ಅಂಕಣ ಬರಹ
ರಾಮಕೃಷ್ಣ ಗುಂದಿ ಆತ್ಮಕತೆ–03
ಅಕ್ಷರ ಬೀಜದ ಬೆಳಕಿನತ್ತ…..
ಗುಂದಿ ಹಿತ್ತಲಿನ ಎರಡೂ ಕುಟುಂಬಗಳು ಗೇಯ್ದು ಉಣ್ಣುವ’ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದವು. ಅಕ್ಷರ ದಾರಿದ್ರö್ಯದ ದಟ್ಟ ಬಡತನವೊಂದು ಅವರಿಗೆ ಬಡತನವೇ ಅನ್ನಿಸಿರಲಿಲ್ಲ. ಅಂಥ ಕುಟುಂಬಗಳಲ್ಲಿ ಗಣಪು ಎಂಬ ಹುಡುಗನೊಬ್ಬ ಹೇಗೋ ಅಕ್ಷರ ಕಲಿಕೆಗೆ ಆಸೆಪಟ್ಟು ಅಕ್ಷರ ಬೀಜದ ಬೆಳಕಿನ ಬೆನ್ನು ಹತ್ತಿದ.
ಸಮೀಪದ ಹೆಗ್ರೆ ಶಾಲೆಯಲ್ಲಿ ಅ, ಆ ಕಲಿಕೆಯ ಹಂತದಲ್ಲೆ ತಾಯಿ ತೀರಿಕೊಂಡಳು. ಶಾಲೆ ಕಲಿಯುವ ಹಂಬಲಕ್ಕೆ ಮತ್ತುಷ್ಟು ತೊಡಕುಗಳಾದವು. ಮತ್ತೆ ಕೆಲವು ದಿನಗಳ ಬಳಿಕ ಯಾರದೋ ಸಹಾಯದಿಂದ ಹನೇಹಳ್ಳಿಯ ಸರಕಾರಿ ಹಾಸ್ಟೆಲ್ಲು ಸೇರಿಕೊಂಡು ಓದಲಾರಂಭಿಸಿದ. ಆದರೆ ಮನೆಯಲ್ಲಿ ಯಾರಿಗೂ ಗಣಪು ಶಾಲೆಗೆ ಸೇರಿದ್ದು ಸರಿಬರಲಿಲ್ಲ. ಅಕ್ಕಂದಿರು ಅಣ್ಣಂದಿರೆಲ್ಲ ಸಾಣೆಕಟ್ಟೆಯ ಉಪ್ಪಿನಾಗರ ಕೆಲಸಕ್ಕೆ ಸೇರಿ ಅನ್ನದ ದಾರಿ ಕಂಡುಕೊಂಡಿದ್ದರು. ಗಣಪು ಅದೇ ಕೆಲಸಕ್ಕೆ ಅವರೆಲ್ಲರನ್ನು ಕೂಡಿಕೊಳ್ಳಬೇಕೆಂಬುದು ಅವರೆಲ್ಲ ಒತ್ತಾಸೆಯಾಗಿತ್ತು. ಒತ್ತಾಯದಿಂದ ಶಾಲೆ ಬಿಡಿಸಿ ಮನೆಗೆ ಕರೆತಂದರಾದರೂ ಗಣಪು ಆಗರದ ಕೆಲಸಕ್ಕೆ ಯಾವ ಬಗೆಯಿಂದಲೂ ಒಪ್ಪಿಕೊಳ್ಳಲಿಲ್ಲ. ನಾಡವರ ಮನೆಯ ದನಗಳನ್ನು ಮೇಯಿಸುವ ಕೆಲಸಕ್ಕೆ ನೇಮಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಲ್ಲಿ ಗಣಪು ಗೋವಳಿಗನಾದ.
‘ಹಣೆಯ ಬರಹವೊಂದು ಸರಿಯಾಗಿದ್ದರೆ ಅದನ್ನು ಯಾರೂ ಕೆಡಿಸಲಾರರು’ ಎಂಬ ಹಳೆಯ ನಂಬಿಕೆಯ ಮಾತೊಂದಿದೆ. ಗಣಪು ಮತ್ತೆ ಅಕ್ಷರದ ದಾರಿಯಲ್ಲಿ ನಡೆಯುವಂತೆ ಮಾಡಿದ ವಿಚಿತ್ರ ಘಟನೆಯೊಂದು ನಡೆದು ಹೋಯಿತು…
ಅಗ್ಗರಗೋಣದ ಏಸುಮನೆ ನಾರಾಯಣ ನಾಯಕ ಎಂಬುವವರ ಮಗ ಯಶವಂತ ಹನೇಹಳ್ಳಿಯ ಶಾಲೆಯಲ್ಲಿ ಗಣಪುವಿನ ಸಹಪಾಠಿಯಾಗಿದ್ದವನು. ಅಗ್ರಗೋಣದಿಂದ ಹನೇಹಳ್ಳಿಗೆ ಗದ್ದೆ ಬಯಲಿನ ದಾರಿಯಲ್ಲಿ ಹೋಗುವಾಗ ನಡುವೆ ಗುಂದಿಹಿತ್ತಲಿನ ಬದಿಯಲ್ಲೇ ಕಾಲು ದಾರಿಯಿದೆ. ಯಶವಂತ ಅದೇ ದಾರಿಯಲ್ಲಿ ನಡೆಯುತ್ತಾ ಗಣಪುವಿನ ಜೊತೆಸೇರಿ ಮುಂದುವರಿಯುವುದು ರೂಢಿಯಾಗಿತ್ತು. ಇದೇ ಕಾರಣದಿಂದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆದು ಗಾಢ ಸ್ನೇಹ ಬೆಸೆದುಕೊಂಡಿತ್ತು. ಗಣಪು ಶಾಲೆ ಬಿಟ್ಟು ದನಕಾಯ ಹತ್ತಿದ ಬಳಿಕ ಯಶವಂತನಿಗೆ ಒಂಟಿತನ ಕಾಡಿತು. ಗುಂದಿಹಿತ್ತಲಿನಿಂದ ಮುಂದಿನ ಹನೇಹಳ್ಳಿಯ ದಾರಿ ಬೇಸರ ಹುಟ್ಟಿಸಿತು. ಒಂದು ದಿನ ಶಾಲೆಗೆ ಹೊರಟವನು ದಾರಿಯನ್ನು ಬದಲಿಸಿ ಹಳ್ಳದ ಈಚೆ ನಾಡುಮಾಸ್ಕೇರಿ ಭಾಗದ ಗದ್ದೆ ಬಯಲಲ್ಲಿ ಗಣಪು ದನ ಮೇಯಿಸುತ್ತಿರುವಲ್ಲಿಗೆ ಬಂದು, “ಗಣಪು ನೀನು ಶಾಲೆಗೆ ಬರದಿದ್ರೆ ನನಗೂ ಶಾಲೆ ಬೇಡವೇ ಅನಿಸ್ತಿದೆಯೋ” ಎಂದು ತನ್ನ ದುಃಖ ತೋಡಿಕೊಂಡ. ಅಂದು ಇಡಿಯ ದಿನ ಗಣಪುವಿನ ಜೊತೆ ಇದ್ದು ದನ ಮೇಯಿಸುವಲ್ಲಿ ಆಟವಾಡುತ್ತ ಸಂಜೆ ಶಾಲೆ ಬಿಡುವ ಸಮಯ ನೋಡಿ ಮನೆಗೆ ಮರಳಿದ. ಯಶವಂತ ಅಂದು ಶಾಲೆಗೆ ಹೋಗದಿರುವ ಸಂಗತಿ ಮನೆ ಮಂದಿಗೆನೂ ತಿಳಿಯಲಿಲ್ಲ. ಯಶವಂತ ಮರುದಿನವೂ ಗಣಪು ಇರುವಲ್ಲಿಗೆ ಬಂದ…. ಆಡುತ್ತ ದಿನ ಕಳೆದ. ಇದು ರೂಢಿಯಾಯಿತು. ಪಾಟೀಚೀಲದೊಂದಿಗೆ ಮನೆಯಿಂದ ಶಾಲೆಗೆ ಹೋಗುವ ಸಂಭಾವಿತನಂತೆ ಹೊರಡುವ ಯಶವಂತ ದಿನವೂ ಗಣಪು ಇದ್ದಲ್ಲಿಗೆ ಬಂದು ಸಮಯ ಕಳೆದು ಮರಳುತ್ತಿದ್ದ.
ಅಂಥ ಒಂದು ದಿನ ಯಶವಂತ ಬಂದದ್ದೆ ಯಾವುದೋ ಆಟದಲ್ಲಿ ಇಬ್ಬರೂ ಮೈಮರೆತಿದ್ದರೆ ಗಣಪು ಬಯಲಿನಲ್ಲಿ ಬಿಟ್ಟ ದನಗಳೆಲ್ಲ ಜಮೀನ್ದಾರ್ ಗಾಂವಕರರೊಬ್ಬರ ಕಾರುಗದ್ದೆಗೆ ನುಗ್ಗಿ ಹಾಯಾಗಿ ಮೇಯ ತೊಡಗಿದವು. ಆಕಸ್ಮಿಕವಾಗಿ ಬಯಲಿಗೆ ಬಂದ ಗಾಂವಕರರು ಹಸನಾಗಿ ಮೊಳಕೆಯೊಡೆದಿದ್ದ ಕಾರುಗದ್ದೆ ದನಗಳ ಮೇವಿನ ಕಣವಾದುದನ್ನು ಕಂಡು ಕೆಂಡಾಮಂಡಲವಾದರು. ಗದ್ದೆ ಹಾಳೆಯ ಮೇಲಿನ ಲುಕ್ಕಿ ಗಿಡದ ಬರಲು ಕಿತ್ತುಕೊಂಡದ್ದೇ ಗಣಪುವನ್ನು ಹಿಡಿದು ಬಾರಿಸತೊಡಗಿದರು. ಕಾದ ಕಬ್ಬಿಣದ ಸಲಾಕೆಯಂತೆ ಲುಕ್ಕಿ ಬರಲಿನ ಬಾಸುಂಡೆಗಳೆದ್ದುದನ್ನು ಖಾತ್ರಿ ಪಡಿಸಿಕೊಂಡೇ ಗಾಂವಕರರು ಗಣಪುವಿನ ಕೈ ಬಿಟ್ಟಿದ್ದರು.
ಯಶವಂತ ದಿಕ್ಕುಗೆಟ್ಟವನಂತೆ ಊರಿನತ್ತ ಓಡಿದ್ದ. ನೋವು ಅವಮಾನಗಳಿಂದ ಜರ್ಜರಿತನಾದ ಗಣಪು ಗದ್ದೆ ಹಾಳೆಯ ಮೇಲೆ ಕುಸಿದು ಕುಳಿತ. ತನ್ನ ಬೆನ್ನಿಗೆ ಬಾಸುಂಡೆಗಳು ಮೂಡುವಂತೆ ಬಾರಿಸಿದ ಗಾಂವಕರರಿಗಿಂತ ತನ್ನ ತಂದೆ ಅಕ್ಕಂದಿರು ಅಣ್ಣನ ಮೇಲೆ ಸಿಟ್ಟು ಉಕ್ಕಿ ಬಂತು. ತನ್ನನ್ನು ಶಾಲೆ ಬಿಡಿಸಿ ಕರೆತಂದು ದನ ಕಾಯಲು ಹಚ್ಚಿದ ಅವರೆಲ್ಲ ಅಪ್ಪಟ ವೈರಿಗಳಂತೆ ಭಾಸವಾದರು. ಮತ್ತೆ ಮನೆಗೆ ಹೋದರೂ ತನ್ನದೇ ತಪ್ಪೆಂದು ಆರೋಪಿಸಿ ಪೆಟ್ಟು ಕೊಡುತ್ತಾರೆ ಎಂಬ ಭಯವೂ ಆಯಿತು. ಮತ್ತೆಂದೂ ಮನೆಕಡೆ ಕಾಲಿಡಲೇಬಾರದು ಎಂದು ಗಣಪು ಆಕ್ಷಣದಲ್ಲಿ ನಿರ್ಧರಿಸಿದ.
ತಾಯಿ ತೀರಿದ ಬಳಿಕ ಆಗಾಗ ಮನೆಗೆ ಬಂದು ಸಾಂತ್ವನ ಹೇಳಿ ತನ್ನನ್ನು ವಿಶೇಷವಾಗಿ ಮದ್ದು ಮಾಡುತ್ತಿದ್ದ ಸಾಣೆಕಟ್ಟೆಯ ದೊಡ್ಡಮ್ಮ ಹಮ್ಮಜ್ಜಿ’ ನೆನಪಾದಳು. ಗಣಪು ಅಳುತ್ತಲೇ ಸಾಣೆಕಟ್ಟೆಯತ್ತ ಹೆಜ್ಜೆ ಹಾಕಿದ.
ರಾಮಕೃಷ್ಣ ಅವರ ತಂದೆ-ತಾಯಿ
ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಮಡಿಲಲ್ಲಿ ತಲೆಯಿಟ್ಟು ಬಿಕ್ಕಳಿಸಿದ ಗಣಪು ತಾನು ಮತ್ತೆಂದೂ ಊರಿಗೆ ಹೋಗುವುದಿಲ್ಲವೆಂದೂ ತನ್ನನ್ನು ಮತ್ತೆ ಶಾಲೆಗೆ ಸೇರಿಸೆಂದೂ ಪರಿಪರಿಯಾಗಿ ಬೇಡಿಕೊಂಡ. ತಬ್ಬಲಿ ಕಂದನ ಆಕ್ರಂದನಕ್ಕೆ ಅಂತಃಕರಣ ಕಲುಕಿದಂತಾದ ಹಮ್ಮಜ್ಜಿ ಗಣಪುವನ್ನು ಗಟ್ಟಿಯಾಗಿ ಎದೆಗೆ ಅಪ್ಪಿಕೊಂಡು ತಾಯ್ತನದ ಪ್ರೀತಿಯೆರೆಯುತ್ತ ಬೆನ್ನ ಮೇಲಿನ ಬಾಸುಂಡೆಗಳಿಗೆ ಎಣ್ಣೆ ಲೇಪಿಸತೊಡಗಿದಳು.
************************************************************************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಕಣಜದಲ್ಲಿ ಏನೇನಿದೆಯೋ ಕಾಯುತ್ತಿರುವೆ . ನಮಸ್ಕಾರ ಸರ್
ಇದೆ….ಆದ್ರೆ ಹೇಳೋದು ಕಷ್ಟ….ನೋಡೋಣ…ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿಇರುವೆ…
ಗುಂದಿ ಸರ್,
ನಮಸ್ಕಾರ.
ಮುಂದೆನಾಯಿತು ಅಂತ ಕುತೂಹಲ , ಕಾತುರ. ಕಾಯುವಿಕೆ ಬಹಳ ಕಷ್ಟ……….
ಬಹಳ ಅಪ್ತವಾದ ಶೈಲಿ…
ಧನ್ಯವಾದಗಳು ಸರ್.
ಅದ್ಭುತ ಸರ್, ಮುಂದಿನ ಅಂಕಣಕ್ಕಾಗಿ ಕಾಯುವೆ