ಅಅಂಕಣ ಬರಹ
ರಂಗ ರಂಗೋಲಿ
ರಂಗ ಜಂಗಮ
ಖಾದಿ ಅಂಗಿ, ಪಂಚೆ ತೊಟ್ಟ ಸಾಧಾರಣ ಎತ್ತರದ ಆಳು. ಮುಖದ ಪರಿಚಯಕ್ಕೆ ಹೊರಟು ಒಳಗೊಂದು ಮೂಡುವ ವ್ಯಕ್ತಿತ್ವದ ಛಾಯೆ ಮುಟ್ಟಲು ಹೋದರೆ ಮಸುಕುಗೊಂಡ ಕನ್ನಡಿಯ ರೀತಿಯಲ್ಲಿ ಮೂಡುವ ಮಬ್ಬುತನ ಬಿಂಬ. ವಾರೆಗೊಂಡ ಬಾಯಿ, ಅದಕ್ಕೆ ಆಧರಿಸಲು ಸಂಕುಚನಗೊಂಡ ಕಣ್ಣು, ಅದರೊಳಗೆ ಮುಂಡಿಯೂರಿ ಕೂತಂತ ತಣ್ಣಗಿನ ಬೆಳಕು, ಮೌನ ಮಾತಿಗೆ ಅನುಸಂಧಾನಗೊಂಡಿದೆ. ನಿಸ್ತೇಜಗೊಂಡ ಒಂದು ಕೈ. ಅದೀಗ ಅವರ ಸಂಪರ್ಕದಲ್ಲಿದ್ದೂ ಮುನಿಸಿಕೊಂಡು ಸಂಬಂಧ ಕಡಿದುಕೊಂಡಂತೆ. ಒಂದು ಕಾಲು ಜೊತೆಗಾರನ ಕುಸಿತಕ್ಕೆ ದೇಹ ಭಾರವನ್ನೆಲ್ಲ ತಾನೊಬ್ಬನೇ ಹೊರಲಾರೆ ಎಂದು ನರಳುತ್ತಿರುವಂತೆ.
ಕ್ಷಣಕಾಲ ದಿಟ್ಟಿಸಿದೆ. ಸುಮಾರು 60-65 ರ ಆಸುಪಾಸು. ಪಕ್ಕದಲ್ಲಿ ಕಡ್ಡಿದೇಹದ, ಗೌರವವರ್ಣದ, ಚುರುಕು ಕಂಗಳ, ಚಟುವಟಿಕೆಯ ಹೆಂಡತಿ. ಸಾಧಾರಣ ನನ್ನ ವಯಸ್ಸು ಅಥವಾ ಸ್ವಲ್ಪ ದೊಡ್ಡವ ಅನಿಸುವ ಮಗ. ಅವನಕ್ಕಿಂತ ಎರಡು ವರ್ಷ ಕಿರಿಯವಳಾದ ಮಗಳು.
ಅವರನ್ನು ನೋಡಿ ನಸುನಕ್ಕು,
” ಬನ್ನಿ ಬನ್ನಿ” ಎಂದೆ.
ನನ್ನ ಕೈಯಲ್ಲಿರುವ ಪೇಪರಿನಲ್ಲಿ ಸೀಟಿನ ಕ್ರಮಸಂಖ್ಯೆ ಇರುವ ಚಿತ್ರ. ಅವರ ಸೀಟಿನ ನಂಬರ್ ಹೇಳಿ ಸೀಟಿನ ಬಳಿ ನಿಂತೆ. ಹೆಂಡತಿ ಮಕ್ಕಳು ಅವರನ್ನು ಕುಳ್ಳಿರಿಸಿ ತಾವೂ ಕೂತರು. ನಾನು ಬಸ್ಸಿನ ಎದುರುಗಡೆ ಬಂದೆ. ಸರಸರ ಎಂದು ಬಸ್ಸಿನ ಸೀಟು ಸೀಟಿನ ಕಡೆ ಕಣ್ಣು ಹರಿಸಿ ಎಲ್ಲರೂ ಬಂದಿರುವುದನ್ನು ಖಚಿತಪಡಿಸಿ ಎದುರಿನ ಕ್ಯಾಬೀನ್ ಒಳಗೆ ಹೋಗಿ ನನ್ನನ್ನು ಆ ಪ್ರವಾಸಕ್ಕೆ ಮಾನಿಸಿಕವಾಗಿ ಸಿದ್ದಗೊಳಿಸುವಂತೆ ಎದುರುಗಡೆ ಹಾದಿ ನೋಡುತ್ತ ಮೌನವಾಗಿ ಕೂತೆ.
ನಾನೀಗ ವಿಸ್ತಾರವಾದ ರಂಗಸ್ಥಳ ಪ್ರವೇಶಿಸಿದ್ದೆ. ಒಂದು ನಿಂತಲ್ಲೇ ನಿಂತಿದ್ದ ಅಂಕದ ತೆರೆ ಬಿದ್ದಿತ್ತು. ಹೊಸ ಹೊಸ ಬಗೆಯ ಬಣ್ಣಗಳು ರಂಗಾಗಿ ಗಾಢವಾಗುತ್ತಿದ್ದ ಬದುಕಿನ ಸಂಕ್ರಮಣದ ಹೊಸ್ತಿಲು ದಾಟಿ ಬರಲು ಒಳಗಿನ ನಿರ್ದೇಶಕನೊಬ್ಬ ಅಣತಿ ಕೊಡುತ್ತಿದ್ದ.
“ಪ್ರೇಕ್ಷಕಳು ನೀನು. ಪಾತ್ರಗಳೊಂದಿಗೆ ಪಯಣ ಆರಂಭಿಸು. ಒಳ ಕಣ್ಣು ತೆರೆದು ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನವನವೀನ ಪಾತ್ರಗಳು ಅಭಿನಯ. ಅದರೊಳಗೆ ಗೊತ್ತಿಲ್ಲದೆ, ಅಯಾಚಿತವಾಗಿ ಸೇರಿಕೊಳ್ಳುವುದು. ಕಿವಿ ತೆರೆದು ಕೇಳಿಸಿಕೊಳ್ಳಬೇಕು. ಬಗೆಬಗೆಯ ಸ್ವರರಸಸಾರಗಳನ್ನು, ನಾದಪ್ರಪಂಚಕ್ಕೆ ಜೋಡಿಸಿಕೊಳ್ಳಬೇಕು. ಶಿಲೆಯಾದರೆ ಶಿಲೆ, ಮಣ್ಣಾದರೆ ಅದು, ಸೂಸುವ ಪರಿಮಳವನ್ನು ಅಘ್ರಾಣಿಸಬೇಕು. ಭಾವಗಳನ್ನು, ಉಸಿರಾಗಿಸಬೇಕು. ಸ್ಪರ್ಶಿಸಬೇಕು ನೋವುಗಳನ್ನು, ಸಂಭ್ರಮವನ್ನು,ಪುಳಕಗಳನ್ನು ಒಂದಾಗಿಸಬೇಕು. ಆಡಬೇಕು ಪಾತ್ರಗಳ ಮಾತುಗಳನ್ನು. ಕಡಲಿನತ್ತ ಅಲೆಗಳು ಒಂದರೊಳಗೊಂದಾಗಿ ಮತ್ತೆ ತೆರೆದು ಒಂದೊಂದಾಗಿ ತೇಲಿ ಆವರಿಸಿಕೊಂಡಂತೆ.
ಪಾತ್ರವೂ ಆಗುತ್ತ, ಪ್ರೇಕ್ಷಕಳೂ ಆಗುತ್ತ ಕರ್ಮಪ್ರಜ್ಞೆ ಮತ್ತು ಸಾಕ್ಷೀಪ್ರಜ್ಞೆಗಳು ಮನಸ್ಸೊಳಗೆ ಮೂಡಿ ಸಂವಾದಿಸುತ್ತ, ಸಂಚಾರೀ ಭಾವವಾಗುವ ಫಲಶ್ರುತಿಯ ಅನುಭೂತಿಯ ಹೆಸರು “ಪ್ರಯಾಣದ ಮೇಲ್ವಿಚಾರಕಿ” ಎಂಬ ಹುದ್ದೆ. ಈ ಹುದ್ದೆಯ ಕಾರ್ಯಾಲಯ, ಆ ಪ್ರವಾಸೀ ಬಸ್ಸಿನ ಕ್ಯಾಬಿನ್!.
ಅದು ತಮಿಳುನಾಡು, ಕರ್ನಾಟಕ, ಕೇರಳ ಒಳಗೊಂಡ ಎಂಟು ದಿನಗಳ ದಕ್ಷಿಣ ಭಾರತ ಪ್ರವಾಸ. ಪದವಿ ವ್ಯಾಸಂಗ ಆಗಷ್ಟೇ ಮುಗಿದಿತ್ತು. ಉದ್ಯೋಗದ ಅಗತ್ಯವೂ ಇತ್ತು. ಪ್ರವಾಸಿಸಂಸ್ಥೆಯಲ್ಲಿ ” ಟೂರ್ ಮ್ಯಾನೇಜರ್” ಎಂಬ ಹೆಸರಿನಲ್ಲಿ ಪ್ರವಾಸಿಗರೊಂದಿಗೆ, ವಿಧವಿಧದ ಮನಸ್ಸುಗಳೊಂದಿಗೆ, ಚಂದ ಚಂದದ ಛಂದಸ್ಸುಗಳೊಂದಿಗೆ ತಿರುಗಾಟ.
ಹಲವು ವೇಷ ಭೂಷಣ, ವಿಧವಿಧ ವಿನ್ಯಾಸದ ರಂಗಸ್ಥಳ. ಈ ರಂಗಸ್ಥಳ
ಸ್ಥಾವರವಲ್ಲ, ಇದು ಜಂಗಮರಂಗ!.
ಹತ್ತುಹಲವು ಕಥೆಗಳ ಅಭಿನಯ.
ಅಂತಹ ಒಂದು ಪಯಣದ ಪ್ರಯಾಣಿಗರ ಪಟ್ಟಿಯಲ್ಲಿ ಸೇರಿಕೊಂಡ ಕುಟುಂಬವಿದು. ನನಗೋ ಹೊಸತಿನ ಉತ್ಸಾಹ, ಕುತೂಹಲ, ಅನ್ವೇಷಣೆ. ಮೊದಲ ದಿನ ಮೈಸೂರಿನಲ್ಲಿ ಅರಮನೆ, ಮೃಗಾಲಯ, ಬೃಂದಾವನ ತಿರುಗಾಡಿ, ನೋಡಿ ದಿನ ಮುಗಿದಿತ್ತು.
ಎರಡನೆಯ ದಿನ ಊಟಿಯಲ್ಲಿ ದೋಣಿವಿಹಾರ,ಬೊಟಾನಿಕಲ್ ಗಾರ್ಡನ್ ನೋಡಿ ಪಳನಿಗೆ ತಲುಪಿದ್ದೆವು. ಬೆಳಿಗ್ಗೆ ಬೇಗ ದೇವಾಲಯ ದರ್ಶನ. 621 ಮೆಟ್ಟಲುಗಳನ್ನು ಹತ್ತಬೇಕು. ಅಥವಾ ವಿದ್ಯುತ್ ಚಾಲಿತ ಲಿಫ್ಟ್ ನಂತಹ ಯಂತ್ರ ನಮ್ಮನ್ನು ಆ ಹೆಬ್ವಂಡೆಯ ತಲೆಯ ಬಳಿ ಹೊತ್ತೊಯ್ಯುವುದು.
ಪ್ರವಾಸಿಗರನ್ನು ದೇವಾಲಯಕ್ಕೆ ಕರೆದೊಯ್ದಿದ್ದೆ. ಅಷ್ಟರಲ್ಲಿ ಈ ಕುಟುಂಬದ ಮಕ್ಕಳಿಗೆ ಬಸ್ಸಿನಲ್ಲಿ ಸರಿ ವಯಸ್ಸಿನ ಕೆಲವರು ಸ್ನೇಹಿತರಾಗಿದ್ದರು. ಹಾಸ್ಯ, ನಗು, ಪ್ರವಾಸದ ಉಲ್ಲಾಸ ಅವರೊಳಗೆ ತುಂಬಿಕೊಂಡಿತ್ತು. ವಯಸ್ಸಾದ ಗಂಡ – ಹೆಂಡತಿ ಕೊನೆಯವರಾಗಿ ಉಳಿಯುವ ಅನಿವಾರ್ಯತೆ ಸಹಜವಾಗಿತ್ತು. ಪಾಪ, ಪ್ರವಾಸಕ್ಕೆ ಬಂದರೂ ಕುಟುಂಬದ ತೊಂದರೆಗಳು. ದೇವರ ಬಳಿಯೂ ಎರಡು ಕ್ಷಣ ಧ್ಯಾನಿಸುವಂತಿಲ್ಲ ಅನಿಸುತ್ತಿತ್ತು. ನನ್ನದು ಕೇವಲ ಜವಾಬ್ದಾರಿಯ ನಿರ್ವಹಣೆ.
ನನಗಿದು ಪ್ರವಾಸವಲ್ಲ ಎಂಬ ಮನೋಭಾವನೆ ಇದ್ದುದರಿಂದ ನನ್ನ ಕೆಲಸ ಮುಗಿದ ತಕ್ಷಣ ಅವರ ಬಳಿ ಮೊದಲ ದಿನದಿಂದಲೇ ಓಡುತ್ತಿದ್ದೆ. ಆ ಹಿರಿಯರನ್ನು ಕೈ ಹಿಡಿದು ನಡೆಸುವುದು, ಪ್ರದಕ್ಷಿಣೆ ಬರಲು ಸಹಾಯ ಮಾಡುವುದು, ಬಸ್ಸಿನ ಬಳಿ ಕರೆತಂದು ಹತ್ತಿಸುವುದು, ಊಟದ ಸಮಯ ಊಟ ಅವರ ರೂಮಿಗೆ ತೆಗೆದುಕೊಂಡು ಹೋಗಿ ಕೊಡುವುದು, ಕೈ ತೊಳೆಯಲು ಸಹಾಯ, ಮೊದಲಾದ ಚಟುವಟಿಕೆಗಳು ನನ್ನ ಈ ಪ್ರವಾಸದ ಎರಡು ದಿನಗಳ ದಿನಚರಿಯ ಭಾಗವೇ ಆಗಿತ್ತು.
ಪಳನಿ ಸುಬ್ರಮಣ್ಯನ ದರ್ಶನ ಮುಗಿದಿತ್ತು. ಊಟಕ್ಕಾಗಿ ನಮ್ಮ ವಸತಿಗೃಹಕ್ಕೆ ಬಂದಿದ್ದೆವು. ಪ್ರವಾಸಿಗರೆಲ್ಲ ವಿಶಾಲವಾದ ಊಟದ ಹಾಲ್ ನಲ್ಲಿ ಕೂತಿದ್ದರು. ಆ ಕುಟುಂಬದ ಮಕ್ಕಳೂ ತಮ್ಮ ಜೊತೆಗಾರರೊಂದಿಗೆ ಹರಟೆ, ನಗುವಿನಲ್ಲಿ ತೊಡಗಿಕೊಂಡಿದ್ದಾರೆ. ಈ ವಯಸ್ಕ ದಂಪತಿಗಳು ಕಾಣಲಿಲ್ಲ. ಬರುವುದು ಕಷ್ಟ. ಊಟ ಅಲ್ಲಿಗೆ ತೆಗೆದುಕೊಂಡು ಹೋಗುವೆ ಎಂದರೆ ಬಹಳ ಜನ ಊಟಕ್ಕೆ ಕಾಯುತ್ತಿದ್ದು ನನ್ನ ವಿನಂತಿ ಪುರಸ್ಕಾರಗೊಳ್ಳಲಿಲ್ಲ. ಅಷ್ಟರಲ್ಲಿ ದಂಪತಿಗಳು ನಿಧಾನವಾಗಿ ನಡೆದು ಬಂದರು. ಹೆಂಡತಿ ನಡೆಸುತ್ತಿದ್ದರು. ನಾನು ಓಡಿಹೋಗಿ ಒಂದು ಕುರ್ಚಿ ಎಳೆದು ಅವರು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟೆ. ಥಟ್ಟನೆ ಆ ಅಮ್ಮ
” ನಿನ್ನ ಅಗತ್ಯವಿಲ್ಲ” ಎಂದರು.
” ಇಷ್ಟು ಹೊತ್ತಾಯಿತು. ಅವರಿಗೆ ಊಟ ಕೊಡುವ ಅಗತ್ಯವೂ ಗೊತ್ತಾಗದೆ ಹೋಯಿತಾ. ನೋಡು ನಾನೇ ಕರೆತರಬೇಕಾಯಿತು.”
ನೋವು, ಅಸಹಾಯಕತೆಯೋ, ಅಸಹನೆಯೋ, ಅವರ ಸ್ವರ ಅಗತ್ಯಕ್ಕಿಂತ ಬಹಳ ದೊಡ್ಡದಾಗಿತ್ತು. ನಮ್ಮ ಬಸ್ಸಿನ ಪ್ರಯಾಣಿಕರಲ್ಲದೆ ಬೇರೆಯವರೂ ಇದ್ದರು. ತತ್ತರಿಸಿ ಹೋದಂತೆ, ಸ್ತಬ್ದಗೊಂಡೆ. ಕೆಲ ಘಳಿಗೆ ಮನಸ್ಸು ಬುದ್ದಿ ಮುಷ್ಕರಹೂಡಿದಂತೆ. ನಿಧಾನವಾಗಿ ಚೇತರಿಸಿ
” ಕ್ಷಮಿಸಿ” ಎಂದು ನಡೆದೆ.
ಹೋಟೇಲಿನವರ ಬಳಿ ಕೇಳಿ ಬಟ್ಟಲಿನಲ್ಲಿ ಊಟ ತಂದು ಕೊಟ್ಟೆ. ಆ ತಾಯಿ ಮತ್ತೂ ಸಿಡಿಮಿಡಿ ಹೊತ್ತಮುಖದಿಂದಲೇ ಇದ್ದರು. ನನ್ನನ್ನೇ ನೋಡುವ ಹತ್ತು ಹಲವು ಮುಖಗಳು. ಅದರಲ್ಲಿ ಅವರ ಮಕ್ಕಳೂ ಇದ್ದರು. ಒಂದು ಕುರ್ಚಿಯನ್ನು ಎಳೆದು ಮೂಲೆಯಲ್ಲಿ ಕೂತೆ. ರಂಗದಲ್ಲಿ ಪಾತ್ರಗಳ ಮಾತಿನಾಚೆ ಕೂರುವ ಮೌನದಂತೆ.
ನನ್ನ ಎದುರು ಒಬ್ಬ ವ್ಯಕ್ತಿ ಬಂದು ಕೂತದ್ದು ಅನುಭವಕ್ಕೆ ಬಂತು.
” ನೊಂದಿರಾ”
ಎಂಬ ಸಾಂತ್ವನದ ಮಾತು ಹಿಂಬಾಲಿಸಿತು.
ತಲೆ ಎತ್ತಿದೆ. ಏನೂ..ಏನೂ ಅನಿಸುತ್ತಲೇ ಇರಲಿಲ್ಲ. ಭಯವಾಯಿತು. ಈ ರೀತಿಯ ಸಾಂತ್ವನದ ನುಡಿಗೆ ಅಡಗಿಕೂತ ದುಃಖದ ಭಾವ ವೇದಿಕೆ ಹತ್ತಿ ಬಿಟ್ಟರೇ..? ಇಲ್ಲ ಅನ್ನು ವಂತೆ ತಲೆಯಾಡಿಸಿದೆ.
” ಒಂದು ಮಾತು. ನೀವು ಎರಡು ದಿನ ಅವರ ಸೇವೆಮಾಡಿದಿರಿ. ಆದರೆ ನೀವು ಯಾರ ಸೇವಕಿಯಲ್ಲ. ನಿಮ್ಮದು ಸೇವೆ. ಅದು ನಿಮಗೂ,ನಮಗೂ ತಿಳಿದಿರಬೇಕು. ತಿಳಿಯದಿದ್ದಾಗ ಅದರ ಅರಿವು ಮೂಡಿಸುವ ಜವಾಬ್ದಾರಿಯೂ ನಿಮ್ಮದಾಗುತ್ತದೆ.”
ಹೀಗೆ ಹೇಳಿ, ಆ ಪಿತೃರೂಪೀ ಪ್ರಜ್ಞೆಯ ಒಡೆಯ ಎದ್ದು ಹೋದರು.
ನೋಡಿದೆ. ಕೆಲವು ನಿಮಿಷದ ಹಿಂದಿನ ವಿಷಾದದ ಛಾಯೆ ನನ್ನನ್ನು ತೊರೆದು ಓಡಿದಂತೆ ಹಗುರವಾಗಿದ್ದೆ.
ಅವರ ಮಗ ಜೋರಾಗಿ ನಗುತ್ತಿದ್ದ. ಮಗಳು ಗೆಳತಿಯರ ಜೊತೆಯಲ್ಲಿ ಅದೇನೋ ಚರ್ಚೆ. ಹೆಂಡತಿ ಇದೀಗ ತುಸು ಆರಾಮದಲ್ಲಿ ತನ್ನ ಪಾಡಿಗೆ ಉಣ್ಣುತ್ತಿದ್ದಾರೆ.
ಎದ್ದು ಆ ಹುಡುಗನ ಬಳಿ ನಡೆದೆ.
“ಬನ್ನಿ”
ತಾಯಿಯ ಬಳಿ ಕರೆತಂದೆ.
” ಪ್ರವಾಸ ಎಂಬುದು ದಿನನಿತ್ಯದ ಏಕತಾನತೆ ಕಳೆಯಲು, ಮತ್ತೆ ಒಂದಷ್ಟು ಉತ್ಸಾಹ ತುಂಬಿಕೊಳ್ಳಲು ಸಹಾಯವಾಗುತ್ತದೆ. ಅದರ ಜೊತೆಯೇ ಪ್ರತಿಯೊಬ್ಬರೂ ಅಗತ್ಯದ ಜವಾಬ್ದಾರಿಗಳನ್ನು ನಿಭಾಯಿಸುವುದೂ ಅಗತ್ಯ. ನೀವು ನನಗಿಂತ ಸ್ವಲ್ಪ ದೊಡ್ಡವರೋ, ನನ್ನ ವಯಸ್ಸಿನವರೋ ಆಗಿರುವ ಗಂಡು ಹುಡುಗ. ನಿಮ್ಮ ತಂಗಿಗೂ ನೀವು ಹೇಳಬಹುದಿತ್ತು. ನಾನು ಎರಡು ದಿನ ಏನು ಮಾಡಿರುವೆನೋ ಅದು ನಾನು ಮಾಡಬೇಕಾಗಿರುವ ಕೆಲಸದ ಪಟ್ಟಿಯಲ್ಲಿ ಬರುವ ವಿಷಯಗಳಲ್ಲ. ಅದು ನನ್ನ ಮನಸ್ಸಿನ ಪಟ್ಟಿಯಲ್ಲಿ ಸೇರಿಕೊಂಡ ಮಾನವೀಯತೆ.. ಹಾಂ!. ಏಳಿ, ಕೈ ತೊಳೆಯಿರಿ. ನಾನು ಅಪ್ಪಾಜಿಯವರನ್ನು ರೂಮಿನ ತನಕ ಬಿಟ್ಟು ಬರುತ್ತೇನೆ “
ನನ್ನ ಮಾತುಗಳನ್ನು ಕೇಳಿ
ಆ ಅಮ್ಮ ಕಣ್ಣು ಬಾಯಿ ತೆರೆದು ನೋಡುತ್ತಲೇ ಇದ್ದರು. ಅದೆಷ್ಟು ಹೇಳಲಾಗದ ಮಾತುಗಳು. ನಾನು ಹಿರಿಯರ ಕೈ ಹಿಡಿದು ಏಳಲು ಸಹಾಯ ಮಾಡುತ್ತಿದ್ದೆ.
ಥಟ್ಟನೆ ಮಗ ಎದುರು ಬಂದ.
” ಬಿಡಿ. ಅಪ್ಪನನ್ನು ನಾನು ರೂಮಿಗೆ ಬಿಡುತ್ತೇನೆ. ನನಗೆ ಗೊತ್ತಾಗಲಿಲ್ಲ. ನಿಮ್ಮನ್ನು ನೋಯಿಸಿದಕ್ಕಾಗಿ ಕ್ಷಮೆ ಇರಲಿ.”
ಆ ತಾಯಿಯ ಕಣ್ಣಿನಿಂದ ನೀರು ಸುರಿಯುತ್ತಲೇ ಇತ್ತು. ಅವರು ಬಾಯಲ್ಲಿ ಏನೂ ಆಡಲಿಲ್ಲ.
ಈಗ ಅನಿಸುತ್ತದೆ. ನವರಸಗಳನ್ನು ರಂಗದಲ್ಲಿ ಅನುಭವಿಸಿ ಎದುರಿನಲ್ಲಿ ಕೂತು ನೋಡುವ ಮನಸ್ಸುಗಳಿಗೆ ವರ್ಗಾಯಿಸಬೇಕಾದರೆ, ಮೊದಲು ಅದಕ್ಕಿಂತ ಹಿರಿದಾದ ರಂದಲ್ಲಿ ನಾವೂ ಪಾತ್ರವಾಗುವ ಅದ್ಬುತಕ್ಕೆ ತೆರೆದುಕೊಳ್ಳುತ್ತ, ಭಾವಗಳನ್ನು ಆರ್ತಿಯಿಂದ ಹೃದಯದೊಳಗೆ ಭರಿಸಬೇಕು. ಆಗ ರಂಗಭೂಮಿಯಲ್ಲಿ ಭಾವನೆಗಳ ಜೊತೆಗಿನ ಆಟ ಸುಲಲಿತವಾದೀತು.
ಮುಂದಿನ ನಾಲ್ಕೈದು ವರ್ಷಗಳಲ್ಲಿ, ಹತ್ತು ಹಲವು ಪ್ರವಾಸಗಳು ನನಗೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ವ್ಯಾಸಂಗಕ್ಕಿಂತಲೂ ಮಿಗಿಲಾಗಿ ಪಾಠಮಾಡಿದವು. ಜಂಗಮರಂಗ ತರಬೇತಿಯಲ್ಲಿ, ಸಾವಿರಾರು ಪಾತ್ರಗಳು ನನ್ನ ಸುತ್ತ ತೆರೆದವು, ಬೆಳೆದವು, ತೆರೆಮರೆಗೆ ಸರಿದವು. ನಾನೂ ಪಾತ್ರಗಳೊಂದಿಗೆ ಪಾತ್ರವಾಗಿ, ಅನುಭೂತಿಯ ಗರ್ಭಪಾತ್ರೆಯಾಗಿ, ರಂಗದ ಕೂಸಿಗೆ ಅಮ್ಮನಾಗುವತ್ತ ಒಂದೊಂದೇ ಹೆಜ್ಜೆ ಇಡುತ್ತಿದ್ದೆ.
**********************************************
ಪೂರ್ಣಿಮಾ ಸುರೇಶ್
ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ಅನುಭವಕ್ಕಿಂತ ಮಿಗಿಲಾದ ಪಾಠವುಂಟೇ,? ಎದೆಯಾಳಕ್ಕಿಳಿದ ಬರೆಹ …
ಸುನೀ,ಬೊಗಸೆ ಪ್ರೀತಿ
ಬದುಕಿನ ಅನುಭವಗಳನ್ನು ರಂಗಕ್ಕೆ ಹೋಲಿಸಿ ಬರೆಯುವ ನಿನ್ನ ಬರಹಗಳು ಮನ ಮುಟ್ಟು ವಂತದ್ದು. ಜೀವನವೇ ಒಂದು ನಾಟಕ ಶಾಲೆ ಅನ್ನುವಂತದ್ದು ನಿನ್ನ ಬರಹಗಳಲ್ಲಿ ಪ್ರತಿ ಬಿಂಬಿತ ಗೊಂಡಿದೆ.ಅಭಿನಂದನೆ ಒಳ್ಳೆಯ ಬರಹಕ್ಕಾಗಿ
ಸ್ಮಿತಾ..ನಿನಗೆ ನಿನ್ನ ಸ್ನೇಹ, ಪ್ರೀ ತಿಗೆ ನನ್ನ ಅ ಕ್ಕರೆ
ಎಂತಹಾ ಸುಂದರ ಬರಹ….ಮನದಲ್ಲಿನ್ನೂ ಇದೆ…
ನಿಮ್ಮ ಮಾತು ಇನ್ನೂ ಬರೆಯಬೇಕು. ಬರೆಯಬಹಯದು ಎಂಬ ವಿಶ್ವಾಸ ಹೆಚ್ಚಿಸಿದೆ. ವಂದನೆಗಳು
ಒಳ್ಳೆಯ ಹದವರಿತ ಬರಹ
ಧನ್ಯವಾದಗಳು. ಮುಂದೆಯೂ ಅನಿಸಿಕೆ ತಿಳಿಸಿ
ಎಂಥ ಸೊಗಸಾದ ಬರಹ! ಈ ಬದುಕಿನ ರಂಗನಾಟಕದ ಒಂದೊಂದು ಅನುಭವವನ್ನು ಒಂದು ಚೆಂದದ ಚಿತ್ರದಂತೆ ಕಟ್ಟಿ ಕೊಡುತ್ತಿದ್ದೀರಿ. ಅಭಿನಂದನೆಗಳು ಪೂರ್ಣಿಮಾ.
ವೀಣಾ, ನಿಮ್ಮ ಪ್ರೋತ್ಸಾಹಕ್ಕೆ ಋಣಿ
ವೀಣಾ, ಅಕ್ಕರೆ
ವೀಣಾ ಅಕ್ಕರೆ
ಈ ರೀತಿಯ ಸಾಂತ್ವನದ ನುಡಿಗೆ ಅಡಗಿಕೂತ ದುಃಖದ ಭಾವ ವೇದಿಕೆ ಹತ್ತಿ ಬಿಟ್ಟರೇ…?
ಎಷ್ಟೋ ಸಲ ಹೀಗಾಗುವುದುಂಟು.ಘಟನೆ ನಡೆಯುವಾಗ ಬಲವಂತವಾಗಿ ಆದಷ್ಟು ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಂಡರೂ ಆತ್ಮೀಯರ ಸಾಂತ್ವನದ ಮಾತುಗಳಿಗೆ ಭಾವನೆಗಳ ಕಟ್ಟೆಯೊಡೆಯುತ್ತದೆ.ಈ ಸಾಲುಗಳು ಸಶಕ್ತವಾಗಿ ಅಂತಹ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದೆ.
ಸಣ್ಣ ಸಣ್ಣ ಸಂಗತಿಗಳಲ್ಲಿ ಅಡಗಿರುವ ಸೂಕ್ಷ್ಮ,ಆರ್ದ್ರ ಭಾವಗಳನ್ನು ಕಟ್ಟಿಕೊಡುವ ನಿಮ್ಮ ಈ ಲೇಖನಮಾಲೆ ಬಹಳ ಚೆನ್ನಾಗಿ ಮೂಡಿಬರುತ್ತಿದೆ.