ದಾರಾವಾಹಿ-
ಅದ್ಯಾಯ-03
ಮುತ್ತಯ್ಯ ಕೊಡುವ ಅರ್ಧ ಸಂಬಳ ಗೋಪಾಲನ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅವನು ತನ್ನ ಗುಡಿಸಲನ್ನು ಬಾಡಿಗೆದಾರರಿಗೆ ಪುಕ್ಕಟೆ ನೀಡಿದ್ದೇನೆಂದು ಕಣ್ಣುಕಟ್ಟಿಗೆ ಹೇಳುತ್ತಿದ್ದ. ಆದರೆ ಅದರ ಬಾಡಿಗೆಯನ್ನು ಗೋಪಾಲ ದಂಪತಿಯ ದುಡಿಮೆಯಿಂದಲೇ ಸೂಕ್ಷ್ಮವಾಗಿ ವಸೂಲಿ ಮಾಡುತ್ತಿದ್ದ. ಈ ಸಂಗತಿಯನ್ನು ಅರಿತಿದ್ದ ಗೋಪಾಲನೂ ಅವನ ತೋಟದ ಕೆಲಸಕ್ಕೆ ನಿತ್ಯ ಹೋಗುವುದನ್ನು ನಿಲ್ಲಿಸಿಬಿಟ್ಟ. ವಾರದಲ್ಲಿ ಎರಡು, ಮೂರು ದಿನ ಮಾತ್ರ ದುಡಿಯುತ್ತ ಉಳಿದ ದಿನಗಳಲ್ಲಿ ಹೊರಗಡೆ ಹೆಚ್ಚಿಗೆ ಸಂಬಳಕ್ಕೆ ಹೋಗುತ್ತಿದ್ದ. ಆದರೆ ಅದು ಮುತ್ತಯ್ಯನಿಗೆ ಹಿಡಿಸುತ್ತಿರಲಿಲ್ಲ. ಅವನು ಆಗಾಗಗೋಪಾಲನ ಗುಡಿಸಲಿನೆದುರು ಬಂದು,‘ಏನಲೇ ಗೋಪಾಲ, ನೀನು ವಾರ ಪೂರ್ತಿ ಕೆಲಸಕ್ಕೆ ಯಾಕೆ ಬರುವುದಿಲ್ಲ ಮಾರಾಯಾ, ಹೊರಗೆ ದುಡಿಯುವುದಕ್ಕಾ ನಿನಗೆ ಮನೆ ಕೊಟ್ಟಿರುವುದು…?’ ಎಂದು ಗದರಿಸುತ್ತಿದ್ದ. ಆಗೆಲ್ಲ ಗೋಪಾಲನೂ,‘ಅಯ್ಯೋ ಹಾಗೆಲ್ಲ ಭಾವಿಸಬೇಡಿ ಧಣಿ, ನಿಮ್ಮಲ್ಲಿಯೇ ದುಡಿಯಲಿಕ್ಕೆ ಬಂದವರಲ್ಲವ ನಾವು. ಆದರೂ ಕೆಲವೊಮ್ಮೆ ನಿಮ್ಮ ತೋಟದಲ್ಲೂ ಕೆಲಸ ಕಮ್ಮಿ ಇರುತ್ತದಲ್ಲ ಆವಾಗ ಸಂಜೀವ ಶೆಟ್ಟರೋ ಡ್ಯಾನಿ ಪರ್ಬುಗಳೋ ತಮ್ಮ ಹೊಲ, ತೋಟಗಳ ಅಗತ್ಯದ ಕೆಲಸಕ್ಕೆ ಕರೆಯುತ್ತಾರೆ. ಹೋಗಿ ಮಾಡಿಕೊಟ್ಟು ಬರುತ್ತೇನಷ್ಟೆ. ಅವರೂ ನನ್ನ ಕಷ್ಟದ ಕಾಲದಲ್ಲಿ ಸಹಾಯ ಮಾಡುತ್ತಾರೆ. ಇಲ್ಲಿ ನಾನಿಲ್ಲದಿದ್ದರೂ ರಾಧಾ ಬರುತ್ತಾಳಲ್ಲ ಧಣಿ…!’ ಎಂದು ಅವನನ್ನು ಪುಸಲಾಯಿಸುತ್ತಿದ್ದ. ರಾಧಾಳ ಹೆಸರೆತ್ತುತ್ತಲೇ ಮುತ್ತಯ್ಯ ಮೃದುವಾಗುತ್ತಿದ್ದ. ಅವಳ ಸೌಂದರ್ಯಕ್ಕೆ ಅವನು ಯಾವತ್ತೋ ಮನ ಸೋತಿದ್ದ. ಎರಡು ಮಕ್ಕಳ ತಾಯಿಯಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಅವಳ ಮೋಹಕ ಚೆಲುವಿನ್ನೂ ಮಾಸಿರಲಿಲ್ಲ. ಹಾಲು ಬೆಳದಿಂಗಳಿನಂಥ ಅವಳ ರೂಪವು ಅವನನ್ನು ಹುಚ್ಚೆಬ್ಬಿಸುತ್ತಿತ್ತು.
ಹಾಗಾಗಿಗೋಪಾಲ ಬೆಳಿಗ್ಗೆ ಮನೆಯಿಂದ ಹೊರಡುವ ತನಕ ಅವನ ಸುಳಿವಿರುತ್ತಿರಲಿಲ್ಲ. ಅವನು ಸೈಕಲ್ ಹತ್ತಿ ‘ಹೋಗಿ ಬರುತ್ತೇನೆ ಮಾರಾಯ್ತೀ!’ ಎಂದು ಹೆಂಡತಿ ಮಕ್ಕಳಿಗೆ ಬೆಲ್ ಹೊಡೆದ ಸೂಚನೆ ದೊರೆತ ಕೂಡಲೇ ಮುತ್ತಯ್ಯನ ಸವಾರಿಯು ಗೋಪಾಲನ ಗುಡಿಸಲ ಮುಂದೆ ಪ್ರಕಟವಾಗುತ್ತಿತ್ತು. ಇವತ್ತೂ ಅದೇ ಚಪಲದಿಂದ ಬಂದಿದ್ದ. ಆದರೆ ಅಲ್ಲಿನ ದೃಶ್ಯವೊಂದು ಅವನ ಮನಸ್ಸನ್ನು ಕೆಡಿಸಿಬಿಟ್ಟಿತು. ‘ರಾಧಾ, ಹೇ, ರಾಧಾ ಎಲ್ಲಿದ್ದಿ ಮಾರಾಯ್ತೀ…! ಸ್ವಲ್ಪ ಹೊರಗೆ ಬಾ! ಇಲ್ಲಿ ನೋಡಿಲ್ಲಿ ನಿನ್ನ ಮಕ್ಕಳ ಅವಸ್ಥೆ! ಥೂ! ಹೊರಗೆಲ್ಲಾ ಹೇಸಿಗೆ ಮಾಡಿಟ್ಟಿದ್ದಾರೆ. ಏನಿದು ತೋಟದೊಳಗೆಲ್ಲಾ, ಭಾಷೆ ಬೇಡವಾ ನಿಮಗೆ! ಅವುಗಳನ್ನು ಕಕ್ಕಸಿನಲ್ಲಿ ಕೂರಿಸಲೇನು ದಾಡಿ ನಿಂಗೆ!’ ಎಂದು ಜೋರಾಗಿ ಸಿಡುಕಿದ. ರಾಧಾ ಅನ್ನಕ್ಕೆ ನೀರಿಡುತ್ತಿದ್ದವಳು ಮುತ್ತಯ್ಯನ ಒರಟು ಧ್ವನಿ ಕೇಳಿ ಆತಂಕದಿಂದ ಹೊರಗೆ ಬಂದಳು. ಮಕ್ಕಳಿಬ್ಬರೂ ತೋಟದ ಮೂಲೆಯಲ್ಲಿ ಕುಳಿತು ಪಂಚಾತಿಕೆ ಹೊಡೆಯುತ್ತ ಸಂಡಾಸು ಮಾಡುತ್ತಿದ್ದರು. ಆದರೆ ಮುತ್ತಯ್ಯನ ಕೆಕ್ಕರು ದೃಷ್ಟಿಗೆ ಹೆದರಿ ರಪ್ಪನೆದ್ದು ಅಪರಾಧಿಗಳಂತೆ ನಿಂತಿದ್ದರು. ರಾಧಾಳಿಗೆ ನಾಚಿಕೆಯಾಯಿತು. ಅವರತ್ತ ಹೋಗಿ ಕಿವಿ ಹಿಂಡಿ ಎಳೆದೊಯ್ದು ಒಳಗೆ ಬಿಟ್ಟು, ಆತುರಾತುರವಾಗಿ ಹೊರಗೆ ಬಂದು, ‘ತಪ್ಪಾಯ್ತು ಧಣಿ… ಮಕ್ಕಳು ಯಾವತ್ತೂ ಹೀಗೆ ಮಾಡಿದವರಲ್ಲ. ಇವತ್ತೇನಾಯಿತೋ?’ ಎಂದು ಸಂಕೋಚದಿಂದ ಹಿಡಿಯಾಗಿ ಕ್ಷಮೆಯಾಚಿಸಿದಳು. ಮುತ್ತಯ್ಯ ಅಷ್ಟಕ್ಕೇ ಮೆತ್ತಗಾದ. ‘ಹ್ಞೂಂ ಪರ್ವಾಗಿಲ್ಲ, ಬಿಡು. ಇನ್ನು ಮುಂದೆ ಅವು ಹಾಗೆ ಮಾಡದಂತೆ ನೋಡಿಕೋ. ಅವನೆಲ್ಲಿ ಹೋದ ಗೋಪಾಲ…? ತೋಟದ ಮಡಲು, ಕಾಯಿ ತಪ್ಪರಿಗೆಗಳನ್ನೆಲ್ಲಾ ಹೆಕ್ಕಿ ಮನೆಯತ್ತ ತಂದು ಹಾಕು ಅಂತ ಮೊನ್ನೆಯಿಂದ ಬೊಬ್ಬೆ ಹೊಡೆಯುತ್ತಿದ್ದೇನೆ. ಅವನಿಗದು ನಾಟುವುದೇ ಇಲ್ಲವಲ್ಲಾ! ಒಂದೋ ನೀನು ಹೆಕ್ಕಿ ಹಾಕು. ಇಲ್ಲಾ ಅವನು ಬಂದ ಕೂಡಲೇ ರಾಶಿ ಹಾಕಿಸು. ತೋಟ ನೋಡಲೇ ಬೇಸರವಾಗುತ್ತದೆ!’ ಎಂದು ಹೇಳುವಾಗ ಅವನ ದೃಷ್ಟಿ ಅವಳ ಎದೆಯ ಮೇಲೆ ನೆಟ್ಟಿತ್ತು. ಅಷ್ಟರಲ್ಲಿ ಮಕ್ಕಳಿಬ್ಬರೂ ಆಡಲು ತೋಟದತ್ತ ಓಡಿದರು.
ಅದನ್ನು ಕಂಡ ಮುತ್ತಯ್ಯ ಮೀಸೆಯಡಿಯಲ್ಲೇ ನಕ್ಕ. ರಾಧಾಳನ್ನು ಅನುಭವಿಸುವ ಬಯಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಅವನ ಮುಖಭಾವವನ್ನು ಗಮನಿಸಿದ ರಾಧಾಳಿಗೆ ಭಯ, ಮುಜುಗರ ಒಟ್ಟೊಟ್ಟಿಗಾಯಿತು. ತಲೆತಗ್ಗಿಸಿ ಎದೆಯ ಭಾಗವನ್ನು ಸೆರಗಿನಿಂದ ಮತ್ತಷ್ಟು ಮುಚ್ಚಿಕೊಳ್ಳುತ್ತ, ‘ಆಯ್ತು ಧಣಿ. ಅವರು ಬಂದ ಕೂಡಲೇ ಹೇಳುತ್ತೇನೆ. ನನಗೆ ಮನೆ ಕೆಲಸವೇ ತುಂಬಾ ಇದೆ’ ಎಂದು ಹೇಳಿ ರುಮ್ಮನೆ ಒಳಗೆ ಹೋದಳು. ಬಳುಕುತ್ತ ಕಣ್ಮರೆಯಾದ ಅವಳ ಮೈಮಾಟವನ್ನು ಕಂಡ ಮುತ್ತಯ್ಯ ಉನ್ಮತ್ತನಾಗಿ, ‘ಆಯ್ತು… ಪರ್ವಾಗಿಲ್ಲ. ನೀನೇನೂ ಮಾಡಬೇಡ. ನಿನ್ನ ಕಷ್ಟ ನನಗಿಲ್ಲಿ ‘ಎದ್ದು’ ಕಾಣುತ್ತಿದೆ!’ ಎಂದು ಆಸೆಯಿಂದ ಹೇಳಿದವನು ಸ್ವಲ್ಪಹೊತ್ತು ಅಲ್ಲೇ ಅಂಗಳದಲ್ಲಿ ಸುತ್ತಾಡುತ್ತ ಯೋಚಿಸಿದ. ಥೂ! ಈದೇವರು ಬಡ ಹೆಂಗಸರಿಗೇ ಯಾಕೆ ನಮ್ಮಂಥ ಗಂಡಸರನ್ನು ಹುಚ್ಚೆಬ್ಬಿಸುವ ರೂಪ, ಲಾವಣ್ಯವನ್ನು ಕೊಡುತ್ತಾನೋ? ಇವರ ವನಪು ವೈಯ್ಯಾರಗಳೆಲ್ಲ ನಮ್ಮ ತಲೆ ಹಾಳು ಮಾಡಿ ಬಿಡುತ್ತವೆ ಕರ್ಮದ್ದು. ನನ್ನವಳೂ ಒಬ್ಬಳಿದ್ದಾಳೆ. ಆದರೆ ಪ್ರಯೋಜನವೇನುಬಂತು? ದರಿದ್ರವಳಿಗೆ ಯಾವಾಗಲೂ ಒಂದಲ್ಲಾ ಒಂದು ಕಾಯಿಲೆ! ಮೈಬಗ್ಗಿಸಿ ದುಡಿಯದೆ ಕೂತುಂಡು ಆನೆಮರಿಯಂತಾಗಿದ್ದಾಳೆ ಲೌಡಿ. ಅಂಥವಳ ಜೊತೆ ಏಗುವುದೋ ಬಿಡುವುದೋ ದೇವರಿಗೇ ಗೊತ್ತು!
ಆದರೆ ಮನೆ ಕೆಲಸದ ನಾಗವೇಣಿ ಕೆಳ ಜಾತಿಯವಳಾದರೂ ಎಷ್ಟೊಂದು ಪಸಂದಾಗಿದ್ದಾಳೆ. ನಾನೂ ಉಪ್ಪು ಹುಳಿ ಖಾರ ತಿನ್ನುವವನಲ್ಲವಾ! ಅದಕ್ಕೇ ಆವತ್ತೊಮ್ಮೆ ಆಗುವುದಾಗಲಿ ಎಂದುಕೊಂಡು ಅವಳನ್ನು ಬಾಚಿ ತಬ್ಬಿ ಕೊಂಡದ್ದು. ಅವಳು ರಂಪ ಮಾಡಿಬಿಡುತ್ತಾಳೇನೋ ಎಂದು ಭಾವಿಸಿದ್ದೆ. ಆದರೆ ನಡೆದದ್ದು ಬೇರೆಯೇ. ಮೊದಲಿಗೆ ಬೆಚ್ಚಿಬಿದ್ದು ದಿಟ್ಟಿಸಿದವಳು ತಕ್ಷಣ ಮೆದುವಾಗಿ ನಗುತ್ತ ತೋಳ ತೆಕ್ಕೆಗೆ ಬಿದ್ದುಬಿಟ್ಟಳು. ಆವತ್ತಿನಿಂದ ಒಂದಿಷ್ಟು ಸುಖ ಅವಳಿಂದ ಸಿಗದಿರುತ್ತಿದ್ದರೆ ಈ ಕಾಡುಹಂದಿಯನ್ನು ಕಟ್ಟಿಕೊಂಡು ನಾನೇನು ಮಾಡಬೇಕಿತ್ತೋ. ಆದರೆ ಆ ನಾಗಿಯ ಗಂಡ ಕುಡ್ಚೇಲ ಮಣಿಯಾಣಿಯ ದುಡ್ಡಿನ ಪೀಡನೆ ನೆನೆದರೆ ಮಾತ್ರ ಅವಳನ್ನೂ ಮುಟ್ಟುವುದು ಬೇಡ ಅಂತನ್ನಿಸುತ್ತದೆ! ಎಂದು ತಲೆಕೊಡವಿಕೊಂಡ. ಬಳಿಕ ಮತ್ತೆ, ಈ ರಾಧಾ ಸಖತ್ ಆಗಿದ್ದಾಳೆ. ನಾಗಿಯಷ್ಟು ಚಾಲಾಕಿನವಳೂ ಅಲ್ಲ. ಗೋಪಾಲನೂ ದುರಾಸೆಯ ಮನುಷ್ಯನಲ್ಲ. ಅವಕಾಶ ಸಿಕ್ಕಿದರೆ ಇವಳನ್ನೇ ಒಲಿಸಿಕೊಂಡು ಪರ್ಮನೆಂಟಾಗಿ ಇಟ್ಟುಕೊಳ್ಳಬೇಕು! ಎಂಬ ಯೋಚನೆಯಲ್ಲಿ ತೇಲಾಡುತ್ತ ಮೆತ್ತಗೆ ರಾಧಾಳ ಮನೆಯೊಳಗೆ ಅಡಿಯಿಟ್ಟ.
ಅಷ್ಟರವರೆಗೆ ಅಡುಗೆ ಕೋಣೆಯಲ್ಲಿದ್ದ ರಾಧಾ, ಮುತ್ತಯ್ಯ ಹೊರಟು ಹೋದನೆಂದು ಭಾವಿಸಿ ಹೊರಗೆ ಬಂದವಳು ಅವನನ್ನು ಕಂಡು ನಡುಗಿಬಿಟ್ಟಳು. ಮುತ್ತಯ್ಯ ಪಡಸಾಲೆಯಲ್ಲಿ ನಿಂತಿದ್ದ. ‘ಏ…,ಏನೂ…ಏನು ಬೇ…ಕಿ…ತ್ತು…ಧಣೀ…!’ ಎಂದೆನ್ನುತ್ತ ಮೂಲೆಗೆ ಸರಿದು ನಿಂತಳು.
‘ಅರೆರೇ, ನೀನೆಂಥದು ಮಾರಾಯ್ತೀ ಇಷ್ಟೊಂದು ಹೆದರುವುದು? ನಾನೇನು ಹುಲಿನಾ, ಸಿಂಹನಾ…? ಎರಡು ಮಕ್ಕಳ ತಾಯಿ ನೀನು, ನಾನ್ಯಾಕೆ ಬಂದೆನೆಂದು ತಿಳಿಯದಷ್ಟು ಪೆದ್ದಿಯಾ…? ನಿನ್ನ ಆತಂಕ ನನಗೂ ಅರ್ಥವಾಗುತ್ತದೆ. ಹೆದರಬೇಡ. ಸ್ವಲ್ಪ ಹೊತ್ತು ಸುಮ್ಮನಿದ್ದುಬಿಡು. ಆಮೇಲೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು!’ ಎಂದು ನಾಲಗೆಯಿಂದ ಕೆಳದುಟಿ ಸವರುತ್ತ ಮುಂದುವರೆದ. ರಾಧಾ ಮತ್ತಷ್ಟು ಬೆದರಿದಳು. ದುಃಖ ಉಮ್ಮಳಿಸಿ ಬಂತು. ಮುತ್ತಯ್ಯ ಅವಳನ್ನು ಬಾಚಿ ತಬ್ಬಿಕೊಳ್ಳಲು ಮುಂದಾದ. ಅದನ್ನು ತಿಳಿದವಳಿಗೆ ಕೆಟ್ಟ ರೋಷವೆದ್ದಿತು.
‘ಛೀ! ಮುಟ್ಬೇಡಿ ನನ್ನ! ಇಂಥ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವಾ ನಿಮಗೆ…? ನೀವೆಣಿದಂಥ ಹೆಂಗಸಲ್ಲ ನಾನು. ಮರ್ಯಾದೆಯಿಂದ ಹೊರಟು ಹೋಗಿ. ಇಲ್ಲವಾದರೆ ಜೋರಾಗಿ ಬೊಬ್ಬೆ ಹೊಡೆಯುತೇನಷ್ಟೆ!’ ಎಂದು ಒರಟಾಗಿ ಗದರಿಸಿದಳು. ನಾಗವೇಣಿಯಂತೆ ಇವಳೂ ತಾನು ಮುಟ್ಟಿದ ಕೂಡಲೇ ತೆಕ್ಕೆಗೆಬಿದ್ದು ಮಂದಹಾಸ ಬೀರುತ್ತಾಳೆಂದುಕೊಂಡಿದ್ದ ಮುತ್ತಯ್ಯನ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿಬಿಟ್ಟಿತು. ಅವನು ಅವಕ್ಕಾದವನು, ‘ಆಯ್ತು, ಆಯ್ತು ಮಾರಾಯ್ತೀ. ಕಿರುಚಬೇಡ. ನಿನಗಿಷ್ಟವಿದ್ದರೆ ಮಾತ್ರ. ಯಾರನ್ನೂ ನಾನು ಬಲವಂತ ಮಾಡುವವನಲ್ಲ. ಇರಲಿ. ಕುಡಿಯಲಿಕ್ಕೆ ಸ್ವಲ್ಪ ನೀರಾದರೂ ಕೊಡುತ್ತೀಯಾ ಇಲ್ವಾ…?’ ಎಂದ ಹುಸಿನಗುತ್ತ.
‘ನೀರೂ ಇಲ್ಲ, ಮಣ್ಣೂ ಇಲ್ಲ! ಮನೆಗೆ ಹೋಗಿ ಕುಡಿದು ಕೊಳ್ಳಿ. ಹ್ಞೂಂ ಹೊರಡಿ!’ ಎಂದು ರಾಧಾ ಇನ್ನಷ್ಟು ಕೋಪದಿಂದ ಗುಡುಗಿದವಳು ತಿರುಗಿ ಅಡುಗೆ ಕೋಣೆಗೆ ನುಸುಳಿ ದಢಾರ್ರನೇ ಕದವಿಕ್ಕಿಕೊಂಡಳು.
ಮುತ್ತಯ್ಯನಿಗೆ ಕಪಾಳಕ್ಕೆ ಹೊಡೆದಷ್ಟು ಅವಮಾನ, ಭಯಒಟ್ಟೊಟ್ಟಿಗಾಯಿತು. ರಪ್ಪನೆ ಹೊರಗೆ ಧಾವಿಸಿದ. ಅವನಿಗೆ ತಾನು ಕೆಲವೇ ಕ್ಷಣಗಳ ಹಿಂದಷ್ಟೇ ಕಂಡು ಮೋಹಿಸಿದ್ದ ರಾಧಾಳ ರೂಪವು ಈಗ ಮಹಾಕಾಳಿಯಂತಾಗಿ ಕಣ್ಣೆದುರು ಸುಳಿಯಿತು. ‘ಅಬ್ಬಾ! ಇವಳೇ…ಇಷ್ಟೊಂದು ಜೋರಿದ್ದಾಳಾ…!’ ಎಂದುಕೊಂಡವನು, ಯಾರಾದರೂ ಕೇಳಿಸಿಕೊಂಡರಾ…? ಎಂದು ಒಮ್ಮೆಸುತ್ತಮುತ್ತ ಕಳ್ಳ ದೃಷ್ಟಿ ಬೀರಿದ. ಪುಣ್ಯಕ್ಕೆ ಯಾರೂ ಕಾಣಿಸಲಿಲ್ಲ. ಮತ್ತೆ ಅಲ್ಲಿ ನಿಲ್ಲಲಾಗದೆ ರಪರಪನೇ ತೋಟದತ್ತ ಹೆಜ್ಜೆ ಹಾಕಿದ. ಆದರೆ ಅವನ ಹಸಿವಿನ್ನೂ ತಣಿದಿರಲಿಲ್ಲ. ಆ ನಿರಾಶೆಯು ಅವಳ ಮೇಲಿನ ಕೋಪವಾಗಿ ಮಾರ್ಪಟ್ಟಿತು. ‘ಅಲ್ಲಾ, ಎಷ್ಟೊಂದು ಸೊಕ್ಕು ಈ ಹಡೆರಂಡೆಗೆ! ಮನೆ ಕೊಟ್ಟ ಧಣಿ ಅಂತಾನ್ನೂ ಲೆಕ್ಕಿಸದೆ ನಾಯಿಯನ್ನು ಗದರಿಸುವಂತೆ ಗದರಿಸಿಬಿಟ್ಟಳಲ್ಲ! ಇವಳು ಉರುವಲು ಬೇಕೆಂದು ಬಂದಾಗಲೆಲ್ಲ ಪಾಪ ಬಡಹೆಂಗಸು ಎಂದುಕೊಂಡು ಒಣ ಮಡಲು, ತಪ್ಪರಿಗೆ, ತೆಂಗಿನ ಹೆಡೆ, ಕಾಯಿ, ಬಾಳೆಹಣ್ಣುಗಳನ್ನೆಲ್ಲ ಬಾಚಿ ಬಾಚಿ ಕೊಡುತ್ತಿದ್ದೆನಲ್ಲ. ಅವಕ್ಕೆಲ್ಲ ಬೆಲೆಯೇ ಇಲ್ಲವಾ ಹಾಗಾದರೆ? ಇಲ್ಲ, ಇನ್ನು ಇವಳನ್ನು ಸುಮ್ಮನೆ ಬಿಡಲಿಕ್ಕಿಲ್ಲ. ಇಂದಲ್ಲ ನಾಳೆ ಅನುಭವಿಸಿಯೇ ತೀರಬೇಕು. ಇನ್ನೂ ಸ್ವಲ್ಪ ಕಾಲ ಮನವೊಲಿಸುವ ನಾಟಕವಾಡುವ. ಒಲಿದರೆ ಗೆದ್ದಳು. ಇಲ್ಲವಾದರೆ ಸೆರಗು ಹರಿದಾದರೂ ಚಿಂತೆಯಿಲ್ಲ, ಒಮ್ಮೆ ರುಚಿ ನೋಡಲೇಬೇಕು! ಎಂದು ನಿರ್ಧರಿಸಿ ಸ್ವಲ್ಪ ಸ್ಥಿಮಿತಕ್ಕೆ ಬಂದ. ಮರುಕ್ಷಣ ಅವನಿಗೆ ಮತ್ತೊಂದು ಯೋಚನೆ ಹುಟ್ಟಿತು. ಇವಳು ಕೋಪದ ಬರದಲ್ಲಿ ಗಂಡ ಬಂದ ತಕ್ಷಣ ತನ್ನ ಮೇಲೆ ಚಾಡಿ ಹೇಳದೆ ಬಿಡಲಾರಳು. ಅವನಿಗೆ ತಿಳಿದರೆ ಕಷ್ಟ. ಹಾಗಾಗಲು ಬಿಡಬಾರದು ಎಂದುಕೊಂಡು ರಪ್ಪನೆ ಹಿಂದಿರುಗಿ ನಡೆದ. ಅವಳ ಅಂಗಳದಲ್ಲಿ ನಿಂತುಕೊಂಡು, ‘ರಾಧಾ…!’ ಎಂದು ಮೃದುವಾಗಿ ಕರೆದ. ರಾಧಾಳಿಗೆ ಮತ್ತೆ ಅಳುಕೆದ್ದಿತು. ಆದರೂ ತೋರಿಸಿಕೊಳ್ಳದೆ ಒಳಗಿನಿಂದಲೇ, ‘ಏನು…?’ ಎಂದು ಒರಟಾಗಿ ಪ್ರಶ್ನಿಸಿದಳು.
‘ಸ್ವಲ್ಪ ಹೊರಗೆ ಬಾ ಮಾರಾಯ್ತೀ…’ ಎಂದು ಅಂಗಲಾಚಿದ. ಆದರೆ ಅವಳು, ‘ಈ ನೀಚ ಇನ್ನೊಮ್ಮೆ ತನ್ನನ್ನು ಮುಟ್ಟಲು ಪ್ರಯತ್ನಿಸಬೇಕು, ಸಿಗಿದೇ ಹಾಕುತ್ತೇನೆ!’ ಎಂದುಕೊಂಡು ಕತ್ತಿಯನ್ನು ಸೆರಗಿನ ಮರೆಯಲ್ಲಿಟ್ಟುಕೊಂಡೇ ಹೊಸ್ತಿಲಿಗೆ ಬಂದು, ‘ಏನೂ…!’ ಎಂಬಂತೆ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದಳು. ಆದರೆ ಅವನ ಮುಖ ಕಂಡು ಹೇಸಿಗೆಯೆನಿಸಿತು. ದೃಷ್ಟಿ ತಪ್ಪಿಸಿ ಎತ್ತಲೋ ನೋಡುತ್ತ ನಿಂತಳು. ಮುತ್ತಯ್ಯ ಮತ್ತೊಮ್ಮೆ ಬೆದರಿದ. ಆದರೂ ತನ್ನ ಅದುರುವ ದೇಹವನ್ನು ಹತೋಟಿಗೆ ತಂದುಕೊಳ್ಳುತ್ತ, ‘ಬೇಜಾರು ಮಾಡಿಕೊಳ್ಳಬೇಡ ಮಾರಾಯ್ತಿ. ಏನೋ ಕೆಟ್ಟ ಗಳಿಗೆ. ನಿನ್ನ ಚಂದಕ್ಕೆ ಮನಸ್ಸು ಮರುಳಾಯಿತು. ಹೆಣ್ಣಿನಾಸೆ ಯಾವ ಗಂಡಸನ್ನು ಬಿಟ್ಟಿದೆ ಹೇಳು? ನನ್ನ ಹೆಂಡತಿಯೊಬ್ಬಳು ಸರಿಯಿರುತ್ತಿದ್ದರೆ ಇಂಥದ್ದಕ್ಕೆಲ್ಲ ಕೈಹಾಕಲಿಕ್ಕಿತ್ತಾ ನಾನು? ಅದನ್ನೆಲ್ಲ ನಿನ್ನ ಹತ್ತಿರ ಹೇಳಿ ಪ್ರಯೋಜನವಿಲ್ಲ ಬಿಡು. ನನ್ನಿಂದ ತಪ್ಪಾಯ್ತು. ನಡೆದದ್ದನ್ನು ಮರೆತುಬಿಡು. ಗಂಡನಿಗೆ ತಿಳಿಸಿ ನಿಷ್ಠೂರ ಕಟ್ಟಿಕೊಳ್ಳುವುದು ಬೇಡ. ಹ್ಞಾಂ, ಇನ್ನೊಂದು ಮಾತು. ಕಾಯಿ, ಗೀಯಿ, ಕಟ್ಟಿಗೆ ಬೇಕಾದರೆ ಹಿಂದಿನಂತೆಯೇ ಸಂಕೋಚಪಡದೆ ತೆಗೆದುಕೊಂಡು ಹೋಗು ಮಾರಾಯ್ತಿ. ಒಟ್ಟಾರೆ ನೀವು ಒಕ್ಕಲಿನವರು ಚೆನ್ನಾಗಿರಬೇಕುಅಷ್ಟೇ. ನಾನೇನು ಹೋಗುವಾಗ ಕೊಂಡು ಹೋಗುತ್ತೇನಾ!’ ಎಂದು ವೈರಾಗಿಯಂತೆ ನುಡಿದು ಹಿಂಬದಿಯನ್ನು ಪರಪರ ಕೆರೆದುಕೊಳ್ಳುತ್ತ ಹೊರಟು ಹೋದ. ರಾಧಾಳಿಗೆ ಅವನ ಮಾತು, ವರ್ತನೆಗಳು ಅಸಹ್ಯವೆನಿಸಿದುವು. ಏನೂ ಉತ್ತರಿಸಿದೆ ತುಟಿ ಕಚ್ಚಿ ನಿಂತಳು. ಮುತ್ತಯ್ಯನ ಕೀಳು ಚಪಲ, ನೀಚತನವನ್ನು ಹಿಂದಿನಿಂದಲೂ ಅನುಭವಿಸುತ್ತ ಬಂದವಳಿಗೆ ಇಂದಿನ ಘಟನೆಯಿಂದ ಸಹನೆ ತಪ್ಪಿಬಿಟ್ಟಿತು. ಇಂಥವರಹಂಗಿನ ಗುಡಿಸಲೂ ಸಾಕು! ಈ ಲಂಪಟರ ಹಸಿದ ದೃಷ್ಟಿಗೆ ಬಲಿಯಾಗಿದ್ದೂ ಸಾಕು. ಒಂದಿಷ್ಟಿರುವ ಬಂಗಾರ ಮಾರಿ ಹೋದರೂ ಚಿಂತೆಯಿಲ್ಲ. ಆದಷ್ಟು ಬೇಗ ಒಂದು ತುಂಡು ಸ್ವಂತ ಭೂಮಿಯನ್ನು ಮಾಡಿಕೊಳ್ಳಲೇಬೇಕು. ಆಮೇಲೆ ಬೀಡಿ ಕಟ್ಟಿ, ಗಂಜಿ ಉಂಡಾದರೂ ಬದುಕಬಹುದು. ಯಾವುದಕ್ಕೂ ಇವರೊಮ್ಮೆ ಮನೆಗೆ ಬಂದುಕೊಳ್ಳಲಿ. ಕೊರಳಪಟ್ಟಿ ಹಿಡಿದು ಎರಡರಲ್ಲೊಂದು ಇತ್ಯಾರ್ಥ ಮಾಡಿಯೇ ತೀರುತ್ತೇನೆ! ಎಂದು ಕುದಿಯುತ್ತ ಗಂಡನ ದಾರಿ ಕಾಯತೊಡಗಿದಳು.
(ಮುಂದುವರೆಯುವುದು)
**************************
ಗುರುರಾಜ್ ಸನಿಲ್
ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಆವರ್ತನ ಕಾದಂಬರಿಯ ಮೂರನೆಯ ಅಧ್ಯಾಯದಲ್ಲಿ ಬಾಡಿಗೆ ಮನೆಯಲ್ಲಿ ಇರುವ ರಾಧಾ ಮಾಲಿಕ ಮುತ್ತಯ್ಯನಿಂದ ಅನುಭವಿಸುವ ಕಿರುಕುಳದ ಸನ್ನಿವೇಶವನ್ನು ಕಾದಂಬರಿಕಾರರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಭಿನಂದನೆಗಳು