ಗಜಲ್
ಅರುಣಾ ನರೇಂದ್ರ

ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆ
ಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ
ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾ
ನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ
ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆ
ಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ
ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆ
ನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ
ಕಾಲ ಮರೆವೆಂಬ ಮುಲಾಮು ಸವರಿ ಮನದ ಗಾಯ ಮಾಸುತ್ತದೆ ಅರುಣಾ
ಅರಿವಿನ ಅಕ್ಷರಗಳಿಗೆ ಅರಿವೆ ತೊಡಿಸಿ ಕಾವ್ಯವಾಗಿ ಬಿಚ್ಚಿಕೊಳ್ಳುತ್ತೇನೆ
***************************
Beautiful