂಲವೇ ಬಂದಾಗುತ್ತದೆ. ೧೨ನೇ ಶತಮಾನದ ಸರ್ವಮಾನವಸಮಾನತೆಯ ಕೂಗು ದೇಗುಲ ಗಂಟೆಗಳ ಸದ್ದೊಳಗೆ ಲೀನವಾಗಿ ಜನಕರ್ಣಗಳಿಗೆ ದೂರವಾಗುಳಿದಿದೆ. ಮುಂದುವರಿದು ದೇವ-ದೇವತೆಗಳಿಗೂ ಜಾತಿಯ ಧೀಕ್ಷೆ ಕೊಟ್ಟು ಸಂಬಂಧಿತ ಜಾತ್ಯಸ್ತರ ಮೇಲುಸ್ತುವಾರಿಗೆ ನೇಮಿಸಿಕೊಂಡಿದ್ದೇವೆ. ಖಾಯಿಲೆಗೊಂದು ದೇವರ ಸೃಷ್ಟಿ ಮಾಡಿ ಅದನ್ನು ಹರಡುವ-ನಿಯಂತ್ರಿಸುವ ಅಧಿಕಾರ ನೀಡಿದ್ದೇವೆ. ಇಷ್ಟೆಲ್ಲಾ ವಾಸ್ತವದ ವ್ಯಂಗ್ಯ ಪ್ರತಿಕ್ರಿಯೆಯನ್ನು ೧೨ ನೇ ಶತಮಾನದ ಶರಣತತ್ವಗಳು ತಡೆದುಕೊಳ್ಳಬಲ್ಲವೇ!?

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ –

“ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ” 

ಸಾಲುಗಳಲ್ಲಿ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲದ ದೇವರನ್ನು ಎಲ್ಲೆಲ್ಲೋ ಹುಡುಕುವ ವ್ಯರ್ಥ ಹಂಬಲ, ನಮ್ಮೊಳಗೇ ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ- ಮೌಲ್ಯಗಳ ಮೂಲಕ ನೆಲೆಯಾಗಿರುವ ದೇವರನ್ನು ಗುರುತಿಸುವಲ್ಲಿನ ಸೋಲನ್ನು ಒಪ್ಪಿಕೊಳ್ಳುವ ಮೂಲಕ, ಆ ನಮ್ಮ ಸೋಲೇ ಇಂದು ಅಸ್ತಿತ್ವದಲ್ಲಿದ್ದು ಪ್ರಭಾವಪೂರ್ಣವಾಗಿ ಮೆರೆಯುತ್ತಿರುವ ದೇಗುಲಗಳ ಗೆಲುವು ಎಂದು ಹೇಳಬಹುದೇ!???

************************************************************************

      

4 thoughts on ““ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ

Leave a Reply

Back To Top