ಅಂಕಣ ಬರಹ

ನಿತ್ಯ ಎದುರಾಗುವ ನಿರ್ವಾಹಕರು

ಪ್ರತಿನಿತ್ಯ ಕೆಲಸಕ್ಕೆ ಬಸ್ಸಿನಲ್ಲೆ ತೆರಳುವ ನಾವು ಹಲವಾರು ಜನ ಕಂಡಕ್ಟರುಗಳನ್ನು ಪ್ರತಿನಿತ್ಯ ನೋಡುತ್ತಿರುತ್ತೇವೆ. ಒಬ್ಬೊಬ್ಬ ನಿರ್ವಾಹಕರೇ ಒಂದೊಂದು ಥರ. ಕೆಲವರು ತಾಳ್ಮೆಯಿಂದ ಇರುತ್ತಾರೆ, ಕೆಲವರಿಗೆ ಎಂಥದ್ದೋ ಅವಸರ, ಕೆಲವರು ಎಷ್ಟೊಂದು ದಯಾಮಯಿಗಳು, ಮತ್ತೊಂದಿಷ್ಟು ಜನ ಜಗತ್ತಿನ ಎಲ್ಲ ಕೋಪವನ್ನೂ ಹೊತ್ತು ತಿರುಗುತ್ತಿರುವವರಂತೆ ಚಟಪಟ ಸಿಡಿಯುತ್ತಿರುತ್ತಾರೆ. ಮನಸಿನಂತೆ ಮಹದೇವ ಎನ್ನುವ ಹಾಗೆ ಮನಸಿನ ಅವತಾರಗಳಷ್ಟೇ ವೈವೀಧ್ಯಮಯ ನಿರ್ವಾಹಕರು.

ಪ್ರತಿನಿತ್ಯ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಬಹುತೇಕ ಉಂಟಾಗುವ ಜಗಳಕ್ಕೆ ಮುಖ್ಯ ಕಾರಣವಾಗುವುದೇ ಚಿಲ್ಲರೆ ಸಮಸ್ಯೆ. ಬೆಳ್ಳಂಬೆಳಗ್ಗೆ ಬಸ್ ಹತ್ತಿದ ಹತ್ತಿರದ ಊರಿಗೆ ಹೋಗಬೇಕಾದವನು ಐನೂರರ ನೋಟೊಂದನ್ನು ಹಿಡಿದುಬಿಟ್ಟರೆ ನಿರ್ವಾಹಕರ ಪರಿಸ್ಥಿತಿ ಏನು… ಒಬ್ಬರಿಗೋ ಇಬ್ಬರಿಗೋ ಆದರೆ ಸರಿ, ಆದರೆ ಬಸ್ಸಿನಲ್ಲಿರುವ ಪ್ರತಿಯೊಬ್ಬರಿಗೂ ಚಿಲ್ಲರೆ ಕೊಡುವ ಪರಿಸ್ಥಿತಿ ಎದುರಾದಾಗ ಕಂಡಕ್ಟರ್ ಆದರೂ ಎಲ್ಲಿಂದ ಚಿಲ್ಲರೆ ತರಬೇಕು. ಅವರಾದರೂ ಮನೆಯಿಂದಲೂ ಹೆಚ್ಚು ಚಿಲ್ಲರೆ ತರುವಂತಿಲ್ಲ. ನಾನಂತೂ ಸದಾ ಚಿಲ್ಲರೆಯನ್ನು ನನ್ನ ಬ್ಯಾಗಿನಲ್ಲಿ ಇಟ್ಟುಕೊಂಡೇ ತಿರುಗುವುದು ರೂಢಿ ಮಾಡಿಕೊಂಡಿದ್ದೇನೆ. ಮತ್ತೆ ನಮಗೆ ಯಾವ ಕಂಡಕ್ಟರರಿಗೆ ಚಿಲ್ಲರೆ ಕೊಡಬೇಕು ಮತ್ತೆ ಯಾರಿಗೆ ಕೊಡಬಾರದು ಎನ್ನುವುದೆಲ್ಲ ಅದೆಷ್ಟು ಚೆನ್ನಾಗಿ ಗೊತ್ತಾಗಿಬಿಡುತ್ತದೆ! ಅವರು ಬೇರೆಯವರಿಗೆ ಟಿಕೆಟ್ ಕೊಡುವುದನ್ನು ನೋಡುವಾಗಲೇ “ಓ ಇವರಿಗೆ ಚಿಲ್ಲರೆ ಸಮಸ್ಯೆ ಇದೆ ಅಥವಾ ಇಲ್ಲ” ಎನ್ನುವುದನ್ನು ಅಭ್ಯಸಿಸಿಬಿಡುತ್ತೇವೆ. ನಂತರವೇ ನಾವು ಚಿಲ್ಲರೆ ತೆಗೆಯುವುದು. ತೀರಾ ಅಸಹನೆಯ ಕಂಡಕ್ಟರರ ಮುಂದೆ ಚಿಲ್ಲರೆ ಇಲ್ಲದೆ ದೊಡ್ಡ ನೋಟೊಂದನ್ನು ಹಿಡಿದು ನಿಲ್ಲಬೇಕಾಗಿ ಬಂದಾಗ ನಿಜಕ್ಕೂ ಅದೆಷ್ಟು ಅನವಶ್ಯಕ ಮಾತುಗಳನ್ನು ಕೇಳಬೇಕಾಗುತ್ತದೆ ಮತ್ತು ಬಳಸಲಿಕ್ಕೆ ತಯಾರಾಗಬೇಕಾಗಿ ಬರುತ್ತದೆ.

ಈ ಕಂಡಕ್ಟರುಗಳದು ಬಹಳ ಒತ್ತಡದ ಕೆಲಸ. ಪ್ರತಿನಿತ್ಯ ಎಂತೆಂಥಾ ಪ್ರಯಾಣಿಕರು ಹತ್ತುತ್ತಾರೆಂದರೆ, ಕೆಲವರಂತೂ ಅವರನ್ನು ತೀರಾ ನಿಕೃಷ್ಟವಾಗಿ ಕಂಡು, ವ್ಯವಹರಿಸುವುದನ್ನು ನೋಡುವಾಗ ಇಂತಹ ಜನಗಳಿಂದಲೇ ಅವರು ಕಠೋರರಾಗಿಬಿಡುತ್ತಾನೋ ಅಂತಲೂ ಅನಿಸತೊಡಗುತ್ತದೆ. ಒಮ್ಮೆ ಬೆಂಗಳೂರಿನಿಂದ ಬರುತ್ತಿದ್ದ ಹುಡುಗಿಯೊಬ್ಬಳು ನಿರ್ವಾಹಕಿಯೊಡನೆ ಗಲಾಟೆ ಶುರುಮಾಡಿಕೊಂಡಿದ್ದಳು. ಆದದ್ದು ಇಷ್ಟು. ಆ ಹುಡುಗಿ ಗೌರಿಬಿದನೂರಿನ ಬಳಿಯ ಒಂದು ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ  ಕಾಲೇಜಿಗೆ ಹೋಗಿ ಬರುತ್ತಾಳೆ. ಹಾಗಾಗಿ  ಅವಳಲ್ಲಿ ನಿತ್ಯದ ಪಾಸ್ ಇರುತ್ತದೆ. ಆದರೆ ಆ ಸಧ್ಯ ಅದರ ಅವಧಿ ಮುಗಿದದ್ದು, ಅವಳು ಈಗ ಟಿಕೇಟ್ ಕೊಳ್ಳಬೇಕಿತ್ತು. ಅವಳೇ ತಾನಿದ್ದಲ್ಲಿಗೆ ಬಂದು ಪಾಸ್ ಬಗ್ಗೆ ಹೇಳಿ ಟಿಕೇಟ್ ಪಡೆಯಬೇಕಿತ್ತು ಎನದಬುವುದಯ ನಿರ್ವಾಹಕಿಯ ವಾದ. ಇಲ್ಲ ತಾನಿದ್ದಲ್ಲಿಗೆ ಬಂದು ವಿಷಯ ತಿಳಿದುಕೊಂಡು ಟಿಕೇಟ್ ಕೊಡಬೇಕಿತ್ತು ಎನ್ನುವುದು ಆ ಹುಡುಗಿಯ ವಾದ. ಆದರೆ ಕನಿಷ್ಟ ವಯಸ್ಸಿಗೂ ಬೆಲೆ ಕೊಡದೆ ನಿರ್ವಾಹಕಿಯ ಬಳಿ ಹೇಗೆಂದರೆ ಹಾಗೆ ಜಗಳಕ್ಕಿಳಿದಿದ್ದ ಹುಡುಗಿಯ ವರ್ತನೆ ಅಸಹನೀಯವಾಗಿತ್ತು. ಸಾಲದ್ದಕ್ಕೆ “ಎಷ್ಟು ನಿನ್ ನಂಬರ್ರು? ಬಾ ಸ್ಟಾಂಡಿಗೆ ಕಂಪ್ಲೇಂಟ್ ಮಾಡ್ತೀನಿ…” ಎನ್ನುತ್ತಾ ಹೋದ ಹುಡುಗಿಯ ಬಗ್ಗೆ ನೋಡುತ್ತಿದ್ದ ನಮಗೇ ಕೋಪ ಬರುತ್ತಿತ್ತು. ಇಷ್ಟೊಂದು ಉದ್ಧಟತನ ಮತ್ತು ಅಹಂಕಾರವನ್ನು ತಂದೆ ತಾಯಂದಿರಾದರೂ ಹೇಗೆ ಬೆಳೆಯಲು ಬಿಡುತ್ತಾರೆ… ಅವಳಿಗೆ ಯಾವ ಮದವೇ ಇದ್ದಿರಲಿ, ಎದುರಿನವರನ್ನು ಕನಿಷ್ಟ ಗೌರವದಿಂದ ಮಾತಾಡಿಸದಿರುವಂತಹ ವರ್ತನೆ ಅಸಹನೀಯವೇ ಸರಿ.

ನನ್ನ ಪುಟ್ಟ ಮಗಳಿಗೆ ಪ್ರತಿನಿತ್ಯ ನನ್ನ ಜೊತೆಗೇ ತಿರುಗಬೇಕಾದ ಅನಿವಾರ್ಯ. ಇನ್ನೂ ಸಣ್ಣವಳಿದ್ದಾಗ, ಅವಳಿಗೆ ಅದೆಂಥದೋ ತಾನೇ ನಿರ್ವಾಹಕರಿಗೆ ದುಡ್ಡು ಕೊಡಬೇಕು, ಟಿಕೇಟ್ ಪಡೆಯಬೇಕು, ಚಿಲ್ಲರೆ ಇಸಿದುಕೊಳ್ಳಬೇಕು ಎನ್ನುವ ಹಂಬಲ. ಆದರೆ ಟಿಕೆಟ್ಟನ್ನು ಮಕ್ಕಳ ಕೈಗೆ ಕೊಡಬೇಡಿ ಎನ್ನುವುದು ನಿರ್ವಾಹಕರ ಕಾಳಜಿ ಮತ್ತು ಆಜ್ಞೆ. ಅದರ ನಡುವೆಯೂ ಇವಳ ಆಸೆಯನ್ನು ಕಂಡು ಪಾಪ ಅನ್ನಿಸಿ ಒಮ್ಮೊಮ್ಮೆ ನಿರ್ವಾಹಕರು, ಖಾಲಿ ಟಿಕೆಟ್ ಹೊಡೆದು ಅವಳ ಕೈಗಿಟ್ಟಾಗ ಅವಳಿಗಾಗುತ್ತಿದ್ದ ಸಂಭ್ರಮವಂತೂ ಅಷ್ಟಿಷ್ಟಲ್ಲ…

ಇನ್ನು ಮಾನವೀಯತೆಯೇ ಮೈವೆತ್ತಂತೆ ಇರುವ ಅದೆಷ್ಟೋ ನಿರ್ವಾಹಕರನ್ನು ಕಾಣುವಾಗ ಇವರು ಬರೀ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಮನಸೇ ಬರುವುದಿಲ್ಲ. ಆ ಕ್ಷಣಕ್ಕೆ ಯಾರದೋ ತಂದೆ, ಮತ್ಯಾರದೋ ಅಣ್ಣ, ಇನ್ಯಾರದೋ ಮಗನ ಹಾಗೆ ವರ್ತಿಸುತ್ತಾ ನಮ್ಮವರೇ ಆಗಿಬಿಡುವ ಇವರನ್ನು ನಮ್ಮವರಲ್ಲ ಎಂದುಕೊಳ್ಳುವುದಾದರೂ ಹೇಗೆ ತಾನೆ ಸಾಧ್ಯ….

******************************

ಆಶಾ ಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

One thought on “

  1. ನಿರ್ವಾಹಕರ ಬಗ್ಗೆ ಬರೆದಿರುವ ಮಾಹಿತಿ ಚೆನ್ನಾಗಿದೆ ಆಶಾ..ಬಸ್ಸು ಪಯಣ ಎಲ್ಲರಿಗೂ ಬಗೆಬಗೆಯ ಅನುಭವ ಉಣಿಸಿರುತ್ತದೆ

Leave a Reply

Back To Top