ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

ಚಂದಕಚರ್ಲ ರಮೇಶ ಬಾಬು

Goodbye 2020 | In The Hills

ಒಂದು ವರ್ಷ ಸರಿದು ಹೋಗುವಾಗ ಅದು ಕೊನೆಗೆ ಕೊಟ್ಟ ಬವಣೆಯನ್ನು ಕಂಡು ವರ್ಷವನ್ನೇ ದೂರಲಾಗುವುದಿಲ್ಲ. ಎಂದಿನ ಹೊಸ ವರ್ಷದಂತೆ ೨೦೨೦ ರನ್ನು ಸಹ ನಾವೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿದೆವು. ನಮ್ಮ ಕನಸುಗಳನ್ನು ನನಸಾಗಿಸಲು ಈ ವರ್ಷ ತನ್ನ ಪಾತ್ರ ಪೋಷಿಸುತ್ತದೆ ಎಂಬ ಭರವಸೆಯ ಆಶೆ ಹೊತ್ತೆವು. ಮೊದಲೆರಡು ತಿಂಗಳೂ ಯಾವುದಕ್ಕೂ ಕೊರತೆಯೆನಿಸಲಿಲ್ಲ. ಹಬ್ಬಗಳೂ, ಹರಿದಿನಗಳೂ, ಮದುವೆಗಳೂ ಎಲ್ಲ ಎಲ್ಲರೂ ಅಂದುಕೊಂಡಂತೆ ನಡೆದವು.

ಅಷ್ಟರಲ್ಲೇ ಚೀನಾಕ್ಕೆ ಕೊರೋನಾದ ಸೋಂಕು ಕಾಲಿಟ್ಟಿತ್ತು. ಅಲ್ಲಿ ಸಾವುಗಳು ಸಂಭವಿಸಲಾರಂಭಿಸಿದ್ದವು. ಅವರು ತಮ್ಮನ್ನು ಇದರ ಬಗ್ಗೆ ಆಗಲೇ ಎಚ್ಚರಿಸಿಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ದೂರಿದ್ದು ಈ ಸೂಕ್ಷ್ಮಾಣು ಇತರೆ ದೇಶಗಳಲ್ಲೂ ತನ್ನ ಕರಾಳ ಹಸ್ತಗಳನ್ನು ಚಾಚಿದಾಗಲೇ. ನಮ್ಮ ದೇಶಕ್ಕೂ ಮಾರ್ಚ್ ತಿಂಗಳಲ್ಲಿ ಕಾಲಿಟ್ಟ ಈ ಕರೋನಾ ( ನಂತರ ಇದಕ್ಕೊಂದು ಕೋವಿಡ್-೧೯ ಅಂತ ನಾಮಕರಣ ಮಾಡಲಾಯಿತು ಅನ್ನಿ) ತನ್ನ ಪ್ರತಾಪ ತೋರಿಸಲಾರಂಭಿಸಿತ್ತು.  ಆ ಹೊತ್ತಿಗಾಗಲೇ ಇಟಲೀ, ಸ್ಪೆಯಿನ್, ಬ್ರಿಟನ್. ಫ್ರಾನ್ಸ್ ದೇಶಗಳಲ್ಲಿ ಸಾವಿರಾರು ಜನಗಳು ಸಾಯಲಾರಂಭಿಸಿದ್ದರು. ಅಮೆರಿಕಾ ಸಹ ಹಿಂದುಳಿದಿದ್ದಿಲ್ಲ. ಚೈನಾದ ಜೊತೆ ಉಳಿದ ದೇಶಗಳು ಇದರ ಬಗ್ಗೆ ಅಧ್ಯಯನ, ಚಿಕಿತ್ಸೆಗೆ ಬೇಕಾದ ಪ್ರಯೋಗ ಆರಂಭಿಸಿದವು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಂತೆ ಕೈಗಳನ್ನು ಬಾರಿಬಾರಿಗೂ ಶುಚಿಮಾಡಿಕೊಳ್ಳುವುದು, ಮುಖಕ್ಕೆ ಗವಸು ಹಾಕಿಕೊಳ್ಳುವುದು, ಸಾಮಾಜಿಕ ದೂರದ ಪಾಲನೆ ಮಾಡುವುದು ನಮ್ಮ ದೇಶದಲ್ಲೂ ಆರಂಭಮಾಡುತ್ತ ಮಾರ್ಚ್ ೨೪ ರಿಂದ ಮೂರು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಯಿತು. ಅದನ್ನು ಲೆಕ್ಕಿಸದೇ ಹೊರಬಂದವರನ್ನು ಥಳಿಸಿ ಒಳಗೆ ಅಟ್ಟಲಾಯಿತು. ಕಚೇರಿಗಳಿಗೆ ಹೋಗುವ ಗಂಡಂದಿರು, ಶಾಲೆಗಳಿಗೆ ಹೋಗುವ ಮಕ್ಕಳು ಮನೆಯಲ್ಲೇ ಇರುತ್ತಿದ್ದು, ಅವರಿಗೆ ಹೊತ್ತು ಹೊತ್ತಿಗೂ ತಿಂಡಿ, ಊಟ ಒದಗಿಸುವುದಕ್ಕೆ ಮನೆ ಹೆಂಗಸರು ಹೆಣಗಾಡಿದರು. ಈ ಲಾಕ್ ಡೌನ್ ಸಮಯದಲ್ಲಿ ತಮಗೆ ಬೇಕಾದ ಎಣ್ಣೆ ಸಿಗದೇ ಮದ್ಯಪ್ರೇಮಿಗಳು ತಲೆಕೆಟ್ಟು ಆಡಿದ್ದು ನೆನೆಯಬಹುದಾಗಿದೆ.

ಮೂರುವಾರ ಹೇಗೋ ಹಲ್ಲು ಕಚ್ಚಿ ತಡೆದುಕೊಂಡರಾಯಿತು ಎನ್ನುತ್ತ ಜನರು ಸಹ ಹುರುಪಿನಲ್ಲಿ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಮುಗಿಯುವುದಕ್ಕಾಗಿ ಕಾದರು. ಹೊಸ ದಿರಿಸುಗಳಂತೆ ಮುಖಕ್ಕೆ ಕವಚಿಕೊಳ್ಳುವ ಮುಸುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚುಟುಕುಗಳು ಓಡಾಡಿದವು, ಹೊಸ ಕವಿತೆಗಳು ಹಾರಾಡಿದವು. ಪರಿಸರ ಮಾಲಿನ್ಯ ಕಮ್ಮಿಯಾಗಿ ವಾತಾವರಣ ತಿಳಿಯಾಯಿತು. ಎಂದೂ ಕೇಳದ ಕೋಗಿಲೆಯ ಇಂಚರ ಸತತವಾಗ ಕೇಳಿತು. ಕೆಲವರಿಗೆ ಅಲ್ಲಿಯವರೆಗೆ ಕಾಣದ ಹಿಮಾಲಯಗಳು  ಕಂಡವು. ತಾಂತ್ರಿಕತೆ ಮೈಗೂಡಿಸಿಕೊಂಡ ಜನರ ಈ ಉಸಿರುಗಟ್ಟುವ ಸನ್ನಿವೇಶದಲ್ಲೂ ತಮ್ಮದೇ ಆದ ಹೊಸ ಆಯಾಮಗಳನ್ನು ಹುಡಿಕಿದರು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ಸಮಾವೇಶಗಳು ಶುರುವಾದವು. ಸಮಾಚಾರ ತಂತ್ರದ ಸಂಸ್ಥೆಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡಿಸುತ್ತ ಅವರ ಕೆಲಸ ಕೆಡದಂತೆ ನೋಡಿಕೊಂಡರು. ಪಾಪ, ದಿನಗೂಲಿ ಕೆಲಸಗಾರರು, ಅಸಂಘಟಿತ ಕಾರ್ಮಿಕರು ತಮ್ಮ ತುತ್ತಿಗೆ ಒದ್ದಾಡಿದರು. ತಮ್ಮ ಮನೆಗಳಿಗೆ ಬೇಕಾದ ಸಂಚಾರದ ವ್ಯವಸ್ಥ ಕಾಣದೇ ಕಾಲ್ನಡಿಗೆಯಲ್ಲೇ ಮನೆಗಳಿಗೆ ತೆರಳುತ್ತಾ ಬವಣೆ ಅನುಭವಿಸಿದರು. ಅವರಿಗೆ ನೆರವಾಗುವ ಕೆಲ ಉದಾರಿ ಮನಗಳು ಹೊರಬಂದವು. ಕೆಲವರು ಮನೆಗಳಿಗೆ ಹೊರಟಿರುವ  ಈ ತರದ ಬಡಪಾಯಿಗಳಿಗೆ ಅನ್ನ, ವಸ್ತ್ರ, ವಸತಿ ನೋಡಿಕೊಂಡರ. ಕೆಲ ಸಂಸ್ಥೆಗಳು ತಮ್ಮ ಊರಿನಲ್ಲಿಯ ಬಡವರಿಗೆ ದಿನಸಿಯನ್ನು ಪೂರೈಸಿದರು. ಕರೋನಾ ಈ ತರದ ದಾನಶೀಲ ಗುಣವನ್ನು ಪ್ರಚೋದಿಸಿತ್ತು.

ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ವೇದಿಕೆಗಳನ್ನು ಕಲಾಕಾರರು ಸಮರ್ಥವಾಗಿ ತಮ್ಮದಾಗಿಸಿಕೊಂಡು ತಮ್ಮ ಕಲಾ ಪ್ರದರ್ಶನಕ್ಕೊಂದು ಹೊಸ ವಿಧಾನ ಕಂಡುಕಂಡರು. ಕವಿಗೋಷ್ಠಿಗೆ ಅಥವಾ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಆಯೋಜಕರು ಸಭಾಂಗಣಕ್ಕಾಗಿ ಒದ್ದಾಡುವುದು,ಕಲಾ ಕಾರರನ್ನು ಕರೆಸುವುದು, ಏನೋ ಅಡೆತಡೆಯಾಗಿ ತಡವಾಗಿ ಬರುವುದು ಅಥವಾ ಅನಾರೋಗ್ಯದಿಂದ ಬರದೇ ಇರುವುದು ಇವೆಲ್ಲವೂ ಇಲ್ಲದಾದವು. ಮನೆಯಲ್ಲಿ ತಮ್ಮ ಆರಾಮ ಕುರ್ಚಿಯಿಂದಲೇ ತಮ್ಮ ಸಾಹಿತ್ಯ ಕೃತಿಯನ್ನು ಓದಲು ಅನುಕೂಲವಾಯಿತು. ಯಕ್ಷಗಾನದ ಒಂದು ಪ್ರದರ್ಶನ ಸಹ ಪ್ರೇಕ್ಷಕರೇ ಇಲ್ಲದೇ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಲಾಯಿತು. ನಿರ್ಬಂಧಗಳು ಸಡಿಲವಾದ ಮೇಲು ಈ ಆನ್ ಲೈನ ವೇದಿಕೆಗಳಿಗೇ ಜನ ತಮ್ಮ ಒಲವನ್ನು ತೋರುತ್ತಿದ್ದಾರೆ.

ಒಟಿಟಿ ವೇದಿಕೆಗಳು ತುಂಬಾ ಬೇಡಿಕೆಗೊಳಗಾದವು. ಅದರಲ್ಲಿ ಸಿಗುವ ಸಿನಿಮಾಗಳು ಜನಪ್ರಿಯವಾದವು. ಇನ್ನು ಕೆಲವೇ ದಿನಗಳಲ್ಲಿ ನಿರ್ಬಂಧ ಸಡಿಲಗೊಂಡು ಸಿನಿಮಾ ಟಾಕೀಸುಗಳು ತೆರೆದರೂ ಅವುಗಳಿಗೆ ಮುಗಿ ಬೀಳುವ ಜನತೆ ಕಮ್ಮಿಯೇ ಇರಬಹುದು. ಮನೆಯಲ್ಲಿಯೇ ಸಿನಿಮಾ ನೋಡಲು ಸಿಗುವಾಗ ಇನ್ನು ಟಾಕೀಸುಗಳಿಗೆ ಹೋಗುವರಾರು? ಅಲ್ಲವೇ ? ಈಗಿನ್ನೂ ಅರ್ಧದಷ್ಟು ಸಾಮರ್ಥ್ಯದಲ್ಲೇ ನಡೆಯುತ್ತಲಿವೆ. ಇವುಗಳ ಆರ್ಥಿಕ ಆಗುಬರುವಿಕೆಯ ಬಗ್ಗೆ ಪ್ರತ್ಯೇಕ ಅಧ್ಯಯನ ಮಾಡಬೇಕಾದೀತು.

ಜೂಲೈ ತಿಂಗಳ ಹೊತ್ತಿಗೆ ಸರಕಾರ ಕೆಲವಾರು ವರ್ಗಗಳಿಗೆ ನಿಬಂಧನೆಗಳನ್ನು ಸಡಲಿಸಿತು. ಮತ್ತೆ ಜನ ಜೀವನ ರಸ್ತೆಗಳಿಗೆ ಬರಲು ಶುರುವಾಯಿತು. ಆದರೆ ಕರೋನಾ ಸೋಂಕಿದ ರೋಗಿಗಳ ಸಂಖ್ಯೆ ಕಮ್ಮಿಯಾಗಲಿಲ್ಲ. ಜನ ಸಂದಿಗ್ಧತೆಗೆ ಬಿದ್ದರು. ಹೊರಬರಲು ಹೆದರುವ ವರ್ಗವು ಒಂದಾದರೆ, ಯಾವುದಕ್ಕೂ ಲೆಕ್ಕಿಸದಿರುವ ಮತ್ತೊಂದು ವರ್ಗ ಹೀಗೆ. ಜೂಲೈ ತಿಂಗಳು ಮುಗಿಯುವಾಗ ಹತ್ತು ಲಕ್ಷ ಸೋಂಕುದಾರರಾದರು. ಆಗಸ್ಟ್ ತಿಂಗಳಾದರೂ ಕಮ್ಮಿಯಾಗಲಿಲ್ಲ. ಆದರೆ ನಿಬಂಧನೆಗಳು ಮಾತ್ರ ಸಡಿಲಗೊಳ್ಳುತ್ತಾ ಹೋದವು. ರಸ್ತೆಗಳ ಮೇಲೆ ಜನಸಂಚಾರ ಶುರುವಾಯಿತು. ಗಣಪತಿಯ ಹಬ್ಬಕ್ಕೆ ನಿಬಂಧನೆಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದ್ದರೂ ಜನರೇ ಹೆದರಿ ಜಾಸ್ತಿ ನೆರೆಯದಾದರು. ದಸರೆಗೂ, ದೀಪಾವಳಿಗೂ ಇದೇ ತರದ ಪರಿಸ್ಥಿತಿ. ನಮ್ಮ ದೇಶದಲ್ಲಿ ರಿಕವರಿ ಚೆನ್ನಾಗಿದೆ, ಮೃತರ ಸಂಖ್ಯೆ ತುಂಬಾ ಕಮ್ಮಿ ಅಂತ ಯಾವು ಯಾವುದೋ ಸಬೂಬುಗಳನ್ನು ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳೋದು ಆಯಿತು. ಆದರೆ ನಂತರದ ದಿನಗಳಲ್ಲಿ ಮದುವೆ, ಗೃಹ ಪ್ರವೇಶಗಳು ಭರದಿಂದ ಮತ್ತೆ ಆಗ ತೊಡಗಿದವು. ಎಲ್ಲೆಲ್ಲೂ ಜನ ಕಾಣತೊಡಗಿದರು. ಛಾಂದಸರು ಮಾತ್ರ “ ಯಾರೂ ಕರೋನಾದ ನಿಬಂಧನೆಗಳನ್ನು ಪಾಲಿಸುತ್ತಲೇ ಇಲ್ಲ. ಏನು ಜನವಪ್ಪಾ!” ಎನ್ನುತ್ತ ಮೂಗು ಮುರಿಯುತ್ತ ಮನೆಗಳಲ್ಲೇ ಕಳೆಯತೊಡಗಿದರು. ಮನೆಯಲ್ಲಿಯ ದೊಡ್ಡವರಿಗೆ ತಮ್ಮ ನಿರ್ಬಂಧ ಹೇರತೊಡಗಿ ಹಿರಿಯರು ಚಡಪಡಿಸಲಾರಂಭಿಸಿದರು. ಅಮೆರಿಕದಲ್ಲಿಯ ಜನ ಮಾಸ್ಕ್ ಎನ್ನುವುದು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವಂತಾಗುತ್ತದೆ ಎಂದು ಘೋಷಿಸಿ ಹಾಕದೇ ಎಲ್ಲ ಕಡೆಗೆ ತಿರುಗುತ್ತಾ ಅಲ್ಲಿದ್ದ ನಮ್ಮ ಭಾರತೀಯರಿಗೆ ತಳಮಳ ತಂದಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಕರೋನಾದ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ. ಶಾಲೆಗಳು ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಹಾಗಂತ ಮಕ್ಕಳಿಗೇನೂ ರಿಯಾಯ್ತಿಯಾಗಿಲ್ಲ. ಅವರಿಗೂ ಆನ್ ಲೈನಿನ ಮೇಲೆ ಪಾಠಗಳು ಮೂರು ತಿಂಗಳ ಹಿಂದಿನಿಂದಲೇ ಶುರುವಾಗಿವೆ. ಮಕ್ಕಳ ಶಾಲೆಯ ಶುಲ್ಕವೂ ಕಟ್ಟ ಬೇಕಾಗಿದ್ದು ಪಾಲಕರು ಎರಡೂ ಬಗೆಯ ನೋವನ್ನು ಅನುಭವಿಸುತ್ತಿದ್ದಾರೆ. ಕೆಲ ಖಾಸಗೀ ವಿದ್ಯಾ ಸಂಸ್ಥೆಗಳು ಬಂದಾಗಿ ಅಲ್ಲಿಯ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲ ಯಾವ್ಯಾವುದೋ ಕೆಲಸಗಳನ್ನು ಮಾಡಿ ಬದುಕುತ್ತಿರುವುದು ಸಹ ಸಾಮಾಜಿಕ ಜಾಲತಾಣಗಳ, ಕಥೆಗಳ ವಸ್ತುವಾಗಿದೆ. ಆನ್ ಲೈನ ಪಾಠಗಳು, ಮೀಟಿಂಗ್ ಗಳು ನಡೆಯುವಾಗ ಮಧ್ಯದಲ್ಲಾಗುವ ಕೆಲ ಹಾಸ್ಯ ಪ್ರಸಂಗಗಳು ಮನಸ್ಸಿಗೆ ಮುದ ನೀಡಿವೆ. ಕೆಲ ನಿಯತ ಕಾಲಿಕ ಪತ್ರಿಕೆಗಳು ಅನ್ ಲೈನ್ ನ ಆಸರೆ ಪಡೆದು ಮುದ್ರಣವನ್ನು ಕೆಲ ಕಾಲ ನಿಲ್ಲಿಸಿದ್ದು, ಈಗಷ್ಟೇ ಮತ್ತೆ ಶುರುಮಾಡಿವೆ.

ಈ ವರ್ಷದ ಕೊನೆಯ ಹೊತ್ತಿಗೆ ಇನ್ನೇನು ಎಲ್ಲಾ ಸೇವೆಗಳೂ ಪುನರಾರಂಭವಾಗುವುವು ಎನ್ನುವ ಹೊತ್ತಿಗೆ ಇಂಗ್ಲೆಂಡಿನಲ್ಲಿ ಮತ್ತೊಂದು ಇದರ ಸಂಬಂಧೀ ಸೋಂಕಿನ ಸೂಕ್ಷ್ಮಾಣು ಕಾಣಿಸಿಕೊಂಡು ತನ್ನ ಪ್ರತಾಪ ತೋರಲಾರಂಭಿಸಿದೆ. ಇದರ ಹಾವಳಿ ಏನು, ಹೇಗೆ ಅಂತ ಇನ್ನೂ ಗೊತ್ತಾಗುತ್ತಾ ಇಲ್ಲ. ಆದರೇ ಇತರೆ ದೇಶಗಳು ಅಪ್ರಮತ್ತವಾಗಿರುವು ಹೌದು. ಆದರ ಒಂದು ಸಮಾಧಾನದ ಅಂಶವೆಂದರೆ ಕೆಲ ದೇಶಗಳಲ್ಲಿ ಲಸಿಕೆಯನ್ನು ಕೊಡಲು ಶುರುಮಾಡಿದ್ದು. ನಮ್ಮ ಭಾರತದಲ್ಲಿ ಇದರ ಒಣ ಪ್ರಯತ್ನವನ್ನು ಮಾಡಿ ನೋಡುತ್ತಿದ್ದಾರೆ. ಲಸಿಕೆ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತೇವೆಂದು ಸರ್ಕಾರ ಆಶ್ವಾಸನ ನೀಡಿದೆ. ಕಾಯಬೇಕು ಮಾತ್ರ.

ಕರೋನಾ ಪ್ರಭಾವದಿಂದ ಹಲವಾರು ದೇಶಗಳ ಆರ್ಥಿಕ ಸ್ಥಿತಿಯನ್ನು ಹದಗೆಟ್ಟಿವೆ. ಹೊಸ ಉದ್ಯೋಗಗಳು ನಿರ್ಮಾಣವಾಗುವ ಅವಕಾಶ ಕಾಣದಾಗಿದೆ. ಇತರೆ ಕ್ಷೇತ್ರಗಳಲ್ಲಿ ನಡೆಯ ಬೇಕಾದ ಸಂಶೋಧನಾ ಕಾರ್ಯಕ್ರಮಗಳು ನಿಂತಿವೆ. ಎಲ್ಲರ ಲಕ್ಷ್ಯ ಬರೀ ಕರೋನಾಗೆ ಲಸಿಕೆ ಕಂಡ ಹಿಂಡಿಯುವುದರಲ್ಲೇ ಆಗಿದೆ. ನಿಧಿಗಳು ಸಹ ಅದಕ್ಕೇ ನೀಡಲಾಗುತ್ತಿದೆ. ವಿಶ್ವದಾದ್ಯಂತವಾಗಿ ೮ ಕೋಟಿ ಜನರು ಇದರಿಂದ ಪೀಡಿತರಾಗಿದ್ದಾರೆ. ಸುಮಾರು ೧೮ ಲಕ್ಷ ಜನರು ಸತ್ತಿದ್ದಾರೆ. ನೂರು ವರ್ಷದ ಹಿಂದೆ ಸ್ಪೆಯಿನ್ ಫ್ಲೂ ನಂತರ ಈ ತರದ ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ ಕರೋನಾವೇ ಆಗಿದೆ. ಜನರು ಅತಿ ಜರೂರು ಸಮಯಗಳಲ್ಲೂ ತಮ್ಮವರ ಹತ್ತಿರಕ್ಕೆ ಹೋಗಲಾರದೇ ಒದ್ದಾಡಿದ್ದಾರೆ. ಕೆಲವರ ಕೈ ಕಟ್ಟಿ ಹೋಗಿದೆ. ಬಡತನ ಹೆಚ್ಚಿದೆ.

ಆದರೆ ಕರೋನಾ ಹೊಡೆತದಿಂದ ಕೆಲವಾರು ಸಾಮಾಜಿಕೆ ಸುಧಾರಣೆಗಳಾಗಿವೆ.  ಜನರಿಗೆ ತಾವೊಬ್ಬರೇ ಸುಖವಾಗಿರಬೇಕು ಎನ್ನಿಸದೇ ಇಡೀ ಸಮುದಾಯವೇ ರೋಗ ರಹಿತವಿರಬೇಕೆಂಬ ಭಾವನೆ ಬೆಳೆದಿದೆ. ಒಂದೈದಾರು ತಿಂಗಳು ವಾತಾವರಣ ತಿಳಿಯಾಗಿದ್ದು, ಪಶು ಪಕ್ಷಿಗಳು ಸುಖ ಕಂಡಿವೆ. ತಮ್ಮ ವೈಯಕ್ತಿಕ ಶುಭ್ರತೆಯ ಬಗ್ಗೆ ಜನರಿಗೆ ತಿಳಿದುಬಂದಿದೆ. ಇದರ ಬಗ್ಗೆ ಅತೀ ಮಡಿ ಮಾಡುವ ಜನರು ಬೆನ್ನು ತಟ್ಟಿಕೊಂಡಿದ್ದಾರೆ.  ಅಲ್ಲಲ್ಲಿ ಕೆಲ ಲೋಪದೋಷಗಳು ಕಂಡರೂ ಸರಕಾರದ ಬಗ್ಗೆ ಭರವಸೆ ಹುಟ್ಟಿದೆ.

ಇವು ಯಾವುದಕ್ಕೂ ಕಾರಣವಲ್ಲದ ೨೦೨೦ರ ವರ್ಷ ಬರೀ ಸಾಕ್ಷಿಯಾಗಿ ನಿಂತು ಕಾಲಗಮನದಲ್ಲಿ ತನ್ನ ಪಾತ್ರವನ್ನು ಮುಗಿಸಿ ಹೊರಡಲಿದೆ. ಕೆಲಕಡೆ ೨೦೨೦ರ ಮೊದಲಲ್ಲಿ ಯಾರು ಹ್ಯಾಪೀ ನ್ಯೂ ಇಯರ್ ಹೇಳಿದ್ದು ಅಂತ ದೊಣ್ಣೆ ಹಿಡಿದು ನಿಂತ ಚುಟುಕನ್ನು ಕಂಡು ಈ ವರ್ಷ ನಗೆ ತಂದುಕೊಂಡಿದೆ. ತಾನು ಮಾಡಿದ್ದೇನು ಇದರಲ್ಲಿ ಅಂತ ಪ್ರಶ್ನಿಸಿಕೊಂಡಿದೆ. ಮನುಷ್ಯನ ದುರಾಸೆ, ಸ್ವಾರ್ಥ, ವಾತಾವರಣದ ಬಗ್ಗೆ ಯಾವ ಮಾತ್ರವೂ ಕಾಣದ ಕಾಳಜಿ ಇದಕ್ಕೆ ಕಾರಣಗಳು ಎಂದು ಅರಿಯದ ಮನುಷ್ಯ ಜಾತಿಯ ಬಗ್ಗೆ ಮರುಕ ಪಟ್ಟು ಹೊರಡಲಿದೆ. ಅದಕ್ಕೊಂದು ಸಮಾಧಾನ. ತನ್ನ ಅವಧಿ ಮುಗಿಯುವ ವೇಳೆಗೆ ಲಸಿಕೆ ಲಭ್ಯ ಅಂತ ಗೊತ್ತಾಗಿದ್ದು ಹರ್ಷದಾಯಕವೇ ಆದರೂ ಇನ್ನೇನು ಒಂದು ಸಂತೋಷದ ನಗೆಯಿಂದ ಮುಕ್ತಾಯವಾಗ ಬೇಕಿದ್ದ ತನ್ನ ಅವಧಿಗೆ ಕರೋನಾದ ಹೊಸ ಅವತಾರ ನಿರಾಶೆ ತಂದಿದೆ. ದುರಂತವೂ ಸುಖಾಂತವೂ ತಾನಂತೂ ತೆರೆ ಮರೆಯಾಗುವುದು ಖಂಡಿತಾ ಅಂತ ಗೊತ್ತಿದ್ದ ೨೦೨೦ ಜಗಕ್ಕೆ ಬಂದು ಅಪ್ಪಳಿಸಿದ ಈ ವಿಪತ್ತಿಗೆ ತನ್ನ ಪ್ರಮೇಯ ಏನೂ ಇಲ್ಲ ಎಂಬುದು ಎಲ್ಲರೂ ಅರಿಯಲಿ ಎಂದು ಆಶಿಸುತ್ತಾ ಮತ್ತು ೨೦೨೧ ಕರೋನ ಒಂದೇ ಅಲ್ಲ ಎಲ್ಲ ರೋಗ ರಹಿತ ಹೊಸ ವರ್ಷವಾಗಲಿ ಎಂದು ಹಾರೈಸುತ್ತಿದೆ.

*********************

                                                                                   

3 thoughts on “ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

  1. ಕಳೆದ ವರ್ಷದ ಬವಣೆಗಳನ್ನೂ ಮರೆಯಲಾಗದ,ಮರೆಯಲೇ ಬೇಕಾದ ಅನುಭವವನ್ನು, ಸೃಜನಶೀಲ ಮನಸ್ಸು ಕಂಡುಕೊಂಡ ಹೊಸ ದಾರಿಗಳನ್ನು ಅಚ್ಚುಕಟ್ಟಾಗಿ ವ್ಯಕ್ತಿಸಿದ್ದೀರಿ ಸರ್.
    ವಾತಾವರಣ ತಿಳಿಯಾಗಿ ಪಶುಪಕ್ಷಿಗಳು ಸುಖಕಂಡಿರುವುದು, ಮನುಷ್ಯನಿಗೆ ಅವಲೋಕಿಸಲು, ಹಿಡಿದ ಕನ್ನಡಿ.

    ತುಂಬಾ ಚಂದದ ಬರಹ ಸರ್

  2. 2020 ರ ನೋವುನಲಿವುಗಳ ಸಮಗ್ರ ಚಿತ್ರಣ- ಅತಿರೇಕವಿಲ್ಲದ, ಸ್ಪಷ್ಟ, ಸರಳ ಶೈಲಿ.

Leave a Reply

Back To Top