ಆಶ್ಚರ್ಯ,ಆಘಾತಗಳ ವರ್ಷ

ಆಶ್ಚರ್ಯ,ಆಘಾತಗಳ ವರ್ಷ

ನೂತನ ದೋಶೆಟ್ಟಿ

ನೂತನಾ ಕಾವ್ಯಗುಚ್ಛ

ಅಡಿಗೆ - Adige: KASHAYA. POWDER ( HEALTHY DRINK..).

2020ರ ವರ್ಷಕ್ಕೆ ಒಂದು ಪದದಲ್ಲಿ  ಶೀರ್ಷಿಕೆ ಕೊಡಿ ಎಂದರೆ ನಾನು ‘ದಿಗಿಲು’ ಎಂದು ಕೊಡುತ್ತೇನೆ. ಇದು ಭಯ, ಆಶ್ಚರ್ಯ, ಆಘಾತ ಮೊದಲಾದವುಗಳು ಒಟ್ಟು ಸೇರಿ ಉಂಟು ಮಾಡಬಹುದಾದ ಹೇಳಲು ಆಗದ ಒಂದು ಸ್ಥಿತಿ. ಇಂಥ ಸ್ಥಿತಿ ಆಗಾಗ ಎಲ್ಲರ ಜೀವನದಲ್ಲೂ ಬರುತ್ತಲೇ ಇರುತ್ತದೆ. ಆದರೆ ಒಟ್ಟಾರೆ ಮನುಕುಲವೇ ಇಂಥ ಸಮೂಹ ಸ್ಥಿತಿಗೆ ಒಳಗಾಗಿದ್ದು ಆಧುನಿಕ ಕಾಲದಲ್ಲಿ ಇದು ಮೊದಲ ಬಾರಿ ಎಂದು ಹೇಳಬಹುದು. ವಿಶ್ವ ಮಹಾಯುದ್ಧ ಗಳು  ನಡೆದ ಕಾಲದಲ್ಲಿ ಮಾಧ್ಯಮಗಳು, ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಇರದ ಕಾರಣ ಇವುಗಳ ಘೋರ ಪರಿಣಾಮ ಇಡಿಯ ವಿಶ್ವದ ಮೇಲೆ ಈಗಿನಂತೆ ಆಗಿರಲಿಲ್ಲ. ಆದರೆ ಈಗ  ಕ್ಷಣಾರ್ಧದಲ್ಲಿ ವಿಶ್ವವನ್ನು ಸುತ್ತಿಬರುವ  ಸುದ್ದಿಗಳು ಈ ವರ್ಷದ ದಿಗಿಲನ್ನು ಹೆಚ್ಚಿಸಿವೆ ಎಂದರೂ ತಪ್ಪಿಲ್ಲ.

ಇವೆಲ್ಲದರ ಹೊರತಾಗಿ ಬದುಕು ನಿಲ್ಲದೇ ನಡೆದು ದೊಂದು ದೊಡ್ಡ ಸೋಜಿಗ. ಹೃದಯವನ್ನು ಕಲಕುವ ಜನರ ಗುಳೆ, ಬಾಗಿಲಲ್ಲಿ ಬಂದು ನಿಂತು ಅಕ್ಕಿ, ಹಿಟ್ಟು ಏನಾದರೂ ಕೊಡಿ ಎಂದು ಕೇಳುವ ಚಿಕ್ಕ ವಯಸ್ಸಿನ ಹೆಂಗಸರು, ಚಿಕ್ಕ ಮಕ್ಕಳ ಮನಕಲಕುವ ಕಂಗೆಟ್ಟ ಮುಖಗಳು, ರಣಗುಡುವ ಏಕಾಂತ ಬೀದಿಗಳು, ಸತ್ತ ನೆರೆಹೊರೆಗಳು ಏಪ್ರಿಲ್, ಮೇ ತಿಂಗಳುಗಳನ್ನು ಈ ಮೊದಲು ಹೇಳಿದ ದಿಗಿಲಿಗೆ ಅಕಸ್ಮಾತ್ ಆಗಿ ನೂಕಿ ಕಂಗೆಡಿಸಿದ್ದವು. ಇನ್ನು ಕೈಯಲ್ಲಿ ಕಾಸಿದ್ದರೂ ಹೊರಗೆ ಹೋಗುವಂತಿಲ್ಲ. ಕೊಳ್ಳುವ ಶಕ್ತಿ ಇರುವವರ ಕತೆಯೇ ಹೀಗಾದರೆ ರಟ್ಟೆಯ ಬಲವನ್ನೇ ನಂಬಿ ಬದುಕುತ್ತಿದ್ದ ಅಸಂಖ್ಯಾತರ ಬದುಕು ಏನಾಗಿರಬೇಡ!! 

ಇಂಥ ಕಾಲದಲ್ಲಿ ಕೈ ಹಿಡಿದು ನಡೆಸಿದ್ದು ಗಾಂಧೀಜಿಯವರ ಸರಳ ಜೀವನದ ಕಲ್ಪನೆ. ಕೊಳ್ಳುವ, ತಿನ್ನುವ ಎಲ್ಲ ಹಪಹಪಿಗಳಿಗೂ ಸಾರ್ವತ್ರಿಕವಾಗಿ ಕಡಿವಾಣ ಹಾಕಿ ಅಲ್ಪ ತೃಪ್ತಿಯನ್ನು ವಿಶ್ವಕ್ಕೇ ಕಲಿಸಿದ ಕಾಲ ಇದು. ಭಾರತದ ಮಟ್ಹಿಗೆ ಹೇಳುವುದಾದರೆ ಮೊದಲೆರಡು ಮೂರು ತಿಂಗಳುಗಳಿಗೆ ಬೇಕಾಗುವಷ್ಟು ಸಾಮಾನುಗಳನ್ನು ಮನೆಯಲ್ಲಿ ತಂದು ಪೇರಿಸಿಕೊಂಡ ಕೊಳ್ಳುಬಾಕರು,  ತಿಂದು ತೇಗಿದರೂ ನಂತರ ಸರಳತೆಯ ಕಡೆ ಅನಿವಾರ್ಯವಾಗಿ ಹೊರಳಬೇಕಾದ್ದು ಈ ವರ್ಷ ಕಲಿಸಿದ ದೊಡ್ಡ ಪಾಠ. ಗಾಂಧೀಜಿಯವರು ಹಾಲು, ಹಣ್ಣು, ಶೇಂಗಾಬೀಜ ಮೊದಲಾದ ಅತ್ಯಲ್ಪ ಆಹಾರವನ್ನು ಸೇವಿಸಿಯೂ ನೂರಾರು ಕಿ.ಮೀ ದೂರ ಕಾಲ್ನಡಿಗೆ ಮಾಡಬಲ್ಲ, ಹತ್ತಾರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಸಾಮರ್ಥ್ಯವನ್ನು ದೇಹಕ್ಕೆ ಕಲಿಸಿದ್ದರು. ದೇಹ ನಮ್ಮ ಅವಶ್ಯಕತೆಗೆ ಒಗ್ಗಿಕೊಳ್ಳುವಂತೆ ಬಾಗಿಸುವ ಸಾಮರ್ಥ್ಯ ಎಲ್ಲರಿಗೂ ಇರುತ್ತದೆ. ಆದರೆ ತೀರದ  ಆಸೆಗಳು, ಜಿಹ್ವಾ ಚಾಪಲ್ಯ ಅದನ್ನು ತಡೆ ಹಿಡಿಯುತ್ತವೆ. ಇದನ್ನು ನಾನೂ ಏಕೆ ಪ್ರಯತ್ನಿಸಬಾರದು ಎಂದು ನನಗೆ ಸಲಹೆ ನೀಡಿದ್ದು ನನ್ನ ಮಗ.  ಮನೆಯಿಂದ ದೂರ ಇರಬೇಕಾದ ಅನಿವಾರ್ಯತೆ, ಹೊರಗೆ ಕೊಂಡು ತಿನ್ನಲು ಹೊಟೆಲ್ಲುಗಳಿಲ್ಲ. ಏನಾದರೂ ಸಿದ್ಧ ಪಡಿಸಿಕೊಳ್ಳೋಣವೆಂದರೆ ಹೊರಗೆ ಹೋಗಿ ಕೊಳ್ಳಬೇಕಾದ ಅನಿವಾರ್ಯತೆ. ಇವೆಲ್ಲವುಗಳಿಗೆ ಪರಿಹಾರವಾಗಿ ಬಂದಿದ್ದು ದ್ರವಾಹಾರದ ಪ್ರಯೋಗ. 

ಮೂಲತಃ ಮಲೆನಾಡಿಗರಾದ ನಮ್ಮ ಬೆಳಗು ಆರಂಭವಾಗುವುದು ಕಷಾಯದಿಂದ. ಸುಮಾರು 15 ಪದಾರ್ಥಗಳನ್ನು ಹಾಕಿ ನಾನು ಮನೆಯಲ್ಲೇ ಮಾಡುವ ಈ ಕಷಾಯಕ್ಕೆ ಬೆಲ್ಲ ಹಾಕಿ ಕುಡಿದರೆ ಇದು ಸಾರ್ವಕಾಲಿಕ ಔಷಧ ನಮಗೆ. ಆನಂತರ ಸುಮಾರು 9 ಗಂಟೆಗೆ ವಿವಿಧ ಧಾನ್ಯಗಳು, ಮೊಳಕೆ ಕಾಳುಗಳ ಪುಡಿಯ ಮಿಶ್ರಣವನ್ನು ಹಾಲಿನಲ್ಲಿ ಕಲೆಸಿ ಕುಡಿದರೆ ಅದು ತಿಂಡಿಗೆ ಪರ್ಯಾಯ. ಮಧ್ಯಾಹ್ನದ ಊಟದ ಹೊತ್ತಿಗೆ ಹಣ್ಣು, ಸೌತೆಕಾಯಿ, ಗಜ್ಜರಿ, ಒಣಹಣ್ಣುಗಳು  ಇವುಗಳಲ್ಲಿ ಯಾವುದನ್ನಾದರೂ ತಿಂದು ಮತ್ತೆ ಒಂದು ಲೋಟ ಪುಡಿ ಮಿಶ್ರಣ ಮಾಡಿದ ಹಾಲು ಕುಡಿದರೆ ಊಟ ಮುಗಿದಂತೆ. ರಾತ್ರಿ ಊಟಕ್ಕೆ ಮತ್ತೆ ಮಧ್ಯಾಹ್ನದ ಊಟದಂತೆಯೇ. ಕೆಲವೊಮ್ಮೆ ರಾಗಿಯ ಮಾಲ್ಟ್ ಅನ್ನು ಊಟ ಅಥವಾ ತಿಂಡಿಗೆ ಪರ್ಯಾಯವಾಗಿ ಬಳಸುವುದು. ಮೊದಲ ನಾಲ್ಕೈದು ದಿನಗಳು ಸ್ವಲ್ಪ ಸುಸ್ತು ಎನ್ನಿಸಿದ್ದು ನಿಜ. ಆದರೆ ಯೋಗ, ವ್ಯಾಯಾಮ ಮಾಡುವಾಗ ಏನೂ ತೊಂದರೆಯಾಗುತ್ತಿರಲಿಲ್ಲ. ಲವಲವಿಕೆಗೂ, ಉತ್ಸಾಹಕ್ಕೂ ಕುಂದು ಬರಲಿಲ್ಲ. ಶ್ರವಣ ಬೆಳಗೊಳದ 650 ಮೆಟ್ಟಿಲುಗಳನ್ನು 25 ನಿಮಿಷಗಳಲ್ಲಿ  ಏದುಸಿರಿಲ್ಲದೇ ಹತ್ತಿದಾಗ ನನ್ನ ಆಹಾರ, ಜೀವನ ಶೈಲಿಯ ಬಗ್ಗೆ ನನಗೆ ಪೂರ್ಣ ನಂಬಿಕೆ ಬಂದಿತು. ಈಗ ನಾನು ಅದನ್ನೇ ಮುಂದುವರೆಸಿದ್ದೇನೆ. ಎಂದಾದರೊಂದು ದಿನ ಬಾಯಿ ಚಪಲದಿಂದಾಗಿ ಇತರ ತಿಂಡಿಗಳನ್ನು ತಿಂದರೂ ಮತ್ತೆ ಇದಕ್ಕೇ ಮರಳುತ್ತೇನೆ. ಈ ಮಿತ ಆಹಾರ  ನನಗೆ ಹೆಚ್ಚು ಆರಾಮದಾಯಕ ಎನ್ನಿಸುತ್ತದೆ. ಬಹುಶಃ ಈ ದಿಗಿಲಿನ ವರ್ಷ  ಬರೆದಿದ್ದರೆ ನಾನು ಇಂಥ ಪ್ರಯೋಗ ಮಾಡುತ್ತಿದ್ದೆನೋ ಇಲ್ಲವೋ. ಹೀಗೊಂದು ಸಂತ್ರಪ್ತಿ ತಂದ ವರ್ಷವೂ ಇದು ಎನ್ನುವುದು ನನಗೂ ಸೋಜಿಗವೇ.

**********************************

Leave a Reply

Back To Top