ವೇಣು ಮಾವ ಕ್ಷಮಿಸು

ಅನುಭವ ಕಥನ

ನನ್ನ ಚಿಕ್ಕ ವಯಸ್ಸಿನ, ಮತ್ತೊಮ್ಮೆ ತಿದ್ದಿಕೊಳ್ಳಲು ಅವಕಾಶ ನೀಡದ ನನ್ನೊಂದು ದೀರ್ಘವಾದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ಬೆಂಗಳೂರಿನ ರಾಜಾಜಿನಗರದ ನಮ್ಮ ಕಂಪೌಂಡಿನಲ್ಲಿ ವೇಣು ಹಾಗೂ ಮೀರಾ ದಂಪತಿಗಳು ಆಗ ತಾನೇ ಮದುವೆ ಆಗಿ ಪುಟ್ಟದಾದ ಒಂದು ಹಾಲು ಅಡಿಗೆ ಮನೆಗೆ ಬಂದಿದ್ದರು. ನವದಂಪತಿಗಳು ಒಟ್ಟೊಟ್ಟಿಗೆ, ಅಂದವಾಗಿ ಅಲಂಕರಿಸಿಕೊಂಡು ಅಲ್ಲಿ ಇಲ್ಲಿ ಓಡಾಡುವುದನ್ನು ನೋಡಲು ಸೊಗಸಾಗಿತ್ತು. ಆಗಿನ ಕಾಲದ ವಿಶೇಷ ಎನ್ನಬಹುದಾದ ಸಡಿಲವಾದ ಒಂದು ಜಡೆ ಹೆಣೆದು ತುದಿಯನ್ನು ಬಂದಿಸದೆ ಹಾಗೆ ಬಿಟ್ಟು (ಅದೇ ಜನರೇಷನ್ನಿನ ಎಷ್ಟೊಂದು ಜನರು ಈಗಲೂ ಅದೇ ರೀತಿ ಜಡೆ ಹೆಣೆದುಕೊಳ್ಳುತ್ತಾರೆ) ಬಲಗಿವಿಯ ಹಿಂದೆ ಆಗ ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ಬಟ್ಟೆಯ ಗುಲಾಬಿಯನ್ನು ಸಿಕ್ಕಿಸಿ ಮುದ್ದಾಗಿ ಕಾಣುತ್ತಿದ್ದ ಮೀರಕ್ಕ ನಮ್ಮ ತಾಯಿಯ ದೂರದ ಸಂಬಂಧಿಯೂ ಹೌದು.

ಯಾವಾಗಲೂ ಮನೆಗೆ ಬಂದು ನಮ್ಮ ತಾಯಿಗೂ ಸಹಾಯ ಮಾಡಿಕೊಡುತ್ತಾ ಚೆನ್ನಾಗಿ ಹೊಂದಿಕೊಂಡಿದ್ದರು ದಂಪತಿಗಳು. ನಾಲ್ಕು ವರ್ಷದ ಮಗುವಾಗಿದ್ದ ನನ್ನನ್ನು ಅವರಿಬ್ಬರೂ ಅತಿಯಾಗಿ ಹಚ್ಚಿಕೊಂಡಿದ್ದರು. ಅವರ ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯದವರಿಗೆಲ್ಲಾ ನಾನು ವೇಣುಮಾವನ ಸಾಕುಮಗಳು ಎನ್ನುವಷ್ಟರ ಮಟ್ಟಿಗೆ ಅವರು ಎಲ್ಲಿ ಹೋದರೂ ನಾನು ಅವರ ಮಧ್ಯೆ ಇರಬೇಕಿತ್ತು. ನಮ್ಮ ತಂದೆ ಎಷ್ಟು ಬೈದರೂ ಕೇಳದೆ, ಹಬ್ಬದ ದಿನಗಳಲ್ಲಿ ಹಾಗೂ ಮದುವೆಗಳಿಗೆ ಹೋದರೆ ನನಗೆ ಹೊಸಬಟ್ಟೆ ತಂದು ತೊಡಿಸುವುದು ಅವರ ಒಡವೆಯನ್ನು ನನಗೆ ಹಾಕಿ ಕರೆದೊಯ್ಯುವುದು ಮಾಡುತ್ತಾ, ಅತಿಯಾಗಿ ಪ್ರೀತಿಸಿಬಿಟ್ಟರು.

ಅವರು ನಮ್ಮೊಂದಿಗಿದ್ದ ಐದು ವರ್ಷದಲ್ಲಿ ಎರಡು ಹೆಣ್ಣು ಮಕ್ಕಳು ಹುಟ್ಟಿ, ನಮ್ಮೊಂದಿಗೆ ಆಡಿಕೊಂಡು ಬೆಳೆಯುತ್ತಿದ್ದರು. ಹೆಚ್ ಎ ಎಲ್ ಸಂಸ್ಥೆಯ ಉದ್ಯೋಗಿಯಾಗಿದ್ದ ವೇಣು ಮಾವನಿಗೆ ಒಳ್ಳೆ ಸಂಬಳ ಬರುತ್ತಿದ್ದು, ಮಕ್ಕಳೂ ಬೆಳೆಯುತ್ತಿದ್ದರಾದ್ದರಿಂದ ಮನೆಯ ಹತ್ತಿರದಲ್ಲಿಯೇ ಸಿಂಗಲ್ ಬೆಡ್ರೂಮಿನ ಮನೆಯನ್ನು ಗೇಣಿಗೆ ಪಡೆದು ಮನೆ ಖಾಲಿ ಮಾಡಿಬಿಟ್ಟರು. ಮನೆ ಬಿಟ್ಟು ಹೋದರೂ ಅವರ ಎರಡು ಮಕ್ಕಳ ಜೊತೆಗೆ ನನ್ನನ್ನೂ ಒಬ್ಬಳಾಗಿ ನೋಡಿಕೊಳ್ಳುತ್ತಿದ್ದರು. ಗೇಣಿಯ ಅವಧಿ ಮುಗಿಯುವ ಮೊದಲೇ ಕಂಪೆನಿಯ ಕ್ವಾರ್ಟ್ರಸಿಗೆ ಹೋಗಿಬಿಟ್ಟರು.

ಈಗಿನಂತೆ ಫೋನು ಹಾಳು ಮೂಳು ಇಲ್ಲದ ಕಾಲ ನೋಡಿ, ಮನೆಯಲ್ಲಿ ಅವರ ಬಗ್ಗೆ ಆಗಾಗ ಮಾತಾಡುತ್ತಿದ್ದೆವಾಗಲೀ, ಎರಡು ವರ್ಷ ನಾವು ಹೋಗುವ ಅಥವಾ ಅವರು ಬರುವ ಸಂಧರ್ಭ ಸೃಷ್ಟಿಯಾಗಲಿಲ್ಲ. ಒಮ್ಮೆ ಶಾಲೆಯಿಂದ ಬಂದವಳಿಗೆ ಕಡ್ಡಿಯಂತಾಗಿ ಹುಬ್ಬುಹಲ್ಲುಗಳನ್ನು ಪ್ರದರ್ಶಿಸಿ ನಗುತ್ತಾ ಮೀರಕ್ಕ “ಬಾರೋ ರಾಜ. ಹೇಗಿದ್ದೀಯೋ ಕಂದ? ಎಷ್ಟು ವರ್ಷ ಆಯ್ತು ಕಣೋ ನಿನ್ನ ನೋಡಿ” ಎಂದು ಹತ್ತಿರ ಕರೆದು ಮುದ್ದು ಮಾಡಿದ ಮಮತೆ ತುಂಬಿದ ಕಣ್ಣಿಗೆ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ನಾನಿನ್ನೂ ಪುಟ್ಟ ಹುಡುಗಿ. ಓಡಿ ಮಡಿಲಿಗೆ ಸೇರಿದ ಕೂಡಲೇ ನಾನಂದ ಮೊದಲ ಮಾತು “ವೇಣು ಮಾವ ಎಲ್ಲಿ”?

ಅದಕ್ಕೆ ಉತ್ತರವನ್ನು ನಮ್ಮಮ್ಮ ಉದಾಸೀನದಿಂದ “ಅವನಿಗೆ ದೊಡ್ರೋಗ ಬಂದಿದೆ” ಹೇಳಿದಾಗ, ನನಗ್ಯಾಕೆಂದು ತಿಳಿಯಲಿಲ್ಲ. ನಂತರ ನಾನಲ್ಲಿರುವುದನ್ನು ಮರೆತವರಂತೆ ವೇಣು ಮಾವ ದಿನಾ ಬೆಳಗ್ಗೆ ಹೆಂಡ ಕುಡಿಯಲು ಶುರುಮಾಡಿ ರಂಪಾಟ, ಚೀರಾಟ, ಹೆಂಡತಿ ಮಕ್ಕಳನ್ನು ಹೊಡೆಯುವುದು, ಕೆಲಸಕ್ಕೆ ಹೋಗದೆ ಕಂಪನಿಯಿಂದ ಇವರನ್ನು ಹೊರಗಟ್ಟಿದ ಸುದ್ದಿಯನ್ನು ಹೇಳುತ್ತಲೇ ಇದ್ದರು. ಪ್ರಸ್ತುತ ಕ್ವಾಟ್ರಸ್ ಖಾಲಿ ಮಾಡಿ ಮೀರಕ್ಕನ ತಾಯಿ ಮನೆಯಲ್ಲಿ ಇರುವುದಾಗಿ ಹೇಳಿದರು. ಯಾರೇನು ಮಾಡಲಾಗುತ್ತದೆ? ಕೊನೇ ಪಕ್ಷ ಹೇಳಲಾದರೂ ಏನಿದೆ? ಮೀರಕ್ಕ ಹೋದಮೇಲೆ ಆಗಾಗ ಅವರ ವಿಷಯ ಅವರಿವರೆದುರು ಪ್ರಸ್ತಾಪವಾಗುತ್ತಲೇ ಇತ್ತು. ಸುಮಾರು ಐದಾರು ವರ್ಷದಲ್ಲಿ ಮೀರಕ್ಕ ಮೂರು ಸಲ ಮಕ್ಕಳನ್ನೂ ಕರೆತಂದಿದ್ದರು. ಆದರೆ ವೇಣು ಮಾವ ಮಾತ್ರ ಬಂದಿರಲೇ ಇಲ್ಲ.

ನನ್ನ ಮದುವೆಯಾಗಿ ಗಂಡನ ಮನೆಯಿಂದ ಅಮ್ಮನ ಮನೆಗೆ ಬಂದಿದ್ದ ಒಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಕಂಪೌಂಡಿನ ಹೊರಗಿನ ಗೋಡೆಗೊರಗಿ ಸಣ್ಣಗೆ ಮುದುರಿ ಕುಳಿತಿದ್ದ ಹರಿದ ಬಟ್ಟೆ ತೊಟ್ಟ ವೇಣು ಮಾವನನ್ನು ನಮ್ಮಪ್ಪ ಎಬ್ಬಿಸಿ ಒಳ ಕರೆತಂದರು. ನೋಡಿದ ನಮ್ಮಮ್ಮ ಬಾಯಿಗೆ ಬಂದಂತೆ ಉಗಿದು ಉಪ್ಪಿನಕಾಯಿ ಹಾಕಿ, ಊಟ ಕೊಟ್ಟು, ಮಲಗಲು ಚಾಪೆ ಕೊಟ್ಟರು. ಬೆಳಗ್ಗೆ ಎದ್ದೇಳುವ ಹೊತ್ತಿಗೆ ಹೊರಟು ಹೋಗಿರುತ್ತಾರೆ ಎಂಬ ನಮ್ಮಮ್ಮನ ಅಂದಾಜನ್ನು ಮೀರಿ, ಚಾಪೆಯ ಮೇಲೆ ಎದ್ದು ಕುಳಿತು, ನಗುನಗುತ್ತಾ ಮಾತನಾಡಿದರು. ನನ್ನನ್ನು ಕರೆದು ಚಾಪೆಯಲ್ಲಿ ಜಾಗ ಕೊಟ್ಟರು. ನಾನು ಬೆಳೆದಿದ್ದೆ. ಮದುವೆಯಾಗಿತ್ತು. ಮಿಗಿಲಾಗಿ ಆದರ್ಶದ ಚಿಲುಮೆಯಾಗಿದ್ದೆ. ಅವರು ಕೊಟ್ಟ ಜಾಗದಲ್ಲಿ ಕೂರಲಿಲ್ಲ ನಾನು. “ಯಾಕೋ ಮಗನೇ, ನಿನ್ನ ಮದ್ವೆಗೆ ಬರಲಿಲ್ಲ ಅಂತ ಸಿಟ್ಟು ಬಂದಿದ್ಯಾ?” ಎಂದು ನನ್ನ ಬಿಗುನಿಲುವಿಗೆ ಅವರೇ ಸಮಾಜಾಯಿಷಿ ಕೊಟ್ಟುಕೊಂಡರು.

ತಿಂಡಿ ಕೊಟ್ಟ ನಮ್ಮಮ್ಮನ ಪಾದವನ್ನು ಗಟ್ಟಿಯಾಗಿ ಹಿಡಿದು ಅಳುತ್ತಾ “ಅಕ್ಕಾ ನಾನು ಕೆಟ್ಟೋದೆ. ಜೀವನಾನೇ ಇಲ್ಲ ನನಗೆ. ಯಾಕೆ ಹೀಗಾಗಿದ್ದೀನೋ ಗೊತ್ತಿಲ್ಲ” ಎಂದು ಕಣ್ಣೀರಿಟ್ಟವರೆದುರು ನಾವೆಲ್ಲಾ ಪ್ರೇಕ್ಷಕರಾಗಿದ್ದೆವು. ನಮ್ಮಪ್ಪ “ಹೋಗ್ಲಿ ಬಿಡು ವೇಣು. ಹೇಗೂ ನಿನ್ನ ದೊಡ್ಡ ಮಗಳು ಗಾರ್ಮೆಂಟ್ ಕೆಲಸಕ್ಕೆ ಹೋಗಿ ದುಡೀತಿದ್ದಾಳೆ. ಇನ್ನು ಮೇಲಾದ್ರೂ ಮನೆಗೆ ಗಂಡಸಾಗಿ ನಡ್ಕೊ” ಎಂದವರ ಕೈ ಹಿಡಿದು “ಆಯ್ತು ಮಾವ, ಸ್ವಲ್ಪ ದುಡ್ಡು ಕೊಡಿ. ಡಾಕ್ಟರ್  ಔಷಧಿ ಬರೆದುಕೊಟ್ಟಿದ್ದಾರೆ. ತಗೋಬೇಕು” ಎಂದರು. ಮತ್ತೆ ತಾನೇ “ನೀವು ಹೋದ ಸಲ ಕೊಟ್ಟ ನೂರು ರೂಪಾಯಿಗೂ ಔಷಧ ತಗೊಂಡೆ” ಎಂದಾಗ ನಾವು ನಮ್ಮಪ್ಪನನ್ನು ನೋಡಿದೆವು.

ಈ ವಿವರಣೆಯನ್ನು ನಿರೀಕ್ಷಿಸದಿದ್ದ ನಮ್ಮಪ್ಪ “ಸರಿ ಬಿಡು, ಕಸ್ತೂರಿ ನೂರು ರೂಪಾಯಿ ಕೊಡು ಅವನಿಗೆ” ಎಂದು ನಮ್ಮಮ್ಮನಿಗೆ ಇನ್ನೂ ಹೇಳುತ್ತಲೇ ಇದ್ದರೆ, ಅದೆಲ್ಲಿತ್ತೋ ಆವೇಶ ನನಗೆ. “ಸ್ಲಿಪ್ ಕೊಡಿ ಮಾವ ನಾನೇ ತಂದು ಕೊಡ್ತೀನಿ” ಎನ್ನುತ್ತಾ ಹಣ ಕೊಡುವವರನ್ನೂ ತಡೆದೆ. “ಜೋಬಲ್ಲಿತ್ತು ಕಣೋ, ಎಲ್ಲೋ ಬಿದ್ದೋಗಿದೆ. ಮೆಡಿಕಲ್ ಸ್ಟೋರಿನವನು ಪರಿಚಯ. ಅವನಿಗೆ ನನ್ನ ಔಷಧ ಯಾವುದು ಅಂತ ಗೊತ್ತು. ದುಡ್ಡು ಕೊಡು. ನಾನು ಹೋಗಿ ತಗೊಳ್ತೀನಿ” ಅಂತ ಎಷ್ಟು ಸಮಜಾಯಿಷಿ ನೀಡಿದರೂ ನಾನು ಹಣ ಕೊಡಲಿಲ್ಲ. ನನ್ನ ಉದ್ದೇಶವೆಲ್ಲಾ ಇನ್ನೂ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರಲ್ಲ ಎನ್ನುವುದಾಗಿತ್ತು.

ಬಹುಶಃ ವಯಸ್ಸೋ, ಅನುಭವವೋ ಕೊರತೆಯಾಗಿರಬೇಕು ನನಗೆ. ವರ್ಷಗಟ್ಟಲೆ ಕೆಲಸವಿಲ್ಲದಿದ್ದರೂ ಹಣ ಹೊಂದಿಸಿ ಹೆಂಡ ಕುಡಿಯುತ್ತಿದ್ದವರಿಗೆ ನಮ್ಮಮ್ಮ ನೂರು ರೂಪಾಯಿ ಕೊಡದಿದ್ದರೆ ನಷ್ಟವೇನಾಗುತ್ತಿತ್ತು? ಕೊಟ್ಟಿದ್ದರೆ ತಾನೇ, ವರ್ಷಗಟ್ಟಲೆ ಕುಡಿದು ಕುಡಿದು ಕುಗ್ಗಿದ ದೇಹ, ನಾವು ಕೊಟ್ಟ ನೂರು ರೂಪಾಯಿಗೆ ಇನ್ನಷ್ಟು ಕುಡಿದಿದರೆ ಇನ್ನೆಷ್ಟು ಮಹಾ ಕೆಟ್ಟುಹೋಗುತ್ತಿತ್ತು? ನಮ್ಮಪ್ಪ ಹೇಳುತ್ತಲೇ ಇದ್ದರು “ಇದೊಂದು ಸಲ ಕೊಡೋಣ. ಮತ್ತೆ ಬಂದ್ರೆ ಕೊಡೋದು ಬೇಡ” ಎಂದು. ನಾನೊಪ್ಪಲಿಲ್ಲ. ವೇಣು ಮಾವ ನಿರಾಶೆಯಿಂದ ಹೊರಟುಹೋದರು. ಹೋಗಿ ಎರಡು ದಿನ ಕಳೆದಿರಬಹುದು ಅಷ್ಟೇ, “ವೇಣು ನೆನ್ನೆ ಸತ್ತೋದ” ಎಂದು ಬಂದ ಸುದ್ದಿಗೆ ಅಪ್ಪ ಅಮ್ಮ ಸಾವಿಗೆ ಹೋಗಿ ಬಂದರು.

ಅಮ್ಮ “ಹಾಳುಬಿದ್ದವ್ನು ಹೋಗ್ಲಿ ಬಿಡು. ಇದ್ದಿದ್ರೆ ಆ ಮನೆ ಇನ್ನಷ್ಟು ಹಾಳಾಗ್ತಿತ್ತು. ಆದ್ರೂ ಹೆಣ್ಣು ಮಕ್ಕಳಿಗೆ ಒಂದು ದಾರಿ ತೋರಿಸದೆ ಹೋಗಿಬಿಟ್ಟ ದರಿದ್ರದವನು” ಎಂದು ಪರಿಪರಿಯಾಗಿ ವೇಣು ಮಾವನ ಸಾವನ್ನು ಸಮಂಜಸ ಮಾಡಿಕೊಂಡರು. ಆದರೆ ನನಗೆ ಮಾತ್ರ ನಾಳೆ ಸಾಯುವ ಮನುಷ್ಯನಿಗೆ ಹಣ ಕೊಡದೇ ಕಳುಹಿಸಿದ ತಪಿತಸ್ಥ ಭಾವ ಕಾಡುತ್ತದೆ. ಹಣ ಕೊಡದೆ ಇದ್ದದ್ದೂ ನಷ್ಟವಲ್ಲ. ಕೊಟ್ಟಿದ್ದರೆ ನಷ್ಟವೂ ಆಗುತ್ತಿರಲಿಲ್ಲ.

****************************

ಶಾಂತಿವಾಸು

2 thoughts on “ವೇಣು ಮಾವ ಕ್ಷಮಿಸು

  1. ಕೆಲವೊಮ್ಮೆ ಹಾಗೇ ಹಾಗಾಗುವುದುಂಟು. ಮನಸ್ಸಿಗೆ ಹತ್ತಿರವಾಯ್ತು

Leave a Reply

Back To Top