ವ್ಯಾಲೆಂಟನ್ಸ ಡೇ ಹನಿಗಳು

ನಾಗರಾಜ್ ಹರಪನಹಳ್ಳಿ

Plain light peach colored background with transparent water drops of different sizes and shapes flowing down and placed close to each other

೧-
ಅವಳ ಎದೆ ಬಗೆದು
ನೋಡಿ
ಅಲ್ಲಿ ಸಿಗುವುದು ಇನಿ
ಇನಿ ಎಂದರೆ ಬೇರಾರೂ ಅಲ್ಲ
ಅದು ಇಬ್ಬನಿಯ ಹನಿ

-೨-

ಏಕಾಂತದಲಿ
ಸುಮ್ಮನಿದ್ದರೂ
ಪಿಸುಗುಟ್ಟಿದಂತಾಗುವುದು
ಪ್ರೇಮ

-೩-

ನೀನು dp ಕಾಣದಂತೆ
ಮಾಡಬಹುದು
ಮೆಸ್ಸೆಜ್ ಸಹ ಮಾಡದಿರಬಹುದು
ಅಂತಿಮವಾಗಿ ನಿನ್ನ ಬಿಂಬದ
ನೆನಹು ನಾನೇ

-೪-
ನಿನ್ನ ಹೃದಯವನ್ನು
ಕೇಳು
ಅದರ ಮಾತ ಆಲಿಸು
ಅಲ್ಲಿನ ಪಿಸುಮಾತು ಇನಿ

-೫-
ಏನಾದರೂ ಏನಂತೆ
ಗೋಡೆ ಕಟ್ಟಿ
ಆಣೆ ಮಾಡಿಸಿಕೊಂಡು
ತಡೆದಿರಬಹುದು ನಿನ್ನ
ನಿನ್ನ ಮೊದಲ ಮತ್ತು
ಕೊನೆಯ ಆಯ್ಕೆ
ನಾನೇ ….
ಹಾಗೆಂದು ನೀ ಹೇಳಿದ
ಮಾತು
ನನ್ನ ಸುತ್ತ ಗಿರಕಿ ಹೊಡೆಯುತ್ತಿದೆ

-೬-
ಪ್ರೇಮಿಸುವುದ ಕಲಿಸಿ
ನೀ ಹಠಾತ್
ಹೊರಟು ಹೋಗಬಹುದು ಎಂದು
ನಾ ಕನಸಲ್ಲೂ ಯೋಚಿಸಿರಲಿಲ್ಲ
ಹಾಗೆ ಹೋರಟು ಹೋದ
ಮೇಲೆ
ಇಷ್ಟು ಪ್ರಬಲವೆಂದೂ…..

-೭-

ನಾ ಎಷ್ಟು ದಟ್ಟವಾಗಿರುವೆ
ನಿನ್ನಲ್ಲಿ ?
ಮಾತಿಲ್ಲದ ನಂತರ
ಎಂದು ; ನೀನಿದ್ದಲ್ಲಿಂದ
ಒಳಗೇ ಪಿಸುಗುಡುತ್ತಿರಬಹುದು

ಕೇಳು ;

ನನ್ನೂರಿನಿಂದ ನನ್ನುಸಿರು
ನಿನ್ನ ತಾಗುತ್ತಿದೆ‌ ;
ಎದೆ ಬಡಿತ ನಿನಗೆ
ಕೇಳುತ್ತಿದೆ…

-೮-
ಕಟ್ಟಳೆಯ ಕಾರಣಕ್ಕೆ
ದೂರವಿಡಬಹುದು
ಮರದ ತುದಿ,‌ಟೊಂಗೆ
ಕತ್ತರಿಸಬಹುದು
ಮನದ ಭೂಮಿಗಿಳಿದ‌ ಬೇರು
ಕಿತ್ತೆಸೆಯುವುದು ಸುಲಭವಲ್ಲ

-೯-
ಅದೆಷ್ಟು ದಿನ ಮಾತು, ನೋಟ‌
ತಡೆಯಬಹುದು ?
ಬೆಳಕು ಗಾಳಿಯ
ಬಿಟ್ಟು ಮನುಷ್ಯ ಬದುಕಬಹುದು?

-೧೦-

ಇನಿಯ ಜಾಡು
ನಿನ್ನ ಕಡೆಗೆ
ನಿನ್ನೂರ ಕಡೆಗೆ
ಒಂದಿಲ್ಲೊಂದು ದಿನ
ಪ್ರೀತಿ ಆಚೆ ದಡವ
ತಲುಪುತ್ತದೆ
ಕಾಯುತ್ತಿರು, ಅಷ್ಟೇ

**************************************

One thought on “

Leave a Reply

Back To Top